Jul 082012
 

“ಸುಲಿಗೆ”, “ಕೊಲೆ”, “ಹಾದರ”, “ಕಳವು” :: ಈ‌ ಪದಗಳನ್ನುಪಯೋಗಿಸಿ ಸುಭದ್ರಾ ಕಲ್ಯಾಣವನ್ನು  ವರ್ಣಿಸಿರಿ.

ಛಂದಸ್ಸು – ನಿಮ್ಮ ಆಯ್ಕೆ

  34 Responses to “ಪದ್ಯಸಪ್ತಾಹ – ೨೮ – ದತ್ತ ಪದಿ”

  1. “ಹಾದರ ಕಳವು ಸುಲಿಗೆ ಕೊಲೆ
    ಯಾದವ ದೌರ್ಬಲ್ಯಮಲ್ತು ತಾಮಸ ಮಾಯಾ
    ಜೂದಂ” ದತ್ತ ಪದಂಗಳ
    ನೋದುಲು ಮೂಲಾರ್ಥವಿರದ ಪೂರಣಯತ್ನಂ

    ಅಣ್ಣನಾಗಡಸುಲಿಗೆ ತಣ್ಣಗಾದನು ಕೃಷ್ಣ ಕೌರವರ ಸಂಬಂಧಕೊಪ್ಪಿ ದಂತೆ
    ಕಣ್ಣಾದ ತಂಗಿಯನು ಸಣ್ಣತಂತ್ರವಹೂಡಿ ತಪ್ಪಿಸಿದ ಸಂಕೊಲೆಯ ತಿಳಿಯದಂತೆ
    ಬಣ್ಣಕ್ಕೆ ಬೀಳ್ವಯದು ಗುಣಕೆ ಸರಿ ಕುರುಹಾದ ರಮ್ಯಸನ್ಯಾಸಿಯರ್ಜುನನ ಸುಳಿವು
    ಹಣ್ಣಾಗೆ ಹರಿರಕ್ಷೆ ಹೃದಯೇಶನಂ ವರಿಪ ಸುಖಿ ಸುಭದ್ರೆಗದೆಲ್ಲಿ ಹರ್ಷಕಳವು?

  2. ತರಳವೃತ್ತದಲ್ಲಿ:

    ಸುಲಿಗೆಗೆಂಬ ವಿಕಾರ ಕಾರಣವೇತಕಾ ರಣಧೀರಗಂ?
    ಹಲವು ಹೆಂಡಿರುಲೂಚಿ-ಚಿತ್ರೆಯರಿಂತದೇತಕೊ ಲೆಕ್ಕ ತಾಂ?
    ಬಲುಹು ಕೃಷ್ಣನು ತಾನಹಾ! ದರಬಾರು ಗೈಯುವನರ್ಜುನಂ
    ಸಲುಗು ಶಿಕ್ಷೆ, ನಿಷೇಧವಂ ಮಧುಚಂದ್ರಕಂ ಕಳವುಂ ತರಲ್

    4ನೆಯ ಪಾದಕ್ಕೆ ವಿವರಣೆ: ಅಪಹರಣದ ನಂತರ ಅವಳನ್ನು ರಥದಲ್ಲಿ ಕೂಡಿಸಿಕೊಂಡು ದೂರದಾರಿಯನ್ನು ಕ್ರಮಿಸುವಾಗ, ಮಧುಚಂದ್ರವಿರಲಿ, ಆ ಬೆವರು, ಆ ಆಯಾಸ, ಇನ್ನೂ ಏನೇನೋ ಅವನ ಆಲೋಚನೆಗಳು… ಬ್ಯಾಡ! ಅದನ್ನು ಭೈರಪ್ಪನವರ ’ಪರ್ವ’ದಲ್ಲಿ ನೀವೇ ಓದಿಕೊಳ್ಳಿ.

  3. ಬಳಸಿದ ’ಜಾಣತನ’ ಕಳವು
    ಕೊಲೆ,ಹಾದರ,ಸುಲಿಗೆ – ಯಾದವರಿಗೇ ಬಿಡುತಂ
    ನಲವಿಂ ವರಿಸಿದ ಹಾರಿಸಿ
    ಗೆಲಲರ್ಜುನ, ಸಂದುದೈ ಸುಭದ್ರೋದ್ವಾಹಂ

  4. ಹಾದರವೇ ಸಂಪ್ರದಾಯ
    ವಾದವರಲಿ, ಕನ್ಯೆ ಸಾಧ್ವಿ,, ಕೂಲೆಗಳು ಕೆಲವೇ !
    ಯಾದವ ಪಡೆ ತಡೆಯೆ ಸುಲಿಗೆ
    ಯಾದುದು ಸನ್ಯಾಸಿ ಗಡ್ಡ, ಸಂದುದು ಕಳವು

    • To say ಕನ್ಯೆ ’ಸಾಧ್ವಿ’ is very euphemistic. ‘ನಿತ್ಯಸುಮಂಗಲಿ’ would be apt.

      • ಯಾದವರಲ್ಲಿ, ರಾಸಲೀಲೆಯ ಹಿನ್ನೆಲೆಯಿಂದಾಗಿ ಸೌಶಿಲ್ಯ ತುಸು ಮಸುಕೇ. ಅಂಥ ಮನೆತನದಿಂದ ಬಂದಿದ್ದರೂ ಕನ್ಯೆಸುಭದ್ರೆ, ಸಾಧ್ವಿಯೇ ಸರಿ. ಕಪಟಯತಿಯ ಕನ್ಯಾಚೌರ್ಯಪ್ರತಿಭಟನೆಯಲ್ಲಿ ಕೆಲವರಷ್ಟೆ ಯಾದವರು ಸತ್ತಿರಬೇಕು ! ಅರ್ಜುನ ಸನ್ಯಾಸಿಯ ಮೇಲೆ ಧಾಳಿಮಾಡಿದ ಯದುಸೈನ್ಯಕ್ಕೆ ಸಿಕ್ಕಿದು ಆತನ ಗಡ್ಡಮಾತ್ರ! ಹೀಗೆ ಸುಭದ್ರಾಪಹರಣ ನಡೆಯಿತು (ಸಂದುದು ಕಳವು). ಇದು ಪೂರಣದ ಭಾವ. ಇನ್ನು, ಕನ್ಯೆಯಾದ ಸುಭದ್ರೆಯನ್ನು ಕುರಿತ ಸಾಧ್ವಿ ಎಂಬ ಪದ ಪ್ರಯೋಗ ಸರಿಯೇ? ಹೌದು. ಅವಳು ಯಾದವ ಪೂರ್ವ ಪರಂಪರೆಯಂತೆ ಚಂಚಲೆಯಲ್ಲ. ಸಾಧುಸ್ವಭಾವದವಳು, ಅರ್ಜುನನೇ ತನ್ನ ಪತಿಯೆಂಬ ವ್ರತದಲ್ಲಿದ್ದವಳು. ಅಷ್ಟಕ್ಕೂ ಆಕೆಯ ಅಪಹರಣವಾದಾಗ, ಆಕೆ ವಿವಾಹಿತಳೇ ! ಅಲ್ಲದೆ ಸಾಧ್ವಿ ಎಂಬ ಪದಕ್ಕೆ ಒಂದು ಬಗೆಯ ಕ್ಷೀರವೃಕ್ಷವೆಂದೂ ಅರ್ಥವಿದೆ. ಸಾದ್ವಿ ಎಂದು ದಕಾರ ಅಲ್ಪಪ್ರಾಣವಾದರೆ ಅದು ದ್ರಾಕ್ಷಿಯ ಗೊಂಚಲಾದೀತು. ವೇದ್ಯರಾದ ಕವಿಮಿತ್ರರಿಗೆ ಅಗತ್ಯವಿಲ್ಲವೆಂದೇ, ಒಪ್ಪಿಸಿರುವ ಐದುಪೂರಣಗಳೂ ಸರಳ ಸುಲಭವೆಂದು ತಿಳಿದೇ ಇಂಥ ವಿವರಣೆಗಳನ್ನು ನಾನು ಕೊಟ್ಟಿಲ್ಲ. ಆದರೂ ಇದನ್ನು ಬರೆಯಲು ಸ್ಫೂರ್ತಿನೀಡಿದ ಪ್ರಸಾದು ಅವರಿಗೆ ನನ್ನ ನಮನಗಳು.

      • ಪ್ರಸಾದು ಅವರು ರಂಧ್ರಾನ್ವೇಷಣೆಯನ್ನೇ ರಾಸಿಕ್ಯವನ್ನಾಗಿಸಿ ನಗಿಸಿಕೊಂಡಂತಿದೆ:-).
        ಸಾಧ್ವೀ ಎಂಬ ಪದಕ್ಕೆ ಒಳ್ಳೆಯವಳೆಂದಷ್ಟೇ ಅರ್ಥ. ಸಾಧುಃ ಎಂಬ ಪುಂಲಿಂಗಶಬ್ದದ ಸ್ರೀಲಿಂಗರೂಪವಷ್ಟೇ ಇದು. ಇದೇ ರೀತಿ ಸತೀ ಎಂಬ ಪದವೂ. ಇದು ಸನ್ ಎಂಬ ಪುಂಲಿಂಗಪದದ ಸ್ತ್ರೀರೂಪ. ಇದರ ಅರ್ಥವೂ ಕೇವಲ ಒಳ್ಳಿತೆಂಬ ಭಾವದ್ದೇ. ಲೋಕರೂಢಿಯಲ್ಲಿ ಮಾತ್ರ ಸಾಧ್ವೀ, ಸತೀ ಎಂದೆಲ್ಲ ಹೇಳುವಾಗ ಅವಳು ಪತಿವ್ರತೆ, ಅರ್ಥಾತ್ ವಿವಾಹಿತೆ ಎಂಬ ಇಂಗಿತವಿದೆ. ಇದು ಎಲ್ಲಿಯ ವರೆಗೆ ಎಣೆಮೀರಿ ಹೋಗಿದೆಯೆಂದರೆ ಸುದತೀ ಎಂಬ ಪದವೂ ಪತಿವ್ರತೆ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ! ಮೂಲತಃ ಸುದತಿಯೆಂದರೆ ಒಳ್ಳೆಯ ಹಲ್ಲುಗಳನ್ನುಳ್ಳವಳೆಂದಷ್ಟೇ ತಾತ್ಪರ್ಯ:-) ಒಟ್ಟಿನಲ್ಲಿ ಚಂದ್ರಮೌಳಿಯವರ ಪದಪ್ರಯೋಗ ಸುಷ್ಠುವಾದದ್ದು.

        • ಬಹುಶಃ ‘ಸುದತೀ’ ಪದವನ್ನು ನೀವು ಹಾಸ್ಯೋತ್ಸವದಲ್ಲಿ ಬಳಸಿದ್ದೀರಿ. “ಈ ಹಾಸ್ಯೋತ್ಸವಕ್ಕೆ ಬಂದಿರುವ ಯಾವುದಾದರೂ ಕನ್ಯೆ ತನ್ನನ್ನು ಮದುವೆಯಾಗಲು ಕೇಳಿಕೊಂಡರೆ ಏನೆನ್ನುವಿರಿ?” ಎಂಬ ಗುಂಡೂರಾಯರ ಪ್ರಶ್ನೆಗೆ ನೀವು:
          “ಎಂದೆಂದೂ ಕೈಹಿಡಿದಂದದಿ ಸಲಹಿರ್ಪೆ
          ಚಂದದ ತಾರೆ(?) ಸುದತೀ|
          ಇಂದಿಲ್ಲಿ ಹಾಸ್ಯಬ್ರಹ್ಮೋತ್ಸವದಲಿ ನೀನು
          ……………………………….
          (ಕೈಹಿಡಿವೆನೆಂದರೆ ಬೇಡೆಂಬೆನೆ)
          ಎಂದು ಆ ಸರಸ್ವತಿಗೆ ಹೇಳುತ್ತೇನೆ” ಎಂದು ಹೇಳಿದ್ದಿರಿ.

    • ಗಣೇಶರೆ/ ಮೌಳಿಯವರೆ,
      ನಾನು ರಂಧ್ರನ್ವೇಷಣವನ್ನೂ ಮಾಡಿಲ್ಲ (ಅಲ್ಲಿ ಏನೂ ತಪ್ಪು ಇರಲಿಲ್ಲ), ’ನಿತ್ಯಸುಮಂಗಲಿ’ ಎಂದದ್ದು ಸುಭದ್ರೆಗೂ ಅಲ್ಲ. ಮೌಳಿಯವರ ಪದ್ಯದ ಮೊದಲ ಪಾದದ (ಹಾದರವೇ ಸಂಪ್ರದಾಯ ವಾದವರಲಿ) ಪೂರ್ಣಾರ್ಥವನ್ನು ’ಸಾಧ್ವೀ’ ಪದಕ್ಕೆ ಆರೋಪಿಸಿದೆ ಅಷ್ಟೇ.
      Well, I had ignored the (conspicuous) question mark at the end of pUrvArdha. For obvious reasons, I prefer to stand by that oversight.

      • ಸಾಂದರ್ಭಿಕ ಮತಿಗತಿಗಳು
        ಸಂದೋ ಸಲ್ಲದೆಯೊ ಕಾಣ್ಬುದಂತ್ಯವ ನೆಂದುಂ
        ಹಿಂದಿಟ್ಟವುಗಳ, ರಸಮಂ
        ಸಂಧಾನಿಸೆ, ತೆರದ ಮನೆವೆ ರಕ್ಷಾಬಂಧಂ

        ಕಲಿಕೆಗೆ ವಯಮುಂಟಿ, ಹುಡುಕು
        ತಲೆಯೆಲ್ ಮಾನಸ ಮಧುಪಕೆ ರಸಮರೆಯಪುದೇಂ?
        ಬಲೆ-ಪದಗಳೊಳಹಮಿಕೆ ಸಿಗ
        ದಲೆ, ಯರ್ಥವಪಿಡಿಯೆ ಭಾಷೆ ಬಲೆಗಂ ಬೆಲೆಯೈ

        ಬಿಡುತಿದ ಮುಂದಕೆ ಸಾಗುವ
        ಕಡುದೂರಮದಿರ್ಪುದಲ್ತೆ ಗುರಿ ಜೀವಿಗಳಾ !
        ಎಡವದ ಹೋಲಿಕೆ ಮಾಡದ
        ನಡೆ, ತನ್ನಯ ನಿಜದ ಶಕ್ತಿಯನೆ ಪೋಷಿಪುದೈ

        ಅವರವರ ಭಾವ ವಿರುವಂ
        ತವರವರೇ ಮುಂದರಿವುದ ನೊಪ್ಪೆದೆ, ತಿದ್ದಲ್
        ಬೆವರಿನ ಬವರವೆ ಬಳುವಳಿ,
        ಸವರಣೆ ಸ್ವೀಕೃತವದೆಲ್ಲಿ? ದನಿಯನು ಮರೆಯಲ್

        ಒಂದೇ ಲಹರಿಯಲೆನ್ನೊಳು
        ಬಂದಿಹುದಲ ಭಾವವಿದುವೆ ಸ್ವಾಂತಕೆ ನಾನೇ
        ಹೊಂದಿಸಿಕೊಳೆ ಬರೆದೆನಿವನು
        ಸಂದೇಹಂ ಸಲದು ಬೋಧೆಯಲ್ಲವಿದೆಂದುಂ

  5. ಹಾದರಕೊ? ಲೇಸೆನೆ, ಸುಲಿಗೆ
    ಯಾದವು ಸತಿಮಾನ ಯಾದವಾಂತ್ಯದ ರಣದೊಳ್
    ಮೋದದ ಕಳವು ಸುಭದ್ರೆಗ
    ಮಾದುದು ಸೌಭಾಗ್ಯ ಮೊಮ್ಮನಾಳ್ದನು ರಾಜ್ಯಂ

  6. ಹಾ! ದರಕಟ್ಟಿದ ಕೃಷ್ಣೆ ವಿ
    ನೋದದ ಭಂಜನೆ ಸುಲಿಗೆಯ ಸಹಿಸಿದಳಲ್ತೇ
    ಯಾದವಪಡೆಕೊಲೆ ಕಳವಿನ
    ಮೋದದಿ ಗದ್ದುಗೆಯನೇರ್ದ ಸಫಲೆ ಸುಭದ್ರೇ

  7. ಪರಿಹೃತಿಕಿರಣಾವಳಿಯಂ
    ಶರಶತಮೆಂಬಂತೆ ಚಂದ್ರನುಕ್ಕೇರಿಸಿರಲ್|
    ವಿರಹದ ಚಿಂತೆಯೆ ಕಾಡಿ-
    ತ್ತರರೇ! ನೂತನವಿಧಾನಪದಸಂಚಯದಾ!!!:-)
    ತುಂಬ ಬಗೆಯಲ್ಲಿ ಪರಿಹಾರಪದ್ಯಗಳನ್ನು ಪುಂಖಾನುಪುಂಖವಾಗಿ ಹೊಮ್ಮಿಸುತ್ತಿರುವ ಚಂದ್ರಮೌಳಿಯವರಿಗೂ ಸೊಗಸಾದ ಪರಿಹಾರವನ್ನಿತ್ತ ಪ್ರಸಾದರಿಗೂ ಧನ್ಯವಾದ.
    ಇದೊ ನನ್ನ ಕಿಂಚಿತ್ಪ್ರಯತ್ನವೇದ್ಯಪದ್ಯ:-)

    ಕಾಸುಲಿಗೆ ಪ್ರಲೋಭನಪದಂ ಸರಿಯಾರ್ಷವಿವಾಹವೆನ್ನುತುಂ
    ಬೇಸರಗೊಳ್ಗೆ ಬ್ರಾಹ್ಮಮೊಲವೇತಕೊ ಲೆಕ್ಕಿಸದಾರ್ಯರಂ ಗಡೆಂ-
    ದಾಸುರುಗೊಳ್ಗೆ ದೈವಮುಚಿತಕ್ರಮಮೆಂದು ವಿನೇಯರಾಯ್ತಲಾ
    ಲೇಸೆನೆ ರಾಕ್ಷಸಕ್ಕಳವುಗೊಂಡು ಸುಭದ್ರೆಯ ಪಾಣಿಪೀಡನಂ||

    (ಇಲ್ಲಿ ಧರ್ಮಶಾಸ್ತ್ರಪ್ರಸಿದ್ಧವಾದ ಎಂಟು ವಿವಾಹಗಳ ಪೈಕಿ ಪ್ರಶಸ್ತವೆನಿಸಿದ ಬ್ರಾಹ್ಮಾದಿಗಳನ್ನು ಬಿಟ್ಟು ರಾಕ್ಷಸವಿವಾಹಕ್ರಮದಿಂದ ಸುಭದ್ರೆಯ ಮದುವೆಯಾದುದನ್ನು ಕಟಾಕ್ಷಿಸಿದ್ದೇನೆ)
    ಕಾಸು+ಉಲಿಗೆ = ಹಣವು ಅಬ್ಬರಿಸಲಿ; ಅಂದರೆ ಇದರ ತಾತ್ಪರ್ಯವಿಷ್ಟು; ಆರ್ಷವಿವಾಹದಲ್ಲಿ ವಧೂದಕ್ಷಿಣೆಯುಂಟು. ಅದೌ ಹೋಯಿತಲ್ಲಾ ಎಂದು ಹಣವು ಗೋಳಾಡಲಿ:-) ಬ್ರಾಹ್ಮವಿವಾಹವು ಆರ್ಯತ್ವವಿಲ್ಲಿ ಅಂದರೆ ಕನ್ಯಾಪಹಾರದಲ್ಲಿ ಹಾಳಾಯಿತಲ್ಲಾ ಎಂದು ಬೇಸರಿಸಲಿ. ವಿಧಿವಾದಿಗಳು ದೈವವೆಂಬ ವಿವಾಹಪದ್ಧತಿಯು ನಡೆಯಲಿಲ್ಲವಲ್ಲಾ ಎಂದು ಆಸುರು(=ದುಃಖ)ಗೊಳ್ಳಲಿ. ಆದರೆ ಸುಭದ್ರೆಯ ಪಾಣಿಪೀಡನವು(=ವಿವಾಹವು) ರಾಕ್ಷಸವಿಧಿಯಿಂದಲೇ ಆಯಿತೆನ್ನುವುದು ಪದ್ಯದ ತಾತ್ಪರ್ಯ. ಯಾವುದೇ ಸೊಗಸಿನ ಅತಿಶಯವೀ ಪದ್ಯದಲಿಲ್ಲ. ಆದರೆ ನೋಡಲು ಸುಲಭವಾದ ಈ ನಾಲ್ಕು ಪದಗಳನ್ನು ಅರ್ಥಾಂತರದಲ್ಲಿ ಬಳಸಿ ಪ್ರಸ್ತುತವಿಷಯದ ಬಗೆಗೆ ಕವನಿಸುವುದು ಸುಲಭವೇನಲ್ಲ:-) ಒಳ್ಳೆಯ ಸವಾಲನ್ನು ಇತ್ತುದಕ್ಕಾಗಿ ರಾಮಚಂದ್ರರಿಗೆ ಧನ್ಯವಾದ.

    • ಸುಂದರ ಪದ್ಯದೊಳಿರ್ಪಾ
      ಬಂಧುರ ಭಾವದಡಕಕ್ಕೆ ನಮನಗಳೀವೆಂ

      ಬಹಳ ಸುಂದರವಾದ ಪದ್ಯವನ್ನು (ಪದ್ಯದೊಳಗಡಕವಾದ ಭಾವವನ್ನೂ) ನೀಡಿದ್ದಕ್ಕಾಗಿ, ಧನ್ಯವಾದಗಳು.
      ಮೌಳಿ ಹಾಗೂ ಪ್ರಸಾದರ ಪದ್ಯಗಳಿಗೆ ನಿಮ್ಮ ಮೆಚ್ಚುಗೆಯೂ ಅತ್ಯುಚಿತವಾಗಿದೆ.

    • ನಿಮ್ಮದು ’ಕಿಂಚಿತ್ಪ್ರಯತ್ನವೇದ್ಯಪದ್ಯ’ವೆ?

      ಕಿಂ ಚಿತ್ಪ್ರಯತ್ನವೇದ್ಯಂ ನು
      ಪದ್ಯಮೇತದ್ಭವತ್ಕೃತಂ?!
      ತಂ ಗದ್ಯಾರ್ಥಮಪಿ ಜ್ಞಾತುಂ
      ನಾಲಂ ಜನ್ಮಚತುಷ್ಟಯಂ||

  8. ಒಂದೇ ಭಾವದ ೩ ಪದ್ಯಗಳು – ಬಲರಾಮನ ಪ್ರಲಾಪ ::

    ಅಳುವ ಮೊಗದಲೆ ರಾಮನೆಂದನು
    ಹಳಿವ ಮಂದಸ್ಮಿತದ ಕೃಷ್ಣನಿ –
    ಗಿಳೆಯಲಿನ್ನಾರನ್ನು ನಂಬಲದಾಗದಿನ್ನಕಟ |
    ಖಳನು ಕಳುವಿನ ಸಂಚು ಹೂಡಿದ
    ಬಳಿಕ ಭರವಸೆ ಭಕ್ತಿ ನಂಬುಗೆ –
    ಗಳನು ಸುಲಿಗೆಯ, ಹಾದರವ, ಕೊಲೆಯನ್ನೆ ಗೈದಿಹನು ||

    ಸಾಧನೆಯ ಪರಿಯೆನುತೆ ಮೋಸದ –
    ಲಾದ ಭಾನಗಡಿಯಿದು ಸಾತ್ವಿಕ
    ಯಾದವರ ಮೇಲೆಸೆದ ಬಾಧೆಯೊ ನೊಗದ ಹೋರಟೆಯೊ |
    ಹಾದರವ ಸಂನ್ಯಾಸ ತತ್ವಕೆ –
    ಗೈದ ಕಳುವಿಸುಲಿಗೆಯಿದು ದಿಟ
    ತೇದು ಕೊಲೆಗೀಡಾದ ಕೊರಡಂತಾದೆನಕಟಕಟ ||

    ಬಳಿಯ ಬಳ್ಳಿಯ ಕೋಮಲಾಂಗಿಯ
    ಮಳೆಗೆರೆದ ಸುಮ ಭಾವರಾಶಿಯ –
    ನಿಳೆಯೊಳಿರೆ ಲೇಸೆಂಬ ಸದ್ಗುಣ ಶುದ್ಧ ಶೀಲಗಳ
    ಕಳುವು, ಸುಲಿಗೆಯ ಗೈದಿಹನು ಮೇಣ್ ಹಾದರಕೊಲೆಯ ||

  9. ಹಲಿಯಾ ಪೆಡಸುಲಿ ಗೆಯ್ಯ-
    ಲ್ಕೊಲೆದಿರ್ಪ೦ ಹಾ ದರಸ್ಮಿತ೦ ಗತಿಯೇನೆ೦-
    ದೊಲಿದಾ ಸುಭದ್ರೆ ಮಗದೊಳ್
    ಗೆಲುವ೦ ಮೂಡಿಸಲು ಕಳವುಮುಚಿತದ ಮಾರ್ಗ೦

    ಗೆಯ್ಯಲ್ಕೆ ಒಲೆ = ಗೆಯ್ಯಲ್ಕೊಲೆ
    ಒಲಿದಾ = ನಡುಗಿದ
    ದರಸ್ಮಿತ = ನಗೆಮೊಗದವನು (ಕೃಷ್ಣ)

  10. Typo

    ಹಲಿಯಾ ಪೆಡಸುಲಿ ಗೆಯ್ಯ-
    ಲ್ಕೊಲೆದಿರ್ಪ೦ ಹಾ ದರಸ್ಮಿತ೦ ಗತಿಯೇನೆ೦-
    ದೊಲಿದಾ ಸುಭದ್ರೆ ಮೊಗದೊಳ್
    ಗೆಲುವ೦ ಮೂಡಿಸಲು ಕಳವುಮುಚಿತದ ಮಾರ್ಗ೦

  11. ಸುಲಿಗೆ ವಿವಾದ ಪುಸಿ ನುಸುಳು
    ಕೊಲೆ ತೋಹನ್ಯಾಯ ತಲ್ಲಳ ಬೆದರು ಮೋಸಂ|
    ಪೊಲೆ ಹಾದರ ಮಾಡದ, ಪುಡಿ
    ಕಳವು ಪಿರಿದಾಯ್ತೆ ಪಾರ್ಥನ?

    ಸ್ಫೂರ್ತಿ: ಲಕ್ಷ್ಮೀಶ – ಜೈಮಿನಿ
    ಬಳಿಕ ಯುಧಿಷ್ಠಿರನಾಳ್ವ ದೇಶದೊಳ್
    ಕಳವು ಕೊಲೆ ಪಾದರಂ ಪುಸಿ ನುಸುಳು ವೈರವ
    ಟ್ಟುಳಿ ತೋಹು ಬೆದರು ಬೆಜ್ಜರ ಕಷ್ಟನಿಷ್ಠುರಂ ಗಜರು ಗಾವಳಿ ವಿವಾದ|
    ಮುಳಿಸು ಪೊಲೆಗಲಸು ಮೊರೆ ಸೆರೆ ಕೃತಕ ಕಾರ್ಪಣ್ಯ
    ಮಳಿವು ಪಳಿವನ್ಯಾಯ ಮರೆ ಮೋಸವಾಸಿ ತ
    ಲ್ಲಳ ತಳೆ ವಿಯೋಗಮಲಸಿಕೆ ಕರ್ಕಶಂಗಳಿವು ಮೊಳೆದೂರವೇಳ್ವೆನು||

    • some letters seem to be missing in the first line of quoted vaardhaka. It also helps if you can indicate how this pooranam is connected to subhadra parinnaya. Thanks

  12. ನಾಲ್ಕನೆ ಪಾದ ನಲುಗಿದುದೋ!

    ಸುಲಿಗೆ ವಿವಾದ ಪುಸಿ ನುಸುಳು
    ಕೊಲೆ ತೋಹನ್ಯಾಯ ತಲ್ಲಳ ಬೆದರು ಮೋಸಂ|
    ಪೊಲೆ ಹಾದರವಿರದೆ ಬರಿದೆ
    ವೊಲಿದಿಹಬಲೆಯ ಕಳವುಂ ಪಿರಿದೆ ಪಾರ್ಥಕೃತಂ?

  13. ಹಾದರದಿ ಕರೆಸಿ ಜೋಗಿಯ
    ಕಾದಲ್ಮೆಯಸುಲಿಗೆ ಬೀಳಿಸನುಜಾತೆಯನೇ
    ಸಾದಿಸಿಸಿದ ನಡುಕಳವುಗ
    ಯಾದವನ ಕೊಲೆಸುವುನೆಂದನಾ ಅಳಧಾರೀ

    ಸುಭದ್ರೆಯಪಹರಣ ಮತ್ತು ವಿವಾಹದ ಸುದ್ಧಿಯಿಂದ ವಿಚಲಿತನಾದ ಬಲರಾಮನು ಕೋಪಗೊಂಡು ಪಾನಮತ್ತನಾಗಿ ಕೂಗಾಡಿದನು. ಅವನ ಕುಡಿತದ ಕಾರಣ, ನಾಲಗೆಯ ಹಿಡಿತತಪ್ಪಿ ಅಕಾರವು ಹಕಾರವಾಗಿ, ಳಕಾರವು ಲಕಾರವಾಗಿ, ಲಕಾರುವು ಳಕಾರವಾತಯ್ತೆಂಬುದು ಇಲ್ಲಿನ ಕಲ್ಪನೆ.

    ಆದರದಿ ಕರೆಸಿ ಜೋಗಿಯ
    ಕಾದಲ್ಮೆಯಸುಳಿಗೆ ಬೀಳಿಸನುಜಾತೆಯನೇ
    ಸಾದಿಸಿಸಿದ ನಡುಕಲವುಗ
    ಯಾದವನ ಕೊಳೆಸುವುನೆಂದನಾ ಹಲಧಾರೀ

    ಕಾದಲ್ಮೆ- ಪ್ರೀತಿ
    ಸಾದಿ – ಸಾರಥಿ
    ನಡುಕಲವ – ಮಧ್ಯದವ (ಬಲರಾಮ ಕೃಷ್ಣ ಸುಭದ್ರೆಯರಲಿ)

    • Very novel. And nice. It would have been better if you had composed it as Balarama’s direct speech.

      Also there was no need for the intoxicating drink. His nagging toothache, as effectively delineated by Bhyrappa in his Parva, was enough to cause stammer to his speech.

    • ಪ್ರಸಾದು ಅವರು ಗಮನಿಸಿದಂತೆ ನಿಮ್ಮ ಪರಿಹಾರವು ತುಂಬ ಒಳ್ಳೆಯ ಕಲ್ಪನೆಯನ್ನಾಧರಿಸಿದೆ. ಆದರೆ ಅವರೇ ಹೇಳಿದಂಥ ಸವರಣೆಗಳು ಬೇಕಿವೆ. ಜೊತೆಗೆ ಲ ಮತ್ತು ಳ ಗಳಲ್ಲಿ ಬಲರಾಮನು ಕುಡಿದ ಮತ್ತಿನ ತೊದಲಿನ ಕಾರಣ ವಿಪರ್ಯಾಸವನ್ನು ಮಾಡಿದನೆಂದರೆ ಅದನ್ನು ಇಡಿಯ ಪದ್ಯದಲ್ಲಿ ಆದ್ಯಂತ ಅನುಸರಿಸಬೇಕಿತ್ತು. ಹಾಗಿಲ್ಲದೆ ಇದು ಕ್ರಮ ತಪ್ಪಿರುವಂತಿದೆ. ದಯಮಾಡಿ ನೋಡಿ ಸವರಿಸಿಕೊಳ್ಳಿರಿ.

    • ಪ್ರಸಾದು ಮತ್ತು ಗಣೇಶ್ ರವರ ಪ್ರೂತ್ಸಾಹ ಮತ್ತು ಸಲಹೆಗಳಿಗೆ ಧನ್ಯವಾದಗಳು.
      ನನಗೆ ತಿಳಿದಂತೆ ಸವರಲು ಪ್ರಯತ್ನಿಸಿದ್ದೇನೆ.

      ಹಾದರದಿ ಕರೆಸಿ ಜೋಗಿಯ
      ಕಾದಳ್ಮೆಯಸುಲಿಗೆ ಬೀಲಿಸನುಜಾತೆಯನೇ
      ಸಾದಿಸಿಸಿದ ನಡುಕಳವುಗ
      ಯಾದವನ ಕೊಲೆಸುವೆ ಕೂಡಳೆನವನೆಲೆದುತಾ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)