ಗೆಳೆಯರೇ,
ವಿದ್ವತ್ತು, ಧಾರಣೆ ಮತ್ತು ಹಾಸ್ಯಚಮತ್ಕಾರಗಳು ಕಾಲನಾಲಯದಲ್ಲಿ ಹರಿಯುವ ನದಿಗಳು. ಇವೆಲ್ಲಾ ಒಂದೇ ಕಡೆ ಸಂಗಮವಾದ ಅಪೂರ್ವ ತಾಣದಲ್ಲಿ ಅವಧಾನಿಯ ಉದಯವಾಗುತ್ತದೆ. ಅವಧಾನದ ಜುಳುಜುಳು ಸದ್ದು ಮೂಡುತ್ತದೆ. ಜಗತ್ತಿನ ಅಹಂಕಾರದ ಪೊರೆಕಳಚಿ, ವಿಭೂತಿಯ ಅನುಭವವಾಗುತ್ತದೆ. ಇಂಥಾ ಸುಸಂದರ್ಭವೊಂದು ನಮ್ಮೆದುರಿಗಿದೆ. ನಮ್ಮ ಪದ್ಯಪಾನದ ಬೆನ್ನೆಲುಬಾದ ಗಣೇಶರು ನವೆಂಬರ್ ೩೦, ಡಿಸೆಂಬರ್ ೧, ೨ಕ್ಕೆ ಶತಾವಧಾನವನ್ನು ನಡೆಸಲಿದ್ದಾರೆ. [ವಿವರಗಳು ಇಲ್ಲಿದೆ.]
ಇನ್ನು ನಮ್ಮ ಕೆಲಸ. ಪದ್ಯಪಾನಿಗಳು ಕಾಲರ್ ಮಡಚಿ, ತೊಡೆ ತಟ್ಟಿ ಸಿದ್ಧವಾಗಬೇಕಿದೆ. ಪದ್ಯಪಾನಿಗಳು ಮೊದಲಸಾಲಿನಲ್ಲಿ ಕುಳಿತು, ಹಳಗನ್ನಡ ಪದ್ಯದುದಯವನ್ನು ನೋಡುನೋಡುತ್ತಾ ಆನಂದಿಸುವಂತಾಗಬೇಕಾಗಿದೆ. ಇನ್ನು ಅರ್ಥವನ್ನು ಗದ್ಯದಲ್ಲಿ ಬಿಡಿಸುವವರೆಗೆ ಕಾದು, ತಲೆಯಾಡಿಸುವುದು, ಕುರುಡನಿಗೆ ಸೂರ್ಯೋದಯದ ಸೌಂದರ್ಯವನ್ನು ವರ್ಣಿಸಿದಂತೆಯೇ, ಪರಿಪೂರ್ಣವಾಗದು. ಆದ್ದರಿಂದ ಇನ್ನುಳಿದ ದಿನಗಳಿಗಾಗಿ, ಪದ್ಯಪಾನ ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ಒಂದಿಷ್ಟು ಪೂರ್ವಸೂರಿಗಳ ಪದ್ಯಗಳನ್ನು, ಚಿತ್ರಕಾವ್ಯಾದಿಗಳನ್ನೂ, ಇನ್ನಷ್ಟು ಛಂದಸ್ಸುಗಳನ್ನೂ ನಮ್ಮದಾಗಿಸಲು ಪ್ರಯತ್ನಿಸೋಣವೆಂಬುದು ನಮ್ಮಾಸೆ.
ವರ್ಣನೆ:ಯಾವುದಾದರೂ ವಿಡಂಬನೆಯನ್ನೋ ಸಹೃದಯಪ್ರಿಯವಾಗಬಲ್ಲ ಹಾಸ್ಯವನ್ನೋ ನಿಮ್ಮ ಇಷ್ಟವಾದ ಛಂದಸ್ಸಿನಲ್ಲಿ ತಿಳಿಸಿ. ಒಂದೆರಡು ಉದಾಹರಣೆಗಳು:
ಕಾಲವನೆಳ್ಳಷ್ಟೂ ಪೋಲುಮಾಡದೆ ಕಾರ್ಯಶೀಲನಾಗಿದ್ದೊಂದು ಗಳಿಗೆ
ಕಾಲನ್ನು ಚಾಚಿ ಮೈಮರೆತಾಗಲೇ ಬಂದ ಮೇಲಾಧಿಕಾರಿಯು ಬಳಿಗೆ [ಗಣೇಶರ ರಚನೆ. ಕಾವ್ಯಕಲ್ಪದಿಂದ]
ಇನ್ನೊಂದು ಉದಾಹರಣೆ:
ಗಾಥಾಸಪ್ತಶತಿಯಲ್ಲಿ ಬರುವ ಪದ್ಯವನ್ನು, ತೀ.ನಂ.ಶ್ರೀ. ’ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಹೀಗೆ ಅನುವಾದಿಸಿದ್ದಾರೆ.
ಅಯ್ಯೋ, ಗದ್ದೆಗೆ ನಾನು ಹೋಗೆನು, ನೆಲ್ಲನು
ತಿಂದುಕೊಳ್ಳಲಿ ಗಿಳಿವಿಂಡು;
ಅರಿತರಿತೂ ದಾರಿಹೋಕರು ದಾರಿಯ
ಬೆಸಗೊಳುವರು ಮತ್ತೆ,ಮತ್ತೆ.
[ಮೂಲ ಪ್ರಾಕೃತದ ಸಂಸ್ಕೃತಛಾಯೆ ಹೀಗಿದೆ:
ಕಷ್ಟಂ ನ ಯಾಮಿ ಕ್ಷೇತ್ರಂ ಖಾದ್ಯತಾಂ ಶಾಲಿರಪಿ ಕೀರನಿವಹೈಃ
ಜಾನಂತೋಪಿ ಪಥಿಕಾಃ ಪೃಚ್ಛಂತಿ ಪುನಃಪುನೋ ಮಾರ್ಗಂ||
[ಈ ಮುಗ್ಧೆ ಸುಂದರಿಯಾಗಿದ್ದು, ಪಥಿಕರಿಗೆ, ದಾರಿ ಕೇಳುವ ನೆಪದಲ್ಲಿ ಇವಳನ್ನು ಮಾತನಾಡಿಸುವುದೇ ಗುರಿ ಎಂಬ ಭಾವವಿದೆ.]
ಪದ್ಯನಿದರ್ಶನಂ:
ರನ್ನನ ಗದಾಯುದ್ಧದಿಂದ:
ಆ ರವಮಂ ನಿರ್ಜಿತ ಕಂ-
ಠೀರವರವಮಂ ನಿರಸ್ತಘನರವಮಂ ಕೋ-
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ||
[ನಿರಸ್ತ = ಮೀರಿದ, ಘನ = ಮೋಡ] [ಪುನರುಕ್ತಿದೋಷವಿಲ್ಲದೇ, ರವವನ್ನು ಪ್ರತಿಧ್ವನಿಸಿದ್ದಲ್ಲದೇ, ಕೊನೆಯ ಸಾಲಿನ ಧ್ವನಿಯನ್ನೂ ಗಮನಿಸಿ]