May 192012
 

“ರಿನ್”, “ಸನ್”, “ಬನ್”, “ವಿನ್” ಪದಗಳನ್ನು ಬಳಸಿ ಚಂದ್ರೋದಯದ ವರ್ಣನೆಯ ಪದ್ಯಗಳನ್ನು ರಚಿಸಿರಿ.

ಛಂದಸ್ಸು – ನಿಮ್ಮ ಆಯ್ಕೆ

  22 Responses to “ಪದ್ಯಸಪ್ತಾಹ – ೨೧ – ದತ್ತ ಪದಿ”

  1. ಪೊದರಿನ್ದೆ ಬಂದ ಮೊಲದೆಂಬ ವೊಲ್ ಮುಗಿಲ್-
    ಪದರಂಗಳಿಂದೆ ಮಿಗೆ ಸನ್ದನೀ ಸುಧಾ-
    ಸ್ಪದನಿಂದು ಬನ್ಧುರಕರಂ ಗಡೇತಕೋ
    ಸದೆವಂ ವಿಹಾಸಿಪರವಿನ್ದಲೋಕಮಂ||

  2. “ಇಂದುವದನಾ” ವೃತ್ತ..
    [ ಶ್ರೀಕೃಷ್ಣನೊಂದಿಗೆ ಶ್ಲೇಷಾಲಂಕಾರವನ್ನು ಪ್ರಯತ್ನಿಸಿದ್ದೇನೆ.]

    ಸುಂದರಿಯರಿಂದ ಕೃತದೀಪ್ತಿಯನು ಮೀರಿ
    ಸ್ಯಂದನದಿ ತಾಪಹರ ಸಂತಸವ ಬೀರಿ..
    ಬಂದ ಭರದಿಂ ಕುಮುದಯಾದವಸುಬಂಧುಂ
    ಮಂದನಗುವಿಂದ ದಿಶೆಯನ್ನು ಬೆಳಗಿಂದು..||

  3. first two lines are flawless while the second half needs to be polished for baMdhuM is an ungrammatical usage and maMMdanagu is arisamaasa.:-). Even the bhaava in the verse is incomplete as the four lines are still in a mood for continuation..

    • ಗಣೇಶ ಅವರೇ, ಪದ್ಯವನ್ನು ಸ್ವಲ್ಪಮಟ್ಟಿಗೆ ತಿದ್ದಿ ಬರೆದಿದ್ದೇನೆ..

      ಸುಂದರಿಯರಿಂದ ಕೃತದೀಪ್ತಿಯನು ಮೀರಿ
      ಸ್ಯಂದನದಿ ತಾಪಹರ ಸಂತಸವ ಬೀರಿ..
      ಬಂದ ಕುಮುದೇಂದುಕುಲಬಂಧು ನಗುವಿಂದ
      ಮಂದತೆಯಲಿಂದು ದಿಶೆಯನ್ನು ಬೆಳಗುತ್ತಾ.||

      ( “ಮಂದನಗು”-ಅರಿಸಮಾಸವನ್ನು ಸರಿಪಡಿಸಿದ್ದೇನೆ. ಆದರೆ ಅನೇಕ ಕಡೆ ಇಂತಹ ಪ್ರಯೋಗಗಳನ್ನು ಕಂಡಿದ್ದೇನೆ..
      ಪದ್ಯದ ಭಾವ ಸಂಪೂರ್ಣವಾಗಿಲ್ಲ ಎಂದಿದ್ದೀರಿ.. ಅದರರ್ಥ ನನಗಾಗಲಿಲ್ಲ.. ದಯವಿಟ್ಟು ವಿಷದಪಡಿಸಲು ವಿನಂತಿ.)

      • ಇದೀಗ ಪದ್ಯ ಮತ್ತೂ ಚೆನ್ನಾಗಿದೆ. ಆಗ ವಾಕ್ಯವು ಪೂರ್ನವಾಗಿರಲಿಲ್ಲವಾದುದರಿಂದ ಭಾವವಿನ್ನೂ ಅಸಮಗ್ರವೆಂದು ತಿಳಿಸಿದ್ದೆ.

    • ( ಕ್ಷಮಿಸಿ.. ಮಾತ್ರಾಗಣ ತಪ್ಪಾದ್ದರಿಂದ ಮತ್ತೆ ಬರೆದೆ..)

      ಸುಂದರಿಯರಿಂದ ಕೃತದೀಪ್ತಿಯನು ಮೀರಿ
      ಸ್ಯಂದನದಿ ತಾಪಹರ ಸಂತಸವ ಬೀರಿ..
      ಬಂದ ಕುಮುದೇಂದುಕುಲಬಂಧು ಬೆಳಗುತ್ತಾ
      ಮಂದತೆಯಲಿಂದು ದಿಶೆಯನ್ನು ನಗುವಿಂದ.||

  4. ಹೊತ್ತು ಮುಳುಗಿತು ಸಂಜೆಯಾಯಿತು
    ಮತ್ತೆ ಪೂರ್ವದಿ ಬಂದು ಚಂದಿರ
    ನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನು
    ಚಿತ್ತವಿನ್ನದರಿಂದ ಬೇರೆಡೆ
    ಯೆತ್ತ ಪೋಪುದು? ಬಾನ ಹೆಣ್ಣಿನ
    ಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!

    ಇಲ್ಲಿ ಪಾಡ್ಯಮಿ ಎಂದು ಹೇಳಲು ವಿಶೇಷ ಕಾರಣವಿದೆ. ಹುಣ್ಣಿಮೆಯ ಮರುದಿನ ಕೃಷ್ಣ ಪಕ್ಷದ ಪಾಡ್ಯದ ಚಂದ್ರನು ನೋಡಲು ಸರಿಸುಮಾರು ಹುಣ್ಣಿಮೆಯ ಚಂದ್ರನಷ್ಟೇ ದೊಡ್ಡದಾಗಿದ್ದು, ಸೂರ್ಯ ಮುಳುಗಿ ೪೦-೪೫ ನಿಮಿಷಗಳ ನಂತರ ಹುಟ್ಟುತ್ತಾನೆ (ಹುಣ್ಣಿಮೆಯ ಚಂದಿರನು ಸೂರ್ಯಾಸ್ತದ ಹೊತ್ತಿಗೇ ಹುಟ್ಟುತ್ತಾನೆ), ಹಾಗಾಗಿ ಪಾಡ್ಯಮಿಯಂದು ಚಂದ್ರ ಹುಟ್ಟುವ ವೇಳೆಗೆ ಸ್ವಲ್ಪ ಕತ್ತಲು ಹೆಚ್ಚಾಗಿದ್ದು, ಮೂಡಣ ದಿಕ್ಕಿನಲ್ಲಿ ಚಂದಿರನ ಸೊಬಗು ಇನ್ನೂ ಹೆಚ್ಚಾಗಿ ಕಾಣುತ್ತದೆ. ಅದಕ್ಕಾಗಿಯೇ, ನಾನು ಹುಣ್ಣಿಮೆಯ ಚಂದ್ರನ ಬದಲು ಪಾಡ್ಯದ ಚಂದ್ರನನ್ನು ಬಾನ ಹೆಣ್ಣಿನ ಕುತ್ತಿಗೆಯ ಪದಕವನ್ನಾಗಿಸಿದ್ದೇನೆ.

    • ಒಳ್ಳೆಯ ವಿವರಣೆ, ಮತ್ತೂ ಒಳ್ಳೆಯ ಪರಿಶೀಲನೆ.

  5. ಸಂದಲು ಸಂಜೆ ಮುದುಡುತರ
    ವಿಂದವು ನೈದಿಲೆಗೆ ಹೇಳಿತು ಬಹನು ಚಂದ್ರನ್
    ಬಂಧನಕರಳೈ ನಿಮಗದ
    ರಿಂದ ಮುಕ್ತಿಯಿರೆ ಮುಂಬೆಳಗಲಿ ನಲಿಯಿರೈ

    • ಸಂದಲು ಸಂಜೆ ಮುದುಡುತರ
      ವಿಂದವು ನೈದಿಲೆಗೆ ಹೇಳಿತು ಬಹನು ಚಂದ್ರನ್
      ಬಂಧನಕರಳೈ ನಿಮಗದ
      ರಿಂದಲಿ ಮುಕ್ತಿಯಿರೆ ಮುಂಬೆಳಗಲಿ ನಲಿಯಿರೈ

  6. ಚಂದ್ರೋದಯ ಕುರಿತಾಗಿ ಮಾತ್ರ. ದತ್ತಪದಗಳನ್ನು ಬಳಸಿಲ್ಲ.

    ನವಮಿ ತೇದಿಯ ಆಸುಪಾಸಿನಲ್ಲಿ ಚಂದ್ರ ಬೈಗಿಗೆ ಮುಂದಾಗಿಯೇ ಎದ್ದಿರುತ್ತಾನೆ. ಸೂರ್ಯಾಸ್ತ ಸಮಯದಲ್ಲಿ ಚಂದ್ರೋದಯಕ್ಕಾಗಿ ಕಾದು ಕುಳಿತರೆ, ಅಷ್ಟರಲ್ಲೆ ಧುತ್ತೆಂದು ಚಂದ್ರನ ಬೆಳಕು ಕಾಣಿಸಿಕೊಂಡಿರುತ್ತದೆ.

    ಮಾಲಭಾರಿಣೀ:
    ವಿವರಂಗಳ ಪೇಳ್ವ ಮುನ್ನಮಾನುಂ|
    ಸವಿಯಲ್ ಕಾದೆ ಸುಮೋದಯಂ ಮನೋಜ್ಞಂ|
    ದಿವದಾಗಸ ಕಂದಲಿಲ್ಲ, ಚಂದ್ರಂ|
    ನವಮಂ ಬೆಳ್ಗ ಬೆಳಂಗಿರಲ್ ನಗುತ್ತಂ||

    • ಒಳ್ಳೆಯ ಹಳಗನ್ನಡಪ್ರಯೋಗ. ನನಗೆ ಮುದವಾಗಿದೆ:-)

      • ಉದ್ದೇಶವದುವೆ ತಾನುಂ
        ಖುದ್ದು ಗಳಿಸೆ ಪುಣ್ಯವೀವುದು ತಮಗೆ ಮುದಂ|

        • ಉದ್ದೇಶವದುವೆ ತಾನುಂ
          ಖುದ್ದು ಗಳಿಸೆ ಪುಣ್ಯವೀವುದು ತಮಂಗೆ ಮುದಂ|

  7. ಮಾಲಭಾರಿಣಿಂಥ ಹೊಸವೃತ್ತದಲ್ಲಿ ಪದ್ಯಪಾನದ account ಅನ್ನು ಮೊತ್ತಮೊದಲು ತೆರೆದಿದ್ದೀರಿ; ಧನ್ಯವಾದ

  8. [ಮೊದಲಿನ ಪದ್ಯದಲ್ಲಿ ಮಾತ್ರ ದತ್ತಪದಿ ಇದೆ. ಉಳಿದವು ಚಂದ್ರನ ಸುತ್ತ]

    ಶಾಂತಮೆ ಲೋಕದೊಳ್ ರಸಮನೋಹರಮೆಂಬುದ ವಿಂಗಡಿಪ್ಪನಂ
    ಶ್ರಾಂತಿಯನೋಡಿಸುತ್ತೆ ಮುದವೀಯುತ ಸಂದಿಹ ಚಾರುಚಂದ್ರಮಂ
    ಕಾಂತಿಸಿ ಕಬ್ಬಿಗಂ ಸೆಳೆದು ರಿಂಗಿಸಿ ರಂಜಿಪಮಾನು ಬೇಡುವೆಂ
    ಭ್ರಾಂತಿಯ ತೀರ್ದು ತೋರೆಮಗೆ ಬಂಧು ಮುಗುಳ್ನಗುತಿರ್ಪ ಮಾರ್ಗಮಂ
    [ವಿಂಗಡ = ಹಂಚುವಿಕೆ]

    ಪುಟ್ಟಿದೊಡಂಗೆ ಜೊನ್ನಮಳೆಯಂ ಸುರಿಸಿರ್ದುಪಕಾರಿ ಗಡಂ ನೀಂ
    ಕಟ್ಟಳಲೊಳ್ ಸಹಾಯವನಪೇಕ್ಷಿಸದಿರ್ಪುದು ಲೋಗರೂಢಿಯೊ
    ಳೊಟ್ಟಜೆಯಿಂ ಪೊಗಳ್ದುದುಮದಂ ಪಡಿಗೊಂಡೆನೆ ಪಿರ್ದುಬಿಜ್ಜೆಗರ್
    ನಿಟ್ಟೆಯೊಳಿಚ್ಚಿತರ್ಗೆತಿಳಿಸುತ್ತಿಹರಕಿಂಚಿತಭಾಗ್ಯದಾಸೆಯಿಂ
    [ಪಿರ್ದು = ಹಿರಿದು(?) ಬಿಜ್ಜೆಗ = ವಿದ್ವಾಂಸ, ಕಟ್ಟಳಲ್ = ತೀವ್ರ ದು:ಖ, ಜುನ್ನು = ಬೆಳದಿಂಗಳು. ಒಟ್ಟಜೆ = ಅತಿಶಯ, ವಿಶೇಷ]

    ತಪ್ಪು ಕಣಾ! ಸಾಲದೆ ತಂ
    ದೊಪ್ಪದಿಮೆಲ್ಲರ್ಗೆ ಹಂಚುತಿರೆ ಪದನಲ್ತುಂ
    ನೆಪ್ಪೊಳ್ ರವಿ ಕೇಳ್ದೊಡನೆಯೆ
    ಕಪ್ಪೊಳ್ ಮರೆಯಾಗುವೈ ನಮರ್ಗೇ ಕಷ್ಟಂ!
    [ಸೂರ್ಯನಿಂದ ಸಾಲ ತಂದ ಬೆಳಕನ್ನು ಭೂಮಿಗೆ ಹಂಚುವ ಕುರಿತು]

    ಸುಳಿವೆಲರತ್ತಪೊಳ್ತಿಯಸುಡುಬೀಸರದಿಂ ಬಿಸಿಯೇರ್ದು ಕೋಪದಿಂ
    ಬಳಿಬರಲಾಗ ಮುದ್ದನುಡಿಯಿಂ ತವಿಸಿರ್ಪುದು ಸಾಧು! ಚೆಚ್ಚರಂ!
    ಕೆಳೆಯರೆನುತ್ತೆಮತ್ತೆಸಲುಗೆಯಂ ಸಮದಿಂ ತೋರಬೇಡೈ! ಅ
    ಲ್ತೊಳಿತಿನನಾಶಮಪ್ಪುದುದಿಟಂ! ಪಿರಿಯಂ ಪಿಡಿದೋವುದುತ್ತಮಂ
    [ಪಿರಿಯಂ – ರವಿಯಂ, ರವಿಯ ಮಾರ್ಗಮಂ]

    • hoLLa re,

      balu sogasaagide…esp. muddaNana effect gottaagtaa ide 🙂

    • ಅಮಮ! ಇದೇನಿದಚ್ಚರಿ!! ಇದಚ್ಚರಿಯಲ್ತು ಸಮಂತು ನೋಡಿರಲ್
      ಸಮೆವೊಡೆ ಕಬ್ಬಮಿಂತೆಸೆವುದಂ ಪಳಗನ್ನಡದೊಳ್ಪು ಬಲ್ಪಿನಿಂ
      ಜುಮುಗುಡುವಂತೆ ಪಂತಮೆನೆ ಮೂಡಿಸೆ ಸೂಡಿಸೆ ಬಾಣಿಗಳ್ತಿಯಿಂ
      ನಮಗಿವನೊರ್ವನಲ್ತೆ ಪಡುನಾಡಿನ ಜಳ್ಳಿಲಿಯಪ್ಪ ಹೊಳ್ಳನೇ!

      (ಶ್ರೀಶನ ಅಭಿಪ್ರಾಯಕ್ಕೆ ನನ್ನದೂ ಸನ್ನದು:-); ಆದರೆ ಕೆಲವೊಂದು ಕಡೆ ವೃತ್ತ ಮತ್ತು ವ್ಯಾಕರಣ ಎಡವಿದೆ. ಅದನ್ನು ಮುಖತಃ ವಿವರಿಸುತ್ತೇನೆ)

    • ಶ್ರೀಶ, ಗಣೇಶರೆ,
      ಒಳ್ನುಡಿಗಳಿಂ ನಲ್ಗಬ್ಬದಿಂ ಪೊರೆದುದಕ್ಕೆ ನಾಂ ಧನ್ಯಂ. ಆನೆ ಕರೆಮಾಡಿ ಬರ್ಪೆಂ, ತಪ್ಪಂ ತಿಳಿಯಲಕ್ಕುಂ. 🙂

  9. ಚಂದ್ರೋದಯ ವರ್ಣನೆಯತ್ತ ಒಂದು feeble attempt; ದತ್ತ ಪದಿಗಳನ್ನು (ಎಲ್ಲವನ್ನೂ) ಬಳಸಿಲ್ಲ.

    ವರೋರಗನ ಕಟ್ಟಿ ಗಿರಿಗಂ ಕಡೆಯಲಾ ಕಡಲನುರ್ಕಿದುದು ತೀಕ್ಷ್ಣಗರಳಂ
    ಸುರಾಸುರರಿಗಂ ತಡೆಯಲಾಗದಿರಲಾಗ ಹರ ಬಂದನದನುಂಗಿ ಪೊರೆದಂ
    ವರಾಂಗನೆಯುಮಿನ್ನು ತರಲಿರ್ಪ ಸೊದೆಯನ್ನೆ ಕುಡಿದೊಂದಿರಲು ಮೈಯೊಳು ಸುಧಾ
    ಕರಾಳಿಯನು ಬೀರಿ ವಿಷ ತಪ್ತರಿಗೆ ಜೀವನೆರೆದಾಗಸದಿ ತಿಂಗಳೊಗೆದಂ

    • ಅತಿ ಸಣ್ಣ ಮಾರ್ಪಾಟಿನೊಂದಿಗೆ

      ವರೋರಗನ ಕಟ್ಟಿ ಗಿರಿಗಂ ಕಡೆಯಲಾ ಕಡಲನುರ್ಕಿದುದು ತೀಕ್ಷ್ಣಗರಳಂ
      ಸುರಾಸುರರಿಗಂ ತಡೆಯಲಾಗದಿರಲಾಗ ಹರ ಬಂದನದ ನುಂಗಿ ಪೊರೆದಂ
      ವರಾಂಗನೆಯುಮಿನ್ನು ತರಲಿರ್ಪ ಸೊದೆಯನ್ನೆ ಕುಡಿದೊಂದಿರಲು ಮೈಯೊಳಮೃತಂ
      ಕರಾಳಿಯನು ಬೀರಿ ವಿಷ ತಪ್ತರಿಗೆ ಜೀವನೆರೆದಾಗಸದಿ ತಿಂಗಳೊಗೆದಂ

Leave a Reply to ಗಾಯತ್ರಿ ಇಂದಾವರ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)