Oct 012011
 

ಹುಲ್ಲುಕಲ್ಲುಗಳೇನು? ಅದುಕೂಡ ಹೂರಣದಿ!
ಗುಲ್ಲನೆಬ್ಬಿಸದೆಯೇ ಬಿಡುವರೇನು?
ಬಲ್ಲಿದರೆ, ಸೊಲ್ಲನಡಗಿಸುವಿರೇ? – “ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು”

ಸ್ನೇಹಿತರೆ, ೩ನೆಯ ಸಾಲನ್ನೂ ಸ್ವಲ್ಪ ತಿಂದಿದ್ದೇನೆ. ೩ನೇ ಸಾಲು “ಹೂರಣದಿ” ಮುಗಿವಂತೆ, ೪ನೇ ಸಾಲು “ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಎಂಬುದಾಗಿ ಬರುವಂತೆ ಪರಿಹರಿಸಿ.

  41 Responses to “ಸಮಸ್ಯೆ – “ಹೂರಣದಿ – ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು””

  1. ಬೆಲ್ಲಬೇಳೆಯ ಸೊಗಸಿನೊಬ್ಬಟ್ಟು ಹೂರಣದಿ
    ಕಲ್ಲು ದೊರಕಿರಲು ನೀಂ ಕಡಿಯದಿರು ಹಲ್ಲ
    ಬಲ್ಲವರದಾರು ಈ ಬದುಕೆಂಬ ಹೂರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

    • ಮೇಲಿನದು ತುಸು ತಮಾಷೆಯದಾಯಿತು, ಇದು on a serious note:

      ಹುಲ್ಲಿರದೆ ಪಶುವಿಹುದೆ ಕಲ್ಲಿರದೆ ಮನೆಯಹುದೆ
      ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢಾ
      ಬಲ್ಲವರು ಪೇಳುವರು ಜಗವೆಂಬ ಹೂರಣದಿ
      ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

      • ಅದೇಕೋ ಈ ಕಲ್ಲು-ಹುಲ್ಲುಗಳು ನನ್ನನ್ನು ಬಿಡುವಂತಿಲ್ಲ. ಇದೊಂದನ್ನು ಬರೆದು ಮುಕ್ತಾಯವೆನ್ನುತ್ತೇನೆ, ಹೂರಣದ ಮತ್ತೊಂದು ನೋಟ:

        ಹುಲ್ಲ ಮಂತ್ರಿಸೆ ಕೊಲ್ವ ಕಣೆಯಾಯ್ತು ಕದನೊದಳು
        ಕಲ್ಲಿನಿಂದರಿಸೇನೆ ಮಡಿದೊರಗಿತು
        ನಲ್ಲೆಮುಡಿಗಷ್ಟೆ ತಗುವುದು ದಂಡೆ ಹೂ ರಣದಿ
        ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

        • “ಕದನದೊಳು”

          • ಕೊಳ್ಳೇಗಾಲರೆ, ಬದುಕು ಜಗವೆಂಬ ಹೂರಣದ ಕಲ್ಪನೆ ಚೆನ್ನಾಗಿದೆ. ಹೂ – ರಣದ ಚಮತ್ಕಾರವೂ ಚೆನ್ನಾಗಿದೆ. ೨ನೇ ಪರಿಹಾರದ ೨ನೇ ಸಾಲಿನಲ್ಲಿ ಒಂದು ಮಾತ್ರೆ ಜಾಸ್ತಿಯಾದಂತಿದೆ. ಗಮನಿಸಿ.

          • ರವೀಂದ್ರರೇ, ನನ್ನಿ.

            “ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢಾ”

            ಸರಿಯಿದೆಯಲ್ಲ? ಬೇರೆ ಸಾಲೋ?

          • ರವೀಂದ್ರರೇ, ಪದ್ಯಪಾನ ತಾಣದಿಂದ ನಿಮ್ಮ ಈ ಕೆಳಗಿನ ಸಂದೇಶ ಬಂತು ಆದರೆ ಅದು ಇಲ್ಲಿ ಕಾಣುತ್ತಿಲ್ಲ, ಕಾರಣ ತಿಳಿದಿಲ್ಲ. ಅದಕ್ಕೇ ಇಲ್ಲೇ ಉತ್ತರಿಸುತ್ತಿದ್ದೇನೆ.
            =========================================
            ಕೊಳ್ಳೇಗಾಲರೆ, ಈ ಸಾಲಲ್ಲಿ ೫ ೫ ೫ (೨೨) ಆಯ್ತಲ್ಲವೇ?

            ಹುಲ್ಲೆಂದು + ಕಲ್ಲೆಂದು + ಜರಿಯದಿರು + ಮೂ + ಢಾ
            ನನಗೂ ನಿಯಮಗಳು ಚೆನ್ನಾಗಿ ಗುತ್ತಿಲ್ಲ. [ನಾನು ಗಣೇಶರು ನಡೆಸಿದ ಛಂದ ತರಗತಿಗಳಿಗೆ ಹೋಗಿರಲಿಲ್ಲ 🙁 ]

            ನಾನು ಬರೆಯುವಾಗ, ೫ ೫ ೫+೧ ಅಥವಾ ೫ ೫ ೫+೨ ರಂತೆ ಮಾಡುತ್ತೇನೆ.

            ನಿಮ್ಮ ಮತ್ತೊಂದು ಪರಿಹಾರದಲ್ಲಿ, ಅದು ನನ್ನೆಣಿಕೆಯಂತೇ ಇದೆ.

            ಕಲ್ಲಿನಿಂ + ದರಿಸೇನೆ + ಮಡಿದೊರಗಿ + ತು
            =======================================

            ನನ್ನ ಅರಿವಿನಂತೆ ಪಂಚಮಾತ್ರೆಯ ಚೌಪದಿಯ ಗರಿಷ್ಠ ಮಿತಿ ಸಾಲಿಗೆ ಐದೈದರ ನಾಲ್ಕು ಗಣದಂತೆ ಇಪ್ಪತ್ತು ಮಾತ್ರೆಗಳು; ಎರಡು ಮತ್ತು ನಾಲ್ಕನೆಯ ಸಾಲಿನಲ್ಲಿ ಕೊನೆಯ ಗಣವನ್ನು ಮೂರು ಮಾತ್ರೆ ತುಂಬಿ ಉಳಿದ ಎರಡನ್ನು ಖಾಲಿಬಿಡುವುದು ವಾಡಿಕೆ.

            ಉದಾಹರಣೆಗೆ:
            ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
            ನಗುವ ನೋಡುತ ನಗುವುದತಿಶಯದ ಧರ್ಮ
            (ಇಲ್ಲಿ ಕೊನೆಯ ಗಣದಲ್ಲಿ ಮೂರು ಮಾತ್ರೆಯ ಉಪಯೋಗ)

            ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢ

            ಇಲ್ಲಿ ಕೂಡ ಅದೇ ಕ್ರಮವಿದೆ. ಇದು ಲೆಕ್ಕದಲ್ಲಿ ಮೂರುಮಾತ್ರೆಯಾದರೂ ಕೊನೆಯ ಅಕ್ಷರ ಗುರುವೇ ಆದ್ದರಿಂದ ಅಲ್ಲಿ ಧೀರ್ಘವಿದ್ದರೂ ಇರದಿದ್ದರೂ ಒಂದೇ (ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢಾ). ವಾಚಿಸುವಾಗ ಉಳಿದೆರಡು ಮಾತ್ರೆಯಷ್ಟು ನಿಲ್ಲಿಸಿಯೇ ಮುಂದಿನ ಸಾಲಿಗೆ ಹೋಗುತ್ತೇವೆಯಾದ್ದರಿಂದ ಕೊನೆಯ ಅಕ್ಷರವು ರೂಢಿಯಲ್ಲಿ ಮೂರುಮಾತ್ರೆಯ ಕಾಲಪ್ರಮಾಣವನ್ನೇ ತೆಗೆದುಕೊಳ್ಳುತ್ತದೆ. ಆದ್ದರಿಂದ ಕೊನೆಯ ಗಣವನ್ನು ಒಂದು, ಎರಡು ಅಥವ ಮೂರುಮಾತ್ರೆಗಳಷ್ಟು ತುಂಬಬಹುದೆನಿಸುತ್ತದೆ (ಶ್ರೀ ಗಣೇಶರೇ ಇದನ್ನು ಸ್ಪಷ್ಟಪಡಿಸಬೇಕು)

    • ಸ್ನೇಹಿತರೆ (ವಿಶೇಷತ: ಮಂಜುನಾಥ/ರಾಮಚಂದ್ರರೆ)

      ಕೆಳಗಿನ ಪದ್ಯವನ್ನು ನಿಯಮಾನುಸಾರ ಉತ್ತಮ ಪಡಿಸಿ (ಸಾಧ್ಯವಿದ್ದರೆ :)) ಮಂಡಿಸಲು ನಿಮ್ಮ ಸಹಾಯವನ್ನು ಕೇಳುತ್ತಿದ್ದೇನೆ.

      ಎನಿಸದಿರು ಜೀವನವ ಕಷ್ಟ ಕಾರ್ಪಣ್ಯದರಣವೆಂದು,
      ದೇಹವು ಪರಿಶ್ರಮದೂರಣ, ಮನವು ಪರಿತಾಪಗಳ
      ಹೂರಣ, ಅನುಭವ ಜೀವನದೂರಣ, ಹೂರಣದಿ
      ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು

      • ನವೀನರೇ,

        ಮೊದಲಿಗೆ, ಕನ್ನಡಕ್ಕೆ ಆದಿಪ್ರಾಸವೇ ಚಂದ. ಆದ್ದರಿಂದ ಆದಿಪ್ರಾಸವನ್ನಿಟ್ಟುಕೊಳ್ಳೋಣ. ಇನ್ನು “ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಎಂಬುದು ಇಡೀ ಒಂದು ಸಾಲನ್ನು ತುಂಬುವುದರಿಂದ ಲ್ಲ ವನ್ನು ಆದಿಪ್ರಾಸವಾಗಿ ತೆಗೆಯಬೇಕು. ಆದ್ದರಿಂದ ಉಳಿದ ಸಾಲುಗಳೂ ಎರಡನೆಯ ಅಕ್ಷರ ಲ್ಲ ಬರುವಂತೆ ನೋಡೋಣ. ಮತ್ತೆ ನೀವು ಹೂರಣ, ರಣ ಇತ್ಯಾದಿಗಳನ್ನು ಅಂತ್ಯಪ್ರಾಸವಾಗಿಡಲು ಪ್ರಯತ್ನಿಸುತ್ತಿರುವಿರೆನ್ನಿಸುತ್ತದೆ. ಸಾಧ್ಯವಾದರೆ ಅದೂ ಸೊಗಸೇ. ಅದನ್ನೂ ಪ್ರಯತ್ನಿಸೋಣ.

        ಅಲ್ಲೈಸದಿರು ಬದುಕ ಕಾರ್ಪಣ್ಯ ರಣವೆಂದು
        ಎಲ್ಲ ಪರಿತಾಪಗಳ ಸಮ್ಮಿಶ್ರಣ
        ಸಲ್ಲುವನುಭಪಾಕ ತುಂಬಿದೀ ಹೂರಣದಿ
        ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

        ಸೂ: ಅಲ್ಲೈಸು = ಅಲ್ಲಗಳೆ; ಪರಿಶ್ರಮ, ಪರಿತಾಪ ಎಲ್ಲವನ್ನೂ ಪರಿತಾಪವೆಂದೇ ಹೇಳಬಹುದು

        • ಧನ್ಯವಾದ ಮಂಜುನಾಥವರೆ,

          ನಿಮ್ಮ ಸಲಹೆ ಬಹಳ ಉಪಯುಕ್ತವಾಗಿದೆ, ನಿಮ್ಮ ಸೂಚನೆಯಂತೆ ‘ಲ್ಲ’ ಗೆ ಒತ್ತು ಕೊಟ್ಟು ಇಲ್ಲೊಂದು ಪದ್ಯ ರಚಿಸಿದ್ದೇನೆ. ದಯವಿಟ್ಟು ಪರಾಮರ್ಶಿಸಬೇಕು..

          ಇಲ್ಲವೆಂದಲ್ಲ ಜೀವನದಿ ಸಾರ ನೀನು೦ಬಿಲ್ಲವಾದೊಡೆ
          ಬಲ್ಲವೆಲ್ಲನು ಎನುವರಿಲ್ಲ ಬರಿಹಾದಿಯ ಸವಿದೊಡೆ,
          ಅಲ್ಲಗಳೆಯದಿರು ಅರ್ಥ ಬಾಳಲ್ಲ್ಲೇನಿಲ್ಲವೆಂದು,ಹೂರಣದಿ
          ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

          • ನವೀನರೇ,

            ಆದಿಪ್ರಾಸವೇನೋ ಬಂತು ಆದರೆ ಐದರ ಲಯ ಬರಲಿಲ್ಲ. ಕೆಳಗೆ ರಾಮಚಂದ್ರರು ಸೂಚಿಸಿರುವಂತೆ ಪ್ರತಿ ಸಾಲೂ ಐದೈದು ಮಾತ್ರೆಗಳ ನಾಲ್ಕು ಗುಂಪಾಗಿ ಬರಬೇಕು (ಮಾತ್ರೆ ಎಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ, ಅಥವಾ ಒಂದು ಹ್ರಸ್ವಾಕ್ಷರವನ್ನು ಉಚ್ಛರಿಸುವಷ್ಟು ಕಾಲವೆನ್ನಿ – ಅ, ಇ, ಕ, ದ ಇತ್ಯಾದಿ – ಇದನ್ನು ಲಘು ಎನ್ನುತ್ತಾರೆ; ಎರಡು ಮಾತ್ರೆಯ ಕಾಲವೆಂದರೆ ಎರಡು ಹ್ರಸ್ವಾಕ್ಷರಗಳ (ಅಥವ ಒಂದು ಧೀರ್ಘಾಕ್ಷರದ) ಕಾಲ – ಆ, ಈ, ಕಾ, ದಾ ಇತ್ಯಾದಿ – ಇದನ್ನು ಗುರು ಎನ್ನುತ್ತಾರೆ)

            ಐದೈದು ಮಾತ್ರೆಗಳು ಹೀಗೆ ಬರಬಹುದು: ತನನನನ; ತಾನನನ; ತನನಾನ; ತನನನಾ. ಯಾಂತ್ರಿಕವಾಗಿ ಲಘು/ಗುರು ಲೆಕ್ಕಹಾಕುವ ಬದಲು ಹೀಗೆ ಜೋರಾಗಿ ಹೇಳಿಕೊಂಡರೆ ತಮಗೆ ಸಾಲಿನ ಲಯ ದಕ್ಕುವುದು, ಮತ್ತು ಗ್ರಹಿಕೆ ಸುಲಭವಾಗುವುದು.

      • ಪಂಚಮಾತ್ರಾ ಚೌಪದಿಯ ಮಾತ್ರಾ ಗಣ ವಿಭಾಗ ಹೀಗಿರುತ್ತದೆ (೧ ಮತ್ತು ೨ನೇ ಪಾದ) ::
        ೫ + ೫ + ೫ + ೫
        ೫ + ೫ + ೫ + ೨
        ೩, ೪ ನೇ ಪಾದಗಳು ಮೇಲಿನಂತೆಯೇ ಇರುತ್ತವೆ.
        ಇದು ಲೆಕ್ಕಾಚಾರದ ಪದ್ಯ ರಚನೆಯಾದರೆ, ಒಂದು ಚಂದೋಬಧ್ಧವಾದ ಪದ್ಯದ ಧಾಟಿಯನ್ನು ಮನನ ಮಾಡಿಕೊಂಡರೆ, ರಚನೆ ಸುಲಭ. ಛಂದಸ್ಸಿನ ಧಾಟಿಯ ಪ್ರಕಾರ ಪದಗಳನ್ನು ಜೋಡಿಸಬಹುದು.
        ಸದ್ಯದಲ್ಲೇ ಛಂದಸ್ಸಿನ ತರಗತಿಯನ್ನು ಅವಧಾನಿಗಳು ನಡೆಸಲಿದ್ದಾರೆ. ದಿನಾಂಕ ನಿರ್ಣಯವಾದ ಬಳಿಕ ನಿಮಗೆ ಸೂಚನೆ ಕೊಡುತ್ತೇನೆ.

        • ಧನ್ಯವಾದ ರಾಮಚಂದ್ರವರೆ,

          ಛಂದಸ್ಸಿನ ತರಗತಿಯ ವಿಷಯ ಕೇಳಿ ತುಂಬಾ ಸಂತೋಷವಾಯ್ತು 🙂

          ಶಾಲೆಯಲ್ಲಿ ಓದಿದ್ದೆವಾದರು ಈಗ ಬಳಸುತ್ತಿಲವಾದ್ದರಿಂದ ಅವು ಮರೆತಿವೆ, ನಾನು ಈ ನಿಟ್ಟಿನಲ್ಲಿ ಕೆಲ ಪುಸ್ತಕಗಳನ್ನು ಕೊಡವಲು ಆರಂಭಿಸಿದ್ದೇನೆ.

  2. ಗೆಲ್ಲಲ್ಕೆ ಲಂಕೆಯಂ, ಕಟ್ಟಲ್ಕೆ ಸೇತುವಂ
    ತಲ್ಲಣಂಗೊಳಿಸಿ ರಿಪುಗಳ ಬಾಯ್ಗಳೊಳ್
    ಸಲ್ಲಿಸಲ್ ತೃಣಮಂ ಪ್ರಚಂಡಬಾಹೂ ರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

    ರಾಮಾಯಣದ ಸಂದರ್ಭದ ಹಿನ್ನೆಲೆಯಲ್ಲಿ ರಾಮನಿಗೆ ವಿಭೀಷಣನಂಥ ಪಾತ್ರವೊಂದು ಅರಿಕೆಮಾಡುವಂತೆ ಈ ಪರಿಹಾರ ಗ್ರಾಹ್ಯ.

    • ಗಣೇಶರೆ, ಬಾಯಿಗೆ ಹುಲ್ಲು ತುಂಬುವ ಕಲ್ಪನೆ ಬಹು ಸುಂದರ :). ಇದು ರಾಮಪಾಳಯದಲ್ಲಿನ ಗೆಲುವಿನ ಬಗೆಗಿನ ವಿಶ್ವಾಸವನ್ನೂ ತೋರಿಸುತ್ತಿದೆ.

  3. ಮಂಜುನಾಥರ ಪರಿಹಾರಗಳು ಸೊಗಸಾಗಿವೆ. ಭಾವ-ಭಾಷೆಗಳೆರಡೂ ಹದವಾಗಿವೆ.

  4. ಹುಲ್ಲ ತಿನ್ನಿಸಲಾರ ಹುಟ್ಟಿಸಿದ ದಾತಾರ
    ಕಲ್ಲ ಜಗೆದರೆ ಹಲ್ಲು ಮುರಿಯಲಹುದು |
    ಸಲ್ಲಿಸದಿರೇ ತಮ್ಮ ಹಾಜರಿಯ ಹೂರಣದಿ
    ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು ||

    • ಸಲ್ಲಿಸದಿರೇ ತಮ್ಮ ಹಾಜರಿಯ ಹೂರಣದಿ
      ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು ||

      🙂 ಸೊಗಸಾಗಿದೆ

    • “No entry please” – ಅಂಥ ಹುಲ್ಲು ಕಲ್ಲುಗಳಿಗೆ ನಯವಾಗಿ ಹೇಳುತ್ತಿದ್ದೀರಿ 🙂

  5. ಹುಲ್ಲೆನಿಸಿದನು ದನುಜ ಸೀತೆಭಾಷಿಪವೇಳೆ
    ಕಲ್ಲೆ ಕಲ್ಸಕ್ಕೆರಯು ಬಳೆಗಾರಗೆ
    ಹುಲ್ಲು ದುರ್ಗಾಮೂರ್ತಿಯೊಡಲೊಳಗು ಹೂರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

    ರಾವಣನ ಪಾಪಭಾಷಿತಗಳಿಗೆ ಉತ್ತರಿಸುವಾಗ, ಸೀತೆ, ಅವನಿಗೆ ಸಮವೆನಿಸುವಂತೆ ಒಂದು ಹುಲ್ಲುಕಡ್ಡಿಯನ್ನು ಹಿಡಿದು ವಚಿಸಿದಳು. ಕೈವಾರದ ಬಳೆಗಾರ, ಸಿದ್ಧಿಯನ್ನು ಪಡೆಯುವುದು ಹೇಗೆಂದಾಗ, ಅವನ ಗುರು, ಈ ಕಲ್ಲನ್ನು ದವಡೆಯಲ್ಲಿಟ್ಟು ಕಲ್ಲುಸಕ್ಕರೆಯಾಗುವವರೆಗೆ ಧ್ಯಾನಿಸು ಎಂದ. ಅವನೇ ಯೋಗಿಯಾದ, ಕೈವಾರ ತಾತಯ್ಯ. ವಂಗದೇಶದಲ್ಲಿ, ಹಿಂದೆ, ಪ್ಲಾಸ್ಟರ್ ಆಫ್ ಪ್ಯಾರೀಸ್ ಬರುವ ಮೊದಲು, ದುರ್ಗೆಯಮೂರ್ತಿಗಳನ್ನು ಒಳಗೆಲ್ಲ ಹುಲ್ಲು ಕಲ್ಲು ಮಣ್ಣು ತುಂಬಿ ಮಾಡಿ, ಹುಲ್ಲು-ಕಲ್ಲುಗಳ ಸ್ಥಾನ ದೈವತ್ವಕ್ಕೇರಿತು. ಸಾಮನ್ಯಮೇ ಪೇಳ್ ಪುಲ್ಕಲ್ಗಳ ಪ್ರತಾಪಂ !. ಈಗಲೂ ಅವು ಕಾಂಗ್ರೆಸ್ ರೂಪದಿಂದ (ವಿಷಸಸ್ಯ+ರಾಜಕೀಯ) ಮತ್ತು ಕಾಂಕ್ರೀಟ್ ರೂಪದಿಂದ (ಪರಿಸರನಾಶ) ನಮ್ಮನ್ನು ಗೋಳಾಡಿಸುತ್ತ ಸಾಗಿವೆ.

    • ಮೌಳಿಯವರೆ – ರವೀಂದ್ರ ಈ ಸಲ ಬರಿಯ ಕೊನಯ ಸಾಲನ್ನಲ್ಲದೆ, ಮೂರನೆಯ ಸಾಲಿನ ಕೊನೆಯ ಕಾಲು ಭಾಗವನ್ನೂ‌ (‘ಹೂರಣದಿ’) ಸಮಸ್ಯೆಯಲ್ಲಿ ನೀಡಿದ್ದಾರೆ. ಇದು ನಿಮ್ಮ ಗಮನಕ್ಕೆ ಬರಲಿಲ್ಲವೇನೋ ಎಂದು ಈ comment…

    • ಹುಲ್ಲು ದುರ್ಗಾಮೂರ್ತಿಯೊಡಲೊಳಗು

      ಹೂರಣದ ಮತ್ತೊಂದು ನೋಟ ಚೆನ್ನಾಗಿ ಮೂಡಿದೆ…

  6. ಶಿಲಯಲ್ಲವೇ ರೂಪತಳೆಯುವುದು ದೇವರs ?
    ಹುಲ್ಲಲ್ಲವೇ ಹಲವು ಪಶುಗಳುಣಿಸು ?
    ಕ್ಷುಲ್ಲಕವಿವೆಂದೆಣಿಸದಿರಿ ಬದುಕ ಹೂರಣದಿ
    ಹುಲ್ಲು ಕಲ್ಲುಗಳಿಗೂ‌ ಹಿರಿಮೆಯುಂಟು ||

    • ಕಾಂಚನಾರವರೇ, ಚೆನ್ನಾದ ಕಲ್ಪನೆ. ಮೊದಲಸಾಲಿಗೆ ಪ್ರಾಸವನ್ನು ತಂದರೆ ಇನ್ನೂ ಚೆನ್ನ.

      ಕಲ್ಲಿನಿಂಮೂಡಿಬಹುದಲ್ತೆ ದೈವಪ್ರತಿಮೆ ಅಥವಾ
      ಕಲ್ಲೆನಿಜಕಾಧಾರ ವಿಗ್ರಹದ ರೂಪಕ್ಕೆ
      ಎಲ್ಲೆಡೆಯೊಳಿಹದೈವ ಕಲ್ಲಿನೊಳಗಿಲ್ಲವೇ

      • ಧನ್ಯವಾದಗಳು ಮೌಳಿಯವರೆ. ನಿಮ್ಮ ಸಲಹೆ ಸರಿಯಾಗಿದೆ.

  7. ಹುಲ್ಲು ಬೆಟ್ಟದ ಕೆಳಗೆ, ಮಲ್ಲಿಗೆಯು ಮನೆಯೊಳಗೆ,
    ಕಲ್ಲದೆದೆಯೊಳಗೆ ಕಷ್ಟಗಳು ಸುರಿಯಲ್ |
    ಬೆಲ್ಲ ಸಕ್ಕರೆಯಂತೆ ಕಗ್ಗದಾ ಹೂರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು ||

  8. ಹುಲ್ಲ ಜಾತಿಯ ಕಬ್ಬಿನಿಂದುದಿಸೆ ಸಿಹಿ ಬೆಲ್ಲ
    ಕಲ್ಲಲ್ಲಿ ತೆಂಗಿನೊಡೆ ಹದದಿ ರುಬ್ಬಿ |
    ಜೊಲ್ಲ ಹರಿಸುವ ಕಾಯ ಹೋಳಿಗೆಯ ಹೂರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು ||

    • ರಾಮಚಂದ್ರರೆ, ಹೂರಣಕ್ಕೆ ಹುಲ್ಲು ಕಲ್ಲಿನ ಅಗತ್ಯ ತಿಳಿಸಿದಿರಿ. ಚೆನ್ನಾಗಿದೆ.

  9. ಹುಲ್ಲಿರದೆ ನೆಲ್ಲೆ? ನೆಲ್ಲಿರದಕ್ಕಿಯನ್ನವೇ?
    ಕಲ್ಲಿರದೆ ಖನಿಜವೇ? ರನ್ನ-ಚಿನ್ನ?
    ಎಲ್ಲವಿಡಿ-ಬಿಡಿಯಾಗಿ ಪ್ರಕೃತಿ-ಜಗ ಹೂರಣದಿ
    ಹುಲ್ಲು ಕಲ್ಲುಗಳಿಗೂ‌ ಹಿರಿಮೆಯುಂಟು

    • ಹುಲ್ಲಿಂದಲೇ ನೆಲ್ಲು, ಕಲ್ಲಿಂದಲೇ ಖನಿಜ. ತುಂಬಾ ಚೆನ್ನಾಗಿದೆ.

  10. ಎಲ್ಲಾ ಪರಿಹಾರಗಳೂ ಸಮಸ್ಯೆಯ ಎಲ್ಲಾ ಆಯಾಮಗಳನ್ನು ತೆರೆದಿಟ್ಟಿದೆ. ಪದ್ಯಸ್ನೇಹಿಗಳಿಗೆ ನನ್ನ ವಂದನೆಗಳು.

    ಕಲ್ಲರಳಿ ಹೂವಾಯ್ತು, ಹುಲ್ಲು ಬೆಲ್ಲವದಾಯ್ತು
    ಮಲ್ಲರಂಕಣವಿಳಿಯೆ ನವರಾತ್ರಿಗೆ
    ಎಲ್ಲ ಪರಿಹಾರಗಳು ಕಾವ್ಯರಸಭೂಯಿಷ್ಠ
    ನೆಲ್ಲಿಯದು ಜಗಿದಷ್ಟು ಸಿಹಿಯಪ್ಪುದು

  11. ನನ್ನ ಪರಿಹಾರ:

    ಕಲ್ಲು ತಾ ನ್ಯಾಯಮಾರ್ಗಕೆ ತೇಲಿ ಸಹಕರಿಸಿ
    ಹುಲ್ಲದುವೆ ಸೀತೆಕಡೆ ಮಧ್ಯವರ್ತಿ
    ಜೊಲ್ಲಿಳಿವ ಮರೆಸುವೀ ರಾಮಕಥೆ ಹೂರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

    ಹುಲ್ಲದುವೆ ಬಲವಾಗಿ ಯಾದವರ ಬಲಿಪಡೆಯೆ,
    ಕಲ್ಲುತಾನೆರಡಾಗಿ ಶಿಶುಭೀಮನನ್
    ಮೆಲ್ಲನೆಯೆ ಜಾರಿಸಿರೆ, ಭಾರತದ ಹೂರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

    • “ಹುಲ್ಲದುವೆ ಸೀತೆಕಡೆ ಮಧ್ಯವರ್ತಿ” – ಹುಲ್ಲು = ಕುಶ, ಆಹಾ, ಸೊಗಸಾದ ಅರಿಮೆ

    • ೨ನೇ ಪರಿಹಾರದಲ್ಲಿ ಸ್ವಲ್ಪ ಬದಲಾವಣೆ:

      ಹುಲ್ಲುತಾ ಕಲ್ಲಾಗಿ ಯಾದವರ ಬಲಿಪಡೆಯೆ,
      ಕಲ್ಲುತಾ ಹುಲ್ಲಾಗಿ ಶಿಶುಭೀಮನನ್
      ಮೆಲ್ಲನೆಯೆ ಪಾಲಿಸಿರೆ, ಭಾರತದ ಹೂರಣದಿ
      ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

  12. ಎಲ್ಲ ವಹಿಸಿದರೇನು ತರತಮದ ಪಾತ್ರಗಳ
    ಸಲ್ಲುವರು ಕಡೆಯಲ್ಲಿ ಹರಿಚರಣಕೆ
    ಪುಲ್ಲಲೋಚನನವನ ಜಡ-ಜೇವ ಹೂರಣದಿ
    ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು

  13. ನನ್ನ ಮೊದಲ ಪ್ರಯತ್ನ:

    ಎಲ್ಲರೊಳಗೊಂದಾಗು ನೀನೆಂದು ತಿಮ್ಮಗುರು
    ಸಲ್ವ ಜೀವನಸೂತ್ರ ಬಣ್ಣಿಸಿರಲು
    ಮುಳ್ಳು ತುಂಬಿದ ಹಾದಿ ಗಾದಿ ಮೇಲ್ ಹೂ – ರಣದಿ
    ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

    ಡಿವಿಜಿಯವರ “ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು” ಕಗ್ಗಪದ್ಯದಿಂದ ಪ್ರೇರಿತವಾಗಿದ್ದು, ಜೀವನದ ಏಳುಬೀಳುಗಳ ಒಳಯುದ್ಧವನ್ನು ಬಿಂಬಿಸುತ್ತಿದೆ.

    • ವೆಂಕಟೇಶರೆ, ಸುಸ್ವಾಗತ. ಪಂಚಮಾತ್ರಾಚೌಪದಿಯಲ್ಲಿ ಸುಂದರವಾಗಿ ಬರೆದಿದ್ದೀರಿ. ಹಳೆಯ ಸಮಸ್ಯೆಗೆ ಜೀವ ತಂದು ನೆನಪನ್ನು ಕುಲುಕಿದ್ದೀರಿ. ಮತ್ತೆ ಬರೆಯಿರಿ

      • ಧನ್ಯವಾದ ರವೀಂದ್ರರೆ. ಮತ್ತೊಂದು ಪ್ರಯತ್ನ, ಅದೇ ಸಮಸ್ಯೆಗೆಃ

        ಕಲ್ಲಾದರೇನ್ ರಾಮಪದತಾಗಲಮೃತತ್ವ
        ಹುಲ್ಲಾಕಳಾಹಾರ ಕೃಷ್ಣನಿಂದ |
        ಎಲ್ಲರನ್ಪೊರೆವಾತನೀಜಗದ ಹೂರಣದಿ
        ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು ||

        ಮೊದಲ ಪಾದ ಶ್ಲೇಷಾರ್ಥದಿಂದ ಕೂಡಿದೆಃ ರಾಮನ ಪಾದಕ್ಕೆ ಸಿಕ್ಕಿ ಮೃತ್ ಭಾವದಿಂದ ಶಾಪ ವಿಮೋಚಿತೆಯಾದ ಅಹಲ್ಯೆಯಾಗಬಹುದು, ಅಥವಾ ರಾಮನೆಂಬ ಪದ ಸ್ಪರ್ಶವಾದ ಕೂಡಲೇ ನೀರಿನಲ್ಲಿ ತೇಲುತ್ತ ಬಂದು ಅಮರ ರಾಮಸೇತುವನ್ನು ಕಟ್ಟಲನುವು ಮಾಡಿಕೊಟ್ಟ ಕಲ್ಲು ಬಂಡೆಗಳಾಗಬಹುದು.

Leave a Reply to Venkateshprasanna Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)