1) ಅವಧಾನಿ ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ:
ಖಂಡಿಸಿ ಸಿದ್ಧಾಂತಂಗಳ
ಮಂಡನೆಯಂ ಮಾಡದಿರ್ಪರಿವರಿಂತೀ ವೈ-|
ತಾಂಡಿಕವಾದಂಗೆಯ್ದಿರೆ
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್||
(ಪಾಮರರಾದರೂ ಖಂಡನೆ ಮಂಡನೆಗಳನ್ನು ಸರಿಯಾಗಿ ಮಾಡದೇ ಬರಿದೇ ವಿತಂಡವಾದ ಮಾಡಿದ ಕಾರಣ ಪಂಡಿತರೂ ಅವರ ಎದುರು ಸೋತರು)
2) ಶ್ರೀ ಕೆ. ಬಿ. ಎಸ್. ರಾಮಚಂದ್ರರ ಪರಿಹಾರ:
ದಂಡದ ಮಾತಾಡುತಲೆ ವಿ-
ತಂಡವ ಮಾಳ್ದವನ ಕೂಡೆ ಸೋಗಂ ಬಿಡುತಿ-|
ನ್ನುಂಡಾಗಿರೆ ಸುಖನಿದ್ರೆಗೆ
ಪಂಡಿತರುಂ ಸೋಲ್ತರಲ್ತೆ ಪಾಮರನೆದುರೊಳ್||
3) ಶ್ರೀಧರ ಸಾಲಿಗ್ರಾಮರ ಪರಿಹಾರ:
ಭಂಡಂ ಪುಸಿಯುಲಿಯಿಂದಂ
ಕೊಂಡಾಡಲ್ ಮದ್ಯಪಾನಕಾಹ್ವಾನಿಸಿರಲ್|
ಮಂಡಿಸೆ ವಾದಂ ನಶೆಯೊಳ್
ಪಂಡಿತರುಂ ಸೋಲ್ತರಲ್ತೆ ಪಾಮರನಿದಿರೊಳ್||
4) ಶ್ರೀಮತಿ ಕಾಂಚನರವರ ಪರಿಹಾರ
ಗುಂಡಿಗೆಯೊಳ್ ತುಂಬಿರ್ಪುದು
ಬಂಡೆನುತುಂ ಸದ್ಗುಣಂಗಳಂ ತೋರುತೆ, ತಾಂ|
ಬಂಡೆರ್ದೆಯಾಣ್ಮರಾದೊಡೆ
ಪಂಡಿತರುಂ ಸೋಲ್ತರಲ್ತೆ ಪಾಮರನಿದಿರೊಳ್!!
ಪಾಮರರಲ್ಲೂ ಗುಣವನ್ನು ಗ್ರಹಿಸುತ್ತ, ತಾವು ಹೃದಯವಂತರಾಗಿರುವರಿವರು…..
5) ಶ್ರೀಮತಿ ಉಷಾರವರ ಪರಿಹಾರ-೧:
ಗಂಡಾಂತರಂ ಗಡಾ ಬ್ರ-
ಹ್ಮಾಂಡಜ್ಞಾನಮಿರದಾಗೆ ಪ್ರಾಣಾಪಾಯಂ|
ಖಂಡಿತಮಂತಾಸಮಯಂ
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್ !!
ಬ್ರಹ್ಮಾಂಡಜ್ಞಾನ(ಲೋಕಜ್ಞಾನ)ವಿಲ್ಲದಿರೆ ಪ್ರಾಣಾಪಾಯ ಸಮಯದಲ್ಲಿ ಪಾಮರರಿಗೆ(ಅಶಿಕ್ಷಿತರಿಗೆ) ಸೋಲಬೇಕಾಗುವ ಪಂಡಿತರ ಕಲ್ಪನೆ (ಈಜಲು ಬಾರದ ಪಂಡಿತ ನಾವಿಕನಿಗೆ ಶರಣಾದ ಕಥೆಯ ಹಿನ್ನೆಲೆಯಲ್ಲಿ)
6) ಶ್ರೀಮತಿ ಉಷಾರವರ ಪರಿಹಾರ-೨:
ಕೆಂಡಾಮಂಡಲಗೊಂಡಂ
ಚಂಡಾಲನೊಡಂದು ಶಂಕರಂ, ಬಳಿಕಾತಂ|
ಪಿಂಡಾಂಡಮರ್ಮಮರಿಪಲ್
ಪಂಡಿತನುಂ ಸೋಲ್ತನಲ್ತೆ ಪಾಮರನಿದಿರೊಳ್||
“ಚಂಡಾಲ”ನಿಗಾಗಿ ಬರೆದ ಪದ್ಯ! ಏನಾದರು ತಪ್ಪಿದ್ದಲ್ಲಿ ಯಾರೂ ದಯವಿಟ್ಟು ಕೆಂಡಾಮಂಡಲರಾಗದಿರಿ
7) ಶ್ರೀಮತಿ ಉಷಾರವರ ಪರಿಹಾರ-೩:
ಮಂಡಲದಿ ಸುತ್ತುತೆ ಕೊರಳ
ಗೊಂಡೆಯಲುಗಿಸಿರ್ಕೆ ಗಾಣದೆತ್ತುಗಳುಂ ತಾಂ|
ಅಂಡಯಿಸಿರ್ದಂ ಕೃಷಿಕಂ
ಖಂಡಿತಮಾಗುತಿರಲಾಗೆ ಗಂಟಾನಾದಂ||
ಕಂಡೀ ಸೋಜಿಗಮಂ ಗಡ-
ಮಂಡಲೆದೋರ್ವ ಪ್ರಕಾಂಡ ಪಾರಂಗತನುಂ|
ಮಂಡಿಸಲನುಮಾನಂ “ಬರಿ
ರುಂಡಮಲುಗಿಸಿರಲುಮೆಂತು ಗಾಣಮೆಳೆಯದಲ್”?
ಗಂಡಾಳೆ, ನಿನ್ನಿನಿತು ಮತಿ
ಮಂಡೆಯಿರದವಕ್ಕೆನಲ್ಕೊಡಂತವಮಾನಂ-|
ಗೊಂಡು ನಿಪುಣತೆಗೆ ಮಣಿದುಂ
ಪಂಡಿತನುಂ ಸೋಲ್ತನಲ್ತೆ ಪಾಮರನಿದಿರೊಳ್||
(ಕಥೆ ಗೊತ್ತಿದ್ದವರಿಗೆ ಅರ್ಥವಾಗಬಹುದೇನೋ ?!!)
ಉಂಡಾಡಿಯಪ್ಪ ಮಿಥ್ಯಾ-
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್|
ಪುಂಡರ್, ನೀಚರ್, ದುಷ್ಟರ್
ಭಂಡರ್ ಮಾತ್ರಮಿವರಜ್ಞರೇನಲ್ಲಂ ಕಾಣ್||