Nov 152011
 

ರಾಜಾ ರವಿ ವರ್ಮ ರಚಿಸಿದ ಈ ಚಿತ್ರಕ್ಕೆ ಸೂಕ್ತ ಪದ್ಯಗಳನ್ನು ರಚಿಸಿರಿ.

 

  38 Responses to “ಹಣ್ಣು ತಂದ ಚೆಲುವೆ”

  1. ಹೊಸತಾದ ವೃತ್ತವೊಂದರ ಪರಿಚಯವಾಗಲೆಂದು ವಸಂತತಿಲಕವೆಂಬ ಛಂದಸ್ಸನ್ನು ಬಳಸಿ ಇದೀಗ ರಚಿಸಿದ ಪದ್ಯಗಳು: ಐರೋಪ್ಯಚಿತ್ರಕಲೆಗೊಪ್ಪಿದ ಶೈಲಿ ನಮ್ಮೀ
    ಭಾರತ್ಯುದಾರತರವಸ್ತುಗಳೊಳ್ ಪುಗಲ್ಕೀ
    ಸ್ವಾರಸ್ಯದೊಂದು ಫಲಮಂ ಪಿಡಿದಿಲ್ಲಿ ಬರ್ಪ
    ಸ್ಮೇರಾಸ್ಯೆ ಕೇರಳವಧೂಮಧುರಾರ್ಥೆ ಸಲ್ವಳ್

    ಛಂದಂಗಳೇ ರಸಮಯಾಢ್ಯಫಲಂಗಳಾಗಳ್
    ಸಂದರ್ಶನಂ ಋತುಸಮಸ್ತದ ಶೋಭೆಯಾಗಳ್|
    ಬಂದಿಲ್ಲಿ ಬಾಗಲಿಗೆ ಸಂದ ಕವಿತ್ವಲಕ್ಷ್ಮೀ-
    ಮಂದಸ್ಮಿತಪ್ರತಿಮೆಯಲ್ತೆ ವಿಚಿತ್ರಚಿತ್ರಂ||

    ನಿನ್ನಂ ನಿರೂಪಿಸುವೊಡಂ ರವಿವರ್ಮನೀ ಸಂ-
    ಪನ್ನಪ್ರಭೂತಫಲರಾಶಿರಸಂಗಳಂ ಮೇಣ್|
    ಚೆನ್ನಪ್ಪ ಬಣ್ಣಗಳವೊಲ್ ಬಳಸುತ್ತುಮೆಂತೋ
    ಬಿನ್ನಾಣದಿಂ ಸಫಲನಾದನೆ? ಪೇಳ್ವುದೆನ್ನೊಳ್!!

  2. ತಂದಿರ್ಪರೈ ಪಟವ ಪದ್ಯಕೆ ರಾಮಚಂದ್ರರ್
    ಬಂದಿರ್ಪಳೈ ಚೆಲುವೆ ಹೊತ್ತು ಫಲಂಗಳನ್ನೇ
    ಛಂದಂ ವಸಂತ ತಿಲಕ ಪ್ರಭೆ ಚಂದವಾಗಲ್
    ಸ್ಪಂದಿಕ್ಕೆ ಭಾವನೆಯು ಪದ್ಯದಿ ಬಂಧಿಸಪ್ಪಲ್

    • ಶ್ರೀ. ಚಂದ್ರಮೌಳಿಯವರ ವಸಂತತಿಲಕವು ವಸಂತಕಿಸಲಯದಂತೆ ಸುಕೋಮಲವಾಗಿ ಸುಬೋಧವಾಗಿದೆ.
      ಆದರೆ ಕಡೆಯ ಸಾಲಿನಲ್ಲಿ “ಬಂಧಿಸಪ್ಪಲ್” ಎನ್ನುವ ಪದಕ್ಕಿಂತ ಬಂಧಿಯಪ್ಪಲ್ ಎಂದರೆ ವ್ಯಾಕರಣದ ಸೊಗ ಮಿಗಿಲಾದೀತು.. ಹಾಗೆಯೇ ಅವರು ನನಗೆ ವೈಯಕ್ತಿಕವಾಗಿ ಕಳುಹಿದ ಮಿಂಚೆಯ ಸಲಹೆಯ ಪ್ರಕಾರ ನಾನು ನನ್ನ ಮೂರನೆಯ ಪದ್ಯದಲ್ಲಿ ಬರುವ “ಬಣ್ಣಗಳಗಳ…” ಎನ್ನುವಲ್ಲಿಯ extra ’ಗಳ’ವನ್ನು ತೆಗೆದುಹಾಕಲು ಕೇಳಿಕೊಳ್ಳುತ್ತಿದ್ದೇನೆ. ಈ ಸೂಚನೆಗಾಗಿ ಧನ್ಯವಾದಗಳು. ಅಲ್ಲದೆ ಮೌಳಿಯವರು ನವುರಾಗಿ ರವಿವರ್ಮನ ಕಲೆಯ ಬಗೆಗೆ ನನಗಿರುವ ಹಲಕೆಲವು ಆಕ್ಷೇಪಗಳ ಬಗೆಗೂ ಸೊಗಸಾದ ನೆನಪನ್ನು ಮರುಕಳಿಸಿದ್ದರು. ದಿಟವೆ, ನನಗೆ ರವಿವರ್ಮನ ಕಲಾತತ್ತ್ವದ ಬಗೆಗೆ ಒಂದಿಷ್ಟು ಅಭಿಪ್ರಾಯಗಳಿವೆ. ಆದರೆ ಆತನ ವರ್ಣವಿನ್ಯಾಸ, ಕುಂಚದ ಮೇಲಣ ನಿಯಂತ್ರಣ, ಭಾರತೀಯವಸ್ತುಗಳನ್ನು ಚಿತ್ರಕಲೆಯ ವಿಷಯವಾಗಿಸುವ ಬಗೆಗಿರುವ ಆದರ ಮುಂತಾದುವೆಲ್ಲ ಗೌರವನೀಯವಾಗಿ ಕಂಡಿದೆ. ಸದ್ಯದ ಪದ್ಯದ ಬಗೆಗೆ ಹೇಳುವುದಾದರೆ beggars are not choosers:-) ಎಂಬಂತೆ ಯಾರು ಕೊಟ್ಟ ವಸ್ತುವಿನ ಬಗೆಗಾಗಲಿ ಪದ್ಯವನ್ನು ಹೇಳಬೇಕಾದುದು ಅವಧಾನಿಯ ಧರ್ಮ(ಕರ್ಮ):-)
      ಆದುದರಿಂದ ಕವಿಹೃದಯವನ್ನು ತಳೆದು ಯಾವುದನ್ನೂ ಕವನಿಸಬಲ್ಲೆ. ಧನಂಜಯನು ತನ್ನ ದಶರೂಪಕ ಗ್ರಂಥದಲ್ಲಿ ಹೇಳುವಂತೆ (ರಮ್ಯಂ ಜುಗುಪ್ಸಿತಮುದಾರಮಥಾಪಿ ನೀಚಂ ಉಗ್ರಂ ಪ್ರಸಾದಿ ವಿಕೃತಂ ಗಹನಂ ಚ ವಸ್ತು| ಯದ್ವಾಪ್ಯವಸ್ತು ಕವಿಭಾವಕಭಾವ್ಯಮಾನಂ ತನ್ನಾಸ್ತಿ ಯನ್ನ ರಭಾವಮುಪೈತಿ ಲೋಕೇ||) ನನ್ನಂಥ ಕವಿಗೆ (ಸಹೃದಯರ)ಕಿವಿಗಳೇ ನಿರ್ದೇಶಕ:-)..ಒಳ್ಳೆಯ ವಿಚಾರವನ್ನು ಖಾಸಗಿ ಮಿಂಚೆಗಷ್ಟೇ ಸೀಮಿತಗೊಳಿಸುವುದು ಬೇಡವೆಂದು ಇಲ್ಲಿ ಬರೆದಿದ್ದೇನೆ. ಗೆಳೆಯರಿಗೆ ರುಚಿಸಬಹುದಷ್ಟೆ? ಈ ಸಂದರ್ಭವನ್ನು ಕಲ್ಪಿಸಿದ ಚಂದ್ರಮೌಳಿಯವರಿಗೆ ನಮನಗಳು.

      • “ಗಳಗಳ”ವನ್ನು “ಗಳ”ಗೊಳಿಸಲಾಗಿದೆ 🙂

      • ಪಾರಿಜಾತ ತರುಸ್ಪರ್ಷ, ನವ ಪುಷ್ಪವೃಷ್ಟಿಗೆ ನಾಂದಿಯಾಗುವಂತೆ, ಅವಧಾನಿಗಳೊಂದಿಗಿನ ಸಂವಾದದಿಂದ, ದಶರೂಪಕದ (ಅದೇ ವಸಂತತಿಲಕಾಮಲಕದ ಉಪ್ಪಿನಾಕಾಯಿಯ) ರುಚಿಯೊಡನೆ ಕಲಾಕಾವ್ಯ ಕುಸುಮಪರಿಮಳ ಪಸರಿಸಿ ಸೊಗಯಿಸಿತು. ನಮೋವಾಕಗಳು..

        ವಾಚ್ಯಾರ್ಥಕ್ಕೆ, ಅವರುಸೂಚಿಸಿದ ’ ಬಂಧಿಯಪ್ಪಲ್’ ಸೊಗಸಾಗಿ ಹೊಂದುತ್ತದೆ, ಬಂಧಿಸಿ+ಅಪ್ಪಲ್ : ಭಾವನೆಯ ಪದಗಳಲ್ಲಿ ಪದ್ಯ ಬಾಹುಗಳಿಂದ, ವಸಂತತಿಲಕವಿಟ್ಟು ಚೆಲುವನ್ನು ’ಬಿಗಿದು ಆಲಿಂಗಿಸಲಿ’ ಎಂದು ಭಾವ.. ತೀರವಾಚ್ಯವಾಗಬಾರದೆಂದು, ಬಂಧಿಸಪ್ಪಲ್ ( ಬಂಧದಪ್ಪಲ್ ..ಬಂಧದಿ+ಅಪ್ಪಲ್ ಸಹ ಮಾಡಬಹುದು. ಬಂಧಿಸು+ಅಪ್ಪು ಎಂಬುದು ದ್ವಿರುಕ್ತಿಯಾದರೂ ಅದರ ಸ್ವಾರಸ್ಯ ವಿದಿತವೇ ) ಎಂದಿದ್ದೆ. ಈಗ ಅಂತರಂಗ ಬಹಿರಂಗವಾಗಲೇ ಬೇಕಾಯ್ತು…!

  3. ’ಮಂಕುತಿಮ್ಮನ ಕಗ್ಗ’ದ ೨೦-೧೯-೨೦-೧೭ ಮಾದರಿ:

    ಹಿಂದಿನಂತಿಂದಲ್ಲ ಹೂ ಮಾರುವಮ್ಮಗಳು
    ಚಿಂದಿಬಟ್ಟೆಯನುಟ್ಟವರು ಕಾಣಸಿಗರು|
    ಬೆಂದಕಾಳೂರೊಳಿಹರೀಕೆಯಂತೆಸೆವವರು
    ಚಂದದಾ ಹಣ್ಣು-ಹೂ ಮಾರುವವರು||

    • ಪ್ರಸಾದರು ನಿಜಕ್ಕೂ ಛಂದಸ್ಸು-ವ್ಯಾಕರಣಗಳ ದೃಷ್ಟಿಯಿಂದ ಅತ್ಯಂತಸಮಂಜಸವಾದ ಪದ್ಯವನ್ನೇ ಬರೆದಿದ್ದಾರೆ; ತುಂಬ ಬಾರಿ ನಾನು ಈ ವೇದಿಕೆಯಲ್ಲಿ ಅವರನ್ನು ಗೋಳಾಡಿಸಿದ್ದೇನೆ:-)..ಆದರೆ ಆಯೆಲ್ಲ ಚರ್ಚೆಗಳೂ ಒಳ್ಳೆಯ ಪದ್ಯವಾಗಿ ಅನವದ್ಯವಾಗಿ ಪರಿಣಮಿಸಿರುವುದು ನಮ್ಮೆಲ್ಲರಿಗೆ ಹರ್ಷದ ಸಂಗತಿ. ಪ್ರಸ್ತುತ ಪದ್ಯದ ಭಾವವೂ ಚೆನ್ನಾಗಿದೆ, ಪ್ರಸಾದರ ಮ್ನೋಧರ್ಮಕ್ಕೆ ತಕ್ಕಂತಿದೆ. ಇದಕ್ಕಾಗಿ ಅವರಿಗೊಂದು ಮೆಚ್ಚುಮಾತಿನ ಕವಿತೆ:

      ಹಿಂದೆ ವಾರ್ಧಕದಲ್ಲಿ ಕವಿತಾಂಗನೆಯನೊಲಿಸೆ
      ಮುಂದಾದ ನೀವಿಂದು ಚೌಪದಿಯೊಳು|
      ಚೆಂದದೀ ನುಡಿವೆಣ್ಣನೊಲಿಸಿಕೊಂಡಿರಿ; ಮಾತೆ
      ಮುಂದಾಗಳೇನೆತ್ತಿಕೊಳೆ ಮಕ್ಕಳಂ?

      ಇದಕ್ಕೊಂದು ಟಿಪ್ಪಣಿ ಬೇಕಿದೆ. ತುಂಬ ಹಿಂದೆ, ನನ್ನ ಪರಿಚಯವಾದ ಹೊಸದರಲ್ಲಿ ಪ್ರಸಾದ್ ಅವರು ವಾರ್ಧಕಷಟ್ಪದಿಗಳನ್ನು ಬರೆಯಲು ತೊಡಗಿ ತೊಳಲಿದ್ದರು. ವಾರ್ಧಕವೆಂದರೆ ಮುದಿತನವೆಂದು ಅರ್ಥವಷ್ಟೆ! ಮುದಿತನದಲ್ಲಿ ಕವಿತಾಕಾಮಿನಿಯೊಲಿಯುವಳೇ? ಆದರೆ ಇದೀಗ ಚೌಪದಿಯಲ್ಲಿ, ಅಂದರೆ ನಾಲ್ಕು ಕಾಲಿನಂತೆ ಅಂಬೆಗಾಲಿಡುವ ಮಗುವಾಗಿ ಸಾಗಿದಾಗ ಕವಿತಾಮಾತೆ (ಮಾತೆ ಎನ್ನುವಲ್ಲಿರುವ ಶ್ಲೇಷವು ಗಮನಾರ್ಹ) ತ್ನ್ನಗಿ ಬಂದು ಮಕ್ಕಳನ್ನು ಎತ್ತಿಕೊಳ್ಳುವುದಿಲ್ಲವೆ? ಅಂತೂ ವಾಣಿಯ ಪ್ರಸಾದ ಪ್ರಸಾದರಿಗೆ ದಕ್ಕಿದೆ,ನಮಗೆಲ್ಲ ಸಂತೋಷ.

      • ಪದ್ಯ ಬಹಳ ಚೆನ್ನಾಗಿದೆ. ಷಟ್ಪದಿಯಲ್ಲಿ ಬರೆಯುವ ಗೀಳಿರುವ ನನಗೀಗ ಒಂದು ಕೀಟದ (insect) ಅನುಭವವಾಗುತ್ತಿದೆ. ಅದೇನಿದ್ದರು, ಆದಷ್ಟೂ ವಾರ್ಧಕದಲ್ಲಿ ಬರೆಯುವದನ್ನು ತಡೆದರೆ ಒಳಿತೆನಿಸುತ್ತದೆ 🙂

  4. ವಸಂತ ತಿಲಕದಲ್ಲಿ:
    ಸಿಂಗಾರಕೊಪ್ಪುವೆನೆ ಸುಂದರಿಗಂ ತೊಡಲ್ಕೇ
    ರಂಗಲ್ಲಿ ನಿರ್ಮಿಸಿಹ ರೇಶಿಮೆ ಸೀರೆ ಚಂದಂ,
    ಬಂಗಾರಕುಂ ಮಿಗಿಲವೊಲ್ ತ್ವಚೆಯಪ್ರಕಾಶಂ
    ಗುಂಗಲ್ಲೆ ನಾಟುತಿಹ ಚಿತ್ರವಿದುಂ ಪ್ರಗಲ್ಭಂ

    • ಸಿಂಗಾರಕೊಪ್ಪುವೆನೆ ಸುಂದರಿಗಂ ತೊಡಲ್ಕೇ
      ರಂಗಲ್ಲಿ ನಿರ್ಮಿಸಿಹ ರೇಶಿಮೆ ಸೀರೆ ಚಂದಂ,
      ಬಂಗಾರಕುಂ ಮಿಗಿಲವೊಲ್ ತ್ವಚೆಯಪ್ರಕಾಶಂ
      ಗುಂಗಲ್ಲೆ ನಾಟುತಿಹ ಚಿತ್ರಮಿದು ಪ್ರಗಲ್ಭಂ

      • ಸೋಮರ ಪ್ರಯತ್ನ ಸೊಗಸಾಗಿದೆ. ತಿಳಿಗನ್ನಡದಲ್ಲಿ ವಸಂತತಿಲಕದ ರಚನಾಪ್ರಯತ್ನ ಸುತ್ಯ.
        ಕೆಲವೊಂದು ಸವರಣೆಗಳು:
        ………………ತುಡಲ್ಕೀ (ವ್ಯಾಕರಣ-ಛಂದಸ್ಸುಗಳ ರಕ್ಷೆಗಾಗಿ:-)
        …………………….
        ಬಂಗಾರಕಿಂ…………
        ಗುಂಗಲ್ಲಿ

        • ಗಣೇಶ್ ಸರ್,
          ತಿದ್ದುಪಡಿ ಮಾಡಿದ್ದೇನೆ

          ಸಿಂಗಾರಕೊಪ್ಪುವೆನೆ ಸುಂದರಿಗಂ ತೊಡಲಕೀ
          ರಂಗಲ್ಲಿ ನಿರ್ಮಿಸಿಹ ರೇಷಿಮೆ ಸೀರೆ ಚಂದಂ,
          ಬಂಗಾರಕಿಂ ಮಿಗಿಲವೊಲ್ ತ್ವಚೆಯಪ್ರಕಾಶಂ
          ಗುಂಗಲ್ಲಿ ನಾಟುತಿಹ ಚಿತ್ರಮಿದು ಪ್ರಗಲ್ಭಂ

  5. ಮಿತವಸ್ತ್ರಾಂಗನೆಯರಮಥ
    ಮತಿರೇಕಾಂಗಪ್ರದರ್ಶಿನಿಯರಂ ನಿತ್ಯಂ
    ಪತಿಕರಿಸಿರ್ಪೀ ಪುರದೊಳ್
    ನುತಕಾಯಾಕೃತಿಯಿದಂ ಶಶಕ ಶೃಂಗ ಸಮಂ.

    • ಪದ್ಯದಲ್ಲೇನಾದರೂ ಮುದ್ರಾರಾಕ್ಷಸನ ಹಾವಳಿ ಆಗಿದೆಯೇ? ನನಗೆ ಕೆಲವೆಡೆ ಅರ್ಥವಾಗುತ್ತಿಲ್ಲ. ಹೊಳ್ಳರು ಹಾಗೆಲ್ಲ ಹೊಲ್ಲದ ಕೆಲಸ ಮಾಡುವವರಲ್ಲವಾದುದರಿಂದ ಈ ಸಂದೇಹ ಬಂದಿದೆ:-)

      • लभेत सिकतासु तैलमपि………………………………… शशविषाण पुच्छमासादयेन्नतु….. ಎಂದು ಸುಭಾಷಿತ. ಬಿಪಾಶಾ-ಮಲ್ಲಿಕಾರ ಈ ಯುಗದಲ್ಲಿ, ಇಂತಹ ಪೂರ್ಣಾಚ್ಛಾದಿತ ಸ್ತ್ರೀಯರು ಮೊಲದ ಕೊಂಬಿನಂತೆ ವಿರಳ (ಇಲ್ಲವೇ ಇಲ್ಲ) ಎಂದಲ್ಲವೆ ಹೊಳ್ಳರೆ ತಮ್ಮ ಅಭಿಮತ?

        • ಪ್ರಸಾದರೆ, ಹಾಗೆ ಹೇಳುವ ಇಚ್ಛೆಯಿಂದ ಬರೆದದ್ದು. ತುಂಬಾ ಮಡಿವಂತಿಕೆ ಅಂತ ಬಯ್ಬೇಡಿ. ನನ್ನ ಉದ್ಯೋಗ MG Road ನ ಬಗುಲಲ್ಲೇ ಇದೆ ಎಂಬುದನ್ನು ಗಮನಿಸಿ 🙂 ಅಷ್ಟಕ್ಕೂ ನಾನಿಲ್ಲಿ ಯಾವುದು ಸರಿ, ಯಾವುದ್ ತಪ್ಪು ಅಂತೇನು ಹೇಳಿಲ್ಲ 😀

          • ಎಂ.ಜಿ.ರಸ್ತೆಯಲ್ಲಿ ನೀವು ನೋಡಿದ್ದನ್ನು ಖಂಡಿಸದಿದ್ದರೆ, ಅದನ್ನು ಮಾನ್ಯ ಮಾನ್ಯಮಾಡಿದಂತಾಯಿತಲ್ಲವೆ? ಅಥವಾ, ಪ್ರಯೋಜನ ಪಡೆದುಕೊಂಡಮೇಲೆ ನಿಂದಿಸಬೇಕೇಕೆ ಎಂಬ ನೈತಿಕ ಪ್ರಜ್ಞೆಯೋ?

      • ಗಣೇಶರೆ,
        “ಮಿತವಸ್ತ್ರಾಂಗನೆಯರಂ + ಅಥಂ + ಅತಿರೇಕಾಂಗ…” ಎಂದು, ಸಂಧಿ ಮಾಡಿದ್ದೇನೆ. ಅಥಂ (ಮತ್ತೆ) ಪ್ರಯೋಗ ಸರಿಯಿಲ್ಲವೇ?

        • ಅಥ ಒಂದು ಸಂಸ್ಕೃತದ ಅವ್ಯಯ. ಇಂಥ ಸಂಸ್ಕೃತದ ಅವ್ಯಯಗಳನ್ನು (ಚ, ವೈ, ಹಿ, ತು, ಅಥೋ, ತತಃ ಮುಂತಾದುವು) ಇತರ ಭಾಷೆಗಳಲ್ಲಿ ಬಳಸುವಂತಿಲ್ಲ:-)

  6. ಮಾನನೀಯ,
    I am touched…
    ಆ ಹಿಂದೆ ನಾನು ಮಾಡಿದ್ದೇನೆಂದರೆ, ಭೈರಪ್ಪನವರ ಪರ್ವದ ಮೊದಲ ಪುಟವನ್ನು ವಾರ್ಧಕದಲ್ಲಿ ಬರೆಯಲು ತೊಡಗಿದ್ದು. ಆಗ ನಾನು 20-20-32 (x 2 ತ್ರಿಪದಿಗಳು) ಮಾತ್ರೆಗಳನ್ನು ಹೊಂದಿಸಿದ್ದು ಬಿಟ್ಟರೆ ಇನ್ನೇನೂ ಮಾಡಿರಲಿಲ್ಲ ಎಂದು ಈಗ ಗೊತ್ತಾಗಿದೆ. ‘ದೊಡ್ಡದಾದ ಕೊಬ್ಬಿದ ಕರಗಳೇ ಸರಿ’ ಎಂದು ನಾನು ಬರೆದದ್ದನ್ನು ನೀವು ‘ಪಿರಿದು ಕೊರ್ವಿದ ಕರಗಳೇ ಸರಿ’ ಎಂದು ತಿದ್ದಿದ್ದು ಇನ್ನೂ ಜ್ಞಾಪಕವಿದೆ. ಆಗ ನಾನು ಬರೆದ ಸುಮಾರು ೨೦ ಪದ್ಯಗಳ ಪೈಕಿ ನೀವು ‘ಪರವಾಗಿಲ್ಲ’ ಎಂದದ್ದು ಈ ಪದ್ಯಕ್ಕೆ (‘ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ’ಯಂತೆ):
    ಗಗ್ಗನಾನು ಕಾಗದ ಸೀಸಕಡ್ಡಿಯ ಬಳಸ
    ದಗ್ಗಳಿಗೆ ಬೆರಳಚ್ಚಿರಿಸಳುಪದಿರದಿನ್ನೊಂ
    ದಗ್ಗಳಿಗೆ ಭಾಷ್ಯ ಬರೆವಾಗ ಗಣಕಯಂತ್ರವತಂತ್ರವಾಗದಗ್ಗಳಿಕೆ|
    ವೆಗ್ಗಳದ ಶಬ್ದಗಳ ಕತ್ತರಿಟ್ಟಂಟಿರಿಸ
    ದಗ್ಗಳಿಗೆ ವಿಷಯಕ್ಕೆ ತಡಕಾಟಬಡದದೊಂ
    ದಗ್ಗಳಿಕೆ ಭಾವಗುರುವೊಡ್ಡವದಲೆಸೆದ ಬಲುಹೀ ಭೈರವಕಿಂಕರಗೆ|

    ಇಲ್ಲಿ ಜಗಣಗಳಿರಲು ಕಾರಣ ಆಗ ನನಗೆ ಜಗಣ ಎಂದರೇನು ಎಂದೇ ತಿಳಿಯದ್ದು. ಜಗಣಗಳು ಕಡಿಮೆ ಇರುವುದಕ್ಕೂ ಅದೇ ಕಾರಣ. ನಿಮ್ಮ ಪ್ರಶಂಸೆಯಿಂದ ಉಬ್ಬಿಹೋಗಿದ್ದೇನೆ. ನನಗೆ ಈಗ ಹೆಚ್ಚಿನ ಅವಶ್ಯಕತೆಯಿರುವುದು ‘ಮುಂದಿನ ರಚನೆ ಇಷ್ಟದರೂ ಚೆನ್ನಿರಲಿ’ ಎಂಬ ನಿಮ್ಮ ಹಾರೈಕೆ.

    • ಜಗಣಗಳನ್ನು ತೊಳೆದಿದ್ದೇನೆ. ಬೇರೆ ದೋಷಗಳಿವೆಯೆ?

      ಗಗ್ಗನಾಗಿರ್ದೊಡಂ ಸೀಸ-ಕಾಗದ ಬಳಸ
      ದಗ್ಗಳಿಕೆಯಳುಪದೆಲೆ ಬೆರಳಚ್ಚಿಸಿರ್ಪುದೊಂ
      ದಗ್ಗಳಿಕೆ ಪದ್ಯ ರಚಿಪಾಗ ಗಣಕೋಪಕರಣವತಂತ್ರವಾಗದೆಲೆ ಮೇಣ್|
      ವೆಗ್ಗಳದ ಶಬ್ದಗಳ ಕತ್ತರಿಟ್ಟಂಟಿರಿಸ
      ದಗ್ಗಳಿಕೆ ವಿಷಯಕ್ಕೆ ತಡಕಾಟಬಡದದೊಂ
      ದಗ್ಗಳಿಕೆ ಭಾವಗುರುವೊಡ್ಡವದಲೆಸೆದ ಬಲುಹೀ ಭೈರವೋಪಾಸಗೆ|

  7. ಸುಂದರತಿಯಿಂ ಪೆರ್ಚಿಸಿಗೊಂಡು ಸೌಂದರ್ಯಮಂ
    ಬಂಧುರದೀ ಹಾರಬುಗುಡಿಬುಲಾಕೋಲೆಗಳ್
    ಇಂದಿಮ್ಮಡಿಗೊಳ್ಳಿಸಿರಲವಳ ಕಾಂತಿಯಂ
    ಬಂಧಿಸಿರ್ಪುದೀ ಚಿತ್ತಾರವೆನ್ನ ಹೃದಯಮಂ

    (ಗಣೇಶರವರೇ, ವಸಂತತಿಲಕದ ನಿಯಮಳು ಗೊತ್ತಿಲ್ಲವಾದರೂ ಊಹಿಸಿ ಬರೆದೆ. ತಾವದನ್ನು ತಿಳಿಸುವಿರಾ? )

    • ಕಾಂಚನಾ ಅವರೇ
      ನಿಮ್ಮ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಿ ನಾನು ಅರ್ಥ ಮಾಡಿಕೊಂಡಿರುವುದನ್ನು ಪರಿಶೀಲಿಸಿಕೊಳ್ಳುತ್ತಿದ್ದೇನೆ ಅಷ್ಟೇ 🙂

      ಜಾತಿ ಮತ್ತು ವೃತ್ತ ಎಂಬ ಎರಡು ಬಗೆಯ ಛಂದಸ್ಸಿನ ಪ್ರಕಾರಗಳಿವೆ. ಪದ್ಯಪಾನದಲ್ಲಿ ಬಳಕೆಯಾಗಿರುವ ಬಹುತೇಕ ಪದ್ಯಗಳು (> ೯೫ %) ಜಾತಿಬಗೆಯದ್ದಾಗಿದೆ.

      ಜಾತಿ ಪ್ರಕಾರದಲ್ಲಿ ಗಣಗಳ ಮತ್ತು ಪಾದಗಳ ಮಾತ್ರೆಗಳ ಎಣಿಕೆಗಳು ಹೆಚ್ಚು ಮುಖ್ಯವಾಗುತ್ತದೆ ಇದರಲ್ಲಿ ಗುರುಲಘುಗಳ ವಿವಿಧ ಬಗೆಗಳನ್ನು ನಮಗೆ ಬೇಕಾದ ಹಾಗೆ ಒಟ್ಟು ಗಣದ ಮೊತ್ತ ಸರಿಬರುವ ಹಾಗೆ ಬಳಸಬಹುದು (ಆದಿಪ್ರಾಸ ಜಗಣ ಇತ್ಯಾದಿ ನಿಯಮಗಳನ್ನು ಅನುಸರಿಸಿದ ಬಳಿಕ).

      ವೃತ್ತ ಛಂದಸ್ಸಿನಲ್ಲಿ ಮೇಲಿನ ನಿಯಮದ ಜೊತೆಗೆ ಗುರು-ಲಘುಗಳ ಬಳಕೆಯಲ್ಲಿ ಒಂದು ಅಧಿಕೃತ ನಿಯಮ ಇರುತ್ತದೆ, ಅದೇನೆಂದರೆ ಎಲ್ಲ ಪಾದಗಳಲ್ಲು ಗುರುಲಘುಗಳ ಸ್ಥಾನ ಒಂದೇ ಆಗಿರಬೇಕಾಗಿರುತ್ತದೆ. ವೃತ್ತಗಳನ್ನು ನೆನಪಿಡಲು ಆಯಾ ಪ್ರಕಾರದ ಒಂದು ಪ್ರಸಿದ್ಧ ಉದಾಹರಣೆಯನ್ನು ಮನದಲ್ಲಿ ಹೇಳಿಕೊಂಡು ಅದರ ಗುರುಲಘು ವಿನ್ಯಾಸವನ್ನು ಮನನ ಮಾಡಿಕೊಳ್ಳಲಿಕ್ಕಾಗಿ ಒಂದೇ ಅಕ್ಷರವನ್ನು (ಉದಾಹರಣೆಗೆ ‘ನ’ ಕಾರ) ಹೇಳಿಕೊಂಡು ಅಭ್ಯಾಸ ಮಾಡಬಹುದು.

      ವಸಂತತಿಲಕ ವೃತ್ತ ಬಗೆಯ ಛಂದಸ್ಸು,
      ಒಂದು ಪ್ರಸಿದ್ಧ ಉದಾಹರಣೆ: ಯಾಂ ಚಿಂತಯಾಮಿ ಸತತಂ ಮಾಯಿ ಸಾ ವಿರಕ್ತಾ (ಪದ್ಯದ ಮೊದಲ ಸಾಲು ಭರ್ತೃಹರಿಯ ಶತಕಗಳಿಂದ)
      ಇದಕ್ಕೆ ‘ನ’ ಕಾರ ಅಳವಡಿಸಿದರೆ ‘ನಾನಾನನಾನನನನಾನನನಾನನಾನಾ’ ಎಂದಾಗುತ್ತದೆ. ನಾಲ್ಕು ಸಾಲುಗಳಲ್ಲೂ ಇದೆ ಬಗೆಯ ಗುರುಲಘು ವಿನ್ಯಾಸ ಬಳೆಸಬೇಕು

      ಗಮನಿಸಿ:
      ೧. ವೃತ್ತದಲ್ಲಿ ಪ್ರಾಸವಿದ್ದರೆ ಚೆಂದ ಆದರೆ ಅದು ನಿಯಮವಲ್ಲ
      ೨. ಛಂದಸ್ಸಿನಲ್ಲಿ ಯತಿಯನ್ನು ಗಮನಿಸಬೇಕಾಗುತ್ತದೆ ಇದು ನನಗೆ ಸರಿಯಾಗಿ ಅರ್ಥವಾಗಿಲ್ಲ 🙂

      ಗಣೇಶ್ ಸರ್ ಮತ್ತು ಇತರರಿಗೆ,
      ಮೇಲಿನ ವಿವರಣೆಯಲ್ಲಿ ತಪ್ಪಿದ್ದರೆ ದಯವಿಟ್ಟು ತಿದ್ದಬೇಕು

      • ಸೋಮ ಅವರೆ – ವಿವರಣೆಗೆ ಧನ್ಯವಾದಗಳು. ಸರಿ ಮಾಡಿ ಮತ್ತೆ ಹಾಕುತ್ತೇನೆ

    • ಶ್ವೇತಾಂಗಿಯಿಂದಧಿಕವಾಗಿರಲಂದಚೆಂದಂ
      ಜೋತಾಡುವೀ ಜುಮುಕಿಯಾ ಬುಗುಡೀ ಸರಂದಾ |
      ಮತ್ತಿಮ್ಮಡಿರ್ಸಿ ಸೊಬಗಂ ಸುಧನ್ಯಭಾವದಿಂದಲ್
      ಮತ್ತಿಲ್ಲಿ ಸಾರುತಿಹುದೇಂ ಜೊತೆಯಾ ವಿಶೇಷಂ! ||

      • ಕಾಂಚನ ಅವರೇ,

        ನಿಮ್ಮ ಪದ್ಯ ತುಂಬಾ ಚೆನ್ನಾಗಿದೆ

        ‘ಮತ್ತಿಮ್ಮಡಿರ್ಸಿ ಸೊಬಗಂ ಸುಧನ್ಯಭಾವದಿಂದಲ್” ಎಂಬಲ್ಲಿ ‘ಸುಧನ್ಯ’ ವನ್ನು 2 ಲಘುಗಳಾಗಿ ಮಾಡಿದರೆ ಪಾದ ಸರಿಹೋಗುತ್ತದೆ ಉದಾಹರಣೆಗೆ ‘ಹಿತ’ ಮಾಡಬಹುದು

        • ಸೋಮ ಅವರೆ – ಇದನ್ನು ಗ್ರಹಿಸಿರಲಿಲ್ಲ. ತಿದ್ದುಪಡಿ ಮಾಡಿದ್ದಕ್ಕೆ ಮಗದೊಮ್ಮೆ ಧನ್ಯವಾದಗಳು. ಸರಿಮಾಡಿದ್ದು ಹೀಗಿದೆ ::

          ಶ್ವೇತಾಂಗಿಯಿಂದಧಿಕವಾಗಿರಲಂದಚೆಂದಂ
          ಜೋತಾಡುವೀ ಜುಮುಕಿಯಾ ಬುಗುಡೀ ಸರಂದಾ |
          ಮತ್ತಿಮ್ಮಡಿರ್ಸಿ ಸೊಬಗಂ ಹಿತಭಾವದಿಂದಲ್
          ಮತ್ತಿಲ್ಲಿ ಸಾರುತಿಹುದೇಂ ಜೊತೆಯಾ ವಿಶೇಷಂ! ||

  8. “A picture is better than a thousand words” ಎಂಬ ಜನಪ್ರಿಯ ಹೇಳಿಕೆಯಿದ್ದರೂ, ವಾಚ್ಯವಾಗಿ ಈ ಚಿತ್ರವನ್ನು ವಿವರಿಸುವ ಸಾಹಸಕ್ಕೆ ಕೈಹಾಕುತ್ತಿದ್ದೇನೆ ::

    ಮಿಂದು ನೀರಿನ ಬಿಸಿಯ ಹದದಿ ಸು –
    ಗಂಧ ದ್ರವ್ಯಾದಿಗಳ ಲೇಪನ
    ಸುಂದರಿಯ ಸೌಂದರ್ಯ ಮೆರುಗಿದ ಮಿತದಲಂಕಾರ |
    ಚೆಂದ ಕಾಂಚನ ಮರಗ ಸೆರಗರ –
    ವಿಂದ ರಂಗಿನ ರೇಶಿಮೆಯ ಮೃದು
    ವಿಂದುಮುಖಿ ಮೈ ಬಳಸುತಡಗಿಹ ಸೊಬಗ ಸೊಗಸಿಹುದು ||

    ಬೊಟ್ಟು ರಾಜಿಸೆ ಹರವ ಹಣೆಯಲಿ
    ತೊಟ್ಟು ಸಿಂಗರದಾಭರಣಗಳ
    ದಿಟ್ಟ ಮೂಗಿಗೆ ನತ್ತು ಮತ್ತು ಬುಲಾಕುಗಳ ಶೋಭೆ |
    ಕಟ್ಟೆ ಕೋಮಲ ನೀಳಗೊರಳ –
    ಪ್ಪಟ್ಟ ಹವಳಾ ಮುತ್ತುಗಳ ಸರ
    ಪುಟ್ಟ ಕಿವಿಗಳಲಾಡೊ ಲೋಲಾಕು ಜುಮಕಿ ಬುಗುಡಿಗಳು ||

    ಮುದ್ದು ಮುಖದೊಳು ಮುಗ್ಧತೆಯ ಕಳೆ –
    ಯದ್ದಿ ಶೃಂಗಾರದ ರಸದಲೀ
    ಶುದ್ಧ ಸತ್ವಕೆ ರಜಸಿನೆರಕವು ಮರುಳಗೊಳ್ಳಿಸದೆ |
    ಗೆದ್ದು ಮನದಾ ನಾಚಿಕೆಯ ಸ –
    ನ್ನದ್ಧಳಾಗಿಯೆ ನಿರವಸರದಿ ನಿ –
    ಬದ್ಧಿಸುತ ಜನರಾಶೆಪಣ್ಗಳ ಮುದದಿ ನಿಂದಿಹಳು ||

    • ಕೇಶದ ವರ್ಣನೆ ಮೊದಲು ಬಿಟ್ಟಿದ್ದೆ – ಈಗ ವಸಂತ ತಿಲಕದಲ್ಲಿ ಪ್ರಯತ್ನಿಸುತ್ತೇನೆ ::

      ಕೇಶಂ ವಿಶೇಷ ಪೊಗೆಯಲ್ಲೊಣಗಿರ್ಪದಂತುಂ
      ಪಾಶಂ ಸುಕೋಮಲ ಮುಡಿಗೆ ಮುಡಿರ್ದ ಪೂಂಗಳ್
      ಭೇಷಾಗಿ ರಂಗಿನನುರೂಪದಿ ಗಂಧಿಸಿರ್ಕುಂ
      ಆಶೆಂಗಳೆಲ್ಲ ಮಧುರಾತ್ರಿಯೊಳಾಡುವಂತೆs ||

  9. ಗಿಡಂಗಳಿಂ ಫಲಗಳನಂ
    ಪುಡುಕಿಡಲವಕಿಂ ಮೊಗಂ ಮಿಗಿಲಿರೆ ತರುಣಿಯೊಳ್
    ಕೆಡಂಕನಂ ತಿಳಿಯದ ನೋ-
    ಟದೊಳ್, ನಿಲುವಿನಿಂ ಬೆಡಂಗಿಯಂ ಬಿಡಿಸಿರಪನ್

    • ಗಿಡಂಗಳಿಂ ಫಲಗಳನಂ
      ಪುಡುಕಿಡಲವಕಿಂ ಮೊಗಂ ಮಿಗಿಲಿರೆ ತರುಣಿಯೊಳ್
      ಕೆಡಂಕನಂ ತಿಳಿಯದ ನೋ-
      ಟದೊಳ್, ನಿಲುವಿನಿಂ ಬೆಡಂಗಿಯಂ ಬಿಡಿಸಿರ್ಪನ್

  10. ಚಂದದರಿವೆ ತೊಟ್ಟನ್ಗನೆಯೊಳು ಮುಗ್ಧತೆಯ ಶಾಂತದಲ್ಲಿ
    ಹೊಂದಿಕೊಳುವುದಾಭಾರಣಕಾಂತಿ ನಗೆಮೊಗದ ಹೊಳಪಿನಲ್ಲಿ
    ಸುಂದರಿಯು ಫಲಗಳನ್ನು ಪೊತ್ತು ತಾ ನಿಂತಭಂಗಿ ಚೆನ್ನs
    ವಂದ್ಯ ನಿನ್ನಕಲೆ, ಚಿತ್ರಕಾರ ರವಿವರ್ಮ ನೀನು ಧನ್ಯs

    • ನಿಜ, ಇದು ಸಂತುಲಿತಮಧ್ಯಾವರ್ತಗತಿಯ ಬಂಧವೇ ಹೌದು. ಆದರೆ ಮೂರನೆಯ ಪಾದದಲ್ಲಿ ಸ್ವಲ್ಪ ಗತಿಯು ಎಡವಿಂತಿದೆ. ಅದನ್ನು ಹೀಗೆ ಸವರಿಸಬಹುದು: “ಸುಂದರೀಮಣಿಯು ಹಣ್ಣು ಹೊತ್ತು ನಿಂದಿರ್ಪ ಭಂಗಿ ಚೆನ್ನ”.

      ಈ ಬಂಧದಲ್ಲಿ ಗತಿಸುಭಗಎಯನ್ನು ಕಾಯ್ದುಕೊಳ್ಳಬೇಕೆಂದರೆ ೩+೫ ಮಾತ್ರೆಗಳ ಪ್ರಸ್ಪುಟವಿಭಾಗವು ಕಾಣುವಂತೆ, ಹಾಗೆಂದು ವಿಸಂಧಿದೋಷವನ್ನೂ ಮಾಡದೆ, ಸುಕುಮಾರಬಂಧವನ್ನು ರಚಿಸಲು ಮೊದಲೆಗೆ ಅಭ್ಯಸಿಸಬೇಕು. ಬಳಿಕ ನಿಬಿಡಬಂಧವನ್ನು ಯತ್ನಿಸಬಹುದು. ಮುಖ್ಯವಾಗಿ ನಿಬಿಡಬಂಧದಲ್ಲಿ ಲಘುಗಳೇ ಹೆಚ್ಚಾಗಿ ಬಂದಾಗ ತೊಡಕು ತಪ್ಪಿದ್ದಲ್ಲ. ಜೊತೆಗೆ ಮಾತ್ರಾಬಂಧಗಳಲ್ಲಿಯೂ ಇರುವ ಯತಿನಿಯಮವನ್ನು ಗಮನಿಸಿಕೊಳ್ಳಬೇಕು. ಇಲ್ಲಿಯ ಯತಿನಿಯಮವು ತುಂಬ ಸೂಕ್ಷ್ಮವಾದುದು. ನೇರವಾಗಿ ವಿಸ್ತರಿಸಿ ವಿವರಿಸಬಹುದಲ್ಲದೆ ಈ ಜಾಲದಾಣದ ಮೂಲಕ ಬಿತ್ತರಿಸಲಾಗದು.

      • ಗಣೇಶ್ ಸರ್,

        3ನೇ ಪಾದ ಸರಿಪಡಿಸಿದ್ದೇನೆ. ಈ ಛಂದಸ್ಸಿನಲ್ಲಿ ಯತಿ ಗತಿ ಸೂಕ್ಷ್ಮತೆಯು ಇಂದು ನಿಮ್ಮೊಡನೆ ಮಾತಾಡಿದಾಗ ತಿಳಿಯಿತು

        ಚಂದದರಿವೆ ತೊಟ್ಟನ್ಗನೆಯೊಳು ಮುಗ್ಧತೆಯ ಶಾಂತದಲ್ಲಿ
        ಹೊಂದಿಕೊಳುವುದಾಭರಣಕಾಂತಿ ನಗೆಮೊಗದ ಹೊಳಪಿನಲ್ಲಿ
        ಸುಂದರೀಮಣಿಯು ಹಣ್ಣು ಹೊತ್ತು ನಿಂದಿರ್ಪ ಭಂಗಿ ಚೆನ್ನs
        ವಂದ್ಯ ನಿನ್ನಕಲೆ, ಚಿತ್ರಕಾರ ರವಿವರ್ಮ ನೀನು ಧನ್ಯs

  11. ಸೌಂದರ್ಯಸತ್ಯಯುಗಳದರ್ಶನದೃಷ್ಠಿಭಾಗ್ಯಂ
    ಏಕತ್ರಕಾವ್ಯರಸನಿಷ್ಠೆಯ ಮಾನ ಭಾವಂ
    ಗಾಢಾನುಭಾವಜರಿಸೀರೆಯನುಟ್ಟು ತೋರ್ಪಳ್
    ಭೈರಪ್ಪಭೂಷಿತೆ ಕಲಾಕುಲವಂತಿಮಾತಾ

    • ಭೈರಪ್ಪನವರ ಕಾವ್ಯಕುಸುರಿಯನ್ನು, ಪಟದೊಂದಿಗೆ ವಸಂತತಿಲಕದಲ್ಲಿ ಹೋಲಿಸಲು ಪ್ರಯತ್ನಿಸಿದೆ. ಮಧ್ಯದಲ್ಲಿ ಪ್ರಾಸವನ್ನು ಬಿಟ್ಟದ್ದಾಯ್ತು. ಕೊನೆಯಲ್ಲಿ, ಎಲ್ಲಾ ಮೂವರಿಗೂ ಅನ್ಯಾಯವಾದಂತಿದೆ. ಕ್ಷಮಿಸಿ

      • ತಪ್ಪೇನಿಲ್ಲ…ಕನ್ನಡದಲ್ಲಿ ವಸಂತತಿಲಕವನ್ನು ಬಳಸಿ ಗೆಲ್ಲುವುದೇ ಕಷ್ಟ. ಈ ಸಾಹಸವನ್ನು ಸಾಧಿಸಿದ ನಿಮಗೆ ಧನ್ಯವಾದ. ಅರ್ಥವೂ ಸೊಗಸಾಗಿದೆ. ಆದರೆ ಮೊದಲ ಸಾಲಿನಲ್ಲೊಂದು ವರ್ಣ ಹೆಚ್ಚಾಗಿದೆ.ಅದನ್ನು ’……..ಸತ್ಯಯುಗದರ್ಶನ…” ಎಂದು ಸರಿಪಡಿಸಬಹುದು. ಕಡೆಯಸಾಲಿನಲ್ಲಿಯೂ ತುಸು ತಿದ್ದುಪಡಿ: “………..ಕಲಾಕುಲಮೂಲಮಾತೇ!’ ಎನ್ನಬಹುದೇ?

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)