ವೀಣಾ ಉದಯನರ ಪದ್ಯ
ತಾರ! ತಾವರೆಯನೆಂದಾ ತಾಯ ಮಾತಿನಿಂ
ಪೋರನೈತರೆ ಕೆರೆಯ ದಾರಿಯಲ್ಲಿ
ನೀರೆ ಬರಲವಳ ವದನವ ಕಂಡು ಬೆಸಗೊಂಡ
ನೀರನುಳಿದೂ ಕಮಲವರಳಲಹುದೇ?!
ಇದು ಸಸಂದೇಹಾಲಂಕಾರದಿಂದ ಕಮಲದ ವರ್ಣನೆಯಾಯಿತೋ ಅಥವಾ ಕಮಲವದನೆಯ ವರ್ಣನೆಯಾಯ್ತೋ ಎಂಬ ಗೊಂದಲವಿದೆ.
ರಾಮಚಂದ್ರರ ಪದ್ಯ
ವಾರಿಯೊಳಗಾಡಿರ್ದ ನೀರೆಯಂ ಕಂಡಾಗ
ಜಾರನೈದಂ ಛಲದೆ ಕಾಣದವೊಲೀಸಿ
ನೀರಿನೊಳ್ ಪಿಡಿಯಲ್ ಸಪೂರ ನಡುವಂ ಮನದೆ
ನೀರಜೆಯ ಸಾಂಗತ್ಯದೋಲ್ ಸಂದೆಗಂ
[ಮೆಲ್ಲಗೆ ಈಸಿ ಹೋಗಿ ನೀರಿನಲ್ಲಿದ್ದ ನೀರೆಯ ತೆಳ್ಳನೆಯ ನಡುವನ್ನು ಹಿಡಿಯಲಾಗಿ ತಾನು ಕಮಲದ ಜೊತೆಗಿರುವ ಸಂದೇಹವಾಯ್ತು. (ನಡುವು ಕಮಲದ ದಂಟಿನಂತೆ ತೋರಿತೆಂಬ ಧ್ವನಿಯ ಆಶಯ)]
ಕಾಂಚನಾರ ಪದ್ಯ-೧
ಅರಳುವುದನನುಕರಿಸೆ ಭೂತಲದ ಜನಕಿದೋ
ದೊರಕಿತೆಂ ನಗುವೆಂಬ ಸುಂದರದುಡೆ!
ಶರರುಹವೆ! ಕೆಸರಿಂದಲೆದ್ದೊಗೆವ ತವ ಬಾಳ್ತೆ
ಪಿರಿದಪ್ಪ ಬದುಕಿಂಗೆ ನೆರವಿತ್ತುದೇಂ!|
ಕಾಂಚನಾರ ಪದ್ಯ-೨
ತನ್ನಂತರಂಗಮಂ ಬಚ್ಚಿಡುತುಮಂಬುಜಂ
ನನ್ನಿಯಿಂದೀಕ್ಷಿಸುತಲಿನನ ಬರವಂ,|
ಚೆನ್ನಾದ ಮಾರ್ಗಮಂ ನಿಕ್ಷೇಪಿಸಿರ್ಪಳೇಂ
ಬನ್ನದಭಿಸರಣದೊಳ್ ಸುಖಮದೆಂದು!|
ಕಾಂಚನಾರ ಪದ್ಯ-೩
ಇರುಳೊಳಿನನಂ ಕಾವುದಂಬುಜಕೆ ಸಾಜಮೋ!
ವಿರಹದಿಂದೊದವಿದಭಿಸಾರಮಿದುವೋ!
ಪರಮಾತ್ಮಸಾನಿಧ್ಯಕೆಂದಿತ್ತ ಮನಮೊ! ಇದು
ಮರಳುಮಾಳ್ಪೊಂದು ನಾಟಕದಾಟಮೋ!
(ಸೂರ್ಯನಿಗಾಗಿ ಕಾಯುವುದು ಅಂಬುಜಕೆ ಸಹಜವೊ, ಕೈಗೊಂಡ ಅಭಿಸಾರವೋ, ಭಕ್ತಿಯೋ, ಮರಳು ಮಾಡಲಾಡುವ ನಾಟಕದಾಟಮೋ)
ಕಾಂಚನಾರ ಪದ್ಯ-೪
ದೇವಿಯ ಕರದಿಂ ಪಡೆಯುತು
ಮೀ ವಿಧದೊಂದು ಮೃದುಕಾಯಮಂ, ಚೆಂದುಟಿಯಿಂ|
ಪಾವಕವರ್ಣಮನಾ ಹರಿ
ಯೋವಿದ ಮೊಗದಿಂದೆ ಕಾಂತಿಯಾಂತುದೆ ಕಮಲಂ!!
(ದೇವಿಯ ಕರದಿಂದ ಮೃದುತ್ವವನ್ನು, ತುಟಿಯಿಂದ ಬೆಂಕೆಯ ವರ್ಣವನ್ನು ಪಡೆದು ಹರಿಯು ಪ್ರೀತಿಸುವ ಮೊಗದಿಂದ ಕಾಂತಿಯನ್ನು ಈ ತಾವರೆಯು ಪಡೆದಿದೆಯೇ!!)
ಉಷಾರವರ ಪದ್ಯ
ಸಮ ಪಂಕಜಂ ಪಾದ, ಹಸ್ತಗಳ್ ಮೇಣ್ ಹೃದಯ
ಕುಮುದಂ, ಸಹಸ್ರದಳಪದ್ಮ ಶಿರವುಂ|
ಕಮನೀಯವುಂ ಕಮಲದೊಳ್ ಕಮಲ ಮುಖನಯನ
ಅಮಮಮಾ “ಜಲಜ”ವೇಂ ಜೀವಜಗವುಂ?!
ವೀಣಾರವರ ಪದ್ಯ
ಬಗೆಬಗೆಯ ಪೂಗಳಿರೆ ಜಗದೊಳು
ಸೊಗದ ಮೊಗಗಳಿಗೆನ್ನ ಪೆಸರಿಂ
ಸೊಗಸುಮಾತುಗಳಾಡುತಲಿ ಬಣ್ಣಿಪರು ಕವಿವರರು|
ಬಗೆಯೆ ಕಾರಣವೇನಹುದು ಸಿರಿ
ಭಗವತಿಯನೀ ನೆವದಿನೆಳೆಯುವ
ಬಗೆಯಿದೇನೆಂದಂಜಿ ಮುದುಡಿತೆ ಕೆಂಪುದಾವರೆಯು?!
ರವೀಂದ್ರಹೊಳ್ಳರ ಪದ್ಯ
ಘನಮೀ ಕಾವ್ಯಾಬ್ಧಿಯೊಳ್ ಕಾಣ್ ಕವಿಕುಲಗುರುವೆಂದೆಂದಿಗುಂ ಶ್ರೇಷ್ಠಪದ್ಮಂ
ತನುವೆಂದುಂ ಬಾಡದಿರ್ಕುಂ ಬೆಳಗಿರುವನಕಂ ಭಾರತಾರ್ಷೇಯಸೂರ್ಯಂ|
ನೆನೆಯಲ್ ವ್ಯಾಸಂಗಿಭೃಂಗರ್ ಕಮಲಕುಲಲಲಾಮಂ ನಿಜಂ ಮೇಣದೆಂತಾ
ಸನನಾದಂ ವಾಣಿಗಂ ಹ್ಹಾ! ಸರಸಿಜಭವನಿತ್ತಿರ್ಪುದೇಂ ಪ್ರೀತಿಯಿಂದಂ||
ಕಾಳಿದಾಸನಾದರೋ ಕಾವ್ಯಸರೋವರದಲ್ಲಿ ಶ್ರೇಷ್ಠಪದ್ಮ, ಭಾರತಾರ್ಷೇಯಸೂರ್ಯ ಬೆಳಗಿರುವ ತನಕ ಬಾಡುವನಲ್ಲ. ವ್ಯಾಸಂಗಿಭೃಂಗರಾದ ಸಹೃದಯರು, ಕಾವ್ಯಾಸಕ್ತರು (ಯಾವಾಗಲೂ) ನೆನೆಯುತ್ತಿರುತ್ತಾರೆ. ಆದ್ದರಿಂದ ಈತ ಕಮಲಕುಲಲಲಾಮನೇ ಸರಿ. ಆದರೆ, ಕಮಲಾಸನನ ಪೀಠವಾಗುವ ಬದಲು ಶಾರದಾಪೀಠನಾದನಲ್ಲ! ಬಹುಶಃ ಬ್ರಹ್ಮನೇ ಪ್ರೀತಿಯಿಂದ ಕೊಟ್ಟನೇನೋ?