Jun 172012
 

ಈ  ಚಿತ್ರಕ್ಕೆ ಸೂಕ್ತವಾದ ಪದ್ಯಗಳನ್ನು ಬರೆಯಿರಿ. ಛಂದಸ್ಸು – ನಿಮ್ಮ ಆಯ್ಕೆ.

ತಿರುಗುಯ್ಯಾಲೆ

  22 Responses to “ಪದ್ಯಸಪ್ತಾಹ – ೨೫ – ಚಿತ್ರಕ್ಕೆ ಪದ್ಯ”

  1. ಹತ್ತು ದಿಕ್ಕುಗಳಾಚೆ ಗೊತ್ತುಗುರಿ ಮೂಡಿಸುತ
    ಹೊತ್ತಿಸದ ಹಣತೆಯುರಿ ಹೊಳೆಯೆ ಬೆಳಗಿ
    ಸುತ್ತ ಭೂವ್ಯೂಮಪಥ ರವಿಚಂದ್ರರಪ್ಪಾಲೆ
    ಸೊಗಸ ನನುಕರಿಸಿದಳೆ ಸೊಗದಿ ತಿರುಗಿ
    ನಿತ್ಯಸಾಗುತ್ತಿರುವ ಮಿಥ್ಯಾಪರಿಭ್ರಮಣ
    ಸತ್ಯ? ಪಾಲೋ? ನೊರೆಯೋ? ಆಟ ಸೊಗಸು!
    ಒತ್ತಿ ಹಿಡಿದಾಧಾರ ಗುಂಡಿಗೆಯು ಕಣ್ಬಿಟ್ಟು
    ಚಿತ್ತ ಕಂಡಿತೆ ಜಾಗೃತದೊಳೆ ಕನಸು

    ತನ್ನ ಕಲ್ಪನೆಯೆ ಹೊರಬಿದ್ದು ಜಗವದಾಗಿ
    ತನ್ನ ದೆನುವಹಮೆ ಲಯವಾಗಿ ಸಾಗಿತೂಗಿ
    ಇನ್ನಿ ದುಯ್ಯಲೆಯೆ? ಅದೆನಾನು ಅನ್ಯವಿಲ್ಲ
    ಕನ್ನೆ,ಯುಯ್ಯಾಲೆ,ತಿಪ್ಪಾಲೆ ನಾನೆ ಎಲ್ಲ

    • ಕಮನೀಯಸೀಸಪದ್ಯದ ಬಂಧದೊಳ್ ಬೆಳೆದ
      ನಮನೀಯಕವಿತೆಯಿದು ನಿಮ್ಮ ಸಯ್ಪು
      ಜಮೆಯಾಗುತಿಲ್ಲವಿಲ್ಲೇತಕೋ ಪದ್ಯನಿಧಿ
      ಅಮಮಾ! ಇದೀ ಕಂತಿನಲ್ಲಿ ನೊಂದೆಂ!!!

  2. ಸ್ರಗ್ವಿಣಿಯಲ್ಲಿ ಮೊದಲನೇಯ ಪ್ರಯತ್ನ

    ಪಾರ್ಶ್ವದೊಳ್ ಕಾ೦ಬುದೆಲ್ಲ೦ ವಿಶಾಖ೦ಗಳಯ್
    ನಶ್ವರ೦ ತೋರ್ಪ ಮಾಯಾವಿಲಾಸ೦ ಜಗ೦
    ಅಶ್ವಥ೦ ಪೋಲ್ವಮೂಲಾವೃತ೦ ಮೇಲಿರಲ್
    ಶಾಶ್ವತ೦, ವೃಕ್ಷದಾ ತ೦ತ್ರಗಳ್ ಗುಹ್ಯವಯ್

    • ಸೋಮ, ನಿಮ್ಮ ಪ್ರಯತ್ನ ಸ್ತುತ್ಯ. {ಆದರೆ ’ಅಪಿ ಮಾಷಂ ಮಷಂ ಕುರ್ಯಾತ್ ಛಂದೋಭಂಗಂ ನ ಕಾರಯೇತ್’ ಎಂಬ ಉಕ್ತಿಗೆ ಅನುಸಾರವಾಗಿ ಅಶ್ವತ್ಥ ಪದವನ್ನು ಅಶ್ವಥ ಎಂದು ಮೊಟಕಿಸಿರುವುದು ಮಾತ್ರ ತುಸು ಕಸಿವಿಸಿ ತರುತ್ತಿದೆ:-)}. ಕಲ್ಪನೆಯೂ ಸೊಗಸಾಗಿದೆ; ಒಳ್ಳೆಯ ವೇದಾಂತದ ಹದವಿದೆ.

      • ಹೌದು ಸರ್,

        ಅಶ್ವತ್ಥವನ್ನ ನಿಭಾಯಿಸಲಾಗಲಿಲ್ಲ, ಬದಲಾಯಿಸಿದ್ದೇನೆ

        ಪಾರ್ಶ್ವದೊಳ್ಗಿರ್ಪುದೆಲ್ಲ೦ ಭ್ರಮಾದಾವೃತ೦
        ನಶ್ವರ೦ ತೋರ್ಪ ಮಾಯಾವಿಲಾಸ೦ ಜಗ೦
        ಅಶ್ವದೊಲ್ ವೇಗದಿ೦ ಸಾಗುವಲ್ ಕಾತುರ೦,
        ಶಾಶ್ವತ೦ ಸ೦ತತ೦ ದೃಷ್ಟಿಸೌ ಲೋಕದೊಳ್

  3. ಪದ್ಯಪಾನದೊಳಗೇತಕೇತಕೋ
    ಹೃದ್ಯಕಲ್ಪನೆಗೆ ಬಂದುದೇಂ ಬರಂ?
    ಪದ್ಯವಿದ್ಯೆಯೆ ಜಗುಳ್ದು ಜೋಲ್ವ ವೊಲ್
    ಚೋದ್ಯಮೀ ರುಚಿರಚಿತ್ರಮೊಪ್ಪುಗುಂ!!!

    • ಗಣೇಶ್ ಸರ್,

      ರುಚಿರದಲ್ಲಿ ಪ್ರಯತ್ನ 🙂

      ಓಲುತಿರ್ಪಳವಳಾಚೆಗೀಚೆಗ೦
      ಕಾಲವ೦ ಮರೆತವೋಲು ಬಾಲೆಯು-
      ಯ್ಯಾಲೆಯಾಡುತಿರೆ ನೋಳ್ಪ ಬಾಲಕ೦
      ಸಾಲಿನಿ೦ ಸರದಿ ಮೀರಲುತ್ಸುಕ೦

  4. ಮಲ್ಲಿಕಾಮಾಲೆ:
    ಗುಂಭಮಧ್ಯದ ಗೂಟದೊಳ್| ಸ್ಥಿರವಾಗಿ ನೀನಿರಲಿಚ್ಛಿಸಲ್
    ಕಂಭದಿನ್ ಅರೆ ತಳ್ಳುಗುಂ| ಕರುಮಂಗಳಂದದೆ ನಿನ್ನನುಂ
    ಬಂಭರಭ್ರಮಣಂಗಳಂ| ಸಲೆ ತಾಳೆ ತೋರಲು ಸಂಯಮಂ
    ಸ್ತಂಭಿತಂ ತಿಳಿ ಲೀಲೆ ತಾ| ನೆಲೆಯನ್ನು ಸೇರಲು ಮುಕ್ತಳೌ

    • ರಂಭೆ ನೀನಿರು ಜಾಗರಂ| ಕರಬಿಟ್ಟೊಡಂ ನೆಲ ಸೇರ್ವೆಯೌ
      ಜಂಭಗೈದೊಡೆ ಕೈಯಿ ಕಾಲ್| ತರಚಾವು ಮೇಣ್ ಮುರಿದಾವು ಕೇಳ್
      ಡಂಭ ಬಿಟ್ಟೆಯೊ? ಬಾಳ್ವೆಯೌ| ನಟನಾವಿಲಾಸವೆ? ಬೀಳ್ವೆಯೌ!
      ರಂಭವಂ ಪಿಡಿ ದಾರ್ಢ್ಯದಿಂ| ಕಿರುಚಾಡಲೇತಕೆ ವೆರ್ತದಿಂ

  5. ಗೆಲಿಲಿಗೊಲಿದಾ ತಿರುಗುಗತಿ
    ಯಲಸತೆಯೋ ನಿಯಮ ಐಸಕನದೋ ಸಾಪೇ
    ಕ್ಷಲುಬರುಟನಾನಿಸಿಕೆಯೋ
    ಎಲೆಬಾಲೇ ನೀ ಸದಾತಿರುಗುತಿರು ನಗುತಾ

    • Cool! ಆದರೆ, rotating frames ಬಗ್ಗೆ ಅಲುಬರುಟನಾನಿಸಿಕೆಯಾದರೂ ಏನು? 😉

      ಸಾಪೇಕ್ಷಲುಬರುಟ ಸಂಧಿ ಎಡವಿದೆಯೇನೊ – ಸಾಪೇಕ್ಷನಲುಬರುಟ ಇರಬೇಕಿತ್ತು ಅನಿಸುತ್ತೆ. ಅಲುಬರುಟನಾನಿಸಿಕೆ ಎಂಬಲ್ಲೂ ಸವರ್ಣ ದೀರ್ಘ ಸಂಧಿ ಸಲ್ಲದು.

      • ಧನ್ಯವಾದಗಳು.ತಿದ್ದಲು ಪ್ರಯತ್ನಿಸುತ್ತೇನೆ
        rotating frames ನಲ್ಲಿ ಎಡವಿದರೆ ಹೊರಗೆಸಯಲ್ಪಡುತ್ತೇನೆ 🙂
        ಅಲುಬರುಟನ ಅನಿಸಿಕೆ ತಿಳಿಸಿದರೆ ನಿಮಗೆ ಅಲಪೆರುಡನ ಬಹುಮಾನ ಕೊಡಿಸುವೆ 🙂

  6. ತಿರುಗುತ್ತs ಮೆರೆದೀಯೆs ಬಿರುಸಿsನs ಮೋದsದಿs
    ಅರಸsನs ಮಗಳೇ ಕಡುಜಾಣೆs – ಎಳೆಬಾಲೆs
    ಕರಗsಳs ಹಿಡಿತs ಜೋಪಾನs

    [ಅಂಶ ಛಂದಸ್ಸು – ತ್ರಿಪದಿ]

  7. ಕೆದರಿದ ನವಿರ ಕಿರಣಗಳ, ಬೀ- (ನವಿರು – ಕೂದಲು)
    ರಿದ ಮುಗುಳ್ನಗೆಯ ಬೆಳಕಿನ, ತೀ-
    ರದ ಲವಲವಿಕೆಯ ಬಿಸಿ ಬುಗ್ಗೆಯ, ಹಸುಳೆ ಕಾ೦ತಿಯನೇನು- (- ಹಸುಳೆ ಕಾ೦ತಿ – ಎಳೆಯ ಕಾ೦ತಿ)
    ಳ್ಗುಕುದುರೆಗಳ ತಾನೊ೦ದೆ ಬಲಜೀ – (- ಜೀನ – ಲಗಾಮು)
    ನದಿ ಹಿಡಿದಯೀ ಬಾಲ ರವಿಯನು
    ಮುದದಿ ನೋಡುತ ತಿರೆತಿರುಗಿದಳು ಸುತ್ತ ಗರಗರನೆ ||

    • ಕಾರಂತರೆ, ಕಲ್ಪನೆ ತುಂಬ ಚೆನ್ನಾಗಿದೆ.

      ಆದರೆ ‘ಹಸು ಕಾಂತಿಯನೇ’ ಗಣ ವಿನ್ಯಾಸ ಏರುಪೇರಾಗಿದೆ ಅಲ್ಲವೇ?. ಹಾಗೆಯೆ ಪಾದಾಂತ್ಯದ ಗುರುವನ್ನು ಹೀಗೆ ಏಳರ ಗಣದೊಂದಿಗೆ ಸೇರಿಸುವುದು ಸಾಧುವೆ? ಜೊತೆಗೆ, ಈ ನೇ-ಳ್ಗುದುರೆ’ ಖಂಡಪ್ರಾಸ ತರವಲ್ಲವೇನೊ – ಓದುವಾಗ, ‘ನೇ….’ ಎಂಬಲ್ಲಿ ನಿಲುಗಡೆ ಇರುವುದರಿಂದ.

      • ಗಡಿಬಿಡಿಯ ರೋಗಕ್ಕೆ ನು೦ಗಿದ ಒ೦ದು ಮಾತ್ರೆಯನ್ನೂ ಮತ್ತೊ೦ದು ಯತಿಯನ್ನೂ ಸರಿಪಡಿಸಿದ್ದೇನೆ. ಗಮನಿಸಿ ತಿಳಿಸಿದ್ದಕ್ಕೆ ಧನ್ಯವಾದಗಳು.

  8. ಬದುಕ ಜೋಕಾಲಿಯನು ಜೀಕುತ –
    ಲದರ ಸುತ್ತಿಸಿ ತಿರುಗುವಾಟವದಿ
    ಎದೆಯ ಗುಂದಿಸಿ ಮಾಳ್ಪುದಯ್ ಮುನ್ನೋಟವನೆ ಮಸುಕು |
    ಉದಿಸದೆಂದೂ ತಡಹುವಾ ಭಯ
    ವಿಧಿಯದೀ ಪರಿ ಮೋಜಿನೊಳಗೂ
    ಅದುಮಿ ಪಿಡಿದಗೆ ಧರ್ಮದಾ ಹುರಿಯಟ್ಟುತಲೆ ದುಗುಡ ||

  9. ಸರಸರದಿಂ ಸಮರಸದಿಂ
    ಗರಗರದಿಂ ಸರಳೆ ಸುತ್ತುತಂ ಬೆಳ್ಗುರುಳಿಂ
    ಧರೆಗುಂ ಕಚಗುಳಿಯಿಡುತಂ
    ಕರಮೆರ್ದೆಗೊಳುತ್ತೆ ನಗುವುದೇ ಕಣ್ಗೆಡ್ಡಂ
    [ಬೆಳ್ಗುರುಳ್ = ಬೆಳ್ಳನೆಯ ಕೂದಲು ಕರಮೆರ್ದೆಗೊಳ್ = ಬಹಳವಾಗಿ ಮನಸ್ಸನ್ನು ಸೆಳೆ, ಕಣ್ಗೆಡ್ಡಂ = ಕಣ್ಣಿಗೆ ಮನೋಹರ]

  10. ಪೆಣ್ಣೆನಗಿಲ್ಲೆಂಬೂಣೆಯ
    ನಣ್ಣನೆಲರ್ಗಾಣ್ಮನುಂ ತವಿಸಲೆಂಬರಿಯಿಂ
    ಬಣ್ಣದ ಕೈದೊಟ್ಟಿಲೊಳಗೆ
    ಮಣ್ಣನೆ ಮಂಗಳೆಯ ತೂಗುವುದನೇನೆಂಬೆಂ

    [ಪರಿ = ರೀತಿ ಬಣ್ಣ = ಅಂದ, ಚೆಂದ ಅಣ್ಣನೆ = ಹಿತವಾಗಿ ಎಲರ್ಗೆ ಆಣ್ಮ = ವಾಯುದೇವ, ಊಣೆಯ = ಕೊರತೆ]
    ವಾಯುದೇವ, ತನಗೆ ಹೆಣ್ಣುಮಗುವಿಲ್ಲವೆಂಬ ಕೊರತೆಯನ್ನು ನೀಗಲು ಈ ಬಾಲೆಯನ್ನು ತೂಗುತ್ತಿದ್ದಾನೆ ಎಂದು ಹೇಳುವ ಪ್ರಯತ್ನ.

  11. ಶ್ರೀಶ ಮತ್ತು ಕಾ೦ಚನರ ಪದ್ಯದ ಕಲ್ಪನೆ ಮತ್ತು ಹೊಳ್ಳನ ಪದ್ಯಗಳ ಭಾವ, ಹಳಗನ್ನಡ ಪ್ರಯೋಗ ಮತ್ತು ಬ೦ಧಗಳು ಬಹಳ ಹಿಡಿಸಿದವು 🙂

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)