Dec 052012
 

 

ಮಂಗಳಮಂಟಪದ ವೇದಿಕೆಯಲ್ಲಿ ಶತಾವಧಾನಿಗಳು ಮತ್ತು ಪೃಚ್ಛಕವಿದ್ವಾಂಸರು.

ಮೊತ್ತ ಮೊದಲ ತುಂಬುಗನ್ನಡದ ಶತಾವಧಾನದ ಅಭೂತಪೂರ್ವ ಯಶಸ್ಸಿನ ಮತ್ತಿನಲ್ಲಿರುವ ಪದ್ಯಪಾನಿಗಳೇ, ನಿಮ್ಮ ನಶೆಗೆ ಕಾರಣವೇನೆ೦ಬುದನ್ನೇ ಈ ವಾರ ಪದ್ಯವಾಗಿಸಿ. ಹೊಸ ಸದಸ್ಯರು ಆದಷ್ಟುಮಟ್ಟಿಗೆ ’ಪದ್ಯವಿದ್ಯೆ’ಯನ್ನು ನೋಡಿ, ವೀಡಿಯೋ ತರಗತಿಗಳನ್ನು ಕೇಳಿ ನ೦ತರ ರಚನೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು.

ಇದೇ ಸಂದರ್ಭದಲ್ಲಿ, ಈ ಒ೦ದು ಐತಿಹಾಸಿಕ ಕ್ಷಣಗಳನ್ನು ಅನುಭವಿಸಲು ಮತ್ತು ಅದಕ್ಕೆ ಸಾಕ್ಷಿಯಾಗಲು  ನೆರವಾದ ಎಲ್ಲ ವೀಕ್ಷಕರಿಗೂ ಪದ್ಯಪಾನದ ಪರವಾಗಿ ಅನ೦ತಾನ೦ತ ವಂದನೆಗಳು.

ಇ೦ತಹಾ ಒಂದು ಮಹಾಯಶಸ್ಸಿಗೆ ಕಾರಣವಾದರೂ ಈ ಕಾರ್ಯಕ್ರಮವನ್ನು ನೋಡಲಾಗದೇ ಪರದೆಯ ಹಿಂದೆಯೇ ಉಳಿದ ಪದ್ಯಪಾನದ ನನ್ನ ಅಣ್ಣ, ತಮ್ಮ, ಅಕ್ಕ ಮತ್ತು ತಂಗಿಯರಿಗೆ ಏನೆಂದು ಹೇಳುವುದು. ಮಾತಿಲ್ಲ, ಹೃದಯತುಂಬಿಬರುತ್ತಿದೆಯಷ್ಟೆ.

ಇದೇ ವರ್ಷದ ಆದಿಯಲ್ಲಿ ಶುರುವಾದ ಈ ಕಾರ್ಯಕ್ರಮದ ಕಲ್ಪನೆ-ಯೋಜನೆಗಳು ಈ ಮಟ್ಟಕ್ಕೆ ಬ೦ದು ಮುಟ್ಟಿ, ಪ್ರಪ೦ಚದಾದ್ಯ೦ತ ಸಹೃದಯರು ಕೂತು ನೋಡುವಂತಾಗಿದೆಯೆಂದರೆ, ಇದರ ಹಿಂದಿನ, ಕೈ, ತಲೆ ಮತ್ತು ಮನಸ್ಸುಗಳು ಎಂತಹಾ ನಿಸ್ವಾರ್ಥತೆಯಿಂದ ದುಡಿದಿರಬೇಕೆಂಬುದನ್ನು ನೀವೆಲ್ಲರೂ ಊಹಿಸಬಲ್ಲಿರಿ. ಜೊತೆಗೆ ಆ ರೀತಿಯ ನಿಸ್ವಾರ್ಥತೆ ಮತ್ತು ಅಗಾಧವಾದ ಪ್ರೀತಿಯ ಕೇಂದ್ರ ಯಾರೆಂದುಕೂಡ ಮತ್ತೆಹೇಳಬೇಕಿಲ್ಲ.

ಹೀಗೆ ಅನೇಕರೀತಿಯಲ್ಲಿ ನಮಗೆ ನೆರವಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಈ ಎಲ್ಲರಿಗೂ ನಮ್ಮ ಅನಂತಾನಂತ ವಂದನೆಗಳು:

೧. ಇನ್ಫೋಸಿಸ್ ಪ್ರತಿಷ್ಠಾನ – ಉದಾರ ಧನ ಮತ್ತು ಪ್ರೀತಿಯ ಪ್ರೋತ್ಸಾಹ ನೀಡಿ ಹರಸಿದ್ದಕ್ಕೆ ನಮನಗಳು. ಸುಧಾಮೂರ್ತಿಯವರಿಗೆ ಮತ್ತು ಅವರನ್ನು ಪದ್ಯಪಾನಕ್ಕೆ ಪರಿಚಯಿಸಿದ ಲಕ್ಷ್ಮೀ ಉಪಾಧ್ಯಾಯ ಅವರಿಗೆ.

೨. ಅಭಿನವ ಡಾನ್ಸ್ ಕಂಪನಿ ಮತ್ತು ಪ್ರಭಾತ್ ಕಲಾವಿದರು – ರ೦ಗವಿನ್ಯಾಸ, ಬೆಳಕು, ಧ್ವನಿ ಮತ್ತು ನಮ್ಮ ಬೆನ್ನು ತಟ್ಟಿ ಜೊತೆಜೊತೆಗೇ ನಡೆದು ಹಾರೈಸಿದ ರಾಜೇಂದ್ರ ಮತ್ತು ನಿರುಪಮಾರವರು.

೩. ಆರ್. ವಿ. ಸಂಸ್ಕೃತ ಅಧ್ಯಯನಕೇಂದ್ರ – ಉಚಿತವಾಗಿ ಮಂಗಳಮಂಟಪವನ್ನು ನೀಡಿದ್ದಲ್ಲದೆ, ಕಾರ್ಯಕ್ರಮಕ್ಕೆ ಯಾವುದೇ ರೀತಿಯ ವಿಘ್ನವಾಗದಂತೆ ನೋಡಿಕೊಂಡ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಸಿಬ್ಬಂದಿಗೆ, ಪ್ರಾಂಶುಪಾಲರಾದ ಎ.ಎಸ್.ಜಲಜಾರವರಿಗೆ ಮತ್ತು ವಿಶೇಷವಾಗಿ ನಮ್ಮ ಹಿತೈಷಿಗಳಾದ ಡಾ|| ಎಸ್. ರಂಗನಾಥ್ ಅವರಿಗೆ.

೪. ಧಾತು, ಬೆಂಗಳೂರು – ಕಾರ್ಯಕ್ರಮದ ಆಯೋಜನೆಯ ಪ್ರತಿಹಂತದಲ್ಲಿಯೂ ಅವರ ಅನುಭವಗಳನ್ನು ಧಾರೆಯೆರೆದು, ಕಲ್ಪನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸಿದ ಮತ್ತು ಮೆರವಣಿಗೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಹಾಗೂ ಅಚ್ಚುಕಟ್ಟಾಗಿ ನಿರೂಪಣೆಯನ್ನು ನಡೆಸಿಕೊಟ್ಟ ಅನುಪಮ ಮತ್ತು ವಿದ್ಯಾಶಂಕರ್ ಹೊಸಕೆರೆ.

೫. ವಿನೋದ್ ಕುಮಾರ್ – ಶತಾವಧಾನದ ಕೆಲಸಗಳಿಗೆ ಚಾಲನೆ ದೊರೆತದ್ದೇ ಅವಧಾನಿಗಳ ಫೋಟೋಶೂಟ್ ನಿಂದ. ಅವಧಾನಿಗಳ ಫೋಟೋಗಳು ಇಂದು ಅನೇಕ ಪತ್ರಿಕೆಗಳಲ್ಲಿ ಮತ್ತು ಪುಸ್ತಕ, ಪೋಸ್ಟರ್ ಗಳಲ್ಲಿ ರಾರಾಜಿಸಲಿಕ್ಕೆ ಕಾರಣರಾದ ವಿನೋದ್ ಕುಮಾರ್.

೬. ವಿನಯ್ ಹೆಗ್ಗಡೆ – ಅವಧಾನ ಕಲೆ ಮತ್ತು ಶತಾವಧಾನಸಂಶನ ಪುಸ್ತಕದ ಮುಖಪುಟವಿನ್ಯಾಸ ಮತ್ತು ಅದ್ಭುತವಾದ ಪೋಸ್ಟರ್ ಗಳ ವಿನ್ಯಾಸಮಾಡಿಕೊಟ್ಟ ವಿನಯ್ ಹೆಗ್ಗಡೆ.

೭. ಶ್ರೀಶ ಕೂದುವಳ್ಳಿ – ಕಾರ್ಯಕ್ರಮದ ವೀಡಿಯೋ ಸೆರೆಹಿಡಿದು ಪ್ರಪಂಚದಾದ್ಯಂತ ರಸಿಕರು ನೋಡಲು ಸಾಧ್ಯವಾಗುವಲ್ಲಿ ಸಹಕರಿಸಿದ, ಶ್ರೀಶ ಮತ್ತು ಶ್ರೀವತ್ಸ ತಂಡ.

೮.ಸಾಹಿತ್ಯಸಿಂಧುಪ್ರಕಾಶನ – ನಮ್ಮ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮುದ್ರಿಸಿಕೊಟ್ಟ ರಾಷ್ಟ್ರೋತ್ಥಾನದ ಸಾಹಿತ್ಯಸಿಂಧುಪ್ರಕಾಶನ.

೯. ರಾಘವೇಂದ್ರ ಹೆಗ್ಗಡೆ – ಶತಾವಧಾನದ ಆಯೋಜನೆಯ ಮೂಲಕಲ್ಪನೆಯನ್ನೇ ಎತ್ತರಿಸಿದ ಹಾಗೂ ರಂಗಸಜ್ಜಿಕೆ ಮತ್ತಿತರ ಕಾರ್ಯಗಳಲ್ಲಿ ಸಹಕರಿಸಿದ ಸಕಲಾ ಸ್ಟೂಡಿಯೋದ ರಾಘವೇಂದ್ರ ಹೆಗ್ಗಡೆ.

೧೦. ಗಾಯತ್ರಿ ಪ್ರಿಂಟ್ಸ್ – ಅಚ್ಚುಕಟ್ಟಾಗಿ ಆಹ್ವಾನ ಪತ್ರಿಕೆ, ಬ್ಯಾಡ್ಜ್, ಸ್ಟಿಕರ್ ಮತ್ತಿತರೆ ಮುದ್ರಣಕಾರ್ಯಗಳಲ್ಲಿ ಸಹಕರಿಸಿದ ನಮ್ಮವರೇ ಆದ ರಜನೀಶ.

೧೧. ಶ್ರೀನಿಧಿ ಕೇಟರರ್ಸ್ – ಕಾರ್ಯಕ್ರಮದಲ್ಲಿ ಊಟೋಪಚಾರದ ಹೊಣೆಹೊತ್ತ ಶ್ರೀನಿಧಿ ಕೇಟರರ್ಸ್.

೧೨. ನಮ್ಮ ಸ್ಮರಣಸಂಚಿಕೆಗೆ ಲೇಖನ ಬರೆದುಕೊಟ್ಟ ಮತ್ತು ಆಶೀರ್ವಚನಗಳನ್ನು ನೀಡಿದ ಎಲ್ಲ ಹಿರಿಯರು.

೧೩.  ಕಾರ್ಯಕ್ರಮದ ಆಧಾರಸ್ತಂಭಗಳಾದ ಪೃಚ್ಛಕವಿದ್ವಾಂಸರು.

೧೪. ಪ್ರತಿಹಂತದಲ್ಲಿಯೂ ನಮಗೆ ಸಲಹೆ ಸಹಕಾರಗಳನ್ನಿತ್ತ ನಮ್ಮ ಸಲಹಾಸಮಿತಿಯ ಸದಸ್ಯರಾದ – ಪ್ರೊ|| ಪಿ.ವಿ. ಕೃಷ್ಣಭಟ್, ತಿಮ್ಮಪ್ಪ ಭಟ್ ಮತ್ತು ಶ್ರೀನಿವಾಸ ರಾಜು ಅವರು..

೧೫. ಈ ಕಾರ್ಯಕ್ರಮಕ್ಕೆ ಪ್ರೇರಣೆ, ಪ್ರೀತಿ, ಉತ್ಸಾಹವನ್ನು ತುಂಬಿದ ನಮ್ಮ ಸಲಹಾಸಮಿತಿಯ ಸದಸ್ಯರೂ ಆದ ನಮ್ಮೆಲ್ಲರಿಗೆ ಆತ್ಮೀಯರಾದ ಡಾ|| ಎಸ್. ಆರ್. ರಾಮಸ್ವಾಮಿಯವರು.

 

ಈ ರಸದೌತಣವನ್ನು ನಮಗೆ ಉಣ ಬಡಿಸಿದ, ನಮ್ಮೆಲ್ಲರನ್ನು ಮೂರುದಿನಗಳಕಾಲ ಮಂತ್ರಮುಗ್ಧರನ್ನಾಗಿಸಿದ ಮತ್ತು ನಮ್ಮ ಇಂದಿನ ಮೇರೆಮೀರಿದ ಆನಂದಕ್ಕೆ ಕಾರಣರಾದ, “ಶತಾವಧಾನಶಾರದಾಶಾರದಶರ್ವರೀಶಶಾಂಕ” ರಿಂದ ಈಗ ನಮ್ಮ ಮೇಲೆ ಇರುವ ಆನಂದದ ಋಣವನ್ನು ಕಡಿಮೆಗೊಳಿಸಲು ನಾವೆಲ್ಲ ಕೂಡಿ ಮು೦ದೆ ಇದೇ ರೀತಿಯಲ್ಲಿ ಶ್ರಮಿಸೋಣ, ಸಾಹಿತ್ಯ, ಸಂಸ್ಕೃತಿ, ಕಲಾಲೋಕದಲ್ಲಿ ಏನಾದರೂ ಸಾಧಿಸೋಣ ಎಂದು ಆಶಿಸುತ್ತಾ.

~ಪದ್ಯಪಾನಿ(ಎಲ್ಲರ ಪರವಾಗಿ)

ವಿ.ಸೂ. ಪದ್ಯಪಾನದ ಮುಂದಿನಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮನಸ್ಸಿದ್ದಲ್ಲಿ ಇಲ್ಲಿ ನೋಡಿ.

  55 Responses to “ಪದ್ಯಸಪ್ತಾಹ ೪೯: ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಐತಿಹಾಸಿಕ ಕ್ಷಣಗಳು”

  1. ಪದ್ಯಪಾನಮಿತ್ರರೇ!

    ಈಪರಿಯಾಯೋಜನೆಗಿ-
    ನ್ನೀಪರಿ ಮಾಧುರ್ಯಧುರ್ಯಮಹನೀಯತೆಗಂ|
    ಹಾ! ಪದ್ಯಶತಕಮಾತ್ರಮೆ?
    ಭಾಪೆಂದಿನ್ನೀಯವೇಳ್ಕುಮಲ ಕೋಟಿಯನೇ!!

    ವಿವಿಧಜಾಲಗಳಲ್ಲಿ ವಿವಿಧಮಾಧ್ಯಮಗಳಲಿ
    ವಿವಿಧಪತ್ರಿಕೆಗಳಲ್ಲಿ ವಿವಿಧಭಾಷಣಗಳಲಿ
    ವಿವಿಧಜಂಗಮವಾಣಿ-ಸಂದೇಶಕಗಳಲ್ಲಿ ವಿವಿಧಸಂವಾದಗಳಲಿ|
    ಕವಿದಿರ್ಪುದೊಂದೆ ಮಾತದು ಪದ್ಯಪಾನಿಗರ
    ತವೆ ಮನೋಹರವೆನಿಪ ಯೋಜನಸಹಸ್ರಗಳ
    ಕುವಲಯಾತ್ಮೀಯಕರಕಾಂತಿಯಂ ಪೋಲ್ವಂಥ ಶತವಧಾನವಿಧಾನದಾ ||
    (ರಾಘವಾಂಕನ ಹರಿಶ್ಚಂದ್ರಕಾವ್ಯದ “ಹರನ ಸಭೆಯೊಳಗೆ….(೧೪ – ೩೧ ಪದ್ಯವನ್ನಿದು ಆಧರಿಸಿದೆ)

  2. ಪರೋಕ್ಷವಾಗಿ ಅನುಭವಿಸಿ ಸಂತಸಪಟ್ಟ ನೂರಾರು ಜನರಲ್ಲಿ ನಾನೂ ಒಬ್ಬ. ಈಗ ಇದು ಪುಸ್ತಕವಾಗಿ ಬಿಡುಗಡೆಯಾಗುವುದನ್ನು ಕಾಯುತ್ತಿದ್ದೀನಿ.

    ಗಣೇಶರೆ- ಅಂತೂ ನಿಮಗಿಷ್ಟವಿಲ್ಲದ ವಾರ್ಧಕದಲ್ಲಿ ಪದ್ಯ ಬರೆದಿದ್ದೀರ 🙂 ಕೊನೆಯ ಸಾಲಲ್ಲಿ “ಪೋಲ್ವಂಥ ಶತವಧಾನವವಿಧಾನದಾ. ಇದಕ್ಕೆ ಬದಲಾಗಿ “ಪೋಲ್ವೀ ಶತಾವಧಾನವಿಧಾನದಾ” ಎಂದು ಹಾಕಿದರೆ ಲೇಸಲ್ಲವೆ!

    • ಪ್ರಿಯ ಶ್ರೀಕಾಂತರಿಗೆ ಧನ್ಯವಾದ. ಹೌದು; ಒಲವಿಲ್ಲದ ವಾರ್ಧಕದಲ್ಲಿ ಬರೆಯಬೇಕಾಗಿ ಬಂದಿತು. ಕಾರಣ ರಾಘವಾಂಕನ ಮೂಲಪದ್ಯದ ಹಿನ್ನೆಲೆಯಲ್ಲಿ ನನ್ನ ಭಾವವು ಮತ್ತಷ್ಟು ಪ್ರಸ್ಫುಟವಾಗುವುದೆಂದು. ಅಲ್ಲಿ ಹರಿಶ್ಚಂದ್ರನ ಸತ್ಯವ್ರತಕಥೆಯನ್ನು ಎಲ್ಲ ಲೋಕಗಳ ಜನರೂ ಆಲಿಸಿ, ಅನವರತ ಮಾತನಾಡಿಕೊಂಡು ನಲಿದರು; ಎಲ್ಲಿಯೂ ಅವನದೇ ಸುದ್ದಿ ಎಂಬ ಭಾವವಿದೆ. ಇದನ್ನು ನೆನಪಿಸುವಂತೆ ಬರೆಯಬೇಕಿತ್ತು. ಅದಕ್ಕಾಗಿ ಈ ತ್ರಾಸ:-) ಆದರೂ ನನ್ನ ವಾರ್ಧಕವಿರೋಧವನ್ನು ನೀವು ಇಷ್ಟು ಬೇಗ ಅರಿತಿರುವುದು ನಿಮ್ಮ ಕುಶಾಗ್ರಬುದ್ಧಿಗೆ ಸಾಕ್ಷಿ!!

      “ಪೋಲ್ವೀ ಶತಾವಧಾನ…”. ಇತ್ಯಾದಿ ಸವರಣೆಯನ್ನು ನೀವು ಕೈಗೊಂಡ ಕಾರಣ ಪ್ರಾಯಶಃ “ಶತವಧಾನ”ಎಂದು ನಾನು ಮಾಡಿದ ಪ್ರಯೋಗದ ’ತ’ ಹ್ರಸ್ವವನ್ನು ತಿದ್ದಲಿರಬಹುದು. ಧನ್ಯವಾದ. ಆದರೆ ಇದು ಅಪ್ಪಟ ಪಾಣಿನೀಯಕವಾದ ಪ್ರಯೋಗ. ಅವ ಮತ್ತು ಅಪಿ ಎಂಬ ಉಪಸರ್ಗಗಳನ್ನು ಅ-ಕಾರವಿರುವಂತೆ ಹಾಗೂ ಇಲ್ಲದಂತೆ ಕೂಡ ಬಳಸುವ ಅವಕಾಶವಿದೆ. ಆದುದರಿಂದಲೇ ಅವಧಾನವು ವಧಾನವಾಗುವುದು;ಅಪಿನದ್ಧವು .ಪಿನದ್ಧವಾಗುವುದು.

      • ಆಹ, ಗಣೇಶರೆ; ಇನ್ನೊಂದು ವಿಷಯವನ್ನು ತಿಳಿದುಕೊಂಡಂತಾಯಿತು

  3. ಮೊದಲಾಗಿ ಪದ್ಯಪಾನ ಬಳಗಕ್ಕೆ ನಮೋನ್ನಮಃ.ಆ ಮೂರು ದಿನಗಳು,ಜೀವಮಾನ ಪರ್ಯಂತ ಮರೆಯಲಾಗದ ಅನುಭವವನ್ನು ಕೊಟ್ಟಿವೆ.ಶಬ್ಧಗಳಲ್ಲಿ ವರ್ಣಿಸುವುದು ಅಸಾಧ್ಯವೇ ಸರಿ.ಧನ್ಯವಾದಗಳು.ನನ್ನ ಅನಿಸಿಕೆಯನ್ನು ಕಂದ ಪದ್ಯದ ಮೂಲಕ ಬಿಚ್ಚಿಟ್ಟಿದ್ದೇನೆ.
    ಬರೆಯಲ್ತೊಡಗಿರೆ ನಾನೇ
    ನೊರೆವೆಂ ? ಸೂರ್ಯಂಗೆ ಸೊಡರ ತೋರ್ಪಂತಿರ್ಕುಂ
    ಗುರುತರ ಕಾರ್ಯಮಿದು ದಿಟಂ
    ಉರಗಾಧಿಪನೋರ್ವನೇ ಸಮರ್ಥನ್ ಪೊಗಳಲ್.

    • ಪದ್ಯವು ತುಂಬ ಸೊಗಸಾಗಿದೆ. ಭಾಷೆಯ ನಿರ್ವಾಹ ಮತ್ತೂ ಚೆನ್ನ. ಕೇವಲ ಕಡೆಯ ಸಾಲಿನ ಆದಿಯಲ್ಲಿ ಸಮ್ಧಿಮಾಡಬೇಕಿದೆ. ಆದರೆ ಇದನ್ನು ಮಾಡಿದರೆ ಕಡೆಯ ಸಾಲಿನ ಛಂದಸ್ಸು ಹಾಳಾಗುತ್ತದೆ!!

  4. ಅವಧಾನದ ಪ್ರಶ್ನೋತ್ತರಗಳಿಂದ ಸಂತೋಷಿತನಾಗಿ ಮಳೆರಾಯ ಮಳೆಗರೆದನೋ
    ಅಥವಾ ಅವಧಾನದ ಸಿದ್ಧಿ ಸಾಧ್ಯತೆಗೆ ಮೆಚ್ಚಿ ಆನಂದಬಾಷ್ಪ ಸುರಿಸಿದನೋ ಅಂತೂ
    ನಮ್ಮೂರಲ್ಲಿ ಮಳೆ ಬಂದದ್ದು ಸತ್ಯ. ಅಷ್ಟಾವಧಾನಗಳನ್ನು ನೋಡಿದ್ದೆ. ಶತಾವಧಾನ ನೋಡಿರಲಿಲ್ಲ.
    ಪರೋಕ್ಷವಾಗಿ ನೋಡಿ ಆನಂದಿಸಿದವರಲ್ಲಿ ನಾನೂ ಒಬ್ಬಳು. ಇದನ್ನು ಸಾಧ್ಯವಾಗಿಸಿದ
    ‘ಪದ್ಯಪಾನಿ’ಗಳಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು.

  5. ರಾಗಣೇಶರಿಗೆನ್ನ ನಮನವ
    ಮೋಘದವಧಾನದಲಿ ಪಾಡ್ಯನು
    ರಾಗದಲಿ ತೋಯಿಸಿದ ಕೆದಿಲಾಯರಿಗೆ ನುಡಿನಮನ I
    ತೂಗಲರಿಯದ ರಸದ ಸುಧೆಯನು
    ಜಾಗರೂಕತೆಯಿ೦ದ ಸನ್ನತ
    ರಾಗಿ ಕುಡಿಸಿದ ಪದ್ಯಪಾನದ ಗೆಳೆಯರಿಗೆ ನಮನ II

    ಭೂರಿಭೋಜನವನ್ನು ಬಡಿಸಿದ
    ನೂರು ಪೃಚ್ಛಕರಿ೦ಗೆ ನಮನವು
    ಚಾರುಸ೦ಶಯಗಳನು ಕಡೆದಪ್ರಸ್ತುತಗೆ ನಮನಾ I
    ಮಾರುಹೋಯಿತಿದೆನ್ನ ತನುಮನ
    ಮೂರು ದಿನಗಳ ಕಾಲವನುದಿನ
    ಸಾರಸತ್ವದ ಗ೦ಗೆ ಸಾರಸ್ವತದಿ ಹರಿದಿರಲು II

    ಛಂದೋಬದ್ಧ ಕವನ ಕೃಷಿಗೆ ಕನ್ನಡ ಸಾಹಿತ್ಯದ ಭೂಮಿಕೆಯನ್ನು ಹಸನು ಮಾಡಿದ ಪರ್ವಕಾಲವಿದು,ಬಣ್ಣಿಸಲಸಾಧ್ಯವಾದ ಅನುಭವ !

    • ಒಳ್ಳೆಯ ರಚನಾಕ್ರಮ. ನೀವೆಂದಂತೆ ಛಂದೋಬದ್ಧಕವಿತೆಯ ರಚನೆಗಿದು ಪರ್ವಕಾಲವಾಗಲೆಂದೇ ನಮ್ಮೆಲ್ಲರ ಯತ್ನ. ನನ್ನ ಗುರುಸ್ವರೂಪರಾದ ಶ್ರೀಯುತ ಲಂಕಾ ಕೃಷ್ಣಮೂರ್ತಿಗಳು ಹೇಳುತ್ತಿದ್ದರು; ಇಂದೂ ಆಂಧ್ರದಲ್ಲಿ ಪದ್ಯಕವಿತಾರಚನೆಯ ಜೀವತ್ಪರಂಪರೆಯಿರುವುದಕ್ಕೆ ಹಾಗೂ ಆ ಬಗೆಯ ಸಾಹಿತ್ಯಕ್ಕೆ ಬೆಲೆಯಿರುವುದಕ್ಕೆ ಕಾರಣ ಅವಧಾನಗಳೆಂದೇ!

  6. ನೂರು ಕೇಳುಗರಿಂದ ಪ್ರಶ್ನೆಗ
    ಳಾರು ದಿಕ್ಕುಗಳಿಂದ ಬಂದವು!
    ಸೇರಿರುವ ಜನವುತ್ತರವ ಕೇಳುತ ಮೂಕವಿಸ್ಮಿತರು!
    ಸಾರಿದರು ಮತ್ತವಧಾನವಿದನು
    ಯಾರು ಕಂಡರೊ ಹೂವ ಮಾಲೆಯ
    ನಾರು ದೇವರ ಸೇರಿದಂತೆಯೆ ಪುಣ್ಯಗೈದವರು!

    ಮದ್ಯಪಾನಕು ಪದ್ಯಪಾನಕು ಭೇದವೊಂದೇ ಅಕ್ಕರ
    ವಿದ್ಯಮಾನವ ಕೇಳಿರೈ ಬಲು ವೈಪರೀತ್ಯವು ನಿಚ್ಚಳ
    ಮದ್ಯಪಾನವ ಮಾಡಿದರೆ ನಶೆಯಿಳಿವುದೊಂದೇ ಹೊತ್ತಿಗೆ
    ಪದ್ಯಪಾನಕೆ ತೊಡಗಿಬಿಟ್ಟರೆ ಕೊನೆಯೆಕಾಣದು ಮತ್ತಿಗೆ !

  7. ರಾಗಣೇಶರ ಕಾವ್ಯ ಧಾರೆಯು
    ಸಾಗುತಿದ್ದರೆ ರಸದಕವಳವೆ!
    ನೀಗಿತದು ಬುದ್ಧಿಯಲಿ ಕವಿದಿಹ ಬೇಸರದ ಮಬ್ಬು!
    ರಾಗ ರಂಜಿತ ಗಮಕ ಸುಧೆ ತಾ
    ನಾಗಿ ಮನಸಿಗೆ ಮುದವ ತಂದಿರ
    ಲಾಗಿಹೋದುದು ಕಾರ್ತಿಕದಲೋಕುಳಿಯ ಚೈತ್ರಋತು!

  8. ಒಂದು ಭಾಮಿನಿಯಲ್ಲಿದ್ದ ದೋಷವನ್ನು ಪರಿಹರಿಸಲು ಸ್ವಲ್ಪ ತಿದ್ದುಪಡಿಗಳೊಂದಿಗೆ ಮತ್ತೆ ಹಾಕಿರುವೆ.

    ನೂರು ಕೇಳುಗರಿಂದ ಪ್ರಶ್ನೆಗ
    ಳಾರು ದಿಕ್ಕುಗಳಿಂದ ಬಂದವು!
    ಸೇರಿರುವ ಜನವುತ್ತರವ ಕೇಳುತ ಮೂಕವಿಸ್ಮಿತರು!
    ಸಾರಿದರು ಇಂತೊಂದು ಹಮ್ಮುಗೆ
    ಯಾರು ಕಂಡರೊ ಹೂವ ಮಾಲೆಯ
    ನಾರು ದೇವರ ಸೇರಿದಂತೆಯೆ ಪುಣ್ಯಗೈದವರು!

    • ಹ೦ಸಾನ೦ದಿಯವರೇ,
      ಸೇರಿ/ರುವ ಜನ/ವುತ್ತ/ರವ ಕೇ/ಳುತ ಮೂ/ಕವಿಸ್ಮಿ/ತರು
      ಇಲ್ಲಿ -ಳುತ ಮೂ- ಎ೦ಬಲ್ಲಿ ಮೂರು ಮಾತ್ರೆಗಳಾದರೆ ಸರಿಯಾಗುತ್ತದೆ.(ಉದಾ: ಸೇರಿರುವ ಜನರುತ್ತರವ ಕೇಳುತಲಿ ಮೈಮರೆತು)

      • “ಸಾರಿದರು ಇಂತೊಂದು ಹಮ್ಮುಗೆ” ಇಲ್ಲಿ ವಿಸ೦ಧಿ ದೋಷವನ್ನು ತಪ್ಪಿಸಲು ”ಸಾರಿದರು ಘನತರದ ಹಮ್ಮುಗೆ” ಎ೦ದೂ ಬದಲಾಯಿಸಬಹುದು.

    • ಸೇರಿಹರುವುತ್ತರವ ಕೇಳುತ ಮೂಕವಿಸ್ಮಿತ್ರು |

      ಅಥವಾ

      ಸೇರಿರುವರುತ್ತರವ ಕೇಳುತ ಮೂಕವಿಸ್ಮಿತರು |

      ಎಂದು ಹಾಕಿಕೊಂಡರೆ ಸರಿ ಹೋಗುತ್ತೆ

  9. ಕಟ್ಟಿನೀನತ್ತ ಭಾಮಿನಿ ಕಂಬನಿಗೆ ಬಟ್ಟೆ
    ತೊಟ್ಟಿಲಾ ಕಂದಂಗೆ ಲಾಲಿತಟ್ಟೇ।
    ಗುಟ್ಟಿನಾವೃತ್ತ ಸಾಂಗತ್ಯ ಪಾಡಂ ಪಟ್ಟು
    ಮುಟ್ಟದಾತುಂಡ ಗುಂಡಾಗಿಸಿಟ್ಟೇ।।

    (ಅವಧಾನದಿ ಕಂಡ “ವೈಶಿಷ್ಟ್ಯ” – ಬಂದ ಕಂದ, ಭಾಮಿನಿ, ವೃತ್ತ, ಸಾಂಗತ್ಯದ ಉತ್ಸಾಹದ ಹಾಡು / ಅದರ ಹಿಡಿತ,
    ಗುಟ್ಟು / ತುಂಡು = ಸಮಸ್ಯೆ / ದತ್ತಪದಿ , ಗುಂಡಾಗಿಸು = ಪರಿಹರಿಸಿದ ರೀತಿ, ಎಲ್ಲವನ್ನೂ ಮೆಚ್ಚಿ )

  10. ಶತಾವಧಾನ ಯಶಸ್ವಿಗೆ ಸಕ್ರಿಯರಾಗಿ ತೊಡಗಿಕೊಂಡಿದ್ದ ಪದ್ಯಪಾನದ ಸಕಲ ಬಂಧುಗಳಿಗೂ ಆಭಾರಿ. ಶತಾವಧಾನವೊಂದು ಅವಿಸ್ಮರಣೀಯ ಕೌತುಕ.

    ಎನ್ನೆಂಕೇಆರ್ ವಿಯಲಿ
    ನಿನ್ನೆಯೆ ನಡೆಯಿತೋ ಎಂಬಂಥಾ ಅನಿಸಿಕೆಯು
    ಕನ್ನವ ಹಾಕಿತು ಮನಕೇ
    ಸೊನ್ನೆಯು ನಾಂ ಹಲವರ ಸಾಹಸ ಗಾಥೆಯ ನೋಡೆ

    ಶಿಥಿಲ ಶಿಖರಿಣಿಯಲ್ಲಿ [ಬೆಂಗಳೂರಿನ ಮಳೆಯ ನೆನಪಿನಲ್ಲಿ ತಮಾಷೆಗಾಗಿ] ಒಂದು ಪ್ರಯತ್ನ :

    ಭಟಾ ಯಾಕೋ ಇಂದು ಬೆಂಗ್ಳೂರ್ ಸುತ್ತಾ ಮೋಡಕವಿದೂ
    ಛಟೀರೆಂದ ರೀತಿ ಗುಡುಗು ಗುಡುಗೀ ಮಳೆಯು ಸುರಿದೂ |
    ವಟಾರದ ಕಡೆಗೆಲ್ಲಾ ಮೋರಿ ನೀರು ನುಗ್ಗಿ ಹರಿದೂ
    ಗಟಾರದ ಕೊಳೆಯೆಲ್ಲಾ ಮನೆಮನೆಗಳಲೀ ತಾವು ಪಡೆದೂ ||

    ಶತಾವಧಾನದ ಕುರಿತು ನನ್ನ ಪೂರ್ಣ ಅನಿಸಿಕೆ ಇಲ್ಲಿದೆ :
    http://nimmodanevrbhat.blogspot.in/2012/12/blog-post.html

    • ಟಿಪ್ಪಣಿ:

      ಭಟಾ= ಭಟ್ಟಾ,

      ವಟಾರ=ವಠಾರ [ವಠಾರವನ್ನು ಆಡುಭಾಷೆಯವರು ವಟಾರವೆಂದೂ ಬಳಸುವುದನ್ನು ಕಂಡಿದ್ದೇನೆ, ಸರಿಯೋ ತಪ್ಪೋ ತಿಳಿಯಬೇಕಾಗಿದೆ]

      • ಕಂದ ಕೈಜಾರಿದಾಗ ಮತ್ತೆ ಮೇಲೆತ್ತಿದ್ದು ಹೀಗೆ : [ಎಷ್ಟೆಂದರೂ ಕಂದ ಅಲ್ವೇ ? ]

        ಎನ್ನೆಂಕೇಆರ್ ವಿಯಲೀ
        ನಿನ್ನೆಯೆ ನಡೆಯಿತೊ ಎಂದೆನಿಸುತಿದೇ |
        ಕನ್ನವ ಹಾಕಿತು ಮನಕೇ
        ಸೊನ್ನೆಯು ನಾಂ ಹಲವರ ಸಾಹಸ ಗಾಥೆಯ ನೋಡೆ ||

        • ಮುಲುಕಿದೊಡಮೊಮ್ಮೆ ಕೈಗೇ
          ಸಿಲುಕನಲಾ ಕಂದನಯ್ಯೊ ಚಿಕ್ಕವನಿವನೇನ್ |
          ನಿಲುಕಿಕುಲುಕಿದೊಡಮಂಜನ್
          ಮೆಲುಕಿ ಪಲುಕಿಸಿದೊಡೆ ತೊಡೆಯ ಮೇಲ್ಕುಣಿವನು ತಾನ್ ||

  11. ಉಪ್ಪರಕೆ ನೆಗೆದೆದ್ದು ಕುಣಿವುದು
    ಮುಪ್ಪಡರಿ ಕಂಗೆಟ್ಟ ಮನವೂ
    ಕಪ್ಪು ಜಗದಿ ಗಣೇಶರೆಂಬೀ ಬೆಳಕು ತೋರಿರಲು
    ಸೊಪ್ಪು ಹಾಕದೆ ಪಟ್ಟ-ಪದವಿಗೆ
    ತಪ್ಪ ಖಂಡಿಸುವಂಥ ಗುಂಡಿಗೆ
    ಯೊಪ್ಪಿ ನೆರೆದರೆಯೊಮ್ಮೆ ನೋಡಲು ತಮ್ಮ ನಾಯಕನ ?

  12. ಗೊರಮನೆ, ಸಾಗರದಿಂದ ಪೃಚ್ಛಕರಾಗಿ ಬಂದಿದ್ದ ಕೆ. ಪ್ರಶಾಂತ ಮಧ್ಯಸ್ಥ ಅವರ ವಿನಯಕ್ಕೆ ಕನ್ನಡಿಯಾದ, ಅವರು ಬರೆದ ಪತ್ರದಲ್ಲಿರುವ, ಪದ್ಯಗಳು ::
    [ಅವರ ಅನುಮತಿಯನ್ನು ಭಾವಿಸಿದ್ದೇನೆ]

    ಕವಿಯೇನಲ್ಲದೊಡಾನುಮೆನ್ನ ಕರೆದುಂ ಕೈಗಿತ್ತು ಪಾರ್ಚ್ಛಕ್ಯಮಂ
    ಸುವಿಶಾಲ್ಯಂಗಳ ತೋರಿ ಸೇರಿಸಿದಿರೈ ವಿದ್ವಾಂಸ ಸನ್ಮಿತ್ರರಂ
    ಕಿವಿಯಾಗಿರ್ದೆನು ರಾ.ಗ. ಪೇಳ್ವ ನುಡಿಗಂ ಕಣ್ ಪದ್ಯಪಾನಂ ಗಡಾ
    ಸವಿಯಲ್ಕೀಮನವಾರ್ದ್ರವಾಯ್ತು ರಸದಿಂ ಮದ್ಭಾಗ್ಯಮೇನೆಂಬೆನೈ ||

    ಪದ್ಯಪಾನಕೆ ವಂದಿಪೆಂ ರಸಗಬ್ಬದೂಟವ ನೀಡ್ದಿರೈ
    ಹೃದ್ಯವಾದುದು ಕಜ್ಜಕೆಂದುರೆ ಸಜ್ಜನರ್ ಸಲೆ ದಣ್ದಿರೈ
    ವಿದ್ಯೆವಾರಿಧಿ ರಾಗಣೇಶರು ಮದ್ಯೆರಾಜಿಪ ರಂಗದೊಳ್
    ಚೋದ್ಯಮೆನ್ನನು ಮೇಲಕೇರಿಸಿ ಮಾನವೇತಕದಿತ್ತಿರೈ? ||

    ಮೋಸವಗೈದೆನೈ ನಿಮಗೆನಾ ಕವಿಯಲ್ಲವೆನುತ್ತೆ ಪೇಳದೇ
    ಹಾಸಿದ ರತ್ನಗಂಬಳಿಯ ಮೇಲರಿತುಂ ನಡೆತರುತ್ತಲಿಂ
    ಬೇಸರವಾದುದೆನ್ನ ಮನಕಂ ದಿಟಮಂ ನುಡಿವೆಂ ಅನರ್ಹನಾಂ
    ಬಾಸೆಯ ಬಲ್ಲೆನೇ? ಕರೆದು ಸತ್ಕರಗೈದಿರಿ ಪದ್ಯಪಾನಿಗರ್ ||

    • ಪ್ರಶಾಂತ ಮಧ್ಯಸ್ಥರೇ – ನೀವು ಪೃಚ್ಛಕರಾಗಿ ಬಂದು ಶತಾವಧಾನವನ್ನು ಮೆರಗಿಸಿದುದಕ್ಕೆ ಧನ್ಯವಾದಗಳು ಹಾಗೂ ವಂದನೆಗಳು.

  13. ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಇದೇ ಗಣೇಶರ ಅಷ್ಟಾವಧಾನ ಸಂಯೋಜನೆ ಮಾಡುವುದರಿಂಡ ತೊಡಗಿ ನನ್ನ ಗಣೇಶ ಸಾಹಚರ್ಯದ ನೆನಪುಗಳನ್ನು ನವೀಕರಿಸಿಕೊಳ್ಳುತ್ತಾ ಕಲಾಪದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಓಡಿದ್ದೆ. ಅಲ್ಲಿ ಭಾರೀ ಸಭಾಭವನ ತುಂಬಿ, ಮೈದಾನದ ಶಾಮಿಯಾನಕ್ಕೆ ಉಕ್ಕಿದ್ದಲ್ಲದೆ ಜಗತ್ತಿನಾದ್ಯಂತ ಅಂತರ್ಜಾಲದಲ್ಲಿ ಇದನ್ನು ಮನಸ್ಸು ತುಂಬಿಕೊಳ್ಳಲು ಉತ್ಸುಕರಾಗಿದ್ದ ಮಂದಿಗಿಂತ ನಾನೇನು ಕಮ್ಮಿ ಎಂದೇ ಮೂರನೇ ಸಾಲಿನಲ್ಲೇ ಕುಳಿತು, ಪುಸ್ತಕ, ಪೆನ್ನು ಇಟ್ಟುಕೊಂಡೇ ಅನುಭವಿಸಲು ತೊಡಗಿದ್ದೆ. ಆದರೆ ಬಲುಬೇಗನೇ ಇದು ಜಲಪಾತದಡಿಗೆ ಚೊಂಬು ಹಿಡಿದು ಸ್ನಾನಕ್ಕಿಳಿದವನ ಪಾಡಾಗಿ ಕಾಣಿಸಿತು. ಆ ಸಚೇಲ ಸ್ನಾನದ ಕಿಂಚಿತ್ ಆನಂದವನ್ನು ನಿಮಗಾಗಿ ಹಿಡಿದಿಟ್ಟಿದ್ದೇನೆ. ನೋಡ್ತೀರೇನು? – http://www.athreebook.com

  14. ಶತಾವಧಾನಿ Dr. Ganesh ಏಕೆ ನಮಗೆ ಅಸ್ಟು ಆಪ್ತವಾಗುತ್ತಾರೆ ? ಅವರ ಅವಧಾನಗಳಿಗೇಕೆ ಅಸ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ ? ಕಂಡು ಕೇಳರಿಯದ , ಸತತ ಮೂರೂ ದಿನಗಳಲ್ಲಿ ಅವ್ಯಾಹತವಾಗಿ ಇಪ್ಪತ್ತು ಘಂಟೆಗಳ ಕಾಲ ನಡೆದ ಶತಾವಧಾನಕ್ಕೆeಕೆ ದಿನದಿಂದ ದಿನಕ್ಕೆ ಆಗಮಿಸುವವರ ಸಂಖ್ಯೆ ಜಾಸ್ತಿಯಾಗಿತ್ತು ? ಪ್ರೆಕ್ಷಕರೆeಕೆ ಆ ಪರಿ ಚಪ್ಪಾಳೆ ತಟ್ಟಿ , ತಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು ? ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಎಲ್ಲರು ಎದ್ದು ನಿಂತು ( standing ovation ) ಏಕೆ ಗೌರವ ಸೂಚಿಸುತ್ತಿದ್ದರು ? ಈ ಎಲ್ಲ ವಿಚಾರವಾಗಿ ಘಂಬಿeರವಾಗಿ ಚಿಂತಿಸುವ ಅವಶ್ಯಕತೆ ಇದೆ.

    ಗಣೇಶ್ ರವರು ಬಹು ಭಾಷಾ ಪಂಡಿತರು. ನಿರರ್ಗಳವಾಗಿ ಇಂಗ್ಲಿಶ್ , ಸಂಸ್ಕ್ರತ , ಕನ್ನಡ , ತೆಲಗು , ತಮಿಳು , ಉರ್ದು ಭಾಷೆಗಳಲ್ಲಿ ಮಾತನಾಡಬಲ್ಲರು. ಸಲಿಲತವಾಗಿ ಓದಿ ಈ ಭಾಷೆಗಳಲ್ಲಿರುವ ತತ್ವ , ಸತ್ವಗಳನ್ನು ಅರಗಿಸಕೊಳ್ಳಬಲ್ಲವರು. ಹಿಂದೂ , ಕ್ರಿಸ್ತ , ಮುಸಲ್ಮಾನ ಧರ್ಮ ಗ್ರಂಥಗಳಲ್ಲಿ ಅಡಕವಾಗಿರುವ ಸತ್ಯಗಳನ್ನೆಲ್ಲ ಮಥಿಸಿ , ಶ್ರೇಷ್ಟ ಜ್ಞಾನವನ್ನು ತಮ್ಮದಾಗಿಸಿಕೊಂಡವರು. ವಿಚಾರದಂತೆ ಆಚಾರವುಳ್ಳವರು. ಆಚಾರದಿಂದಲೂ , ವಿಚಾರದಿಂದಲೂ ಈ ಭುವಿಯ ಸಕಲರನ್ನು ಏಕೋ ಭಾವದಿಂದ ಕಾಣುವವರು. ವಿಚಾರದಿಂದಲೂ , ಆಚಾರದಿಂದಲೂ ದೈವ ಮೆಚ್ಚುವ ಬ್ರಹ್ಮಚಾರೀ ಜೀವನ ಸಾಗಿಸುತ್ತಿರುವವರೆಂದು ಅವರ ನಡೆ , ನುಡಿ , ಮುಖ ಕಮಲದಲ್ಲಿ ಮಿನುಗುವ ಕಾಂತಿ ಸ್ಪಸ್ಟಪಡಿಸುತ್ತದೆ .

    ಹಾಗಾದರೆ , ಗಣೇಶರವರಂತಹ ಮೇಧಾವಿ , ಚುರುಕುತನದ ವ್ಯಕ್ತಿಗಳು ಅಲ್ಲಲ್ಲಿ ನಮ್ಮ ಕಣ್ಣಿಗೆ ಕಾಣ ಸಿಗುತ್ತಾರೆ . ಆದರೆ ಜನರೇಕೆ ಆ ಮಹಾನೀಯರುಗಳನ್ನು ಮನ್ಹಪುರ್ವಕವಾಗಿ ಒಪ್ಪಿಕೊಳ್ಳುವದಿಲ್ಲ, ಆರಾಧಿಸಬೇಕಾದಂತಹ ವಿದ್ಯಾಸಂಪನ್ನರಾದರೂ ಜನರೇಕೆ ಬಹುಸಂಕ್ಯೆಯಲ್ಲಿ ಆ ರೀತಿಯ ಮಹನೀಯರುಗಳನ್ನು ಒಪ್ಪಿಕೊಳ್ಳುವದಿಲ್ಲ ?ಆರಾಧಿಸುವದಿಲ್ಲ ? ಏಕೆ ? ಯೋಚಿಸಬೇಕಾದ ವಿಷಯ.

    ನಿಗರ್ವಿಯಾದ ಗಣೇಶರವರು ಎಲ್ಲಿಯೂ ಒಮ್ಮೆಯೂ ಇದು ಮಡಿ ಇದು ಮೈಲಿಗೆ , ಸ್ವೀಕಾರಾರ್ಹವಲ್ಲ ಎಂಬ ಭಾವನೆಯನ್ನೇ ವ್ಯಕ್ತಪಡಿಸುವದಿಲ್ಲ. ” ಏನೋ ಶಿಷ್ಯಾ , ಸೊಂಟದ ವಿಷ್ಯಾ” ಎಂಬ ಚಿತ್ರಗೀತೆಯ ಪ್ರಸ್ತಾಪಿಸುತ್ತ , ಪಂಡಿತರಿಗೂ ಇನ್ನೂ ಪೂರ್ಣಪ್ರಮಾಣದಲ್ಲಿ ನಿಲುಕಿರದ ವೇದ , ವೇದಾಂತ , ಉಪನಿಷತ್ , ಭಗವದ್ಗೀತೆ ಗಳತ್ತ ಜನರನ್ನು ಕೊಂಡೊಯ್ಯುತ್ತಾರೆ. ಎಂ . ಜಿ . ರೋಡ , ಬ್ರಿಗೆಡ್ ರೋಡ ಸುದ್ದಿ ಹೇಳುತ್ತಾ ಪ್ರೇಕ್ಷಕರ ಆಸಕ್ತಿ ಕೆರಳಿಸಿ , ವೈದಿಕ ಕಾಲಕ್ಕೆ ಹಾಗೂ ಸಂಸ್ಕ್ರತ ವಾನ್ಗ್ಮಯತೆ , ಹಳಗನ್ನಡದ ಛಂದಸ್ಸು , ಅಲಂಕಾರ ಗಳತ್ತ ಪ್ರೇಕ್ಷಕ ವ್ರನ್ದವನ್ನು ಕರೆದೊಯ್ಯುತ್ತಾರೆ. ಪ್ರಚ್ಚಕರು , ಇಂದಿನ ದಿನಗಳ ಯುವ ಜನಾಂಗ , ಯೌವನ ದಾಟಿಯೂ ಯೋನಿ ಸುಖದ ಸಖ್ಯದಿಂದ ಹೊರಬರಲಾರದವರ ಆಸಕ್ತಿ ಕೆರಳಿಸುವಂತಹ –

    ” ಕೈಯೋಳ್ ಪಿಡಿದು ಸ್ತನಗಳೆರಡರ , ಕಚ್ಚಿದನು ಸೊಂಟಕ್ಕೆ ತಾನಾಗ ”

    ಎಂಬಂತಹ ಸಮಸ್ಯಾ ಪೂರ್ತಿ ಪ್ರಶ್ನೆಯನ್ನು ಶಾಂತ ಭಾವದಿಂದ ಈ ಬ್ರಹ್ಮಚಾರಿ ಸ್ವೀಕರಿಸಿ , ಸಮಸ್ಯಾ ಪರಿಹಾರ ನೀಡುವಾಗ ವಿದ್ವನ್ನಮಣಿಗಳೆಲ್ಲಾ ತಲೆದೂಗಿ, ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುವ ಪರಿಯನ್ನು ನೋಡಿಯೇ ಆನಂದಿಸಬೇಕು. ಈ ರೀತಿ ಪ್ರಚ್ಚಕರ ( ಪ್ರಶ್ನೆ ಕೇಳುವವರು ) ಪ್ರಶ್ನೆಗಳು ಮನದಾಲ್ಹಾಹಕೆ ದಾರಿಯಾದರೆ , ಅವಧಾನಿಗಳ ಪದ್ಯ ರಚನೆಗಳು ಬೌದ್ಹಿಕ ಕಸರತ್ತಿಗೆ ಸಾಕ್ಷಿಯಾಗುತ್ತಿದ್ದವು. ಈಗಿನ ದಿನನಿತ್ಯದ ಜೀವನ ಸಮಸ್ಯೆಗಳಲ್ಲೊಂದಾದ , ತಂಬಾಕು ಚಟದ ಅವತಾರವನ್ನು ತೋರ್ಪಡಿಸುವಂತೆ ಪ್ರಚ್ಚಕರೋರ್ವರು –
    ತಂಬಾಕು ಅಗಿದು ಅಗಿದು ಚಟ ಬಿಡಲಾರದವನೊಬ್ಬ, ಪ್ರಯತ್ನಪೂರ್ವಕವಾಗಿ ಚಟ ಬಿಡತೊಡಗಿದರೆ ಸಾಮಾನ್ಯವಾಗಿ ಬರುವ ತಲೆಸುತ್ತುವಿಕೆಯ ಕುರಿತು ಒಂದು ಆಶುಕವಿತೆಯನ್ನು ರಚಿಸುವಂತೆ ಅವಧಾನಿಗಳನ್ನು ಕೇಳಿದಾಗ ,

    ” ಚತುರ್ಮುಖ ಬ್ರಹ್ಮ್ಹದೇವನ ಸತಿಯರು ಅಸುಹೆಯಿಂದ ಬೀಡಿ , ಸಿಗರೇಟು , ಗುಟ್ಕಾ , ತಂಬಾಕನ್ನು ನಾಲ್ಕು ಬಾಯೋಳಗಿಟ್ಟು , ಬ್ರಹ್ಮದೇವನಿಗೆ ತಲೆಸುತ್ತುಬಂದು , ಆ ಸಮಯದಲ್ಲಿ ನಮ್ಮ ನಿಮ್ಮೆಲ್ಲರ ಹಣೆ ಬರಹ ಬರೆದ ಬ್ರಹ್ಮ ದೇವನಿಂದಾಗಿ ನಾವೆಲ್ಲಾ ಇಂದು , ಹಣೆ ಬರಹ ಸರಿಯಿಲ್ಲ ಎಂದು ಒದ್ದಾಡುತ್ತಿದ್ದೇವೆ ”
    ಎಂಬುದಾಗಿ ಜಗತ್ತಿನ ಎಲ್ಲ ಹಾಸ್ಯ ಕವಿಗಳನ್ನೂ ಮೀರಿಸುವ ರೀತಿಯಲ್ಲಿ ಆಶುಕವಿತೆ ರಚಿಸಿದರು.

    ಯೋಚಿಸಿ . ಈ ರೀತಿ ಶತಾವಧಾನದ ಅವಧಾನಿಯಾಗುವುದು ಎಂದರೆ ಜಗತ್ತಿನ ಎಲ್ಲ ಬದಲಾವಣೆಗಳ ಅರಿವು ಇರಬೇಕು. ಕೇವಲ ವರ್ತಮಾನದ ಅರಿವಿದ್ದರೆ ಸಾಲದು ಭೂತಕಾಲ , ಭಾವಿಶತ್ಕಾಲಗಳ ಅರಿವು , ಆಳ ತಿಳಿದಿರಬೇಕು , ತಿಳಿದಿದ್ದರೆ ಸಾಲದು , ಕೇಳುವ ಪ್ರಚ್ಚಕರು , ಪ್ರಭುದ್ದ ಸಭಿಕರು ತಲೆದೂಗುವನ್ತಿರಬೆಕು . ಆಸಕ್ತರ ಆಸಕ್ತಿ ಕುಂದದಂತೆ ಕಾರ್ಯಕ್ರಮ ಮುನ್ನಡೆಸುವ ಜವಾಬ್ದಾರಿಯೂ ಅವಧಾನಿಯದೆ ಆಗಿದೆ. ಒಂದೆರಡು ಘಂಟೆಗಳ ಕಾರ್ಯಕ್ರಮವಲ್ಲ. ಮೊದಲನೇ ದಿನ ಮೊದಲನೇ ಸುತ್ತಿನಲ್ಲಿ ಹೇಳಿದ್ದು , ಕೇಳಿದ್ದು ನೆನಪಿನಲ್ಲಿಟ್ಟು , ಮುಂದಿನ ಹಂತದಲ್ಲಿ ಮುಂದಿನ ಸಾಲನ್ನು ಹೇಳಬೇಕು. ಸಭಿಕರು ಮರೆತರೆ ನಡೆದೀತು ! ಯಾಕೆಂದರೆ ಹಿಂದೆ ಹೇಳಿದ್ದನ್ನು ನೆನಪಿಸಿ ಮುಂದೆ ಸಾಗುವದೂ ಅವಧಾನಿಯದೆe ಕೆಲಸ. ಶತಾವಧಾನದಲ್ಲಿ ನೂರು ಜನ ಪ್ರಚ್ಚಕರು ಕೇಳುವ ಸಮಸ್ಯೆ , ಪ್ರಶ್ನೆಗಳನ್ನು ನೆನಪಿನಲ್ಲಿಟ್ಟು , ಸಮಾಧಾನಕರವಾಗಿ ವ್ಯಾಕರಣ ಶಾಸ್ತ್ರಕ್ಕೆಲ್ಲೂ ಕುಂದು ಬರದಂತೆ , ಅವಧಾನಿ ಮುನ್ನಡೆಯಬೇಕು. ಅವಧಾನಿಯು ಈ ಎಲ್ಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ , ತನ್ನ ವಿದ್ವತ್ತನ್ನೇ ಪಣಕ್ಕಿಟ್ಟು ಯೋಚಿಸುವಾಗ , ಅವಧಾನಿಯ ಸ್ಮರಣ ಶಕ್ತಿ ಕುಂದಿಸಲು , ಅವಧಾನಿಯ ದಾರಿ ತಪ್ಪಿಸಲು , ಅವಧಾನಿ ಕೊeಪಗೊಳ್ಳಲು , ಕೋಪದ ತಾಪದಲ್ಲಿ ಸಿಲುಕಿ ವಿಲ ವಿಲ ಒದ್ದಾಡುವಂತೆ , ಇಲ್ಲ ಸಭೆ ಬಿಟ್ಟು ಓಡೋಡುವಂತೆ ಮಾಡಲು , ಅವಧಾನಿಯ ಎಲ್ಲ ಸಮಸ್ಯೆಗಳಿಗೆ ಕಳಸ ಪ್ರಾಯದಂತಹ ಸಮಸ್ಯೆ ಸ್ರಸ್ಟಿಸಲು , “ಅಪ್ರಸ್ತುತ ಪ್ರಸಂಗಿ “ಎಂಬ ನಾಮಧೇಯ ಹೊತ್ತ ಬಲಿತ ಮೆದುಳೊ0ದು ಕಾಯುತ್ತಿರುತ್ತದೆ , ಕಾಡುತ್ತಿರುತ್ತದೆ.

    ಈ ಶತಾವಧಾನದಲ್ಲಿ ಪ್ರಚ್ಚಕರು ಸಮಸ್ಯಾಪೂರಣ , ದತ್ತಪದೀ , ಆಶುಕವಿತ್ವ , ಕಾವ್ಯವಾಚನ , ಸಂಖ್ಯಾಬಂಧ , ಚಿತ್ರ ಕವಿತೆ , ಅಪ್ರಸ್ತುತ ಪ್ರಸಂಗ ವಿಭಾಗಗಳಲ್ಲಿದ್ದರು. ನಾಲ್ಕು ಪಾದಗಳಲ್ಲಿರುವ ಪದ್ಯದ ಒಂದು ಪಾದವನ್ನು ಸಮಸ್ಯೆಯಾಗಿ ಕೊಟ್ಟಾಗ ಅದು ಅಶ್ಲೀಲವಾಗಿಯೋ , ನಿರರ್ಥಕವಾಗಿಯೋ , ಅಸಂಭಾವ್ಯವಾಗಿಯೋ ಅನಿಸೀತು ಆದರೆ ಅವಧಾನಿಗಳು ಆ ಪಾದಕ್ಕೆ ಇನ್ನೂ ಮೂರು ಪಾದಗಳನ್ನು ರಚಿಸಿ ಓದಿದಾಗ ಅದು ಅರ್ಥಪೂರ್ಣ ವಾಗಿರುತ್ತದೆ . ಈ ಪಾದಗಳ ಜೋಡಣೆಯಲ್ಲಿ ಗಣ ಛಂದಸ್ಸು ಸರಿಯಾಗಿ ವ್ಯಾಕರಣ ರೀತ್ಯಾ ಯಾವುದೇ ಅಸಂಬದ್ದತೆ ಇರುವಂತಿಲ್ಲ . ಉದಾಹರಣೆಯಾಗಿ ಹೇಳುವದಾದರೆ ಪ್ರಚ್ಚಕರು
    “ಕುಚಮಂ ಕಚ್ಚುತಲಿರ್ಪ ಯತಿಯಂ ಕಂಡೆ ” ಎಂದರೆ ಅವಧಾನಿಗಳು
    ” ಅಚಲ ಮನಸ್ಕಂ ನಿಸ್ಟಾ , ಖಚಿತಾತ್ಮಂ ತಾನೆನಲ್ಕೆ ನಿರ್ಜನವನದೊಳ್ /
    ರುಚಿರರಸಾರ್ದ್ರಸುಪಕ್ವ ಲಿ –
    ಕುಚಮಂ ಕಚ್ಚುತಲಿರ್ಪ ಯತಿಯಂ ಕಂಡೆ ”
    ಎಂದು ತಮ್ಮ ಜ್ಞಾನಭಂಡಾರವನ್ನು ಅಗೆದಗೆದು ಪ್ರೇಕ್ಷಕರಿಗೆ ರಂಜನೆ ನೀಡುತ್ತಾರೆ, ಜ್ನಾನದಾಹಿಗಳಿಗೆ ಜ್ನಾನನೀಡುತ್ತಾರೆ , ಜ್ಞಾನದ ದುರಹಂಕಾರಿಗಳನ್ನು ನಿಶಸ್ತ್ರಗೊಳಿಸುತ್ತಾರೆ. ( ಲಿಕುಚ ಎಂದರೆ ಹೆಬ್ಬಲಸಿನ ಮರ )

    ಇನ್ನೊಂದು ಸಮಸ್ಯಾ ಪುರಾಣ ಓದಿ. ಐಫೆಲ್ನಿರ್ಮಿತಿ , ತಾಜ್ಮಹಲ್ , ಕುತುಬ್ಮಿನಾರ್ ಬೆಂಗಳುರೊಳ್ ಗಡಾ ಎಂಬ ಸಮಸ್ಯೆಗೆ ಹಿಂದೆ ಇನ್ನೊಂದು ಅವಧಾನದಲ್ಲಿ ಗಣೇಶ್ರವರು ನೀಡಿದ ಸಮಸ್ಯಾ ಪರಿಹಾರ :
    ಸಾಫಲ್ಯಂ ಗಡ ಕಣ್ಗಳಿರ್ಪುದಕೆನಲ್ ಕ್ರಿಸ್ಮಸ್ ಮಹಾಪರ್ವಕೆಂ –
    ದಾ ಫಾಲಾಕ್ಷ ಜಟಾ ಕಿರೀಟ ಶಶಿಸಂಕಾಶಂ ಸುಧಾಸಾಂದ್ರ ಶೋ- /
    ಭಾಷಾಣಿ ಪ್ಲುತಮಲ್ತೆ ನೀಲಗಿರಿಯಾ ಖಾದ್ಯಂಗಳಾ ಕಾರದಿಂ –
    ಧೈಫೆಲ್ನಿರ್ಮಿತಿ , ತಾಜಮಹಲ್ , ಕುತುಬುಮೀನಾರ್ ಬೆಂಗಳುರೊಳ್ ಗಡಾ //

    ಅಂದರೆ ಕ್ರಿಸ್ಮಸ್ ವೇಳೆಯಲ್ಲಿ ಬಹುಜನರು ವಿeಕ್ಷಿಸುವ ನಿಲ್ಗಿರಿಸ್ ಕಂಪನಿಯವರ ಕೇಕ್ ಪ್ರದರ್ಶನ ಕುರಿತು ಈ ಸಮಸ್ಯಾ ಪೂರ್ತಿ ಪದ್ಯ ರಚನೆ. ಇದೆe ರೀತಿ ಈ ಶತಾವಧಾನ ದಲ್ಲೂ

    ೧) “ತೊಡೆ ನಡುವಿಹ ಬೀಜ ಕೊಡಹಿ ಬಾಯ್ಗಿಡೆ ಚೆನ್ನಂ ”
    ೨) “ಕುಡಿತ ಮಿರದ ಬಾಳು ಸೊಗವೇ ”
    ೩) “ಭುಮಿಜೆಗಾರಾಮನೆ ಪತಿನಾಲ್ಕನೆಯಾತಂ ”
    ೪) ” ರತಿಕೆeಳಿಯೋಳು ಮೈಮರೆತು ಮನೆಯವರು ಧನ್ಯರಾದರ್ ”
    ೫) “ಖಗವಲ್ಲದಹುದೆ ಸ್ತನಿಕುಲಂ ನರಂ ನಗೆಗೆeಡಿಗಲ್ಲದೇಂ ಜಗಕೀಮಹಾದ್ಭುತಂ ”
    ಮುಂತಾದ ಸಮಸ್ಯಾಪೂರ್ತಿ ಮಾಡಿ , ಗಣೇಶ್ ಅವಧಾನಿಗಳು ತಮ್ಮ ಜ್ಞಾನ ಶ್ರೆeಸ್ಟತೆ ಮೆರೆದರು.

    ಇನ್ನು ದತ್ತಪದಿ . ಪ್ರಚ್ಚಕನು ಒಂದು ನಿರ್ಧಿಸ್ಟ ವಸ್ತುವನ್ನು ಮತ್ತು ಅದರ ಭಾವವನ್ನು ನೀಡಿ ನಾಲ್ಕೂ ಪಾದಗಳಲ್ಲಿ ನಿರ್ಧರಿಸಿದ ಒಂದೊಂದು ಶಬ್ದಗಳು ಬರುವಂತೆ , ಸುತ್ತಿಗೊಂದು ಪಾದದಂತೆ ಕವನ ರಚಿಸಬೇಕು. ಪ್ರಚ್ಚಕನು ಯಾವುದೇ ಭಾಷೆಯ ಯಾವುದೇ ಶಬ್ದಗಳನ್ನು , ಯಾವುದೇ ಶೀಲ – ಅಶ್ಲೀಲ , ಸಮಂಜಸ – ಅಸಮಂಜಸ , ಪರಿವರ್ತಿತ – ಪುನರಾವರ್ತಿತ ಮುಂತಾದ ಯಾವುದೇ ಕಟ್ಟು ಪಾಡುಗಳಿಲ್ಲದೆ ಕೇಳಬಹುದು. ನೋಡಿ ಒಮ್ಮೆ ಕೇಳಿದ ದತ್ತಪದಿಯ ಮಜಾ :
    ಸೈನ್ , ಕೊಸೈನ್ , ಟ್ಯಾನ್ , ಕಾಟ್ ಶಬ್ದಗಳನ್ನು ಬಳಸಿ ಕಂದ ಪದ್ಯದಲ್ಲಿ ಯುದ್ದದ ವರ್ಣನೆ :

    ರಿಪುಸೈನ್ಯಂಗಳ್ ಕಲೆಯಲ್
    ವಿಪುಲಂ ಮ್ರತಿ , ಆರ ದಾಹಕ್ಕೋ ಸೈನ್ಯಸಮಿ-/
    ತ್ತಪನಂ ವೈಕಟ್ಯಾ0ತರ-
    ಮುಪಮಿಸಲಿಲ್ಲಂ ಸೊಗಕ್ಕೆ ಶನಿಕಾಟಮಿದೆe //

    ಗ್ರಹಿಸಿ , ಮೊದಲನೇ ಪಾದದಲ್ಲಿ ಸೈನ್ , ಎರಡನೇ ಪಾದದಲಿ ಕೊಸೈನ್ , ಮೂರನೆ ಪಾದದಲ್ಲಿ ಟ್ಯಾನ್ ಮತ್ತು ನಾಲ್ಕನೇ ಪಾದದಲ್ಲಿ ಕಾಟ್ ಶಬ್ದಗಳು ಬಂದಿವೆ.
    ಇದೆ ರೀತಿ ಅವಧಾನಿಗಳು ಈ ಶತಾವಧಾನದಲ್ಲೂ ,
    ೧) ರಾಗಿ , ಭತ್ತ , ಕಂಬು , ಹಾರಕ ಶಬ್ದಗಳನ್ನು ಬಳಸಿ ಕಿರಾತಾರ್ಜುನ ಪ್ರಸಂಗ
    ೨) ಸ್ಟಾರ್ , ಪೆಗ್ , ಕಸಬ್ , ನಿತ್ಯಾನಂದ ಶಬ್ದಗಳನ್ನು ಬಳಸಿ ಸೊಬಗಿನ ಸೋನೆಯಲ್ಲಿ ಗಣೇಶ ದೇವರ ಪ್ರಾರ್ಥನೆ
    ೩) ಹೈದರ್ , ಖಾದರ್ , ಕರೀಂ , ಮಹಮದ್ ಶಬ್ದಗಳನ್ನು ಬಳಸಿ ದೇವಿ ಸ್ತುತಿ
    ೪) ವಾನ , ಅಮೇ , ಯಾಮೂರ್ ( ತುರ್ಕಿ ಭಾಷೆಯ ಶಬ್ದ ) , ರಿಯನ್ ( ಆಫ್ರಿಕಾ ಭಾಷೆಯ ಶಬ್ದ ) ಬಳಸಿ ಪದ್ಯ
    ೫ ) ಕಡು , ಬಡವ , ಪರಮ , ಸುಖಿ ಶಬ್ದಗಳನ್ನು ಬಳಸಿ ಕಂದ ಪದ್ಯ
    ೬) ಸಾಗು , ಚಪಾತಿ , ಪೂರಿ , ರಸಂ ಶಬ್ದಗಳನ್ನು ಬಳಸಿ ಉತ್ಪಲ ಮಾಲಾ ವ್ರತ್ತದಲ್ಲಿ

    ಹೀಗೆ ಸಾಗಿತು ದತ್ತಪದಿಯ ಚಮತ್ಕಾರ , ಶತಾವಧಾನಿಗಳ ನಾಲಿಗೆಯಲ್ಲಿ ಸರಸ್ವತಿಯ ಸುಲಲಿತ ನಾಟ್ಯ ಲೀಲೆ.

    ಮುಂದೆ ಇನ್ನೊಂದು ಅಂದರೆ ಆಶುಕವಿತೆ ರಚನೆ. ಶಾರ್ದೂಲವಿಕ್ರೀಡಿತ , ಸೀಸಪದ್ಯ , ರತ್ಹೊeದ್ಧಥ , ಕಂದಪದ್ಯ , ಚಂಪಕಮಾಲಾ ವೃತ್ತ ಗಳಲ್ಲಿ ಯಾವುದೊಂದನ್ನು ಪ್ರಚ್ಚಕ ಆಯ್ದು ಪದ್ಯಕ್ಕೊಂದು ವಿಷಯ ನೀಡುತ್ತಾನೆ . ಅವಧಾನಿ ಆವಿಶಯವನ್ನೋಳಗೋ0ಡು , ಆ ವೃತ್ತ ದಲ್ಲಿ ಕವಿತೆ ರಚಿಸಬೇಕು. ಈ ಶತಾವಧಾನದಲ್ಲಿ ” ಸೋರುತಿಹ ನಲ್ಲಿ ( ಕೊಳಾಯಿ ) ಗೆ ಬಟ್ಟೆ ಸುತ್ತಿದ ವಿಷಯ ಕುರಿತು ರಚಿಸಿದ ಕಂದ ಪದ್ಯ :

    ಸೋರುವ ನಲ್ಲಿಗೆ ಬಟ್ಟೆಯ ಚೂರೆ
    ಕಾರಿಪುದಂತೆ ಗಾಂಧಾರಿಯನ್ತೊಲ್
    ನೂರು ಜನ ಮಕ್ಕಳಿರಲ್ , ತೋರದ ಕಂಗಳಿಗೆ
    ಕಟ್ಟೆ ಬಟ್ಟೆಯ ನೋಡಲ್

    ಕಾರ್ಪೋರೇಶನ್ ನವರು ಗಿಡ ನೆಟ್ಟು ಬೇಲಿ ಹಾಕಿ , ಯಾರದೋ ಹೆಸರು ಬರೆದು , ನೀರೆರೆಯದೆ ಆ ಗಿಡ ಸೊರಗಿದೆ ಕುರಿತು , ಕಂದ ಪದ್ಯ :

    ಪೆಸರ್ವೆತ್ತೋಡ ನೀ ನೆಲದೊಳ್ ಸಸಿಗೆಲ್ಲಿಯ ಬಾಳ್ಪೆ
    ಬಾಡಿ ಬಳಲುವದೆe ಫಲಂ
    ಸುಸಿಲೆeನ್ ನುಡಿದೊಡೆ ಪಿರಿಯರ ಪೆಸರಂ
    ರಸಮೊಸರಿ ಬಂದು ಸಂತೈಸುವದೆಮ್ ?

    ಅದೇ ರೀತಿ ಕಾವ್ಯವಾಚನ , ತಮ್ಮ ರಾಗ , ತಾಳ , ಲಯಗಳಿಂದ , ಶ್ರುತಿ , ಸ್ವರಬದ್ಧವಾಗಿ ಹಾಡುವ ಕವನ -ಕಾವ್ಯ. ದ್ವನಿ ಸ್ವಾರಸ್ಯದಿಂದೊಡಗೂಡಿದ ವ್ಯಾಸ , ವಾಲ್ಮೀಕಿ , ಕಾಳಿದಾಸ , ಭವಭೂತಿ , ಭಾರವಿ, ಬಾಣಾದಿಗಳೂ , ಪಂಪ , ರನ್ನ , ಹರಿಹರ , ನಾಗವರ್ಮ , ಕುಮಾರವ್ಯಾಸ, ರಾಘವಾಂಕ, ಲಕ್ಶ್ಮಿeಷ, ಷಡಕ್ಷರಿ , ರುದ್ರ ಭಟ್ಟರು , ಡಿ.ವಿ.ಜಿ. , ಕುವೆಂಪು , ಗೋವಿಂದ ಪೈ , ಪು.ತಿ.ನ ರವರ ಕವನಗಳನ್ನು ವಾಚಿಸುವರು. ಅವಧಾನಿಗಳು ಅದೇ ರಾಗ , ಶ್ರುತಿ , ತಾಳ , ಲಯಗಳಲ್ಲಿ ಕವಿಗಳ ಹೆಸರು ಹೇಳುತ್ತಾ , ಕವಿಯ ಶ್ರೇಷ್ಟ ಗುಣಗಳನ್ನು ಪ್ರೇಕ್ಷಕರ ಗಮನಕ್ಕೆ ತರುತ್ತ ಆಶುಕವಿತೆ ರಚಿಸಿ ಹಾಡುವರು. ಈ ಶತಾವಧಾನ ತುಮ್ಬುಗನ್ನಡದ ಶತಾವಧಾನವಾದ್ದರಿಂದ ಕನ್ನಡ ಕವಿ ಪುಂಗವರ ಶ್ರೇಷ್ಟ ಕವನಗಳನ್ನು , ಜನಪ್ರಿಯ ಗಮಕಿ ಕೆದಿಲಾಯರವರ ಸಿರಿ ಕಂಠ ದಲ್ಲಿ ಆಸ್ವಾದಿಸುವದು ಒಂದು ರೋಮಾಂಚಕ ಅನುಭವವಾಗಿತ್ತು. ಕೆದಿಲಾಯರ ಸಿರಿಕಂಟಕ್ಕೆ ಮುಕುಟಪ್ರಾಯವಾಗಿ ನಮ್ಮ ಜನಾನುರಾಗಿ ಡಾ. ರಾ. ಗಣೇಶ್ ರವರ ಜ್ಞಾನ ಭಂಡಾರ , ದ್ವನಿ ಮಾಧುರ್ಯ ಸವಿಯುವದೇ ಒಂದು ಭಾಗ್ಯ.

    ಸಂಖ್ಯಾ ಬಂಧ . ಇದು ಪದಬಂಧವಿದ್ದಂತೆ. ಆರಂಭದಲ್ಲಿ ಪ್ರಚ್ಚಕರು ಅವಧಾನಿಗೆ ಒಂದು ಮೊತ್ತದ ಸಂಖ್ಯೆ ಹೇಳಿ , ಸಂಖ್ಯಾ ಬಂಧದ ಮನೆಗಳಲ್ಲಿ ತುಂಬಬೇಕಾದ ಸಂಖ್ಯೆಗಳನ್ನು , ಆಗಾಗ ಅವಧಾನದ ಮಧ್ಯೆ ಯಾವಾಗ ಬೇಕಾದರೂ ಅವಧಾನಿಯನ್ನು ತಡೆದು ಕೇಳುತ್ತಾರೆ. ಅವಧಾನಿಯು ದೀರ್ಘ ಯೋಚನೆಯಲ್ಲಿದ್ದಾಗ, ಇನ್ನೊಬ್ಬ ಪ್ರಚ್ಚಕರ ಸಮಸ್ಯೆ ಬಿಡಿಸುತ್ತಿದ್ದಾಗ ಮುಂತಾದ ಸಮಯದಲ್ಲಿ ಅವಧಾನಿಯ ಯೋಚನಾಲಹರಿಯನ್ನು ವಿಘ್ನಗೊಳಿಸಲು ಮತ್ತು ಅವಧಾನಿಯ ನೆನಪಿನ ಶಕ್ತಿಯನ್ನು ಒರೆಗೆ ಹಚ್ಚಲು ಇರುವದೀ ಸಂಖ್ಯಾ ಬಂಧ.

    ಪ್ರಚ್ಚಕನು ಅವಧಾನಿಗೆ ಚಿತ್ರವೊಂದನ್ನುವಿವರಿಸಿ , ಆ ಚಿತ್ರದ ಭಾವ , ವಿಷಯ ಸರಿಹೊಂದುವಂತೆ ಚಿತ್ರ -ಕವಿತೆ ರಚಿಸಲು ಕೋರುತ್ತಾನೆ .

    ಇನ್ನು ಅಪ್ರಸ್ತುತ ಪ್ರಸಂಗಿ. ಜನರೆಲ್ಲಾ ಒಪ್ಪಿಕೊಂಡಿರುವದು ಅಧಿಕಪ್ರಸಂಗಿ ಎಂದು. ಈ ವ್ಯಕ್ತಿಯ ಕೆಲಸವೇ ಅವಧಾನಿಯ ದಾರಿತಪ್ಪಿಸುವದು. ಲೋಕಜ್ನಾನವೆಲ್ಲ ಇರುವವನಾದರೆ ” ಅವಧಾನಿಗಳೇ ಇಂದು ನಿಮ್ಮ ಕೈಯಲ್ಲಿ ಬಾಟಲಿ ಹಿಡಿದಿದ್ದಿರಲ್ಲ “ಎಂದು ಕುಚೋದ್ಯದ ಪ್ರಸ್ನೆ ಕೇಳಿ ಅವಧಾನಿಗೆ ಕಸಿವಿಸಿ ಮಾಡಬಹುದು. ಅದೇ ರೀತಿ ಜಾಣ ಅವಧಾನಿ ” ಎತ್ತಿಗೆ ಔಷಧ ತರಲು ಬಾಟಲಿ ಕೈಯಲ್ಲಿ ಹಿಡಿದಿದ್ದೆ ” ಎಂದುತ್ತರ ನೀಡಬಹುದು. ತಿರುಗಿ ಅಪ್ರಸ್ತುತ ಪ್ರಸಂಗಿ ” ಆದರೆ ಅವಧಾನಿಗಳೇ ತೂರಾಡುತ್ತಿದ್ದಿರಲ್ಲ ” ಎಂದರೆ , ನೀವು ತೂರಾಡುತ್ತಿದ್ದರಿಂದ , ಹಾಗೆ ಕಾಣಿಸಿತು , ಈಗ ನೋಡಿ ! ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೆeಲಿಸಬಹುದು. ಈ ಅಪ್ರಸ್ತುತ ಪ್ರಸಂಗಿ ಅವಧಾನಿಗಳೇ “ಕಾಮಕ್ಕೆ ಕೊನೆ ಎಂದು ? ” ಎಂದು ಬ್ರಹ್ಮಚಾರಿ , ಅವಧಾನಿ ಗಣೇಶ್ ರವರನ್ನು ಕೇಳಿದಾಗ , ” ಕಾಮಕ್ಕೆ ಫುಲ್ ಸ್ಟಾಪ್ ಇಲ್ಲ , ನೀವೇ ನೋಡಿ , ಇಂಗ್ಲಿಶ್ ನಲ್ಲಿ i.e ಬರೆಯುವಾಗ ಫುಲ್ ಸ್ಟಾಪ್ ಮೊದಲಿಗೆ ,ಆಮೇಲೆ ಕೊಮಾ ಎಂದು ನಗೆಗಡಲಲ್ಲಿ ತೇಲಿಸಿದರು. ಮುಂದುವರಿದು ಕಾಮವನ್ನು ಗೆಲ್ಲಲಾಗುವದಿಲ್ಲ , ಕಾಮಕ್ಕೆ ಸೋತು ಮಗ , ಮಗಳನ್ನು ಪಡೆದು , ಸಮಾಧಾನ ಕಂಡು ಸಮ್ರದ್ಧ ಜೀವನ ಸಾಗಿಸಬೇಕೆಂದು , ಈ ಬ್ರಹ್ಮಚಾರಿ ಸೋದಾಹರಣವಾಗಿ ವಿವರಿಸಿದರು . ಎಲ್ಲರೂ ತಲೆ ದೂಗಿದರು , ತಲೆ ಬಾಗಿದರು ಈ ವ್ಯಾಖ್ಯಾನಕೆ . ಅವಧಾನಿಗಳೇ ವಿವರಣೆ ಬೇಡ ಹೌದು , ಇಲ್ಲ ಒಂದೇ ಉತ್ತರ ಕೊಡಿ ಎಂದು ” ನೀವು ಹೆಂಡ ಕುಡಿಯುವದು ಬಿಟ್ಟಿದ್ದೀರನ್ತಲ್ಲ ! ಎಂದು , ಅವಧಾನಿ ತೀವ್ರತರ ಯೋಚನೆಯಲ್ಲಿದ್ದಾಗ ಒಮ್ಮೆಲೇ ಪ್ರಶ್ನೆ ಎಸೆಯಬಹುದಾದ ಸೌಭಾಗ್ಯ ಈ ಅಪ್ರಸ್ತುತ ಪ್ರಸಂಗಿಯದು. ನಿಮಗೆeನೆನ್ನಿಸುವದು ? ಅವಕಾಶ ಒದಗಿದರೆ ಅವಧಾನಿಯಾಗಬಯಸುವಿರೋ ? ಇಲ್ಲ ಅಪ್ರಸ್ತುತ ಪ್ರಸಂಗಿಯಾಗಬಯಸುವಿರೋ ?

    ಡಾ.ರಾ.ಗಣೇಶ್ ರವರು ಅವಧಾನದ ಕಾಲದಲ್ಲಿ ಸದಾಕಾಲ ನಮ್ಮಲ್ಲಿ ಮನನವಾಗುವಂತಹ ನುಡಿಮುತ್ತುಗಳನ್ನು ಸುರಿಸುತ್ತಾರೆ. ಅಮ್ರತತ್ವ ಬರುವದು ಆತ್ಮ ತತ್ವದಿಂದ ಮಾತ್ರ. When we approach great people near and near , we realise they are also people ! ನನಗೆ ( ಗಣೇಶ್ ) ಒನ್ದುನೂರ ಐವತ್ತು ವರ್ಷಗಳ ಜನರ ಸಂಪರ್ಕವಿದೆ ಏಕೆಂದರೆ ಚಿಕ್ಕಂದಿನಲ್ಲಿ ಎಂಭತ್ತು ಆಯಸ್ಸಿನ ಜನಗಳೊಡನೆ ಬೆರೆಯಲು ಆರಂಭಿಸಿ ಇಂದು ಇಪ್ಪತ್ತು ಇಪ್ಪತೈದು ಆಯಸ್ಸಿನ ಜನಗಳೊಡನೆ ಬೇರೆಯುತ್ತಿದ್ದೇನೆ. ಕ್ಯಾಮೆರಾ ಹಿಡಿದು ಫೋಟೋಗ್ರಫಿ ಮಾಡುವದಿಲ್ಲ ಏಕೆಂದರೆ ಎಲ್ಲವನ್ನು ಮನಸ್ಸಿನ ಕ್ಯಾಮರಾದಲ್ಲೇ ಹಿಡಿದಿಡುವ ಬಯಕೆ. ಇಂಗ್ಲಿಷ್ , ಕನ್ನಡ , ತೆಲಗು , ತಮಿಳ್ , ಸಂಸ್ಕೃತ ಸಿನೆಮಾಗಳನ್ನು ನೋಡುತ್ತಾರೆ . ಪುಸ್ತಕಗಳನ್ನು ಓದುತ್ತಾರೆ.

    ಪ್ರಚ್ಚಕರಲ್ಲೋಬ್ಬರಾದ ನಿಜಗುಣ ಸ್ವಾಮಿಗಳು ಗಣೇಶ್ರವರ ಕುರಿತು ಪದ್ಯವನ್ನೇ ಬರೆದಿದ್ದಾರೆ. ವಿಶ್ವಕ್ಕೊಬ್ಬನೇ ಆರ್ . ಗಣೇಶ್ ಎಂದು ಸಾರ್ವತ್ರಿಕವಾಗಿ ಸಾರಿದ್ದಾರೆ.

    ಶತಾವಧಾನದ ಕೊನೆಯಲ್ಲಿ ಆತ್ಮೀಯವಾಗಿ ಡಾ. ಆರ್. ಗಣೇಶ್ ರವರನ್ನು ಸನ್ಮಾನಿಸಲಾಯಿತು. ಅಭಿಮಾನಿ ಸಭಿಕರೆಲ್ಲ ಎದ್ದು ನಿಂತು ಕರತಾಡನ ಮಾಡತೊಡಗಿದರು. ಎಷ್ಟು ಸಮಯ ಸಂದರೂ ಕರತಾಡನ ನಿಲ್ಲಲೇ ಇಲ್ಲ. ಗಣೇಶ್ ರವರು ಸೂಚಿಸಿದರೂ ಕರತಾಡನ ನಿಲ್ಲಲಿಲ್ಲ . ಗಣೇಶ್ ರವರು ಎದ್ದು ಕೈ ಮುಗಿಯುತ್ತ ತೆರೆಯ ಮರೆ ಸೇರಿದಾಗಲೇ ಧೀರ್ಘ ಕರತಾಡನ ನಿಂತಿದ್ದು.

    ಈ ಎಲ್ಲಾ ಸಾಲುಗಳ ಜೊತೆ ಇನ್ನೊಂದು ಸಾಲು ಸೇರಿಸಿದರೆ ಹೆಚ್ಚಾಗಲಿಕ್ಕಿಲ್ಲ. ನಿನ್ನೆ ( ೦೯.೧೨.೨೦೧೨ ) ಪ್ರೊ. ನಾರಾಯಣಾಚಾರ್ಯರ ಅಭಿನಂದನಾ ಸಮಾರಂಭಕ್ಕೆ ಹೋಗಿದ್ದೆನು. ಗಣೆeಶ್ರವರಿಂದ ಅಭಿನಂದನಾ ಮಾತುಗಳು ಎಂದೊಡನೆ ಕಿವಿಗಡಚಿಕ್ಕುವಂತೆ ಸಭಿಕರ ಕರತಾಡನ ಕೇಳಿ ಮೂಕ ವಿಸ್ಮಿತನಾದೆ.

    ( ದಿನಾಂಕ ೩೦.೧೧.೨೦೧೨,ಸಾಯಂಕಾಲ ೫ ರಿಂದ ೯ ; ೦೧.೧೨.೨೦೧೨ ಬೆಳಿಗ್ಗೆ ೧೦ ರಿಂದ ೨ ಮತ್ತು ಸಾಯಂಕಾಲ ೪ ರಿಂದ ೮ ಹಾಗೂ ೦೨.೧೨.೨೦೧೨ ಬೆಳಿಗ್ಗೆ ೧೦ ರಿಂದ ೨ ಮತ್ತು ಸಾಯಂಕಾಲ ೪ ರಿಂದ ೮. ೩೦ ರ ಅವಧಿಯಲ್ಲಿ ಅವ್ಯಾಹತವಾಗಿ nmkrv college , ಮಂಗಳ ಮಂಟಪ , ಜಯನಗರ ದಲ್ಲಿ ಎರಡನೇ ಶತಾವಧಾನ ಡಾ. ರಾ. . ಗಣೇಶ್ ರವರಿಂದ ನಡೆಯಿತು. ಇಪ್ಪತ್ತೊಂದು ವರ್ಷಗಳ ಹಿಂದೆ ಮೊದಲನೇ ಶತಾವಧಾನ ಭಾರತೀಯ ವಿದ್ಯಾಭವನದಲ್ಲಿ ಬೆಳಿಗ್ಗೆಯಿಂದ ರಾತ್ರಿ ಒಂದು ದಿವಸ ನಡೆದಿತ್ತು. )

    ಹರಿಹರ ಭಟ್ , ಬೆಂಗಳೂರು.
    ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ .
    ಡಿಸೆಂಬರ್ ೧೦ , ೨೦೧೨

    • ಪ್ರಿಯ ಹರಿಹರಭಟ್ಟರೇ,
      ತಮ್ಮ ಅಭಿಮಾನ-ವಿಶ್ವಾಸಗಳ ಮಹಾಪೂರದಲ್ಲಿ ನಾನು ಕೊಚ್ಚಿಹೋಗಿದ್ದೇನೆ. ದಯಮಾಡಿ ನನ್ನನ್ನು ಇಷ್ಟೊಂದು ಹೊಗಳಿಕೆಯ ಹೊನ್ನಶೂಲಕ್ಕೇರಿಸಬೇಡಿರಿ. ನಿಮ್ಮ ಮಾತುಗಳೆಷ್ಟಕ್ಕೋ ನಾನಿನ್ನೂ ಪಾತ್ರನಲ್ಲ.(ಉದಾ: ನನಗೆ ಉರ್ದೂಭಾಷೆಯು ಹಿಂದಿಯ ಜೊತೆ ಕಲೆತಿರುವ ಮಟ್ಟಿಗಲ್ಲದೆ ಮಿಗಿಲಾಗಿ ಮತ್ತೇನೂ ಬಾರದು,; ನಾನೇನೂ ದೊಡ್ಡ ಆಚಾರ-ಸಂಪ್ರದಾಯಗಳ ಆಗರವಲ್ಲ. ನನ್ನ ದೋಷ-ದೌರ್ಬಲ್ಯಗಳು ಹತ್ತಾರು. ನನ್ನಲ್ಲಿ ಯಾವ ದಿವ್ಯತೇಜಸ್ಸೂ ಇಲ್ಲ; ಐವತ್ತರ ಹರೆಯದ ಸಾಮಾನ್ಯದಕ್ಷಿಣಭಾರತೀಯನ ಮುಖವೆಷ್ಟು ಮಾತ್ರ ಬೆಳಗಬದುದೋ ಅಷ್ಟೇ ನನ್ನ ಕಾಂತಿ) ದಯಮಾಡಿ ಸಾಮಾನ್ಯನಾದ ನನ್ನನ್ನು ಹಾಗೆಯೇ ಕಾಣಿರಿ, ಇನ್ನುಳಿದವರಿಗೂ ಹಾಗೆಯೇ ಕಾಣಿಸುವಂತಿರಲಿ. ನನಗಿರುವ ಅಲ್ಪಸ್ವಲ್ಪ ಪ್ರತಿಭೆ-ವ್ಯಾಸಂಗಗಳನ್ನು ನಾನು ಯಾವ ಸೋಗಿನ ವಿನಯವೂ ಇಲ್ಲದೆ ಒಪ್ಪಿ ಹೇಳಿಕೊಳ್ಳಬಲ್ಲೆ. ಆದರೆ ದಯಮಾಡಿ ನನ್ನನ್ನು ನಾನಲ್ಲದ ಮತ್ತೊಬ್ಬ ಮಹನೀಯನನ್ನಾಗಿ ಚಿತ್ರಿಸಬೇಡಿರಿ.ನಾನು ನನ್ನ ಮಿತಿಗಳಲ್ಲಿ ಇರಲು ಅನುವು ಮಾಡಿಕೊಡಿರಿ:-). ಜೊತೆಗೆ ಪದ್ಯಪಾನದಲ್ಲಿ ಯಾವುದೇ ವ್ಯಕ್ತಿಪೂಜೆ ಬೇಡ.

      • ಗೌರವಾನ್ವಿತ ಶತಾವಧಾನಿ ರಾ. ಗಣೇಶ ರವರೆ ,

        ವಂದನೆಗಳು.

        ನನ್ನ ದೇಹಕ್ಕೆ ಐವತ್ತಾರು. ಐವತ್ತರ ದೇಹದಲ್ಲಿರುವ ಜ್ಞಾನ – ಸುಜ್ಞಾನವನ್ನು ಆರಾಧಿಸಿದ್ದೇನೆ. ಶ್ರೀರಾಮ , ಶ್ರೀಕೃಷ್ಣ , ಯೇಸು, ಪೈಗಂಬರ್ , ಜಿನ, ಬುದ್ಧ , ಮಹರ್ಷಿ ಅರವಿಂದ , ನಾರಾಯಣ ಗುರು ಯಾರೊಬ್ಬರೂ ಆರಾಧನೆಯನ್ನು ಅಪೇಕ್ಷಿಸಿಲ್ಲ. ಇಷ್ಟಪಟ್ಟವರ ಹಕ್ಕು ಆರಾಧಿಸುವದು. ನಿಮ್ಮಲ್ಲಿ ಕಂಡ ಆ ಸರಸ್ವತಿ ನೆಲೆ – ಸೆಲೆ , ಸೌಜನ್ಯ , ಸರಳತೆ , ಮುಗ್ದತೆ ಅರಿತು ಆರಾಧಿಸುತ್ತಿದ್ದೇನೆ , ನನ್ನ ಹಕ್ಕನ್ನು ಚಲಾಯಿಸುತ್ತಿದ್ದೇನೆ. ಎಲ್ಲರು ಮಾಡಿರುವದು ಇದೆe . ನಾನು ವ್ಯಕ್ತಪಡಿಸಿದ್ದೇನೆ ಅಸ್ಟೇ !

        ಪದ್ಯಪಾನ ಬಳಗದಲ್ಲಿರುವ ಎಲ್ಲರ ಬಗೆಗೆ ಅತೀವ ಅಭಿಮಾನವಿದೆ.

        ಹರಿಹರ ಭಟ್ , ಬೆಂಗಳೂರು.
        ಡಿಸೆಂಬರ್ ೧೨ , ೨೦೧೨.

      • Ganesh sir

        nanage harihara bhattara antharangada bhAvane chennagi arThavAguttade. nimmalli yAvudE rItiya dourbalyagalirabahudu. Adare nimma widwattina munde adella nagaNya. nanage saahityada bagge iruva jnAna alpavaadarU, adara bagge iruva Asakti apAra. Addarinda nAnu nimmallliruva jnana bhandAravannu poojisuttene. pustakagalinda parimita jnAna doreyabahudu. nimminda doreyuva jnAna aparimita hAgoo nimmalliruva jnAna prasaraNada chAkachakyate kElugarannu innoo mudagoLisuttade.

        widwAn sarvatra poojyate…

        roman lipiyalli barediddene. kshame irali. nAnu ee vEdikege hosa sErpade. cHandassu, vyAkaraNagala gandha gALi illada pAmara. Adare kavite, kAvya, gadyagaLu hridyavAgive. E vEdikeyalli dorakuva Anandavannu saviyuttiruttEne.

        charanakke vandane.

        prakash nayak
        udupi 9743596443

    • ಭಟ್ಟರೇ,
      ಪದ್ಯಪಾನದೊಳೀಗಲೆಂತುಟೀ ಗದ್ಯಮೋ!
      ಸದ್ಯ ಲಿಂಕಿಟ್ಟೊಡನೆ ಸಾಲ್ಗುಮಿತ್ತು
      ಆದ್ಯಹರಿಹರ ಭಟ್ಟರೇ ನೀವು ಇನ್ನೊಮ್ಮೆ
      ಪದ್ಯದಲಿ ಪರಿಸಿರೈ ಭಾವನೆಗಳ 🙂

      • ವ್ಯಾಕರ್ಣಗಳನೆಲ್ಲ ಗೋಕರ್ಣದಲೇ ಬಿಟ್ಟುಬಂದಿಹ
        ಈ ಭಟ್ಟನಿಂದೆeನು ನಿರೀಕ್ಷಿಪುರೋ
        ಅವಧಾನಿ ಗಾಳಿ ಬಿeಸಿರೆ , ಈ ಪರಿಯ
        ಪದ್ಯವನ್ ರಚಿಸಿಹನು ಈ ಭಟ್ , ಕಾಣಾ ರವೀಂದ್ರಾ !?!

      • ಛಂದಸ್ಸು ಮತ್ತು ಆದಿಪ್ರಾಸವು ಪದ್ಯಪಾನದ ಎಲ್ಲಾ ಪದ್ಯಗಳ ಜೀವಾಳ. ಅದನ್ನು ಉಳಿಸಿಕೊಂಡು, ಪದಕೋಶದ ನೆರವಿಂದ ಪದ್ಯವನೊರೆಯಿರಿ. ’ಪದ್ಯವಿದ್ಯೆ’ ಲಿಂಕನ್ನು ಗಮನಿಸಿ.ಪಂಚಮಾತ್ರಾ ಚೌಪದಿಯಲ್ಲಿ

        ವ್ಯಾಕರಣಗಳನೆಲ್ಲ ಗೋಕರ್ಣದಲೆ ಬಿಟ್ಟು
        ಸಾಕೆನುತ ಬಂದಿರ್ಪ ಭಟ್ಟ ನಾನು
        ಸೀಕರದ ಪನಿಯಾಗಿ ಅವಧಾನ ಕೆಲೆಯಿಂದು
        ಸೋಂಕಿರಲು ಜುಮ್ಮೆನುತ ಬರೆದೆನೀಗ!

        • ಮಂಗಳವಾರ ೧೮.೧೨.೨೦೧೨ ರಂದು ಕಾಣೋಣವೆe ? 9945004681

          • ಇಂದಿನ ( ೧೩.೧೨.೨೦೧೨ ) ಕನ್ನಡ ಪ್ರಭ ಪತ್ರಿಕೆಯ ಒಂಭತ್ತನೇ ಪುಟದಲ್ಲಿ ನನ್ನದೊಂದು ಲೇಖನ ಬಂದಿದೆ.ದಯಮಾಡಿ ಓದಿ . About Shatavadhani Dr. Ganesh.
            ನಾನು ಜೋಡಿಸಿದ ಅಕ್ಷರಗಳನ್ನು ಪುರಸ್ಕರಿಸಿದ ವಿ. ಭಟ್ ರಿಗೂ , ಕನ್ನಡ ಪ್ರಭ ಬಳಗದ ಎಲ್ಲ ಮಿತ್ರರಿಗೂ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತೇನೆ .
            ಲಿಂಕ್: http://www.kannadaprabha.com/pdf/epaper.asp?pdfdate=12%2F13%2F2012

            ಹರಿಹರ ಭಟ್ , ಬೆಂಗಳೂರು.

  15. ಅವಧಾನ ಸರಸ್ವತಿಯ ವರ್ಣನೆ / ಪ್ರಾರ್ಥನೆ, “ಅಷ್ಟದಳಪದ್ಮಬಂಧ”ದಲ್ಲೊಂದು ಪ್ರಥಮ ಪ್ರಯತ್ನ:

    ಪದ್ಯಗದ್ಯಪದಾಮೋದಾ ಪಙ್ಕಜಾಙ್ಕಪರಾಶರಾ |
    ಪದಚ್ಛೇದಪರಿಷ್ಕಾರಿ ಪದ್ಯವಿದ್ಯಪರಮ್ಪರಾ ||

    ಪದ್ಯ-ಗದ್ಯ ಹಾಡುಗಳ ಸಂತಸದಲ್ಲಿ, ಕಮಲದಳದಲ್ಲಿರುವ ಜ್ಞಾನಿ.
    ಪದವಾಕ್ಯ, ಪದಚ್ಛೇದಗಳಿಗೆ ಹೊಸ ಹೊಳಪನ್ನು ಕೊಟ್ಟು ಪದ್ಯವಿದ್ಯೆಯ ಪರಂಪರೆಯೇ ಆಗಿರುವ ನಿನಗೆ ನಮಸ್ಕಾರ – ಎಂಬರ್ಥ ಬರುವಂತೆ ಕಲ್ಪಿಸಲಾಗಿದೆ!

    ತಿದ್ದುಪಡಿಗೆ ಸ್ವಾಗತ. 🙂

    ಅವಧಾನಿಗಳಿಗೆ, ಪದ್ಯಪಾನ ಬಳಗಕ್ಕೆ ತುಂಬುಹೃದಯದ ಧನ್ಯವಾದಗಳು.
    ಅತಿ ನಿರೀಕ್ಷಿತ ಸಹಸ್ರಾವಧಾನವೂ ಶೀಘ್ರದಲ್ಲೇ ನಡೆಯುವಂತಾಗಲಿ ಎಂದು ಆಶಿಸುತ್ತೇವೆ.

    • ಚಿತ್ರ ಇಲ್ಲಿದೆ: http://goo.gl/3hj9w

      • ಪ್ರಿಯ ಒಪ್ಪಣ್ಣನವರೇ,

        ನಿಮ್ಮ ಪ್ರವೇಶವೇ ಚಿತ್ರ(ಬೆರಗು)ಪ್ರದವಾಗಿದೆ:-)ಸ್ವಾಗತ. ಒಳ್ಳೆಯ ಸಕರ್ಣಿಕ-ಗಮನಾಗಮನ-ಅಷ್ಟದಲಪದ್ಮಬಂಧದಿಂದಲೇ ಆಗಮಿಸಿದ್ದೀರಿ; ಧನ್ಯವಾದ. ನಮ್ಮ ಪದ್ಯಪಾನಿಗಳಿಗೆಲ್ಲ ಸೊಗಸಾದ ಸ್ಫೂರ್ತಿ-ಸವಾಲುಗಳನ್ನೂ ನೀಡಿದ್ದೀರಿ, ಸಲೆ ಸೊಗಸಿನ ಸಂತಸ!!!

        ಆದರೆ ಇದು ಆದಿಪ್ರಾಸವಿಲ್ಲದ ಕಾರಣ ಸಮಸಂಸ್ಕೃತದಲ್ಲಿರುವ ಕಾರಣ ಸಂಸ್ಕೃತಭಾಷೆಯದೇ ಹೌದೆಂದು ಊಹಿಸಲೇ? ಅಂತಿದಲ್ಲಿ ಸ್ವಲ್ಪ ವ್ಯಾಕರಣದ ಸಮಸ್ಯೆ ಬರುತ್ತದೆ:-) ಜೊತೆಗೆ ಶ್ರೀಕಾಂತರ ಪ್ರಶ್ನೆಯೂ ಇದೆ:-).. ಅಲ್ಲದೆ ಇಡಿಯ ಪದ್ಯದ ಭಾವವನ್ನು ಪ್ರತಿಯೊಂದು ಪದದ ಮೂಲಕ ಸ್ಪಷ್ಟಪಡಿಸಬೇಕಾಗಿದೆ:-).ಇರಲಿ, ಯಾವುದೇನೇ ಆಗಲಿ, ನಿಮ್ಮ ಪ್ರಥಮಪ್ರಯತ್ನವೇ ಅಸಾಧಾರಣ. ಇದಕ್ಕಾಗಿ ಮತ್ತೆ ಮತ್ತೆ ವಂದನೆ

        • ವ್ಯಾಕರಣ ದೋಷಗಳಿವೆ, ಕ್ರಿಯಾಪದಗಳಿಲ್ಲ. ಕೆಲವು ಹೃಸ್ವ-ದೀರ್ಘವಾಗಬೇಕಿದೆ. ಎಲ್ಲವೂ ನಿಜ!
          ನನ್ನ ಪದಸಂಪತ್ತಿನ ಪರಿಧಿಯಲ್ಲಿ ಅಷ್ಟದಳ ಪದ್ಮವನ್ನು ಬಂಧಿಸುವುದು, ಅದರಲ್ಲೂ “ಪ”ಕಾರ ಕೇಂದ್ರವಾಗಿಟ್ಟು – ಬಹು ತ್ರಾಸದಾಯಕವಾಗಿತ್ತು. ಮೊದಲ ಕೂಸು ಆದ್ದರಿಂದ ಹುಂಬನಂತೆ ಪೋಷ್ಟ್ ಮಾಡಿದ್ದೆ ಅಷ್ಟೆ! 😉

          ಪ್ರೋತ್ಸಾಹಕ ಮಾತುಗಳಿಗಾಗಿ ಗಣೇಶರಿಗೆ ವಂದನೆಗಳು.
          ಮುಂದಿನ ಪ್ರಯತ್ನ ಇದರಿಂದ ಒಳ್ಳೆಯದಿರಬಹುದೆಂದು ಆಶಿಸುತ್ತೇನೆ! 🙂

    • ಸೊಗಸಾಗಿದೆ. “ನಿನಗೆ ನಮಸ್ಕಾರ” ಅನ್ನುವಂತೆ ಕ್ರಿಯಾಪದ ಎಲ್ಲಿ ಬಂದಿದೆ ತಿಳಿಸ್ತೀರ?

      ಇದು ಪದ್ಮದಳ ಬಂಧವೇನೆ? ಯಾಕೆ ಕೇಳಿದೆ ಅಂದರೆ ಇಲ್ಲಿ ನೋಡಿ, ಪಾದುಕಾಸಹಸ್ರದಿಂದ ಒಂದು ಉದಾಹರಣೆಯಲ್ಲಿ ಬೇರೆ ರೀತಿ ಕೊಟ್ಟಿದೆ (ಪುಟ 19,20,21)

      http://www.prapatti.com/slokas/english/karyasiddhi.pdf

      ಕುವೆಂಪು ಮಾತಿನಲ್ಲಿ ಹೇಳುವುದಾದರೆ “ಆವ ರೂಪದೊಲು ಬಂದರು ಸರಿಯೆ ಆವ ವೇಶದೊಳು ನಿಂದರು ಸರಿಯೆ”- ಚೆನ್ನಾಗಿದೆ

      • “ಅಷ್ಟದಲಪದ್ಮ” ಬಂಧಕ್ಕೆ “ಪದ್ಮದಳ” ಅಂತ ತಪ್ಪಾಗಿ ಅಚ್ಚಿಸಿದ್ದೆ

      • ಪ್ರಿಯ ಶ್ರೀಕಾಂತರೇ,

        ಒಪ್ಪಣ್ಣನವರ ಪದ್ಮಬಂಧವು ಬಂಧನಿರ್ವಾಹದೃಷ್ಟಿಯಿಂದ ಅನವದ್ಯ, ಶುದ್ಧ.ಪಾದುಕಾಸಹಸ್ರದಲ್ಲಿರುವ ನಾಲ್ಕು ಪದ್ಮಬಂಧಗಳಲ್ಲದೆ ಮತ್ತೂ ಹತ್ತಾರು ಮಾದರಿಗಳು ನಮ್ಮೆದುರಿವೆ. ಅವುಗಳ ಪೈಕಿ ಸದ್ಯದ್ದೂ ಒಂದು.ನಾನು ತುಂಬ ಹಿಂದೆ ವರಮಹಾಲಕ್ಷ್ಮೀವ್ರತದ ಸಂದರ್ಭದಲ್ಲಿ ಒಂದೇ ದಿನದ ಅವಧಿಯಲ್ಲಿ ನೂರೆಂಟು ವಿವಿಧಪದ್ಮಬಂಧಗಳನ್ನು ರಚಿಸಿದ್ದೆ. ಆಗ ನಾನೇ ವೈವಿಧ್ಯಕ್ಕೆಂದು ಹತ್ತಾರು ಹೊಸ ಹೊಸ ಪದ್ಮಬಂಧಗಳನ್ನು ರೂಪಿಸಿಕೊಂಡಿದ್ದೆ ಕೂಡ. ಈ ಬಗೆಯಲ್ಲಿಸ್ವಯಂ ದೇಶಿಕರೇ ಹೊಸ ಪದ್ಮಬಂಧವೊಂದನ್ನು ರೂಪಿಸಿಕೊಂಡಿರುವುದು ಗಮನಾರ್ಹ(ಸಪಾದುಕಾಪದ್ಮಬಂಧ). ನನ್ನ ನಚ್ಚಿನ ಮಿತ್ರ ಡಾ|| ಆರ್. ಶಂಕರ್ ಅವರಂತೂ ಅನೇಕಬಂಧಗಳನ್ನು ಹೊಸತಾಗಿ ರಚಿಸಿದ್ದಾರೆ:-)

  16. ತುಂಬುಗನ್ನಡದೊಳಲರಿ ಮೆರೆದಿರ್ದುದೈ ಶತಾವಧಾನ
    ತುಂಬುಹೃದಯದಿಂದೊರೆದರಯ್ಯ ನಾವೀಂಟೆ ಪದ್ಯಪಾನ |
    ದುಂಬಿಸಾಲಿನೊಲು ಪೃಚ್ಛಕರ ವೃಂದ ಕಾಡಿ ಹಿಂಡಿರಲ್ಕೆ
    ಹಂಬಲದಲುಕ್ಕಿ ಸಗ್ಗದೀ ಕುಸುಮ ರಸವನೆರೆದುದಲ್ತೆ ||
    [ಸಂತುಲಿತ ಮಧ್ಯಾವರ್ತ :: ೩ + ೫ + ೩ + ೫ + ೩ + ೫ + ಉ]

    ಕಳೆದ ಕಾಲಗಳಿಂದ ವಿವಿಧ ದೇಶಗಳಿಂದ
    ಕಳಚುತ್ತ ಪರಿಧಿಗಳ ಪೂರ್ವಸೂರಿಗಳು |
    ತಳೆದು ಜೀವವ ತಮ್ಮ ಕಲೆಯು ಮೌಲ್ಯಗಳಿಂದೆ
    ಬೆಳೆಯಲೆಂಬರಸುತ್ತ ನಲಿದು ಬಂದರ್ ||

    ಮೆರೆಯಲ್ ಭಾವಗಳುಂ ಸಭಾಸದನದೊಳ್ ಛಂದೋವಿಮಾನಂಗಳೊಳ್
    ವರಲಂಕಾರದ ರೆಕ್ಕೆ ನೀಳ್ದ ಕಸುವಿಂ ಸೇರ್ದತ್ತು ಮೀಂಬಟ್ಟೆಯಂ |
    ಹರಸುತ್ತಿರ್ದುದುವೈ ರಸಧ್ವನಿಗಳುಂ ವಕ್ರೋಕ್ತಿಯಾ ಸಂಗದೊಳ್
    ಪರಮಾನಂದದಿ ಧನ್ಯನಾಗಿ ನಮಿಪೆಂ ಚಿತ್ತೈಸಿರಲ್ ಚಿತ್ತದೊಳ್ ||
    [ಮೀಂಬಟ್ಟೆ – ಗಗನ / ನಕ್ಷತ್ರ ಮಾರ್ಗ]

  17. zsÁgÀuÉAiÀÄ®¥ÀæwªÀÄ»rvÀªÀ0 ¸Á¢ü¹ºÀ, £ÀÆgÀÄ¥Àæ±ÉßUÀ¼À£ÀÄß £É£À¦0zÀ®ÄvÀÛj¥À, UËj¸ÀÄvÀgÀ£ÀÄß £Á£ÉãɣÀß°? ¥ÁjμÀzÀgÉ®ègÀ£ÀÄ ¨ÉZÀÄѨÉgÀUÁV¸ÀÄvÀ ¨Áj¨ÁjUÀÄ vÀªÀÄä ¥Àæw¨sÉAiÀÄ0 vÉÆÃgÀÄvÀÛ UÁgÀÄrUÀgÁzÀgÀ0 £À«Ä¥É¤°è ||.

  18. ತೋಟಕ ವೃತ್ತದಲ್ಲಿ ನನ್ನದಿನ್ನೊಂದು ಪ್ರಯತ್ನ.
    ಅವಧಾನವಮೋಘದಿ ಪಾಡಿದರೈ
    ಭವದೀಯ ಗಣೇಶ ನಮೋ ನಮನಂ |
    ಕವಿತಾಸುಧೆಯೊಳ್ ತಣಿದರ್ ಸಭಿಕರ್
    ಸವಿದುಂ ರಸವಂ ನೆನೆವರ್ ಸತತಂ |

  19. ಧಾರಾವಧಾನಿ:
    ಉರ್ಕಿ ಪರಿದುದು ಕಾಣ ರಸಧಾರೆಯೆಣೆಯಿರದೆ
    ಸಿರ್ಕಿರದೆ ಸುರಿವುದರ ಗುಟ್ಟದೇನೋ!
    ತರ್ಕಿಸಿರೆ ಓಂದೆರಡು ಕೇಜಿಯಿರುವುದು ಮೆದುಳು
    ಆರ್ಕಿಮಿಡಿಸನ ತತ್ತ್ವ ಸೋಲ್ವುದಲ್ಲೋ 🙂

    ಛಂದೋಸಂಭ್ರಮ:
    ಬಾಣಸಿಗನಿಲ್ಲದಿರೆ ಬೆಣ್ಣೆತುಪ್ಪದಿ ಏನು?
    ಕಾಣುವರೆ ಗತಿಯಿಲ್ಲಮೆಂಬ ಛಂದಗಳು
    ಜಾಣನಾಗಮದಿಂದೆ ಹಿರಿಹಿರಿದು ಹಿಗ್ಗಿಹರು
    ಸಾಣೆಯಂ ಕಂಡೊಲಿವ ಕತ್ತಿಯಂತೆ

    ಮಹಾಕವಿಯಾಶೀರ್ವಾದ:
    ಕಾತುರದಿ ಕಾದಿದ್ದ ಕವಿಪಂಡಿತರುಮೆಲ್ಲ
    ಸಾರ್ಥಕತೆಯಿಂ ಕೂಡೆ ನಲಿದಿರ್ಪರು
    ಪೂತರಾನಂದಭಾಷ್ಪಮದು ಪಾರೈಕೆಯೋಲ್
    ಪಾತಿಸಿತೆ ಪನಿಯಾಗಿ ನಮ್ಮಿಳೆಯಲಿ
    [ಮಾರನೆಯ ದಿನ ಮಳೆಯಾದದ್ದನ್ನು ನೆನೆಯಬಹುದು]

    ಜನೋತ್ಸಾಹ:
    ಗಾರಿಹುದು ನೆಲವಿಲ್ಲಿ ಬೇರಿಳಿಯದಂತಾಗಿ
    ಸೋರಿಹುದು ಸಾಮರ್ಥ್ಯ ಜಳಕೆ ಬಾಡಿ
    ತಾರಕದ ಮಳೆಯಾಯ್ತು ಮಂಗಳದ ಮಂಟಪದೆ
    ಬೇರುಬಿಟ್ಟಿಹರಿಂದು ಕುಳಿತಲ್ಲಿಯೇ

    ರಾಮಶ್ರೀಶಾಭಿನಂದನ:
    ಗತಿಯೊಳ್ಗೆ ಛಂದದೆನೆ ಸರ್ವಕಾರ್ಯಗಳನ್ನು
    ಹಿತದಿಂದ ನಡೆಸುತ್ತ ಬಂದಿರ್ಪಿರಿ
    ಶತವಧಾನಕೆನುತೆ ಸಹಸ್ರಾವಧಾನವನೆ
    ಮಥಿಸಿರ್ಪ ಗೆಳೆಯರ್ಗೆ ಏನೆಂಬೆನಾಂ

    ಸ್ವಯಂಸೇವಕಸನ್ನಾಹ:
    ನೆರಳಾಗಿ ಜಳದಲ್ಲಿ ನೆರವಲ್ಲಿ ಮೊದಲಾಗಿ
    ಪರಿಸಿರ್ಪ ಬೆವರಹನಿ ಕಡಿಮೆಯೇನು?
    ಮೆರೆದಿರ್ಪುದವಧಾನ ನಿಮ್ಮಗಳ ನೆರವಿನಲಿ
    ಮರೆಯಲಿರ್ದುಂ ಬೆಳಗುವಾತ್ಮದಂತೆ

  20. ಕಾರ್ಯಕರ್ತರಿಗೆ ವಂದನೆ ::
    ಪೆಸರ ಪೇಳಿ ನಾ ಸ್ಮರಿಸಲಾರೆನಿನ್ನೆನಿತೊ ಮಿತ್ರರನ್ನ
    ಎಸಕದೊಳ್ ತನುವ, ಮನವ ಮೇಣ್ಧನವನೆರೆದ ಧಣಿಗಳನ್ನ
    ಜಸವನೆಸೆದು ಪರಿಸಿರ್ದ ನಲ್ಮೆವೊಳೆಯಲ್ಲಿ ತೇಲಿ ಬಂದ
    ಒಸಗೆಯವಧಾನ ನೌಕೆ ಹರಸುವುದು ನಿಮ್ಮನೊಲ್ಮೆಯಿಂದ
    [ಎಸಕ = ಪ್ರಭೆ; ಜಸ = ಕೀರ್ತಿ; ಒಸಗೆ = ಶುಭ, ಮಂಗಳ]

  21. ಹರಿದಳೇ ವಾಕ್ ಗಂಗೆ ಯುಸಿರುಗಟ್ಟಿಸಿ ಕೊಲುವ
    ದುರಿತವನು ನೀಗಲಿಕೆ ತಾನಿಂದು ಭುವನದೊಳ್
    ತ್ವರಿತದಲಿ ದುಮುಕುತ್ತ ಜಲಪಾತದೊಳು ನುಗ್ಗಿ
    ಪರಿಪರಿಯ ತಡೆಗಳನು ನೂಕುತ್ತ ಮತ್ತವಳ್

    ಕೆಲಕಾಲ ದುಮುಕಿ ಮತ್ತೆ ಕೆಲಕಾಲ ಹರಿಯುತೆ
    ಛಳಿರೆಂದು ಮಿಂಚಾದಳೇ ದೈತ್ಯನೆದುರಿರಲ್
    ನಲಿಯುತಾ ರೂಪದಲಿ ನಾಟ್ಯವಾಡಿಬಳುಕುತೆ
    ಸುಲಭದಲಿ ತೂರಿದಳೆ ಸಂದಿಯಲಿ ಕ್ಷಣದೊಳ್

    ಹಿಮವಂತನಾ ಗಂಗೆ ಕಣ್ಣಿಗದು ಹಬ್ಬವೆನೆ
    ಸುಮನಸರ ಕಿವಿಗಿಲ್ಲಿ ತಂಪು ಕಾವ್ಯಝರಿಯಿಂ
    ಕಮನೀಯ ಕವನಗಳ ರಚಿಸುತಿರಲವಧಾನಿ
    ನಮಿಸುತಿಹರೆಲ್ಲರೀ ಪದ್ಯಭಾಗೀರಥಿಗೆ

    ಜೀವನವು ಸಾರ್ಥಕವೆನಿಸಿರಲು ಸಮಸ್ತರಿಗೆ
    ಕಾವನಿಗೆ ಕೋಟಿನಮನಗಳಿಂದು ಭಕ್ತಿಯಲಿ

    ಈ ಪದ್ಯಕ್ಕೆ ಸ್ವಲ್ಪ ಹಿನ್ನೆಲೆ ಬೇಕು. ಈಗ ಎರಡು ತಿಂಗಳ ಹಿಂದೆ ಯಮುನೋತ್ರಿ, ಗಂಗೋತ್ರಿ, ಕೇದಾರ, ಬದರಿಗಳ ಪ್ರವಾಸಮಾಡಿ ಬಂದಾಗಿನಿಂದ ಗಂಗೆ, ಹಿಮಾಲಯದ ಬಗ್ಗೆ ಬರೆಯಬೇಕೆಂದಿದ್ದೆ. ಸೋಮಾರಿತನದಿಂದ ಆಗಿರಲಿಲ್ಲ. ಶತಾವಧಾನ ಗಂಗೆಯಲ್ಲಿ ಮುಳುಗೆದ್ದ ಸಂತಸದಲ್ಲಿ ಇದನ್ನು ಬರೆದಿದ್ದೇನೆ – ಸಾನೆಟ್ ರೀತಿಯಲ್ಲಿ, ಪೂರ್ತಿಯಾಗಿ ಅಲ್ಲ. ಏಕೆಂದರೆ ಸಾನೆಟ್ ಗೆ ಅಂತ್ಯ ಪ್ರಾಸ ಮುಖ್ಯವಾದುದು, ಆದಿಪ್ರಾಸವಲ್ಲ.

    ಮೊದಲನೆಯ ಭಾಗದಲ್ಲಿ ದುರಿತಗಳು ಎನ್ನುವುದನ್ನು ಕೆಟ್ಟ ಸಾಹಿತ್ಯದಿಂದ ಬಂದಿರುವ ಕಷ್ಟಗಳು ಎಂದು ಅರ್ಥ ಮಾಡಿಕೊಳ್ಳಬಹುದು. ಅಡೆತಡೆಗಳು – ಕಲ್ಲುಬಂಡೆಗಳು – ಗಂಗೆಗೆ, ಅಪ್ರಸ್ತುತ, ಸಂಖ್ಯಾಬಂಧಗಳು ಅವಧಾನಿಗೆ..

    ಎರಡನೆಯ ಭಾಗದಲ್ಲಿ ದೈತ್ಯ – ಎನ್ನುವುದನ್ನು , ಬಹು ದೊಡ್ಡ ಬಂಡೆಗಳು ಎಂದು ತಿಳಿಯಬಹುದು.

    ವಾಕ್ + ಗಂಗೆ – ಸಂಧಿಯಾದರೆ ವಾಗ್ಗಂಗೆ ಯಾಗುತ್ತದೆಯಲ್ಲವೆ? ನನಗೆ ವಾಕ್ ಅನ್ನುವುದನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಆಸೆ. ಕೆಲವು ಗಣಗಳು ಸ್ಪಷ್ಟವಾಗಿಲ್ಲವೇನೊ.

  22. ಇನ್ನಷ್ಟು ವಿವರಣೆ :

    ಎರಡನೆಯ ಭಾಗವನ್ನು ಗಣೇಶರ ವಾಗ್ಝರಿಗೂ ಅನ್ವಯಿಸಬಹುದು. ಆಶುವಿನಲ್ಲಿ ಪದಗಳು ಧುಮುಕುತ್ತಿರುವಂತೆಯೇ ಭಾಸವಾಗುತ್ತದೆ. ಕೆಲವೊಂದು ಉಜ್ವಲವಾಗಿ ಹೊಳೆಯುತ್ತಿರುತ್ತವೆ. ಮತ್ತೆ ಕೆಲವು ಬಾಗಿ, ಬಳುಕಿ , ಅತಿ ಕ್ಲಿಷ್ಟವಾದ ಸಂದರ್ಭದಲ್ಲೂ ತೂರಿಕೊಂಡು ಚೆಲುವಿನ ಪದ್ಯ ಹೊರಹೊಮ್ಮುತ್ತದೆ. ಇದರ ಬಗ್ಗೆ ಬರೆಯುತ್ತಲೇ ಇರಬಹುದಲ್ಲವೇ?

  23. ಗಾಯತ್ರಿಯವರೆ, ಭಾವ ಚೆನ್ನಾಗಿದೆ. ಇತರೆ:
    1. ಹೇಗೂ ಆದಿಪ್ರಾಸ ಸಾಧಿಸಿದ್ದೀರಿ. ಸಮಪಾದಗಳಲ್ಲಿ ಊನಗಣವಿಟ್ಟು ಶುದ್ಧಪಂಚಮಾತ್ರಾಗಣವಾಗಿ ಸವರಬಹುದು.
    2. ‘ಜಲಪಾತದ ಹಾಗೆ ನುಗ್ಗಿ’ ಎಂಬ ಅರ್ಥ ಬರಲು ‘ಜಲಪಾತದೊಲು ನುಗ್ಗಿ’ ಎಂದಾಗಬೇಕು. ‘ಜಲಪಾತದೊಳು ನುಗ್ಗಿ’ ಎಂದರೆ ‘(ಬೇರೊಂದು) ಜಲಪಾತದೊಳಕ್ಕೆ ನುಗ್ಗಿ’ ಎಂದಾಗುತ್ತದೆ.
    3. ಎರಡನೆಯ ಪದ್ಯದ ಕೊನೆಯ ಪಾದದ ಕೊನೆಯೆರಡು ಗಣಗಳಲ್ಲಿ ೬ ಮತ್ತು ೪ ಮಾತ್ರೆಗಳಿವೆ. ಸವರುವುದೇನೋ ಸುಲಭ. ಆದರೆ, ಇಲ್ಲಿ ಅವಧಾನಿಗಳ ಮಾತೇ ವಾಕ್ ಗಂಗೆ ಎಂದಾದರೆ, ಅವಳು ಮೂರು ದಿನವೂ ಅಖಂಡವಾಗಿ ಧುಮುಕುತ್ತಿದ್ದಳು/ ಹರಿಯುತ್ತಿದ್ದಳು. ಅವಳು ‘ಸಂದಿಯಲಿ ತೂರಿದಳು’ ಎಂದರೇನೋ ತಿಳಿಯಲಿಲ್ಲ.

    • ಪ್ರಸಾದರೇ, ನಿಮ್ಮ ಅಭಿಪ್ರಾಯಗಳಿಗಾಗಿ ಧನ್ಯವಾದಗಳು.ನನ್ನ ಭಾವನೆಗಳನ್ನು ವ್ಯಕ್ತಪಡಿಸಲು 20 ಮಾತ್ರೆಗಳ 14 ಸಾಲುಗಳಾದರೂ ಬೇಕು ಎಂದು ಸಾನೆಟ್ಅನ್ನು ಆಯ್ದುಕೊಂಡಿದ್ದು. ಆದಿ ಪ್ರಾಸವು ನನಗೆ ಹೆಚ್ಚಾಗಿ ಸ್ವಾಭಾವಿಕವಾಗೇ ಬರುತ್ತದೆ.ಸಾನೆಟ್ ನಲ್ಲಿ ಅಂತ್ಯಪ್ರಾಸವಿರಬೇಕು, ಅದಕ್ಕೆ ಸ್ವಲ್ಪ ಶ್ರಮಿಸಬೇಕಾಗಿತ್ತು. ಅದನ್ನು ಮಾಡಿಲ್ಲ.
      ಹಾಗೆಯೇ ಸಾನೆಟ್ ನಲ್ಲಿ ಕೊನೆಯ 2 ಸಾಲಿನಲ್ಲಿ ಭಾವದ ತಿರುವು ಇರಬೇಕೆಂದು ಹೇಳುತ್ತಾರೆ.ಅದನ್ನೂ ಇಲ್ಲಿ ತರಲು ಪ್ರಯತ್ನಿಸಿದ್ದೇನೆ.
      ಒತ್ತಕ್ಷರಗಳು ಎರಡು ಗಣಗಳಲ್ಲಿ ಹಂಚಿಹೋಗಿವೆ. ಅದನ್ನೂ ಸರಿಮಾಡಬೇಕಾಗಿದೆ.
      ಗಂಗೆ,ವಾಕ್ ಗಂಗೆ ಇವೆರಡೂ ಕೆಲವು ಬಾರಿ ಧುಮುಕುತ್ತಾ, ಕೆಲವು ಕಾಲ ಹರಿಯುತ್ತಾ, ಕೆಲವು ಬಾರಿ ಒತ್ತಾಗಿರುವ ಬಂಡೆಗಳ ಸಂದಿಯಲ್ಲಿ ಹರಿಯುತ್ತಿರುತ್ತವೆ. ಗಣೇಶರ ವಾಕ್ ಗಂಗೆಯಂತೂ ಸಮಸ್ಯೆ, ದತ್ತಪದಿ,ಛಂದಸ್ಸುಗಳೆಂಬ ಹೆಬ್ಬಂಡೆಗಳ ಮಧ್ಯದಲ್ಲಿ ನುಸುಳುತ್ತಲೇ ಇರುತ್ತದೆಂದು ನನಗೆ ಭಾಸವಾಗುತ್ತದೆ.ಸಂದಿಯಿಂದ ಹೊರಬಂದ ಮೇಲೆ ಮತ್ತೆ ಹರಿಯುವುದೋ,ಧುಮುಕುವುದೋ ಸಾಗುತ್ತದೆ. ಅದರ ಚಿತ್ರಣವೇ ನನ್ನ ಪದ್ಯದ ಆಶಯ.

  24. In the Shataavadhaana, rasa was served through three routes – Internet, dais, and audience. I would have relished it from one of those three routes. My good fortune, it was served to me on the dais; the wise one himself instilled such yOgyatA in me.
    ತ್ರಿಧಾಕೃತಂ| ನಭ-ಸಭೆ ವೇದಿಯೊಳ್ ರಸಂ
    ವಧಾನವಂ| ಬಿಡದೆಲೆ ವೀಕ್ಷಿಸಿರ್ದಪೆಂ|
    ಬುಧಾನರೇ| ಹವಣಿಸುತೆನ್ನ ಯೋಗ್ಯನೊಲ್
    ಸುಧಾರಸಂ| ಬಳಿಯೊಳಗೀಂಟಿಸಿರ್ಪರೈ||
    (ರುಚಿರಾ)

  25. ಧಾರೆಯಿರೆ ಮೀರೆಶತಪದ್ಯಪಥ ಪನ್ಥಂ
    ಸಾರತರ ಮೇಣ್ ರಸದೆ ಮಗ್ನಮದು ಮತ್ತಂ ।
    ಸ್ಫಾರವಿರಲೂರ ಜನಕಣ್ಪಕತ ಕಜ್ಜಂ *
    ಧೀರ ವರ-ಧಾರಕಗೆ ಸತ್ವಸರ ಸಲ್ಗುಂ ।।
    (ಇಂದುನಂದನ ವೃತ್ತದಲ್ಲಿ ಹಾರಬಂಧ -“ಶತಾವಧಾನ ಶಾರ್ವರೀ ಶಶಾಂಕ” ಎಂಬ ಬಿರುದು ಪಡೆದ ಶತಾವಧಾನೀ ಆರ್ ಗಣೇಶ ಅವರಿಗೆ “ಇಂದು ನಂದನ” ಛಂದಸ್ಸಿನಲ್ಲಿ ವಂದಿಸುವುದು ಸೂಕ್ತ ಎನಿಸಿತು. ಅಲ್ಲದೆ ಹಾರಬಂಧದ ಮೂಲಕ ಗೌರವ ಸಲ್ಲಿಸಿದ ಹಾಗೂ ಆಯಿತು)
    *ಅಣ್ಪು-ಬಾಂಧವ್ಯ ,ಕತ -ಕಾರಣ ಕಜ್ಜ -ಕಾರ್ಯ
    (ಹಾರಬಂಧ-http://3.bp.blogspot.com/-bwizshz8GYs/UM6wD0yF0rI/AAAAAAAAARs/CWnzul392NQ/s1600/P17-12-12_08-46%5B1%5D.jpg)

    ಚಂಪಕ ಮಾಲೆ ।।
    ಸರಸತಿಯಾಡಿದಳ್ ಶತವಧಾನದೆ ರಾಗರ ಜಿಹ್ವೆಯೊಳ್ ಗಡಂ
    ಸುರುಚಿರ ಪದ್ಯಪಾನದೊಳು ಮತ್ತರೆನಲ್ ಸಕಲರ್ ನೋಡುಗರ್ ।
    ಧರಣಿಯೊಳೇಗಳುಂ ನೆನೆವ ಕಜ್ಜಮಿದಲ್ತೆ ಎನುತ್ತೆ ಪೃಚ್ಛಕರ್
    ಪರವಶರಾದರೈ ನಮಿಪೆನೀತೆರ ಚಂಪಕಮಾಲೆಯಿತ್ತು ನಾಂ ।।
    (ಚಂಪಕ ಮಾಲೆ ಅಂದರೆ ಸಂಪಿಗೆಯ ಮಾಲೆ ಇದರ ಮೂಲಕ ಶತಾವಧಾನಿಗಳಿಗೆ ಇನ್ನೊಂದು ಹಾರ ಸಮರ್ಪಣೆ )

    ಮದನವತಿ ।।
    ಸೊಗಯಿಸಿ ಮೂರ್ದಿನ ಜಗವನ್ನಾಂ ಮರೆತಿರ್ದೆ ಶತವಧಾನಂ
    ಯುಗಗಳ ಪಿಂತಿರ್ದ ರಾಯರ ಕಾಲದ ಸಭೆಯೆಂಬಂತೆ |
    ನಗಿಸುತ್ತೆ ವಿದ್ವದ್ವಿಷಯಗಳಂ ತಿಳಿಸುತ್ತೆ ಮೆರೆದಿತ್ತು ಮೇಣ್
    ನೊಗಪೊತ್ತ ಸಕಲರ್ಗೆ ವಂದಿಪೆಂ ಮುದದಿಂದೊಳ್ಳಿತ್ತಾಗಲೈ ।।
    (ಶತಾವಧಾನ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೆ ಮದನವತಿ ಎಂಬ ಅಪರೂಪದ ಅಂಶ ಛಂದಸ್ಸಿನಲ್ಲಿ ವಂದನೆ)

  26. ಪದ್ಯಪಾನಿಗಳಿಗೆ ನಮನಗಳು.
    ಅತ್ಯಂತ ವೈಭವದಿಂದ, ಸುಂದರವಾಗಿ ಮೂಡಿಬಂದ ಶತಾವಧಾನದಲ್ಲಿ, ನನ್ನನ್ನು ಬೆರಗುಗೊಳಿಸಿದ ಹಲವು ಅಂಶಗಳಲ್ಲಿ ಮುಖ್ಯವಾದದ್ದು ಅವಧಾನಿಗಳ ಧಾರೆ. ಅದರ ಬಗೆಗೀ ಪದ್ಯ.

    ಭರಿತೆ ತಡೆಗಳಿಂದಂ ಸ್ವರ್ಧುನೀಧಾರೆಯುಂ ಮೇಣ್
    ಶರದೃತು ಬರಲಾಗಳ್ ನಿಲ್ವುದಯ್ ವರ್ಷಧಾರೆ |
    ಪರಿಕಿಸೆ ಸಿಗದೊಂದುಂ ಧಾರೆಗೀ ಸೂಪಮಾನಂ
    ಧರೆಯೊಳಸದಳಂ ಕೇಳ್ ನೇಹಿಗಾ ! ರಾಗಧಾರೆ ||

    ಪಡೆದಿರುವ ಪ್ರಹರ್ಷದ ಅಭಿವ್ಯಕ್ತಿಗೆ ಪ್ರಹರ್ಷಿಣೀವೃತ್ತ –

    ರಾಗಂ ರಾಗದೊಳೆಸಗಲ್ ಶತಾವಧಾನ-
    ಮಂ ಗೀರ್ದೇವಿಯೆ ನಲಿದಳ್ ಪ್ರಸಾದಹೃದ್ಯೇ |
    ಭೋಗಂಗಳ್ ವಿರಸಗಳಾದವೆಲ್ಲವಂದು
    ಭಾಗಿತ್ವಂ ದಿಟಮೆಮಗಂ ಪ್ರಹರ್ಷಣೀಯಂ ||

    ಇಂತಹ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂದಿದ್ದು ನಿಜಕ್ಕೂ ನನ್ನ ಭಾಗ್ಯ. ಇದಕ್ಕೆ ಕಾರಣರಾದ ಅವಧಾನಿಗಳಿಗೆ ಹಾಗೂ ಎಲ್ಲ ಪದ್ಯಪಾನಿಗಳಿಗೆ ನನ್ನ ನತಿಶತಗಳು….:-)

  27. ಶತಾವಧಾನ, ಒಟ್ಟಾರೆ ಯಶಸ್ವಿ ಕಾರ್ಯಕ್ರಮ. ಉತ್ತಮ ಪ್ರಚಾರ, ಸುಂದರ ಏರ್ಪಾಡು [ಮಂಗಳ ಮಂಟಪದಲ್ಲಿ ಮತ್ತು ಆನ್ ಲೈನ್ ಸ್ಟ್ರೀಮಿಂಗ್]. ಪದ್ಯಪಾನ ಮತ್ತು ಇತರೆ ಆಯೋಜಕರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಇನ್ನು ಮುಂದೆ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸುವಂತೆ ಆಯೋಜಕರಲ್ಲಿ ವಿನಂತಿ. ಹಾಗೆಯೇ ಡಾ ಆರ್ ಗಣೇಶ್ ಹೆಚ್ಚು ಹೆಚ್ಚು ಅವಧಾನಿ ಗಳನ್ನು ತರಬೇತು ಮಾಡಿ, ಈ ಅವಧಾನ ಕಲೆ/ಪ್ರಕಾರವನ್ನು ಬೆಳಸಲಿ. ಈ ಕಾರ್ಯಕ್ರಮಗಳು ಕರ್ನಾಟಕದ ಇತರೆ ನಗರ / ಜಿಲ್ಲಾ ಮಟ್ಟಕ್ಕೂ ತಲುಪಿ, ಹೆಚ್ಚಿನ ಜನರನ್ನು ತಲುಪುವಂತಾಗಲಿ.

  28. ಶತಪೃಚ್ಛಕಸ೦ಕುಲನಿ-
    ರ್ಮಿತಬ೦ಧಗಳಿ೦ ಗಣೇಶಬ೦ಧನ ಯತ್ನ೦
    ಮಿತಿಯಿರದಾಗಸದಳತೆಯ
    ಸ್ಥಿತಿಯ೦ ಪೋಲ್ವುದು ಮರಳ್ ಹರಳುಗಳನಿಡುತಲ್

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)