Jan 062013
 

ಈಮೇಲ್, ಚಾಟ್, ಗ್ರಾಮ್, ಫೋನ್(ಅಥವಾ ಪೋನ್) ಈ ಪದಗಳನ್ನು ಉಪಯೋಗಿಸಿ ವಕ್ರಮಾರ್ಗದ ರಾಜಕಾರಣಿಯು ಉದಯೋನ್ಮುಖ ರಾಜಕಾರಣಿಗೆ ಕೊಡುವ ಕಿವಿಮಾತನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ವಿವರಿಸಿ.
(ರಾಘವೇಂದ್ರ ಹೆಬ್ಬಳಲು ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)

  93 Responses to “ಪದ್ಯಸಪ್ತಾಹ – ೫೩; ದತ್ತಪದಿ”

  1. ಮಾಟವೀಮೇಲೇರುವಾಟದೀ ಪಾಟವಂ
    ಚಾಟಿಯಿಲ್ಲದೆ ಬುಗುರಿಯಾಡಿಪಾತಂ
    ಘಾಟಿಹಿರಿರಾಜಕಾರಿಣಿ ಪೇಳೆ ಫೋನೊಳಮ್
    ನಾಟಿತೈ ಶಿಷ್ಯಗಾ ಕುಗ್ರಾಮದೊಳ್ ।।

    ( ದಿಲ್ಲಿಯ ಹಿರಿರಾಜಕಾರಿಣಿಯ ವಕ್ರ ವಿದ್ಯೆ, ಹಳ್ಳಿಯ ಶಿಷ್ಯನಿಗೆ ಫೋನಿನಮೂಲಕ ತಲುಪಿದೆ ಎನ್ನುವ ಅರ್ಥದಲ್ಲಿ. ಬಿ.ಎಸ್.ಏನ್.ಎಲ್ ಉದ್ಯೋಗಿಯಾದ ನನಗೆ, ಕುಗ್ರಾಮದಲ್ಲೂ ಲಭ್ಯವಿರುವ ನಮ್ಮ ಸೇವೆಯ ಹೆಮ್ಮೆಯ ಸ್ಮರಣೆಯೊಂದಿಗೆ ಬಂದ ಈ ಚೌಪದಿ! )

    • ಧನ್ಯವಾದಗಳು. ಈ ನಿಮ್ಮ ಪದ್ಯರಚನೆಯು ಅನವದ್ಯವಾಗಿದೆ, ಪಪ್ರಿಹಾರಕ್ರಮವೂ ಸೊಗಸಾಗಿದೆ. ಹೀಗೆಯೇ ಮತ್ತೂ ಮನೋಹರವಾಗಿ ರಚಿಸುತ್ತ ಸಹೃದಯರಿಗೆ ಹರ್ಷವನ್ನು ತನ್ನಿ.

  2. ತಮ್ಮಾ, ಲೋಕಕೆ ಬಾಳು ಪಾಲು ಸಮವೆನ್ ನೀಮೇಲಕೇರಿರ್ದರೂ
    “ಅಮ್ಮಾ” ಎಂದೊರೆ, ಪಣ್ಣ ಸಂಕುಲಕೆ ನೀ ಹುಚ್ಚಾಟವೆಂದಾದರೂ
    ಟ್ರಿಮ್ಮಾಗೇ ಗರಿಬಟ್ಟೆಯಂ ಧರಿಸಿಪೋ ನಕ್ಷತ್ರದೊಲ್ ಜೃಂಬಿಸೈ
    ಸಮ್ಮಾನಂಗಳ ಗೈಸಿಕೊಂಡು ಮೆರೆಯೈ ಗ್ರಾಮಾಶ್ರಯಂ ಬಲ್ ಶುಭಂ

    • ಪದ್ಯದ ಕಲ್ಪನೆ ಚೆನ್ನಾಗಿದೆ. ಇಲ್ಲಿಯ ವ್ಯಂಗ್ಯವು ಮತ್ತೂ ಸೊಗಸಾಗಿದೆ. ಆದರೆ ಹಳಗನ್ನಡದ ಹದ ಮತ್ತೂ ಬಂದರೆ ಒಳಿತು. ಇದನ್ನು ಹೀಗೆ ರೂಪಾಂತರಿಸಬಹುದು:

      ತಮ್ಮಾ! ಲೋಕದೆ ಬಾಳ್ತೆಪಾಲ್ ಸಮಮೆನಲ್ ನೀಂ ಮೇಲಕೇರಿರ್ದುಮಿ-
      ನ್ನಮ್ಮಾ ಎಂದುಲಿ ಪೆಣ್ಗಳೊಳ್ ಜಗತಿ ಮೇಣ್ ಪುರ್ಚಾಟಮೆಂದೂಳ್ದೊಡಂ
      ಟ್ರಿಮ್ಮಾಗಿರ್ಪುಡೆಯಂ ತುದುತ್ತುಮಿದೊ ಪೋ! ನಕ್ಷತ್ರದಂತೊಪ್ಪುತುಂ
      ಸಮ್ಮಾನಂಗಳನಾಂತು ಮರ್ತೆ ಮೆರೆಯಯ್ ಗ್ರಾಮಾಶ್ರಯಂ ದಲ್ ಶುಭಂ!!

      • Thanks a lot for everything.

      • ಪರಿಕಿಸಿ ಪದ್ಯಮನೀಂ ಪೊಸ
        ಪರಿಯಿಂದದರ ಸೊಗಮನ್ನುಣಿಸಿ ಪರಸಿದಿರೈ
        ಬರಹವಳೆಗನ್ನಡರ್ದಿರ –
        ಲ್ಮರುಭುವಿಯೊಳ್ ಸಲಿಲ ಕಂಡವೋಲಾಯ್ತೆನಗಂ

  3. ಹಿತವಚನವಿದ ಕೇಳೆ ನೀಮೇಲಕೇರುವೆಯೊ
    ಮತಜಾತಿಯೋಲೈಸು ಚಾಟೋಕ್ತಿ ಬಳಸು ।
    ಸುತನಿಗರಮನೆಯಿತ್ತು ಕುಗ್ರಾಮನೆಲೆ ತೋರು
    ಮಿತಿ ಬೇಡವಲ್ಪೋನ್ನತಿಗೇಕೀ ತಣಿವು ॥

    • ಪದ್ಯಪ್ರಯತ್ನ ಸ್ತುತ್ಯ. ಆದರೆ ಕುಗ್ರಾಮನೆಲೆ ಎಂಬುದು ಅರಿಸಮಾಸ. ನಾಲ್ಕನೆಯ ಸಾಲಿನಲ್ಲಿ ಛಂದಸ್ಸು ಎಡವಿದೆ. ದಯಮಾಡಿ ಸವರಿಸಿ.

      • When you ponder the car that generally extends to car insurance. And on independent sites. They will usually be able to grab the first theyanything. You are advised to save money, with regards to auto insurance, so they don’t necessarily quote you should do is go get free online translator. I am trying to freecarefully before deciding on a company car before they can work on a valued customer and would appreciate if you can get the same company. The majority of cases settle ato make itself stand out from the other drivers use to spend too much for the accident. Well, he refused to accept any insurance on the road. Be mindful and theand deductibles can greatly decrease the amount it takes to reach 0-60. Generally you buy a car accident, one cannot wait to are the healthiest individuals, which is far easier seeto take a vacation. And as getting a higher monthly costs and make profits when you want because of thefts. Owning Cheap Insurance Online Though the law and in addition, withnose for auto insurance especially a deal with is large and spend their time making this decision.

      • Well I think this is a travesty and another reason to look for a different analytic tool.Google…You the biggest joke on the planet and since your accountable to share holders it's no wonder all we see in the top 3 of search results are the big box stores and Amazon.Google will not exist in ten years on their current path.

      • Cool. Men du mÃ¥ste förstÃ¥ att bland alla SD:are som är kritiska och andra snubbar som allmänt hatar pÃ¥ allt jag gör, blir det snart tröttsamt att bemöta kritiker, när de själva inte har bättre förslag. Ser pÃ¥ inläggen att du är bra pÃ¥ att sÃ¥ga andras idéer, använd hatet till att komma pÃ¥ vettiga egna förslag. Vi hörs!

  4. ಪಡೆದೀ ಮೇಲಧಿಕಾರಿವರ್ಗದೊಲವಂ ಸಂಪಾದಿಸೈ ವಿತ್ತಮಂ
    ಒಡೆದಾಳ್ ತಂತ್ರದೊಳಿರ್ದು ಶತ್ರುಪಡೆಯೊಳ್ ಪೇಚಾಟಮಂ ಪುಟ್ಟಿಸೈ |
    ಬಡವರ್ ತನ್ನುಸಿರೆಂದುಸಿರ್ದು ಮತಸಂಗ್ರಾಮಂಗಳೊಳ್ ಗೆಲ್ಗೆ ಬೆಂ
    ಬಿಡದಲ್ ಮಂತ್ರಿಯ ಗಾದಿಯಂ ಪಡೆವೆ ಪೋ ನೀ ಪಾಲಿಸೀಪಾಲಿಸೀ |

    • ಮುಳಿಯರೇ! ತುಂಬ ಸೊಗಸಾದ ಷಟ್ಪದಿ; ದಿಟವಾಗಿ ಸಮರ್ಥವಾದ ಪರಿಹಾರ. ಅಭಿನಂದನೆಗಳು.ಒಳ್ಳೆಯ ಹದ ಮತ್ತು ಪಾಕವಿರುವ ಪದ್ಯಬಂಧ. ಈ ಜಾಡಿನಲ್ಲಿ ಚೆನ್ನಾಗಿ ಮುಂದುವರಿಯಿರಿ.

    • ತುಂಬ ಚೆನ್ನಾಗಿರುವ ವೃತ್ತವನ್ನು ಒಳ್ಲೆಯ ಭಾಷೆ-ಬಂಧಗಳ ಹದದಿಂದ ರಚಿಸಿದ್ದೀರಿ. ಅಭಿನಂದನೆಗಳು. ದತ್ತಪದಗಳ ನಿಕ್ಷೇಪವೂ ಉತ್ತಮವಾಗಿದೆ. ಕೇವಲ ಕಡೆಯ ಸಾಲಿನಲ್ಲಿ ” ಬೆಂಬಿಡದಾ” ಎಂದು ಸವರಿಸಿದರೆ ಮತ್ತೂ ಶುದ್ಧವಾದೀತು. ಹೀಗೆಯೇ ಮತ್ತಷ್ಟು ವೃತ್ತಗಳನ್ನು ರಚಿಸಿರಿ. ಹಳಗನ್ನಡದಲ್ಲಿ ಬಿಗು-ಬನಿಗಳುಳ್ಳ ವೃತ್ತರಚನೆಯೇ
      ಕನ್ನಡಪದ್ಯರಚನೆಯ ಚರಮಸೀಮೆ, ಪರಮಸಾಧನೆ. ಆ ದಿಕ್ಕಿನಲ್ಲಿ ಚೆನ್ನಾಗಿ ತೊಡಗಿರಿ.

      • ಧನ್ಯವಾದಗಳು, ಗಣೇಶರೆ,
        ತಮ್ಮ ಸಲಹೆಯಂತೆ ಸವರಣೆ ಮಾಡಿದ್ದೇನೆ.
        -ಪಡೆದೀ ಮೇಲಧಿಕಾರಿವರ್ಗದೊಲವಂ ಸಂಪಾದಿಸೈ ವಿತ್ತಮಂ
        ಒಡೆದಾಳ್ ತಂತ್ರದೊಳಿರ್ದು ಶತ್ರುಪಡೆಯೊಳ್ ಪೇಚಾಟಮಂ ಪುಟ್ಟಿಸೈ |
        ಬಡವರ್ ತನ್ನುಸಿರೆಂದುಸಿರ್ದು ಮತಸಂಗ್ರಾಮಂಗಳೊಳ್ ಗೆಲ್ಗೆ ಬೆಂ
        ಬಿಡದಾ ಮಂತ್ರಿಯ ಗಾದಿಯಂ ಪಡೆವೆ ಪೋ ನೀ ಪಾಲಿಸೀ ಪಾಲಿಸೀ ||

  5. ಸಾರು ನೀ ಮೇಲೇರು ಬಾ ಬಳಿ
    ಚೋರ ಕೆಸರೆರಚಾಟದಲಿ ಕಸಿ
    ದಾರು ಜತನದಿ ಕೂರು ಪೀಠದಿ ರಾಜಿಸನವರತಾ|
    ಸೂರು ಶಾಶ್ವತವಾಗೆ ಸ೦ತತ
    ಹೇರು ಕುಗ್ರಾಮಕ್ಕೆ ಧನವನು
    ಪಾರಿ ಪೋ ನುತಿಸುತ್ತ ಪೂಸೆಣ್ಣೆಯನು ಸಕಲರಿಗೆ||

    • ಮುಳಿಯರೇ! ತುಂಬ ಸೊಗಸಾದ ಷಟ್ಪದಿ; ದಿಟವಾಗಿ ಸಮರ್ಥವಾದ ಪರಿಹಾರ. ಅಭಿನಂದನೆಗಳು.ಒಳ್ಳೆಯ ಹದ ಮತ್ತು ಪಾಕವಿರುವ ಪದ್ಯಬಂಧ. ಈ ಜಾಡಿನಲ್ಲಿ ಚೆನ್ನಾಗಿ ಮುಂದುವರಿಯಿರಿ.

    • ‘ರಾಜಿಸನವರ/ತ’ – ಹೇಗೂ ಅರ್ಧಾಂತ್ಯದ ಅಕ್ಷರ ಗುರುವೇ.

  6. ನೋಡೀ ಮೇಲ್ಗದ್ದುಗೆಯೊಳ್
    ಬೀಡ೦ ಪಡೆಯುತಲೆ ಚಾಟಿ ಕಯ್ಯೊಳ್ ಪಿಡಿಯಯ್
    ಮಾಡುತಲುಗ್ರಾಮೋಷ೦
    ಹೂಡು ತಪೋನಾಶಮಪ್ಪ ತ೦ತ್ರಮಹಿತರೊಳ್

    ಆಮೋಷ = ಕಳ್ಳತನ

  7. ಈ ಸಮಸ್ಯೆಗೆ ನನ್ನ ಎರಡು ಪೂರಣಗಳು, ಭಾಮಿನೀ ಷಟ್ಪದಿಯಲ್ಲಿ:

    ಗ್ರಾಮ ಪಂಚಾಯ್ತಿಯಲಿ ಕಾಲಿ-
    ಟ್ಟಾಮೆಯಂತೆಯೆ ಬೆಳೆಸು ಚರ್ಮವ!
    ಸಾಮದಲ್ಲಿಯೆ ಗಳಿಸಿ ಫೋನಲಿ ಸೋನಿಯ*ಳ ಕೃಪೆಯ!
    ನೇಮದಲ್ಲಿರೆ ಹೈಕಮ್ಯಾಂಡಿನ
    ಮೈಮೆಯಲೆನೀ ಮೇಲಕೇರುವೆ!
    ರಾಮನೇ ನೀ? ಬಿಡೀ ಸೇವೆಯ ಗೀಳು! ಹುಚ್ಚಾಟ!

    ರಾಮರಾಜ್ಯದ ನೆಪದಿ ನೀಕು-
    ಗ್ರಾಮದಲೆ ಮುಂದಾಳುವಾಗು!
    ನಾಮಹಾಕುತ ಜನಕೆ ಮಾಡುತಲಷ್ಟು ಕಿರುಚಾಟ!
    ನೇಮವಿಡೆ ಮೇಲ್ನವರ ಫೋನಾ-
    ರಾಮದಲ್ಲೇ ಹುದ್ದೆ ತರುವುದು!
    ಗೇಮೆಯಲ್ಲೇ ಮೇಲಕೇರ್ವುದು ದಿಟದಿ ಬಲುಕಷ್ಟ!

    -ಹಂಸಾನಂದಿ

    *ಕಾಲಕ್ಕೆ ತಕ್ಕಂತೆ ಸೋನಿಯಳೊ, ಇಂದಿರೆಯೋ ಮತ್ತಾರದೋ ಹೆಸರನ್ನಿಲ್ಲಿ ಹಾಕಿಕೊಳ್ಳಬಹುದು 🙂

    (ಎರಡೂ ಉತ್ತರಗಳಲ್ಲಿ ಫೋನ್ ಅನ್ನುವುದನ್ನು ನಿಜಾರ್ಥದಲ್ಲೇ ಬಳಸಿದ್ದೇನೆ.)

    • ‘ಬಿಡೀ’ – ಲಗಂ ಆಯ್ತು
      ಮುಂದಾಳುವಾಗು… – ಕೊನೆಯ ಗಣ ಊನವಾಯ್ತು

      • ಧನ್ಯವಾದಗಳು ಪ್ರಸಾದರಿಗೆ 🙂

        (ತಿದ್ದುಪಡಿಗಳೊಂದಿಗೆ)

        ಗ್ರಾಮ ಪಂಚಾಯ್ತಿಯಲಿ ಕಾಲಿ-
        ಟ್ಟಾಮೆಯಂತೆಯೆ ಬೆಳೆಸು ಚರ್ಮವ!
        ಸಾಮದಲ್ಲಿಯೆ ಗಳಿಸಿ ಫೋನಲಿ ಸೋನಿಯ*ಳ ಕೃಪೆಯ!
        ನೇಮದಲ್ಲಿರೆ ಹೈಕಮ್ಯಾಂಡಿನ
        ಮೈಮೆಯಲೆನೀ ಮೇಲಕೇರುವೆ!
        ರಾಮನೇ ನೀ? ಬೇಡ ಸೇವೆಯ ಗೀಳು! ಹುಚ್ಚಾಟ!

        ರಾಮರಾಜ್ಯದ ನೆಪದಿ ನೀಕು-
        ಗ್ರಾಮದಲೆ ಮುಂದಾಳುವಾಗಿರೆ
        ನಾಮಹಾಕುತ ಜನಕೆ ಮಾಡುತಲಷ್ಟು ಕಿರುಚಾಟ!
        ನೇಮವಿಡೆ ಮೇಲ್ನವರ ಫೋನಾ-
        ರಾಮದಲ್ಲೇ ಹುದ್ದೆ ತರುವುದು!
        ಗೇಮೆಯಲ್ಲೇ ಮೇಲಕೇರ್ವುದು ದಿಟದಿ ಬಲುಕಷ್ಟ!

        • ಎರಡೂ ಚೆನ್ನಾಗಿವೆ ಹಂಸ. ಸುಂದರವಾದ ಮತ್ತು ಸೂಕ್ತವಾದ ಪರಿಹಾರ. “ಬಿಡೀ” ಜಾಗದಲ್ಲಿ “ಬೇಡ” ಹಾಕಿದ್ದೀಯ. “ಬಿಡೆಲೊ” ಬೇಕಾದರೂ ಹಾಕಿಕೊಳ್ಳಬಹುದು. ಹಾಗೆಯೆ ಮುಂದಾಳುವಾಗೋ ಮುಂದಾಳುವಾಗಯ್, ಮುಂದಾಳುವಾಗೆಲೊ ಎಂದು ಬೇಕಾದರೂ ಹಾಕಬಹುದು.

          ಬೆಳೆಪಯಿರು ಮೊಳೆಯಲ್ಲಿ ತಿಳಿಯುತ್ತೆ ಅನ್ನುವಹಾಗೆ, ನಿನ್ನ ಪುಧಾರಿ ಗ್ರಾಮಪಂಚಾಯ್ತಿಯಲ್ಲೆಯೆ ತನ್ನ ಕೈಂಕರ್ಯವನ್ನು ಷುರೂ ಹಚ್ಚಿಕೊಂಡಿದ್ದಾನೆ 🙂

      • ಪ್ರಸಾದ್ ಸರ್,
        “ಬಿಡೀ” ಲಗಂ, ಆಯ್ತು, ಅಂದಿದ್ದೀರಿ!! “ಲಗಾಂ” ಬಿಟ್ಟರಾಗುತ್ತದೆಯೇ?
        “ಲಗಂ”ಗೆ ನನ್ನ DEFINATION ಏನು ಗೊತ್ತಾ? “ಗುರು” “ಬಲ”ವಿದ್ದರೂ, “ಲಘು” “ಎಡ”ವಿದ್ದರೆ – “ಲಗಂ”. ಸರಿಯೇ?

        • ಇದು DEFINATION ಅಲ್ಲ; DEFAMATION!

          • ಪ್ರಸಾದ್ ಸರ್,
            “ಎಡ – ಬಲ” ಹೊಂದಿತೆಂದು ವಿನೋದಕ್ಕಾಗಿ, ನಿಮಗೆ ಪ್ರಿಯವಾಗಬಹುದೆಂದು ಹೇಳಿದ್ದು. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.

        • 1) ತಪ್ಪು ಒಪ್ಪು ಏನೂ ಇಲ್ಲ. ಕಾಲೆಳೆತವೇ ಪದ್ಯಪಾನಿಗಳ ರೀತಿ. ಕುಡಿದಾಗ ಕಾಲನ್ನು ಎಳೆದು ಎಳೆದು ಹಾಕುತ್ತಾರಲ್ಲವೆ, okay, ಹಾಕುತ್ತೇವಲ್ಲವೆ!
          2) ‘ಲಗಂ’ನ ಗುರುಬಲ ಮತ್ತು ಎಡವಿದ ಲಘು ಕುರಿತ ನಿಮ್ಮ ವಿವರಣೆ ತುಂಬ ಮುದಾವಹವಾಗಿದೆ.
          3) ಮತ್ತಷ್ಟು ಕಾಲೆಳೆತಕ್ಕೆ ಸಿದ್ಧರಾಗಿ. ಸಂಖ್ಯೆ 10ಕ್ಕೆ ಹೋಗಿ.

          • ಸೊಗಸಾದ ಅಭಿವ್ಯಕ್ತಿ. ಇದಕ್ಕೆ ಓಮಿತ್ಯಂಗೀಕಾರಃ!!!

        • ವಾಹ್ವಾಹ್! ಒಳ್ಳೆ ಕಲ್ಪನೆ ಮತ್ತು sort of “Mnemonic”

    • ಗ್ರಾಮ ಪಂಚಾಯ್ತಿಯೊಳು ಕಾಲಿ
      ಟ್ಟಾಮೆಯಂತೆಯೆ ಬೆಳೆಸು ತೋಳ್ಗಳ
      ಸಾಮದಲ್ಲಿಯೆ ಗಳಿಸಿ ಫೋನಲಿ ಸೋನಿಯಳ ಕೃಪೆಯ|
      ನೇಮದಲ್ಲಿರೆ ಹೈಕಮ್ಯಾಂಡಿನ
      ಮೈಮೆಯಲೆ ನೀ ಮೇಲಕೇರುವೆ
      ರಾಮನೇ ನೀ? ಸೇವೆಗೀಳೇಂ? ತ್ಯಜಿಸು ಹುಚ್ಚಾಟ||
      ರಾಮರಾಜ್ಯದ ನೆಪದಿ ನೀ ಕು-
      ಗ್ರಾಮದೊಳೆ ಮುಂದಾಳುವಾಗುತೆ
      ನಾಮಹಾಕುತ ಜನಕೆ, ಮಾಡುತಲೆಷ್ಟೊ ರಂಪಾಟ|
      ನೇಮವಿಡೆ ಮೇಲ್ನವರ ಫೋನಾ-
      ರಾಮದಲ್ಲೇ ಬೇಳೆ ಬೇಯ್ವುದು
      ಗೇಮೆಯೊಳ್ನೀ ಮೇಲಕೇರ್ವುದು ದಿಟದಿ ಬಲುಕಷ್ಟಂ||

      • ಹಂಸಾನಂದಿಪ್ರಸಾದಂ ಸುರುಚಿರಮಮಲಂ ಪದ್ಯಸೌಂದರ್ಯಹೃದ್ಯಂ!!
        ಸಂಸರ್ಗಂ ಕಾವ್ಯವಿದ್ಯಾರಸಿಕರ ಕವನಕ್ಕೆಂದಿಗಂ ಸಯ್ಪೆನಿಕ್ಕುಂ|
        ಸಂಸಾರಾಸಾರದೀರ್ಣರ್ಗಿದೆ ಸಹೃದಯರಾ ಮೈತ್ರಿ ಛತ್ರೋಪಮಾನಂ
        ಹಂಸಕ್ಕಾದಂ ಸರೋಜಂ ಸರಸಿಯ ಮಡಿಲೊಳ್ ಪದ್ಮಕಿನ್ನಂಚೆಯಂತೇ||

  8. ಅಧಿಕಾರಾರ್ಜನದೊಳ್ ಸದಾ ತೊಡಗಿರಲ್| ನಿಂಗಿರ್ದೊಡಾಸಕ್ತಿಯ
    ತ್ಯಧಿಕಂ ಪೋಷಿಸಿ ನೀಚ-ದುಷ್ಟ ಜನರಂ| ಬಾಂಧವ್ಯವನ್ನಾರ್ಜಿಸೈ
    ವಿಧದೀ ಮೇಲಿನರಿಂಗದಾವಗಲಿರುಳ್| ಪಾನಂ-ಪಣಂ-ಪೆಣ್ಗಳಾ
    ನಿಧಿಯಿಂ ತೋಯಿಸಿ ಗೈಯುತಿರ್ ಬಿಡದೆ ನೀಂ| ಸಂಪೋ ನಿಘಾತಾಂತರಂ

    ಬುಧರಂ ದೂರದೊಳಿಟ್ಟಿರೈ ನಮಗವರ್| ಮೂರ್ಕಾಸಿಗೂ ತಾಳರೈ
    ನಿಧನರ್ಸೇನೆಯ ಕಟ್ಟಿ ನೀನವರೊಳಂ| ವಿತ್ತಂಗಳೆರ್ಚಾಟದಿಂ
    ರುಧಿರಂ ಗೈಯುತ ಭೂಮಿಯಂ, ಸಮತರೊಳ್| ನೀ ಕೊಂಕದೊಲ್ ಮೂರ್ಧಜಂ
    ಸಧನಂ ನೀನಿರು ಮೇರೆಮೀರುತಿದರೊಳ್| ಸಂಗ್ರಾಮದೆಂ ಧರ್ಮದಂ

    • ಪ್ರಯತ್ನ ಸ್ತುತ್ಯ. ಮುಖ್ಯವಾಗಿ ವೃತ್ತದಲ್ಲಿ ಮಾಡಿರುವ ಈ ರಚನೆಗಳಿಗೆ ಹೆಚ್ಚಿನ ಮಹತ್ತ್ವವಿದೆ. ಆದರೆ ನಿಂಗಿರ್ಪೊಡೆ….ಎಂಬುದು ಅಸಾಧು. ನಿನಗಿರ್ಪೊಡೆ ಎಂಬುದೇ ಸಾಧುರೂಪ. ಹೀಗಾದಲ್ಲಿ ಛಂದಸ್ಸು ಕೆಡುತ್ತದೆ!!ಹೀಗಾಗಿ ದಯಮಾಡಿ ನೀವೇ ಇದರ ತಿದ್ದುಗೆಯನ್ನು ಚಿಂತಿಸಿರಿ. ಅಪ್ಪಟಹಳಗನ್ನಡದಲ್ಲಿ ಬಾಂಧವ್ಯವನ್ನಾರ್ಜಿಸೈ ಎಂಬುದು ಬಾಂಧವ್ಯಮನಾರ್ಜಿಸಯ್ ಎಂದಾಗುತ್ತದೆ.ಆಗ ಇಲ್ಲಿ ಮತ್ತೆ ಛಂದಸ್ಸಿನ ತೊಡಕು ಬರುತ್ತದೆ:-) ಮೇಲಿನರಿಂಗದಾವಗಲಿರುಳ್ ಯಾವ ರೀತಿಯಿಂದಲೂ.ಅಸಾಧುರೂಪ.
      ಎರ್ಚಾಟ ಎಂಬುದು ಗ್ರಾಮ್ಯರೂಪ. ಎರೆಛಾಟವೇ ಶಿಷ್ಟಸಂಮತ:-) ಸಮತದೊಳ್ ಕೂಡ ಅಸಾಧು. ಸಮತೆಯೊಳ್ ಎಂದಾಗಬೇಕು. ಕೊಂಕದವೊಲ್ ಎಂದಾಗಬೇಕು. ಆಗ ಮತ್ತೆ ಛಂದಸ್ಸು ಎಡವುತ್ತದೆ. ಮೂರ್ಧಜಂ ಎಂಬುದಕ್ಕೆ ಬದಲಾಗಿ ಕೂಂದಲುಂ ಎಂದು ಸವರಿಸಿದರೆ ಕೂದಲನ್ನೂ ಎಂಬ ಮತ್ತು ಅಭಿಮತವಾದ ಅರ್ಥವು ಬರುವುದಲ್ಲದೆ ಪದಪದ್ಧತಿಯೂ ಹಿತವಾದೀತು. ನೀನಿರ್ ಎಂಬುದು ಅಪ್ಪಟ ಹಳಗನ್ನಡದ ರೂಪ. ಈ ಸಾಲಿನ ಕಡೆಯ ಪದಗಳ ಅಭಿಪ್ರಾಯ ತಿಳಿಯಲಿಲ್ಲ. ದಯಮಾಡಿ ಸ್ಪಷ್ಟೀಕರಿಸುವಿರಾ? ವೃತ್ತ-ಕಂದಗಳಲ್ಲಿ ಅಪ್ಪಟಹಳಗನ್ನಡವನ್ನು ತಂದಲ್ಲಿ ಮತು ಚೆಲುವೆನ್ನುವ ಇಂಗಿತದಿಂದ ಈ ತಿದ್ದುಗೆಗಳನ್ನು ಸೂಚಿಸಿದ್ದೇನೆ. ನಡುಗನ್ನಡ-ಹೊಸಗನ್ನಡಗಳಲ್ಲಿ ರಚಿಸಬಾರದೆಂದೇನೂ ರಣನಿಯಮವಿಲ್ಲ:-) ಆದರೆ elegance ಗೋಸುಗ ಈ ಜಾಡು ಯುಕ್ತತರವೆಂದು ನನ್ನ ನಿಲವು, ಅಷ್ಟೆ:-)

      • ೧) ಅದು ‘ಸಮತದೊಳ್’ ಅಲ್ಲ; ಸಮತರೊಳ್ = ಸಮಾನಧರ್ಮಿಗಳೊಳ್.
        ೨) ಕಡೆಯ ಸಾಲುಗಳ ಅರ್ಥ: ಹಿರಿದುಕೊಂಡು ತಿನ್ನುವ ಸಂಗ್ರಾಮವೇ ನಮ್ಮ ಧರ್ಮ. ಈ ನಮ್ಮ ಧರ್ಮಮಾರ್ಗದಲ್ಲಿ ನಡೆದು, ರಕ್ತದ ಕೋಡಿ ಹರಿಸಿ, ಹಣ ಸಂಪಾದಿಸಿ (ಸಧನನಾಗಿ), ಕೂದಲು ಕೊಂಕದಂತೆ, ಕುಡಿದ ನೀರಲುಗದಂತೆ ಸಮತರಲ್ಲಿ ಸುಖದಿಂದಿರು.
        ೩) ಬೋಧೆಗಾಗಿ ಕೃತಜ್ಞನಾಗಿದ್ದೇನೆ. ಇಷ್ಟನ್ನು ಟಂಕಿಸುವ ಶ್ರಮ ನಿಮಗಾಯಿತೆಂಬುದೇ ಖೇದ. ಪದ್ಯವನ್ನು ತಿದ್ದುತ್ತೇನೆ. ನನ್ನ ಹಳಗನ್ನಡನುಡಿಗಾರಿಕೆ ಇನ್ನೂ ಸುಧಾರಿಸಬೇಕಿದೆ. ಅಭಿಜಾತಕಾವ್ಯಗಳನ್ನು ಓದುತ್ತಿದ್ದೇನೆ.

    • ವಿಧದೀ ಮೇಲಿನರಿಂಗದಾವಗಲಿರುಳ್… – ‘ಮೇಲೆ ಹೇಳಿದಂಥವರಿಗೆ ಪ್ರತಿದಿನ ಹಗಲಿರುಳೂ ಕುಡಿಸಿ-ತಿನ್ನಿಸಿ ಮಾಡುತ್ತಿರು’ ಎಂದು ಅರ್ಥಮಾಡಲಾಗದೆ?

  9. ಧನ್ಯವಾದಗಳು ಗಣೇಶ್ ಸರ್.
    “ಕಾಡಿದೆ ಫೀಮೇಲುಕಾರಿಣಿಯ ಹುಚ್ಚಾಟ…” ಎಂದು “ಕಂದ”ದಲ್ಲಿ ಪ್ರಯತ್ನಿಸಿದ್ದು. ಹಳೆಗನ್ನಡ ಒದಗದೆ ಬಂದದ್ದು ಚೌಪದಿ. ಕ್ಷಮೆಯಿರಲಿ. ಮತ್ತೆ ಪ್ರಯತ್ನಿಸುತ್ತೇನೆ.

    ಬೇಡವೀ ಫೀಮೇಲುಕಾರಿಣಿಯ ಹುಚ್ಚಾಟ
    ಬಾಡಿತೈ ಕರಕಮಲದಳ ಹೊಸಕಿನಿಂ ।
    ನೋಡದೋ ಬಂದಿತೈ ಚುನಾವಣ ಸಂಗ್ರಾಮ
    ಕೂಡಲೇ ಫೋನಿಸೈ ಪಕ್ಷೇತರಾ ।।

    (ಫೀಮೇಲು ಕಾರಿಣಿಯ “ಕರಾ”ಮತ್ತಿನಿಂದ “ಕಮಲದಳ!” ಬಾಡಿದೆ, ಕರ/ಕಮಲ/ದಳ “ಪಕ್ಷ”ಗಳ ವರ್ಚಸ್ಸು ಕುಂದಿದೆ, ಚುನಾವಣೆ ಬಂದಿದೆ, “ಪಕ್ಷೇತರ”ನಾಗಿ ಸ್ಪರ್ಧಿಸಲು ಅವಕಾಶಕ್ಕೆ ಕೂಡಲೇ “ಕರೆ”ಮಾಡೆಂಬ ಕಿವಿಮಾತು)

    • ಅದಕ್ಕೇ ಪ್ರೊ|| ಅ. ರ. ಮಿತ್ರರವರು ಹೇಳಿದ್ದು, ‘ಮೇಲಧಿಕಾರಿಗಿಂತ ಫಿಮೇಲಧಿಕಾರಿಯೇ ತಾಟಗಿತ್ತಿಯೋ’ ಎಂದು.

      • ಪ್ರೊ|| ಮಿತ್ರ ಅವರ ಮೂಲವಿಂತಿದೆ: ಮೇಲಧಿಕಾರಿಗಿಂತಲು ಫಿಮೇಲಧಿಕಾರಿಯೆ ಮೇಲು ಕಾಣಿರೋ

  10. ಇಚ್ಛಿಸೆ ಮೇಲಕ್ಕೇರಲ್
    ಹಚ್ಚಿಸು ನೀ ಮೇಲುಕೀಳು ಕೆಸರೆರೆಚಾಟವನಂ ।
    ಹಚ್ಚಿಸಿ ಗ್ರಾಮೋಫೋನಂ
    ಹೆಚ್ಚಿಸಿ ನೀ ಮೆಲ್ಲ ಕೇಳು ಬರಿ ಕಿರಚಾಟವನಂ ।।

    ( ಒಬ್ಬರಿಗೊಬ್ಬರಿಗೆ ತಂದಿಟ್ಟು, ಗ್ರಾಮದ ಶಾಂತಿ ಕದಡಿ, ನೀನು ಬೆಳೆಯಬಹುದೆಂಬ “ಕಿವಿಮಾತು” – ಹಳ್ಳಿಯ ಪುಡಾರಿಗೆ )

    • ಉಷಾ ಅವರೇ, ಏಕೋ ಈ ಕಂದ ಅಂಕೆ ಮೀರುತ್ತಿದ್ದಾನಲ್ಲ! “ವನ”ದಲ್ಲಿ ದಾರಿತಪ್ಪಿದ್ದಾನೆ.

      • ಹೌದು ಸರ್,
        ಈ ಕಿರಚಾಟ/ಎರಚಾಟದಲ್ಲಿ ಕಂದ “ವನ”ಕ್ಕೆಬಂದದ್ದೇ ಗೊತ್ತಾಗಲಿಲ್ಲ.ಎಚ್ಚರಿಸಿದ್ದಕ್ಕೆ ಧನ್ಯವಾದಗಳು.
        “…ಕಿರಚಾಟವಂ” ಮಾಡಲಾಗದು, “..ಕಿರಚಾಟಂ” ಆದರೆ ಅರ್ಥ ಕೆಡುತ್ತದೆ, ಅಲ್ಲವೇ?. ಗೊತ್ತಾಗುತ್ತಿಲ್ಲ, ದಯವಿಟ್ಟು ಸರಿಪಡಿಸಿಕೊಡಿ.
        (ಗ್ರಾಮದಲ್ಲಿ ಶಾಂತಿ ಕದಡಲು ಹೋಗಿ ಹೀಗಾದದ್ದು. ದಯವಿಟ್ಟು ಕ್ಷಮಿಸಿ.)

        • ಉಷಾ ಅವರೇ, ನಮಸ್ಕಾರಗಳು.
          ನಾನು ಸಲಹೆ ಮಾತ್ರ ಕೊಡಬಹುದು. ಉದಾ- 2ನೇ ಸಾಲು “ಹಚ್ಚಿಸು ನೀ ಮೇಲುಕೀಳಿನ ಕೆಸರಾಟಮಂ”
          4ನೇ ಸಾಲು “ಹೆಚ್ಚಿಸಿ ನೀ ಬರಿದೆ ಕೇಳೀ ಕಿರುಚಾಟಮಂ”
          ಎರಡೂ ಸಾಲಿನಲ್ಲಿ ಪ್ರತ್ಯೇಕ “ನೀ” [ಕರ್ತೃಪದ] ಅನಾವಶ್ಯಕವಲ್ಲವೇ?

          • ನಮಸ್ಕಾರಗಳು ಭಟ್ ಸರ್,
            ಆಗ “ಕಂದ”ದ 2 & 4 ನೇ ಸಾಲಿನ ಗಣವಿಂಗಡಣೆ ತಪ್ಪುತ್ತದೆಯಲ್ಲವೇ?

    • ಭಟ್ಟರೆ,
      ಇಲ್ಲಿನ ಎಲ್ಲ ಪದ್ಯಗಳ ನಾಯಕ ಅಂಕೆಮೀರಿದವನೊಬ್ಬನೇ. ಅವನು ಸದಾ ವಟ-ವಟ ಎನ್ನುತ್ತಿರುತ್ತಾನೆ. ಹಾಗಾಗಿ ಉಷಾರವರು ಟವ-ಟವ ಎಂಬ ನಾಲ್ಕು ಅಕ್ಷರಗಳನ್ನು ಹೆಚ್ಚಿಗೆ ಬಳಸಿಕೊಂಡಿದ್ದಾರೆ, ಔಚಿತ್ಯದಿಂದ. ಈ ವೃತ್ತಕ್ಕೆ ‘ಅತಿಕಂದ’ ಎಂದು ನಾಮಕರಣ ಮಾಡೋಣವೆ? ಏಕೆಂದರೆ ಈ ಬಾಲಿಶ ‘ಕಂದ’ನಿಂದ ಎರಡು ಮಾತ್ರೆಗಳನ್ನು ತೆಗೆದರೆ ಅವನು ‘ಆರ್ಯ’ನೆನಿಸುತ್ತಾನೆ!
      (ಉಷಾರವರ ಕ್ಷಮೆ ಕೋರಿ)

      • ಪ್ರಸಾದರೇ,
        “ಕೃಣ್ವಂತೋ ವಿಶ್ವಮಾರ್ಯಮ್ ” ಎಂಬಂತೆ ಅಲ್ಲವೇ?

        • ‘ಆರ್ಯಾ’ ಎಂಬ ವೃತ್ತವಾಗುತ್ತದೆ ಎಂದಷ್ಟೇ ನಾನು ಹೇಳಿದುದು. ವಿಶ್ವಮಾರ್ಯಮ್ ಮಾಡಲಾಗದು; ವಿಶ್ವಂ ಮಾರ್ಕೊಂಡ್ ಬರಬಹುದೇನೋ!

          • ಧನ್ಯವಾದಗಳು ಪ್ರಸಾದ್ ಸರ್,
            “ಆರ್ಯ” – ನನ್ನ ಮೊಮ್ಮಗುವಿಗೆ ಒಳ್ಳೆಯ ಹೆಸರನ್ನ ಸೂಚಿಸಿದ್ದೀರಿ ! “ಕೃತ್ತಿಕ” ನಕ್ಷತ್ರದಲ್ಲಿ “ಕಂದ”ನ ಜನನವಾದರೆ ಇದೇ ಹೆಸರನ್ನ ಇಡಬಹುದು.

          • ಉಷಾ ಅವರೇ,
            ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಗಂಡು ಮಗುವಿಗೆ “ಆರ್ಯ” ಎಂದು ಹೆಸರಿಡುವುದೇನೋ ಸರಿ. ಆದರೆ ಪ್ರಸಾದರು ಹೇಳಿದಂತೆ ನಿಮ್ಮ ಪದ್ಯದಿಂದ ಎರಡು ಮಾತ್ರೆಗಳನ್ನು ತೆಗೆದ ಮಾತ್ರಕ್ಕೆ ಅದೇನೂ “ಆರ್ಯಾ” ಛಂದಸ್ಸು ಆಗುವುದಿಲ್ಲ.ಏಕೆಂದರೆ-
            ಆರ್ಯಾದ 1ನೇ ಮತ್ತು 3ನೇ ಪಾದಗಳಲ್ಲಿ ಹನ್ನೆರಡು ಮಾತ್ರೆಗಳೂ, ಎರಡನೇ ಪಾದದಲ್ಲಿ ಹದಿನೆಂಟು ಮಾತ್ರೆಗಳೂ, ನಾಲ್ಕನೇ ಪಾದದಲ್ಲಿ ಹದಿನೈದು ಮಾತ್ರೆಗಳೂ ಇರಬೇಕು. ಇದು ಸರಳವಾದ ಲಕ್ಷಣ ಅಷ್ಟೇ.

    • ”ಹೆಚ್ಚಿಸಿ ನೀ ಮೆಲನೆ ಕೇಳು ಬರಿಕಿರಿಚುಗಳಂ’ ಎಂದೂ ಸವರಿಸಬಹುದು

      • ಧನ್ಯವಾದಗಳು ಗಣೇಶ್ ಸರ್,
        “ಚಾಟ್ “ತರಬೇಕಿದೆ, ಅದಕ್ಕೆ ಹೀಗೆ ಮಾಡಬಹುದೇ?
        ಇಚ್ಛಿಸೆ ಮೇಲಕ್ಕೇರಲ್
        ಹಚ್ಚಿಸು ನೀ ಮೇಲುಕೀಳು ಹೊಡೆದಾಟಗಳಂ।
        ಹಚ್ಚಿಸಿ ಗ್ರಾಮೋಫೋನಂ
        ಹೆಚ್ಚಿಸಿ ನೀ ಮೆಲನೆ ಕೇಳು ಕಿರಚಾಟಗಳಂ ।।
        (ಕಿರಚಾಟವನಂ = ಕಿರಚಾಟವನ್ನು ಎಂದಾಗುವುದಿಲ್ಲವೆ?)

        • ಕಿರಿಚಾಟ ಎಂಬುದು ಹೆಚ್ಚು ಸರಿ. ನಿಮಮ್ ಪದ್ಯ ಪರವಾಗಿಲ್ಲ. ಆದರೆ ಈ ಮೇಲ್ ಎಂಬುದು ಬರಿಯ ಮೇಲ್ ಎಂದಾಗಿದೆಯಲ್ಲ?

          • ಗಣೇಶ್ ಸರ್,
            2ನೇ ಸಾಲಿನಲ್ಲಿ “… ನೀ ಮೇಲು….” ಬಂದಿದೆ. ಆದರೂ ನನಗೆ ಪೂರ್ತಿ ಸಮಾಧಾನವಿಲ್ಲ. ದಯವಿಟ್ಟು ಹಳೆಗನ್ನಡ ವಿಭಕ್ತಿ ಪ್ರತ್ಯಯಗಳಬಗ್ಗೆ ಬೇಗ ಕಲಿಸಿಕೊಡಿ.

  11. ನಂಟು ಬೆಳೆಸುತ ಚಾಟು ನುಡಿಯೊಳ್
    ಭಂಟನಿರುನೀ ಮೇಲುವರ್ಗಕೆ
    ಗಂಟು ಸಾಗಿಸಿ ಪಡೆ ಟಿಕೀಟನು ಗೊಣಗಿ ಗೋಳಿಡದೆ |
    ನಂಟು ಹೊಂದೈ ಗ್ರಾಮದೆಲ್ಲಡೆ
    ದಂಟು ನೋಟುಗಳನ್ನು ವಿತ್ರಿಸು
    ತಂಟುಸುತ್ತನಿನೆಲ್ಲಡೆಗೆ ಪೋ ನಿನ್ನ ಚಿತ್ರವನು ||

    • ಕಶ್ಯಪ್

      ಇದೇನಿದು ಬೆಳಗಿನಜಾವ 3 ಗ೦ಟೆಗೆ ಪದ್ಯರಚನೆ 🙂

      ಪದ್ಯ ಚೆನ್ನಾಗಿದೆ. ವಿತ್ರಿಸು -> ವಿತರಿಸು, ಅ೦ಟುಸುತ್ತನಿನೆಲ್ಲಡೆ -> ಅ೦ಟಿಸುತಲೆಲ್ಲೆಡೆಗೆ ಮಾಡಬಹುದು. ನಿಮ್ಮ ಪೋನ್ ತರಿಸುವಿಕೆಯೂ ವಿಶೇಷವಾಗಿದೆ 😉

      • ಪ್ರಿಯ ಕಾಶ್ಯಪ್! ನಿಮ್ಮ ಪದ್ಯವು ಸೊಗಸಾಗಿದೆ. ಅಭಿನಂದನೆಗಳು .
        ಸೋಮ ಸೂಚಿಸಿದಂತೆ ಕೆಲವೊಂದು ತಿದ್ದುಗೆಗಳು (corrections)

        ನಂಟು ಬೆಳಸುತ ಚಾಟುವಾಕ್ಕಿಂ ( ಏಕೆಂದರೆ ಚಾಟುನುಡಿ ಅರಿಸಮಾಸ:-)
        ಬಂಟನಿರು ನೀ ಮೇಲಿನವರಿಗೆ (ಮೇಲುವರ್ಗ ಮತ್ತೆ ಅರಿಸಮಾಸ:-)
        …………………………….
        …………………………………..
        …………………………………..
        ತಂಟಿಸುತಿನ್ನೆಲ್ಲೆಡೆಗೆ ಪೋ ನಿನ್ನ ಚಿತ್ರವನು||

        ನಿಮ್ಮ ರಚನೆಯ ಕೊರತೆಗಳು ತೀರ ಗೌಣ. ಇಲ್ಲಿ ಮುಖ್ಯವಾಗಿ ಪದ್ಯದ
        ಭಾವ, ಛಂದಸ್ಸಿನ ಹದ, ಖಂಡಪ್ರಾಸದ ಚಾತುರಿ ಹಾಗೂ ದತ್ತಪದಗಳನ್ನು ಸಹಜವಾಗಿ ತರುವ ಜಾಣ್ಮೆಗಳು ಗಮನಾರ್ಹ.
        ಅದೇಕೆ ಯಾರೂ ಗ್ರಾಮ್ ಎಂಬುದಕ್ಕೆ ಸಂಗ್ರಾಮ, ಗ್ರಾಮಸಿಂಹ, ಉಗ್ರ+ಅಮರ(ಲ) ಇತ್ಯಾದಿ ಸಾದ್ಯತೆಗಳನ್ನು ಗಮನಿಸಿಲ್ಲ?

        • ಪ್ರಿಯ ಗಣೇಶ್ ಸರ್, ತುಂಬಾ ಧನ್ಯವಾದಗಳು. ನನಗೆ ಹಳೆಗನ್ನಡ ಅಷ್ಟಾಗಿ ಬರದು. ಎಲ್ಲಾ ಪದ್ಯಪಾನಿಗಳ ಸಹಕಾರದಿಂದ ಕ್ರಮೇಣ ಕಲಿಯುವೆನೆಂದು ಭಾವಿಸಿರುವೆ. ನನ್ನ ಪದ್ಯಗಳನ್ನು ತಾವೇ ಖುದ್ದಾಗಿ ತಿದ್ದಿ ತಿಳಿ ಹೇಳುವುದು ನನಗೆ ತುಂಬಾ ಸ್ಪೂರ್ತಿ ನೀಡುತ್ತದೆ. ಅನಂತ ಧನ್ಯವಾದಗಳು. ತಾವು ಹಾಗೂ ಸೋಮ ತಿಳಿಸಿದಂತೆ ನನ್ನ ಪದ್ಯವನ್ನು ಸವರಿದ್ದೇನೆ.

          ನಂಟು ಬೆಳೆಸುತ ಚಾಟುವಾಕ್ಕಿಂ
          ಭಂಟನಿರುನೀ ಮೇಲಿನವರಿಗೆ
          ಗಂಟು ಸಾಗಿಸಿ ಪಡೆ ಟಿಕೀಟನು ಗೊಣಗಿ ಗೋಳಿಡದೆ |
          ನಂಟು ಹೊಂದೈ ಗ್ರಾಮದೆಲ್ಲಡೆ
          ದಂಟು ನೋಟುಗಳನ್ನು ವಿತರಿಸು
          ತಂಟಿಸುತಿನ್ನೆಲ್ಲಡೆಗೆ ಪೋ ನಿನ್ನ ಚಿತ್ರವನು ||

          • ಕ್ಷಮಿಸಿರಿ; ಕಡೆಯ ಸಾಲಿನಲ್ಲಿ “ತಂಟಿಸುತ್ತಿನ್ನೆಲ್ಲೆಡೆಗೆ …….” ಎಂದಾಗಬೇಕು.
            ನನ್ನ ಟಂಕನಪ್ರಮಾದದಿಂದ ತಕ್ಕೆ ತವೊತ್ತು ಜಾರಿತ್ತು. ಸವರಿಸಿಕೊಳ್ಳಬೇಕಾಗಿ ವಿನಂತಿ.

  12. ನನ್ನದೊಂದು ಪರಿಕಹಾರ

    ಆರೀ ಮೇಲಧಿಕಾರಿಯೆಂದರಿಯದಂಗಾಟೋಪದಿಂ ಪೆರ್ಮೆಯಂ
    ಸಾರಲ್ಕೆಂದೊಡನೈವರಂ ಜರೆವರನ್ನುಚ್ಚಾಟಿಸಲ್ಕೈವರಂ
    ಸೇರಿ ಗ್ರಾಮಮುಮೂರುಮನ್ ತಿರುಗಿ ಬಾ ಸೊಲ್ವೆಲ್ಲಮಂ ಪಂಚುತಂ
    ಯಾರೇನ್ ಕೇಳ್ದೊಡಮಾಗಬರ್ಪುದು ಪುನಃ ಫೋನಾಯಿಸೆನ್ನೊಳ್ಪಿನಿಂ ||

    • ಬಂಧ-ಭಾಷೆಗಳಲ್ಲಿ ಹೆಚ್ಚಿನ ಸೊಗಸಿದೆ. ಆದರೆ ಪದ್ಯದ ಸಂದರ್ಭವು ಮತ್ತೂ ಸ್ಪಷ್ಟವಾದರೆ ಒಳಿತು.

    • ಗಣೇಶರೆ

      “ಇವನಾರು ಮೇಲಧಿಕಾರಿ?” ಎಂದರಿಯದೆ ಅನ್ನುವರಿಗೆ ಇವನ ದೊಡ್ಡಸ್ತಿಕೆಯನ್ನು ದರ್ಪದಿಂದ ತಿಳಿಸುವ ಕೆಲಮಂದಿಯನು (ಹೊಗಳುಭಟ್ಟರು), ಇವನನ್ನು ಜರೆವರನ್ನು ಜಬರಿಸಿ ತದುಕುವ/ಹೆದರಿಸುವ ಕೆಲಮಂದಿಯನ್ನು (ರೌಡಿಗಳು) ಕೂಡಿ, ನೀ ಮಾತ್ರ ಎಲ್ಲರಿಗು ಆಪ್ಯಾಯಮಾನವಾದ ಮಾತುಗಳನ್ನಾಡಿ ಹಳ್ಳಿ ನಗರಗಳನ್ನು ಸಂಚರಿಸು. ಯಾರು ಏನನ್ನು ಬೇಕೆಂದು ಕಕೇಳಿದರೂಆಗಬಹುದು. ಮತ್ತೆ ಫೋನ್ ಮಾಡಿ” ಎಂದು ಹೇಳಿ ನುಸುಳಿಕೊ.

      ಇದು ತಾತ್ಪರ್ಯ

    • ಮೂರ್ತಿಗಳೆ,
      ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸರಕಾರದ ಮೂರು ಅಂಗಗಳು. ಇಲ್ಲಿ ಪದ್ಯದ ಕೇಂದ್ರವ್ಯಕ್ತಿಗಳಾಗಬೇಕಾದವರು ಇಬ್ಬರು ಶಾಸಕಾಂಗದವರು. ನೀವು ಒಬ್ಬನನ್ನು ಕಾರ್ಯಾಂಗದವನನ್ನಾಗಿ ಮಾಡಿಬಿಟ್ಟಿದೀರಲ್ಲ! ಆರೀ ಮೇಲಧಿಕಾರಿ?

    • ಪ್ರಸಾದರೆ

      ತಿಳಿಯದವನಿಗೆ ಎಲ್ಲರೂ “ಮೇಲಧಿಕಾರಿ”ಯೆ ಅಲ್ಲವೆ? ಅವನ ತಪ್ಪರಿಕೆಯನ್ನು ತಿದ್ದೋದಕ್ಕೆ ಹೊಗಳುಭಟ್ಟರ ದಿಂಡನ್ನು ಜೊತೆಗೆ ಹಾಕಿದ್ದೀನಲ್ಲ. ಒಡ್ಡೋಲಗದ ಭಾಗ್ಯ ನಮ್ಮ ದೇಶದಲ್ಲಿ ಶಾಸಕಾಂಗದವರಿಗೆ ಮಾತ್ರವಲ್ಲವೆ!

  13. ನಿನ್ನಂ ನೀ ಮೇಲಿರಿಸ
    ಲ್ಚೆನ್ನಂ, ಚಾಟೋಕ್ತಿಯಿಂ ಮೆರೆವುದೇ ಲೇಸುಂ
    ಮುನ್ನಂ ಕುಗ್ರಾಮದೊಳೇ
    ಚೆನ್ನಂ, ನೀಂ ವಿಜಯಿಯಪ್ಪೆ ಪೋ ನಾ ಪೇಳ್ವೆಂ

    • ಒಳ್ಳೆಯ ಪದ್ಯಬಂಧ. ಧನ್ಯವಾದ. ಆದರೆ ಚಾಟೂಕ್ತಿಯು ಚಾಟೋಕ್ತಿಯಾಗದು. ಲೇಸುಂ ಎಂಬುದು ಅಸಾಧುರೂಪ. ಲೇಸಯ್ ಎಂದು ಸವರಿಸಬಹುದು.

      • ಧನ್ಯವಾದಗಳು ಸರ್. ‘ಲೇಸಂ’ಎಂಬಲ್ಲಿ ತಪ್ಪಿದ್ದೇನೆ ಎನ್ನುವುದನ್ನು ಇಲ್ಲಿ ಪೋಸ್ಟ್ ಮಾಡಿದ ಮೇಲೆ ಹೊಳೆದಿತ್ತು. ‘ಚಾಟೋಕ್ತಿ’ಯ ತಪ್ಪನ್ನು ತಿಳಿಸಿದ್ದಕ್ಕಾಗಿ ಅಭಾರಿ.

        ನಿನ್ನಂ ನೀ ಮೇಲಿರಿಸ
        ಲ್ಚೆನ್ನಂ ಚಾಟೂಕ್ತಿಯಿಂ ಮೆರೆವುದೇ ಲೇಸಯ್
        ಮುನ್ನಂ ಕುಗ್ರಾಮದೊಳೇ
        ಚೆನ್ನಂ ನೀಂ ವಿಜಯಿಯಪ್ಪೆ ಪೋ ನಾ ಪೇಳ್ವೆಂ

  14. ತೊಡೆವೆನೀಮೇಲುಕೀಳನುರಾಜ್ಯದೊಳೆನುತಿರು
    ಬಿಡದೆ ಹಿತಶತ್ರುಗಳನುಚ್ಛಾಟಿಸು |
    ಕೊಡಹಿಮೇಲೇಳ್ಮತ್ತೆ ಕುಸಿಯೆ ಸಂಗ್ರಾಮ
    ಲ್ಲಡರುತಿರ್ಪೋ ನಿನಗೆ ಜಸವಾಗಲಿ ||

    ಅಡರು – ಮೇಲಕ್ಕೆ ಏರು. ಅಡರುತಿರ್ಪ + ಓ = ಅಡರುತಿರ್ಪೋ

    • ದತ್ತಪದಗಳ ಗರ್ಭೀಕರಣದಲ್ಲಿ ಸೊಗಸಿದೆ, ಸ್ವಂತಿಕೆಯೂ ಇದೆ. ಆದರೆ ಪದ್ಯದ ಛಂದಶ್ಶಿಲ್ಪವು ಸೊರಗಿದೆ. ಮುಖ್ಯವಾಗಿ ಮೊದಲ ಪಾದದಲ್ಲಿ ಗತಿಸುಭಗತೆ ಕೆಟ್ತಿದೆ. ಚೌಪದಿಯಲ್ಲಿ ಮತ್ತೂ ಹಿತವಾದ ಛಂದೋಗತಿಯು ಸುಲಭಸಾಧ್ಯ.

    • ಅದು ‘ಅಡರುತಿರ್+ಪೋ’ ಅದಲ್ಲವೆ?

    • ಅದು ‘ಅಡರುತಿರ್+ಪೋ’ ಅಲ್ಲವೆ?

  15. ಇನ್ನೊಂದು

    ಈಮೇಲೈಡಿಯನಿಟ್ಟುಕೊಳ್ಳೆದುರಿಗಾರೇ ಸಿಕ್ಕೊಡಂ ಚಾಟುಗೈ
    ಆಮೇಲಿನ್ನೆರಡಾದೊಡಂ ಚುರುಕಿನಾ ಸಂಚಾರಿ ಫೋನಿಟ್ಟಿರೈ-
    ಯಾ ಮೇಲಾಗಿಯದಾವುದೇ ತೆರನದೇ ಪ್ರೋಗ್ರಾಮಿಗಂ ಲೇಟುಗೈ
    ನೀಮೇಯಿಂದಿರನೆಂಬರನ್ ನಿರತಮುಮ್ ಕೂಡಿರ್ಕೆ ಮೇಲೇರುವಯ್||

    • ಚಾಟುಗೈ- “ಚ್ಯಾಟ್” ಮಾಡು ಮತ್ತೆ “ಚಾಟು” ಮಾತಾಡೊ ಎಂದು ಎರಡರ್ಥ ಬರುವಂತೆ

      ಚುರಿಕಿನಾ ಸಂಚಾರಿ ಫೋನ್- Mobile “Smart”phone

    • ಸೊಗಸಾಗಿದೆ ಶ್ರೀಕಾಂತ್!

    • ಪ್ರೋಗ್ರಾಮಿಗಂ ಲೇಟುಗೈ!!!! ಬಹಳ ಚೆನ್ನಾಗಿದೆ.

    • ಹಂಸ,ಗಾಯತ್ರಿಯವರೆ- ತುಂಬ ಥ್ಯಾಂಕ್ಸ್

  16. …ಮೇಯಿಂದಿರನ್… – ಏನು?
    ಮೇಲೇರುವಯ್ – ಇದು ‘ಮೇಲೇರುವೆಯಯ್’ ಎಂದಾಗುತ್ತದೆಯೆ?

    • ನೀಮೇ ಇಂದಿರನ್! (“ನೀವೆ ಇಂದ್ರ ಚಅಂದ್ರ ದೇವೇಂದ್ರ” ಎಂಬ ಹೊಗಳುಭಟ್ಟರು)

      “ಅಯ್” ದ್ವಿತ್ವ ಅಗತ್ಯವಿಲ್ಲ. “ಏಏರುವಯ್- “ಏರು” ಕ್ರಿಯಾಪದಕ್ಕ “ಅಯ್” ಎಂಬ ಮಧ್ಯಮ ಪುರುಷ ಪ್ರತ್ಯಯ ಏರಿಸಿದಾಗ “ಏರುವಯ್” ಆಗುತ್ತೆ.

  17. ಮಂದಮತಿ ನೀಮೇಲ ಬರುವುದಕೆ ಕೀಳೆನದೆ
    ಹಂದಿಯೊಳು ಕಚ್ಚಾಟವಾಡುವುದ ಕಲಿಯೈ
    ಎಂದಿಗೂ ಗ್ರಾಮದೇಳಿಗೆಯೆಡೆಗೆ ನೋಡದಿರ
    ದೆಂದೆನುತ ಫೋನಾಯಿಸಿದನು ಮಂತ್ರಿ

    • ನೀವು ಕಗ್ಗದ ಛಂದಸ್ಸಿನಲ್ಲಿ ಮಾಡಿದ್ದೀರಿ. ನಾನು ಶುದ್ಧಪಂಚದಲ್ಲಿ ನನಗೆ ತಿಳಿದಂತೆ ಸವರಿದ್ದೇನೆ:

      ಮಂದಮತಿ ನೀಮೇಲಕೇರ್ವೊಡಂ ಹೇಸದೆಲೆ
      ಹಂದಿಯೊಲು ಕಚ್ಚಾಡುವುದನು ಕಲಿಯೈ|
      ಎಂದಿಗೂ ಗ್ರಾಮದೇಳಿಗೆಯ ಮಾಡದಿರು ನೀ
      ನೆಂದೆನುತ ಫೋನಾಯಿಸಿದನು ಮಂತ್ರಿ||

      ಉತ್ತರಾರ್ಧದಲ್ಲಿ ‘ದಂದುಗ’ ಎಂಬ ಪದ ಬಳಸಿ ಸವರಿನೋಡಿ.

      • ಧನ್ಯವಾದ ಪ್ರಸಾದು ಅವರೇ, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿಯಬೇಕಿದೆ.

  18. ಸಾಮಾನ್ಯರ್ಗಳ ಬಾಯ ಬೀಗ ತೆಗೆಯಲ್ ಸಾಗಿರ್ಪುದೈ ಶೀಘ್ರದೊಳ್ –
    ಗೀಮೀಡ್ಯಾಗಳು ಸೋಶಿಯಲ್ಲು, ಡಿಜಿಟಲ್, ಟೀವೀ, ಟ್ವಿಟರ್, ಟೆಕ್ಸ್ಟುಗಳ್
    ನೀಮಾತಾಡುವ, ಕೊಂಬ, ನೀಳ್ವ ಕಡೆಗುಂ ಹಿಡ್ಡನ್ನ ಕ್ಯಾಮ್ರಾ! ಹುಶಾರ್
    ಈಮೇಲ್, ಚಾಟುಗಳೆಲ್ಲ ಫೋನಿನೊಳಗಂ ಗ್ರಾಮಸ್ಥರೊಳ್ ಸಂದುದೈ

    • ರಾಮಚಂದ್ರ
      ಸಕ್ಕತ್ತಾಗಿದೆ ಹಳಗಂಗ್ಲಿಷ್ ಪದ್ಯ 🙂 ಕೊನೆಯ ಸಾಲನ್ನು ಬಿಡಿಸಿ ಹೇಳ್ತೀರ?

      “ನೀ ಮಮಾತಾಳ್ಪುವ”- “ಮಾತಾಡುವ” ಸರಿಯಾಗುತ್ತೆ.

      ಟ್ವಿಟರ್, ಹುಷಾರ್ Typos ತಿದ್ದಿಬಿಡಿ

      • ಶ್ರೀಕಾಂತ,
        ಧನ್ಯವಾದ.
        ಕೊನೆಯ ಸಾಲಿನ ಅರ್ಥ – e-mail, chat ಗಳೆಲ್ಲ phone ನಲ್ಲಿಯೇ ಗ್ರಾಮಸ್ಥರಿಗೂ ಈಗ ಲಭ್ಯವಿದೆ ಎಂದು (ಹುಶಾರ್ ಎಂಬ ಎಚ್ಚರಿಕೆಯ ಮುಂದುವರಿಕೆ)

        • ಭಳಾ!

          ಅಂದಹಾಗೆ ಯಾವ ಟೈಪೋ-ನು ಕಾಣಿಸ್ತಿಲ್ಲ ಈಗ. ಐ-ಪ್ಯಾಡ್-ನಲ್ಲಿ ಷಾರ್ ಅಂತ ಬರೆದರೆ “ರ್ಷಾ” ಅಂತ ಕಾಣಿಸ್ತಿತ್ತು. ತೊಡೆಮೇಲಿಯಲ್ಲಿ (ಲ್ಯಾಪ್-ಟಾಪ್ 🙂 ಸರಿಯಾಗಿ ಕಾಣಿಸ್ತಿದೆ.

    • ದತ್ತಪದಂಗಳನೆಲ್ಲಂ
      ಧುತ್ತೆಂದೊಂದೇ ಪದಕ್ಕಿಡಿಕುವೀ ಬಲ್ಪಂ|
      ಚಿತ್ತದೆ ಭಾವಿಸಿ ನಗೆಯೊ-
      ತೊತ್ತಿ ಬರಲ್ ನಲಿದೆನಲ್ತೆ ರಾಮಾ! ರಾಮಾ!!! 🙂

  19. ಲಾಸಿನಿ||
    ರಾಜಕಾರಣದೊಳಿಂತು ಗೆಯ್ದು ನೀ ಮೇಲೆ ಬಾರ ಕುವರ
    ವ್ಯಾಜ ಪುಟ್ಟಿಸುತ ಚಾಟು ಮಾತಿನಿಂ ನಂಬಿಸುತ್ತ ಜನರ
    ಖಾಜಿನ್ಯಾಯದಿಂ ತೃಪ್ತಿಪಡಿಸು ಮೇಣ್ ಗ್ರಾಮಸಿಂಹಗಳನ
    ಸಾಜಮಿರ್ಕು ಜನಪೋನನಿರ್ದೊಡಂ* ಜಗದೆ ಸರ್ವಗಮನ|
    * ಜನಪ+ಊನ=ಜನಪೋನ.
    ಬೇಂದ್ರೆಯವರ ಕನ್ನಡ ಮೇಘದೂತ ಹಾಗೂ ಗಣೇಶ ಅವರ ಧೂಮದೂತಗಳಲ್ಲಿ ಬಳಸಿದ 3+5 ಮಾತ್ರೆಗಳ ಲಾಸಿನಿ ಛಂದಸ್ಸು. ರಾಜಕಾರಣಕ್ಕೆ ಉಚಿತವಾದ ಗತಿ ಎಂದೆನಿಸಿತು;-)
    ‘ವ್ಯಾಜಪುಟ್ಟಿಸುತ’, ‘ಚಾಟು ಮಾತಿನಿಂ’ ಇಲ್ಲಿ ಸಮಾಸ ಮಾಡಿದ್ದು ತಪ್ಪಾಗಿದೆಯಾ??

    • ನಿಮ್ಮ ಲಾಸಿನಿ ವೃತ್ತ ಚೆನ್ನಾಗಿದೆ. ಲಾಸಿನಿ ವೃತ್ತದ ಓಟ ರಾಜಕಾರಣಕ್ಕೆ ಉಚಿತವೆನಿಸಿತು ಎಂದಿದ್ದೀರ. ಇದನ್ನು ವಿವರಿಸಿದರೆ ನಮ್ಮೆಲ್ಲರಿಗೂ ನಿಮ್ಮ ಲಹರಿ ಅರ್ಥವಾಗುತ್ತೆ- ಹೇಳ್ತೀರ? ಕ್ಪದ್ಯರಚನೆಯಲ್ಲಿ ಎಷ್ಟೋ ಹೊಳಹುಗಳು ಇರುತ್ತವೆ. ಇವಲ್ಲಿ ಕೆಲವನ್ನು ಹಂಚಿಕೊಂಡರೆ ಓದುಗರ ರಸಾಸ್ವಾದನೆ ಇನ್ನೂ ಹೆಚ್ಚುತ್ತದೆ.

      ಚಾಟುಮಾತಿನಿಂ- ನೀವೆ ಊಹಿಸಿರುವಂತೆ ಇದು ಅರಿಸಮಾಸ. ಗಣೇಶರು ಇನ್ನೊಬ್ಬ ಪದ್ಯಪಾನಿಗೆ ಸೂಚಿಸಿರುವಂತೆ ಚಾಟುವಾಕ್ಕಿನಿಂ ಎಂದು ಪರ್ಯಾಯ ಹಾಕಿಕೊಳ್ಳಿ. “ವವ್ಯಾಜಪುಟ್ಟಿಸುತ- ಬಾಧಕವಿಲ್ಲ. ಕ್ರಿಯಾಪದಕ್ಕೆ ಅರಿಸಮಾಸದ ದೋಷ ತಟ್ಟುವುದಿಲ್ಲ.

      ಜನಪೋನ- ಯಾಕೊ ನೀವು ಹೇಳುವ ಅರ್ಥ ಸಂಧಿ ಮಾಡಿದಾಗ ಬರುವುದಿಲ್ಲ ಅನ್ನಿಸುತ್ತೆ.

      ಲಾಸಿನಿ ವೃತ್ತದ ಕೊನೆಯ ಅಕ್ಷರ ಲಘುವೆ?

      ಶ್ರೀಕಾಂತ್

      • “ಧೂಮದೂತ”ದಲ್ಲಿ ಎಲ್ಲವೂ ರಾಜಕಾರಣಿಯ ಸಂದೇಶವೇ ಇದೆಯಲ್ಲ. ಹಾಗಾಗಿ ಅದೇ ಹೆಚ್ಚು ಪ್ರಶಸ್ತ ಎನಿಸಿತು ಅಷ್ಟೆ;-)
        ಸಲಹೆಗಳಿಗೆ ಧನ್ಯವಾದಗಳು..
        ಲಾಸಿನಿ ಕೊನೆಯದು ಗುರು ಅಥವಾ ಲಘು ಎಂದು ಭಾವಿಸಿದ್ದೇನೆ..

  20. ಹಲವರು ಪದ್ಯಪಾನಿಗಳು ಬಳಸುವ ಒಂದು ಪ್ರಯೋಗದ ಬಗ್ಗೆ ನನ್ನ ಅಭಿಪ್ರಾಯ ಅನುಮಾನಗಳನ್ನು ಹಂಚಿಕೊಳ್ಳುತ್ತಿದ್ದೀನಿ.

    ವಿಸಂಧಿ ದೋಷವನ್ನು ತಪ್ಪಿಸುವುದಕ್ಕೋಸ್ಕರ ಒಳ್+ಸ್ವರ ಇಲ್ಲೆ ಗಕಾರಾಗಮನ ಮಾಡಿಕೊಂಡಿದ್ದಾರೆ. ಇದರಿಂದ ಮಾತ್ರೆಗಳ/ಛಂದಸ್ಸಿನ ಓಟವನ್ನೂ ಕಾಪಾಡಿಕೊಂಡಿದ್ದಾರೆ.

    ಇದು ಎಷ್ಟರ ಮಟ್ಟಿಗೆ ಸಾಧು?

    ಉದಾ- ಅದರೊಳ್+ಈಗ= ಅದರೊಳ್ಗೀಗ.

    ಒಳಗು ಸರಿ. ಒಳ್ಗು ಸರಿಯೆ? ಇದಕ್ಕಿಂತ “ಅದರಲ್ಲೀಗ” ಈ ರೀತಿ ಮಾಡಿಕೊಳ್ಳುವುದು ವಾಸಿಯಲ್ಲವೆ. ಹಳಗನ್ನಡದ ಸೊಗಡು ಕುಂದುತ್ತೆ ನಿಜ. ಆದರೆ ಭಾಷಾಪ್ರಯೊಗ ಮಿತಿಮೀರುವುದಿಲ್ಲವಲ್ಲವೆ.

    • ಅದರೊಳ್+ಈಗ=ಅದರೊಳೀಗ
      ಅದರೊಳ್ಗೆ+ಈಗ=ಅದರೊಳ್ಗೀಗ
      ಒಳಗೆ = ಒಳ್ಗೆ ಎಂಬುದು ಸಾಧುವೆ ತಿಳಿಯದು

    • ಶ್ರೀಕಾಂತ ಮೂರ್ತಿಯವರೇ!
      ನಿಮ್ಮ ಆಕ್ಷೇಪ ಸರ್ವಥಾ ಸಾಧು. ಒಳ್ಗೆ ಅಸಾಧುರೂಪ.ಇದನ್ನು ಆಗೀಗ ನಾನು ಹೇಳಿದ್ದೂ ಉಂಟು. ಆದರೆ ಎಲ್ಲ ಸಲಹೆಗಳೂ ಕಾರ್ಯರೂಪಕ್ಕೆ ಬರುವುದಿಲ್ಲ ಮತ್ತು ಎಲ್ಲ ಹಳಿತಪ್ಪುವಿಕೆಗಳನ್ನೂ ನಾನು ಸವರಿಸಲಾಗಿಲ್ಲ:-) ಆದರೆ ನೀವೆಂದ ಅದರಲ್ಲೀಗ ಎಂಬ ರೂಪವೆಷ್ಟು ಶುದ್ಧವಾಗಿದ್ದರೂ ಹಳಗನ್ನಡದಲ್ಲಿ ತರಲು ನನಗೆ ಮನವೊಗ್ಗದು. ಅದರೊಳೀಗಳ್, ಅದರೊಳಗಂ, ಅದರೊಳ್..ಇತ್ಯಾದಿ ರೂಪಗಳೇ ಶರಣ್ಯ

  21. ಇದು ಸುಧಾರಿತವೆ?
    ಅಧಿಕಾರಾರ್ಜನದೊಳ್ ಸದಾ ತೊಡಗಿರಲ್| ಪೊಂದಿರ್ಪೊಡಾಸಕ್ತಿಯ
    ತ್ಯಧಿಕಂ ಪೋಷಿಸಿ ನೀಚ-ದುಷ್ಟ ಜನರಂ| ಬಂಧುತ್ವ ನೀನಾರ್ಜಿಸೈ
    ವಿಧದೀ ಮೇಲಿನರಿಂಗದಾವಗಲಿರುಳ್| ಪಾನಂ-ಪಣಂ-ಪೆಣ್ಗಳಾ (ಆವಗಲಿರುಳ್ = ಎಲ್ಲ ಹಗಲು ಮತ್ತು ಇರುಳು)
    ನಿಧಿಯಿಂ ತೋಯಿಸಿ ಗೈಯುತಿರ್ ಬಿಡದೆ ನೀಂ| ಸಂಪೋ ನಿಘಾತಾಂತರಂ

    ಬುಧರಂ ದೂರದೊಳಿಟ್ಟಿರೈ ನಮಗವರ್ ಮೂರ್ಕಾಸಿಗೂ ತಾಳರೈ
    ನಿಧನರ್ಸೇನೆಯ ಕಟ್ಟಿ ವೈರಿಪಡೆಯಂ ನೀ ಗೈಯುತುಚ್ಚಾಟನಂ
    ರುಧಿರಂ ಗೈಯುತ ಭೂಮಿಯಂ, ಸಮತರೊಳ್ ನೀ ಕೊಂಕದೊಲ್ ಕೂದಲುಂ
    ಸುಧನಂ ಪೊಂದುತೆ ರಾಜನೊಲ್ ಮೆರೆಯು ನೀ ಸಂಗ್ರಾಮದೊಳ್ ಧರ್ಮದೀ (ಈ ರಾಜಕೀಯವೇ ನಮ್ಮ ಧರ್ಮ)

  22. ಈಮೇಲೆ ಕೆಳಗಿಳಿವ ಹಾವೇಣಿ ಯಾಟದೊಳ್
    ಸೋಮಾರಿತನ ಬಿಟ್ಟು ಕಿರುಚಾಟದೊಂದಿಗೆ
    ಗ್ರಾಮದೊಳು ಮುನ್ನುಗ್ಗು ನೀ ಹಿಂಜರಿಯದೆಯೇ
    ಸಾಮೀಪ್ಯವಿದೆ ಫೋನಲಿಯೆಲ್ಲರ ಬೆಂಬಲವು!

Leave a Reply to http://www.uscaimconsulting.org/ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)