Sep 142011
 

ಇದು ಗಣೇಶ ರವರು ಕೊಟ್ಟ ಸಮಸ್ಯೆ

ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್”!!

ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ

  44 Responses to “ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆ”

  1. >ಕೈಲಾಸಗಿರಿಗೆ ರವಿಯ ಪ್ರಭಾತಪೂಜೆ

    ಕಿರಣ ರಾಗಸುಮಾರ್ಚನೆಯ ಗೈದು ಕೈಲಾಸ
    ಗಿರಿಪದಕೆ, ಮೇಲೇರಿ ವರ್ಣ ನವ್ಯ
    ಶಿರಕೆ ಬರೆ ಹೇಮಾಂಬರವೊ ಚಿದಂಬರಗೆ ಭಾ-
    ಸ್ಕರ ಶಿವಾರ್ಚನೆ ಭವ್ಯ ನಿತ್ಯ ದಿವ್ಯ

  2. >ಪಶುಪಕ್ಷಿಸ್ವರ ಸಪ್ತಸ್ವರ ಮೇಳವೇ ಸ್ವರಸೂರ್ಯೋದಯ

    ’ಸ ’ ವನುಡಿಯೆನವಿಲು ರಿಗಮಪದನಿಯ ವೃಷಭ ಮೇ
    ಷವು ಕ್ರೌಂಚ ಪಿಕ ಹಯ ಗಜಾದಿಗಳು ಸೇರೆ
    ನವಗೀತಕಿಳೆಯ ಸಪ್ತಸ್ವರವು ಮೇಳವಿಸಿ
    ರವಿಯುದಯ ನಿಶ್ಶಬ್ದ ಸಂಗೀತ ಧಾರೆ

  3. >ನಿನ್ನೆಗೆ ಅಳದೆ, ನಾಳೆಗೆ ಅಂಜದೆ, ಇಂದಿಗೆ ಬದುಕಲು ಹೇಳುವನೇ ರವಿ?

    ಹತ್ತಿಕ್ಕಿ ನಿನ್ನೆಗಳ ಚಿಂತೆಗಳ ಸೊನ್ನೆಗಳ
    ಕತ್ತಲನ್ನೊತ್ತಿ ’ಪ್ರಸ್ತುತ‘ ಗಭಸ್ತಿ
    ನೆತ್ತರೂಡಲು ನಿತ್ಯಜೀವನಕೆ ಮೂಡುತಿಹ
    ಪ್ರಸ್ತುತಕೆ ಕೊಡಲು ನೀತಿ ಪ್ರಶಸ್ತಿ

  4. >ಬುವಿಯನೋಲೈಸೆ ಚಂದ್ರ, ರವಿನೋಲೈಸೆ ಭೂಮಿ !

    ತಿರೆವೆಣ್ಣ ಪೆರೆ ಸುತ್ತಿ, ತಿರೆ ರವಿಯ ಸುತ್ತುತಿರೆ
    ಇರುಳಡಗಿ ಮುತ್ತನೊತ್ತಿರೆ ಪೂರ್ವದಿ
    ಸ್ಮರಕಾಂತಶಕ್ತಿ ಭೂಭಾನುಮಿಲನಭ್ರಮೆಗೆ
    ತರೆ ರಾಗರತಿ ಗರತಿ ನಾಚಿ ಮುದದಿ

  5. >ನೇಸರನ ಕೆಂಗಿರಣ ಬೆಟ್ಟದಿಂಬದಿಯಿಂದ
    ಸೂಸುತಿರಲಸ್ಪಷ್ಟ ದೃಶ್ಯವನ್ನು ಕಂಡು
    ಕೂಸಬೆಚ್ಚನೆ ಕೆಂಡದುಷ್ಣದಲಿ ಮುಂಜಾನೆ
    ಕಾಸುತಿರುವೆನೆ ಭಾಸವಾಯಿತೆನಗೆ

  6. >ಬೆಟ್ಟದಿಂಬದಿ – ಬೆಟ್ಟದ ಹಿಂಬದಿ
    ಕಾಸು – ಕಾಯಿಸು

  7. >ಬೋಳುಹಣೆ ಭುವಿಗಿಟ್ಟ ಸಿ೦ಧುರವೊ ಜನರಜಡ
    ರೋಗ ತೊಲಗಿಪ ಗುಳಿಗೆಯೋ |
    ವಾರಿಧಿಯ ಬಸಿರ್ಗೀವ ಕೇಸರಿಯೆನಲ್ಕವಿಯು
    ರವಿಯೆದ್ದ ಮೂಡಣದಿಯುಜ್ಜಿಕಣ್ಣಾ ||

  8. >ನಸುಕು ತಾಯಿಯು ಬಂದು ಜೀವಿಗಳನೆಬ್ಬಿಸುತ
    ಹೊಸದಿವಸದಾ ಗತಿಗೆ ಚೋದಿಸಿಹಳು |
    ತುಸು ರಂಗಿನಾ ಒಲವು ತುಸು ಶಬ್ದಗಳ ಗಡಸು
    ಕಸು ತುಂಬುತೆಲ್ಲರನು ಹುರಿದುಂಬಿಸುವಳು ||

    ಲಯದಿಂದ ಸೃಷ್ಠಿಯೆಡೆ ತಮದಿಂದ ರಜಸಿನೆಡೆ
    ಶಯನದಿಂ ಕರ್ಮದೆಡೆ ದೂಡಿರುವಳು |
    ಪ್ರಿಯಸೊಗಸಿನಾಶೆಗಳ ತೋರಿಸುತ ಮಾಯೆದೇ –
    ವಿಯ ಮೋಡಿಯೆಡೆಗೆಮ್ಮ ಹುರುಪಿಸಿಹಳು ||

  9. >ಚಂದ್ರಮೌಳಿಯವರ ಕವಿತೆಗಳು ತುಂಬ ಒಳ್ಳೆಯ ಶೈಲಿಯಲ್ಲಿವೆ. ಅಲ್ಲಿ ಆದ್ಯಂತ ಪ್ರಾಸಗಳೂ ಬಂದಿವೆ.
    ರಾಮಚಂದ್ರರ ಕವಿತೆಗಳ ಕಲ್ಪನೆಯೂ ಚೆನ್ನಾಗಿದೆ. ಅವರ ಮೊದಲ ಪದ್ಯದ ಕೊನೆಯ ಸಾಲಿನಲ್ಲಿ ’ಕಸುದುಂಬುತೆಲ್ಲ ಹುರಿದುಂಬಿಸುವಳು’ ಎಂದು ಸವರಣೆ ಮಾಡಿದರೆ ಛಂದಸ್ಸು ಸರಿಯಗುವುದು.
    ಸೋಮರ ಕವಿತೆಗಳ ಕಲ್ಪನೆಯೂ ಹೃದ್ಯ. ಆದರೆ ’ಗಿರಿಯ ಹಿಂಬದಿ’ ಎಂದಲ್ಲಿ ವ್ಯಾಕರಣ ಸರಿಯಾಗುವುದು. ಜೊತೆಗೆ ’..ದೃಶ್ಯ ಕಂಡು’ ಎಂದೇ ಸಾಲು ಮುಗಿಸಿದರೆ ಛಂದಸ್ಸು ಸರಿಯಾಗುತ್ತದೆ.
    ಶ್ರೀಶರ ಪದ್ಯದ ಕಲ್ಪನೆಯೂ ಚೆನ್ನ. ಆದರೆ ಸಿಂಧುರ ಎಂದರೆ ಆನೆ ಎಂದು ಅರ್ಥ.ಅದು ಸಿಂದೂರ ಎಂದೇ ಆಗಬೇಕು. ಆದರೆ ಛಂದಸ್ಸು ಕೆಡುತ್ತದೆ. ಇದನ್ನು ಸರಿಮಾಡಲು ’ತಿಲಕವೋ’ ಎಂದು ಸವರಿಸಿದರೆ ಎಲ್ಲ ಯುಕ್ತವಾಗುತ್ತದೆ.
    ಒಟ್ಟಿನಲಿ ತತ್ತ್ವವಿದು, ಕಲ್ಪನೆಯೊಳಾರಿಗೂ
    ಕೆಟ್ಟ ಬಡತನವಿಲ್ಲ; ಕವಿತೆಯಿದುವೇ
    ಕಟ್ಟೋಣದೊಳು ಕೆಲವು ಕುಂದು-ಕೊರತೆಗಳಿಹುವು
    ತಟ್ಟಿ ಮೇಲೆಬ್ಬಿಸಿರಿ ಪಾಂಡಿತ್ಯವ!!

  10. >ಉಳಿದೆಲ್ಲ ವಾಚಕರೆ! ಕವಿತಾಪ್ರರೋಚಕರೆ!
    ಹಳಿಗೆ ಬನ್ನಿರಿ ನೀವು ಕೂಡ ಬೇಗ!
    ಗಳಿಗೆ ಬಾರದು ಮತ್ತೆ, ಕಾವ್ಯಕನ್ಯಕೆ ನಿಮಗೆ
    ತಳಿಗೆ ಹಿಡಿದಾಗಮಿಸುತಿರುವಳೀಗ!!

    ಸಂಕೋಚವನ್ನುಳಿದು ಸುಮ್ಮಾನದಿಂ ಬನ್ನಿ
    ಶಂಕೆ ಬೆಂಕಿಯ ಹಾಗೆ ಕಾಡದಿರಲಿ
    ಸಂಕಲ್ಪಿಸಿರಿ ಸೊಗಸುಗವಿತೆಯನ್ನೊರೆಯಲ್ಕೆ
    ಸಂಕ ಮುರಿದಲ್ಲಿಯೇ ಸ್ನಾನವಲ್ತೆ!!

  11. >ಭಯದ ಕಾನನದಲ್ಲಿ ಕತ್ತಲಿನ ಮಡುವಿನಲಿ
    ಧರಣಿ ವಿರಹದಿ ರವಿಯ ಕಾಯುತಿಹಳು |
    ಗಗನದಲ್ಲಿಹ ಸಖಿಯರವಳನ್ನು ಕರೆದಿಹರು
    ಸಂಧಿ ಸಮಯವು ಸನಿಹ ಬಂದದ್ದನರಿತು ||

    ಮಣಿಗಳಿಂ ಶೋಭಿಸುವ ಹಸಿರು ಸೀರೆಯನುಟ್ಟು
    ನೀರೆಯಾಗಿರಲು ನವ ಅಭಿಸಾರಿಕೆ |
    ಬಿರಿದ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
    ಹೆರಳ ಸಿಂಗರಿಸಿದವು ಬಲು ಚಂದದಿಂ ||

    ಮಂದಾರ ಸಂಪಿಗೆಯು ನೀಡಿರುವ ಕಂಪನ್ನು
    ತಂಗಾಳಿ ಹರಡಿತ್ತು ಮುದಗೊಳಿಸಲು |
    ಕವಿದ ಕತ್ತಲೆಯೆಲ್ಲ ದೂರ ಸರಿಯಿತು ಬೇಗ
    ನಲ್ಲನಪ್ಪುಗೆಯ ರಂಗು ಬೆಳಕಾಗಲು ||

  12. >ದೇಶ (ಅವನ ಹುಟ್ಟಿನ ದಿಕ್ಕಿನಿಂದಾಗಿ) ಕಾಲ (ದಿನದಾವರ್ತನದಿಂದಾಗಿ) ಸೂರ್ಯನಿಂದಾಗಿಯೇ ಮೂರ್ತವಾಗಿದೆ ಎನ್ನಲು ಪ್ರಯತ್ನಮಾಡಿದ್ದೇನೆ. (ತಿಮಿತ – "ಅಚಲ ಅಲುಗಾಡದ". ಇದಕ್ಕಿಂತ ಉತ್ತಮ ಪದ ಸಿಕ್ಕಲಿಲ್ಲ 🙁 )

    ಅಮಿತವೀ ಕಾಲವನು ದಿನವಾಗಿ ತುಂಡರಿಸಿ
    ಸಮಯಚಕ್ರವನಿಂದು ನಡಿಸಿರ್ಪನ
    ತಿಮಿತವೀ ದೇಶವನು ದಿಕ್ಕಾಗಿ ವಿಂಗಡಿಸಿ
    ಸಮನಿಸಿಹನುದಯಕ್ಕೆ ಶರಣೆಂಬೆನಾ

  13. >ನತ್ತುಕಿವಿಯೋಲೆಗಳು ಚಿತ್ತಾಗಿ ಕಂಗೊಳಿಸೆ
    ಮುತ್ತುರತ್ನಗಳಾಗ ಶೃಂಗರಿಸಿರೆ
    ಮತ್ತೆ ನಯದರ್ಪಣವು ದರ್ಪದಿಂದಲಿ ಹೊಳೆಯೆ
    ಸುತ್ತುಜಗ ನಲಿಯುತಿದೆ ನಿನ್ನುದಯದಿ

    ಸುರಚಾಪ ಬಳುಕುತಲಿ ಹಿಮಕರನು ಬೆಮರುತಲಿ
    ಗಿರಿಯು ಮೈಬೆಚ್ಚಗನ್ನನುಭವಿಸುತ
    ಮರುತದೊರೆ ಮುಂಜಾವುಸಂಚಾರದಲಿ ತೊಡಗಿ
    ತರಣಿಯುತ್ಥಾನದಲಿ ಸಂಭ್ರಮಿಸಿರೆ

    (ಚಿತ್ತು = ಚೈತನ್ಯ, ತರಣಿ = ಸುರ್ಯ)
    (ನಿರ್ಜೀವ ಜಗತ್ತು ಸುರ್ಯೋದಯವನ್ನು ಅನುಭವಿಸುವ ಪರಿ)

  14. >ಹಿಮಕರ ಬಳಕೆ ತಪ್ಪಾಗಿದೆ. ಹಿಮಕರ = ಚಂದ್ರ. ಬದಲಿಗೆ,
    ಹಿಮವಂತ ಹಿಮನಗನು ಅಂತಾಗಿ ಬದಲಿಸಬಹುದು

    ಸುರಚಾಪ ಬಳುಕುತಲಿ ಹಿಮವಂತ ಬೆಮರುತಲಿ
    ಗಿರಿಯು ಮೈಬೆಚ್ಚಗನ್ನನುಭವಿಸುತ
    ಮರುತದೊರೆ ಮುಂಜಾವುಸಂಚಾರದಲಿ ತೊಡಗಿ
    ತರಣಿಯುತ್ಥಾನದಲಿ ಸಂಭ್ರಮಿಸಿವೆ

  15. >ಮುಂಜಾವುಸಂಚಾರ ಅರಿಸಮಾಸವಾಗುತ್ತದೆಯಾ?
    ಹೌದಾದರೆ, "ಮುಂಜಾವುನಡಿಗೆಯಲಿ ತಿರುತಿರುಗಿ" ಅಂಬುದಾಗಿ ಹೇಳಬಹುದು.

  16. >ಶತಾವಧಾನಿ ಗಣೇಶರಲ್ಲಿ ನನ್ನದೊಂದು ವಿನಂತಿ. ವಾಚಕರೆಲ್ಲರೂ ಹಳಿಗೆ ಬರಬೇಕೆಂದರೆ ಕಾವ್ಯ ಪ್ರಕಾರಗಳ ಬಗ್ಗೆ ಪಾಮರರಿಗಾಗಿ ನಿಮ್ಮ ಆರ್ಧ್ವರ್ಯದಲ್ಲಿ ಲೇಖನ ಸರಣಿಯೊಂದನ್ನು ಕೈಗೊಳ್ಳುವಂತೆ ಮಾಡಿ.

  17. >ಮನದ ಯೋಚನೆಗಳೈದೈದಾಗಿ ನಡೆಸುತ್ತ
    ಲನುಸರಿಸೆ ಚೌಪದಿಯು ಸಿದ್ದವೇನೆ
    ತನನನನ ತನನಾನ ತಾನಂತ ತಾನಾನ
    ತನನನಾ ತಂತಾನ ತಂತನನನ

  18. >ಕಾಲಕಾಲದ ಬಳಿಕ ಸೇರಿರುವ ವಿರಹಿಗಳು,
    ಸಾಲಿಗನು ಗಡುವನ್ನು ನೆನೆಯುತ್ತಲಿ
    ಆಲಸಿಯು ಹೊರಳುತ್ತ, ಕಾಲ್ಸೆಂಟರುದ್ಯೋಗಿ
    ಬಾಲರವಿರೇಖೆಗಳ ಶಪಿಸುತ್ತಿರೆ

  19. >ಬಾಲಕವಿ ತಿಂಡಿಪೋತನ ಕೇಳೆ, ವರ್ಣಿಸಿದ
    ಬಾಲರವಿಯುದಯ -ಟಿ.ಪಿ.ಕೈಲಾಸವಾಣಿ
    "ತೇಲುತಿಹ ಕೇಸರೀಭಾತೊ ಮಜ್ಜಿಗೆಹುಳಿಯ
    ಮೇಲೆಂದ" ಮೆಲ್ಲುತ್ತ ಇಡ್ಲಿ-ವೊಡೆ-ಪಾಣಿ

  20. >ಸಮುನ್ನತ ಸಮುದಿತ ಪ್ರಖರ ತೀಕ್ಷ್ಣಾದಿ ಪದ
    ಕಮಲಗಳು ದೃಷ್ಟಾಂತಬಲವಿರದೆಯೇ
    ಕಮರಿರಲು, ರವಿಯುದಯಸಾಫಲ್ಯದಲ್ಲರಳಿ
    ಘಮಿಸುತ್ತಿವೆ ಪದಾರ್ಥ ಹಿರಿಮೆಯಲ್ಲಿ

  21. >ಶ್ರೀ ರವೀಂದ್ರರ ಪದ್ಯದಲ್ಲಿ, ಪದಗಳೆಂಬ ಕಮಲಗಳು
    ರವಿಯುದಯಸಾಫಲ್ಯದಲ್ಲರಳಿ ಅರ್ಥದ ಹಿರಿಮೆ ಪಡೆಯುವುದರ ಕಲ್ಪನೆ ಚೆನ್ನಾಗಿದೆ.

    ಚೌಪದಿಯ ರಚನಗೆ ನಾನಾರೀತಿಯ ಸಾಧ್ಯತೆಗಳಿವೆ. ತಧೀಂತನ(ಲಗುಲಲ)ದ ಐದು ಮಾತ್ರೆಗಳ ಬಳಕೆಯೂ ನವೋದಯಸಾಹಿತ್ಯದಲ್ಲಿ ಆಗಿದೆ. ಈ ಜಗಣ (ಲಘು-ಗುರು-ಲಘು), ಕೆಲವು ಕ್ರಿಯಾತ್ಮಕ ವರ್ಣನೆಗೆ ಹೂಂದಿಕೊಂಡರೂ (ಉದಾ:ದಡಕ್ಕೆ ಹೊಮ್ಮಿಸಿ) ಕೇಳ್ಮೆಗೆ ಅಹಿತವಾಗಿರುವುದರಿಂದ ಅದರ ಬಳಕೆ ಕಡಿಮೆ. ಪ್ರಸ್ತುತ ಶ್ರೀಗಣೇಶರು ಸೂಚಿಸಿರುವ ಬಂಧವನ್ನು ಅನುಸರಿಸುವಾಗ, ಇದನ್ನು ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ, ರವೀಂದ್ರರ ಪದ್ಯಚ್ಛಂದ ಮೊದಲ ಹಾಗೂ ಕೊನೆಯ ಸಾಲುಗಳಲ್ಲಿ ಸ್ವಲ್ಪ ಸವರಣೆಬಯಸುತ್ತದೆ. ಸಮುನ್ನತದ ಜಗಣಗರ್ಭಹೋಗಬೇಕು. ಘಮಿಸುತ್ತಿ – ವೆಪದಾರ್ಥ – ಹಿರಿಮೆಯಲ್ಲಿ ಇದನ್ನೂ ಗಣಾರ್ಥಬಂಧಮಾಡಬಹುದು.
    ಸಮಲಂಕರಣವಿರದ… ಘಮಿಸುತಿವೆಪದಗಳರ್ಥವಧರಿಸುತ ಈರೀತಿ ಪ್ರಯತ್ನಿಸಬಹುದು.

  22. >ಚಂದ್ರಮೌಳಿಯವರೆ, ಧನ್ಯವಾದಗಳು. "ಸಮುನ್ನತ" ಎನ್ನುವುದು ಆದಿಪ್ರಾಸವನ್ನೂ ಭಂಗಿಸುತ್ತಿದೆ. ಕೊನೆಯ ಸಾಲು ಮಾಡಿದಾಗಲೇ, ಹಳಿ ಕ್ರಾಸಿಂಗ್ನಲ್ಲಿ ಕೂತಂತೆ ಆಗಿತ್ತು. ನೀವು ತೋರಿಸಿದ್ದು ಚೆನ್ನಾಯಿತು. ಸ್ವಲ್ಪ ಬದಲಿಸುವ ಪ್ರಯತ್ನ ಮಾಡಿದ್ದೇನೆ.

    ಸಮದರ್ಶಿ ಸಮುದಿತ ಪ್ರಖರ ತೀಕ್ಷ್ಣಾದಿ ಪದ
    ಕಮಲಗಳು ದೃಷ್ಟಾಂತಬಲವಿಲ್ಲದೇ
    ಕಮರಿರಲು, ರವಿಯುದಯಸಾಫಲ್ಯದಲ್ಲರಳಿ
    ಘಮಿಸುತಿವೆ ಪದಸಾರ್ಥ ಗಾಂಭೀರ್ಯದಿ

  23. >ಸೂಚನೆಯ ಭಾವಸೂಕ್ಷ್ಮವ ಗ್ರಹಿಸಿ ನಿರ್ವಹಿಸಿ
    ಯೋಚನಾಕ್ರಮಗಳನು ಸವರಣಿಸೆ ಶಿಲ್ಪ
    ಆಚರಿಸಿತೋರ್ಪಡಿಪ ವೈಚಾರಿಕತೆಯಿದುವೆ
    ಸೈ ಚತುರ ಶ್ರೀರವಿಂದ್ರರ ನುಡಿಯನಲ್ಪ

  24. >ಶ್ರೀಮತಿ ಕಾಂಚನರವರ ಪದ್ಯಗಳಲ್ಲಿ, ಪದಸೌಕುಮಾರ್ಯ ಭೂರಮಣಿಯ ಸಹಜಾಲಂಕಾರ, ಪ್ರಿಯಸಂಗಮಾತುರದ ಭಾವಗಳು ಚೆನ್ನಾಗಿ, ಚೌಪದಿಯ ಹರಿವು ಸುಗಮವಾಗಿದೆ. ಒಂದೆರಡು ಸಲಹೆಗಳು.

    ಸಂಧಿ ಸಮಯವು ಸನಿಹ ಬಂದದ್ದನರಿತು || ಇದನ್ನು ’ಸಂಧಿ ಸಮಯವು ಬಳಿಗೆಸಾರಲರಿತು’ ಹೀಗೆ ಮಾಡಿದರೆ ಎರಡನೆಯಸಾಲಿನಂತೆ, ೫+೫+೫+ಗುರು ಕೂಡಿ ಹೊಂದಿಕೆಯಾಗುತ್ತದೆ.

    ನಲ್ಲನಪ್ಪುಗೆಯ ರಂಗು ಬೆಳಕಾಗಲು || ಇಲ್ಲಿ ೫ರ ಗಣವಿಭಜನೆಯನ್ನು ಸಾಧಿಸುವುದು ಕಷ್ಟ. ನಲ್ಲನ – ಪ್ಪುಗೆಯರಂ – ಗುಬೆಳಕಾ – ಗಲು ಹೀಗೆ ತೊಡಕಾಗುತ್ತದೆ. ಸರಿಪಡಿಸುವುದು ಬಹಳ ಸುಲಭ. ’ಯ’ ತೆಗೆದರೆ ಸರಿ. ನಲ್ಲನ-ಪ್ಪುಗೆ ರಂಗು- ಬೆಳಕಾಗ-ಲು.

    ವಂದನೆಗಳು

  25. >ಚಂದ್ರಮೌಳಿಯವರೆ – ನಿಮ್ಮ ಮೆಚ್ಚುಗೆ ಹಾಗು ಸಲಹೆಗಳಿಗೆ ಧನ್ಯವಾದಗಳು. ಸರಿಮಾಡಿದ ಪದ್ಯಗಳು ಹೀಗಿವೆ :

    ಭಯದ ಕಾನನದಲ್ಲಿ ಕತ್ತಲಿನ ಮಡುವಿನಲಿ
    ಧರಣಿ ವಿರಹದಿ ರವಿಯ ಕಾಯುತಿಹಳು |
    ಗಗನದಲ್ಲಿಹ ಸಖಿಯರವಳನ್ನು ಕರೆದಿಹರು
    ಸಂಧಿ ಸಮಯವು ಬಳಿಗೆಸಾರಲರಿತು ||

    ಮಣಿಗಳಿಂ ಶೋಭಿಸುವ ಹಸಿರು ಸೀರೆಯನುಟ್ಟು
    ನೀರೆಯಾಗಿರಲು ನವ ಅಭಿಸಾರಿಕೆ |
    ಬಿರಿದ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
    ಹೆರಳ ಸಿಂಗರಿಸಿದವು ಬಲು ಚಂದದಿಂ ||

    ಮಂದಾರ ಸಂಪಿಗೆಯು ನೀಡಿರುವ ಕಂಪನ್ನು
    ತಂಗಾಳಿ ಹರಡಿತ್ತು ಮುದಗೊಳಿಸಲು |
    ಕವಿದ ಕತ್ತಲೆಯೆಲ್ಲ ದೂರ ಸರಿಯಿತು ಬೇಗ
    ನಲ್ಲನಪ್ಪುಗೆ ರಂಗು ಬೆಳಕಾಗಲು ||

  26. >Hello ChandraMouliyavare,

    I think in GaNa vibhajane is correct. – nallanap (5) – ugeyaram(5) – gubeLakaa(5).
    Also in the first place, i think it can differ in the last gaNa in choupadi right? as it is kind of free(blank) meter which we need to stretch without actual letters.
    let me know your comment.

    • ಶ್ರೀಶ, ಚಂದ್ರಮೌಳಿಯವರ ಅಭಿಪ್ರಾಯವೇ ಸರಿಯಾಗಿದೆ. ಹೇಗೂ ಗಣವಿಭಾಗ ಮಾಡಬಹುದು. ಆದರೆ ಹಾಗೆ ಮಾಡುವಾಗ ಯತಿಭಂಗ ಆಗಬಾರದು. ಮಾತ್ರಾಚ್ಛಂದಸ್ಸಿನಲ್ಲಿ ಯತಿಭಂಗದ ಬಗೆಗೆ ಕೆಲವೇ ಮಾತುಗಳಲ್ಲಿ ಹೇಳುವುದು ಸ್ವಲ್ಪ ಕಷ್ಟ. ಏನಿದ್ದರೂ ಮುಖತಃ ವಿವರಿಸಬೇಷ್ಟೆ. ಚುಟುಕಾಗಿ ಹೇಳುವುದಾದರೆ ಸ್ಥೂಲವಾದ ನಿಯಮ ಹೀಗೆ:
      ಸಾಮಾನ್ಯವಾಗಿ ಪದವೊಂದು ಎರಡು ಗಣಗಳ ನಡುವೆ ಹಂಚಿಕೊಳ್ಳಲ್ಪಡುವಾಗ ಅದರ ಕಡೆಯ ಒಂದೇ ಲಘುವು ಮಾತ್ರ ಮುಂದಿನ ಗಣಕ್ಕೆ ಹೋಗುವ ಹಾಗಿದ್ದಲ್ಲಿ ಅದರ ಮುಂದಿನ ಪದದಲ್ಲಿ ಅವ್ಯವಹಿತವಾಗಿ (ಅಂದರೆ, ಬಿಡುವಿಲ್ಲದೆ) ಒಂದಕ್ಕಿಂತ ಹೆಚ್ಚಾದ ಲಘುಗಳು ಬರಬಾರದು. ಸದ್ಯದ ಉದಾಹರಣೆಯನ್ನೇ ನೋಡುವುದಾದರೆ
      ನಲ್ಲನಪ್+ಪುಗೆಯ ರಂ+ಗುಬೆಳಕಾ… ಎಂಬಲ್ಲಿ ರಂಗು ಎನ್ನುವ ಪದ ಎರಡು ಗಣಗಳ ನಡುವೆ ಹಂಚಲ್ಪಟ್ಟಿದೆಯಾದರೂ ಆ ಪದದ ಕೊನೆಯ ಲಘ್ವಕ್ಷರವು ಮುಂದಿನ ಗಣಕ್ಕೆ ಸೇರಿದ ಬಳಿಕ ಮೂರು ಲಘುಗಳೇ ಬಂದಿರುವುದು ಗಮನಾರ್ಹ. ಹೀಗಾಗಿ ಗತಿಗೆ ಶ್ರುತಿಕಟುತ್ವವು ಉಂಟಾಗಿದೆ. ಇದೇ ಯತಿಭಂಗ. ಲೆಕ್ಕಕ್ಕೆ ಗಣವಿಭಾಗವು ಸರಿಯಾಗಿದ್ದರೂ ಛಂಸ್ಸಿನಲ್ಲಿ ತಪ್ಪಗುವುದೆಂದರೆ ಇದೇ. ಗಣಭಂಗದ ದೋಷ ಬೇರೆ, ಯತಿಭಂಗದ ದೋಷ ಬೇರೆ. ಆದರೆ ಎರಡೂ ಛಂದೋದೋಷಗಳೇ!:-) ಆದುದರಿಂದಲೇ ಕೇವಲ ಗುರು-ಲಘುಗಳ ಸಮತ್ವ ಹಾಗೂ ಗಣಪ್ರಮಾಣಗಳನ್ನು ಗಣಿಸುವ ಸ್ಥೂಲವಾದ ಛಂದೋನಿಯಮಗಳನ್ನು ತಿಳಿದು ಪದ್ಯಗಳನ್ನು ರಚಿಸುವುದಕ್ಕಿಂತ ಮಹಾಕವಿಗಳ ರಸಮಯವಾದ ಕೃತಿಗಳನ್ನು ಎಚ್ಚರದಿಂದ ಗಮನಿಸಿ ಅಲ್ಲಿಯ ಛಂದೋಗತಿಯು ಉನ್ಮೀಲಿತವಾಗುವಂತೆ ಓದಿಕೊಡಾಗ ನಮಗುಂಟಾಗುವ ಪದ್ಯರಚನಾಪಾಟವ ಅಸಾಧಾರಣ. ಬರಿಯ ರಾಗಗಳ ಆರೋಹಾರೋಹಗಳಿಂದ ಯಾರಿಗೂ ದಿಟವಾದ ರಾಗದ ಅರಿವು ಉಂಟಾಗುವುದಿಲ್ಲ. ಏನಿದ್ದರೂ ಒಳ್ಳೆಯ ಗಾಯಕರ ರಾಗಾಲಾಪನೆಗಳನ್ನು ಕೇಳಿಯೋ ಅಥವಾ ನಾವೇ ಅಂಥ ರಾಗಾಲಾಪನೆಗೆ (by trial and error) ಯತ್ನಿಸಿಯೋ ರಾಗವವೇಕವನ್ನು ಅರಿಯಬೇಕಷ್ಟೆ. ಮಾತು ಉದ್ದವಾಯಿತು, ಮನ್ನಿಸಿರಿ:-)

      • Sir Thanks for the explaination,
        ….its my mistake….i read – kashTa – as not possible and hence the post….
        I understand the aesthetic constraints of meters you have explained and i was just showing mathematical possibility thinking that, he wase mentioning it as impossible to make panchamatragana out of the earlier words of Sri Kanchana….

  27. ಪ್ರಭಾತ ಚತುರ್ಮುಖ

    (೧)
    ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
    ಸಾರೆ ಗಗನಾಂಗನೆಯ ಕೆಂಪು ಕದಪು|
    ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
    ಕೋರಿದುವು ಮಂಗಳದ ಮುಂಬೆಳಗನು||

    (೨)
    ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
    ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
    ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
    ಲಿಂಗನದಿ ನಾಚಿ ಮೊಗ ಕೆಂಪೇರಿದೆ||

    (೩)
    ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
    ರಂಗೋಲಿ ನಗುತಲಿವೆ ಅಂಗಳದೊಳು|
    ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
    ಮುಂಗಡೆಯೆ ಸಾಗುತಿದೆ ಏನು ಬೇಕು?

    (೪)
    ಮಾಗಿಯಿರುಳಿನ ಕೊನೆಗೆ ಮೂಡಣದೆ ನಸುವೆ ಬೆಳ
    ಗಾಗೆ ಜಗವೆದ್ದು ಚಡಪಡಿಸುತಿಹುದು|
    ಸಾಗೆ ಭರಗುಟ್ಟಿ ಬಸ್ಸಾಟೊಗಳು ಒಣಮರದ
    ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||

    • ಮಂಜುನಾಥ – ಪದ್ಯಪಾನಿಗಳ ಬಳಗಕ್ಕೆ ಸ್ವಾಗತ. ನಿಮ್ಮ ಪದ್ಯಗಳು (ವಿಶೇಷವಾಗಿ ೧ ಹಾಗೂ ೨) ಬಹಳ ಇಷ್ಟವಾದವು.

    • ಪದ್ಯ ತುಸು ಮಾರ್ಪಾಟಿಗೊಳಪಟ್ಟಿದೆ. ಮಾರ್ಪಡಿಸಿದ ಪದ್ಯ ಹೀಗಿದೆ:

      (೧)
      ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
      ಸಾರೆ ಗಗನಾಂಗನೆಯ ಕೆಂಪು ಕದಪು|
      ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
      ಕೋರಿದುವು ಮಂಗಳದ ಮುಂಬೆಳಗನು||

      (೨)
      ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
      ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
      ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
      ಲಿಂಗನದಿ ನಾಚಿ ಮೊಗ ಕೆಂಪೇರಿದೆ||

      (೩)
      ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
      ರಂಗೋಲಿ ನಗುತಲಿವೆ ಅಂಗಳದೊಳು|
      ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
      ಮುಂಗಡೆಯೆ ಸಾಗುತಿದೆ ಏನು ಬೇಕು?

      (೪)
      ಮಾಗಿಯಿರುಳಿನ ಕೊನೆಗೆ ಮೂಡಣದಿ ನಸುವೆ ಬೆಳ
      ಗಾಗೆ ಜಗವೆದ್ದು ಚಡಪಡಿಸುತಿಹುದು|
      ಸಾಗೆ ಭರಗುಟ್ಟಿ ಮೋಟಾರುಗಳು ಒಣಮರದ
      ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||

  28. ಕಾಂಚನಾ ಅವರೇ,

    ಕವಿದ ಕತ್ತಲೆಯೆಲ್ಲ ದೂರ ಸರಿಯಿತು ಬೇಗ
    ನಲ್ಲನಪ್ಪುಗೆಯ ರಂಗು ಬೆಳಕಾಗಲು ||

    ಹೃದ್ಯವಾದ ಸಾಲುಗಳು. ಸೊಗಸಾಗಿವೆ.

  29. ಶಸ್ತ್ರಸನ್ನಾಹದೊಳು ಶೌರ್ಯವನೆ ಮರೆತಂತೆ
    ಶಾಸ್ತ್ರಕ್ಕೆ ಕೈ ಹಾಕಿ ಕಾವ್ಯವನೆ ಮರೆತೆ!!
    ಚಂದ್ರ-ಕಾಂಚನ-ರವೀಂದ್ರರ ಕಬ್ಬಗಳ ಸೊಗಸು
    ಸಾಂದ್ರ, ಬಂಧುರ, ನವೋನವ್ಯ, ಭವ್ಯ!
    (ಇಲ್ಲಿ ವೈವಿಧ್ಯಕ್ಕಾಗಿ ಎರಡೆರಡು ಸಾಲುಗಳಿಗೊಂದು ಪ್ರಾಸವನ್ನು ಬಳಸಿದ್ದೇನೆ. ಈ ಸಾಧ್ಯತೆಯೂ ಸ್ವೀಕಾರ್ಯವೇ)

    ಮಕರರೆಂದ ಹಾಗೆ ನಾನು ಬೇಗದಲ್ಲಿ ಬರೆವನು
    ಸುಕರವಾಗಿ ಪದ್ಯರಚನೆ ಮಾಳ್ಪ ಪರಿಯ ನಯವನು

    • > ಶಸ್ತ್ರಸನ್ನಾಹದೊಳು ಶೌರ್ಯವನೆ ಮರೆತಂತೆ
      > ಶಾಸ್ತ್ರಕ್ಕೆ ಕೈ ಹಾಕಿ ಕಾವ್ಯವನೆ ಮರೆತೆ!!

      ಈ ಉಪಮೆ ಅತಿ ಸೊಗಸಾಗಿದೆ. ಅತೀ ರಮ್ಯ. ಯುಧ್ಧದ ಸಂದರ್ಭ ಕಲ್ಪಿಸಿಕೊಂಡು, ನಗು ತಡೆಯಲಾರದವನಾಗಿದ್ದೇನೆ. 🙂

  30. ಕೊಳ್ಳೆಯಗಾಲದ ಸಖರೇ
    ಕೊಳ್ಳೆಯನೇ ಹೊಡೆದಿರಲ್ತೆ ವಾಣಿಯ ಮನೆಯಾ
    ಒಳ್ಳೆಯ ಪದ್ಯಂಗಳ್ಗಿದೊ
    ಕೊಳ್ಳಿರಿ ನೀವೆನ್ನ ನಮನದೊಡೆ ನಲ್ಬರವಂ
    ಶ್ರೀಮಂಜುನಾಥರಿಗೆ ಸ್ವಾಗತ ಹಾಗೂ ಅವರ ಕವಿತೆಗಳಿಗೆ ಮತ್ತೂ ಆದರದ ಸ್ವಾಗತ.

    • ಧನ್ಯವಾದ ಗಣೇಶರೇ, ಈ ತಾಣ ಸೊಗಸಾಗಿದೆ, ಸ್ವಂತ ಮನೆಯಂತೆ. ಇಲ್ಲಿ ಆದಷ್ಟು ಹೆಚ್ಚು ಕಾಲ ಕಳೆಯಲಿಚ್ಛಿಸುವೆ.

      • ಬರೆದು ಮುಗಿಸುವ ಮುನ್ನವೇ reply ಒತ್ತಿಬಿಟ್ಟೆ 🙂 ತಮ್ಮ ಸ್ವಾಗತರೂಪದ ಹಾರೈಕೆ ಮನದುಂಬಿತು. ಸುಮ್ಮನೇ ಹಾಗೊಂದು ಹೀಗೊಂದು ಗೀಚಿಕೊಂಡಿರುವ ನನಗೆ ಅಂಥದ್ದೊಂದೆರಡು ಸಾಲು ತಮಗೆ ಮೆಚ್ಚಾಯಿತೆನ್ನುವುದಕ್ಕಿಂತ ಸಂತೋಷ ಇನ್ನೇನು ಬೇಕು.

  31. ಮಿಲ್ಪಿಟಸ್ಸೆನುವೂರಿನೊಂದು ಫಾಲ್ಬೆಳಗಿನಲಿ
    ಕಲ್ಪಿಸಿದೆ ಕಂಗ್ಲೀಷು ಚೌಪದಿಗಳ
    ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ
    ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ ||1||

    ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ
    -ಯೆಂದು ಬಣ್ಣಿಸುವುದೆಲ್ಲ ಹಳೆಯದಾಯ್ತು
    ಸಂದುಗೊಂದಿಯಪಾರ್ಟುಮೆಂಟಿನಲಿ ವಾಸಿಸಿರ
    -ಲಿಂದು ಕವಿಕಣ್ಣುಗಳೆ ಮಾಯವಾಯ್ತು ||2||

    ಉದಯದಲಿ ಗಿರಿಮೇಲೆ ರವಿಯ ಹೊಂಗಿರಣಗಳು
    ಹದವಾದ ಲಾನಿಗಿರೆ ಮಂಜು ಹೊದಿಕೆ
    ಚದುರಿಹವು ಬಣ್ಣದೆಲೆ ತುಸುಕುಳಿರ ಗಾಳಿಯಲಿ
    ಮುದದ ಮುಂಜಾವಗಳು ಫಾಲಿನಲ್ಲೆ ||3||

    ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ
    ಒಳಿತಾದ ಸ್ಟಾರ್ಬಕ್ಸು ಕಾಫಿಯನ್ನು
    ಗಳಹುತ್ತ ಫೇಸ್ಬುಕ್ಕಿನಲ್ಲಿಯಪ್ಡೇಟಿಸುವುದ
    ಸುಳುವಾಗಿಸಿದ ಮಾರ್ಕು ಜ಼ುಕರ್ಬರ್ಗನು ||4||

    -ಹಂಸಾನಂದಿ

    ( ಹಳೆಯ ಪ್ರಶ್ನೆಗೆ ನನ್ನ ಪ್ರಯತ್ನ. ಕಂಗ್ಲಿಷ್ ಬಳಸಬೇಕೆಂದೇ ಬರೆದಿದ್ದಿದು. ಆದಷ್ಟೂ ಛಂದಸ್ಸನ್ನು ಪಾಲಿಸಿದ್ದೇನೆ (ಎನ್ನಿಸುತ್ತೆ). ಒಂದುವೇಳೆ ಪದ್ಯಪಾನಕ್ಕೆ ಇದು ಸೂಕ್ತವಲ್ಲ ಎನಿಸಿದರೆ, ನಿರ್ವಾಹಕರು ದಯವಿಟ್ಟು ತೆಗೆದುಬಿಡಿ. )

    • ಬೆಳಗಾಗೆ ಮಿಲ್ಪಿಟಾಸಲ್ಲದರ ವರ್ಣಿಪುದ
      ಹಳಿವೆವೆಂದೇಕಿಂದು ವರಿಮಾಳ್ಪಿರಿ |
      ಕಳೆಯಲ್ಲವೀ ಪದ್ಯಗಳು ಪದ್ಯತಾಣದೊಳು
      ಬೆಳೆಯ ವಿವಿಧತೆಯೆಂದೆ ನಾಂ ಬಗೆವೆನೈ ||

  32. (ಮೂಡುವೆ)(ಣ್ಣಿನ ಕೆಂಪು)(ರಸವಾಗಿ)ರೆ
    (2 1 2 )(1 1 2 1 ) (1 1 2 1 )1

    ಈ ಮೇಲಿನ ಗಣವಿಂಗಡಣೆಯಲ್ಲಿ ದೋಷವಿದ್ದಲ್ಲಿ ದಯಮಾಡಿ ತಿಳಿಸುವುದು. ಇಲ್ಲದಿದ್ದಲ್ಲಿ ‘ರೆ’ ಗೆ ವಿವರಣೆ ನೀಡಬೇಕಾಗಿ ವಿನಂತಿ.

    • Hi, this is correct

    • ಪಂಚಮಾತ್ರಾ ಛಂದಸ್ಸಿನ ಈ ಬೆಸಸಾಲಿನ ಗಣಸಂವಿಧಾನ ಸರಿಯಾಗಿದೆ.
      ’ರೆ’ ಎಂಬುದು ಒಂದು ಮಾತ್ರೆಯಾಗಿದ್ದರೂ, ಅರ್ಧಾಂತ್ಯದ, ಊನಗಣದ ಈ ಒಂದು syllableನ್ನು ಗುರು ಎಂದೇ ಗಣಿಸತಕ್ಕದ್ದು. ಏಕೆಂದರೆ ಉಚ್ಚಾರಣೆಯಲ್ಲಿ ಅದು ದೀರ್ಘವಾಗುತ್ತದೆ.

  33. ಕಳೆದಿರುಳ ಕತ್ತಲೆಯ ಸುರಿಸಿ ಬೆಳಕಿನ ಮಳೆಯ
    ಹೊಳೆದಿರಲು ಮುತ್ತೊಂದು ಬಾನಂಚಿನಲ್ಲಿ
    ತುಳುಕದಿಹ ನೀರಲಿಹ ನೀರಜೆಯು ನಗುತಿಹಳು
    ಬೆಳಕಿನೊಡೆಯನ ನೋಡಿ ಕೆಂಪೇರುತ

    ಹಕ್ಕಿಗಳ ಕಲರವವು ಕಿವಿಗಿಂಪ ನೀಡಿರಲು
    ಸಕ್ಕರೆಯ ಸವಿಯೊಲವು ಮನೆತುಂಬುತಿರಲು
    ನಕ್ಕುನಗುತಲಿ ತರಳರೆಲ್ಲರಾಡುತಲಿರಲು
    ಉಕ್ಕಿಹುದು ಮನದೊಳಗೆ ಖುಷಿಯ ಹೊನಲು

    ಇರುಳ ಮುಸುಕನು ಸರಿಸುತೆದ್ದಿರುವ ಮರಿಸೂರ್ಯ
    ಕೆರಳುತಲಿ ತಾನಳಲು ಬಾನು ಕೆಂಪಾಯ್ತು
    ಅರೆರೆ ಮಗುವೆಯೇಕೆ ಕೋಪವೆನೆ ಜಗದಂಬೆ
    ಮರಳಿ ಜಗಮೊಗದೊಳಗೆ ನಗುಮೂಡಿತು
    [ಕೆರಳಿದನ ಮೊಗದೊಳಗೆ ನಗುಮೂಡಿತು]

    ಇನ್ನೊಂದು ಪ್ರಯತ್ನ. ಮೊದಲ ಪದ್ಯ ಮಂಜುನಾಥ್ ಸರ್ ಅವರ ಪದ್ಯದಿಂದ ಸ್ಫೂರ್ತಿ ಪಡೆದುಕೊಂಡಿದೆ.
    ಜಗಮೊಗದೊಳಗೆ ನಗುಮೂಡಿತು ~ ಸೂರ್ಯನ ಹೊನ್ನ ಕಿರಣಗಳು ಮೂಡಿದವು ಎನ್ನುವ ಅರ್ಥದಲ್ಲಿ ಬಳಸಿದ್ದೇನೆ.

  34. ಮುಸುಕಿರ್ಪ ಮಬ್ಬಿನೊಳ್ ಪಕ್ಕಿಗಳ ಚಿಲಿಪಿಲಿಯು
    ನಸುಕಿನೊಳ್ ಮುತ್ತಿನಾ ಮಂಜುದುರಿದೆ
    ಹೊಸದಾಗಿ ನಗುತಲಿವೆ ಹಿರಿಕಿರಿಯ ಪುಷ್ಪಗಳು
    ಹೆಸರಿಪರೆ ಮುಂಜಾನೆಯಾ ಸಗ್ಗವಂ?

    ( ದಯವಿಟ್ಟು ಪದ್ಯಗಳಲ್ಲಾದ ದೋಷಗಳನ್ನು ತಿಳಿಸಿ.)

Leave a Reply to Manjunatha Kollegala Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)