Feb 112014
 

ಕಂದದಲ್ಲಿ ಸಮಸ್ಯೆ: ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ||

ಹಿಂದಿನೊಂದು ಅವಧಾನದಲ್ಲಿ ಶ್ರೀ ರಾ. ಗಣೇಶರಿಗೆ ಸಂದ ಸಮಸ್ಯೆ ಇದು. ಅಂದು ಅವರ ಪರಿಹಾರ ಇಂತಿತ್ತು:

ಚಿಂತಾಕುಲಾ ಮರಕುಲಾ| ಶಾಂತತೆ ನೀಗಲ್ಕೆ ಬಲಿಗುಡಲ್ ನಿಜತನುವಂ|

ಕಾಂತನವಂ ಸನ್ಮಿತ್ರವ| ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ||

  85 Responses to “ಪದ್ಯಸಪ್ತಾಹ ೯೬: ಸಮಸ್ಯಾಪೂರಣ”

  1. ಗಣೇಶರ ಪರಿಹಾರವನ್ನು ಓದದೆ ನನ್ನ ಪರಿಹಾರ ಹಾಕುತ್ತಿದ್ದೇನೆ. ಏಕೆಂದರೆ ಅವರೂ ಇದೇ ವರಸೆಯಲ್ಲಿ ಮಾಡಿರಬಹುದೆಂದು ಊಹೆ.

    ಪಂತದಿನೀಶ್ವರನ ತಪ-
    ಸ್ಸಂ ತಾನುಳಿಪೆನೆನೆ ಬಗೆದ ಸಖನಿಂದಯ್ಯೋ
    ಎಂತುಳಿವನಿಂದೆನುತ್ತೆ ವ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ

    • ನನ್ನ ಊಹೆ ತಪ್ಪಾಗಲಿಲ್ಲ 🙂

      • ಬಹುದಿನಗಳ ಬಳಿಕ ಶ್ರೀಕಾಂತರ ಆಗಮನ! ಪದ್ಯಪಾನಕ್ಕೆ ಹೊಸ ಜೀವವೇ ಬಂತು!! ನಿಮ್ಮದು ಸೊಗಸಾದ ಪರಿಹಾರ. ಧನ್ಯವಾದ. ವೈದ್ಯವರ್ಯರೇ! ಮೂರನೆಯ ಪಾದದಲ್ಲಿ ಮಾತ್ರೆಯೊಂದು ತಗ್ಗಿದೆ. ಮರೆತು ಮತ್ತಾರಿಗೆ ಕೊಟ್ಟಿರಿ? 🙂

      • ನೋಡಿದಿರ ಗಣೇಶರೆ. ಒಂದು ತಿಂಗಳಲ್ಲಿಯೇ ಅಭ್ಯಾಸ ತಪ್ಪಿಹೋಗಿದೆ 🙂 ತೋರಿಸಿದ್ದಕ್ಕೆ ಧನ್ಯವಾದಗಳು. ಎರಡು ಮಾತ್ರೆಗಳನ್ನು ಭರಿಸಿದ್ದೇನೆ.

      • Ok, I will believe you 😉

  2. ಪಿಂತಾ ಮಾರ್ಕಂಡೇಯನ
    ನಂತಕಲೋಕಕ್ಕೆ ಕೊಂಡು ಪೋಗಲ್ವಂದಿ-
    ರ್ದಂತಕನಂ ನೋಳ್ಪೊರ್ವಂ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ||
    (ಆ ಸಾಂಬಾರಿಗಲ್ಲದೇ ಬೇರೆ ‘ಸಾಂಬಾರಿ’ಗಾಗಿ ಕಂಬನಿ ಮಿಡಿದರೆ ‘ನೀರಸ’ವಾಗಿಬಿಡುತ್ತದೆ ಅನಿಸುತ್ತಿದೆ 🙂 )

    • ಅಹುದೈ ಬಡಿಸಿರ್ಪಾ ಭೋ-
      ಜನಪತ್ರದ ಮುಂದೆ ನೀಂ|
      ಕರೆಯಲ್ ಕೋಡಿಕಣ್ಣೀರಂ
      ತಿಳಿಯಪ್ಪುದು ಕೂಟು ತಾಂ||

  3. ಎಂತುಟೊ ದಿನಂಗಳಿಂದಂ
    ಶಾಂತಿಯಿನಿಂ ಸೇವಿಸುತ್ತೆ ಪಥ್ಯದ ಕಟ್ಟಂ|
    ವಾಂತಿಯ ಗೈಯುತಲೊಮ್ಮೆ ವ
    ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ||
    Vasanta – Name of the patient

  4. ಅಂತಿಂಥವನಲ್ಲನವಂ
    ಪಿಂತಣ ಗೇಹದ ಗೃಹಸ್ಥ; ಕಂಡುಂ ಸಾವಂ
    ಸಂತಾಪಿಸಿದಂ, ದಿಟದೊಳ್
    ಸಂತಂ, ಸಾಂಬ! ಅರಿಗಾಗಿ ಕಂಬನಿ ಮಿಡಿದಂ!

    ಸಾಂಬ = ಶಿವ (ಹೆಸರು)
    ಗೃಹಸ್ಥ = ಸಂಸಾರಿ

  5. ಕಂತಿ ಗಣೇಶರ ಮೀಟಿಂ-
    -ಗಂತೆಂಬ ವಿಷಯ ಹರಡಿರೆ, ಲಂಚಿಗೆ ಸೇರ್ದರ್
    ಮುಂತೀರುಳ್ಳಿಯ ನೋಡಲ್
    ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ||

    ಕಂತಿ (ಜೈನ ಕವಿಯಿತ್ರಿ, ನನಗೆ ತಿಳಿದಿರುವಂತೆ ಕನ್ನಡದ ಮೊದಲ ಅವಧಾನಿ) ಮತ್ತು ನಮ್ಮ ಗಣೇಶರು ಲಂಚ್ ಗೆ ಮೀಟ್ ಮಾಡಿದಾಗ , ಬಡಿಸಿದ್ದ ಈರುಳ್ಳಿಯನ್ನು ನೋಡಿ ಗಣೇಶರು (ಸಧ್ಯಕ್ಕೆ ಅವರನ್ನು ಸಂತರೆಂದು ಅಂದುಕೊಳ್ಳೋಣ) ಈರುಳ್ಳಿಯಿಲ್ಲದ ಸಾಂಬಾರಿಗಾಗಿ ಕಂಬನಿ ಮಿಡಿದರೆಂದು ಹೇಳಲು ಪ್ರಯತ್ನಿಸಿದ್ದೇನೆ.

    ಗಣೇಶರು ಈರುಳ್ಳಿಯನ್ನು ಇಷ್ಟಪಡುವುದಿಲ್ಲ ಎನ್ನುವುದು ನಮಗೆಲ್ಲರಿಗೂ ತಿಳಿದ ವಿಷಯವೇ.
    ಮುಂತೆ – ಮೊದಲು, ಮುಂತೆ+ಈರುಳ್ಳಿ – ಮುಂತೀರುಳ್ಳಿ – ಸಂಧಿ ಸರಿಯೇ?

    • ಹೌದು, ಶ್ರೀ ಗಣೇಶರು ಆ ಸಂಬಾರಿನ ಪಾಡನ್ನು ಕಂಡು ಕಂಬನಿಮಿಡಿದರು:
      ಈರುಳ್ಳಿ ಸೇರದಿರುವವಧಾನಿ ಕಂಬನಿಯ
      ವಾರಿಸರು ಕಂಡೊಡೀ ಸಾಂಬಾರನುಂ|
      “ದೂರದಿಂದಲೆ ಸೈರಿಸಲು ಕಷ್ಟವಾ ಗಮಲು
      ಪೀರಿಕೊಂಡಿತದ ಸಾಂಬಾರದೆಂತೋ?”|

      ಅಲ್ಲದೆ,
      ನಿಮ್ಮಯ ನಿರ್ದೇಶದ ವೋಲ್
      ನಮ್ಮಯ ದೇಶಿಕ ಗಣೇಶರಂ ಸದ್ಯಕೆ ನಾಂ|
      ನೆಮ್ಮುತೆ ’ಸಂತ’ರೆನುತೆ ಮ-
      ತ್ತೊಮ್ಮೆಗಮೇನೆನುತೆ ತಿಳಿವುದೆಂದುಂ ಪೇಳೌ|| 🙂

      • ಸದ್ಯಕೆ ’ಸಂತರ್’ ಸಂತತ
        ಪದ್ಯಕೆ ಗುರುಗಳ್ ದಯಾಗುಣದವರ್ ಗೆಳೆಯರ್

      • ಅಯ್ಯೋ! ‘ಗುರು’ವೆಂದಿರೆ? ನೋ
        ಡಯ್ಯರ ಮಾದರಿದಯಾಗುಣಮೆರಗುಗೀಗಳ್!
        (Also ಅಯ್ಯರ‍್-ರ ಮಾದರಿದಯಾಗುಣ ಮೆರಗುಗೀಗಳ್!)

    • ಗಾಯತ್ರಿಯವರಿಗೆ ಧನ್ಯವಾದ. ಒಳ್ಳೆಯ ನೂತನ-ಸ್ವಾರಸ್ಯಕರಕಲ್ಪನೆಯನ್ನೇ ಮಾಡಿದ್ದೀರಿ. ನಿಮ್ಮ ಪೂರಣಕ್ರಮ ನನಗೆ ತುಂಬ ಇಷ್ಟವಾಯಿತು. ಸ್ವಲ್ಪ ಹಳಗನ್ನಡದ ಹದ ಹೆಚ್ಚಾಗಬೇಕಷ್ಟೇ. ನಿಜಕ್ಕೂ ಈ ಸಮಸ್ಯೆಯ ಪರಿಹಾರಕ್ಕೆ ಅನೇಕರೀತಿಯ ಸಾಧ್ಯತೆಗಳಿಲ್ಲವೆಂದೇ ನನಗೆ ತೋರುತ್ತದೆ. ಆದರೂ ನೀವು ಒಳ್ಳೆಯ ಸಮಕಾಲಿಕವಾದ
      ಹಾಗೂ ಕಾಲ್ಪನಿಕಸಂದರ್ಭವನ್ನು ರೂಪಿಸಿ ರಚನಾತ್ಮಕಪೂರಣವನ್ನು ನೀಡಿದ್ದೀರಿ! 🙂
      ಎರಡನೆಯ ಸಾಲಿನಲ್ಲಿ ಯತಿಭಂಗವಾಗಿದೆ. ಅದನ್ನು “…..ವಿಷಯವು ಹರಡೆ…” ಎಂದು ಸವರಿಸಬಹುದು.
      ಪ್ರಸಾದು ಅವರ ಪ್ರತಿಕ್ರಿಯೆಗಳೂ ಸೊಗಸಾಗಿವೆ.

      • ಧನ್ಯವಾದಗಳು ಗಣೇಶರೆ. ನನ್ನ ಮಿತಿಗಳ ಬಗ್ಗೆ ಅರಿವಿದೆ. ಹಾಗೆಂದೇ ಇಂತಹ ಪರಿಹಾರಗಳನ್ನು ರಚಿಸುತ್ತಿರುವುದು. ಗಂಭೀರವಾದ ವ್ಯಾಸಂಗ ಮಾಡುವ ಆಸೆಯಂತೂ ಇದೆ.

  6. ಶಾಂತಿಯನರಸುತಲಾ ಶ್ರೀ
    ಮಂತಂ ವೈರಾಗ್ಯಮೆನುತೆ ದೀಕ್ಷೆಯನಾಂತಂ
    ಕಂತಿನ ಭಿಕ್ಕೆಯ ತಿಳಿಯೊಳ್
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ

    ಕೊಪ್ಪಲತೋಟನೆಂದಂತೆ ನೀರಸವಾದರೂ… ಅದೇ ಸಾಂಬಾರಿಗೇ ಕೈಹಾಕಿದ್ದೇನೆ 😉

    • ಅಲ್ಲಿ ತೋಟಕಂಗೆಂದ ಮಾತನೇ ನಿಮಗೆ ಪೇಳ್ವೆ ಸೋಮ|
      ಚೆಲ್ಲೆ ಕಣ್ಣನೀರನ್ನು ಊಟದೆಲೆಯೊಳಗೆ ಫಣಿತ ಕೂಟೈ||
      (ಫಣಿತ = become dilute, ಕೂಟು=ಸಾಂಬಾರ್)

    • ಬೇಸರವೇಕೆ ಸೋಮ! ಪರಿಹಾರದ ಮಾರ್ಗದೊಳಿಲ್ಲವೆಂದು ಸೋ-
      ಲ್ಲಾಸಕಸಾಧ್ಯತಾಪ್ರಚಯಂ; ಇರ್ಕೆ ಭವತ್ಪರಿಪೂರಣಕ್ರಮಾ-
      ಶ್ವಾಸನೆಯುಂ ಗಡಿಂತೆ ಮುಗುಳೊಪ್ಪಿದ ಕೊಪ್ಪಲ ತೋಟನುಂ ವ್ಯಥಾ-
      ಯಾಸಕೆ ಸಂದನ್ನಲ್ತೆ; ಕವಿತಾಭ್ಯಸನಕ್ಕಿದು ದಕ್ಕಲೊಪ್ಪುಗುಂ ||

      (ಪದ್ಯರಚನೆಗೆ ಇದೊಂದು ನೆವವಾದರೆ ಸಾಕು, ಉತ್ಕೃಷ್ಟಪರಿಹಾರವಿಲ್ಲಿ ಬರಲೇಬೇಕೆಂಬ ಹಂಬಲವು ಆಗ್ರಹದ ಮಟ್ಟಕ್ಕೆಏರಿ ಬೇಸರವಾಗದಿದ್ದರೆ ಸಾಕು; ಕೊಪ್ಪಲತೋಟನಿಗೂ ಇದೇ ವ್ಯಥೆಯಲ್ಲವೇ! ಅವನಿಗಾದರೂ ಈ ಉತ್ತರವೇ ಸಂದೀತು.)

      • ಗಣೇಶ್ ಸರ್, ಹೌದು, ಸಾಧ್ಯತೆಗಳು ಕಡಿಮೆಯಿರುವ ಸಮಸ್ಯೆಗಳನ್ನು ಪರಿಹರಿಸುವಾಗ ಈ ರೀತಿ ಎನಿಸುತ್ತದೆ. ನೀವೆಂದಂತೆ ಪದ್ಯರಚನೆಗೆ ಇದೊಂದು ನೆವವಾದರೆ ಸಾಕು. ಉತ್ತಮ ಪದ್ಯ ಬಂದರೆ ಅದು ಬೋನಸ್ಸು 🙂

  7. ತುಂತುರುಗುಳುಗಳ್ನುಗುಳುತ
    ಸಂತೆಯ ದೃಷ್ಯದೊಳುಭಿಕ್ಕೆಯಂವೇಡುವವೊಲ್|
    ಕಿಂತೀ ನಗೆನಾಟಕದೊಳ್
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ|

    • ಪದ್ಯದ ಐಡಿಯ ಚೆನ್ನಾಗಿದೆ ಚೀದಿ.

      ದೃಷ್ಯದೊಳುಭಿಕ್ಕೆಯಂವೇಡುವವೊಲ್:
      1) ದೃಷ್ಯ~ದೃಶ್ಯ
      2) ಪ್ರತ್ಯಯದ ನಂತರ ಪದವನ್ನು ಒಡೆದು ಬರೆಯಿರಿ: ದೃಶ್ಯದೊಳು ಭಿಕ್ಕೆಯಂ ವೇಡುವವೊಲ್

      ‘ತುಂತುರುಗುಳು’ ಹಾಗೂ ‘ಗಳ್ನು’ಗಳ ಸೂಕ್ತತೆಯ ಬಗೆಗೆ ದಯವಿಟ್ಟು ಯಾರಾದರೂ ವಿಶದೀಕರಿಸಿರಿ.

      • ಅರ್ಥವಾಗಲಿಲ್ಲ ಚೀದಿ! ನಿನ್ನೀ ಪದ್ಯ
        ಸಾರ್ಥಕತೆಯ ತರುವ ಹಾಗೆ ನುಡಿಯಯ್:-)

        • ಉಗುಳಿಕೊಂಡು ಮಾತಾಡುತ್ತಿದ್ದ ಸಂತನ ವೇಶಧಾರಿಯು ಭಿಕ್ಷೆ ಬೇಡಿ ಬಂದ, ನಗೆ ನಾಟಕದ ಸಂತೆಯ ಒಂದು ದೃಶ್ಯದ ಕಲ್ಪನೆ.. i know this could have been better 🙁

      • Thanks Prasadu… but it did not come out well

  8. ಚಿಂತಿಪನಂಗನೆಯರ್ಗಳಂ (ಶಿ. ದ್ವಿ.)
    ಸಂತತಮಾ ಖಳಯತಿ ವ್ರತದೊಳನಶನದೊಳ್
    ನಿಂತವೊಲಿರ್ಪಂ ಮನದೊಳ್
    ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ

    ಮನದ ಮನ್ಮಥಚೇಷ್ಟೆಯನ್ನು ಈಡೇರಿಸಲಾಗದಿದ್ದಾಗ ಖಿನ್ನನಾಗುವ ಖಳಯತಿಯ ಪೂರಣ
    ಸಂತ – ವ್ಯಂಗ್ಯಾರ್ಥದಲ್ಲಿ

    • ತುಂಬ ತುಂಬ ಸೊಗಸಾದ ಪರಿಹಾರ!! ಅಭಿನಂದನೆಗಳು ಸೋಮ!!! ಒಳ್ಳೆಯ ಗಾಂಭೀರ್ಯ-ಸೌಂದರ್ಯಗಳಿಲ್ಲಿ ತುಂಬಿವೆ.

  9. ಕಂತಿರೆ ಲೋಕದ ಕಾಂತಿ ವಿ-
    ನಂತಿಗೆ ವಂತಿಗೆ ವಿವೇಕಕೆ ವಿನೋದಮೆ ಓ-
    ರಂತಿರೆ ಚಿಂತಿಸುತೋರ್ವಂ
    ಸಂತಂ ಸಾಂಬಾರಿಗಾಗಿ ಕಂಬನಿಮಿಡಿವಂ||

    • My mistake! took saMbaari for Shiva instead of Manmatha. Solution does not play properly now 🙁

    • ಆದರೂ ನಾವು ಅದರೊಳಗೆ ಒಂದು ಅರ್ಥವನ್ನು (ದರ್ಶನವನ್ನು!) ಕಂಡುಕೊಂಡೆವು – ‘ಕಂತಿರೆ ಲೋಕದ ಕಾಂತಿ, ಸಾಂಬಾರಿ ಬಂದಿದಂ ಕಾಂತಿಮಯಮಾಗಿಸುಗುಂ’. ಹೊಳ್ಳರ ಕಬ್ಬದೊಳ್ ಪೊಲ್ಲಮೇಂ!

  10. ಹಂತಕಶಂಬುವ ಸೆರೆಯಂ
    ಪಿಂತೆಯೆ ಗೆಯ್ಯಲ್ಕೆ ಪೋಗಿ ಮಡಿದಾ ಸ್ಮೃತಿಯಂ
    ಚಿಂತಿಪ ನೇಹದೆ ಮಿತ್ರವ-
    ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ

    ಸಾಂಬ-ಸಾಂಬಾರಿಯ-ಸ್ನೇಹಿತವಸಂತಕಾಲರ ಪೂರಣವೇ ಚೆನ್ನಾದುದು. ಆದರೆ, ಇಲ್ಲಿ ಯಾರೋ ಕುಖ್ಯಾತಿಯ ಸಾಂಬನೆಂಬ ಖಳನನ್ನು ಹಿಡಿಯಲು ಹೋಗಿ ಎನ್ಕೌನ್ಟರ್ನಲ್ಲಿ ಮಡಿದವನನ್ನು ವಸಂತನೆಂಬ ಸ್ನೇಹಿತನು ದು:ಖದಿಂದ ನೆನೆವ ಪೂರಣ 🙂

    • ಅಡ್ಡಿಯಿಲ್ಲ! ಸೋಮ! ನೀನೊ ಬಲ್ prolific !!
      ಖೆಡ್ಡ ಮಾಡಿ ಕೆಡವುತಿರುವೆಯಲ್ತೆ |
      ಅಡ್ಡ-ತಿಡ್ಡವಾದ ಕಲ್ಪನೆಗಳಿಂದಲೂ
      ದೊಡ್ಡ ದೊಡ್ಡ ಸಂಖ್ಯೆ ಪದ್ಯಗಳನು 🙂 🙂

  11. ಚಿಂತಿತನಾದಂ “ಸಾಂ”ನುಂ
    ಸ್ವಂತ ಗ್ರಾಮದೊಳಗೊಮ್ಮೆ ಮದ್ಯ ಸಿಗದಿರಲ್|
    ಎಂತಹ ಚಟಮೋ ಕಾಣಿಂ!
    ಸಂತಂ ಸಾಂ, “ಬಾರಿಗಾಗಿ” ಕಂಬನಿ ಮಿಡಿದಂ||

    ಸಾಂ=Sam (name) or ಶ್ಯಾಂ = ಶಾಂ = ಸಾಂ
    ಸಂತಂ = ಶಾಂತವಾಗಿ,ಸಾವಕಾಶವಾಗಿ,ನಿಧಾನವಾಗಿ

    • ಚೆನ್ನಾದ ಕಲ್ಪನೆ. I have a friend named Sam. I will share this with him. ಕೊನೆಯ ಪಾದದ ಸಾಂ+ಬಾರ್ ತುಂಬ ಚೆನ್ನಾದ ವಿಭಜನೆ.

      • Thanks, Prasaad. Not only this, you can share paniya too 🙂

        • ಕಾಂಚನ! ಕವಿತಾವನಿತಾ-
          ಕಾಂಚನಕಂಠಿಕೆಯ ಹಾಗೆ ನವಕಲ್ಪನೆಯಂ |
          ಸಂಚಯಿಸಿದ ನಿಮ್ಮೀ ಪರಿ-
          ಗಂ ಚಿತ್ತಂ ಮುದಮನಾಂತು ಮಲರದೆ ಬುಧರಾ? !

          ತುಂಬ ಸ್ವೋಪಜ್ಞಸುಂದರಪರಿಹಾರ! ಭಾಷೆಯೂ ಸೊಗಸಾಗಿದೆ. ಅಭಿನಂದನೆಗಳು.

          • ಪ್ರೋತ್ಸಾಹಕ ನುಡಿಗಟ್ಟಿಗಾಗಿ ತಮಗೆ ಅನಂತ ಧನ್ಯವಾದ, ಸರ್.

        • Bad luck, HE has stopped drinking now!

    • ha ha chennAgide kAnchana avare 🙂

  12. ಸಂತತಮುಂಡು ಬಡತನದೆ,
    ಕಾಂತೆಯೊಡನರುಚಿಯ ಸಪ್ಪೆಗೂಳಂ ಬೆತೆಯಿಂ,|
    ಚಿಂತಿಸಿ, ಬಯಸಿ, ದೊರಕದೆ, ವ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ ||

    • ಎಳೆವೆ ನಿಮ್ಮ ನಾಂ ಕೇಳಿ ಕಟಕಟೆಗೆ ಪಾದೆಕಲ್ಲರರಸಿ|
      ಬಳಸಿಕೊಂಡಿರೇಂ ನನ್ನ ಕೀಲಕವ ಹೆಚ್ಚುಕಮ್ಮಿ ಅಂತೇ||

  13. ಸಾಂಬ ಎಂಬುದನ್ನು ಸ+ಅಂಬಾ+ಅರಿ (ತಾಯಿಯ ಒಡನೆ, ಅರಿ ಎನ್ನುವುದಕ್ಕೆ ವೈರಿ ಎಂಬ ಅರ್ಥವಲ್ಲದೆ ಚಕ್ರ ಎಂದು ಕೂಡ ಅರ್ಥವಿದೆ.) ಇತ್ಯಾದಿಯಾಗಿಯೂ ಸೀಳಿ ಕವನಿಸುವತ್ತ ಪದ್ಯಪಾನಿಗಳು ಚಿಂತಿಸಬಹುದು.

  14. ಕಾಂತೆಯುಣಬಡಿಸಿರಲ್ ಲೇ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದೇ
    ಕಾಂತದೊಳಾಕಾಂತಂ ತಾಂ
    ಸಂತಾಪದೆ ಬಾರಿಬಾರಿ ಕಂಬನಿ ಮಿಡಿದಂ ।।

    (ಹೆಂಡತಿ ಬಡಿಸಿದ ಬಿಸಿಬಿಸಿ ಹುಳಿಯನ್ನು “ಲೇಸಂತ” ಉಂಡ ಗಂಡನ ಕಲ್ಪನೆಯಲ್ಲಿ)

    • ವಿವರಣೆಯಲ್ಲಿ, ಅವನು ಲೇಸಂತ ‘ಉಂಡ’ ಎಂದಿರುವಿರಿ; ಪದ್ಯದಲ್ಲಿ, ಅವಳು ಲೇಸಂತ ‘ಉಣಬಡಿಸಿದಳ್’ ಎಂದಿರುವಿರಿ. ವಿವರಣೆಗನುಗುಣವಾಗಿ ತಿದ್ದಲು ಆಗದೇನೋ. ಚೆನ್ನಾದ ಈ ಕೀಲಕಕ್ಕೆ ಬೇರೆ ಪರಿಹಾರ ಹುಡುಕಿ – ಇತರರು capitalize ಮಾಡುವ ಮುನ್ನ 😉

  15. Sorry Usha,
    ಎಂತೋ ವಿವಾಹದಾದಿಲೆ
    ಕಾಂತಂ ನುಂಗಿರ್ದು ಪಳಗದ ಸತಿಯಡುಗೆಯಂ|
    ಚಿಂತಿಸಿ ತಾಯಡುಗೆಯ, ಲೇ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ||
    (ಲೇಸಂತಂ=ಲೇಸಾದ)

    • ಪ್ರಸಾದ್ ಸರ್, ಪದ್ಯದಲ್ಲಿ ಅಮ್ಮನ “ಪಳದ್ಯ” ನೆನಪಾಯಿತೇ?!

  16. ಜ್ಞಾನಚಕ್ಷುವಿನಿಂದ ತನ್ನ ಪೂರ್ವಜನ್ಮಗಳಲ್ಲೂ ತಾನು ಸಂತನಾಗಿಯೇ ಇದ್ದುದು ತಿಳಿದು, ಪುನರ್ಜನ್ಮವನ್ನು ತಪ್ಪಿಸುವ ತನ್ನ ಸಾಧನೆಗಳು ಅಸಫಲವಾಗಿರುವಾಗ, ‘ಪುನರಪಿ ಜನನೀಜಠರೇ ಶಯನಂ’ ಎಂಬ ಚಕ್ರವನ್ನು ಸಂತೋಷದಿಂದ ಸ್ವೀಕರಿಸಿದ.

    ಆಂತರ್ಯವ ಭೇದಿಸಿ ತಿಳಿ
    ದಂ ತಪ್ಪದು ಪುರುಡೆನುತ್ತೆ ಜನ್ಮಾಂತರದಿಂ!
    ಬಂತೇಂ ಭಾಗ್ಯಂ ದೇವಾ?
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ|| {ಸ+ಅಂಬಾ+ಅರಿ (ಚಕ್ರ)}. ಮೇಲೆ ಸಂಖ್ಯೆ 13 ನೋಡಿ.

  17. ಗಣೇಶರೆ,
    हसन्ती f. a portable fire-vessel, small furnace, chafing-dish. ಇದನ್ನು ’ಹಸಂತಂ’ ಎಂದು ಕನ್ನಡಕ್ಕೆ ತಂದುಕೊಳ್ಳಬಹುದೆ?

    • ಒಳ್ಳೆಯ ಪರಿಹೃತಿಯಾದುದು
      ಕೊಳ್ಳೆಯೆ ತಾನಾಯ್ತು ನೂತ್ನಕಲ್ಪನನಿಧಿಯಾ |
      ಮುಳ್ಳಾದ ಸಮಸ್ಯೆಗಿದೇ
      ದಳ್ಳಿಪ ಪರಿಹಾರಮೆನಿತು ಚೆಲ್ವು ಪ್ರಸಾದೂ !!

  18. ಕುಂತಿಯ ಸೊಸೆಯಂ ಪೀಡಿಸು –
    ವಂತಾ ಮುನಿಗಳ ಸಮೂಹವಂದದಿ ತೇಗಲ್
    ಪಂತಿಯ ಭೋಜನ ಮಾಡದೆ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ

    ಇದು ದ್ರೌಪದಿ ತನ್ನ ಅಕ್ಷಯ ಪಾತ್ರೆಯ ನೆರವಿನಿಂದ ದೂರ್ವಾಸ ಮತ್ತು ಅವನ ಶಿಷ್ಯರನ್ನು ತೃಪ್ತಿಗೊಳಿಸಿದ ಸಂದರ್ಭ. ನಿಜದಲ್ಲಿ ದ್ರೌಪದಿ ಅವರಿಗೆ ಬಡಿಸುವುದಿಲ್ಲ. ಪಾತ್ರೆಯಲ್ಲಿ ಉಳಿದ ಸ್ವಲ್ಪ ಅಡಿಗೆಯನ್ನು ಕೃಷ್ಣ ಸೇವಿಸಿದ್ದರಿಂದಲೇ ಎಲ್ಲರಿಗೂ ಹೊಟ್ಟೆ ತುಂಬಿದಂತಾಯಿತು ಎಂದು ಕುಮಾರವ್ಯಾಸ ಬರೆದಿದ್ದಾನೆ. ನಾವು ಕಥೆಯನ್ನು ಬದಲಾಯಿಸಿ ದ್ರೌಪದಿ ಅವರಿಗೆಲ್ಲಾ ಪಂಕ್ತಿ(ಪಂತಿ) ಯಲ್ಲಿ ಬಡಿಸಿದಳು ಎಂದು ಕಲ್ಪನೆ ಮಾಡಿಕೊಳ್ಳಬಹುದು!

    • ತುಂಬ ಸ್ವಕಪೋಲಕಲ್ಪಿತಕಲ್ಪನೆಗಳನ್ನು ಸಮಸ್ಯಾಪೂರ್ತಿಯ ಪದ್ಯದ ಆಚೆಯಿಂದಲೇ ಮಾಡುವುದಾದಲ್ಲಿ ಸಮಸ್ಯೆಯು ತನ್ನಂತೆಯೇ ಪರಿಹಾರವಾಗಿದೆಯೆಂದೂ ಕಲ್ಪಿಸುವಂಥ ವಿಕಟಪರಿಸ್ಥಿತಿ ಬಂದೀತು ! 🙂

  19. ಕಂತೆ ತಿರುಪೆಯೊಳ್ ದೊರಕಿರ
    ಲಂತುಂ ಬರಿಯನ್ನವಂದು, ತಿರುಕನ್ ತಾಂ ಧಾ
    ವಂತದೆ ನೀಡಿರೆಲೆನಗೀ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ ||

    (ನೀಡಿರಿ+ಎಲೆ+ಎನಗೆ+ಈಸು+ಅಂತ = ಓ… ನನಗೆ ಒಂದಿಷ್ಟು ಸಾರು ನೀಡಿರೆಂದು)

    • Yet another ಕೀಲಕ. Good one Mrs. Usha. Well balanced diction.

    • ಪ್ರಸಾದರೆಂದಂತೆ ಬಹಳ ಚೆನ್ನಾಗಿದೆ ಉಷಾ ಅವರೆ ಹೊಸ ಕೀಲಕ, ಆದರೆ ‘ಅಂತಂ’ ಎನ್ನುವುದು ಹಳಗನ್ನಡದಲ್ಲಿ ನೀವು ಹೇಳಬಯಸಿರುವ ಅರ್ಥದಲ್ಲಿ ಸಾಧುವಾಗುವುದೇ?

      • ಧನ್ಯವಾದಗಳು ಪ್ರಸಾದ್ ಸರ್, ಸೋಮ,
        ಪರೀಕ್ಷಿಸಿ ಹೇಳಿ, “ಅಂತಂ” ಸಾಧುವಲ್ಲದಿದ್ದಲ್ಲಿ ನನ್ನ ಎರಡೂ ಪೂರಣಗಳ ಕೀಲೇ ಮುರಿದಂತೆ!!

        • ಉಷಾ ಅವರೆ, ಅಂತಂ ಬಳಕೆ ಸಾಧುವೋ ಅಲ್ಲವೋ ಎನ್ನುವ ಅನುಮಾನದಿಂದ ಸಂದೇಹ ಬಂದಿತ್ತು ಸರಿಯೆಂದೇ ತೋರುತ್ತದೆ ಪದ್ಯಕ್ಕಾಗಿ ಧನ್ಯವಾದಗಳು

    • ಆಹಾ! ತುಂಬ ಒಳ್ಳೆಯ ಕೀಲಕ!!! ಧನ್ಯವಾದಗಳು

      • ಧನ್ಯವಾದಗಳು ಗಣೇಶ್ ಸರ್,
        ಇದು ಸಾಂಬಾರಿಗಾಗಿ ಮಿಡಿದ ನಿಜ ಕಂಬನಿ ಅಲ್ಲವೇ?!

  20. ಕಾಂತೆಯ ಮನಮಂ ಗೆಲ್ವೆನೆ
    ಸಂತೆಯೊಳಂಬಾರಿಯೇರ್ದನಯ್ ಕಾಲ್ಗುಸಿಯಲ್
    ಪಿಂತಿಂ ನೆಲಗಚ್ಚಿರ್ಪ ವ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ

    ವಸಂತನೆಂಬುವನು (ಸತಿಯ ಮನವನ್ನು ಸಾಹಸ ಕ್ರೀಡೆಯಿಂದ ಗೆಲ್ಲಬೇಕೆಂಬ) ಮದನನ ಪ್ರೇರಣೆಗೆ ಶರಣುಹೋಗಿ ಅಂಬಾರಿಯೇರಿ ಕಾಲು ಕುಸಿದು ಬಿದ್ದು ನರಳುವಾಗ (ಮದನನಿಂದಾಗಿದ್ದು) ಎಂದು ದು:ಖಿಸಿದನು 🙂

  21. ಇಂತಿರ್ಪೊಡೆ ಸಂಗೀತಂ
    ಸಂತರ್ಪಿತಮಲ್ತೆ ತೆರೆದಭಾವದೆ ರಾಗಂ
    ಸಂತೈಸಲ್ ಕಲ್ಯಾಣವ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ

    ಕಲ್ಯಾಣವಸಂತದ ರಾಗದಿಂದ (ವಿರಹ)ಗೀತೆಯನ್ನು ಅದ್ಭುತವಾಗಿ ಪ್ರಸ್ತುತಪಡಿಸುವಾಗ ರಾಗಭಾವವಾದ ವಿರಹವೇದನೆಯ ಅರಿವು ತೀವ್ರವಾಗಿ ದು:ಖಿಸಿದನು

  22. ಪಿಂತಿನ ಜೀವಿಕೆಯ ಸ್ಮೃತಿ
    ಚಿಂತನೆಗಳ್ ತಿರುಪಿ ಬಂದುದಕೆ ತಾಂ ನೊಂದಂ
    ಪಿಂತಿರುಗಲೊಲ್ಲ ದೃಢಮತಿ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ

    ಒಬ್ಬ ಸನ್ಯಾಸಿಗೆ ಹಿಂದಿನಾಶ್ರಮದ ನೆನಪುಗಳು ಮರುಕಳಿಸಿದರೂ ದೃಢಚಿತ್ತದಿಂದ ಅವಗಳನ್ನು ಎದರಿಸಿ ಪೂರ್ವಾಶ್ರಮಕ್ಕೆ ಹಿಂತಿರುಗದೆ ಮದನನ ಉಪಟಳಕ್ಕೆ ನೊಂದನು

    • ಪ್ರಿಯ ಸೋಮ! ಮೂರೂ ಪದ್ಯಗಳ ಕಲ್ಪನೆ ಮತ್ತು ಬಂಧಗುಣಗಳು ಸೊಗಸಾಗಿವೆ.ಒಂದಕ್ಕಿಂತ ಮತ್ತೊಂದು ಉತ್ತರೋತ್ತರವಾಗಿ ಮಿಗಿಲಾಗಿದೆ. ಆದರೆ ’ಕಲ್ಯಾಣವಸಂತ’ಎಂಬ ಕೀಲಕವು ತುಂಬ ಸೊಗಸೆನ್ನುವುದರಲ್ಲಿ ಸಂದೇಹವಿಲ್ಲ. ಮೂರನೆಯ ಪದ್ಯದ ಅರ್ಥಗಾಂಭೀರ್ಯವು ಮತ್ತೂ ಮನಮುಟ್ಟುವಂತಿದೆ. ಎಷ್ಟೋ ಬಾರಿ ನೀನು ನೀಡುತ್ತಿರುವಂಥ ಪರಿಹಾರಗಳ ಸಮೃದ್ಧಿಯನ್ನು ನಾನು ನನ್ನಮಟ್ಟದಲ್ಲಿ ಊಹಿಸಲೂ ಆಗಿರಲಿಲ್ಲ (ಇದು ಮತ್ತೂ ಹಲವರು ಪದ್ಯಪಾನಿಗಳ ಪರಿಹಾರಕೌಶಲಕ್ಕೂ ಅನ್ವಯಿಸುವ ಮಾತು) ಒಟ್ಟಿನಲ್ಲಿ ಈ ವರೆಗಿನ ಅನೇಕಸಮಸ್ಯಾಪೂರಣಕ್ರಮಗಳಲ್ಲಿ ಗುಣ-ಗಾತ್ರಗಳೆರಡರಿಂದಲೂ ಸತತವಾಗಿ ವೈವಿಧ್ಯ ಮತ್ತು ವೈಪುಲ್ಯಗಳನ್ನು, ಸ್ವಾರಸ್ಯ ಹಾಗೂ ಸಂತೋಷಗಳನ್ನು ನಮ್ಮೆಲ್ಲರಿಗೆ ನೀಡುತ್ತಿರುವ ನಿನಗೆ ವಂದನೆ; ಅಭಿನಂದನೆ.

      • ಗಣೇಶ್ ಸರ್, ಒಂದು ರೂಪಾಯಿ ಕೊಟ್ಟು ಅದೃಷ್ಟದ ಲಾಟರಿ ಟಿಕೆಟ್ಟು ತೊಗೊಳ್ಳೋ ಪ್ರಯತ್ನ ಪದ್ಯಪಾನಿಗಳದ್ದು, ಅಷ್ಟೇ ನಮ್ಮಗಳ ಮುಕ್ತಕದ ಪ್ರಯತ್ನ. ಅಂಥ ಪ್ರಯತ್ನಕ್ಕೆ ಸಂತತ ಬಹುಮಾನದ ಭಾಗ್ಯ ನೀಡುವ ಔದಾರ್ಯ ನಿಮ್ಮದು ಸರ್ 🙂

        ರಾಗದ ಪದ್ಯಂಗಳ್ಗನು-
        ರಾಗದೆ ಮೆಚ್ಚಲ್ಕೆ ಪಥವ ತೋರ್ದುದಕೆ ಶ್ರೀ-
        ರಾಗಂ, ಕವಯಿಸುವಂತವ-
        ರಾಗರೆ ಹದನದಿನೆ ಪೋರರ್ಗಳ್ ಚಿರ-ಋಣಿಗಳ್

        ಕವಯಿವಂತವರಾಗರೆ – ಕವಯಿಸುವಂತೆ ಅವರ್ ಆಗರೆ?
        ಪೋರರ್ಗಳ್ – ಶಿ. ದ್ವಿ

  23. ಸಂತಸದಿಂದಿರೆ ಕೌಸಲೆ
    ಚಿಂತೆಯ ಮರೆಯುತೆ ಸುಪುತ್ರರಂ ಕಂಡುಂ ತಾಂ I
    ಕಾಂತಿಯ ಮೊಗದಿಂ ಕಾಕು
    ತ್ಥ್ಸ೦ತo ಸಾಂಬಾರಿಗಾಗಿ ಕಂಬನಿಮಿಡಿದಂ|I

    ಕಕುತ್ಸ ವಂಶದ ಸಂತ (ಶ್ರೀರಾಮಚಂದ್ರ —ತ್ಯಾಗಿ ಅನ್ನುವ ಭಾವದಿಂದ )=ಕಾಕುತ್ಸ್ಥ೦ತಂ –ಇದು ಸರಿಯೇ ?
    ಸರಿಯಲ್ಲವಾದರೆ ‘ಕಾಕು’ ಇರುವಲ್ಲಿ ‘ಇನಕುಲ” ಎಂಬ ಪದ ಬಳಸುತ್ತೇನೆ . .

    ವನವಾಸ ಮುಗಿಸಿ ಮರಳಿದ ಮಕ್ಕಳನ್ನು ಕಂಡು ಕೌಸಲ್ಯೆಯು ಸಂತಸದಿಂದಿರುವಾಗ ,ಶ್ರೀರಾಮನು ವನವಾಸದಲ್ಲಿದ್ದಷ್ಟೂ ವರ್ಷಗಳಲ್ಲಿ ಅಮ್ಮನ ಕೈ ಅಡುಗೆ ತಪ್ಪಿದ್ದು ನೆನಪಾಗಿ ತಾಯಿಯನ್ನು ನೋಡಿ ಒಮ್ಮೆ ಕಂಬನಿ ಮಿಡಿದ ಅನ್ನುವ ಕಲ್ಪನೆ . ( ಮಮತೆಯಿಂದ ಕೂಡಿದ ಅಮ್ಮನ ಅಡುಗೆಯ ಶ್ರೇಷ್ಟತೆಯನ್ನು ಬಿಂಬಿಸುವ ಉದ್ದೇಶವೇ ಹೊರತು ಶ್ರೀರಾಮಚಂದ್ರನ ಆದರ್ಶಗಳನ್ನು ಕುಗ್ಗಿಸುವುದಲ್ಲ) .

    • ನಿಮ್ಮ ಪ್ರಯೋಗವು ವ್ಯಾಕರಣಕ್ಕೆ ವಿರುದ್ಧವಾಗಿದೆ. ದಯಮಾಡಿ ತಿದ್ದಿರಿ. ಈ ಬಗೆಯ ಪರಿಹಾರವು ಸಾಧ್ಯವಿಲ್ಲ.

      • ಮಾರ್ಗದರ್ಶನಕ್ಕೆ ಧನ್ಯವಾದಗಳು ಸರ್ .

        ಸಂತಸದಿಂದಿರೆ ಕೌಸಲೆ
        ಚಿಂತೆಯ ಮರೆಯುತೆ ಸುಪುತ್ರರಂ ಕಂಡುಂ ತಾಂ I
        ಕಾಂತಿಯ ಕ೦ಗಳ ಇನಕುಲ
        ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ II

        ಸರ್, ತಮ್ಮ ಸಾವಿರದವಧಾನಕೆ —

        ಪದ್ಯ ವಿದ್ಯೆಯ ಮದ್ಯ ಸೇವಿಸಿ
        ಪದ್ಯಪಾನದ ಜಾಲ ತಾಣದಿ
        ಪದ್ಯದಿಂದಲೆ ಶುಭವ ಕೋರುವೆ ಕಾರ್ಯ ಸಾಸಿರಕೆ II

        • ಹೃದ್ಯಮಾದೀ ಶುಭವಚನಕಾಂ
          ಪದ್ಯಪೂರಣದಿಂದಲೇ ಸಂ-
          ವೇದ್ಯಮಪ್ಪೀ ಧನ್ಯವಾದಗಳಂ ನಿವೇದಿಸುವೆಂ ||

  24. ಭ್ರಾಂತಾಕುಲನಾದನವಂ
    ಕಂತೆಂಟಾಗಲ್, ಚುನಾವಣೆಟಿಕೆಟ್ ಸಿಗದೇ|
    ಎಂತುಟೆ ನಿಟ್ಟೆಯೊ ಪಕ್ಷಕೆ!
    ಸಂತಂ ಸಾಂ, ಬಾರಿಗಾಗಿ ಕಂಬನಿ ಮಿಡಿದಂ!

    ಬಾರಿ = ಸರದಿ , turn
    ಕಂತು= term
    sam = name
    ಸಂತಂ=ಸಾಧು ಸ್ವಭಾವದ(ಪಕ್ಷಾಂತರ ಮಾಡದವ 🙂 )

  25. ಇಂದಿನ ನಮ್ಮ ಢೋಂಗಿ ಕಾವಿಧಾರಿಗಳ ಕಥೆ. ಹೊರಗೆ ದೊಡ್ಡ ಶಿಷ್ಯವೃಂದವಿದ್ದರೂ, ಒಳಗೆ ಕಾಮಾಸಕ್ತರು. ಅಂತಹ ಒಬ್ಬ “ಸಂತನು” ಸಾಂಬನನ್ನು ಬಯಸದೆ ಸಾಂಬಾರಿಯನ್ನು ಬಯಸಿ ಕಂಬನಿಯನ್ನು ಮಿಡಿದ.

    ಅಂತೇವಾಸಿಗಳಿರ್ದುಂ
    ಕಂತುಮನಮದಿಂತೊಡರ್ಚೆ ತಾ ವಿಕೃತಿಗಳಂ
    ಕಾಂತಾಸಂಗಸತೃಷನಾ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ (ಧಿಕ್ ಧಿಕ್)

    ಅಂತೇವಾಸಿ – ಶಿಷ್ಯ
    ಕಂತುಮನ – ಕಾಮಾಪೇಕ್ಷೆ

    • ಅಂತೇವಾಸಿತ್ವವು ಮೌರ್ಯನಿಗೆ ಒಳ್ಳೆಯ ಪಾಠವನ್ನೇ ಕಲಿಸಿದಂತಿದೆ:-)
      seriously; real good versification. Bravo !!

  26. Just for participation. Don’t take it too seriously, please.

    ನಿಂತು ಗೆರೆಯಾಚೆ, “ರಾಘವ-
    ಕಾಂತೆ! ತನುವಿದು ಹುಳಿಯುಪ್ಪು ಬೇಡಿದೆ ನೀಡೌ” |
    ಇಂತು ಹಸಿವು ತೋರ್ದ ಕಪಟ-
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ |

    ರಾವಣನು ಭಿಕ್ಷೆ ಬೇಡುತ, ಅನ್ನ ನೀಡಲು ಹೊರಟ ಸೀತೆಗೆ ತನ್ನ ಬಯಕೆಯನ್ನು ಹೀಗೆ ಹೇಳಿರಬಹುದೆ?

    ನೀಡೌ ಎನ್ನುವಲ್ಲಿ “ನೀ (ನನ್ನ) ಡೌ” ಎಂದೂ ಶ್ಲೇಷದಿಂದ ಹೇಳಿದ್ದಾನೆಂದು ಪ್ರಸಾದು ಅವರಿಗೆ ಹೊಳೆದರೆ, ನನ್ನ ಅಭ್ಯಂತರವೇನಿಲ್ಲ 🙂

    • ಏನಿದುಮೇನಿದುಮೀಪರಿ
      ಯೂನಮೆ ವಿಖ್ಯಾತಿಯೆನ್ನದು ಸುಧೀರಂ ಪೇಳ್|
      ಐನಾತಿಯಾ ಪದವುಳಿ
      ರ್ದೇನೈ ಶಿಷ್ಟಾತಿಶಿಷ್ಟಮಿನ್ನೆಲ್ಲವುಗಳ್?| 😉

    • ಆಸ್ ಯೂಷುಅಲ್ ಸುಧೀರಸ್ಯ ಬ್ರಿಲ್ಲಿಯನ್ಸ್ ಪರಿಹಾರದೊಳ್ |
      ಮಿಸ್ಸ್ಯೂಸ್ ಆಗದೆ ಜಾಗರ್ತಿ ನೈಕಭಾಷೀಯ-ಪನ್-ಗಳಿಂ ||

    • ಹುಷಾರು ಸುಧೀರ್ ಸರ್,
      ಪ್ರಸಾದ್ ಸರ್ ನಿಮ್ಮ ಮೇಲೆ “ಡೌರಿ” ಕೇಸ್ ಹಾಕಿಬಿಡುತ್ತಾರೆ !!
      (Dowry = Natural talent !?)

  27. ಕಾಂತಂ,ಪಿತನೆನೆ ವರಿಸಲ್
    ಕಾಂತಿಯನೊಲ್ಲದಿರೆ ಮದನಕೇಲಿಯನೆಂದುಂ,|
    ಚಿಂತಿಸಿ ಬಳಲಿದ ನಿಜದಾ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ ||

    ನಿಜದ+ಆ=ನಿಜದಾ
    (ತಂದೆಯ ಮಾತಿಗಾಗಿ,ಮದನಕೇಲಿಯನ್ನು ಎಂದಿಗೂ ಒಲ್ಲದ ಕಾಂತನೆಂಬವನು ಕಾಂತಿಯೆಂಬವಳನ್ನು ವರಿಸಿರಲು,ಚಿಂತಿಸಿ ಬಳಲಿದ ನಿಜವಾದ ಅ ಸಂತನು ಮನ್ಮಥನಿಗಾಗಿ ಕಂಬನಿ ಮಿಡಿದನು.)

  28. ಎಂತುಂ ವಿಪರೀತಂ ಕಾ
    ಸಂತಂ ಸಾಂಬಾರಿಗಾಗಿ ಸಿಡಿಮಿಡಿಯಲ್ ಶ್ರೀ
    ಮಂತಂ, ಮನೆವಾಸದ ದಾ
    ಸಂ “ತಂ” ಸಾಂಬಾರಿಗಾಗಿ ಕಂಬನಿ ಮಿಡಿದಂ ।।

    (ಕಾಸಂತಂ = ಕಾಸು(ಬಿಸಿಮಾಡು) + ಅಂತಂ , ತಂ = ತಂಪಾದ)
    “ತಂ” = ತಣ್ಣನೆಯ – ಎಂಬ ಅರ್ಥ ಸಾಧುವಲ್ಲದಿದ್ದಲಿ, ಈ ಬದಲಾವಣೆ ಸರಿಯಾದೀತೆ?

    ಎಂತುಂ ವಿಪರೀತಂ ಕಾ
    ಸಂತಂ ಸಾಂಬಾರಿಗಾಗಿ ಸಿಡಿಮಿಡಿಯಲ್ ಶ್ರೀ
    ಮಂತಂ, ದಾಸಂ ತಾಂ ಕಾ
    ಸಂತಂ ಸಾಂಬಾರಿಗಾಗಿ ಕಂಬನಿ ಮಿಡಿದಂ ।।

    ಕಾಸಂತಂ = ಕಾಸು(ಹಣ) + ಅಂತಂ

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)