Jul 122014
 

download9

ಇಂದು ವ್ಯಾಸಪೂರ್ಣಿಮೆ. ಭಗವಾನ್ ವೇದವ್ಯಾಸರನ್ನು ಕುರಿತು ಛಂದೋಬದ್ಧ ಪದ್ಯಗಳನ್ನು ರಚಿಸಿ.

  106 Responses to “ಪದ್ಯಸಪ್ತಾಹ ೧೧೭: ಚಿತ್ರಕ್ಕೆ ಪದ್ಯ”

  1. Naïve novelists of today install themselves in a role (all roles!) in their works. In the words of Sri S. L. Bhyrappa, those doing so will slide from creativity to self-expectation and from there to self-centred engrossment. But Bhagavan Vyasa, though he plays a part in the (epic-)novel Mahabharata, he has given prime importance to Krishna than to himself.
    ಇಂದ್ರವಂಶ|| ಪಾತ್ರಂಗಳೊಳ್ ತಮ್ಮನೆ ಭಾವಿಸಿರ್ದಿಹರ್
    ಮಾತ್ರರ್ ಲಿಪೀಶರ್ ಕವಿವರ್ಯರಲ್ಲರೈ|
    ಕ್ಷಾತ್ರವ್ರತಂ ಶ್ರೇಷ್ಠಮದೆಂದ ಕೃಷ್ಣನಾ
    ಪಾತ್ರಕ್ಕಮಿತ್ತರ್ ಶುಕತಾತ ಗೌರವಂ||

    • ಪದ್ಯ ಚೆನ್ನಾಗಿದೆ; ಅಭಿನಂದನೆಗಳು.

    • ಪ್ರಸಾದು ಐಡಿಯ ಚೆನ್ನಾಗಿದೆ ‘ಭಾವಿಸಿರ್ದಿಹರ್’ -> ‘ಭಾವಿಸಿರ್ದಿಪರ್’ ಆಗಬೇಕಿತ್ತೇ?

  2. ಧರೆಯೊಳ್ವೇದವ್ಯಾಸರ
    ಕರದಿಂಭಾರದಕಾವ್ಯಮಂಚಿತ್ರಿಸಲಾ|
    ವರಕವಿಯಾ ಸೃಷ್ಟಿಯೊಳವ
    ತರಿಸಿರ್ಪನ್ ಕೃಷ್ಣನೆಂಬ ನಾಯಕನೀಗಳ್|

  3. यस्यार्षकाव्यकृतये खलु धर्तुमिच्छुः
    पूर्णावतारमवनावकरोत्प्रतीक्षाम् |
    शक्तोऽपि सर्वविषये द्वियुगात्ययं च
    वन्देऽहमाद्यकविसंकुलवेधसं तम् ||

    सर्वविषये शक्तः अपि अवनौ पूर्णावतारं धर्तुं इच्छुः (विष्णुः) यस्य आर्षकाव्यकृतये प्रतीक्षां द्वियुगात्ययं च अकरोत् खलु तं आद्यकविसंकुलवेधसं अहं वन्दे |

    ಸರ್ವಶಕ್ತನಾಗಿದ್ದರೂ ಭೂಮಿಯಲ್ಲಿ ಪೂರ್ಣಾವತಾರವನ್ನು (ಕೃಷ್ಣಾವತಾರ) ಧರಿಸಲು ವಿಷ್ಣುವು ಯಾರ ಆರ್ಷವಾದ ಕಾವ್ಯಕೃತಿಗೆ ಕಾದನೋ ಹಾಗು ಎರಡು ಯುಗಗಳನ್ನು ಕೂಡ ಕಳೆದನೋ ಹಾಗು ಮಹಾಕವಿಗಳ ಸಂಕುಲಗಳ ಸೃಷ್ಟಿಗೆ ಕಾರಣರಾಗಿ ಕವಿವೇಧಸರಾದ ವೇದವ್ಯಾಸರನ್ನು ವಂದಿಸುತ್ತೇನೆ

    • very nice – idea and versification.

    • ಅತಿಸುಂದರಕಲ್ಪನೆ. ಇಲ್ಲಿಯ ಸ್ವೋಪಜ್ಞತೆ ನಿಜಕ್ಕೂ ಅಭಿನವ.

    • ಕಾವ್ಯಲಿಂಗ ಅಲಂಕಾರವನ್ನು ಧ್ವನಿಸಿರುವ ಅತಿಶಯೋಕ್ತಿ ಅಧ್ಬುತವಾಗಿದೆ….ವ್ಯಾಸರು ಹೆಮ್ಮೆ ಪಡುವಂಥಹ ಪದ್ಯ.

      • शास्त्रज्ञेन रसज्ञेन श्रीशेन दत्तसंस्तुतिः |
        आर्जवोऽस्तीति मे मार्गे विश्वासं तनुतेऽधुना ||

        thanks shreeshaM,prasAdu and Dr.G

      • संस्तुतिर्याधुना प्राप्ता राघवेंद्र स्थिरास्ति सा।
        कवित्वं तु यदस्ति त्वत्प्रगल्भं बहुकालवत्॥

    • ರಾಘವೇಂದ್ರ ಬಹಳ ಚೆನ್ನಾಗಿದೆ

  4. ಪ್ರಭದ್ರಕಮ್|| ತಿರಿಚಿಹರೆ ಪಾತ್ರಪ್ರಕ್ರಿಯೆಯ ಬಾದರಾಯಣರ್?
    ಸರಿಯದಹುದೇಂ ಪಾತ್ರಂಗಳ ಮನೋವಿಕಲ್ಪಗಳ್?
    ಜರೆಯದೆಲೆ ಇಂತೆನ್ನುತ್ತಲಿ, ಮಹಾಕೃತಿಪ್ರಣೇ
    ತ್ರರದೆನಿತುಮಾದರ್ ಶಾಶ್ವತರೆನುತ್ತೆ ಚಿಂತಿಸೈ||
    (ಪ್ರಣೇತೃ = author)

    • ವೃತ್ತವಿನೂತನತೆಯು ಶ್ಲಾಘ್ಯ. ಆದರೆ ಈ ತೆರನಾದ ಗತಿಸುಭಗತೆಯಿಲ್ಲದ ಬಂಧದ ಆಯ್ಕೆಯನ್ನೇಕೆ ಮಾಡಿರಿ ಪ್ರಸಾದು? ವ್ಯಾಸರಿಷ್ಟು ವಿಷಮರೇ? 🙂

      • ಇನ್ನೂ ವೃತ್ತವೈವಿಧ್ಯಗಳನ್ನು ಪರಿಚಯಮಾಡಿಕೊಳ್ಳುತ್ತಿದ್ದೇನೆ. ಎಲ್ಲವೂ ಶಾರ್ದೂಲ-ಮತ್ತೇಭ-ಮಂದಾಕ್ರಾಂತ-ವಿಸಂತತಿಲಕ-ಉಪಜಾತಿ-ಕರಂಭ-ರಥೋದ್ಧತಮೂಲದವುಗಳಷ್ಟು ಸುಪರಿಚಿತವಾದಮೇಲೆ, ವೃತ್ತಗಳ ಔಚಿತ್ಯವನ್ನು ಗಮನಿಸಿಕೊಳ್ಳುವಂತಾಗುತ್ತೇನಷ್ಟೆ.

  5. ದ್ವಿಷದ್ಭಿನ್ನಶಾಖೈಕಮೂಲಂ ಮಹಾನ್ತಮ್ |
    ಇನೇನ್ದ್ವಗ್ನಿ-ಭಾ-ದುರ್ವಿಭೇದ್ಯಾದ್ಯಛಾಯಮ್ |
    ಹರಿಸ್ವಪ್ನಪತ್ರಂ ವಸದ್ದಕ್ಷಿಣಾಸ್ಯಂ |
    ಭಜೇ ವ್ಯಾಸವೃಕ್ಷಂ ವಟಂ ತಂ ನಿತಾಂತಮ್ ||

    I bow to that great Vyaasa-vaTa-vRukSha (Banyan tree)

    who is the origin of different branches that (unknowingly) compete amongst themselves(Veda-jnAna-shAkhA or vedAnta-mata in the case of vyAsa and hanging roots for the vaTa)

    Whose primordial shade (or light) is impenetrable by the lights of sUrya, chandra and agni. (Whose shade is parA sthiti for the case of vyAsa and a dense shade for the vaTa)

    On whose leaf Hari sleeps (during pralaya) and where dakshiNAmUrti stays (He is known to live under the vaTa)

    • Didn’t see the picture! Saw the samasye as “ಇಂದು ವ್ಯಾಸಪೂರ್ಣಿಮೆ. ಭಗವಾನ್ ವೇದವ್ಯಾಸರನ್ನು ಕುರಿತು ಛಂದೋಬದ್ಧ ಪದ್ಯಗಳನ್ನು ರಚಿಸಿ” and wrote this! Will try and post something for the picture later.

    • ನೋಡದೊಡಮೇಂ ಚಿತ್ರಮಂ ನೀಂ
      ನೋಡದೊಡಮೇಂ ಕೃಷ್ಣನಂ ನೀಂ|
      ಪಾಡೆ ವೇದವ್ಯಾಸಚರಿತವ
      ಮೂಡಿತೈ ಬಗೆ ಕೃಷ್ಣನಿಂ||

    • ಪದ್ಯದ ಕಲ್ಪನೆ ಸೊಗಸಾಗಿದೆ. ಆದರೆ ಪದಪದ್ಧತಿಯು ಸ್ವಲ್ಪ ಶ್ರುತಿಕಟುವಾಯಿತು.
      ಎರಡನೆಯ ಸಾಲಿನ ಮೊದಲಿಗೆ ’’ರವೀಂದ್ವಗ್ನಿ….” ಎಂದು ಸವರಿಸಿದರೆ ಹಿಂದಿನ ಸಾಲಿನ ಕೊನೆಯ ಮತ್ತು ಈ ಸಾಲಿನ ಆರಂಭದ ವಿಸಂಧಿದೋಷವು ನೀಗುತ್ತದೆ.
      ಅಲ್ಲದೆ “…….ಛಾಯಂ” ಎಂಬುದು ಚ್ಛಾಯಂ ಎಂದಾಬೇಕು; ಇಂತಾಗಲು ಛಂದಸ್ಸು ಕೆಡುತ್ತದೆ. ಈ ಲೋಪವನ್ನು ನೀವೇ ಬಗೆಹರಿಸಬಹುದು.

      • ಧನ್ಯವಾದಗಳು ಸರ್. ಈ ಪ್ರಯತ್ನದಲ್ಲಿ ಶ್ರುತಿಕಟುತೆಯನ್ನು ಸ್ವಲ್ಪೀಕರಿಸಲು ಯತ್ನಿಸಿದ್ದೇನೆ.

        ಪರಾನಂತಕಾಂಡೈಕಮೂಲಂ ಮಹಾನ್ತಮ್ |
        ರವೀಂದ್ವಾನಲಾದ್ಯಾದಿತೇಜೋಽಪ್ಯಗಮ್ಯಂ |
        ಹರಿಸ್ವಪ್ನಪತ್ರಂ ವಸದ್ದಕ್ಷಿಣಾಸ್ಯಂ |
        ಭಜೇ ವ್ಯಾಸವೃಕ್ಷಂ ವಟಂ ತಂ ನಿತಾಂತಮ್ ||

        ಅರ್ಥವನ್ನೇನೂ ಬದಲಾಯಿಸಿಲ್ಲ.

        • aahaa!! ideegamattU sogasaayitu:-)

          • ಧನ್ಯವಾದಗಳು ಸರ್! ಇನ್ನು ಸ್ವಲ್ಪ ಸವರಿಸಿದೆ.

            ಪರಾನಂತಕಾಂಡೈಕಮೂಲಂ ಮಹಾನ್ತಮ್ |
            ರವೀಂದ್ವಾನಲಾದ್ಯಾದಿತೇಜೋಽಪ್ರವೇಶ್ಯಂ |
            ಹರಿಸ್ವಪ್ನಪತ್ರಂ ವಸದ್ದಕ್ಷಿಣಾಸ್ಯಂ |
            ವಟಂ ವ್ಯಾಸನಾಮಾನಮೀಡೇ ನಿತಾಂತಮ್ ||

        • ರಾಘವೇಂದ್ರ ಬಹಳ ಚೆನ್ನಾಗಿದೆ

  6. ಭಕ್ತ ನಾರದ ಮುನಿಯ ಸಲಹೆಯೆ
    ಮುಕ್ತಿಯೊದಗಲು ಮನುಜ ಯುಕ್ತಗೆ
    ಭಕ್ತಿಯೆ೦ದರಿತದನು ತೋರಿದ ಸತ್ಯವತಿ ಸುತಗೆ I
    ಉತ್ತಮೋತ್ತಮ ವಿಷ್ಣು ತತ್ತ್ವಕೆ
    ಶಕ್ತನಾದಾ ಜ್ಞಾನ ನಿಧಿಗಿದೊ
    ಭಕ್ತಿಯಿಂದಲೆ ಭಜಿಸಿ ನಮಿಸುವೆ ಬಾದರಾಯಣಗೆ II

    ಭಗವಾನ್ ವೇದವ್ಯಾಸರು ಹಲವು ಗ್ರಂಥಗಳ ರಚನೆ ಮಾಡಿದನಂತರವೂ ಅರಿವಿಲ್ಲದೆ ಯಾಕೋ ವಿಷಾದಿಸುತ್ತಿದ್ದಾಗ , ಮಹರ್ಷಿ ನಾರದರು ತನ್ನ ಜನ್ಮ ವೃತ್ತಾಂತವನ್ನು ತಿಳಿಸಿ ಸಾಮಾನ್ಯ ಜನರಿಗೆ ಮೋಕ್ಷವೆಂಬ ನಾಲ್ಕನೆಯ ಪುರುಷಾರ್ಥಕ್ಕೆ ಭಕ್ತಿಯೇ ಸೂಕ್ತ ಮಾರ್ಗವಾದುದರಿಂದ ಆ ನಿಟ್ಟಿನಲ್ಲಿ ಗ್ರಂಥವನ್ನು ರಚಿಸಲು( ರಚಿಸದ ಗ್ರಂಥ ಶ್ರೀ ಮದ್ಭಾಗವತ ಪುರಾಣ) ಆತ್ಮೀಯ ಸಲಹೆಯನ್ನೀಯುತ್ತಾರೆ . ಈ ಷಡ್ಪತಿ ಯನ್ನು ಶ್ರೀ ಮದ್ಭಾಗವತದಲ್ಲಿ ಬರುವ ಆ ಕಥೆಯ ಹಿನ್ನಲೆಯಿಂದ ಬರೆದುದಾಗಿದೆ.

    • ಮೇದಿನಿಯೆ ಮೆಚ್ಚುವವೊಲೀಪರಿ
      ಮೋದದಿಂ ಕಾವ್ಯಗಳ ರಚಿಸಿಹ
      ವೇದವ್ಯಾಸರನೇತಕೆಂಬಿರೊ
      Botherಆಯಣನೆನ್ನುತುಂ?| 🙂

      • ಅಬ್ಬಬ್ಬಾ !! ಹೊಗಳಿಕೆಯ ಹೊನ್ನ ಶೂಲ . I should start bothering from now. 😉

    • In the notes you have used the word ಷಡ್ಪತಿ. I know that you meant ಷಟ್ಪದಿ. Pardon my ಚಾಟು of your spello:
      ಅನುಷಡ್ಪಾನ = ಅನುಷಟ್+ಪಾನ = continuous drinking
      ಅಡ್ಪತಿ = ಅಟ್+ಪತಿ = wandering (ಅಟತಿ) husband
      ವಿಡ್ಪತಿ = ವಿಟ್+ಪತಿ = a husband who swears, shouts or addresses harshly

      ‘ಷಡ್ಪತಿ’ ಯಾರವ ಗೈದಿಹನೇನ್ ಅನು-
      ಷಡ್ಪಾನವ ಹುಳಿಹೆಂಡವನು|
      ಅಡ್ಪತಿಯಾಗುತೆ ಮನೆಗೆ ಮರಳದೆಲೆ
      ವಿಡ್ಪತಿ ಪೋದನೆ Shedಡಿಗೆ ತಾಂ|| 🙂

    • ವ್ಯಾಸಸ್ತುತಿ ಚೆನ್ನಾಗಿದೆ

  7. this padya’s idea has been borrowed from shankar’s stuti padya on vyasa (with due apologies for copying)

    स गजास्योऽप्यशक्तोऽभूत् यस्य रेक्तुं रसाद्भुतम् |
    तद्भारतेक्षुदण्डस्य क्षेत्रज्ञं प्रणमाम्यहम् ||

    यस्य रसाद्भुतं रेक्तुं सः गजास्यः अपि अशक्तः अभूत् तद्भारतेक्षुदण्डस्य क्षेत्रज्ञं अहं प्रणमामि |

    ಯಾವುದರ ರಸವನ್ನು ಖಾಲಿಮಾಡಲು ಆ ಗಜಮುಖನಿಗೆ ಕೂಡ ಸಾಧ್ಯವಾಗಲಿಲ್ಲವೋ ಅಂತಹ ಭಾರತವೆಂಬ ಕಬ್ಬನ್ನು ಬೆಳೆದ ಕ್ಷೇತ್ರಜ್ಞ(ಕೃಷಿಕಾರ ಎಂದು ಒಂದು ಅರ್ಥ/ಪರತತ್ತ್ವ ಬಲ್ಲವನೆಂದು ಇನ್ನೊಂದು ಅರ್ಥ)ನನ್ನು ನಮಿಸುತ್ತೇನೆ.

    • Fine simile. ‘rektuM’ word is catchy.

      • ನಿಜ, ನಾನೂ ಈ ಪದವನ್ನು ಬಳಸಿರಲಿಲ್ಲ.

        • ನಾನೂ ಸಹ ಈ ಪದವನ್ನು ಬಳಸಿರಲಿಲ್ಲ.ಆದರೆ

          अतिविरलपदानां स्नेहमात्रेण मद्वत्-
          कुकविरचितपादाः पूर्णतां प्राप्नुवन्ति |
          अपरिमितविषादं कोविदेभ्यस्तु दत्त्वा
          सरसकविकृतीनां वर्धयन्ति प्रशस्तीः ||

          😛 😀

    • ರಾಘವೇಂದ್ರನಿಗೂ ಮತ್ತು ಶಂಕರರಿಗೂ ಇಂಥ ಒಳ್ಳೆಯ ಪದ್ಯಕ್ಕೆ ಧನ್ಯವಾದಗಳು

  8. ಭರತಖಂಡದ ಭವ್ಯ ನೆಲನೊಳ್
    ನುರಿತ ವೇದವ್ಯಾಸ ಮುನಿಗಳು
    ತರುವ ನೆಟ್ಟರು ಚೆಲುವ ಭಾರತವೆಂಬ ಬೂರುಗದ|
    ತರಲ ತೂಲದ ರಾಶಿ ಮಧ್ಯದೆ
    ಮೆರೆದು ಚಿರತೆಯ ನಿಂದ ತರುವಿನ
    ನೆರಲ ಮೀಯದ ಬಾಳ ಪಯಣಿಗನಿರುವನೇಂ ದಿಟದೆ?||
    (ಹತ್ತಿಯಂತೆ ಅಸ್ಥಿರ ಜೀವನದಲ್ಲೂ ವಿಶ್ವಾಸವನ್ನು ನೀಡುವ ಭಾರತ)

    • ಬಾಣಭಟ್ಟನ ಶಾಲ್ಮಲಿ ಒಳ್ಳೆಯ ಸ್ಫೂರ್ತಿಯನ್ನೇ ನೀಡಿದೆ. ಮುಖ್ಯವಾಗಿ ಭಾರತಮಹಾತರುವಿನ ನೆಳಲಿನಲ್ಲಿ ಮೀಯದ ಜನರಿಲ್ಲ ಎಂಬ ಭಾವವಂತೂ ತುಂಬ ಚೆನ್ನಾಗಿದೆ. ತತ್ರಾಪಿ “ನೆಳಲಿನಲ್ಲಿ ಮೀಯುವ” ಕಲ್ಪನೆಯೇ ಬಲ್ಸೊಗಸು. ಇದು ಪರಮಾಭಿರಾಮವಾದ ಉಪಚಾರವಕ್ರತೆ (ಈ ಪರಿಭಾಷೆಯು ಆಲಂಕಾರಿಕವರೇಣ್ಯ ಕುಂತಕನದ್ದು. ಅಸಂಭಾವ್ಯಕ್ರಿಯೆಗಳನ್ನು ಸಂಭಾವ್ಯವೆನಿಸುವಂತೆ ಮಾಡುವ ಕವಿಪ್ರತಿಭಾವ್ಯಾಪಾರವನ್ನಿದು ನಿರ್ದೇಶಿಸುತ್ತದೆ. ಎಲ್ಲ ಅತಿಶಯೋಕ್ತಿಗಳಿಗೂ ಇದು ಮೂಲ).

    • No comments

    • ಮಹಾಭಾರತದಲ್ಲಿ ಚಿರತೆ ಎಲ್ಲಿಂದ ಬಂತು ಅಂತ ನೋಡುತ್ತಿದ್ದೆ….ಈ ಗ ತಿಳಿಯಿತು…ಅದು ಚಿರ-ತೆ ಎಂದು.
      ಹತ್ತಿಯಂತೆ ಅಸ್ಥಿರವಾದ ಜೀವನ – ಅನ್ವಯಕ್ಲೇಶವಿದೆ ಪರಿಹರಿಸಿ.
      ಕಲ್ಪನೆ ತುಂಬಾ ಹಿಡಿಸಿತು.

      • ಗಣೇಶರೆಂದಂತೆ ‘ನೆಳಲಿನಲ್ಲಿ ಮೀಯುವ’ ಎಂಬ ಪ್ರಯೋಗ ಬಹಳ ಸುಂದರವಾಗಿದೆ. ನಾನೂ ಇದೇನಪ್ಪ ಚಿರತೆ ಅನ್ಕೊಂಡೆ 🙂

  9. ಚಿತ್ರದಲ್ಲಿರುವ ಎಲ್ಲ ವಿವರಗಳನ್ನೂ ಕೂಡಿದಮಟ್ಟಿಗೆ ಗಮನದಲ್ಲಿರಿಸಿಕೊಂಡು ಮಾಡಿದ ರಚನೆ:

    ಕೃಷ್ಣಾ! ನಿನ್ನ ಮಯೂರಪಿಂಛರುಚಿಯೊಳ್ ಮಿಂಚಿರ್ಪ ವರ್ಣಂಗಳಂ
    ತೃಷ್ಣಾಮೋಷಣವೇಣುನಾದಸುಧೆಯಂ ಗೋವೃಂದಗವ್ಯೋತ್ಥವ-
    ರ್ಧಿಷ್ಣುಸ್ವಾಸ್ಥ್ಯಸಮೃದ್ಧಿಯಂ ಪಡೆವೊಡೊಂದೇ ತಾಣದೊಳ್ ಬೇಳ್ವುದಾ
    ಕೃಷ್ಣವ್ಯಾಸನ ಭಾರತೀಭವಿಕಮಂ ಮೇಣ್ ಭಾರತಾಖ್ಯಾನಮಂ ||

    • ಷ್ಣ ಕಾರ ಪ್ರಾಸ ಬಹಳ ಚೆನ್ನಾಗಿದೆ ಸರ್… ಈ ಪದ್ಯದಲ್ಲಿರುವ ಅಲಂಕಾರ ಯಾವುದು?

    • ಬಹಳ ಚೆನ್ನಾಗಿದೆ ಸರ್ ಇದು ಅತಿಶಯೋಕ್ತಿಯಲ್ಲವೇ

  10. ಚಿತ್ರವನ್ನು ನೋಡಿದನಂತರ ಒಂದು ಪ್ರಯತ್ನ:

    ಜನಿದಿನದೊಳ್ ಗತತನುಜಂ
    ನೆನಪಾಗಳ್ ದುಗುಡಮೋಡಮರಿವಂ ಮುಸುಕಲ್ |
    ಮುನಿಮಾನಸದಾಗಸದೊಳ್
    ಸುನಿನಾದದ ಕೃಷ್ಣಚಂದ್ರನುದಿಸಿದಂ ಗಡಾ ||

    ಗತತನುಜ – ವ್ಯಾಸರ ಮಗ ಶುಕ.

    ಗುರುಪೂರ್ಣಿಮಯೆ ದಿನದಂದು ವ್ಯಾಸರ ಮನಸ್ಸಿನಲ್ಲೂ ಮೋಡಕವಿದಿರಬಹುದಲ್ಲವೇ? ಆದರೂ ಪೂರ್ಣಿಮೆಯಂದು ಚಂದ್ರ ಮೂಡಿದ!

    (ಇದು ಭೈರಪ್ಪನವರ ಪರ್ವದ ಭಾಗವತದ ವ್ಯಾಸ)

    • ಹಿಂದಿನ ಪದ್ಯದಲ್ಲಿ ತಪ್ಪಿದೆ. ಈ ಪದ್ಯವನ್ನು ನೋಡಿ:

      ಜನಿದಿನದೊಳ್ ಗತತನುಜಂ
      ನೆನಪಾಗಳ್ ದುಗುಡಮೋಡಮರಿವಂ ಮುಸುಕಲ್ |
      ಮುನಿಮಾನಸದಾಗಸದೊಳ್
      ಸುನಿನಾದದ ಕೃಷ್ಣಚಂದ್ರನುದಿಸಿದನಮಮಾ ||

      • ಆಹಾ! ಒಳ್ಳೆಯ ಕಲ್ಪನೆ ಮತ್ತೂ ಒಳ್ಳೆಯ ರಾಚನಿಕಶೈಲಿ; ಅಭಿನಂದನೆಗಳು.

    • ಬಹಳ ಚೆನ್ನಾಗಿದೆ ರಾಘವೇಂದ್ರ, ಜನಿದಿನ ಅನ್ನುವ ಬಳಕೆಯನ್ನು ಕೇಳಿರಲಿಲ್ಲ, ಜನಿದಿನ ಅಂದರೆ ಏನರ್ಥ

      • ಜನಿ = ಹುಟ್ಟು. ಜನಿದಿನ ಎಂದರೆ ಹುಟ್ಟಿದ ದಿನ. ವ್ಯಾಸರು ತಮ್ಮ ಹುಟ್ಟುಬಹಬ್ಬವಾದ ಗುರುಪೂರ್ಣಿಮೆಯಂದು ಮಡಿದ ಮಗನಾದ ಶುಕನನ್ನು ನೆನಪಿಸಿಕೊಂಡು ದುಃಖಿಸಿದರು. ಆ ದುಃಖದ ಮೋಡಗಳು ಕವಿದಿದ್ದಾಗ ಕೃಷ್ಣನೆಂಬ ಚಂದ್ರನ ಉದಯವಾಯ್ತು… (ಮನಸ್ಸಿಗೆ ಶಾಂತಿ ಬಂದಿತು ಎಂದು ಧ್ವನಿ).

  11. विन्यस्य व्यासदेवोऽयं
    वेदवेदान्तवाचकान्।
    ग्रन्थान् ग्रन्थिछिदोऽभूद् वै
    धर्मसङ्कटकण्टकः॥

  12. a feeble attempt in ಮತ್ತೇಬವಿಕ್ರೀಡಿತ

    ಮೊಗದೊಳ್ ಕೃಷ್ಣನಕಾಂತಿಯಿಂ ಪೊಳವಕಂಗಳ್ಕಂಡ ವಾಸ್ತವ್ಯಮಂ
    ಸೊಗಸಿಂಸೃಷ್ಟಿಸುತುಂಕಥಾನಕದವೊಲ್ ನೀಳ್ದಿರ್ಪರೀಕಾವ್ಯದೊಳ್
    ಜಗಕಂ ಜೀವನ ಮೌಲ್ಯಮಂಗಳನುತೋರುತ್ತುಂ ಮಹಾಭಾರತಂ
    ನೆಗಳ್ದೀವ್ಯಾಸರ ಮಾರ್ಗಮಂಪಿಡಿದರೈ ಮುಂಬರ್ಪರೆಲ್ಲರ್ಬುಧರ್

    • ಚೀದಿ. ನಿಮ್ಮ ವಸ್ತುವೂ ಪದ್ಯವೂ ಚೆನ್ನಾಗಿದೆ. ನಾನೊಂದಿಷ್ಟು ಸವರಿದ್ದೇನೆ. ಪರಿಶೀಲಿಸಿ:
      ಮೊಗದೊಳ್………………..
      ಸೊಗದಿಂ ಸರ್ಜನಶೀಲದೀ ಕೃತಿಯಿನಿಂ ತಾಂ ಕಾಣ್ಕೆಯಾಗಿತ್ತು ಮೇಣ್|
      ಜಗಕಂ ಜೀವನಮೌಲ್ಯಗಳ್ ತಿಳಿಯುಗೆಂದೆಂದೀ ಮಹಾಕಾವ್ಯಮಂ
      …………………. ಮುಂಬಂದರೆಲ್ಲರ್ಬುಧರ್||

  13. ||ಶಾರ್ದೂಲವಿಕ್ರೀಡಿತ ವೃತ್ತ, ಉಪಮಾಲಂಕಾರ||

    ನಾದಂಗೈಯುತೆ ವೇಣುವಿಂ,ತುರುಗಳಂ ರಕ್ಷಿಪ್ಪ ಗೋವಿಂದನಿಂ-
    ಮೋದಂಗೊಂಡ ಮಯೂರದಂತಿರುತೆ,ರೋಮಾಂಚಂಗೊಳಲ್ಕೋದಿರಲ್,|
    ವೇದವ್ಯಾಸರ ಭಾರತಂ ತಣಿಸೆ ಕಾವ್ಯಾಸಕ್ತರಂ ಸಂತತಂ,
    ತಾದಾತ್ಮ್ಯಂಬಡೆಯಲ್ಕೆ ಸನ್ನುತಿಪೆನಾಂ ಶುದ್ಧಾತ್ಮದಿಂ ಕೃಷ್ಣರಂ ||

    • ಶುದ್ಧಾತ್ಮ! ಆತ್ಮವು ನಿರಾಕಾರ ನಿರ್ಗುಣ:

      ತಾನೇತಾನಿರುವಾತ್ಮಕಿಂತು ಮೃಜೆ(ಶುದ್ಧಿ)ಯನ್ನಿತ್ತಿರ್ಪುದಿಂತಿರ್ಪುದೌ
      ಊನಂ ಗೈಯುತುಮೆಂದವೋಲ್ ಮಿಷನರಂ (a deceitful person) ‘ಪಾಪಾತ್ಮ’ನೆಂದಾತ್ಮನಂ| 🙂

      Well, your verse is fine. I repent not having recalled that they both share a name – ಕೃಷ್ಣರಂ.

    • ಗರಿಗೆದರಿದ ನವಿಲಿನ ಹಾಗೆ ರೋಮಾಂಚನಗೊಳ್ಳುವ ಸ್ಥಿತಿ ಮಹಾಭಾರತದ ಆಸ್ವಾದನೆ ಮಾಡುವ ರಸಿಕನಿಗೆ ಎಂಬ ಭಾವ ಚೆನ್ನಾಗಿದೆ

    • ಧನ್ಯವಾದಗಳು 🙂

  14. ಲೋಕಕ್ಕಂ ನಯಮಾರ್ಗಮಂ ತಿಳುಪಿದಂಗಂ ಭಾರತಕ್ಕಾದಿಯಾ-
    ಗಾಕಾವ್ಯಕ್ಕುರೆ ಸೂತ್ರಧಾರನೆನಿಪಂತೆಯ್ದಂಗೆ ಸೂತ್ರಂಗಳಾ-
    ನೀಕಕ್ಕಂ ವರರಾಜನಾಗಿ ಮೆರೆದಂಗಂ ಶ್ವೇತಕೀರ್ತಿಪ್ರಭಂ
    ಗಾ ಕೃಷ್ಣಂಗಿದೊ ವಂದಿಪೆಂ ಕವಿಜನಕ್ಕಂ ಮೂಲನಾಗಿರ್ಪಗಂ||
    (ಲೋಕಕ್ಕಂ ನಯಮಾರ್ಗಮಂ ತಿಳುಪಿದಂಗಂ, ಭಾರತಕ್ಕೆ ಆದಿಯಾಗಿ ಆ ಕಾವ್ಯಕ್ಕೆ ಉರೆ ಸೂತ್ರಧಾರನೆನಿಪಂತೆ ಎಯ್ದಂಗೆ, ಸೂತ್ರಂಗಳ ಅನೀಕಕ್ಕಂ ವರರಾಜನಾಗಿ ಮೆರೆದಂಗಂ ಶ್ವೇತಕೀರ್ತಿಪ್ರಭಂಗೆ ಆ ಕೃಷ್ಣಂಗೆ, ಕವಿಜನಕ್ಕಂ ಮೂಲನಾಗಿರ್ಪಗಂ, ಇದೊ ವಂದಿಪೆಂ)

    (ಟಿಪ್ಪಣಿ:ಶ್ಲೇಷದಂತೆ ಈರ್ವರು ಕೃಷ್ಣರಿಗೂ ಅನ್ವಯಿಸಬಹುದೇನೋ..ದಶಮರಸದ ಜೊತೆಯಲ್ಲಿ ಆ ಆ ಕಾರಗಳ ಹಾಹಾಕಾರವೂ ಸೇರಿದೆ.ಬಾದರಾಯಣ ಸಂಬಂಧದಲ್ಲಿ ಹೇಳುವುದಾದರೆ ಕೃಷ್ಣಪಕ್ಷ ಪ್ರಾರಂಭವಾಗಿರುವ ಕಾರಣ ಪದ್ಯಕ್ಕೂ ಕೃಷತೆ ಬಂದಿದೆ.)

    • ಕೃಷತೆಯೋ? ಕೃಷ್ಣತೆಯೋ?

      ಬಾದರಾಯಣಬಂಧದಿಂ ನಾಂ
      ಮೋದದಿಂ ಪೇಳುವೊಡೆ ’ಕೃಷ್ಣತೆ’|
      ಯಾದವನ ಪಕ್ಷದೊಳು (ಕೃಷ್ಣಪಕ್ಷ) ಸಂದುದು
      ಖೇದ’ಕೃಷತೆ’ಯದಲ್ಲವೈ||

    • ಭಾಷೆ ಮತ್ತು ಶ್ಲೇಷ ಬಹಳ ಚೆನ್ನಾಗಿದೆ ಕೊಪ್ಪಲತೋಟ

  15. ಸಂಸ್ಕೃತದಲ್ಲಿ ನನ್ನ ಚೊಚ್ಚಲ ಪದ್ಯ

    मानसे कल्पितं द्र्श्यम्
    सत्यमेव निरूपितं|
    सर्व ष्रेष्ठ्तमं काव्यं
    व्यास निर्मित भारतं||

  16. ವ್ಯಾಸನಂದು ತೊಡಂಗೆ ಬಣ್ಣಿಸೆ ಗೋಪಬಾಲನ ಲೀಲೆಯಂ
    ಹಾಸದಿಂ ಹರಿ ಬಂದಪಂ ವರವೇಣುನಾದವಗೆಯ್ಯುತುಂ |
    ಆ ಸುನಾದಮೆ ಬಿತ್ತರಂಗೊಳಿಸಲ್ ಸಮಸ್ತಚರಿತ್ರೆಯಂ
    ಸೋಸಿನಿಂದದನೀಂಟುತುಂ ಬರೆದಂ ವಿರಾಜಿಪುರಾಣಮಂ ||

    ಸೋಸಿನಿಂದೆ = ಉತ್ಸಾಹದಿಂದ.

    • ಪೆಜತ್ತಾಯರೆ ಸ್ವಯಂ ಕೃಷ್ಣನ ವೇಣುನಾದವೇ ಚರಿತ್ರೆಯನ್ನು ವಿಸ್ತರಿಸಲು ಉತ್ಸಾಹಗೊಂಡು ವ್ಯಾಸರು ಮಹಾಕೃತಿಯ ರಚನೆ ಮಾಡಿರುವ ಪದ್ಯ ಚೆನ್ನಾಗಿದೆ

  17. ತೆರೆದ ಸಂಪುಟಗಳಲಿ ಪುಟಿಸುತಲಿ ಕೃಷ್ಣಪದ
    ಬರೆಸಿಹನು ಭಾಗವತ ಭಾರತವನು ।
    ಹರಿಸಿ ವೇದದ ಸಾರ ಭರಿಸಿ ಗೀತೆಯ ಸಾಲ
    ಹರಸಿಹನು ಮನುಕುಲವ ರಸಋಷಿಯುತಾಂ ।।

    ಗೋಲದಲ್ಲಿನ ಕೃಷ್ಣ – ಪುಟಿದೆದ್ದಂತೆ ಕಂಡ ಕಲ್ಪನೆಯಲ್ಲಿ !
    (ವರಮುನಿ ವೇದವ್ಯಾಸರನ್ನು “ರಸಋಷಿ”ಎಂದು ಗುರುತಿಸುವುದರಲ್ಲಿ ತಪ್ಪಿಲ್ಲತಾನೆ?)

    • ಕೃಷ್ಣನೇ ತಾಳೆಗರಿಯಮೇಲೆ ಪುಟಿಪುಟಿದು ಮಹಾಭರತ ರಚೆನೆಯಾಯ್ತೆಂಬ ಪೂರಣ ಚೆನ್ನಾಗಿದೆ

  18. ಚಿತ್ರಕ್ಕೆ ಪದ್ಯವಾದದ್ದರಿಂದ, ಚಿತ್ರದಲ್ಲಿರುವ ಮಾಹಿತಿಯನ್ನು ತೋರಲು ಪ್ರಯತ್ನ

    ಘನಕೃತ್ಯಂ ಸಲೆಸಂದುದಲ್ತೆ ತನಿಜನ್ನಂ ಗೆಯ್ದವೊಲ್ ಭಾರತಾ-
    ದ್ಯನುಸಂಧಾನಿಸಿ ಪೆರ್ಮೆಯಾಂತ ಬಳಿಕಂ ನೈಜಾವಲೋಕಕ್ಕೆನಲ್
    ಮನದೊಳ್ ಸಾರ್ಥಕಭಾವದಿಂದೆ ನಗುತುಂ ಪರ್ಯಾಪ್ತಕಾರ್ಯಾಳಿಯಂ
    ಮುನಿ ತಾಂ ವೀಕ್ಷಿಸುತಿರ್ದೊಡೊರ್ವನೆ ಚಿರಂ ಕಾಂಬಂ ಸುಲಾಲಿತ್ಯದಿಂ

    ಮಹಾಭಾರತದಂತಹ ಸುದೀರ್ಘಸಂಕೀರ್ಣ ಕೃತಿಯನ್ನು ರಚಿಸಿ ಪೆರ್ಮೆಯನ್ನು ಗಳಿಸಿದ ವ್ಯಾಸಮಹರ್ಷಿಗಳು ಧನ್ಯತೆಯಭಾವದಿಂದ ಇನ್ನೊಮ್ಮೆ ಗ್ರಂಥವನ್ನು ಅವಲೋಕಿಸಿದಾಗ ಅವರಮನಸ್ಸನ್ನು ಚಿರವಾಗಿ ಒಬ್ಬನೇ (ಕೃಷ್ಣನೇ) ಸುಲಾಲಿತ್ಯದಿಂದ ಬೆಳಗುತ್ತಿದ್ದನು

  19. ಜಗದೋಧ್ಧಾರನ ಕೊಳಲಿಂ
    ಪುಗುವದರಸ್ಪರ್ಶಿತ ಸ್ವರದಿನಿತು ನಾದಂ
    ಬಗೆವೊಗುತೆ ಸೃಷ್ಠಿಸಿರ್ಕೇಂ
    ಸೊಗಗಬ್ಬದೆ ಪಾತ್ರಹಲವ ಗುರುವಿಂ ,ಮುನ್ನಂ?

  20. ಕರಿಯಂಕರಿಯನಕಥೆಯಂ
    ಕುರಿತೊರೆದಿರೆಧರೆಜನಂಗಳಾಲಿಸಿಯದನಂ
    ಕರಿವರದನಮೇಣ್ ಬಾಳಿದ
    ಕರಿಪುರದರಸರನನನ್ಯ ಭಕ್ತಿಯೊಳರಿತರ್

  21. Seems like one krishna is the reflection of other….ಈ ನಿಟ್ಟಿನಲ್ಲೊದು ಪುಟ್ಟ ಪ್ರಯತ್ನ ….

    ಹುಣ್ಣಿಮೆ ಬೆಳಕಲಷ್ಟಮಿ ಸೊಬಗು
    ವೇಣು ನಾದದಿ ಕಾವ್ಯದ ಸೊಗಸೊ
    ಪೂರ್ಣದರಿವಿಗೆ ಧರ್ಮಬಿಂಬವು ಕೃಷ್ಣ ಗೀತೆಯಲಿ
    ಬೆಣ್ಣೆ ಕೃಷ್ಣಗೆ ಜಯದ ಮಜ್ಜಿಗೆ
    ಕಣ್ಣ ನೋಟದಿ ಶಾಂತಿ ದೀವಿಗೆ
    ಪೂರ್ಣ ಶಶಿಯಲಿ ಕೃಷ್ಣ ಕೃಷ್ಣರು ಚಿತ್ರ ದರ್ಪಣದಿ

    • ಕಲ್ಪನೆ ಚೆನ್ನಾಗಿದೆ. ಕೇವಲ ಛಂದೋದೋಷಗಳಿವೆ. ಮೊದಲ ಅಕ್ಷರಗಳು ಗಜ (ವೇಣು), ಹಯ (ಹುಣ್ಣಿಮೆ) ಹಾಗೂ ಶರಭಪ್ರಾಸಗಳ (ಪೂರ್ಣ) ಸಂಕರವಾಗಿದೆ. ಕೆಲವೆಡೆ ಲಘುಬಾಹುಳ್ಯವಿದೆ. ನೀವೇ ತಿದ್ದಬಲ್ಲಿರಿ. ದಯವಿಟ್ಟು ಪಾಠಗಳನ್ನು ಗಮನಿಸಿಕೊಳ್ಳಿ. ಬಿಡದೆ ಯತ್ನಿಸಿ.

    • ಒಬ್ಬರು ಇನ್ನೊಬ್ಬರ ಪ್ರತಿಬಿಂಬವೆಂಬ ಕಲ್ಪನೆ ಚೆನ್ನಾಗಿದೆ 🙂

      ಪ್ರಸಾದರು ಸೂಚಿಸಿದಂತೆ ಕೆಲವೊಂದು ಛಂದಸ್ಸಿನ ದೋಷಗಳಿವೆ, ಛಂದಸ್ಸಿನ ಗತಿ ಕಡೆಯ 4 ಪಾದಗಳಲ್ಲಿ ಚೆನ್ನಾಗಿದೆ ಆದರೆ ಮೊದಲ 2 ಪಾದಗಳಲ್ಲಿ ಗತಿ ಹದತಪ್ಪಿದೆ. ಲಘುಬಾಹುಳ್ಯವಿರುವ ಪದಗಳಲ್ಲಿ ಒಂದಕ್ಷರವನ್ನಷ್ಟೆ ಬೇರೆ ಗಣಕ್ಕೆ ಕೋಟ್ಟಾಗ ಹೀಗಾಗುತ್ತದೆ
      ಹುಣ್ಣಿಮೆ ಬೆಳಕಲಷ್ಟಮಿ ಸೊಬಗು
      ವೇಣು ನಾದದಿ ಕಾವ್ಯದ ಸೊಗಸೊ
      ಇಲ್ಲಿ ‘ಮೆ ಬೆಳಕು’, ‘ಮಿ ಸೊಬಗು’, ‘ದ ಸೊಗಸು’ಗಳನ್ನು ಸವರಿಸಿದರೆ ಉತ್ತಮ

      • ತಿದ್ದಿ ಬರೆಯಲು ಪ್ರಯತ್ನಿಸುತ್ತೆನೆ.. ಪ್ರಸಾದರಿಗೂ..ಸೋಮರಿಗೂ … ಧನ್ಯವಾದಗಳು …

  22. ಘಟನಾನೀಕಸುರೋಹಿಸಂಗ್ರಹಮನುಂ ಕಾವ್ಯಪ್ರವೀಣತ್ವಮಾ
    ತಟದೊಳ್ ರೋಪಣಕಾರ್ಯದೊಳ್ ನವರಸಂಗಳ್ ಪಾಂಸುವಾಗಲ್ಕೆ ಪಾ
    ಸಟಿಯೇನೀ ರಸಪೂರ್ಣ ಭಾರತಮಹಾಧಾನ್ಯಕ್ಕೆ ಮೂರ್ಲೋಕದೊಳ್ ?
    ದಿಟದಿಂ ವ್ಯಾಸಮುನೀಂದ್ರನಲ್ತೆ ಕೃಷಿಕೋತ್ತುಂಗಂ ಕವಿಕ್ಷೇತ್ರದೊಳ್

    ತಟ = ಹೊಲ
    ರೋಹಿ = ಬೀಜ
    ಪಾಸಟಿ = ಸಾಟಿ

  23. ಏನಿದು ಕರಿವದನನ ಕೈ ಬರಹವು
    ತಾನೊರೆದುದ ಸರಿಬರೆಯದೆ ಪೋದಂ
    ಧ್ಯಾನಿಸಿ ಕರೆದೆನು ಭಾರತ ಬರೆಯಲು ಕಾಣದೆ ಪರರಾರು. |
    ಮೌನದಿ ಕುಂತನು ಮೋದಕ ಬಯಸುತ,
    ಕಾನನದೊಳು ತಾನದತರಲಾದೆನು,
    ನೀನಾದರು ಶಿವ ಬುದ್ಧಿಯ ಕಲಿಸದೆ ಬೆಳೆಸಿದೆ ಗಣಪನನು.. ||

    • ವ್ಯಾಸರು ಗಣೇಶನ ಬ್ರಹ್ಮಲಿಪಿಯನ್ನು ಓದಲಾಗದೆ ಶಿವನನ್ನು ದೂರುತ್ತಿರುವ ಪರಿವರ್ಧಿನಿ ಬಹಳ ಚೆನ್ನಾಗಿದೆ

  24. सङ्कल्प्याद्भुतमर्भकं सुरुचिरैर्लीलाशतैश्चित्रितं
    दिव्यं भागवतं चकार ऋषिराड् व्यासस्तपोवारिधिः ।
    तस्य ध्यानपरायणस्य सततं चेतःस्थितं तद्वपुः
    स्वैरं मानुषरूपतः समुदितं सत्या भवेदार्षगीः ||

    ತಪೋವಾರಿಧಿಯಾದ ವೇದವ್ಯಾಸಮುನಿಯು ಹಲವಾರು ವಿಸ್ಮಯಾವಹ ಲೀಲೆಗಳಿಂದ ಕೂಡಿದ ಬಾಲನನ್ನು ಕಲ್ಪಿಸಿ, ಆತನ ವರ್ಣನೆಯೇ ಪ್ರಧಾನವಾಗಿರುವ ಭಾಗವತಪುರಾಣವನ್ನು ರಚಿಸಿದನು. ಧ್ಯಾನಪರಾಯಣನಾದ ಆ ಮುನಿಯ ಮನದಲ್ಲಿ ದೃಢಸ್ಥಿತವಾದ ಆ ದಿವ್ಯವಿಗ್ರಹವು ತಾನೇ ಮನುಷ್ಯರೂಪವನ್ನಾಂತು ಇಳೆಯಲ್ಲುದಿಸಿತು. ಮುನಿವಚನ ಖಂಡಿತವಾಗಿಯೂ ಸತ್ಯವಾಗುವುದು.

    ಕೃಷ್ಣನೆಂಬ ದೇವತಾರೂಪ ಮೊದಲು ವ್ಯಾಸರ ಕಲ್ಪನೆಯಾಗಿದ್ದು, ಆ ಕಲ್ಪನೆಯೇ ಮುಂದೆ ಯಥಾರ್ಥವಾಗಿ ಪರಿಣಮಿಸಿತು ಎಂಬ ಆಶಯದ ಪದ್ಯವಿದು.

  25. ಇಳಿದಳ್ ಸುರನದಿ ಭುವಿಗಂ
    ತೊಳೆಯಲ್ ಪಾಪಂಗಳಂ ಭಗೀರತಧೃತಿಯಿಂ-
    ದಿಳಿಗುಂ ಮಿಗೆ ಕೃಷ್ಣಕಥಾ-
    ವಳಿಯುಂ ವ್ಯಾಸಪ್ರಯತ್ನದಿಂ ಭಾಮತಿಯೊಳ್

    ಕೃಷ್ಣಕಥೆಯನ್ನು ತನ್ನ ಪ್ರಚಂಡವಾದ ಬುದ್ಢಿಶಕ್ತಿಯಲ್ಲಿ ವ್ಯಾಸರು ಅಪ್ರತಿಮ (ಕಲ್ಪನೆಯ) ಪ್ರಯತ್ನದಿಂದ ಇಳಿಸಿದುದು ಭಗೀರತ ಯತ್ನವನ್ನೂ ಮೀರಿಸುತ್ತದೆ ಎಂಬುದು ಆಶಯ

  26. ಗಣಪನ ಪೂಜೆಗವಿಘ್ನಂ
    ಗಣೇಶನಿಂದೆಂಬ ಪಾಂಗ ತೋರಲ್ ಮುನಿ ತಾಂ
    ಪ್ರಣಮಿಸೆ ಕೃಷ್ಣನ ಮನದೊಳ್
    ಚಣಮಾತ್ರದೆ ಕೃಷ್ಣಲೀಲೆಯಂ ಕವನಿಸಿದಂ

  27. ಇನ್ನೆಗುಮಿರ್ದಪ ಕಾವ್ಯದೆ
    ಚೆನ್ನನ ಚಿತ್ರಣಮದೇಕೆ ಕಾಣದೆನುತ್ತುಂ
    ಖಿನ್ನತೆವೆತ್ತಂ ವ್ಯಾಸಂ
    ಜನ್ನಮೆನುತ್ತೊರೆದ ಲಚ್ಚಮಂ ಕೃಷ್ಣಂಗಂ

  28. ಥಳಥಳಿಸಲ್ಕಿನನಾ ತನಿ-
    ವೆಳಕಿಂ ನೋಳ್ದಪಗೆ ಲೋಕವೀಕ್ಷಣೆಯಲ್ತೇ
    ಭಳರೆಂಬೀ ಕಾವ್ಯಾಳಿಯ
    ತಿಳುಪಿಂಗಂತೆಯೆ ಜನಾರ್ಧನನ ಕೃಪೆ ವೇಳ್ಕುಂ

  29. ಅರರೇ ಇದೆಂತು ಭಳರೆಂ-
    ದರುಪಿದನು ಮುನಿಯು ವಿಲಾಸಮಂ ಪೊಗಳ್ದಪನಯ್
    ಮುರಳಿಯನಲ್ತೇ ಪಿಡಿದುದು
    ಕರದೊಳ್ ಲೇಖನಿಯುಮಾಗೆ ಪೊಣ್ಮಿತು ಕಬ್ಬಂ

    ನಾನು ಕೃಷ್ಣನ ಮುರಳಿಯನ್ನಷ್ಟೇ ಹಿಡಿದೆ ಅದೇ ಲೇಖನಿಯಾಗಿ ಒಂದು ಕಬ್ಬವೇ (ನನ್ನಿಂದ) ಹೊಮ್ಮಿತು ಎಂದು ಕೃಷ್ಣನ ಲೀಲಾವಿಲಾಸವನ್ನು ವ್ಯಾಸರು ಅಚ್ಚರಿಯಿಂದ ಹೊಗಳುವ ಪದ್ಯ

    • ಹುಣ್ಣಿಮೆ ಹೊಗರೊಳೆ ವ್ಯಾಸಂ
      ತಣ್ಣಗೆ ಕುಳಿತಂದು ಪೂರ್ಣಗೊಳಿಸಿದನೇಂ? ತ-
      ಮ್ಮಣ್ಣಂ ಸೋಮನ ಷಟ್ಕದ
      ಬಣ್ಣದ ಬೆಳದಿಂಗಳಾಟಕದೆ ಕಾರಣಮೇಂ?

      ತಮ್ಮಣ್ಣಂ = ನಮ್ಮ ತಮ್ಮಣ್ಣ ಸೋಮ

      • ಚಂದ್ರಮೌಳಿಯವರೇ ಮೆಚ್ಚುಗೆಗಾಗಿ ಧನ್ಯವಾದಗಳು 🙂

  30. ಸುರಲೋಕದ ನಾಟಕದೊಳ್
    ಮುರಹರಿಯೇಗೊಲ್ಲನಂತೆ ನಟಿಸುತಲೀಗಳ್|
    ಮೆರೆದರ್ವೇದವ್ಯಾಸರು
    ತೆರೆಯೊಳ್ಮೂರ್ಜಗಕೆತೋರುತುಂ ಭಾರತಮಂ|

  31. ಒಳ್ಳೊಳ್ಳೆಯ ಪದ್ಯಗಳನ್ನು ಬರೆಯುವುದಲ್ಲದೆ ಆಸ್ಥೆಯಿಂದ ಎಲ್ಲರ ಪದ್ಯಗಳನ್ನೂ ಓದಿ ಮೆಚ್ಚುಗೆ ಮತ್ತು ಸಮುಚಿತ ಪರಿಷ್ಕಾರಗಳನ್ನೂ ಸೂಚಿಸುವ ಸೋಮನಿಗೆ ಹಾರ್ದಿಕಾಭಿನಂದನೆಗಳು.

  32. ಸಮಯಾಭಾವ, ಬೆರಳುಗಳ ನೋವು ಹಾಗೂ ಗಣಕಯಂತ್ರದ ಕೆಲವೊಂದು ಸಮಸ್ಯೆಗಳ ಕಾರಣ ಎಲ್ಲ ಪದ್ಯಗಳಿಗೂ ಪ್ರತ್ಯೇಕವಾಗಿ ಪ್ರತಿಕ್ರಿಯಿಸಲಾಗಿಲ್ಲ. ದಯಮಾಡಿ ಮನ್ನಿಸಿರಿ. ನನ್ನ ಕೆಲಸವನ್ನು ಬಲುಮಟ್ಟಿಗೆ ಹಗುರಾಗಿಸಿದ ಮಿತ್ರರು ಶ್ರೀ ಪ್ರಸಾದು, ಶ್ರೀಸೋಮ ಮತ್ತು ಶ್ರೀ ಚಂದ್ರಮೌಳಿಯವರಿಗೆ ನನ್ನ ಅಮಿತಧನ್ಯವಾದಗಳು.

Leave a Reply to ಶಕುಂತಲಾ ಮೊಳೆಯಾರ ಪಾದೆಕಲ್ಲು Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)