Aug 242014
 

ಸರಸ, ವಿರಸ, ವಿಮಲ, ತುಮುಲ ಪದಗಳನ್ನು ಬಳಸಿ ಸ್ವಾತಂತ್ರ್ಯದ ಹೋರಾಟದ ಬಗ್ಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯ ರಚಿಸಿರಿ

  69 Responses to “ಪದ್ಯಸಪ್ತಾಹ ೧೨೩: ದತ್ತಪದಿ”

  1. ಚಿತ್ತಗಳ್ ದನಿತು, ಮುಲುಕುತೆ, ಕೂಡಿನುಡಿದವೈ-
    “ಪೆತ್ತಬ್ಬೆಯೆರೆವ ಸವಿ,ಮಲತಾಯೊಳೇಂ?”
    ಕಿತ್ತು ತಾಮಸರ, ಸದೆಬಡಿಯಲ್ಕೆ ಕಿಚ್ಚಿನಿಂ-
    ತೆತ್ತರೈ ಪ್ರಾಣ,ಸಾವಿರ, ಸತ್ರದೊಳ್
    (‘ಪರಕೀಯರು, ಮಲತಾಯ ಧೋರಣೆಯವರೆಂಬ ವಿಷಯ ಜನರ ಅರಿವಿಗೆ ಬಂದಾಗ,ದುಷ್ಟರನ್ನು ನಿರ್ಮೂಲನಗೊಳಿಸಲು ತಮ್ಮ ಪ್ರಾಣತ್ಯಾಗವನ್ನು ಮಾಡಿದರು)

    • ತುಂಬ ಒಳ್ಳೆಯ ಚೌಪದಿ; ಮುಖ್ಯವಾಗಿ ದತ್ತಪದಗಳನ್ನು ಹುದುಗಿಸಿದ ಪರಿಯಷ್ಟೇ ಪ್ರಶಂಸನೀಯವಲ್ಲ; ಭಾವಪೂರ್ಣವಾದ ಕಾವ್ಯವನ್ನು ಹೊಮ್ಮಿಸುವಲ್ಲಿಯೂ ಇದು ಯಶಸ್ವಿಯಾಗಿದೆ. ಧನ್ಯವಾದಗಳು.

      • ಧನ್ಯವಾದಗಳು.
        ದತ್ತಪದಗಳ ಜೋಡಣೆ ಮಾಡುವಾಗ ಮೂಡಿದ ಭಾವ,ಅಷ್ಟೇ! 🙂

    • ಕಾಂಚನಾ ಅವರೆ, ನಿಮ್ಮ ಪದ್ಯ ಗಣೇಶ್ ಸರ್ ಹೇಳಿದಂತೆ ಬಹಳ ಚೆನ್ನಾಗಿದೆ, ದತ್ತಪದಿಯನ್ನು ಬಹಳ ಚೆನ್ನಾಗಿ ಬಳೆಸಿದ್ದೀರಿ

    • ವಿರಸನೆಯನ್ನೋವಿ ಮಲರಾಗಿ ಪೂಸರ ಸ
      ಮವಿದಿಂತು ಮುಲಮುಲನೆ ಹರಿದು ಚೆಲ್ವಾಯ್ತಯ್

      • ಧನ್ಯವಾದಗಳು ಮೌಳಿಯವರೇ 🙂
        ತಮಗೂ ಮತ್ತು ಎಲ್ಲ ಪದ್ಯಪಾನಿಗಳಿಗೂ ಚೌತಿಯ ಶುಭಾಶಯಗಳು.

      • ಅಬ್ಬಾ! ದ್ವಿಪದಿಯಲ್ಲಿ ದತ್ತಪದಿಯೇ ಸೊಗಸಾದ ಸಹೃದಯಸ್ತವವಾಗಿ ಹೊಮ್ಮಿದೆ!!…..ತುಂಬ ಸಹಜಸುಂದರವಾಗಿದೆ.

  2. ವಾರ್ಧಕಷಟ್ಪದಿಯಲ್ಲಿ ನನ್ನೊಂದು ಪ್ರಯತ್ನ:

    ಸರಸರನೆ ಕಾರ್ತವೀರ್ಯನ ಕಡಿದ ಭಾರ್ಗವಂ,
    ಹರವಿ ರಸನೆಯನೆ ದೈತ್ಯನ ನೊಣೆದ ಕಾಳಿ, ವಾ-
    ನರರನೆಲ್ಲಂ ತುಮುಲಯುದ್ಧಕಂ ಸಂನಹಿಸಿ ದಶಮುಖನ ಗೆಲಿದ ರಾಮಂ|
    ಮರೆಯಾದರೇಂ ಮನಕೆ ಸುವಿಮಲಾಹಿಂಸೆಯಂ
    ನೆರೆನೋಂತ ಗಾಂಧೀಯಜನೆತೆಗಂ; ಹಾ! ಮರ್ತೆ
    ಹರನುಮಾ ನರನ ಸಾರಥಿಯುಮಿರದಾದರೇಂ ಸ್ವಾತಂತ್ರ್ಯಸಂಗರದೊಳು?

    (ಇಪ್ಪತ್ತೊಂದು ಬಾರಿ ಇಳೆಯನ್ನೇ ಸುತ್ತಿ ಪ್ರಜಾಕಂಟಕರನ್ನು ಸೀಳಿದ ಪರಶುರಾಮ, ತಾನು ಅಬಲೆಯೆಂಬ ಮಿಥ್ಯಯನ್ನು ದೂರಮಾಡುವಂತೆ ರಕ್ತಬೀಜಾದಿರಾಕ್ಷಸರನ್ನು ಉಗ್ರೋಗ್ರವಾಗಿ ಕೊಂದ ಕಾಳಿ, ಸಮುದ್ರಕ್ಕೇ ಸೇತುವೆಯನ್ನು ರಚಿಸಿ ವೈರಿಯ ನೆಲೆಯನ್ನು ಹುಡುಕಿಕೊಂಡು ಬಂದು ಆತನನ್ನು ಸಪರಿವಾರವಾಗಿ ಕೊಂದ ಶ್ರೀರಾಮ,
    ಅಂತಃಶತ್ರುಗಳಾದ ಆಶೆ-ಅಜ್ಞಾನಗಳನ್ನೇ (ಕಾಮ ಮತ್ತು ಅಂಧಕಾಸುರ) ಸುಟ್ಟುರುವಿದ ಮಹಾದೇವ ಹಾಗೂ ಚತುರುಪಾಯಗಳನ್ನೆಲ್ಲ ಚಾತುರ್ಯದಿಂದ ಬಳಸಿ ಸರ್ವತ್ರ ಜಯವನ್ನು ಗಳಿಸಿದ ಶ್ರೀಕೃಷ್ಣ ಮುಂತಾದ ನಮ್ಮ ದೇವತೆಗಳ ತತ್ತ್ವ-ಸತ್ತ್ವಗಳೆಲ್ಲ
    ಅಹಿಂಸಾಸನ್ನಿಯಲ್ಲಿ ಹೂತುಹೋಗಿದ್ದ ಗಾಂಧಿವಾದಿಗಳಿಗೆ ನಮ್ಮ ನಾಡಿನ ಸ್ವಾತಂತ್ರ್ಯಸಂಗ್ರಾಮದ ಕಾಲದಲ್ಲಿ ಮರೆತುಹೋಗಿದ್ದರೇ ಎಂಬುದು ಪ್ರಸ್ತುತಪದ್ಯದ ತಾತ್ಪರ್ಯ.
    ಇಲ್ಲಿ ಕೇವಲ ಸರಸ-ವಿರಸಗಳನ್ನು ಅನ್ಯಾರ್ಥದಲ್ಲಿ ತರಲಾಯಿತು. ತುಮುಲ-ವಿಮಲಗಳಿಗೆ ಯಥಾರೀತಿಯ ವಿನಿಯೋಗವೇ ಸಂದಿದೆ.)

    • ಹತ್ತಿರ ಒಂದು ಲೇಖನಕ್ಕಾಗುವಷ್ಟು ವಿಷಯಗಳನ್ನು ಇಲ್ಲಿ ಅಡಗಿಸಲು ವಾರ್ಧಕ ಷಟ್ಪದಿಯಲ್ಲದೆ ಸಾಧ್ಯವಿರಲ್ಲಿಲ್ಲವೆನಿಸುತ್ತದೆ.
      ಆದರೂ ವಾರ್ಧಕ ಷಟ್ಪದಿಯನ್ನು ಸ್ವಯಂಪ್ರೇರಣೆಯಿಂದ ಆರಿಸಿಕೊಳ್ಳುವುದೇನು ಸಾಮಾನ್ಯವೆ? ಇದಕ್ಕೆ ಅನುವು ಮಾಡಿಕೊಟ್ಟ ಸೋಮಗೆ ವಂದನೆಗಳು ಸಲ್ಲುತ್ತವೆ. 🙂

      • ಸೋಮಂಗೆ ರಾಮನ ಸಾಧುವಾದಂಗಳು
        ಭೀಮಂಗೆ ಹರಿಯ ಬೆಂಬಲಮೇ!
        ಈ ಮಧುರೋದ್ಯಮದೊಳ್ ನಾನೆ ನವೆದಿರ್ದೆಂ
        ನೇಮಿಸಿ ವಾರ್ಧಕವಿಧಿಯಂ 🙂

  3. ಎಂಥ ಸರಳಪದಗಳಿಂದಲೇ ಬತ್ತಿಯಿಟ್ಟೆಯಯ್ಯಾ ಸೋಮಾ!!

    ಸೋಮಾ! ನಿನ್ನಂತೆ ಮೇಣೀ ಪದಯುಗಲಯುಗಂ ಮುಗ್ಧಮುಗ್ಧಾತಿಮುಗ್ಧ-
    ಸ್ಥೇಮಂ; ನೋಡಲ್ಕೆ ಪದ್ಯಗ್ರಥನಕೆ ನಲವಿಂ ಲೀಲೆಯಿಂ ಬರ್ಕುಮೆಂಬಂ-
    ತಾಮೋದಂ ನೀಳ್ಗುಮಯ್ಯೋ! ರಚನೆಗೆ ತೊಡಗಲ್ಕೇಂ ತೊಡರ್ಗಳ್ ತೊಡಂಕೋ!!
    ಸೀಮಾತೀತಂ ಗಡೀ ನಿನ್ನಯ ನಯವಿನಯಾಂತಸ್ಥಧೂರ್ತೋದ್ಯಮಂಗಳ್ !!! 🙂 🙂

    (ಪದಯುಗಲಯುಗಂ = Two plus two number of words; i.e., four)

    • ಈ ದತ್ತಪದಿಗೆ ಯಾವ ಛಂದಸ್ಸನ್ನು ಆಯುವುದೆಂಬ ಚಿಂತೆಯಲ್ಲಿ ನಾನು ನವೆದು ನನಗೆ ಸ್ವಲ್ಪವೂ ಇಷ್ಟವಿಲ್ಲದ ವಾರ್ಧಕವನ್ನೇ ಅನಿವಾರ್ಯವಾಗಿ ಆಯ್ದುಕೊಂಡು’ಆಯ್ಕೊಳ್ಳ’ಬೇಕಾಯ್ತಲ್ಲೋ ಸೋಮಾ! ನಿಸ್ಸೀಮಾ! 🙂

    • ಹೌದು 🙂 ಬಹಳ ಸರಳವಾದ ಪದಗಳನ್ನೇ ಕೊಟ್ಟಿರುವಿರಿ, ಸೋಮ!

    • ಅಕಟಾ ದತ್ತಕ್ಷರಂಗಳ್ ಬಹುವಿಧತೆಯ ಪೂರ್ಣಂಗಳಿಂಗಡ್ಡಿಯಿರ್ಕುಂ

      ಗಣೇಶ್ ಸರ್, ನಿಮ್ಮ ಅನಿಸಿಕೆ ಸರಿಯಾದದ್ದು ದತ್ತಪದಗಳನ್ನು ಬೇರೆಬೇರೆ ರೀತಿಯಲ್ಲಿ ಹೊಂದಿಸಲು ಕಷ್ಟವಾಗುತ್ತಿದೆ 🙂

  4. ಖಲು ಸಂಸಾರವಿಮುಕ್ತ ಸಾವಿರಸಮರ್ ಸಂನ್ಯಾಸಸಂಮೋಹಿತರ್
    ಕಲಿಗಳ್ ಮೀಯುತೆ ನಿತ್ಯ ದೇಸರಸದೊಳ್ ಹೋರಾಡುತಾಂಗ್ಲೇಯರಂ

    ಅಲರಿರ್ದರ್ ವಿರಸಾದಿ ಸೋಂಕರಹಿತರ್ ಸಂನ್ಯಾಸಸಂಮೋಹಿತರ್
    ಕಲಿಗಳ್ ಸೂಸುತೆ ವೀರಹಾಸರಸಮಂ ಹೋರಾಡುತಾಂಗ್ಲೇಯರಂ
    ಗೆಲಿದರ್ ಕಾಳಗಮೆಷ್ಟೊ ನೀತಿವಿಮಲರ್ ಮೇಣ್ ದೇಶವಾಸಿರ್ಗಳೊಳ್ ದೇಶವಾಸರ್ಕಳೊಳ್
    ಬಲಿದಾ ಬಂಧಿತದಾಸ್ಯಭಾವತುಮುಲಕ್ಕೀಡಾದ ದೌರ್ಭಾಗ್ಯರೈ

    [ಸಂಸಾರಗಳನ್ನು ಬಿಟ್ಟು ಸಂನ್ಯಾಸ ಮನಸ್ಕರಾದ ಸ್ವಾತಂತ್ರ್ಯ ಹೋರಾಟಗಾರರು ಆಂಗ್ಲರ ವಿರುದ್ಧ ಎಷ್ಟೋ ಕಾಳಗಗಳನ್ನು ಗೆದ್ದರು, ಆದರೆ ದೇಶವಾಸಿಗಳಲ್ಲಿ ಬಲಿತಿದ್ದ ದಾಸ್ಯದಿಂದ ಬಂಧಿತರೆಂಬ ಭಾವವನ್ನು ಗೆಲ್ಲಲಾಗಲಿಲ್ಲ]

    • ಪಲವುಂ ವ್ಯಾಕೃತಿದೋಷಮಾದುದಕಟಾ ಶ್ರೀರಾಮಚಂದ್ರಾ! ವಯ-
      ಸ್ಯಲಲಾಮಾ! ಖಲು ಎಂಬ ಸಂಸ್ಕೃತಪದಂ ತಾನವ್ಯಯಂ ಸಲ್ಲದಯ್ |
      ಸಲಲೆಂತಪ್ಪುದು ಮರ್ತೆ “ಸಾವಿರಸಮರ್” ಹಾ! ವೈರಿಸಾಮಾಸಿಕಂ;
      ನಲವಿಂ ತಿರ್ದುವುದಂತ್ಯದೊಳ್; ಪದಮಿದೋ “ದೇಶವಾಸರ್ಕಳೊಳ್” ||

      • ಬಡಿಯುತ್ತುಂ ಮಮ ಚಿತ್ತಕಾಡಿತಕಟಾ ದತ್ತಕ್ಕೆ ನೀಳ್ದೀ ಪದಂ
        ತೊಡೆದಾಗಿರ್ದುದು ಪಿಂದೆ “ಕಾವಿರಸಿಕಂ” ಎಂಬಾರಿಸಾಮಾಸಿಕಂ
        ಪಡೆವೆಂ ಸಾಲೊಳೆ ಮೂರೆನುತ್ತೆ ಲಘುಗಳ್ ಮತ್ತೇಭವಿಕ್ರೀಡೆಯೊಳ್
        ಮಡಗಿರ್ದೆಂ ಪದಪಾದದೊಳ್ಗುಮೆನಿತೋ ದೋಷಂಗಳಂ ಮೂಢನೊಲ್

        ಕೊಂಚ ಸವರಣೆಗಳಿಂದ, ಮೇಲೆಯೇ, ಗುಣಾಧಿಕ್ಯಕ್ಕಲ್ಲದಿದ್ದರೂ ದೋಷರಾಹಿತ್ಯದ ಹದನಕ್ಕೆ ಪ್ರಯತ್ನಿಸಿದ್ದೇನೆ 🙂
        “ದೇಸರಸ”ವೆಂಬುದೂ ಅರಿಸಮಾಸವೆನಿಸುತ್ತದೆ.ಆದ್ದರಿಂದ ಅದರನ್ನೂ ನಿವಾರಿಸಿದ್ದೇನೆ.

      • ತಪ್ಪ ಗೈಯಲು ಛಾತ್ರರಿಂತು ಬೈಗುಳುಸಲ್ಲೆ
        “ಬೆಪ್ಪ, ಹಾಳೆದ್ದುಪೋಗೆಲೊ ಕತ್ತೆಯೆ”|
        ಒಪ್ಪವಿಟ್ಟಾ ’ಕತ್ತೆ’ಶಬ್ದಕ್ಕೆ, ರಾಮನಂ
        ತೆಪ್ಪನೆಂದಿರೆ ’ಲಾಮ(LLAMA)’ನೆಂದುಮಯ್ಯೋ!!

        • ಈಪರಿಯ ಬೆದಕಾಟ, ಇರದರ್ಥಗಳ ಸೆಳೆತ
          ದೀಪವೈ ಹಾದಿಗಳ ಗಡ ರಂಪರ

  5. A feeble attempt 🙁

    ಸರಸರನೆ ಮೌನದೆ ಖಳರ್ಗಳನುಪಾಯದಿಂ
    ಮರುಳುಮಾಡುತ್ತೆರವಿ, ಮಲಗಿದಾಗಳ್|
    ಹರಿಸುತ್ತಲರಯರಕ್ತವನುಮೀತುಮುಲದಿಂ
    ವಿರಸಮಿರದಾಗಳೀ ಸ್ವಾತಂತ್ರ್ಯದೊಳ್|

  6. ಸರಸದ ಬಾಳ್ತೆಗಂ ತಿಳಜಳಾಂಜಳಿಯಂ ಕುಡುತುಂ ಕುಟುಂಬದಿಂ
    ವಿರಸಮೆಯಾದೊಡಂ ಗಣಿಸದಾರ್ಪಿನಗುರ್ವಿಸುತುಂ ಬ್ರಿಟೀಷರಂ |
    ಭರತಧರಿತ್ರಿಗಂ ವಿಮಲಕೀರ್ತಿಯನೊಂದಿಸಿರ್ದಾ ಮಹಾತ್ಮರಿಂ-
    ಗೊರೆಯದೆ ನಲ್ಮೆವಾತುಗಳನೀ ತುಮುಲಂಗಳನೇಕೆ ಮಾಳ್ಪರಯ್ ?

    ಸಾವರ್ಕರ್ ಮೊದಲಾದ ವೀರರನ್ನೂ ಮಾನಿಸದ ದುರ್ಬುದ್ಧಿಜೀವಿಗಳ ಕುರಿತು ಹೇಳುವ ಮಾತಿದು.
    ದತ್ತಪದಗಳನ್ನು ಆ ಅರ್ಥಗಳಲ್ಲೇ ಬಳಸಿದ್ದೇನೆ…

    • ಮೊದಲಿಗಮಾಂ ಗಡಿಂತೆ ವರಚಂಪಕಮಾಲೆಯೊಪ್ಪಿಸಲ್ಕೆ ಮ-
      ತ್ಪದಮನೆ ಚಿಂತಿಸಿರ್ದೆನದು ನಿಮ್ಮ ಕವಿತ್ವದೆ ಸಾಧುರೀತಿಯಿಂ-
      ದೊದವಿದುದಲ್ತೆ ಕನ್ನಡದ ಕಂಪೊಗೆವಂದದೆ ರಾಮಕೃಷ್ಣ! ಸಂ-
      ಪದಮೆನುವಂತೆ; “ಸಂತೆಗಿದೊ ಮೂರ್ಮೊಳ”ವೆಂಬವೊಲಾಗದಂತೆಯೇ !!

    • ಸಾವರ್ಕರರಿಗೆ ಮುಡಿಪಿಟ್ಟ ನಿಮ್ಮ ಪದ್ಯ ಬಹಳ ಚೆನ್ನಾಗಿದೆ

    • ರಾಗ-ಸೋಮರಿಗೆ ಧನ್ಯವಾದಗಳು 🙂

  7. ಪರಿಗುಂ ಭೋಯೆನುತುರ್ಬಿ ಕೇಸರಸರಸ್ವತ್-ಧಾರೆ ತಾಂ ಚಂದದಿಂ
    ಮೆರೆಗುಂ ಮಾತೆಯ ಮೆಯ್ಮೆಗಳ್ ಕವಿರಸಪ್ರಸ್ತಾಪಿತೋದ್ಘೋಷದೊಳ್
    ಸುರಿಗುಂ ವರ್ಷದವೋಲ್ ದ್ಯುತಿಚ್ಛವಿ ಮಲಸ್ನಿಗ್ಧಾರ್ತಚೇತರ್ಗೆ ಮು-
    ಖ್ಯರ ಸಂಗಂಗೊಳೆ ಲೋಗನೋಂತು ಮುಲನೆಂದಾಕ್ರಮಿಗಳ್ ನೋಯರೇಂ

    ತ್ಯಾಗದ ನದಿ ಭೋಯೆಂದು ಹರಿಯುವುದು, ತಾಯ್ನಾಡಿನ ಮಹಿಮೆಗಳು ಕವಿಗಳ ರಸವತ್ಪದ್ಯದಿಂದ ಮೆರೆಯುವುದು, ಕೀಳ್ಮೆಯ ಭಾವದಿಂದ ಆವರಿಸಲ್ಪಟ್ಟ ಜನರ ಮನಸ್ಸಿಗೆ (ಹೋರಾಟದ) ಪ್ರಕರವಾದ ಬೆಳಕು ಸುರಿಯುವುದು, ಮುಖ್ಯರ ಬೆಂಬಲವಾಗಿ ಲೋಕ(ಜನಸಾಮನ್ಯರು) ನಿಲ್ಲಲು, ಮುಲ(ಮುಲ)ಯೆಂದು ಆಕ್ರಾಮಿಗಳು ನೋಯದೇ ಹೋಗುವರೇನು?

    • ಮೊದಲ ಸಾಲು ತುಂಬ ಸೊಗಸಾಗಿದೆ. ಆದರೆ ಮುಂದೆ ಬಂದ ಪ್ರಸ್ತಾಪಿತ ಎಂಬ ಪದವು ಸಾಧುವಲ್ಲ. ಅದು ಪ್ರಸ್ತುತ ಎಂದಾಗಬೇಕು. ಆಗ ಛಂದಸ್ಸು ಕೆಡುವುದು.
      ದ್ಯುತಿ ಮತ್ತು ಛವಿಗಳೆಲ್ಲ ಒಂದೇ ಅರ್ಥದವು; ಸುಮ್ಮನೆ ಪುನರುಕ್ತಿ ಸಲ್ಲದು. ಅಲ್ಲದೆ ಮಲಸ್ನಿಗ್ಧ ಎಂದರೆ ಅಪಾರ್ಥಕವಲ್ಲವೇ! ಲೋಗನೋಂತು ಎಂದರೆ ಏನರ್ಥ? ಮುಲ ಎಂಬುದಕ್ಕೆ ಶಿಷ್ಟಪ್ರಯೋಗದ ಆಧಾರವುಂಟೇ? ಮುಲಮುಲ ಎಂದು ಒಟ್ಟಾಗಿ ಬಂದಾಗ ಅನುಕರಣಶಬ್ದವಾಗಿ ಆರ್ಥವುಂಟಾದರೂ ಅದು ಒಂದೇ ಮುಲ ಎಂಬ ಪದಕ್ಕುಂಟೇ? ಇದ್ದಲ್ಲಿ ಅದಕ್ಕೆ ಪ್ರಮಾಣವೇನು? ಅಲ್ಲದೆ ಅದಿಲ್ಲಿ ಸಲ್ಲುವುದೇ?

      • ಹೌದು ಗಣೇಶ್ ಸರ್, ನನಗೂ ‘ತುಮುಲ’, ‘ವಿಮಲ’ದ ಅಳವಡಿಕೆಯ ಬಗ್ಗೆ ಗೊಂದಲವಿತ್ತು ಹೇಗಾದರೂ ಮಾಡಿ ತರೋಣವೆಂದು ಪ್ರಯತ್ನಿಸಿದಾಗ ಹೀಗಾಯಿತು. ನಿಮ್ಮ ಪ್ರತಿಕ್ರಿಯೆಯಿಂದ ‘ವಿರಸ’ದ ಅಳವಡಿಕೆಯೂ ಎಡವಟ್ಟಾಗಿದೆಯೆಂದು ತಿಳಿಯಿತು… ಕನಿಷ್ಟ 35% ಗಿಂತ ಕೆಳಗಿಳಿದು ಪದ್ಯ ತೇರ್ಗಡೆಯಾಗಲಿಲ್ಲ 🙂

        ಒಂದು ವಿಷಯ, ನನಗೆ ‘ನೋಂತು’ ಎನ್ನುವುದರ ಪ್ರಯೋಗ ಹೇಗೆ ಮಾಡಬೇಕೆಂದು ಸರಿಯಾಗಿ ತಿಳಿದಿಲ್ಲ, ಒಂದು ಉದಾಹರಣೆಯೊಂದಿಗೆ ತಿಳಿಸಿಕೊಟ್ಟರೆ ತಿದ್ದಿಕೊಳ್ಳುತ್ತೇನೆ 🙂

        • ಸೋಮ – ಇದುವರೆವಿಗೆ ಆಪ್ತಗೋಷ್ಟಿಯಲ್ಲಿ ನಿರ್ಮಿತವಾದ ಪದ್ಯಗಳಲ್ಲಿನ ‘ನೋಂತು’ಗಳನ್ನು ಇನ್ನು ಪರಿಶೀಲಿಸಬೇಕಿದೆ 🙂

        • ದೋಸsಗsಳೆಷ್ಟೆಷ್ಟೋ ಲೇಸಾಗೆs ಮಾಡುsತೆs
          ತ್ರಾಸಕ್ಕೆs ಸಿಲುಕಿsದೊಬ್ಬಂಟಿs – ಯಾದಾಗೆ –
          ನ್ನಾಸsರೆsಯೊಲುನೀ ಸಂದಿರ್ಪೆs 🙂

          • ಸೋಮಣ್ಣನಂತಾರು ಸೀಮಾತೀತಪ್ರೀತಿ-
            ಧೀಮಂತರಿರ್ಪರ್ ಸ್ನೇಹsದೊಳ್? ರಾಮಣ್ಣ!
            ಸ್ತೋಮಿಸಿಕೊಳ್ಳಯ್ ತಪ್ಪನ್ನೇ 🙂

          • ಗಣೇಶ್ ಸರ್, ನಿಮ್ಮ ಸಹೃದಯತೆಗೆ ಅನಂತ ನಮನಗಳು 🙂

            ಗಾವುsದs ದೂರsದಿsನೀವsರೆs ನಲ್ಮೆಯs
            ಕೋವಿದsರೊಡನಾಟs ನಿತ್ಯsವುs ಎಂದಿದ್ದೆs
            ನೀವೀವs ನೇಹsಕೆs ನಾಸೋತೆs

            ರಾಮ್,

            ಒಬ್ಬಬ್ಬರಿಗೆ ನಾವು ಹೀಗೆಯೆ ಸಹಕರಿಸುತ್ತ ಮುಂದುವರೆಯೋಣ 🙂

            ಸಾಸಿsರs ದೋಷsದೆs ಮೀಸೆsಯs ತೀಡೋಣs
            ಬೀಸಿsಪs ಕಲಿಕೆsಯs ಕೋಲಿಂದೆs ಕೋಲಾಟs
            ಲೇಸಿಂದsಲಾಡುsತs ಸಾಗೋಣs

          • ಸೋಮ,
            ಬೊಮ್ಮsನs ಗಣಗsಳುs ನೆಮ್ಮsದಿs ತರುವsವುs
            ಹೊಮ್ಮsಲುs ಪಾದsವೆರಡsರs – ಮೂರsರs
            ತಮ್ಮsಯs ಸ್ವಸ್ಥಾನಗಳಲ್ಲಿs
            [ತ್ರಿಪದಿಯಲ್ಲಿ ೨,೩ನೇ ಪಾದಗಳ ೨ನೇ ಗಣವು ಬ್ರಹ್ಮಗಣವಾಗಬೇಕು – ನಾನಾ, ನನನಾ]

  8. ಅಶ್ವಧಾಟೀ |
    ಆ ಬಟ್ಟೆಯೊಳ್ ಸರಸಮಾ ದುಟ್ಟದಂಡುಗುಳುವಂಗಾರಧಾರೆಯೊಳೆ ಮೇ-
    ಣಾ ಬಟ್ಟೆಯೊಳ್ ವಿರಸಮಾ ಬಟ್ಟಮೋರೆಯ ರಸಾರ್ದ್ರಾಂತರಂಗೆ ಸತಿಯೊಳ್ |
    ಈ ಬನ್ನದೊಳ್ ತುಮುಲಸಂಗ್ರಾಮದಂಗಣಕೆ ಧೀರತ್ವದಿಂ ಧುಮುಕುತುಂ
    ಪ್ರಾಬಂಧಿಸಿರ್ಪರಿದೊ ನೈಜಾತ್ಮಮಂ ವಿಮಲಕೀರ್ತಿಪ್ರಕೃಷ್ಟಪದಕಂ ||

    ದುಟ್ಟದಂಡು-ಉಗುಳುವ-ಅಂಗಾರಧಾರೆ.
    ಆ ಸ್ವಾತಂತ್ರ್ಯಸಂಗ್ರಾಮದ ಮಾರ್ಗದಲ್ಲಿ ದುಷ್ಟರ ಪಡೆಯುಗುಳುವ ಕೆಂಡದ ಧಾರೆಯೊಂದಿಗೇ ಸರಸ. ಕೆಲವರಿಗೆ ಪ್ರೇಮಾಭಿರಾಮೆಯಾದ ಸತಿಯೊಂದಿಗೂ ವಿರಸ (ಸತಿಯ ದುಃಖ-ವಿರೋಧಗಳು ಕೆಲವರಿಗಾದರೂ ಬರದಿರದು !). ಇಂತಹ ಕಷ್ಟದಲ್ಲಿಯೂ ಘೋರಸಂಗ್ರಾಮಕ್ಕೆ ಧುಮುಕಿ ಶಾಶ್ವತಕೀರ್ತಿಗೆ ತಮ್ಮನ್ನು ತಾವು ಯೋಜಿಸಿಕೊಂಡರು.

    ದತ್ತಪದಗಳನ್ನು ಬೇರೆ ರೀತಿ ಹೊಂದಿಸಲಾಗದಿದ್ದರೂ ಅಶ್ವಧಾಟಿಯ ಪ್ರಯತ್ನಕ್ಕಾಗಿ ಈ ಪ್ರವೃತ್ತಿ.

    • ಈ ಬಂಧದೊಳ್ ವಿಮಲ ಪಾದಂಗಳಿಂ ಸರಸಕೊಪ್ಪಪ್ಪವೊಲ್ ವಿರಸಮನ್ನೆಲ್ಲ ಮೇಣ್ ತುಮುಲಮಂ ನೀಗಲೆಂ ರಚಿತದೀ ಪದ್ಯಕಾಂ ಶುಭವ ಹಾರೈಸುವೆಂ, ಸತತ ಕೊಂಡಾಡಿಪೆಂ, … 🙂

    • ಪೆಜತ್ತಾಯರೇ! ಅಶ್ವಧಾಟಿ (ಕುದುರೆಯ ವೇಗ) ಚೆನ್ನಾಗಿದೆ. ಆದರೆ ಇದಕ್ಕೆ ಸಾಲಿಗೆ ಮೂರರ ಹಾಗೆ ಪ್ರಾಸದ ಹಲ್ಲಣ(ಜೀನು)ವನ್ನು ತೊಡಿಸುವ ಸಂಪ್ರದಾಯವುಂಟಲ್ಲ!
      ಇಲ್ಲವಾದರೆ ಬೆತ್ತಲೆಗುದುರೆಯನ್ನೇರಿದಂತಾದೀತೆಂದು ವಿದ್ವಾಂಸರು ಆಕ್ಷೇಪಿಸಿಯಾರು!! 🙂

      • Oh.. DhanyavAdagaLu sir… PratipAdakkU mUru jInugaLannu toDisuvudu aicchikavendu tiLididde..

        • ತಮ್ಮ ಗ್ರಹಿಕೆಯು ಸರಿಯಾಗಿದ್ದಂತಿದೆ. ಇಚ್ಛೆಯಿಂದಲೇ ತೊಡಿಸಿ. ಸವಿಯಲು ನಾವು ಕಾತರರಾಗಿದ್ದೇವೆ 😉

          • ಅಯ್ಯಯ್ಯೋ!! ೪ ಜೀನುಗಳನ್ನು ತೊಡಿಸುವುದೇ ಕಷ್ಟದಿಂದ. ಇನ್ನು ೧೨ ಎಲ್ಲಿಂದ ತರಲಿ ಸರ್ :-)?

    • ಪೆಜತ್ತಾಯರೆ, ಬಹಳ ಚೆನ್ನಾಗಿದೆ

    • sOma-rAmarige DhanyavAdagaLu 🙂

      • Pejattayare,
        If we do yamaka to ‘sOma-rAmarige DhanyavAdagaLu’, we will get: So, mArAmArige dhanyavAdagaLu 🙂

        • ಚೆನ್ನಾಗಿದೆ ಪ್ರಸಾದು ಸರ್ 🙂 ಹಾಗೇ ಮುಂದುವರಿಸಿದರೆ ಸೋಮರಾ+ಮರಿಗೆ ಅಂತಾನೂ ಮಾಡಬಹುದು 😉
          ಶರ್ಮರು ಬೇಸರಿಸಲಿಕ್ಕಿಲ್ಲವೆಂದು ನಂಬಿದ್ದೇನೆ 🙂

  9. ಅಮಿತೋತ್ಸಾಹದೆ ಪದ್ಯಪಾನರಸಿಕಾಸ್ಥಾನಂಗಳೊಳ್ ಸರ್ವದಾ
    ಕ್ರ(ಭ್ರ)(ಶ್ರ)ಮಿಸುತ್ತಿರ್ಪ ವಯಸ್ಯವರ್ಯರಕಟಾ ಶ್ರೀಹಾದಿರಂಪೇಶ್ವರರ್|
    ಸುಮಹನ್ಮೌನಕೆ ಸಂದರೇತಕೆ? ವಿಚಾರಂಗೊಳ್ವುದೆನ್ನೀ ಮನಂ
    ನಮನಂ ನೀಳ್ದೆನಿದೋ! ಪ್ರಸಾದು! ನಿಮಗಂ ಬನ್ನಿಂ ಮರುದ್ವೇಗದಿಂ!!! 🙂

    • ಅದೇ ತೆರನಾದ ಉತ್ಸಾಹದಿಂದ ಹಬ್ಬದ ತಯಾರಿಯನ್ನು ನಡೆಸಿದಂತಿದೆ 🙂

    • ಶ್ರೀಹಾದಿರಂ’ಪೇಶ್ವರ’ನಸೂಯಪರನು ದನ-
      ಗಾಹಿಯಾಗಿರ್ದ (ಆತ್ಮಲಿಂಗ~ರಾವಣ) ಸುತನೇಳ್ಗೆಯಿಂದಂ|
      ದಾಹಹಿಂಗಲುಮೆಲ್ಲ ವಿಗ್ರಹಂಗಳು ಮುಳುಗ- (ಗಣೇಶೋತ್ಸವಸಮಾಪ್ತಿ)
      ಲೀಹೆಯಿಂದಾಗ ತೊಡಗುವನೀತನೈ||

      ಇಲ್ಲ, ಇಂದೇ ಬರೆಯುವೆ. ಹಬ್ಬಗಳಲ್ಲಿ ಮುಳುಗಿದ್ದೆ. ತಮ್ಮ ನಲ್ಮೆಯ ನುಡಿಯು ಮುದನೀಡಿದೆ.

  10. ಇದೊಂದು ದುಃಖಗೀತ:-(

    ಮಾಯವಾದನೆ ಶ್ರೀಶನುಂ ಮಿಗೆ ಹೊಳ್ಳನುಂ ಮರೆಯಾದನೇಂ?
    ಹಾ! ಯುವೋತ್ಸವಕಾರಿ ಸತ್ಕವಿ ಕೊಪ್ಪಲಂ ತೊರೆದಿರ್ಪನೇಂ?
    ಮಾಯವಾದರಲಾ ಅದೇತಕೊ ಭಾ.ಲ.,ಮೇಣ್ ಸಿರಿಕಾಂತರುಂ
    ಮಾಯೆಗಾದನೆ ಮೌರ್ಯನುಂ? ಮುಳಿಯಾದಿಗಳ್ ಮರೆಯಾದರೇಂ?? 🙂 🙂

    • ಸರ್ ,
      ಆರೋಗ್ಯ ಹದಗೆಟ್ಟು ಆಸ್ಪತ್ರೆಯಲ್ಲಿದ್ದೆ . ಕೃತಜ್ನತೆಯೊಂದಿಗೆ ಹಾಜರಿ ಹಾಕುತ್ತಿದ್ದೇನೆ .

      • ಅಯ್ಯೋ! ಮನ್ನಿಸಿರಿ….ಇದೀಗ ಆರೋಗ್ಯ ತಾನೆ?….ಸುಮ್ಮನೆ ವಿನೋದಕ್ಕೆ ಹಾಗೆ ಬರೆದಿದ್ದೆನಷ್ಟೆ:-)

    • ಉಳಿದೆಲ್ಲರನ್ನು ’ಮಾಯವಾದರು’ ಎಂದು ಹೇಳಿ, ಮೌರ್ಯನನ್ನು ಮಾತ್ರ ’ಮಾಯೆಗಾದನು’ ಎಂದಿರುವುದು ಮಾರ್ಮಿಕವಾಗಿದೆ. ‘ನೀ ನಾರಿಗಾದೆಯೋ ಎಲೆ ಮಾನವ’ ಎಂದಂತಿದೆ 😉

  11. || ಮತ್ತೇಭವಿಕ್ರೀಡಿತವೃತ್ತ, ರೂಪಕಾಲಂಕಾರ,ಉಪಮಾಲಂಕಾರ ||

    ವಿಮಲಾನಂದದ ಮುಕ್ತಿಗಾಗಿಯೆ ಮಹಾಸ್ವಾತಂತ್ರ್ಯಸಂಗ್ರಾಮಮಂ –
    ತುಮುಲಂಗೊಳ್ಳದೆ ಗೈದ ಯೋಧರತಿಧೀರೋದಾತ್ತಪುಣ್ಯಾತ್ಮರೈ |
    ಸಮೆದರ್,ಚಿದ್ವಿರಸಾಗ್ನಿಯಿಂ ಕುದಿಯುತಟ್ಟಲ್ಕಾಂಗ್ಲರಂ ದೇಶದಿಂ,
    ಗಮನಂಗೈಯದೆ ಬಾಳ್ವೆಯೊಳ್ ಸರಸಕೆಂದುಂ,ಸಂತರಂತಚ್ಚುತರ್ ||

    • ಒಳ್ಳೆಯ ಬಂಧ-ಭಾಷೆಗಳ ಪದ್ಯ. ಧನ್ಯವಾದಗಳು.

      • ನಮಿಪೆಂ ಸೋದರರೆಂದಿರಲ್ ಲಲಿತಮೆಂದೆನ್ನೀ ಪದಂ,ಶೋಧದಿಂ.

  12. ದಕ್ಷಿಣ ಆಫ್ರಿಕಾದಲ್ಲಿ ಗಾ೦ಧಿಯವರ ಹೋರಾಟ – ಅದನ್ನು ಭಾರತಕ್ಕಾಗಿ ಗೋಪಾಲಕೃಷ್ಣ ಘೋಖಲೆಯವರು ಬಳಸಿಕೊಂಡ ”ದೂರದೃಷ್ಟಿ” ಈ ಪೂರಣದ ಉದ್ದೇಶ . ಪೂರಣ ಸಮರ್ಪಕವಾದಂತಿಲ್ಲ

    ವಿರಸದಿಂದಾಫ಼್ರಿಕೆಯೊಳು ಸೆಟೆದ
    ಕರಮಚಂದನ ಸುತನನೊಲಿಸುತ
    ಸರಸದಿ೦ದಲೆ ಸೆಣಸು ದೇಶದೊಳೆನುತ ಘೋಖಲೆಯು I
    ನಿರತರಾಗಲು ದಾಸ್ಯ ಮುಕ್ತಿಗೆ
    ದುರುಳ ದಮನಕೆ ತುಮುಲವಿಲ್ಲದ
    ನಿರುಮಳ ವಿಮಲ ಜನಪರ ಗ್ರಾಮ ಸ್ವರಾಜ್ಯವಿದು ? II

    • ಅಡ್ಡಿಯಿಲ್ಲ; ಪದ್ಯದಲ್ಲಿ ಯಾವುದೇ ಊನವಿಲ್ಲ…ಸ್ವಲ್ಪ ಗತಿಯಲ್ಲಿ ಲಘುಬಾಹುಳ್ಯವು ಬಂದು ಗಣಾನುಸಾರವಾಗಿ ಮಾತ್ರೆಗಳು ಹಂಚಿಕೊಳ್ಳುವಾಗ ಎಡವಿಸುವಹಾಗಿದೆ. ಆದರೆ ಛಂದಸ್ಸಿನ ಲೆಕ್ಕವೇನೂ ಕೆಟ್ಟಿಲ್ಲ…ಸುಭಗತೆಗೆ ಮಾತ್ರ ತುಸು ಎರವಾಗಿದೆ.

      • ಸರ್, ಧನ್ಯವಾದಗಳು .
        ಆರೋಗ್ಯದಲ್ಲಿ ಸುಧಾರಣೆ ಇದೆ 🙂

  13. As opined by Sri SL Bhyrappa, we earned our freedom, our governance (ಧಾರ್ಮಿಕ ಲೋಕತಂತ್ರ) over tens of thousands of years; not in 1947/50. Only, we re-visited it in 1947/50 in the form ‘ಸ್ವಾತಂತ್ರ್ಯ’.
    Well, it is no delightful moment; rather it is a frightening thunder, for we have been in squalor since. Why? Because we got the ‘independence’ in a ಮಲಮಾಸ (ಅಧಿಕಶ್ರಾವಣ) when auspicious celebrations are not to be observed.

    ಎನಿತೆನಿತೊ ಯುಗಗಳಿಂ ಲೋಕಪಾಲನತಂತ್ರ-
    ಮನು ರೂಢಿಸಾವ್ ಧರ್ಮಪದ್ಧತಿಯಿನಿಂ|
    ಪೊನಲು ಮಾಂಸರಸದಿಂ (blood) ’ಸ್ವಾತಂತ್ರ್ಯ’ಮೆನ್ನುತ್ತ-
    ದನು ಮಗುಳೆ ಪೊಂದಿಯು ವಿಕತ್ಥನಮದೇಂ (irony)!!

    ಇನಿತದೇಂ ವಿರಹವಿರಸವು (pain from separation) ದೂರವಾಯವ್ಯ-
    ದೆನಿತೊ ದೇಶಂಗಳವು ಲುಪ್ತಮಾಗಲ್| (Partition of Gandhara+Kekaya)
    ಬಿನದವಿಲ್ಲದಿಹ ದೇವತುಮುಲಂ (thunder) ನೋಡಲದು
    ಮನೆಚಾವಿ (Key to the nation) ಮಲಮಾಸದೊಳು ದಕ್ಕಿತೈ!!

    • ಚಾವಿ ಹಿಂದೀ ಪದವಲ್ಲವೆ

    • ಪ್ರಿಯ ಪ್ರಸಾದು,
      ಮನೆಚಾವಿ ಅರಿಸಮಾಸವಲ್ಲವೆ? [ಸ್ವಾತಂತ್ರ್ಯ ಹೋರಾಟದ ಕುರಿತ ಉಳಿದೆಡೆ ಸಂಬಂಧಪಟ್ಟ ರೂಪಕಗಳಿಲ್ಲದ್ದರಿಂದ, ಮನೆಚಾವಿ ಎಂಬ ರೂಪಕ ಕೊಂಚ ಬಲವಂತದ್ದೆನಿಸಿತು.]
      ದತ್ತಪದಿಯಲ್ಲಿ ಒಂದೇ ಪದ್ಯದಲ್ಲಿ ಎಲ್ಲ ಪದಗಳನ್ನೂ ತರಬೇಡವೆ?
      ದೇವತುಮುಲ ಎಂಬುದಕ್ಕೆ ಗುಡುಗು ಎಂಬರ್ಥವಿದೆಯೆ? ನಿಘಂಟಿನಲ್ಲಿ ಕಾಣಿಸಲಿಲ್ಲ. ಹಾಗೂ ಅದಕ್ಕೆ ಬಿನದರಾಹಿತ್ಯವೇ?

      ಸಂಶಯಗಳನ್ನು ಪರಿಹರಿಸಬೇಕಾಗಿ ಕೋರುತ್ತೇನೆ 😉

    • 1) ‘ಮನೆಚಾವಿ’ಯ ಮೇಲೆ ಕೆಲವರು ಎಗರಿಬೀಳುತ್ತಾರೆ ಎಂಬ ನಿರೀಕ್ಷೆಯಲ್ಲಿಯೇ ಇದ್ದೆ. ಹೌದು ಅದು ಕನ್ನಡ-ಹಿಂದಿಗಳ ಅರಿಸಮಾಸ. ತುಸು ಸ್ವಾತಂತ್ರ್ಯವಹಿಸಿ ಪ್ರಯೋಗಿಸಿದ್ದೇನೆ. ದಯವಿಟ್ಟು ಮಾನ್ಯಮಾಡಿ. ಧಾರವಾಡಕನ್ನಡದಲ್ಲಿ ’ಚಾವಿ’ ಬಳಕೆಯಲ್ಲಿದೆ.
      2) ನಾನು ರೂಪಕಾಲಂಕಾರವನ್ನು ಮಾಡಿಯೇ ಇಲ್ಲ. ಬರಿಯ ಒಂದು ಪಾರ್ಶ್ವದ ರೂಪಕವನ್ನು ಮಾಡುವಂತಿಲ್ಲವಲ್ಲ.
      3) http://www.spokensanskrit.de/index.php?page=2 ನೋಡಿ. ದೇವತುಮುಲ=thunder
      4) ಬಿನದವಿರದ ಗುಡುಗು ಯಾವುದೆಂದರೆ ’Partition of India’ ಹಾಗೂ ಅದರಿಂದಾದ ವಿರಹವಿರಸ.
      5) ಹೀಗೆ ದತ್ತಪದಗಳನ್ನು ಎರಡುಪದ್ಯಗಳಿಗೆ ವಿಸ್ತರಿಸುವುದನ್ನು ಈ ಮುನ್ನವೂ ಒಂದೆರಡು ಬಾರಿ ಮಾಡಿದ್ದೇನೆ.

Leave a Reply to Chandramowly Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)