Dec 292014
 

‘ರಾಮರಾಜ್ಯದಲ್ಲಿ ರಾವಣನು ಪ್ರಜೆಯಾದಾಗ’ ಎಂಬ ವಸ್ತುವಿನ ಬಗ್ಗೆ ಪದ್ಯಗಳನ್ನು ಬರೆಯಿರಿ

  60 Responses to “ಪದ್ಯಸಪ್ತಾಹ ೧೩೧: ವರ್ಣನೆ”

  1. ರಾಮನ ರಾಜ್ಯದೆ ರಾವಣನಿರ್ದೊಡೆ
    ಕಾಮವೆಯೆಲ್ಲೆಲ್ಲುಮಿರ್ಕುಂ
    ಸಾಮಾನ್ಯರೆಲ್ಲರುಮವನಂತೆಯಾಗಿರೆ
    ಕಾಮಾಲೆಯಾಯ್ತಯೋಧ್ಯದೊಳ್

  2. Ravanas are everywhere; in ramarajyas even. Wasn’t there that launderer in Ayodhya? Doesn’t matter much if such a person is an ordinary citizen. But Ravana was no ordinary citizen. He was a king, and that matters a lot.
    ಸಾಂಗತ್ಯ|| ಇರಲಿಲ್ಲಮೇಂ ರಾಮರಾಜ್ಯದೊಳ್ ರಾವಣಂ
    ಪಿರುಕಣೆಯ ಗೈದಂಥ ರಜಕಂ|
    ತರಳಪ್ರಜೆಯುಮಾದೊಡಂತು ಮೇಲಲ್ತೆ ಪೇಳ್
    ದೊರೆಯಾದುದಲ್ತೆ ಪ್ರಮಾದಂ||

    • ಅಗಸನನ್ನು ರಾವಣಪಕ್ಷಪಾತಿಯೆಂಬುದು ಚೆನ್ನಾಗಿದೆ :). ಆದರೆ (Doesn’t matter much if such a person is an ordinary citizen) ಎನ್ನುವುದು ಹೇಗೆ ಸರಿ ಪ್ರಸಾದು,

      ಆಳುsವs ಮಾತ್ರsಮೆs ಕಶ್ಮsಲs ಭಾವsದೆs
      ಗೋಳsನೆs ಸಾರಿsಪsನೆಂಬೆಯೇಕಯ್
      ಗಾಳಿsಯೊಳ್ ಕೀಳ್ವಾತs ಸಾಮಾನ್ಯs ಪುಟ್ಟಿsಸೆs
      ತಾಳsದೆs ನೊಂದsಳುs ಸೀತೆಯಲ್ತೆs

  3. ಅಭಿಷಿಕ್ತ ವಿಭೀಷಣ
    ====================================

    ಕಡಲ ತೀರದಲಿ ವಿಭೀಷಣನ ಮೂರ್ಧಾಭಿಷೇಕ
    ಲಂಕೆಯಲಿ ಉಳಿದಿಲ್ಲ ರಾವಣನಿಗಿನ್ಯಾವ ಕೆಲಸ
    ಲಂಕಾಧಿಪ ವಿಭೀಷಣ ರಾಮ ಸೇವೆಗೆ ನಿಲ್ಲೆ
    ದಶಶಿರನ ವಧೆಯೊಂದೆ ರಾಮಬಾಣದ ಕೆಲಸ
    ರಾಮನಿಗೆ ಶರಣಾಗೆ, ಲಂಕೆಯಲುಳಿವನೇ ರಾವಣನು
    ಪ್ರಜೆಯಾಗಿ ಬರಬಹುದು ರಾಮರಾಜ್ಯಕೆ ಅವನು
    ಮಾತೆ ಸೀತೆಗೆ ರಾಮ ಕೊಡದಿಹನೆ ನ್ಯಾಯವನು
    ಲಕ್ಷ್ಮಣನು ಚಿಂತಿಸಿದ, ಬಾಣ ನೆಪಮಾತ್ರವಿನ್ನು.

    • Hello Mr Dilip Bhat,

      Thanks for writing to Padyapaana. However, Padyapaana’s sole aim is to encourage only metrical poetry(chandobaddha) and hence we request you to go through the video lessons in the link – Padya vidye and compose/post Chandobaddha padyas hence forward.
      Thanks once again for your interest.

      • though I am not very rich in HALEGANNADA , i am interested to read all these and
        trying to digest as much as possible.

        • ’ಹಳೆಗನ್ನಡ’ ಎಂದರೆ ಹೊಸತಾಯಿತು; ’ಹಳ(ೞ)ಗನ್ನಡ’ ಎನ್ನಬೇಕು 😉

    • ಪ್ರಿಯ ದಿಲೀಪ್,
      ಶ್ರೀಶರು ಹೇಳಿದುದನ್ನು ನಾನು ನಿನ್ನೆಯೇ ಹೇಳಬೇಕೆಂದಿದ್ದೆ. ತಡೆದದ್ದು ಏಕೆಂದರೆ, ಇದೂ ಯಾವುದೋ ಛಂದಸ್ಸಿನಲ್ಲಿ ಎದೆಯೇನೋ ಎಂಬಷ್ಟು ಚೆನ್ನಾಗಿದೆ ನಿಮ್ಮ ಪದ್ಯ. ಛಂದಸ್ಸು ನಿಮಗೆ ಸುಲಭದಲ್ಲಿ ಒಲಿಯುವಷ್ಟು ಹದನಿದೆ ನಿಮ್ಮ ಆಸ್ಥೆ. ಶ್ರೀಶರು ಹೇಳಿದಂತೆ ದಯವಿಟ್ಟು ಬಿಡದೆ ಪಾಠಗಳನ್ನು ಓದಿಕೊಳ್ಳಿ.
      ನಿಮ್ಮ ಪದ್ಯವನ್ನು ಎಷ್ಟೋಮಟ್ಟಿಗೆ (ಪಂಚಮಾತ್ರಾ) ಛಂದಸ್ಸಿಗೆ ಅಳವಡಿಸುವ ಪ್ರಯತ್ನ:
      ಪೊಡಮಡಲ್ ತಮ್ಮಯ್ಯ ರಾಮಸೇವೆಗಮಿಲ್ಲಿ
      ಮುಡಿಪಲ್ಲಿ ದಶಶಿರಂ ರಾಮಶರಕಂ|
      ಕಡಲತೀರದೆ ಪಟ್ಟಮಿರೆ ವಿಭೀಷಣನಿಂಗೆ
      ತೊಡಗಲಿನ್ನೇನುಂಟು ರಾವಣನಿಗಂ||
      ಬಿಡುವಿದ್ದ ಬಡಗಿವೋಲ್ ಲಂಕೆಯೊಳೆ ಉಳಿಯದೆಲೆ
      ನಡೆ ರಾಮರಾಜ್ಯಕಿನ್ನಾದರೆನುತುಂ|
      ಬಡಿದು ತನ್ನಯ ಮನವ ಧರ್ಮಕೊಡ್ಡಿರ್ದಿರಲ್
      ಪುಡಿಪುಣ್ಯಮನ್ನಾರೆ ಪೊಂದುತಿರ್ದಂ|| 🙂
      ಇಲ್ಲಿ ನೀವು ಗಮನಿಸಬೇಕಾದ ಅಂಶಗಳೆಂದರೆ:
      ೧) ಮೊದಲ ಅಕ್ಷರ ಉದ್ದಕ್ಕೂ ಹ್ರಸ್ವವಾಗಿರುವುದು
      ೨) ಎರಡನೆಯ ಅಕ್ಷರ ಉದ್ದಕೂ ’ಡ’ಕಾರವಾಗಿರುವುದು
      ೩) ಹೆಚ್ಚಿನ ವಿವರಗಳು ವಿಡಿಯೊ ಪಾಠಗಳಲ್ಲಿವೆ

  4. ಅಲ್ಲಿ ಸಾಗರದಾಚೆ ಅ೦ತಿರ್ಪುದಿ೦ತಿರ್ಪುದೆ೦ತೆ೦ಬ ಲ೦ಕೆಯಲಿ ರಾಜನಾಗಿದ್ದ ರಾವಣನನ್ನು ಹುಡುಕಿ ಹುಟ್ಟಡಗಿಸುವುದು ರಾಮಾದಿಗಳ೦ಥವರಿಗೆ ಅದೇನೂ ಅ೦ಥ ಪ್ರಯಾಸದ ಕೆಲಸವಾಗಿರಲಿಕ್ಕಿಲ್ಲ. ಅದೇ ರಾವಣನು ನಾಡಿನ ಜನರಲ್ಲಿ ಒಬ್ಬನಾಗಿದ್ದರೆ, ಜನರ ಮನದಲ್ಲಿ ಹುದುಗಿಕೊ೦ಡಿದ್ದರೆ…

    ದೊರೆವನೇ ರಾವಣನು ಜನಜ೦ಗುಳಿಯ ನಡುವೆ
    ಪರಿಜನದ ಮಾನಸದಿ ದಶಮುಖಗಳೆರಕಹೊ-
    ಯ್ದಿರಲು ಮೇಣ್ ಜಲನಿಧಿಯ ಲ೦ಘಿಸಿರುವಾತನೇನ್ ಜನಮನವ ಭ೦ಗಿಸುವನೇ
    ದೊರೆ ರಾಮನಾಗಿರ್ದೊಡೇನಹುದು ನಾಡಿನೊಳ-
    ರರೆ ಬೇಲಿ ತಾನೆದ್ದು ಹೊಲವ ಮೆಯ್ದ೦ತಕಟ
    ದೊರೆತನವು ಸಾಕಿನ್ನು, ಕರೆಕರೆಯು ಬೇಡೆನುತ ಮಡದಿಯೊಡನಡವಿಗೈದ

    • ರಾವಣನ ಮನೋಧರ್ಮದ ಪ್ರಜೆಗಳಿದ್ದರೆ ಕಾಡೇ ಲೇಸೆಂಬ ರಾಮನ ತೀರ್ಮಾನದ ಪದ್ಯ ಚೆನ್ನಾಗಿದೆ

      • ಹೌದು. ಜೊತೆಗೆ ಮುಖ್ಯವಾಗಿ ಹೊರಗಿನ ಶತ್ರುಗಳಿಗಿ೦ತ ಒಳಗಿನ ಶತ್ರುಗಳು (ಹಾಗೆಯೆ ಅ೦ತರ೦ಗದ ಶತ್ರುಗಳು) ಹೆಚ್ಚು ಅಪಾಯಕಾರಿ ಎ೦ಬ ಸೂಚನೆ 🙂

  5. ಅರಸ ರಾಮನಯೋಧ್ಯೆಯೊಳು ತಾ
    ಮೆರೆದ ಪರಿಯಂ ಮರೆವುದೇಂ ಜಗ?
    ಪೊರೆದನಲ್ತೇ ಪ್ರಜೆಗಳ ಮುದದಿಂದೆ ತಂದೆಯೊಲು
    ಕರವ ಪಿಡಿದಳ ಕಾಡಿಗಟ್ಟುತೆ
    ವರಿಸಿ ಲೋಗರಿಗೆಂದೆ ಬಾಳಿದ
    ಹರಿಯ ರಾಜ್ಯದೊಳಿರಲು ದಶಶಿರನಲವೆ ಕಂದನೊಲು?

    • Corrrrect.
      ಒಂದೆ ಕಂದನ ಸಹಿಸೆ ಕಾಟವ-
      ನೆಂದೆನುತೆ ಗೋಳಿಡುವ ತಾಯ್ ಬಾ-|
      ರೆಂದೆನುತ್ತಲಿ ಬೇಬಿ-ಸಿಟ್ಟಿಂಗ್
      ಚಂದದಿಂ ತೋರವಳಿಗಂ|| 🙂

    • ಸಿರಿಯ ಸತಿಯ೦ ಎ೦ಬುದು ಗೊ೦ದಲಕ್ಕೀಡು ಮಾಡುತ್ತಿದೆ ಅನ್ನಿಸುತ್ತಿದೆ. ಬದಲಿಗೆ ಸಿರಿಸತಿಯ ತಾ ಕಾಡಿಗಟ್ಟುತೆ… ಎ೦ಬುದು (ಅರಿ ಸಮಾಸವಾದರೂ) ಸಹನೀಯವೇನೊ..

      • ಸರಿ,ಸವರಣೆ ಮಾಡಿದೆ, 🙂

      • ನೀಲಕಂಠ ಅವರೆ, ಸಿರಿಯ ಸತಿ ಎಂಬಲ್ಲಿ ಅರ್ಥ ಕ್ಲೇಶವೇನೂ ಆಗುವುದಿಲ್ಲ, ಅದನ್ನು ಸಾಂಧರ್ಭಿಕವಾಗಿ ನೋಡಿದಾಗ ಸರಿಯಾದ ಅರ್ಥವೇ ತೋರುತ್ತದೆ ಎನಿಸುತ್ತದೆ. ನನಗೇನೋ ಅರಿಸಮಾಸವೇ ಹೆಚ್ಚು ಘೋರವೆನಿಸುತ್ತದೆ 🙂

        • ಸಿರಿಯ ಸತಿ ಹೇಗೆ ಸರಿಯಾದ ಅರ್ಥ ಕೊಡುತ್ತದೆ? ನನಗೆ ಅದು ಸಿರಿ ಎ೦ಬಾತನ ಸತಿ ಎ೦ದತೆ ಅನಿಸುತ್ತಿದೆ 🙂

          • ನಿಮ್ಮ ಆಕ್ಷೇಪ ತಿಳಿಯಿತು :), ಅದಕ್ಕೆ ಸಾಂಧರ್ಭಿಕವಾಗಿ ನೋಡಿದಾಗ ಅರ್ಥ ತಿಳಿಯುತ್ತದೆ ಎಂದದ್ದು. ಸಿರಿಯೆಂಬುವನ ಮಡದಿಯೆನ್ನುವ ಬದಲು, ಸಿರಿಯ ಎಂಬಲ್ಲಿ ಸಂಪತ್ತಿನ, ಸಂಪತ್ತನ್ನು (ಹೊಂದಿರುವ) ಪತ್ನಿ ಎಂಬ ಅರ್ಥವು ಬರುತ್ತದೆಯಲ್ಲವೇ? ಈಗ ಮೂಲವು ಬದಲಾಗಿರುವುದರಿಂದ ಸುಲಭವಾಗಿ ನಿರ್ಣಯಿಸುವುದು ಕಷ್ಟ ನಿಮ್ಮ ಆಕ್ಷೇಪವನ್ನು ಒಂದು ಮಟ್ಟಕ್ಕೆ ಒಪ್ಪುತ್ತೇನೆಯಾದರೂ ಅರಿಸಮಾಸದ ಪರಿಹಾರವನ್ನು ಒಪ್ಪುವುದು ಕಷ್ಟ 🙂

        • ತಿರುಚಿ ಅರ್ಥ ಮಾಡುವುದಕ್ಕಿ೦ತ ಅರಿಸಮಾಸ ಒಳ್ಳೆಯದಲ್ಲವೆ? 🙂

          • ನೀಲಕಂಠರೆ :),

            ನಾನು ಸೂಚಿಸಿದ್ದರಲ್ಲಿ ತಿರುಚುವಿಕೆಯಿಲ್ಲ (ಬಹಳ ಪ್ರಾಮಾಣಿಕವಾದ ಅಭಿಪ್ರಾಯವನ್ನೇ ಹೇಳಿದ್ದೆ), ಷಷ್ಟಿ ವಿಭಕ್ತಿಯ ಸಾಮಾನ್ಯಾರ್ಥವಷ್ಟನ್ನೇ ಹೇಳಿರುವುದು.

            ಕೆಳಗಿನ (ಹಾಸ್ಯವನ್ನು ಬೆರೆಸಿದ) ಉದಾಹರಣೆಗಳಲ್ಲೂ ಯಾವ ತಿರಿಚುವಿಕೆಯಿಲ್ಲ, ಓದುಗ ಸಹೃದಯನ ಮನಸ್ಸಿನಲ್ಲಿ ಈ ಪ್ರಯೋಗಗಳು ಗೊಂದಲವನ್ನು ಮೂಡಿಸುವುದಿಲ್ಲವಷ್ಟೇ :
            1. ‘ಷಷ್ಟಿಯ ಸತಿ’ ಎಂದರೆ ಅರವತ್ತರ (ಹರಯದ) ಹೆಂಡತಿ ಎಂದು ಕೂಡ ಆಗುವುದು ಅಲ್ಲವೇ.
            2. ‘ಕರಿಯ ಸತಿ’ ಎಂದರೆ ಕಪ್ಪು ಹೆಂಡತಿ ಎಂದರ್ಥ ತಿರುಚಿದ್ದಾಗದು ಅಲ್ಲವೇ?

            ಹಳಗನ್ನಡದಲ್ಲಿ ಅರಿಸಮಾಸವನ್ನು ಪದ್ಯಪಾನತಾಣದಲ್ಲಿ ಬಳಸುವುದಿಲ್ಲ, ಇದರಬಗ್ಗೆ ಕೆಳಗಿರುವ ‘ಪ್ರಶ್ನೋತ್ತರದ ಕೊಂಡಿಯನ್ನು’ ಓದಿಕೊಳ್ಳಿರಿ 🙂
            http://padyapaana.com/?page_id=689#ari

        • 🙂 ಅರ್ಥವಾಯಿತು. ಇಷ್ಟೊ೦ದು ಉದಾಹರಣೆಗಳು ಬೇಕಿರಲಿಲ್ಲವೇನೊ… 🙂

          • ನೀಲಕಂಠರೆ, ಒಳ್ಳೆಯದು ಧನ್ಯವಾದಗಳು, ನನ್ನ ಸಮರ್ಥನೆಯಲ್ಲಿ ಕೆಲವು ಅಂಶಗಳನ್ನು ತುಂಡರಿಸಿದ್ದೇನೆ, ಗಮನಿಸಿರಿ. ಒಟ್ಟಿನಲ್ಲಿ ಸಲಹೆ/ತಿದ್ದುಪಡಿಗಳನ್ನು ನಾವೆಲ್ಲರೂ ಒಬ್ಬಬ್ಬರಿಗೂ ಮತ್ತು ಇತರ ಓದುಗರಿಗೂ ಕೊಡುವುದರ ಮೂಲಕ ಎಲ್ಲರೂ ಕಲಿಯೋಣ/ಕಲಿಸೋಣ 🙂

    • ಕಾಂಚನ ಅವರೇ, ಏನೋ ಬಿಟ್ಟು ಹೋಗಿದೆ ಕೆಳಗಿನ ಸಾಲಿನಲ್ಲಿ, ಟೈಪೋ ಎನಿಸುತ್ತದೆ, ಸವರಿಸಿರಿ
      ಪೊರೆದನಲ್ತೇ ಪ್ರಜೆಗಳ ಮುದದಿಂದೆ ತಂದೆಯೊಲು

  6. ಖಳಮೂಗಿಲಿಯಂ ಧಾನ್ಯಂ-
    ಗಳಹರವಿಂಗುಂ ಬಿಡಾರದೊಳ್ ವಿಷಜಂತುಂ-
    ಗಳಿಗಾಮಂತ್ರಣಮುಂ ಕುಡೆ-
    ಯಳಿಪದೆ ಸೈತಿರ್ಕುಮೇ? ದಶಾನನುಮಂತೇ..

    ಖಳಮೂಗಿಲಿಯಂ ಧಾನ್ಯಂಗಳ ಹರವಿಂಗುಂ, ಬಿಡಾರದೊಳ್ ವಿಷ ಜಂತುಂಗಳಿಗಾಮಂತ್ರಣಮುಂ ಕುಡೆ, ಅಳಿಪದೆ ಸೈತಿರ್ಕುಮೇ?, ದಶಾನನುಮಂತೇ..

    • ‘ದಶಾನನನುಂ ಅಂತೇ’ ಎಡವಿದೆ… ಸುರಾರಿಯುಮಂತೇ ಎಂದು ತಿದ್ದಿಸಲಿಚ್ಚಿಸುತ್ತೇನೆ

      • ಸುರಾರಿ ಎ೦ಬ ಸಾಮಾನ್ಯಾರ್ಥಕ ಪದಕ್ಕಿ೦ತ ದಶಾಸ್ಯನುಮ೦ತೇ ಎನ್ನಬಹುದಲ್ಲ..

    • ‘ವಿಷಜಂತುಂಗಳು’ ಎನ್ನುವಲ್ಲಿ ವಿಷಜಂತು ಉಕಾರಾಂತ್ಯವಾದುದರಿಂದ ಬಿಂದುವು ಅಸಾಧು, ಸವರಿಸಿರಿ. ಅಂತೆಯೇ ಖಳಮೂಗಿಲಿ ಎಂಬುದು ಅರಿಸಮಾಸವೆನಿಸುತ್ತದೆ

  7. ಕೆಡುಕಂ ಗೈವುದಕೆಂದೆ ರಾವಣನುತಾಂ ಪುಟ್ಟಿರ್ಪನೇ ರಾಮನಾ
    ಕಡೆಗಿರ್ಪೆಂದೆನುತಲ್ಲೆ ವೈರಿನಿಕರಂಗಳ್ ಸೃಷ್ಟಿಪನ್ ಮೋಸದಿಂ
    ಬಿಡು,ತಾನೇನನು ಮಾಡಲಾಗನಿವನೇ ಲಂಕಾಧಿಪಂ ಪೂರ್ವದೊಳ್
    ಕಡೆಗಾರಾಜನೆ ಸೋಲ್ತಮೇಲಿವನು ಪೇಳ್ ಸಾಮಾನ್ಯನೇನ್ ಮಾಳ್ಪನೋ

    ರಾವಣನು, ಆಯೋಧ್ಯದಲ್ಲಿ ಪ್ರಜೆಯಾಗಿ ಹುಟ್ಟಿಬಂದಾಗ, ಅಲ್ಲಿಯ ಕೆಲವರು ಹೀಗೆ ಮಾತಾಡಿಕೊಡಿರಬಹುದು..

    • ಸ್ವಲ್ಪ ಹೊಸಗನ್ನಡದ ಹಾವಳಿ ಹೆಚ್ಚಾಯಿತು; ವೃತ್ತಗಳಲ್ಲಿ ಹಳಗನ್ನಡವೇ ಹೆಚ್ಚಾಗಿ ವಿಜೃಂಭಿಸಿದರೆ ಒಳಿತು.

  8. ರಾಮರಾಜ್ಯದಲ್ಲಿ ಪ್ರಜೆಯಾಗಿರುವ ರಾವಣ ಭಾವನೆಗಳು

    ಮಂಥರೆಯ ಬಗ್ಗೆ:
    ಉಪಕೃತಿಯಂ ಗೈದಪರೆನು-
    ತೆ ಪುಡುಕೆ ಸಿಗರಯ್ ವಿವಾದಮೆಸೆಗಿಪ ಜನರ್ಗಳ್
    ಕೃಪೆಯಿಂ ನಿಯತಿಯೆ ಮಂಥರೆ-
    ಯುಪಸ್ಥಿತಹೃದಯರನೀಯೆ ಬೆರೆಯುತೆ ಗೆಲ್ವೆಂ

    ರಾಮರಾಜ್ಯದಲ್ಲಿ ಏನಾದರೂ ಕಲಹವೆಬ್ಬಿಸೋಣವೆಂದರೆ ಮಂಥರೆಯಂತಹವರು ಇಂದು ಸಿಗುತ್ತಿಲ್ಲವಲ್ಲ, ಕೆಟ್ಟ ಸ್ವಭಾವದವರನ್ನು ಪರಿಚಯಚಿಸು, ಅವರೊಡನೆ ಪಿತೂರಿ ನಡೆಸುವೆ ಎಂದು ವಿಧಿಯನ್ನು ಬೇಡುವ ರಾವಣ

    ರಾಮನ ಏಕಪತ್ನಿವ್ರತದ ಆದರ್ಶವನ್ನು ಆದರಿಸುವ ಜನರ ಬಗ್ಗೆ:
    ಏಕಪತ್ನಿಯೆನೆ ನೀರಸಭಾವಂ
    ಸಾಕೆನಲ್ ಮನದ ರಾಸಿಕಲೋಕರ್
    ಬೇಕುಬೇಕೆನಿಪ ಕಾಮನೆಯಂ ಹಾ
    ನೂಕಿಪರ್ ದಲಿದು ಶೋಷಣೆಯಲ್ತೇ

    ರಾಜನ ಏಕಪತ್ನಿವ್ರತದ ಆದರ್ಶದ ನೀರಸಭಾವನ್ನು ರಾಜ್ಯದ ಜನ ಆದರ್ಶವೆಂದು ಅನುಸರಿಸುವಂತಾಗುವುದು, ಇದು ಶೋಷಣೇಯಲ್ಲವೇ

    ಲಕ್ಷ್ಮಣ/ಭರತನ ಬಗ್ಗೆ:
    ಅಣ್ಣಂ ದೈವಮೆನುತ್ತೆ ಪಿಂತೆ ವನಕಂ ಪ್ರಾಸಾದಮಂ, ನಲ್ಮೆಯಾ
    ವೆಣ್ಣಂ ವೇಡಮೆನುತ್ತೆ ಸಾರ್ದ ಬಗೆಯಿಂ ಸೌಮಿತ್ರಿ, ಮೇಣನ್ಯನೋ
    ಕಣ್ಣಿಂದಶ್ರುಜಲಾಭಿಷಿಕ್ತಚರಣತ್ರಾಣಾನುಜಂ ಧೂಲಿಯಾ
    ಮಣ್ಣನ್ನಿಚ್ಛಿಪನಲ್ತೆ ಸೈಪದೆನುತುಂ ಮೌಢ್ಯಕ್ಕಿದುತ್ತುಂಗಮಯ್

    ಸೀತಾರಾಮರನ್ನು ನೋಡಿದಾಗ ರಾವಣನ ವಿಪರೀತ ಚಿತ್ತದ ಭಾವವಿಕಾರ:
    ‘ಧನುವಿನ ವೀರನೇಂ ಮದನನಾಟಕೆ ಸಲ್ವನೆ’ಯೆಂದು ಕೀಳ್ಮೆಯಿಂ
    ವನರುಹವಕ್ತ್ರೆ ದಕ್ಷಿಣದೊಳಿರ್ಪನನೀಕ್ಷಿಪಳಲ್ತೆ, ಪೋರ್ದಪಾ
    ಇನಕುಲಚಂದ್ರಮಂ ಕಮಲದೊಲ್ಮೆಯನಾಂಪನೆ? ತುಂಬಿಯಾನಲಾ
    ಅನುದಿನಮಾರ್ತವಂ ರಮಿಸೆ ಶಕ್ಯನದೆನ್ನುತೆ ಬೀಗಿಪಂ ಗಡಾ

    (ಸೀತೆ ತನ್ನ ಬಲಗಡೆ ನೋಡಿದಾಗ ಮೊದಲು ಕಾಣುವುದು ರಾಮನ ಧನುಸ್ಸಲ್ಲವೇ)
    ‘ಧನುವಿವ ವೀರನು ಮದನನಾಟಕೆ ಸಲ್ಲುವನೆ’ ಎಂದು ಸೀತೆಯು ಕೀಳರಿಮೆಯಿಂದ ರಾಮನನ್ನು ಭಾವಿಸುವಳು ಅಲ್ಲವೇ, ಸೂರ್ಯವಂಶಕ್ಕೆ ಚಂದ್ರನಂತಿರುವವನು ಕಮಲದ ಒಲ್ಮೆಯನ್ನು ಪಡೆಯಲು ಹೇಗೆ ತಾನೆ ಸಾಧ್ಯ? ನಾನಾದರೋ ದುಂಬಿ, ಅನುದಿನವೂ ಹೂಗಳನ್ನು ರಮಿಸಲು ಶಕ್ಯನು

    ಆರ್ತವ – ಹೂ

    ರಾವಣನ ಕನಸ್ಸಿನಲ್ಲೂ ರಾಮನ ವಿರುದ್ಧ ದಂಗೆಯ ಪಿತೂರಿ:
    ಜನ್ನಂ ನೂಂಕುತ್ತೆ ಪೊನ್ನಂ, ವಿಷಯಸುಖಮನಾರಾಧಿಪ ಸ್ವಾಂತರಿಂಗಾ-
    ನೆನ್ನಿಂ ಶಾಸ್ತೃತ್ವಮನ್ನೀ ಪುರಜನರೆದೆಯೊಳ್ ಮೂಡಿಪರ್ಗೆಂದಮಾತ್ಯಾ-
    ಚ್ಛನ್ನಂ ಮೇಣ್ ರಾಮನಂತ್ಯಂ ಗಡಮೆಸಗಿಪಗಂ ಸೇನೆಯಂ, ಮೈಥಿಲೀ ಕೇ-
    ಳಿನ್ನಾನಾಣ್ಮಂ ಮುಖಂದೋರೆನುತಲುಲಿದಪಂ ಸ್ವಪ್ನದೊಳ್ ನಿತ್ಯಧೂರ್ತಂ

    ನನ್ನ ಶಾಸ್ತೃತ್ವದ ಬಗ್ಗೆ ಜನರಲ್ಲಿ ಪ್ರಚಾರ ಮಾಡುವನೇ ನನ್ನ ಅಮಾತ್ಯ, ರಾಮನನ್ನು ಕೊಲ್ಲುವನೇ ಸೇನಾಧಿಪತಿ, ಇನ್ನು ಸೀತೆ ನಾ ನಿನ್ನ ಒಲವಿಗೆ ಪಾತ್ರನು ಮುಖತೋರು… ಎಂದೆಲ್ಲಾ ಕನಸು ಕಾಣುವ ನಿತ್ಯಧೂರ್ತನಾದ ರಾವಣ

    • “ಮಣ್ಣಂ ವಾಂಛಿಪನಲ್ತೆ (ಕಾಂಕ್ಷಿಪನಲ್ತೆ)” ಎಂದು ಸವರಿಸಬೇಕು. ಏಕೆಂದರೆ ಮಣ್ಣನ್ನಿಚ್ಛಿಪ ಎಂಬುದು ವಸ್ತುತಃ ಮಣ್ಣನಿಚ್ಛಿಪ ಎಂದು ಸಂಧಿಯಾಗುತ್ತದೆ. ಇಂತಾಗಲು ಛಂದಸ್ಸು ಕೆಡುವುದು. ಅಂತೆಯೇ ಪೋರ್ದಪಾ ಎಂಬುದೂ ಅಸಾಧು. ಅದು ಪೋಪ ಅಥವಾ ಪೋಗುವ(ವಾ) ಎಂದಾಗಬೇಕು. ಪೋಗುವಾ ಎಂಬ ರೂಪವು ಪ್ರಕೃತದ ಪದ್ಯಕ್ಕೆ ಹೂಂದುವುದು. ಉಳಿದಂತೆ ಎಲ್ಲ ಪದ್ಯಗಳೂ ಅವುಗಳ ಕಲ್ಪನೆ, ಪದಪದ್ಧತಿ, ಬಂಧನಿರ್ವಾಹ, ರಸಪೇಶಲತೆಗಳೆಲ್ಲ ಅನ್ಯಾದೃಶ; ಅತಿಸುಂದರ.

  9. ರಾವಣನೆ೦ದರೆ ಕೀಳು ಮನೋಭಾವನೆ ಮಾತ್ರ ಯಾಕೆ ? ರಾವಣನೊಬ್ಬ ನಿಷ್ಠಾವಂತ ಬ್ರಾಹ್ಮಣನಾಗಿದ್ದನಲ್ಲವೇ ?

    ಮನದಲಿ ರಾಮನ
    ನೆನೆದರೆ ದೇವೇ೦-
    ದ್ರನ ಪದವಿಯು ತುಚ್ಚವದೆಂದು I
    ಜನರೊಳು ಸಾರಿದ
    ಧನಿಕನ ಸೋದರ
    ಹನುಮನೆ ಯಾಕಾಗಿರಲಾರ? II
    ಧನಿಕ =ಕುಬೇರ
    ಸೀತೆಯ ಮನವೊಲಿಸಲು ಯಾಕೆ ನೀನು ಕಷ್ಟ ಪಡಬೇಕು ? ಮಾಯವಿಯಲ್ಲವೇ ? ರಾಮನ ರೂಪ ಧರಿಸಿ ಸೀತೆಯನ್ನು ವಶಪಡಿಸಿ ಕೊಳ್ಳಲು ಸಾಧ್ಯವಿಲ್ಲವೇ ? ಎಂದು ರಾವಣನಲ್ಲಿ ಪ್ರಶ್ನಿಸಿದಾಗ ಅವನು ಉತ್ತರಿಸುತ್ತಾನೆ -”ಅಯ್ಯೋ ! ರಾಮನ ಸ್ಮರಣೆ ಮಾತ್ರದಿಂದಲೇ ಇಂದ್ರ ಪದವಿಯೂ ತುಚ್ಛವೆಂದು ತೋರುವುದು . ಇನ್ನು ರಾಮನ ರೂಪ ಧರಿಸಿದರೆ ಅಂತಹ ಕೆಟ್ಟ ಯೋಚನೆಯೂ ನನ್ನತ್ತ ಸುಳಿಯಲಾರದು ” ಎನ್ನುತ್ತಾನೆ ಲಂಕಾಧಿಪತಿ ರಾವಣ (.ಕಥೆಯಲ್ಲಿ ) ಆದ್ದರಿಂದ ರಾಮ ರಾಜ್ಯದಲ್ಲಿ ರಾವಣ ಪ್ರಜೆಯಾದರೆ ಅವನು ರಾಮನನ್ನು ತನ್ನ ಹೃದಯದಲ್ಲಿ ಧರಿಸಿದ ಚಿರಂಜೀವಿ ಹನುಮಂತ ಯಾಕೆ ಆಗ ಬಾರದು? ಅನ್ನುವತ್ತ ಒಂದು ನೋಟ .

    • ಭಾಲರೆ ಇದೇನು ರಾವಣನನ್ನು white-wash ಮಾಡುವ ಸಾಹಸಕ್ಕೆ ಕೈಯ್ಯೊಡ್ಡಿದ್ದೀರಲ್ಲಾ! 🙂

      • ತರಲೆ ಸಮಸ್ಯೆಗೆ ತರಲೆ ಉತ್ತರ ರಾವಣ ಕೊಟ್ಟ ಉತ್ತರದಷ್ಟೇ ನಿಷ್ಠಾವಂತಳಾಗಿ ಕೊಟ್ಟಿದ್ದೇನೆ 🙂

  10. ರಾಮನ ರಾಜ್ಯದೆ ರಾವಣನಿರ್ದೊಡೆ
    ಸೋಮನ ಮೇಲಣ ಕಲೆಯಂತೆ
    ಕಾಮದಲೊರೆಯುವ ಪದ್ಯವು ಮೆರೆಯದೆ
    ನೇಮದ ಕರ್ಕಶ ಪದದಿಂದೆ

    • ರಾಮ್, ಕಾಮದಲೊರೆಯುವ ಪದ್ಯದೆ ನೇಮದ ಪದವೇ ಕರ್ಕಶವೆಂಬ ಪದ್ಯ ಬಹಳ ಚೆನ್ನಾಗಿದೆ 🙂

      • ಹೌದು ರಾಮಚಂದ್ರ ಸರ್,
        “ರಾಮನ ರಾಜ್ಯದೆ ರಾವಣನಿರ್ದೊಡೆ” –
        ಸೋಮನ ಮೇಲಣ (ಕ್ರ.ಸಂ.8) “ಕಲೆ”ಯಂತೆ !!
        ಪದ್ಯ ತುಂಬಾ ಚೆನ್ನಾಗಿದೆ.

      • _/\_ 🙂

    • ಆಹಾ! ಇದು ಅತಿಸುಂದರಪದ್ಯ; ಬಹುರಮಣೀಯಕಲ್ಪನೆ!!

  11. ಆ ರಾಮರಾಜ್ಯದೆ ಪ್ರಜೆ
    ತಾಂ ರಾವಣನಿಂತು ಪತ್ತು ಮೊಗವೆತ್ತಿದವಂ।
    ಆರೊಡೆಯನೆಂಬುದನರಿಯ-
    ದಾರೊಡನಾವ ಮೊಗದಿಂದೆ ಪತ್ತುತಲಿರ್ದಂ !?

    (ರಾಮರಾಜ್ಯದ ಪ್ರಜೆಯಾದ – “ಹತ್ತುತಲೆ” ರಾವಣನ ಬದುಕಿನ ಹೊಂದಾಣಿಕೆಯ ಸಂದಿಗ್ಧತೆಯ ಕಲ್ಪನೆ !)

  12. ರಾವಣಂ ಮೂರು ಲೋಕಂಗಳಂ ಗೆದ್ದವನ್
    ಸಾವ ಕಾಡಿರ್ದು ಕೈಲಾಸವನ್ನೆತ್ತಿಪಂ
    ಭಾವದೊಳ್ ಕಾಯದೊಳ್ ರಾಗರಾಸಂಗಳೊಳ್
    ಕೇವಲಂ ತನ್ನಸಾಮ್ರಾಜ್ಯವನ್ನಾಳುವಂ

    • ಪ್ರಶ್ನೆಯನ್ನೇ ಪ್ರಶ್ನೆಮಾಡಿದ ಪದ್ಯ ಚೆನ್ನಾಗಿದೆ

  13. ರಾವಣ ರಾಮನ ರಾಜ್ಯದಲ್ಲಿದ್ದಾಗ ಲಂಕೆಯ ಗತಿ ಹೀಗಾಗುತ್ತಿತ್ತೇ!

    ಇರದಿರೆ ರಾವಣನಾಲಂಕೆಯೊಳದ
    ರಿರುವಿಕೆಯಂ ಗಣಿಸುವರಾರು?
    ದೊರೆಯಿರದಿರೆ ಸಾಗರದೊಳ್ ಮುಳುಗುತೆ
    ಮರೆಯಾಗುವ ಸಾಧ್ಯತೆಯಿರ್ರ್ಕುಂ|

  14. ರಾವಣನಿರುತಲಯೋಧ್ಯದೆ
    ಸೇವಕನಂತೆಂದುಮಾಗನಾರಾಮನಿಗಂ|
    ಜೀವವಿರುವನಕವುಂತಾಂ
    ಪಾವಿನವೊಲ್ವಿಶವಕಕ್ಕುವಂಧೂರ್ತತೆಯಿಂ|

    • “ವಿಷಮನುಕ್ಕಿಪಂ…..” ಎಂದು ಸವರಿಸಬಹುದು.

  15. || ಪೃಥ್ವೀವೃತ್ತ ||

    ಸ್ವಯಂಭುಮಹನೀಯರಾಮನೊಲವಿಂ ಪ್ರಜಾರಾಜ್ಯಮಂ,
    ದಯಾಕರನಿರುತ್ತೆ ರಕ್ಷಿಸುತಿರಲ್ ಮಹಾನಿಷ್ಠೆಯಿಂ,|
    ಜಯಂಬಡೆಯೆ ಸತ್ಯಪಾಲನೆಯ ನೀತಿಯಿಂ ಸಂತತಂ,
    ಅಯೋಧ್ಯೆಯೊಳಗಿರ್ದ ರಾವಣನುಮಾಗನೇಂ ಸಜ್ಜನಂ ? ||

    (“ರಾಜನಂತೆಯೇ ಪ್ರಜೆಗಳು”- ಎಂಬುದನ್ನು ಆಧರಿಸಿದ ಕಲ್ಪನೆ)

    • ಮೂರನೆಯ ಪಾದಾಂತ್ಯದಲ್ಲಿ ಸಂಧಿಯಾಗಬೇಕಿತ್ತು. ಒಟ್ಟಂದದಲ್ಲಿ ಪೃಥ್ವಿಯ ನಿರ್ವಾಹ ಚೆನ್ನಾಗಿದೆ.

      • ಸಹೋದರರೆ, ಧನ್ಯವಾದಗಳು. ಪಾದಾರಂಭದಲ್ಲಿ ಸ್ವರಾಕ್ಷರವಿದ್ದಲ್ಲಿ ತಪ್ಪಿಲ್ಲವೆಂದು ಭಾವಿಸಿದ್ದೆ 🙁 ಈ ಬಗ್ಗೆ ಗೊಂದಲವಿದೆ.
        ಸವರಣೆಗೊಂಡ ಪಾದಗಳು :

        ಜಯಂಬಡೆಯೆ ಸತ್ಯದೊಳ್ ಚರಿಸಿ ಸಂತತಂ ಶ್ರದ್ಧೆಯಿಂ-
        ದಯೋಧ್ಯೆಯೊಳಗಿರ್ದ ರಾವಣನುಮಾಗನೇಂ ಸಜ್ಜನಂ ?||

  16. ರಾಮsನ ರಾಜ್ಯsದೆ ರಾವsಣನಿದ್ದಿರೆ
    ಭ್ರಾಮsಕಗೊಂಡುದದ್ಯಾಕಾ ?
    ಕಾಮsದ ಜಿಂಕಿತಾನೋಡ್ಯಾಡಿ ನಾಡಾಗ
    ಭಾಮಿsನಿಯರ ಕೊಂಡುದಾಕಾ !!

    • ಗಂಡುಗನ್ನಡದಲ್ಲಿ ಸಾಂಗತ್ಯ ಸೊಗಸಾಯ್ತು.

      • ಧನ್ಯವಾದಗಳು ಗಣೇಶ್ ಸರ್,
        ಮೊದಲು ತ್ರಿಪದಿಯಲ್ಲಿ ಪ್ರಯತ್ನಿಸಿದ್ದು . ಪ್ರಾಸಕ್ಕಾಗಿ “ರಾವಣ” – “ರಾಮಣ”ನಾಗಬೇಕಾದುದನ್ನು ತಪ್ಪಿಸಲು ಈ “ಸಾಂಗತ್ಯ” !

  17. ರಾಮರಾಜ್ಯದಲ್ಲಿ ಒಬ್ಬ ರಾವಣನು ಪ್ರಜೆಯಾಗಿದ್ದರೂ ಅದು ಸಂಪೂರ್ಣ ರಾಮರಾಜ್ಯವಾಗಿರಲು ಹೇಗೆ ಸಾಧ್ಯವಿಲ್ಲವೋ, ಅಂತೆಯೇ ಮಾನವರಲ್ಲಿ ಒಂದು ದುರ್ಗುಣವಿದ್ದರೂ ಆ ದುರ್ಗುಣವು ಅವರನ್ನು ಅಜ್ಞಾನಕ್ಕೆ ದೂಡುವುದರಿಂದ ಅವರು ಮುಕ್ತಿಯೋಗ್ಯರಾಗಲಾರರು.

    ರಾಮರಾಜ್ಯದೊಳಿರಲು ಲಂಕಾ
    ಧಾಮಪತಿಯಹುದೆಂತಯೋಧ್ಯಾ
    ಧಾಮವದು ನಿಜದಿಂ ಸುರಾಜ್ಯವು, ಪೇಳಲಸದಳವೈ!
    ಭೂಮಿಜರೊಳಿರಲೊಂದು ದುರ್ಗುಣ
    ತಾಮಸಕ್ಕೊಯ್ಯಲದು ವೊಯ್ಯನೆ
    ಕಾಮಿಸಲ್ಕಳವೇನು ಮುಕುತಿಯ ತಾವಿಳಾಭವರು ?

    • ಒಳ್ಳೆಯ ಷಟ್ಪದಿ ಮೌರ್ಯ! ಕುಶಲ ತಾನೆ? ನಿನ್ನ ಪದ್ಯಗಳನ್ನು ಕಂಡು ಯುಗಗಳಾದಂತಿದೆ. ಇದು ನಿನ್ನ ಮೊದಲ ಭಾಮಿನಿಯೇ? ಪದ್ಯಪಾನಕ್ಕೆಂದು ಹೆಚ್ಚಾಗಿ ನೀನು ವೃತ್ತಗಳನ್ನೇ ರಚಿಸಿದಂತೆ ನನ್ನ ನೆನಪು.

  18. ಇಲ್ಲ ಗುರುಗಳೇ, ಇದಕ್ಕೂ ಮುನ್ನ ಭಾಮಿನಿಗಳನ್ನು ಚಿತ್ರಪದ್ಯವೊಂದಕ್ಕೆ ರಚಿಸಿದ್ದೇನೆ. ನಾನು ಸರ್ವಥಾ ಕುಶಲ. ಆದರೆ, ಪದ್ಯಪಾನದ active participant ಆಗಿರಲು ತಡೆಹಿಡಿಯುತ್ತಿದ್ದದ್ದು shall we say, some sort of saturation due to excess of engineering studies. ಪದ್ಯಪಾನ study circleಗೆ ಬಂದಾಗ ಎಲ್ಲವನ್ನೂ ವಿಶದವಾಗಿ ತಿಳಿಸುವೆ. ತಾವು, ಪ್ರಸಾದು ಸರ್ ಮತ್ತಿತರ ಪದ್ಯಪಾನದ ದಿಗ್ಗಜರು ಕ್ಷೇಮವಷ್ಟೇ ?

    • “ನನ್ನನ್ನು ಹೈವಾನ್ ಎಂದೇ ಕರೆಯಿರಿ” ಎಂದು ನೀನೇ ಕೇಳಿಕೊಂಡದ್ದರಿಂದ ಹಾಗೆ ’ಗಜರಿ’ದ್ದೇನೆಯೇ ಹೊರತು ನಾನು ಅನ್ಯಥಾ ಧಿಕ್‍ಗಜನಲ್ಲ 🙂

Leave a Reply to ಚೀದಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)