Jan 122015
 

‘ಸೌಂದರ್ಯದುತ್ಕರ್ಷಮಯ್’ ಎಂಬ ಪಾದಾಂತ್ಯದಿಂದ ಪದ್ಯಪೂರಣವನ್ನು ಮಾಡಿರಿ.

ಪಂಚಮಾತ್ರಾಚೌಪದಿ/ಮತ್ತೇಭ/ಶಾರ್ದೂಲವಿಕ್ರೀಡಿತ ಛಂದಸ್ಸುಗಳಿಗೆ ಪಾದಾಂತ್ಯವು ಹೊಂದುತ್ತದೆ

Nov 022013
 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು :)

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙂

‘ದಿವ್ಯದೀಪಾವಲಿಶ್ರೀ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಪಂಚಮಾತ್ರಾಚೌಪದಿ, ಭುಜಂಗಪ್ರಯಾತ, ಶಾಲಿನಿ, ಮಾಲಿನಿ, ಮಂದಾಕ್ರಾಂತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ. ‘ದಿವ್ಯದೀಪಾವಲಿಶ್ರೀ:’ ಎಂದು ಸಂಸ್ಕೃತದಲ್ಲೂ ಪೂರಣಗಳನ್ನು ನೀಡಬಹುದು.

 

 

Nov 302011
 

೧೫ ದಿನಗಳಿಗೊಮ್ಮೆ ಒಂದು ಸರತಿಗೆ ೫ ಸಮಸ್ಯೆಗಳನ್ನು ಗೊಂಚಲಾಗಿ ಕೊಡುವುದೆಂದು ಮಾತನಾಡಿದ್ದೆವು. ಆ ಪ್ರಕಾರ, ಡಿಸೆಂಬರಿನ ಮೊದಲ ಪಕ್ಷಕ್ಕೆ ಸಮಸ್ಯೆಗಳು ಹೀಗಿವೆ

ಸಮಸ್ಯಾಪೂರ್ಣ ::

ಕಂದ ಪದ್ಯದ ಕೊನೆಯ ಸಾಲು ಹೀಗಿದೆ – “ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ“. ಉಳಿದ ಸಾಲುಗಳನ್ನು ಪೂರೈಸಿರಿ

ದತ್ತಪದಿ ::

walk, rock, lock, lake (ವಾಕ್, ರಾಕ್, ಲಾಕ್, ಲೇಕ್) – ಈ‌ ಪದಗಳು ಸಾಲಿಗೊಂದರಂತೆ ಬರುವಂತೆ ಪಂಚಮಾತ್ರಾ ಚೌಪದಿಯಲ್ಲಿ ಸರಸ್ವತಿಯನ್ನು ಸ್ತುತಿಸಿರಿ

ವರ್ಣನೆ ::

ಕವಿತೆಯ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ರಚಿಸಿರಿ

ಲಹರಿ ::

ಯಾವುದಾದರು ಪದ್ಯವನ್ನು ಬರೆಯಿರಿ

ಚಿತ್ರಕ್ಕೆ ಕವಿತೆ ::

ಈ ಚಿತ್ರಕ್ಕೆ ಸೂಕ್ತ ಪದ್ಯ ಬರೆಯಿರಿ – ಛಂದಸ್ಸು ನಿಮ್ಮ ಆಯ್ಕೆ

 

Oct 252011
 

ದೀಪಾವಳಿಯ ಕಾರಣ ಕೆಲವಾದರೂ ಹಬ್ಬದ ಬಗೆಗಿನ ಪದ್ಯಗಳಿರಲೆಂದು ಅಪೇಕ್ಷೆ. ಈ ನೆವದಲ್ಲಿ  ಹೊಸ ಛಂದಸ್ಸುಗಳ ಅಥವಾ ವಿವಿಧಚ್ಛಂದಸ್ಸುಗಳ ಬಳಕೆಯಾಗಲೆಂಬ ಬಯಕೆಯೂ ಇದೆ. ಮೊದಲ ಹೆಜ್ಜೆಯಾಗಿ ನನ್ನ ಒಂದೆರೆಡು ಪದ್ಯಗಳು:

ದ್ರುತವಿಲಂಬಿತವೃತ್ತ||

ನರಕದಾನವಕಾಲದವಾನಲ-
ಕ್ಕುರುವಿನೀಲಪಯೋಧರವಾಗುತುಂ |
ಮೆರೆದ ಕೃಷ್ಣನ ಕಂಗಳ ಮಂಗಳ-
ಸ್ಫುರಣದೀಪಿಕೆಗಳ್  ಶುಭಕೊಪ್ಪುಗುಂ ||

ರಥೋದ್ಧತಾವೃತ್ತ||

ದೇವಗಂಗೆ ಧವಳಧ್ವಜೋಪಮಂ
ತೀವಿರಲ್ ನಭದೆ ವಾಮನಾಂಘ್ರಿಯೊಳ್
ಜೀವಿಗಳ್ಗೆ ಸುಖಶಾಂತಿಯೀವವೊಲ್
ಭಾವಿಕಂ ಗಡಿದು ಪರ್ಬಮೊಪ್ಪುಗುಂ||

ಕಂದ||

ಕತ್ತಲೆಸುತ್ತುಂ ಜಗಮಿದು
ಕತ್ತಲೆ ಸುತ್ತುಂ ಕಡಂಗಿದುದೆನುತ್ತುಂ ಬೇ-
ಸತ್ತಿರೆ ಸಂಪದನಳಿಸುತೆ,
ಸತ್ತಿರೆ ಸಂಪದಮದಂ ಬರ್ದುಂಕಿಪುದೊಳಿತಯ್||

(ಕತ್ತನ್ನು ಅಲೆಸುತ್ತ ಈ ಜಗತ್ತಿನ ಸುತ್ತಲೂ ಕತ್ತಲೆಯೇ ನೆಲಸಿದೆಯೆಂದು ಬೇಸತ್ತಿರುವ  ( ಮನಸ್ಸಿನ) ಸಂಪನ್ನು (strike/bundh) ಅಳಿಸಿ ಸತ್ತಿರುವ ಸಂಪದವನ್ನು ಬದುಕಿಸುವ ಬಗೆಯೇ ಸರಿ.)
ಇದು ಒಂದು ರೀತಿಯ ಚಿತ್ರಕವಿತೆ. ಇದಕ್ಕೆ ಯಮಕಾಲಂಕಾರವೆಂದು ಹೆಸರು.   ಪದಗಳು ಪುನರುಕ್ತವಾದಂತೆ ತೋರಿದರೂ ಅರ್ಥ ಬೇರೆಯೇ ಆಗಿರುವುದು ಇದರ ಚಮತ್ಕಾರ. ಇವೆಲ್ಲ ರಸಪ್ರಧಾನವಲ್ಲ. ಬರಿಯ ಕಸರತ್ತಿನ ಸಂಗತಿಗಳು. ಇಲ್ಲಿ ಸುಮ್ಮನೆ ಕಂದವನ್ನು ಸ್ವಲ್ಪ ಕಗ್ಗಂಟಾಗಿಸೋಣವೆಂದು ಸ್ವಲ್ಪ ಯತ್ನಿಸಿದ್ದೇನಷ್ಟೆ. ದೀಪಾವಳಿಯ ಪಟಾಕಿ ಗಲಾಟೆಯಂತೆಯೇ ಇದೂ ಹೆಚ್ಚು ಸಹನೀಯವಲ್ಲ:-

ಚೌಪದಿ||

ಸಾಲು ದೀಪಗಳಾಗಿ ಭರವಸೆಯ ತಾಳಗಳು
ಕಾಲ ಕುಣಿಸುತ್ತಿರಲು ಭಾವರಾಗ
ಮಾಲೆಯೊಡವರಿದು ಜಯಶೀಲೆ ಸಿರಿ ಬರುವಂತೆ
ಜಾಲಿಸಲಿ ನಿಮ್ಮ ಮನಗಳನು ಬೇಗ||

ಭಾಮಿನೀಷಟ್ಪದಿ||

ಶಾರದಾಂಬರದಲ್ಲಿಯೇ ಹಿಂ-
ಗಾರುಮಳೆ, ಕಾರಿರುಳಿನಲ್ಲಿಯೆ
ತೋರುವೀ ಸಿರಿಯೊಸಗೆ, ಸದ್ದಿನ ದಿನದೊಳೇ ಮೌನ|
ಸಾರಲೀ ಸಂದೇಶವನು ಮೆಯ್-
ದೋರಲೀ  ಸಂಭಾವನೆಯನಭಿ-
ಸಾರಲೀಲಾಲಾಸ್ಯವಾಡಲಿ ಕಾವ್ಯವಧು ನಿಮ್ಮೊಳ್||

Oct 042011
 

ಈ ದ್ರಕಾರವಿದೇನು? ಈ ಸಮಸ್ಯೆಯದೇನು?
ಕ್ಷುದ್ರವೋ ರಸಯುತವೊ ತಿಳಿಯದಾಯ್ತು
ಅದ್ರಿಜೆಯೆ ಸಾಕ್ಷಿ ನಾ ಪೂರಣವಗೈದಿಲ್ಲ
“ಭದ್ರಕಾಳಿಯು ಬೆದರಿ ಮಾಯವಾದಳ್”

Oct 012011
 

ಹುಲ್ಲುಕಲ್ಲುಗಳೇನು? ಅದುಕೂಡ ಹೂರಣದಿ!
ಗುಲ್ಲನೆಬ್ಬಿಸದೆಯೇ ಬಿಡುವರೇನು?
ಬಲ್ಲಿದರೆ, ಸೊಲ್ಲನಡಗಿಸುವಿರೇ? – “ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು”

ಸ್ನೇಹಿತರೆ, ೩ನೆಯ ಸಾಲನ್ನೂ ಸ್ವಲ್ಪ ತಿಂದಿದ್ದೇನೆ. ೩ನೇ ಸಾಲು “ಹೂರಣದಿ” ಮುಗಿವಂತೆ, ೪ನೇ ಸಾಲು “ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಎಂಬುದಾಗಿ ಬರುವಂತೆ ಪರಿಹರಿಸಿ.

Sep 292011
 

ಅನುರೂಪದಾ ಪಂಚಮಾತ್ರೆಗಳ ಚೌಪದಿಯ –
ಲನುಭಾವದಿಂದೀ ಸಮಸ್ಯೆ ಬಿಡಿಸಿ |
ತನುವಿಶೇಷದೊಳಿರುವುದಶ್ಲೀಲತೆಯೆ ಭಾಸ

“ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ||

ಇದು ಸದ್ಯದಲ್ಲಿ ನಡೆದ ಅಷ್ಟಾವಧಾನದಲ್ಲಿ ಕೊಟ್ಟ ಸಮ್ಮಸ್ಯೆ.. ಅಶ್ಲೀಲದಂತೆ ತೋರುವ ಮೇಲಿನ ಸಾಲಿನ (ಕೊನೆಯ ಸಾಲು) ಹಿಂದಿನ ೩ ಸಾಲುಗಳನ್ನು ಪೂರೈಸಿರಿ.

ಪದ್ಯ ಓದುವ ಧಾಟಿ

Sep 142011
 

ಇದು ಗಣೇಶ ರವರು ಕೊಟ್ಟ ಸಮಸ್ಯೆ

ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್”!!

ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ