ಶ್ರೀ ರಾ. ಗಣೇಶರ ಈಚಿನ ಶತಾವಧಾನದಲ್ಲಿ ಪೃಚ್ಛಕರಾದ ಶ್ರೀಮತಿ ಶ್ರೀಲಲಿತಾ ರೂಪನಗುಡಿಯವರು ನೀಡಿದ ದತ್ತಪದಿಯಿದು: ವಿವಿಧ ಭಾಷೆಗಳಲ್ಲಿ ’ಮಳೆ’ಯ ಸಮಾನಾರ್ಥಕ ಪದಗಳಾದ ವಾನ (Telugu), ಅಮೆ (Japanese), ಯಾಮೂರ್ (Turkish), ರಿಯನ್ (Afrikaans)ಗಳನ್ನು ಬಳಸಿ ಬರಗಾಲವರ್ಣನೆ ಮಾಡಿ. ಛಂದೋವೈವಿಧ್ಯವಿರಲಿ.
ಶತಾವಧಾನಿ ಗಣೇಶರು ಈ ವಾರದ ಪದ್ಯರಚನೆಯ ಬಗ್ಗೆ ಕೆಳಕಂಡಂತೆ ಸೂಚನೆಗಳನ್ನು ಕೊಟ್ಟಿದ್ದಾರೆ, ಗಮನಿಸಿರಿ ಮತ್ತು ಎಂದಿನಂತೆ ಉತ್ಸಾಹದಿಂದ ಭಾಗವಹಿಸಿರಿ.
ಸಂಭಾಷಣೆಯು ಗದ್ಯದ ಗುತ್ತಿಗೆಯೇ ಆದರೂ ಪದ್ಯದಲ್ಲಿ ಕೂಡ ಅದು ಆಗೀಗ ಸುಳಿಯುವುದುಂಟು. ಅಭಿಜಾತ(classical)ಕವಿತೆಯಲ್ಲಿ ಸಂಭಾಷಣಾತ್ಮಕತೆಯು ದಿಟವಾಗಿ ಕವಿಗೆ ಸವಾಲು. ಏಕೆಂದರೆ ಛಂದಸ್ಸಿನ ಕಟ್ಟು, ವ್ಯಾಕರಣದ ನಿಟ್ಟು, ಪ್ರಾಸಾದಿಗಳ ಪೆಟ್ಟು (:-) ಮುಂತಾದುವೆಲ್ಲ ಕವಿಯನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದರೂ ಇಂಥ ಸಾಧನೆಯನ್ನು ಮಾಡಿದಾಗಲಲ್ಲವೇ ಸಿದ್ಧಿಯ ಹಿಗ್ಗು; ವೆಗ್ಗಳಗಳು!
ಆದುದರಿಂದಲೇ ಪದ್ಯಪಾನದ ಈ ಸಂಚಿಕೆಯಲ್ಲಿ ಪದ್ಯಪಾನಿಗಳಿಗೆಲ್ಲ ಸಂಭಾಷಣಪದ್ಯವನ್ನು ರಚಿಸುವ ಸಂದರ್ಭ ಬಂದಿದೆ. ಸಂಭಾಷಣಪದ್ಯರಚನೆಗೆ ಚೆನ್ನಾಗಿ ಒಗ್ಗಿಬರುವಂಥ ಸುಲಭವೂ ವ್ಯಾಪಕವೂ ಆದ ಛಂದಸ್ಸುಗಳು ಹಲವಾರು. ಮುಖ್ಯವಾಗಿ ಸೀಸಪದ್ಯ, ಭಾಮಿನೀ-ವಾರ್ಧಕಷಟ್ಪದಿಗಳು, ಚೌಪದಿ, ಕಂದ, ಸಾಂಗತ್ಯ, ಅನುಷ್ಟುಪ್ ಶ್ಲೋಕ, ಶಾರ್ದೂಲ-ಮತ್ತೇಭವಿಕ್ರೀಡಿತಗಳು, ಚಂಪಕ-ಉತ್ಪಲಮಾಲೆಗಳು, ರಗಳೆ ಮುಂತಾದುವನ್ನು ಹೆಸರಿಸಬಹುದು. ದೊಡ್ಡ ಸಂವಾದಗಳಿಗೆ ದೊಡ್ಡ ಛಂದಸ್ಸುಗಳೂ ಚಿಕ್ಕವಕ್ಕೆ ಚಿಕ್ಕವೂ ಸಹಜವಾಗಿ ಒದಗಿಬರುತ್ತವೆ. ಮಾದರಿಯಾಗಿ ಕೆಲವೊಂದು ಪದ್ಯಗಳಿಲ್ಲಿವೆ: ೧. ರಾಘವಾಂಕನ ಹರಿಶ್ಚಂದ್ರಕಾವ್ಯದಿಂದ ಆಯ್ದ ವಿಶ್ವಾಮಿತ್ರ-ಹರಿಶ್ಚಂದ್ರರ ಸಂವಾದಸಂದರ್ಭದ ಒಂದು ಪದ್ಯ.(ಇಲ್ಲಿ ಸಂವಾದವನ್ನು ಎತ್ತಿ ತೋರಿಸಲು ಸಂಧಿಯನ್ನು ಬಿಡಿಸಲಾಗಿದೆ. ಎಲ್ಲೆಡೆ ಸಂಧಿಯನ್ನು ಮಾಡಿಕೊಂಡರೆ ಇಡಿಯ ಪದ್ಯವು ಛಂದೋಧಾಟಿಯಲ್ಲಿ ಸಾಗುವುದು)
’ನಡೆ ರಥವನೇರಿಕೊಳ್’ ’ಒಲ್ಲೆನ್’ ಏಕೊಲ್ಲೆ?’ ’ಪರ-
ರೊಡವೆಯೆನಗಾಗದು’ ’ಏಕಾಗದು?’ ’ಆನಿತ್ತೆನ್’ ’ಇ-
ತ್ತಡೆ?’ ‘ಕೊಳಲು ಬಾರದು’ ‘ಏಂ ಕಾರಣಂ?’ ’ಬಾರದೆಮಗಂ ಪ್ರತಿಗ್ರಹ ಸಲ್ಲದು’ |
’ಕಡೆಗೆ ನಿನ್ನೊಡವೆಯಲ್ಲವೆ?’ ’ಅಲ್ಲವು’ ಏಕಲ್ಲ?’
ಕೊಡದ ಮುನ್ನೆನ್ನೊಡವೆ ಕೊಟ್ಟ ಬಳಿಕೆನಗೆಲ್ಲಿ
ಒಡವೆ?’ ಎಂದರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು || (VIII-೬೬)
೨.ನನ್ನ ಅವಧಾನವೊಂರಲ್ಲಿ ಅಪ್ರಸ್ತುತಪ್ರಸಂಗಿಗಳ ಹಾಗೂ ನನ್ನ ನಡುವೆ ಸಾಗಿದ ಸಂವಾದಪದ್ಯ.
’ಮರೆವಾಯ್ತೇ ಅವಧಾನಿ?’ ’ನಿಮ್ಮ ಸಿರಿಯಾ ಸತ್ತ್ವಂ’ ’ಅದೇಂ ದೇಶಮೋ?’
ಒರೆದೆಂ ಕಾಲಮನಾಂ’ ’ಚಮತ್ಕೃತಿಯಿದೇಂ?’ ’ಸರ್ವಾವಧಾನೋಚಿತಂ’ |
’ಸರಿ’ ’ಎತ್ತಲ್?’ ’ಮುಗುಳೆತ್ತಲಾನುಂ’ ’ಅರರೇ! ನೀಂ ಮಾಳ್ಪಿರೇಂ ಕಬ್ಬಮಂ?’
’ಕೊರೆಯೇನೆನ್ನೊಳ್?’ ’ಅದೇಕೆ, ನೀಂ ಕೊರೆದಿರಲ್ ಬೆಚ್ಚಿರ್ಪುವಾ ಕಾಗೆಗಳ್ !!’
೩.ಗಂಡ-ಹೆಂಡಿರ ಸಂವಾದವೊಂದನ್ನು ಎಸ್.ವಿ. ಪರಮೇಶ್ವರಭಟ್ಟರು ಹೀಗೆ ಅಂತ್ಯಪ್ರಾಸಮಾತ್ರದ ಸಾಂಗತ್ಯದಲ್ಲಿ ಕಂಡರಿಸಿದ್ದಾರೆ:
’ಜ್ಯೋತಿಷಿಯೆಂದನು ಬಡತನವಿಹುದಂತೆ
ನನಗೆ ನಲ್ವತ್ತರ ವರೆಗೆ’ |
’ಆಮೇಲೆ?’ ’ಆ ಮೇಲೆ ಒಗ್ಗಿಹೋಗುವುದಂತೆ
ಬಡತನದೊಳೆ ಬಾಳ್ವುದೆಮಗೆ’ ||
ಕಂದ ಪದ್ಯದ ಸಮಸ್ಯೆಯ ಸಾಲು ಹೀಗಿದೆ :: ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ [ಮೂಗಿಲಿ ಎಂದರೆ ಚಿಕ್ಕ ಗಾತ್ರದ ಉದ್ದ ಮೂತಿಯ ಇಲಿಯೆಂದು ಅರ್ಥ]
ಪದ್ಯದ ಉಳಿದ ಸಾಲುಗಳನ್ನು ರಚಿಸಿ, ಈ ಸಮಸ್ಯೆಯನ್ನು ಸರಿಪಡಿಸಿರಿ.
‘ಬಾಲ್ಯಮೇ ಬಾಳ ಭಾಗ್ಯಂ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಶಾಲಿನಿ, ಮಾಲಿನಿ, ಮಂದಾಕ್ರಾಂತ ಹಾಗೂ ಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ.
ಪ್ರಿಯ ಮಿತ್ರರೆ,
ಪದ್ಯಪಾನದಲ್ಲಿ, ಹೊಸತಾಗಿ, ಅಲಂಕಾರದ ಮೇಲೆ ವಿಡಿಯೋ ಪಾಠಗಳನ್ನು [ಪದ್ಯ ವಿದ್ಯೆಯ ಅಡಿಯಲ್ಲಿ] ಸೇರಿಸಲಾಗಿದೆ. ಇದನ್ನು ಪರಿಶೀಲಿಸಿ, ಕಲಿತು, ನಮ್ಮ ಪದ್ಯಗಳನ್ನು ಅಲಂಕರಿಸಬಹುದು. ಈ ನಿಟ್ಟಿನಲ್ಲಿ, ಈ ವಾರದ ವಿಷಯ :: ರೂಪಕಾಲಂಕಾರದೊಡನೆ ಬಡತನದ ವರ್ಣನೆ. ಸಂಸ್ಕೃತ ಪದ್ಯಗಳೂ ಬರಲಿ.
ಇನ್ನು ನಿಮ್ಮ ಪದ್ಯಗಳ ನಿರೀಕ್ಷೆ 🙂
Dear friends,
In padyapaana, new video lessons on alankaara have been added. Let us try and compose poems with alankaara. To start with, this weeks exercise is to describe Poverty using ruupaka alankaara.
We are in anticipation of your poems 🙂
ಈ ಕೆಳಗಿನ ಚಿತ್ರಕ್ಕೆ ನಿಮ್ಮ ಪದ್ಯಗಳನ್ನು ರಚಿಸಿರಿ. ಉತ್ತರಖಂಡದಲ್ಲಾದ ಪ್ರವಾಹದ ಹಿನ್ನೆಲೆಯಲ್ಲಿ ವಿಸ್ತರಿಸಲೂ ಬಹುದು. ಛಂದಸ್ಸು ನಿಮ್ಮ ಆಯ್ಕೆ.
Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲಿ ರಚಿಸಿರಿ.
ಈ ಬಾರಿ ಸಾಮೂಹಿಕ ಕಥಾರಚನೆಯ ವಿಷಯವನ್ನು ಮಹಾಭಾರತದಿಂದ ಆಯ್ದುಕೊಳ್ಳಲಾಗಿದೆ :: “ದ್ಯೂತ ಕ್ರೀಡೆಯಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭ“. ಯುಧಿಷ್ಠಿರ ದ್ರೌಪದಿಯನ್ನು ಪಣವಾಗಿರಿಸಿದಲ್ಲಿಂದ ಮೊದಲ್ಗೊಂಡು, ವಸ್ತ್ರಾಪಹರಣವನ್ನೊಳಗೊಂಡು, ಕೃಷ್ಣ ನೀಡುವ ಅಕ್ಷಯಾಂಬರದ ವರೆಗೆ ವರ್ಣಿಸೋಣ.
ಪಾಂಡವರ ನಿಸ್ಸಹಾಯಕತೆ, ಶಕುನಿಯ ಕಪಟ, ಕೌರವರ ದುರಹಂಕಾರ, ದುರ್ನಡತೆ, ರಾಜಸಭೆಯಲ್ಲಿನ ಹಿರಿಯರ ನಿರ್ವೀರ್ಯತೆ, ದ್ರೌಪದಿಯ ಸಂಕಟ, ಕೃಷ್ಣನಲ್ಲಿ ತೋಡಿಕೊಳ್ಳುವ ಅಳಲು, ಕೃಷ್ಣನ ಕಾರುಣ್ಯ – ಎಲ್ಲವನ್ನೂ ತೆಗೆದುಕೊಳ್ಳಬಹುದು.
೨ ವಾರಗಳ ಕಾಲ ಈ ಸಪ್ತಾಹ ನಡೆಯಲಿ [:-)]. ಕಥೆಯನ್ನು, ವರ್ಣನೆಗಳನ್ನು, ಭಾವಗಳನ್ನು ಸವಧಾನದಿಂದ, ವಿಸ್ತಾರವಾಗಿ ನಡೆಸಲು ಪ್ರಯತ್ನಿಸೋಣ.
ಎಂದಿನಂತೆ ಛಂದಸ್ಸು ನಿಮ್ಮ ಆಯ್ಕೆ.
[ಚಿತ್ರದ ಕೃಪೆ – dollsofindia.com]
ಭಾಮಿನಿ ಷಟ್ಪದಿಯ, ಕೊನೆಯ ಸಾಲಿನ ಎರಡನೆ ಭಾಗ ಇಂತಿದೆ :: ‘ಮಳೆಯು ಮುದವಾಯ್ತು‘.
ಇಡಿಯ ಪದ್ಯವನ್ನು ನಿಮ್ಮ ಕಲ್ಪನೆಯಂತೆ ಪೂರಣಿಸಿರಿ.
ಈ ಕೆಳಗಿನ ಚಿತ್ರದಿಂದ ನಿಮ್ಮಲ್ಲಿ ಉದ್ದೀಪನಗೊಳ್ಳುವ ಭಾವನೆಗಳಿಗೆ ಪದ್ಯಗಳ ರೂಪ ನೀಡಿ ಇಲ್ಲಿ ಪ್ರಕಟಿಸಿರಿ. ಛಂದಸ್ಸು ನಿಮ್ಮ ಆಯ್ಕೆ
ಚಿತ್ರದ ಕೃಪೆ – ಅಂತರ್ಜಾಲ
ಗರ,ದರ,ಸರ,ಕರ ಈ ಪದಗಳನ್ನು ಉಪಯೋಗಿಸಿ ಸಮುದ್ರ ಮಥನವನ್ನು ಕುರಿತು ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ
(ಶ್ರೀ ಕೃಷ್ಣರಾಜ ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)
ಈ ಬಾರಿಯ ಸಾಮೂಹಿಕ ಕಥಾರಚನೆಯ ವಿಷಯ :: “ರಾಮ, ಲಕ್ಷ್ಮಣ ಹಾಗೂ ಸೀತೆಯರು ವನವಾಸಕ್ಕೆಂದು ಅಯೋಧ್ಯೆಯಿಂದ ತೆರಳಿದ್ದು“. ವನವಾಸಕ್ಕೆ ತೆರಳುವುದೇ ಹೌದೆಂದು ರಾಮ ನಿರ್ಧಾರ ಮಾಡಿದ್ದಾನೆ ಎಂಬಲ್ಲಿಂದ ತೆಗೆದುಕೊಂಡು, ಅಯೋಧ್ಯೆಯನ್ನು ದಾಟುವ ವರೆವಿಗು ಕಥೆಯನ್ನು ತೆಗೆದುಕೊಂಡೊಯ್ಯೋಣ.
ಈ ಕಥೆಯಲ್ಲಿ, ಲಕ್ಷ್ಮಣ ಹಾಗೂ ಸೀತೆಯರು ತಾವೂ ಬರಬೇಕೆಂದು ಹಠ ಮಾಡಿದ್ದು, ಅವರನ್ನು ನಿರಾಕರಿಸುವುದಕ್ಕೆ ರಾಮ ಮಾಡಿದ ಪ್ರಯತ್ನ, ಹೋಗಬೇಡ ಎಂದು ಕೆಲವರು ದುಂಬಾಲು ಬಿದ್ದದ್ದು, ಅಯೋಧ್ಯೆಯ ಪ್ರಜೆಗಳು ಹಿಂಬಾಲಿಸಿದ್ದು, ಎಲ್ಲವನ್ನು ವಿಷಯಕ್ಕೆಂದು ತೆಗೆದುಕೊಳ್ಳಬಹುದು.
ಎಂದಿನಂತೆ, ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ. ಯಾವ. ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು.
[ಈ ವಿಷಯಕ್ಕೆ ಸಾಮೂಹಿಕವಾಗಿ ನ್ಯಾಯ ಒದಗಿಸಬೇಕೆಂದರೆ, ೨ ವಾರಗಳಷ್ಟಾದರೂ ಬೇಕಾದೀತು – ಆದುದರಿಂದ ಈ ಕಂತಿಗೆ ಪದ್ಯ ಸಪ್ತಾಹದ ಬದಲು ಪದ್ಯ ಪಕ್ಷ ಎಂದಾದರೂ ಹೇಳಬಹುದು. ಕಥೆ ಹೇಗೆ ಬೆಳೆಯುತ್ತದೆ ಎಂದು ನೋಡೋಣ.]