Jan 042014
 

ಕಾಲಿರದೊಡಮೋಡುತಿರ್ಕುಮೀ ತರುವೃಂದಂ

  172 Responses to “ಪದ್ಯಸಪ್ತಾಹ ೯೩: ಸಮಸ್ಯಾಪೂರಣ”

 1. ಸಾಲೊಳ್ ಸರಿಯಲ್ ಪಚ್ಚೆಯ
  ಜಾಲಂ,ಬಲ್ವಂದ ಮೇಣ್ ಬೆರಗಿನಿಂ ಕವಿಯಾ
  ವ್ಯಾಲಕುಲವಬಣ್ಣಿಸಿದಂ
  “ಕಾಲಿರದೊಡಮೋಡುತಿರ್ಕುಮೀ ತರುವೃಂದಂ”

  (ಹಸಿರು ಬಣ್ಣದ ಹಾವಿನ ಗುಂಪನ್ನು ಕವಿ ಹೀಗೆ ವರ್ಣಿಸಿದನು)

 2. ಪಾಲಕನೊರಗಿರೆ ಚಣಮುಂ
  ಬಾಲೆಗೆ ಮೀಸೆಯ ಸೊಗಂ ವಿಲಾಸಿಯ ತಪಮುಂ
  ಕೋಲೂರಿರೆ ನದಿಚಿತ್ತಂ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

  • ಅರ್ಥವಾಗಲಿಲ್ಲ:-(

  • ಗಣೇಶರೇ,
   ಜಗತ್ಪಾಲಕ ಒಂದರೆಕ್ಷಣ ಒರಗಿದರೂ, ಏನೇನೋ ಆಗತ್ತೆ ಎನ್ನುವ ಪ್ರಯತ್ನ. ’ಕೋಲೂರಿರೆ ನದಿಚಿತ್ತಂ’ ಇಲ್ಲೂ ಅನ್ವಯ ಕಷ್ಟವೇ. ಯಾವಾಗಲೂ ಚಲಿಸುವ ನದಿ ಕೋಲೂರಿ ನಿಂತಿದೆ ಎಂಬುದಾಗಿ ಪ್ರಯತ್ನಿಸಿದ್ದು. ಒಟ್ಟಿನಲ್ಲಿ ಪದ್ಯ ಜಗತ್ಪಾಲಕನಿಗೇ ಪ್ರಿಯವಾಗಿದೆ. 🙂

 3. ಜಾಲಸಡಿಲ್ಚಿಸಿ ಜಸತಾಂ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ
  ಕಾಲಗೆ ಸಾಕ್ಷಿಯೆನಲ್ ಬಲು
  ಚಾಲಾಕಿತನದೆ ಕುವೇಣಿಯಿಂ ನುಸುಳಿತ್ತೇಂ ?

  ಜಸ – ಮೀನು

  ಜಾಲಸಡಿಲ್ಚಿಸಿ ಜಸತಾಂ ಕಾಲಿರದೊಡಮೋಡುತಿರ್ಕುಂ.
  ಈ ತರುವೃಂದಂ ಕಾಲಗೆ ಸಾಕ್ಷಿಯೆನಲ್, ಬಲು ಚಾಲಾಕಿತನದೆ ಜಸತಾಂ ಕುವೇಣಿಯಿಂ ನುಸುಳಿತ್ತೇಂ ?

  • ಸಡಲ್ಚಿಸಿ ಎಂಬುದು ಅಸಾಧುರೂಪ. ದಯಮಾಡಿ ಸವರಿಸಿಕೂಳ್ಳಿರಿ. ಅಂತೆಯೇ ಉಳಿದ ಪದಶುದ್ಧಿಯ ಬಗೆಗೂ ಹೆಚ್ಚಿನ ಗಮನವನ್ನು ದಯಮಾಡಿ ನೀಡಿರಿ:-)

 4. ಶಾಲೆಯ ಶಿಕ್ಷಣ ಯಾನ೦
  ಬಾಲರು ಮೊದಲಿದುಗಿ ಬಂಡಿಯೊಳ್ ನಡೆಸಲ್ ತಾವ್
  ತೇಲುತೆ ಮೋದದಿವೊರೆದರ್
  ”ಕಾಲಿರದೊಡಮೋಡುತಿರ್ಕುಮೀ ತರುವೃಂದ೦”II

  ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲಿ ಅವರು ರೈಲಿನಲ್ಲಿ ಮಾಡಿದ ಮೊದಲ ಪ್ರಯಾಣದ ಅನುಭವವನ್ನು ವರ್ಣಿಸಿದ ಪರಿ

  • ಆಹಾ! ಎಂಥ ಸುಂದರಕಲ್ಪನೆ!! ಭಾಷೆ ಮಾತ್ರ ಮತ್ತಷ್ಟು ಸುಧಾರಿಸಬೇಕು:-)

 5. ತೈಲಶಕಟ ಯಾನದ ಜವ
  ದಾಲೋಕಿಸಲಿರ್ಕಡೆಯೊಳು ಸರಿಸಮದೆಸೆದುಂ
  ಸಾಲೊಳ್ಬೆಂಗಡೆ ಸಾಗಿವೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 6. ಶೈಲಾಗ್ರವಿಹಾರದಿಮನ
  ಮಾಲೋಕಿಸೆ ಮೇಘಪಂಕ್ತಿ ತರುಸಂತತಿಯಂ
  ಪೋಲಿತ್ತೆನೆ ಮೆಲಮೆಲ್ಲನೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 7. ಮೂಲಂ ನೆಟ್ಟಿರೆ ನೆಲದೊಳ್
  ಕಾಲನ ಕಣ್ಗೆಟುಕದಂತೆ ಕವಲೊಡೆದೆದ್ದುಂ
  ಮೇಲೇರ್ದಿದೆಸಾಧನೆಯೆನೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 8. ಬಾಲಕರೆಲ್ಲರ್ ಮುದದಿಂ
  ಶಾಲೆಯೊಳಾಚಾರ್ಯರೆಂದೊಡಂ ಚಿತ್ರಿಸಲಾ
  ಬಾಲಕನೊರ್ವನ ಚಿತ್ರದೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ||

  • ಕೊಪ್ಪಲತೋಟಾ! ನಿನ್ನಯ
   ಸಪ್ಪೆಯೆನಿಸದಿರ್ಪ ಪೂರಣಂ ಸವಿಯೂಪ್ಪಯ್ !!

 9. ಆಲೋಚನೆಯಾಡುಂಬೊಲ
  ಜಾಲಿಸೆ ವೃತ್ತಿಗಳ ಬೀಜಮೊಳೆದೇಳ್ದುಮರಂ
  ಸಾಲೊಳ್ ಸುಳಿದಡಗುತ್ತಿರೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 10. ಮೂಲಸಮೇತಂ ತರುಗಳ
  ನಾಲಯದೊಂದೆಡೆ ಪುನಃಪ್ರತಿಷ್ಠಿಪ ಯತ್ನಂ
  ಸಾಲಂಕೃತದಿಂಸಾಗಲು
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 11. ಖೇಲಂ ಭ್ರಷ್ಟರಿಗನಿಶಂ
  ಸಾಲೊಳ್ ಸವರುತ್ತ ತರುವ ಸಾಗಿಪ ಚೌರ್ಯಂ
  ಭೂಲಕ್ಷಣಭಕ್ಷಣದೊಳ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 12. ಕಾಲನಚಿತ್ರದಪರಿ! ನಿ-
  ರ್ಮೂಲಿಸಿ ಭೂಶೋಭೆಯಂ ಮಹಾಗೃಹತತಿಯಂ
  ಮೇಲೇರಿಸೆ ನಭಸೀಳಲ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 13. ಲೀಲಾತ್ಮಂ ಭಾಮೇಚ್ಛಾ
  ಪಾಲನೆಗಂ ಪಾರಿಜಾತ ತರುವಂತರಲಾ
  ಲೀಲೋದ್ಯಾನಮೆ ನಡೆದಿರೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 14. ವಾಲಿಯಗೆಲೆ ರಾಮಂ ಬಲ
  ಶಾಲಿಯೆ ತಾಂ? ಸಪ್ತತಾಳ ಭಂಜನ ದಕ್ಷಂ?
  ಲೀಲೆಯಿನೂಂದೇಬಾಣಂ!
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 15. ಸಾಲ ರಸಾಲಂ ಚಂದನ
  ಮೂಲೋತ್ಪಾಟಿಮಹೋ ವಿದೇಶಕ್ಕಾಗಳ್
  ಮಾಲಾಸ್ತಂಭಗಳೇಂಗಡ!
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

  • ಸೋಮಶೇಖರನಿನ್ನೆವರಮಿಂತು ಪೂರಣೋ-
   ದ್ದಾಮನೆನಿಸಿರ್ದನೀ ಚಂದ್ರಮೌಳಿ |
   ಧೀಮಂತಿಕೆಯೊಳಿಂತು ಪೂರಯ್ಸೆ ಯುಕ್ತಮಲ!
   ನಾಮಸಾಮ್ಯಂ ಕೂಡಮೊಪ್ಪುತಿರ್ಕುಂ 🙂

  • ಓಹೊಹೋ

 16. ಬಾಲಕನೊರೆವಂ, ” ವೇಗದೆ
  ಚಾಲನೆಗೊಂಡಿರ್ಪ ಬಂಡಿಯೊಳಗೀ ಕಾಡೊಳ್ |
  ಸೋಲುತೆ,ಮನದೊಳ್ ಭ್ರಮಿಪೆನ್-
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ” ||

  • ಭಾಲ, ಚಂದ್ರಮೌಳಿ ಮತ್ತು ನೀವು ಕೂಡ ಸ್ವತಂತ್ರವಾಗಿ ಈ ಕಲ್ಪನೆಯನ್ನೇ ಮಾಡಿರುವುದು ಚಮತ್ಕಾರಕವಾಗಿದೆ.ಅಭಿನಂದನೆಗಳು.

   • ಪ್ರೋತ್ಸಾಹಿಸಿರುವುದಕ್ಕೆ ಧನ್ಯವಾದ.

 17. ಗಾಲಿಯುರುಳೆ, ಹಿಮ್ಮುಖ ತಾವ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ |
  ಲೀಲೆಯದುಂ ಕಂಡಿಹುದೈ
  ಕಾಲನಕಡೆಗೋಡುತಿರ್ಕುವೊಲು ಮನುವೃಂದಂ ||

  (ಗಾಡಿಯಲ್ಲಿ ಪ್ರಯಾಣದ ವೇಳೆ ಹಿಂದೆ ಹಿಂದೆ ಓಡುತ್ತಿರುವಂತೆ ಕಾಣುವ (ಕಾಲಿಲ್ಲದ) ಗಿಡಮರಗಳು – ಬದುಕಿನ ಪ್ರಯಾಣದಲ್ಲಿ ಸಾವಿನ ಕಡೆಗೆ (ಮತ್ತೆ ಹಿಂದಕ್ಕೆ) ಓಡುತ್ತಿರುವ ಮಾನವರಂತೆ ಕಂಡ ಕಲ್ಪನೆಯಲ್ಲಿ )

  • ಭಾಲಾದಿಗಳ ಸಾಲಿಗೆ ನೀವೂ ಸೇರಿದಿರಿ! 🙂

   • ನಿಜ ಗಣೇಶ್ ಸರ್, ನಾವೆಲ್ಲ ಒಂದೇ ಬಂಡಿಯ (ಕಿಟಕಿಯ ಪಕ್ಕದ!) ಪ್ರಯಾಣಿಕರಲ್ಲವೇ?

 18. ಚಾಲಿಸಿ ಯಂತ್ರಮಂ ಚಕಚಕ ಕಡಿಯುತ್ತೆ
  ರೈಲಿಂದೆ ಸಾಗಿಪರ್ ಕಾನಂ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ
  ಹಾ! ಲಾಗಿಂಗ್ (logging) ಪರಿಯನೇವೇಳ್ವೆಂ!

 19. ಕಾಲಜಲದಮಂ ತಂದುಂ,
  ಧೂಳೇಳಿಸುತೆಲೆಯಸುಳಿಯನೊಯ್ದೆಲರೇಗಳ್
  ಭೂಲೋಗರೆಂದರ್ಬೆರಗಿಂ
  “ಕಾಲಿರದೊಡಮೋಡುತಿರ್ಕುಮೀ ತರುವೃಂದಂ”

  • ಸ್ವಲ್ಪ ಭಾಷಾಶುದ್ಧಿ ಬೇಕಾದೀತು. ಮುಖತಃ ತಿಳಿಸುವೆ.

   • ಆಗಲಿ ಸರ್. ಧನ್ಯವಾದಗಳು.
    ಗಣೇಶರ ಸಲಹೆಯಂತೆ ತಿದ್ದಿರುವೆ.

 20. ಭೂಲೋಲಂ ಮೆಕ್ಬೆತ್ತಿಗೆ
  ಕಾಲಂ ಬಂದನೆನೆ ತಿಳಿಯೆ ಕಾನನದೊಳಹಾ
  ಚಾಲಿಸೆ ಪಗೆವರ ಸೈನ್ಯಂ
  ಕಾಲಿರದೊಡಮೋಡುತಿರ್ಕುಮೀ ತರುಬೃಂದಂ

  • ನಿಮ್ಮದು ಸೊಗಸಾದ ಪರಿಹಾರವೆಂದರೆ ನನ್ನನ್ನೇ ಹೊಗಳಿಕೊಂಡಂತಾದೀತು:-) ಏಕೆಂದರೆ ನನ್ನ ಮೊದಲ ಶತಾವಧಾನದಲ್ಲಿ ಇದೇ ರೀತಿ ಸಂಸ್ಕೃತಸಮಸ್ಯೆಯೊಂದನ್ನು ಪೂರಯಿಸಿದ್ದೆ. ಅದರ ಅನುವಾದವನ್ನೇ ಇಲ್ಲಿ ನೀಡಿದ್ದು. ನನ್ನ ಮೂಲಪದ್ಯವಿಂತಿದೆ:

   ಮ್ಯಾಕ್ಬೆತ್ ನಾಮ್ನಿ ಖ್ಯಾತೇ
   ಮಹೋನ್ನತೇ ರೂಪಕೇ ತು ಚರಮಾಂಕೇ |
   ಬರ್ನಂ ಕಾನನಸಂಸ್ಥಾಃ
   ಪದರಹಿತಾಃ ಪಾದಪಾಸ್ತು ಧಾವಂತಿ ||
   Great men think alike ಎಂದು ಹೇಳಿ ಮತ್ತೂ ನಮ್ಮನ್ನು ಹೊಗಳಿಕೊಳ್ಳಲೇ?:-)

 21. ತೇಲುತಲಿರಲಾಗಸದೊಳ್
  ಕಾಲದಮಿತಿಯಿಂದಮೇಘಗಳ್ ಚಲಿಸಲ್ ಹಿಂ|
  ಬಾಲಿಸೆ ಮೂಡಿದ ದೃಷ್ಯದೆ
  ಕಾಲಿರದೊಡಮೋಡುತಿರ್ಕುಮೀತರುವೃಂದಂ|

  • ಪ್ರಿಯ ಚೀದಿ,

   ಹಲವರು ನೆಲದ ಮೇಲೆ ವಾಹನದ ಪ್ರಯಾಣದಲ್ಲಿ ಮರಗಳು ಧಾವಿಸುವುದನ್ನು ಆಯ್ದುಕೊಂಡರೆ ನೀನು ಆಕಾಶಕ್ಕೆ ಹಾರಿದ್ದೀಯೆ! 🙂

   • ಧನ್ಯವಾದಗಳು.. ಏನು ಮಾಡಲಿ ಸಾರ್.. ತಡವಾಗಿ ಬಂದ ಕಾರಣ lower berth ಸಿಗಲಿಲ್ಲ.

 22. ಇಂದಿನ ಹಲವಾರು urban working ಕುಟುಂಬಗಳ ಕಥೆ – ವ್ಯಥೆಯಿದು. ಕಾಲವು ಇವರನ್ನು ಓಡಿಸುವ ಬದಲು ಇವರೇ ಕಾಲವನ್ನು ಗಾಲಿಯ ಹಾಗೆ ಓಡಿಸುವರು. ವಾಣಿವಿಹೀನರಾಗಿ ಒಬ್ಬರೊಡನೊಬ್ಬರು ಮಾತನಾಡದೆ ಅಕ್ಷರಶಃ ಮರಗಳಂತಿರುವ ಇವರು ತಮ್ಮ bossಅನ್ನು ಮೆಚ್ಚಿಸಲು ಯಾವುದೇ special call (ಕರೆ) ಇಲ್ಲದಿದ್ದರೂ extra dutyಯನ್ನು ಮಾಡಲು officeಗೆ ಓಡಲು ಮುಂದಾಗುವರು ಎಂಬುದು ಇಲ್ಲಿನ ತಾತ್ಪರ್ಯ.

  ಕಾಲಮನೋಡಿಸುತಿಪ್ಪರ್
  ಗಾಲಿಯ ತೆಱದಿಂದೆ ವಾಣಿಹೀನರುಮಿಂತಿಂ
  ತೋಲಗಿಸಲ್ಕಾ ಪ್ರಭುವಂ (boss)
  ಕಾಲ್ (call) ಇರದೊಡಮೋಡುತಿರ್ಕುಮೀ ತರುವೃಂದಂ

  • ನವಕಲ್ಪನೆಯಂ ಮಾಡಿದ
   ಯುವಕಾ! ಮೌರ್ಯ! ತ್ವದೀಯಪೂರಣವಿಧಿಗಂ|
   ಕವನದ ಭಾಷಾನಿಧಿಗಂ
   ಸವಿಯಿಂ ತಲೆದೂಗಿ ಬಾಗಿ ಭಾಪೆಂಬೆನಹಾ!!

 23. ವೈಲಕ್ಷಣ್ಯವು ಕಾಣಿದು
  ವಾಲಧಿಯೊಡಹಾರುತಿರ್ಕುಮೀ ಹನುಮಂತಂ |
  ಮೂಲಿಕೆಯಿಹ ಗಿರಿ ಹೊತ್ತಿರೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

  (ಸಂಜೀವನಿ ಪರ್ವತಹೊತ್ತು ಹಾರುತ್ತಿರುವ ಹನುಮನ ದಿವ್ಯ ಸ್ಮರಣೆಯಲ್ಲಿ )

 24. ಕಾಲುಳ್ಳೊಡೆಯುಂ ಮನುಜರ್
  ಸೋಲುತ್ತೆ ನಡೆದಿರೆ,ಸೋಜಿಗಮೆಲಾ ತಿಳಿಯಲ್, |
  ಚಾಲಾಕಿನ ಮಾತಿಂತೆನೆ,
  “ಕಾಲಿರದೊಡಮೋಡುತಿರ್ಕುಮೀ ತರುವೃಂದಂ” ||

 25. ಶಾಲೆಯ ಮೇಲ್ಮಹಡಿಯಗ್ರಂ (ಇದು ಸಾಧುವೇ)
  ಥಾಲಯದೊಳ್ ಚಂದಮಾಮದಾಕಥೆಯೊಳಗಂ
  ಬಾಲಕ ನೋಡಿಪ ಚಿತ್ರದೆ
  ಕಾಲಿರದೊಡಮೋಡುತಿರ್ಕುಮೀತರುವೃಂದಂ

  • ಶಿಥಿಲದ್ವಿತ್ವವಾಗಿ ಸಾಧು

  • ಪ್ರಸಾದು ಹೇಳಿದಂತೆ ಇದು ಸಾಧು. ಆದರೆ “ಬಾಲಕ” ಎಂಬುದನ್ನು “ಬಾಲಂ” ಎಂದಾಗಿಸಿದರೆ ಹಳಗನ್ನಡದ ಹದ ಮತ್ತೂ ಹೆಚ್ಚೀತು

 26. ಗೆಲುವಿಂ ಕ್ರಿಸ್ಮಸ್ ಹಬ್ಬಕೆ
  ಬೆಲೆತೆತ್ತು ಮರಗಳ ಗಾಡಿಗಳೊಳಗೆ ಜನಗಳ್ |
  ಸಾಲಲಿ ತರುತಿರೆ ನೋಡಾ,
  ಕಾಲಿರದೊಡಮೋಡುತಿರ್ಕುಮೀತರುವೃಂದಂ ||

  • ಕೇಸರಿ! ನಿಮ್ಮಯ ಕಲ್ಪನೆ-
   ಗೇ ಸರಿ ಸರಿ ನೀವೆ ನೀವೆ!! ಓಸರಿಸುವುದೇಂ?
   ಕೇಸರಿಯ ಪ್ರಾಸಕೆ ಗಜ-
   ವೇ ಸರಿ? ಸರಿಯಾಗದಾಯ್ತಿದೊಂದೇ ಅಂಶಂ 🙂

 27. ಮಾಲಿನಿಯುಟ್ಟಿಹ ಸೀರೆಯ
  ಮೇಲಿರೆ ರಮಣೀಯ ಮರದ ಸಾಸಿರ ಚಿತ್ರಂ |
  ವಾಲಾಡುತೆ ಸಾಗಿರೆ ಕಾಣ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

  • ಅತ್ಯುತ್ತಮಪರಿಹಾರಂ
   ಸ್ತುತ್ಯಂ ಸರ್ವಾತ್ಮನಾ ಭವತ್ಕಲ್ಪನೆಯುಂ|

   ಆದರೆ ಒಂದೆರಡು ಅರಿಸಮಾಸಗಳು ಪರಿಹರಣೀಯ:
   “……..ರಮಣೀಯತರುಸಹಸ್ರದ ಚಿತ್ರಂ” ಹೀಗೆ.
   “ವಾಲಾಡುತ” ಎಂಬುದು ಗ್ರಾಮ್ಯಪ್ರಯೋಗ. ಅದನ್ನು “ಲೀಲೆಯಿನಿದೊ ನಡೆದಿರೆ ಕಾಣ್” ಎಂದು ಸವರಿಸಬಹುದು.

   • ಮಾಲಿನಿಯುಟ್ಟಿಹ ಸೀರೆಯ
    ಮೇಲಿರೆ ರಮಣೀಯತರುಸಹಸ್ರದ ಚಿತ್ರಂ |
    ಲೀಲೆಯಿನಿದೊ ನಡೆದಿರೆ ಕಾಣ್
    ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

    ಧನ್ಯವಾದಗಳು ಗಣೇಶ್ ಸರ್, ಈಗ ಸರಿಯಾಯಿತು ನೀರೆಯ ಸೀರೆಯ ನಿರಿಗೆಯೂ / ಅವಳ ನಡಿಗೆಯೂ / ಕಂದನೂ !!

 28. ತೇಲುತಿರಲ್ ಜಲಯಾನದೆ,
  ಬೇಲಿಮರದಪಡಿನೆಳಲ್ಡೆರೆಯೊಡಂ ನಲುಗಲ್,
  ಬಾಲೆಯನುಜೆಗೆಂಬಳದೋ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ
  (ತೆರೆ =ಅಲೆ(ಚಿಕ್ಕವು))
  ಬೇಲಿ ಮರ= ತೀರದಲ್ಲಿರುವ ಮರ

 29. ಶಾಲೆಯೊಳಾಟದ ಕೂಟದೆ
  ಚೀಲದೆ ಬಿಗಿದಿರ್ದೊಡಂ ಕಿಶೋರರ ಪದಮಂ|
  ಸೋಲೆವೆನುತ್ತಲಿ ಜಿಗಿಯುತೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಮ್||
  (ತರು=ವೇಗ. ತರುವೃಂದ=ವೇಗವಾಗಿ ಓಡುತ್ತಿರುವ ಸ್ಪರ್ಧಿಗಳು)

 30. ಲೋಲುಪ ರಾವಣನೊಯ್ಯೆ ಸು
  ಶೀಲೆಯ ಕಾಣ್, ರಾಮ-ರಾಮನೆನಲಾರ್ತತೆಯಿಂ ।
  ಕಾಲೋಚಿತಮೆಂದೆನುತಾವ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ।।

  ( ಸೀತಾಪಹರಣದ ಸಂದರ್ಭದಲ್ಲಿ, ಸೀತೆ ರಾಮ-ರಾಮನೆಂದು ಕರೆದದ್ದು ತಮ್ಮನ್ನೆಂದು(ಮರಾ-ಮರಾ ಎಂದು), ತರುಗಳು ಓಡಿದವು ಎಂಬ ಕಲ್ಪನೆಯಲ್ಲಿ – ಕಲ್ಪನೆಯನ್ನು ಅರ್ಥಪೂರ್ಣವಾಗಿ ಪದ್ಯದಲ್ಲಿ ತರಲಾಗಲಿಲ್ಲ )

  • Nice imagination. Justification of running is missing though.

  • ಕಾಲೋಚಿತಮೆಂದೆನುತಾವ್=ಕಾಲೋಚಿತಮೆಂದೆನುತ+ಆವ್ (ನಾವು) ಎಂದಾಗುತ್ತದೆ. ಕಾಲೋಚಿತಮೆಂದೆನು ತಾವ್ ಎಂದು ಬಿಡಿಸುವುದೂ ಸರಿಯಾಗದು. ಹೀಗೊಂದು ಸವರಣೆ:
   ಲೋಲುಪ ರಾವಣನೊಯ್ದಿರೆ,
   ಶೀಲೆಯು ಚೀರಿರಲು ‘ರಾಮ-ರಾಮ’ನೆನುತ್ತುಂ।
   ಶಾಲಗಳಾಲಿಸಿ ‘ಮರಮರ’ (ಶಾಲ=ಶಾಲವೃಕ್ಷ)
   ಕಾಲಿರದೊಡಮೋಡುತಿರ್ಕುಮೀ ತರುವೃಂದಂ।।

  • ಧನ್ಯವಾದಗಳು ಶ್ರೀಕಾಂತ್ ಸರ್, ಪ್ರಸಾದ್ ಸರ್
   ಸರಿಪಡಿಸಿಕೊಳ್ಳುತ್ತೇನೆ.

   • ಲೋಲುಪ ರಾವಣನೊಯ್ಯೆ ಸು
    ಶೀಲೆಯ ಕಾಣ್, ರಾಮ-ರಾಮನೆನಲಾರ್ತತೆಯಿಂ ।
    ಆಲಿಸಿ “ಮರ-ಮರ” ವೆಂದುದ
    ಕಾಲಿರದೊಡಮೋಡುತಿರ್ಕುಮೀ ತರುವೃಂದಂ ।।

    ಈ ರೀತಿ ತಿದ್ದಿದರೆ ಸರಿಯಾದೀತೆ?

 31. ಪಾಲಿಸು ವನಸಂಕುಲವಂ
  ಬಾಲಮುಕುಂದ ತುರುಗಾಹಿ ಸುರಿ ಬಲ್ಸರಿಯಿಂ
  ಮೂಲಂಗಳ್ವೆರಸಿ ಭರದೆ
  ಕಾಲಿರದೊಡಮೂಡುತಿರ್ಕುಮೀ ತರು ವೃಂದಂ

  ಪ್ರಚಂಡ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಗೋವರ್ಧನಧಾರಿಯನ್ನು ಪ್ರಾರ್ಥಿಸುತ್ತಿರುವ, ಬೇರು ಸಹಿತ ಪ್ರವಾಹದ ಹೊನಲಿನಲ್ಲಿ ಕೊಚ್ಚಿ ಹೋಗುತ್ತಿರುವ ವನ ಸಂಕುಲ…

 32. ಓಲಾಡೆ ಗೋಡೆಯೊಳ್, ಶ್ರೀ-
  ಫಾಲಾಕ್ಷಂ, ಪಟದ ತರುಸಮೂಹದೆ, ಮುದದಿಂ- |
  ದಾಲೋಕಿಪೆನಿಂತು ಬಗೆದು-
  “ಕಾಲಿರದೊಡಮೋಡುತಿರ್ಕುಮೀ ತರುವೃಂದಂ” ||

  (ಫಾಲಾಕ್ಷನು ತರುಸಮೂಹದಲ್ಲಿರುವ ಪಟವು ಗೋಡೆಯಲ್ಲಿ ಓಲಾಡಿದಾಗ….)

  • ಆಹಾ! ಎಂಥ ನವೀನಕಲ್ಪನೆ!! ನಿಮ್ಮ ಪದ್ಯರಚನಾಪಾಕವು ಈಚೀಚೆಗೆ ತುಂಬ ಪಳಗಿ ಹದವಾಗಿದೆ; ಧನ್ಯವಾದ

   • ಗುರುಗಳೆ, ನಿಮ್ಮ ಹಾಗೂ ಸಹಪದ್ಯಪಾನಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ನಾನು ಕೆಲವು ಪದ್ಯಗಳನ್ನು ರಚಿಸುತ್ತಿರುವುದು, ಒಳ್ಳೆಯ ವಿಚಾರ.ನಿಮ್ಮೀ ನೆರವಿಗೆ ತುಂಬ ಧನ್ಯವಾದಗಳು.

  • In light vein:
   ತರು-ತುರುಗಳೊಂದಿಗನು ಫಾಲಾಕ್ಷನಾದಾನೆ,
   ಕರಗದಾ ಹಿಮದೆ ವಾಸವಿರುವಾತನ್?
   ಒರುವ ತಾನಿವನಲ್ತೆ ಗೋವಳನು ಕಾನನದೆ
   ಮೆರೆದ ಕೊಳಲನ್ನೂದಿ ಮರಗಳಡಿಯೊಳ್||

   • ಚಳಿಯೆಂದು ಹಿಮದಿಂ ಶಿವಂ ಪೋಗಿ ತರುಗಳೆಡೆ-
    ಯೊಳಿರೆ,ಸಂಶಯಮೇಕೆ? ಸರಿಯೆಲ್ಲಮುಂ ! 🙂

    ದೇವನೊಬ್ಬ,ನಾಮ ಹಲವು ಹಾಗೂ ದೇವನು ಸರ್ವವ್ಯಾಪಕನೆಂಬಂಶಗಳಿಂದಾಗಿ ,ನಾಮದ ಕುರಿತು ಚಿಂತಿಸಲಿಲ್ಲ.
    ಪದ್ಯವನ್ನು ಹೀಗೂ ಸವರಬಹುದು.

    ಓಲಾಡೆ ಗೋಡೆಯೊಳ್,ಗೋ
    ಪಾಲಕನಾ ಪಟದ ತರುಸಮೂಹದೆ, ಮುದದಿಂ- |
    ದಾಲೋಕಿಪೆನಿಂತು ಬಗೆದು-
    “ಕಾಲಿರದೊಡಮೋಡುತಿರ್ಕುಮೀ ತರುವೃಂದಂ” ||

   • ಸತಿಯಳನು ಹಿಮದ ಶೀತಲದಲ್ಲಿಯೇ ತೊರೆದು
    ಪತಿ ಬೆಚ್ಚನೆಯ ನಾಡಿಗೈದಿರುವುದಂ|
    ನುತಿಸಿರ್ಪಿರೇಂ ಮಾತೆ! ಸಿಗಲೆಲ್ಲ ಪುರುಷರ್ಗೆ
    ಮತಿಸಿರಿಯು ನಿಮ್ಮವೋಲಿಂಗಿತಜ್ಞಳ್|| 🙂

    • ಶಿವನರ್ಧದೇಹದೊಳ್ ಶಿವೆಯನೊಳಗೊಂಡಿರ್ಪ-
     ನವನವಳನೆಲ್ಲಿಯುಂ ಬಿಡನೆಂದಿಗುಂ |
     ಭವನಿಗಿರೆ ಗಿರಿಜೆಯೊಳ್ ಗೌರವಾದರಮೆಲ್ಲ-
     ಮವನನಾಂ ನುತಿಪೆನನುದಿನ ಭಕ್ತಿಯಿಂ || 🙂

 33. ನೀಲಾಕಾಶದೆ ಮೀಂಗಳ್
  ಪಾಲೋಗರಮೆನುತಲರಚೆ ಸಿಂಗಂ ನಿದ್ರಾ
  ಜಾಲದೆ ಕಾಣಲ್ ಸ್ವಪ್ನದೆ
  ಕಾಲಿರದೊಡಮೋಡುತಿರ್ಕುಮೀ ತರು ವೃಂದಂ

  ಸ್ವಪ್ನದ ಪೂರಣ

 34. ಎಲ್ಲರ ಪದ್ಯಗಳನ್ನು ನೋಡಿ ತಲೆಯಲ್ಲಿ ಈ ವೃಕ್ಷಗಳಬಗ್ಗೆ ಚಿಂತಿಸಿದಾಗ

  ದೋಲಾಯಮಾನಪದ್ಯಂ
  ಸಾಲೊಂದನೊರೆಯೆ ದೃಮಂಗಳಂ ಬಣ್ಣಿಸಲಾ
  ಜಾಲಿಪ ಜಗಣದೆ ಮನದೊಳ್
  ಕಾಲಿರದೊಡಮೋಡುತಿರ್ಕುಮೀ ತರು ವೃಂದಂ

 35. ವ್ಯಾಲರ ಕೈತವಮಯ್ ಬಹು
  ಕಾಲದೆ ಸಸ್ಯಂಗಳಂ ವಪನವಿಕ್ರಮದೊಳ್
  ಪಾಲಕರನುತ್ಸುಕತೆಯಿಂ
  ಕಾಲಿರದೊಡಮೋಡುತಿರ್ಕುಮೀ ತರು ವೃಂದಂ

  ರಾಜಕಾರಣಿಗಳು ಅದೇ ಜಾಗದಲ್ಲಿ ಪ್ರತೀ ವರ್ಷ ಗಿಡನೆಡುತ್ತಾರಲ್ಲ…

  • 🙂 meaningful humour

  • ಸಸ್ಯಂಗಳಂ ವಪನಮಂ = ಸಸ್ಯಗಳನ್ನು ವಪನವನ್ನು ಎಂದಾಗುತ್ತದಲ್ಲವೆ? ಅಥವಾ ಸಸ್ಯಂಗಳಂ = ‘ಸಸ್ಯಗಳ’ ಎಂದೂ ಆಗುತ್ತದೆಯೆ?
   ಸಸ್ಯವಪನ/ಸಸ್ಯಾವಾಪ ಎಂದು ಸಮಾಸಮಾಡಿದರೆ ಚೆನ್ನಾಗಿರುತ್ತದೆ.

   • ಪ್ರಸಾದು, ಹೌದು ಎಡವಿದೆ ಎರೆಡು ತೃತೀಯಾ ಆಗಿಬಿಟ್ಟಿದೆ :), ಸರಿಪಡಿಸಿದ್ದೇನೆ

 36. ತೇಲಿಪ ವೃಕ್ಷದ್ವೀಪದ
  ಕೇಲಿಯ ವೀಕ್ಷಣದೆ ಬೆರ್ಚಿ ಕವಿತಾನೊರೆದಂ
  ಲೀಲೆಯಿದೇಂ ಗಡ ನೀರೊಳ್
  ಕಾಲಿರದೊಡಮೋಡುತಿರ್ಕುಮೀ ತರು ವೃಂದಂ

  floating island in sea

  • ಪ್ರಿಯ ಸೋಮ,

   ನಿನ್ನ ಎಲ್ಲ ಪದ್ಯಗಳೂ ಸೊಗಸಾಗಿವೆ.ವಿಶೇಷತಃ ಜಗಣ ಮತ್ತು ತೇಲುವ ದ್ವೀಪಗಳ ಕಲ್ಪನೆ ಆಕರ್ಷಕವಾಗಿದೆ.

 37. ಬಾಲಂ ಗೋಪಾಲಂ ತಾನ್
  ನಾಲ್ವೆರಳೊಳ್ನುಡಿಸೆ ವೇಣು, ತುರುವೃಂದಕೆನಲ್ |
  ಲೇಲೆಯ ಕಾಣಾಲಿಸೆ ತಾವ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ।।

  • ಎರಡನೆಯ ಪಾದದಲ್ಲಿ ಪ್ರಾಸ ಕೆಟ್ಟಿದೆಯಲ್ಲ

   • ಧನ್ಯವಾದಗಳು ಶ್ರೀಕಾಂತ್ ಸರ್,
    ಗಜದ ಎರಡನೇ ಪಾದ ಶರಭದ್ದಾಗಿದೆಯಲ್ಲವೇ !

    ಬಾಲಂ ಗೋಕುಲದೊಳ್ ಗೋ-
    ಪಾಲಂ ತಾಂ ನುಡಿಸೆ ವೇಣು, ತುರುವೃಂದಕದುಂ |
    ಲೇಲೆಯ ಕಾಣಾಲಿಸೆ ತಾವ್
    ಕಾಲಿರದೊಡಮೋಡುತಿರ್ಕುಮೀ ತರುವೃಂದಂ ।।

   • ಗಜ ಶರಭಗಳ ಮಾತಲ್ಲ- ಪ್ರಾಸಾಕ್ಷರ ತಪ್ಪಿತ್ತು. ಈಗ ಸರಿಯಾಗಿದೆ. “ತುರುಬೃಂದ” ಅರಿಸಮಾಸ. ಬದಲಾಯಿಸಿ

    • ಶ್ರೀಕಾಂತ್ ಸರ್, “ತುರುಬೃಂದ” / “ತರುವೃಂದ” ಸರಿಯಲ್ಲವೆ? ಅಥವ ಸರಿಪಡಿಸುವ ಬಗೆ ಹೇಗೆ? ದಯವಿಟ್ಟು ತಿಳಿಸಿಕೊಡಿ.

 38. ಒಂದು ಬೀಜದಿಂದ ಎಷ್ಟು ತೆರನಾದ ಮರಗಳು ಮೊಳೆಯುತ್ತವೆ! ಒಂದು ಸಮಸ್ಯೆಗೆ ನಾನಾ ವಿಧದ ಪೂರಣಗಳು. ಎಲ್ಲವೂ ಸೊಗಸು.

  • ಮಾತ್ರಮೊಂದಿರುತೆ ಬೀಜ, ಪಲವಿರಲ್ ಸಸ್ಯಮೆನ್ನಲೇಂ ನೀಂ
   ಕ್ಷೇತ್ರಮಹಿಮೆ ತಾನಲ್ತೆ ಮೂರ್ತಿ ಇದು ಸೋಜಿಗಂ ಗಡೇನೈ||

  • ತಾಳದ ಮೇಳದೆ ಪದ್ಯಂ
   ನಾಲ್ ಪಾದದೊಳೋಡುತಿರ್ಕುಮೀ ತುರುವೃಂದಂ ।।
   ಲೋಲದ ಕಲ್ಪನೆ ಸಾಧ್ಯಂ
   ಕಾಲಿರದೊಡಮೋಡುತಿರ್ಕುಮೀ ತರುವೃಂದಂ ।।
   ಅಲ್ಲವೆ?
   (ಪದ್ಯ ರಚನೆಯಲ್ಲಿ : “ಶಬ್ದ-ಅರ್ಥ” (ನಾಲ್ಕು ಕಾಲಿನ)ತುರುಗಳ ಓಟದಂತೆ , “ಭಾವ” (ಕಾಲಿಲ್ಲದ)ತರುಗಳ ಓಟದಂತೆ – ಎಂಬ ಕಲ್ಪನೆಯ ಪದ್ಯ)

   • ಆಧುನಿಕ ಗಣಿತಮಿದೆ ನೋಡಲ-
    ಬಾಧದಿಂದೆರಡನ್ನು ನಾಲ್ಕೆಂ (೧ ಶಬ್ದ + ೧ ಅರ್ಥ = ೪ ಕಾಲು)
    ದಾಧರಿಸದೆಲೆ ಪೇಳ್ಗುಮೇಂ ನೀಂ
    ಸಾಧುವೊಂದದು ಶೂನ್ಯಮೇಂ|| (೧ ಭಾವ = ೦ ಕಾಲು) 😉

 39. ಗಾಲಿಗಳೊಳಪೋದೊಡೆಯೇ
  ಮೇಲೇರಿರ್ದಪ ವಿಮಾನದಿಂದಿಣುಕಲ್ಕಾ
  ಜಾಲದೆ ಕಲ್ಪಿತ ಮನೊದೊಳ್
  ಕಾಲಿರದೊಡಮೋಡುತಿರ್ಕುಮೀತರು ವೃಂದಂ

  During flight take off when we see outside the window it appears to be the Trees are running…

 40. ಆನೆ ನುಗ್ಗಿದ್ದೇs ಹಾದಿ ಎಂಬ ಮಾತೊಂದಿದೆ. ಕಾಡಿನಲ್ಲಿ ಬೇಟೆಯ ನೆವದಿಂದ ಕಿರಾತರು ಆನೆಯನ್ನು ಓಡಿಸಿಕೊಣ್ಡು ಬರುವಾಗ ಅದರ ಕಾಲಿಗೆ ಸಿಕ್ಕ ಗಿಡಗಂಟಿಗಳು ಅದರ ಜೊತೆಯಲ್ಲಿಯೇ ಓಡಿದವು ಎಂಬ ಭಾವಾರ್ಥ.

  ಕೇಲಿಯ ನೆವದೊಳ್ ವ್ಯಾದರ್
  ವ್ಯಾಲಂಗಳನೋಡಿಸುತಿರೆ ಕಟ್ಟಡವಿಗಳಿಂ
  ಕಾಲಿಗೆ ತೊಡರ್ಚಿ ಕಾಡೊಳ್
  ಕಾಲಿರದೊಡಮೂಡುತಿರ್ಕುಮೀ ತರು ವೃಂದಂ

  ವ್ಯಾಲ : ಮದಿಸಿದ ಆನೆ

 41. ಕೋಲೂರ್ತೇರಂ ಪಚ್ಚೆಯ
  ನೂಲಪತಾಕೆಗಳುಸಿಂಗರಿಸಿರಲ್, ತೋರ್ಗುಂ
  ಚಾಲಿತ ರಥಮಿಂತೆನಗಂ-
  “ಕಾಲಿರದಲೋಡುತಿರ್ಕುಮೀ ತರು,ವೃಂದಂ!”

  (ಜಾತ್ರೆಯ ನೆನಪಿನಲ್ಲಿ)

 42. ಬಾಲಂ ಬೊಂಬೆಯೊಳಾಡುತ
  ಲಾಲಘುಮರದಿಂದಮಾಣ್ಪ ಮರಮಂ ತನ್ನಾ
  ಕಾಲಿಗೆ ಕಟ್ಟೆಳೆಯುತಿರಲ್
  ಕಾಲಿರದೊಡಮೋಡುತಿರ್ಕುಮೀತರು ವೃಂದಂ

 43. ಶೈಲಪ್ರಾಂತದೆ ಗುಲ್ಮೋ
  ನ್ಮೂಲನಗೈದದರ ಪಿಂತಡಗಿ ಮುಂಕೊಳ್ಳಲ್|
  ಸೋಲರ್ಭಟರಾಹವದೊಳ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ||
  (ಶೈಲಪ್ರಾಂತದೆ-Presumption that war is underway at the foot of mountains. ಗುಲ್ಮ–Bush. ಮುಂಕೊಳ್ಳೆ–To advance. ಭಟ-Soldier. ಆಹವ-War)

  • ಶೈಲಪ್ರಾಂತದೆ ಗುಲ್ಮಮು(ನ್ಮೂ)

   ಸರ್.. ಮೊದಲ್ನೇ ಸಾಲ್ನಲ್ಲಿ ಒಂದ್ಮಾತ್ರೆ ಜಾಸ್ತಿ ಆಗಿದೆ..

 44. ಜಾಲದವೋಲ್ ಶ್ರೀಗಂಧಂ
  ಸಾಲೊಳ್ ಬೆಳೆದಿರ್ಕು ಗಾತ್ರಮಹ! ಕಣ್ಸೆಳೆವಾ
  ಕಾಲನ ಸನ್ನಿಧಿಯೆಡೆ ಹಾ!
  ಕಾಲಿರದೊಡಮೋಡುತಿರ್ಕುಮೇ ತರು ವೃಂದಂ

 45. ಬಾಲೆಯ ವರ್ಣಕ ಥರ್ಮೋ –
  ಕೋಲಲೆ ರಚಿಸಿರ್ದುದಲ್ತೆವುದ್ಯಾನದವೋಲ್
  ಶಾಲೆಗೆ ಕೊಂಡೊಯ್ವುದ ಕಾಣ್
  ಕಾಲಿರದೊಡಮೋಡುತಿರ್ಕುಮೇ ತರು ವೃಂದಂ?

  [ವರ್ಣಕ = model; ಥರ್ಮೋಕೋಲ್ = thermocol]

 46. ಕೂಲೆನೆ [coolಎನೆ] ನವ್ಯಕ ರಚಿಪಂ :
  “ಕಾಲಿರದೊಡಮೋಡುತಿರ್ಕುಮೀ ತರುವೃಂದಂ”
  ನಾಲಿಗೆಯಂ ಶಾರದೆ ತಾಂ
  ಶೂಲದೆ ಛೇದಿಸುತೆ ಪಾಠಮಂ ಪಾಠಿಸುಗುಂ

  [ನವ್ಯಕ = modern poet – prone to write meaningless verses :-)]

  • ಪ್ರಿಯ ರಾಮ್,

   ಮೂರು ಪದ್ಯಗಳೂ ಕಲ್ಪನೆಯ ನಾವೀನ್ಯದ ದೃಷ್ಟಿಯಿಂದ ತುಂಬ ಸೊಗಸಾಗಿವೆ. ಇಷ್ಟೆಲ್ಲ ಬಗೆಯ ಪೂರಣಗಳು ಹೊಮ್ಮಿದ ಬಳಿಕವೂ ಈ ಪರಿಯಲ್ಲಿ ಹೊಸತನವನ್ನು ತರುವುದು ಅಲ್ಪದ ಮಾತಲ್ಲ. ಆದರೆ ಸ್ವಲ್ಪ ಹಳಗನ್ನಡದ ಹದ ಹಳಿತಪ್ಪಿದೆ.

   ಇದು ಪದ್ಯಪಾನಿಗಳೆಲ್ಲರ ಗಮನಕ್ಕೆ:-

   ಮುಖ್ಯವಾಗಿ ಅಕಾರಾಂತದ ಪದಗಳನ್ನು ಪ್ರಥಮಾ-ದ್ವಿತೀಯಾ-ತೃತೀಯಾ-ಪಂಚಮೀ-ವಿಭಕ್ತಿಗಳಲ್ಲಿ (ಅಕಾರಾಂತೇತರಪದಗಳಿಗೆ ಪ್ರಥಮವಿಭಕ್ತಿಯಲ್ಲಿ ಬಿಂದುವಿರದಾದರೂ ಉಳಿದಂತೆ ಅವಕ್ಕೂ ಬಿಂದುವಿನ ಅನಿವಾರ್ಯತೆಯುಂಟು) ಸಬಿಂದುಕವಾಗಿಯೇ ತಪ್ಪಿದೆ. ಈ ಸಂಗತಿಯನ್ನು ಪದ್ಯಪಾನದ ಮತ್ತೂ ಅನೇಕಮಿತ್ರರಲ್ಲಿ ಕಾಣಬಹುದಾಗಿದೆ. ಹಲವರು ನಿಯತವಾಗಿ ಈ ಜಾಡಿನವರು; ಮತ್ತೆ ಕೆಲವರು ಆಗಾಗ ಈ ಪ್ರಮಾದಕ್ಕೆ ಗುರಿಯಾಗುತ್ತಾರೆ:-). ಮುಖ್ಯವಾಗಿ ಪ್ರಥಮವಿಭಕ್ತಿಯಲ್ಲಿ (ಅಕಾರಾಂತದಲ್ಲಿ) ಬಿಂದುಲೋಪವಾದಾಗ ಅದು ಸಂಬೋಧನವಿಭಕ್ತಿಯ ಅರ್ಥವನ್ನು ನೀಡುವ ಅಪಾಯವಿದೆ. ದ್ವಿತೀಯವಿಭಕ್ತಿಯಲ್ಲಿ (ಎಲ್ಲ ಬಗೆಯ ಅಂತಗಳ ಪದಗಳಲ್ಲಿಯೂ)ಬಿಂದುವಿಲ್ಲದಾಗಲು ಅದು ಷಷ್ಠವಿಭಕ್ತಿಯ ಅರ್ಥವನ್ನು ತಾಳುತ್ತದೆ.ಹೀಗಾಗಿ ಪದ್ಯಭಾವಕ್ಕೆ ಅನರ್ಥವು ತಪ್ಪದು. ಆದುದರಿಂದ ಈ ಬಗೆಗೆ ಹೆಚ್ಚಿನ ಎಚ್ಚರ ಅವಶ್ಯವೆಂದು ನನ್ನ ನಿವೇದನೆ.

   • ಕ್ಷಮಿಸಿರಿ; ನನ್ನ ಪ್ರತಿಕ್ರಿಯೆಯನ್ನು ಕಳುಹುವಾಗ ಸ್ವಲ್ಪ ತಪ್ಪಾಗಿ ಕೆಲವೊಂದು ಪದಗಳು ಜಾರಿಹೋಗಿವೆ. ತಿದ್ದುಪಡಿ ಹೀಗೆ:
    ……….ಸಬಿಂದುಕವಾಗಿಯೇ ಇರಬೇಕೆಂಬ ವಿಧಿಯುಂಟು. ಆದರೆ ಇಲ್ಲಿ ಆ ಶಿಸ್ತು ತಪ್ಪಿದೆ………

   • ಪ್ರಿಯ ಗಣೇಶ – ವಿವರಗಳಿಗೆ ಧನ್ಯವಾದ. ನಾನು ಈ ವಿಷಯವನ್ನು ಇನ್ನೂ ಮನನ ಮಾಡಬೇಕಿದೆ.

 47. ಪ್ರಾಚೀನ ಖಗೋಳಶಾಸ್ತ್ರಜ್ಞನಾದ ಆರ್ಯಭಟನ ನುಡಿ 🙂

  ಚಾಲಿಸೆ ಹಡಗಂ ತೋರ್ಗುಂ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ |
  ಜಾಲಂ ತಾರೆಗಳೋಡುವ-
  ವೋಲೆಮಗಂ ಭಾಸಿಕುಂ ಧರಾಭ್ರಮದಿಂದಂ ||
  (ಉತ್ತರಾರ್ಧದಲ್ಲಿ ಅನ್ವಯ – ಧರಾಭ್ರಮದಿಂದಂ ತಾರೆಗಳ ಜಾಲಂ ಓಡುವವೋಲ್ ಎಮಗಂ ಭಾಸಿಕುಂ.)

  ಈಗಾಗಲೇ ಈ ಕಲ್ಪನೆಯಲ್ಲಿ ಹಲವಾರು ಪೂರಣಗಳು ಬಂದಿದ್ದರೂ, ಕ್ರಿ.ಶ. ೫ನೇ ಶತಮಾನದಲ್ಲಿದ್ದ ಮಹಾನ್ ಖಗೋಲಶಾಸ್ತ್ರಜ್ಞ ಆರ್ಯಭಟನು ಮೊತ್ತಮೊದಲಿಗೆ ಭೂಭ್ರಮಣವಾದವನ್ನು ಮಂಡಿಸುವಾಗ ಈ ದೃಷ್ಟಾಂತವನ್ನೇ ನೀಡಿದ್ದಾನೆಂಬ ಸ್ವಾರಸ್ಯಕರವಿಷಯವನ್ನು ಮುಂದಿರಿಸಲು ಆತನ ನುಡಿಗಳಲ್ಲೇ ಈ ಪರಿಹಾರದ ಕಲ್ಪನೆ. ಆರ್ಯಭಟನ ಶ್ಲೋಕ ಹೀಗಿದೆ.

  अनुलोमगतिर्नौस्थः पश्यत्यचलं विलोमगं यद्वत् ।
  अचलानि भानि तद्वत् समपश्चिमगानि लङ्कायाम् ॥
  ತಾತ್ಪರ್ಯ – ಹೇಗೆ ನೌಕೆಯಲ್ಲಿ ಸಂಚರಿಸುತ್ತಿರುವವನಿಗೆ ಅಚಲವಾದ ತರುಪರ್ವತಾದಿಗಳು ವಿಲೋಮವಾಗಿ ಸಾಗುತ್ತಿರುವಂತೆ ಭಾಸವಾಗುವುದೋ ಹಾಗೆಯೇ ಭೂಮಿಯು ಪೂರ್ವಾಭಿಮುಖವಾಗಿ ಸಂಚರಿಸುವುದರಿಂದ ನಕ್ಷತ್ರಗಳು ವಸ್ತುತಃ ಸ್ಥಿರವಾಗಿದ್ದರೂ ಪಶ್ಚಿಮಾಭಿಮುಖವಾಗಿ ಸಂಚರಿಸುವಂತೆ ನಮಗೆ ಭಾಸವಾಗುತ್ತದೆ.

 48. Just a corollary to my verse in sl. 43
  ಮೂಲವರಿಯೆ ಖೂಳರ ಹಿಂ
  ಬಾಲಿಸಿ ಕಿತ್ತು ಝಟಿಯಂ ಪಿಡಿದು ಜವನಿಕೆವೋಲ್|
  ಲೀಲೆಯ ಮೆರೆವರ್ ಚರರೈ.
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ||
  (ಖೂಳ=Villain. ಝಟಿ=Shrub. ಜವನಿಕೆ=Veil. ಚರ=Detective)

 49. ಸಾಲಂ ಬೇಡಲ್ಕೆ ಜನರ್
  ಪಾಲಾಗಿಪರಲ್ತೆ ದಿಕ್ಕ ಚಣಮಾತ್ರದೊಳಂ
  ಸೋಲುತ್ತೆ ವಿಲಾಪಿಸಲಾಂ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ
  🙂
  [ನನ್ನ self-pity ಯ ಪ್ರಲಾಪವನ್ನು ತಾಳಲಾರದೆ ತರುಗಳು ಕೂಡ ಓಡಿದವು ಎಂಬ – ಸಮುದ್ರಕ್ಕೆ ಹೋದರೆ ಮೊಳಕಾಲು ನೀರಾಯಿತು ಎಂಬ ಜಾಡಿನ ಪೂರಣ]

  • ಸಾಲಂ=ಸಾಲವು ಎಂದೂ, ಸಾಲನ್ನು (ಸಾಲು) ಎಂದೂ ಆಗುತ್ತದೆ. ’ಸಾಲಮಂ’ ಎಂದೇನಾದರೂ ಮಾಡಿದರೂ, ’ನಾನು’ ಎಂಬುದನ್ನು ವಾಚ್ಯವಾಗಿಯೋ ಸೂಚ್ಯವಾಗಿಯೋ ತರುವುದೊಳ್ಳೆಯದು. ಇಲ್ಲದಿದ್ದರೆ ಬೇಡುತ್ತಿರುವವರು ಜನರು ಎಂದೂ ಆಗುತ್ತದೆ.

   • ಸಾಲಮಂ ಬರಲು ಸಾಧ್ಯವಿಲ್ಲ (೫ ಮಾತ್ರೆಗಳು). ಸಾಲವ ಎಂದರೆ ಹಳೆಗನ್ನಡಕ್ಕೆ ಕೊರೆಯಾಗುತ್ತದೆ. ಹೀಗಾಗಿದೆ ಕಷ್ಟ 🙂
    ನೀವೆಂದಂತೆ, ಮೊದಲೆರಡು ಸಾಲುಗಳು ಸಾರ್ವತ್ರಿಕವಾಗಿವೆ. ಆಂ ಎಂಬುದು ೩ನೆಯ ಪಾದದಲ್ಲಿ ಬಂದಿದೆ. ಅನ್ವಯಕ್ಕೆ ಕೊಂಚ ತೊಂದರೆಯಾದೀತು ಎಂಬ ನಿಮ್ಮ ಸಲಹೆಯ ಮೇರೆಗೆ ಅದನ್ನು ಮೊದಲ ಸಾಲಿಗೆ ತಂದು, ಹೀಗೆ ಬದಲಿಸಿದ್ದೇನೆ ::

    ಸಾಲಮನಾಂ ಬೇಡೆ ಜನರ್
    ಪಾಲಾಗಿಪರಲ್ತೆ ದಿಕ್ಕ ಚಣಮಾತ್ರದೊಳಂ
    ಸೋಲುತ್ತೆ ವಿಲಾಪಿಸಿರಲ್
    ಕಾಲಿರದೊಡಮೋಡುತಿರ್ಕುಮೀ ತರುವೃಂದಂ

 50. ನವನವೀನಕಲ್ಪನಾನುಪ್ರಾಣಿತವಾದ ಅಸಂಖ್ಯಪ್ರಕಾರದ ಪೂರಣಗಳು ಬಂದ ಬಳಿಕ ಪ್ರಕೃತ ಸಮಸ್ಯೆಗೆ ಈ ವರೆಗೆ ನನ್ನ ಪರಿಹಾರವೊಂದೂ ಬಂದಿಲ್ಲದ ಕಾರಣ ಕೇವಲ ಆಚಾರಲೋಪವಾಗಬಾರದೆಂಬ ದೃಷ್ಟಿಯಿಂದಷ್ಟೇ ನನ್ನೊಂದು ಪದ್ಯವನ್ನೀಗ ಆಶುವಾಗಿ ನಿವೇದಿಸುತ್ತಿದ್ದೇನೆ. ಸಹೃದಯರು ಸ್ನೇಹ-ಸಹಾನುಭೂತಿಗಳಿಂದ ಗಮನಿಸುವಂತಾಗಲಿ:

  ಲೀಲಾಗೋಪಾಲನ ಮುರ-
  ಳೀಲೀಲೆಯ ಬೆರಗನೇವೊಗಳ್ವೆನೊ ಜಗಮೇ |
  ಆಲಿಸಿ ಕುಣಿದಿರಲವನೆಡೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

  • ಸುಲಲಿತ ಮಧುರಾನುಭೂತಿ ಸಿಂಚಿತ ಚಿತ್ರಂ

  • ಅತಿ ಸುಂದರವಾದ ಉತ್ಪ್ರೇಕ್ಷೆ – ರಮ್ಯ, ರಮಣೀಯ

  • Excellent

   • ಚಂದ್ರಮೌಳಿ, ರಾಮಚಂದ್ರ ಮತ್ತು ಸುಧೀರರಿಗೆಲ್ಲ ಧನ್ಯವಾದಗಳು.

  • ಬಕುಲವೃಕ್ಷಕೆ ಗೋಪಿ ಗೈಯುತರೆ ದೋಹದವ
   ಪಿಕಗೀತದೊಲು ವೇಣುನಾದ ಕೇಳಲ್|
   ಬಕಪಕ್ಷಿವೊಲು ಸಾರಿರಲು ಕೃಷ್ಣನನ್ನಾಕೆ
   ಸಿಕತಭೇದಿಸಿ ವೃಕ್ಷ (ಅನು)ಸರಿಸಿತವಳಂ|| 😉

 51. ಮತ್ತೊಂದು ಪೂರಣ:

  ಕೇಲೀವಸಂತಕಾಂತಂ
  ಲೋಲಂ ತಾಂ ಬರ್ಪನೆಂಬ ಸವಿವಾಳ್ತೆಯನೇ |
  ಶೀಲಿತಸಮೀರನೊರೆದಿರೆ
  ಕಾಲಿರದೊಡಮೋಡತಿರ್ಕುಮೀ ತರುವೃಂದಂ ||

  (ಮಲಯಾನಿಲವು ವಸಂತನ ಆಗಮನವನ್ನು ತರುಸುಂದರಿಯರಿಗೆಲ್ಲ ತಿಳಿಸಲು, ಅವರು ತಮ್ಮ ನಲ್ಲನ ಬರವಿನಿಂದ ನಲಿದು ಅವನತ್ತ ಧಾವಿಸುವರೆಂಬ ಉತ್ಪ್ರೇಕ್ಷಿತಚಿತ್ರವಿಲ್ಲಿ ಅಭಿಪ್ರೇತ)

  ಇನ್ನೊಂದು ಪೂರಣ:

  ಜಾಲಿಸೆ ಚಳಿ ಕೌರವನವೊ-
  ಲಾ ಲುಬ್ಧಂ ಮಾತರಿಶ್ವದುಶ್ಶಾಸನನುಂ |
  ಚಾಲಿಸೆ, ಪಾಂಚಾಲಿಗೆ ಸರಿ
  ಕಾಲಿರದೊಡಮೋಡುತಿರ್ಪುದೀ ತರುವೃಂದಂ ||

  (ಶಿಶಿರದಲ್ಲಿ ಗಿಡ-ಮರಗಳ ಪರ್ಣವಸ್ತ್ರಗಳನ್ನೆಲ್ಲ ಚಳಿಗಾಳಿಯು ಉದುರಿಸಿ ಸೆಳೆಯುತ್ತದೆಂಬ ಅಂಶವನ್ನು ಗಮನಿಸಿ ಈ ಪರಿಹಾರವು ಸಿದ್ಧವಾಗಿದೆ)

  • ವಸ್ತುವನ್ನು ಉತ್ಪ್ರೇಕ್ಷೆಗೆ ಒಳಪಡಿಸಿ, ನಿಮ್ಮ ಮೂರೂ ಪದ್ಯಗಳು, ಪೂರಣಗಳಿಗೆ ಇನ್ನೊಂದು ಆಯಾಮವನ್ನೇ (dimension) ತೆರೆದಿವೆ 🙂

 52. ಕಾಳಗದೊಳಡಗುತಡಗುತೆ
  ಕಾಲಾಳುಗಳಿಂತು ಧರಿಸಿ ತರುವಂ ಶಿರದೊಳ್ |
  ಚಾಲಾಕಲಿ ಚಲಿಸಿರೆ ಕಾಣ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ।।

  • ಒಳ್ಳೆಯ ಗೆರಿಲ್ಲಾ ಯುದ್ಧದ ಕಲ್ಪನೆ; ಇದೇ ನನ್ನ ಮತ್ತು ಶ್ರೀಕಾಂತರ ಪದ್ಯಗಳ ಮೂಲಧಾತು ಕೂಡ:-)

   • ಧನ್ಯವಾದಗಳು ಗಣೇಶ್ ಸರ್,
    ನಿಮ್ಮಪದ್ಯಗಳಿಂದ ಮರೆತಿದ್ದ ಮ್ಯಾಕ್ಬೆತ್ ಕಥೆ ನೆನೆಪಾಯಿತು. ಕಲ್ಪನೆಯಲ್ಲಿದ್ದ ಯೋಧರ ಸಮವಸ್ತ್ರವನ್ನ ಪದ್ಯದಲ್ಲಿ ತರಲಾಗಲಿಲ್ಲ. ಮರದ ಕೊಂಬೆಯ ಬದಲಾಗಿ ಪೂರ್ತಿ ಮರವೇ ಬಂದುಬಿಟ್ಟಿದೆ!

 53. ಶಾಲೆಯ ನಾಟಕ ಸಂಜೆಗೆ.
  ಬಾಲಕರೆಲ್ಲ ತರುವೇಷವ ಧರಿಸಿ ಮುದದಿಂ |
  ಕಾಲವು ಇನ್ನೂ ಆರೂ-
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

  ಪ್ರೈಮರಿ ಶಾಲೆಯಲ್ಲಿ ನಾಟಕ ಸಂಜೆ (೬.೩೦ಗೆ ಅಂತ ಭಾವಿಸಿಕೊಳ್ಳಬೇಕು) ಇದ್ದರೂ ಉತ್ಸಾಹದಿಂದ (ಡಯಲಾಗೇ ಇಲ್ಲದ ಪಾತ್ರವಿದ್ದರೂ) ಮಕ್ಕಳು ಬೇಗನೇ ತಯಾರಾಗಿ ಇನ್ನೂ ಆರೂಕಾಲಾಗಿರುವಾಗಲೇ ಓಡುತ್ತಿದ್ದರು.

  • “ಕಾಲವು ಇನ್ನೂ” ಎಂಬಲ್ಲಿ ವಿಸಂಧಿ ದೋಷವಿದೆಯೇ? ನನಗೆ ಇಲ್ಲವೆನಿಸುತ್ತಿದೆ.
   ಇದ್ದರೆ, ಅದನ್ನು ಆರ್ಷೇಯ ಪ್ರಯೋಗ ಎಂದು ಗಣಿಸುವುದು. ಆ ಉದಾರತೆಯನ್ನೂ ತೋರಲಿಚ್ಛಿಸದವರು
   “ಕಾಲವದಿನ್ನೂ” ಎಂದು ಓದಿಕೊಳ್ಳಬೇಕಾಗಿ ನಮ್ರ ವಿನಂತಿ 🙂

   • ಅಸ್ಯ ಶ್ರೀಪದ್ಯಪಾನಮಹಾವೇದಸ್ಯ ಸಮಸ್ಯಾಪೂರಣಸೂಕ್ತಸ್ಯ ರಸಿಕೋ ದೇವತಾ ಕೈಸರ್ಯಃ ಸುಧೀರೋ ಋಷಿಃ ಸ್ಕಂಧಕಃ ಛಂದಃ ಸ್ನೇಹೋಲ್ಲಾಸೇ ವಿನಿಯೋಗಃ | 🙂 🙂
    ಅತಃ ಪರಮಸಂತೋಷೇಣ ಭಗವತಃ ಸುಧೀರಸ್ಯ ಪ್ರಯೋಗಾಣಾಂ ಆರ್ಷತ್ವಮಂಗೀಕ್ರಿಯತೇ ||

  • ಕೀಲಕ ಹೊಂದಿಸಿರುವುದು ವಿನೂತನವೂ ಚೆನ್ನಾಗಿಯೂ ಇದೆ.
   ಕಾರ್ಯಕ್ರಮವು ೬.೩೦ಕ್ಕೆ ಎಂದಿರುವುದರಿಂದ, ವಿವರಣೆಯಲ್ಲಿ ಹೇಳಿರುವಂತೆ ಇನ್ನೂ ಆರೂಕಾಲ್’ಇರು’ವಾಗಲೇ ಎಂಬುದು ಸರಿಯಾಗಿರುತ್ತದೆ. ಪದ್ಯದಲ್ಲಿರುವುದಾದರೋ ಇನ್ನೂ ಆರೂಕಾಲ್’ಇರ’ದೊಡಂ ಎಂದು.
   ಪದ್ಯವನ್ನು ಮುಟ್ಟದೆಯೇ ಈ ದೋಷವನ್ನು ಸರಿಪಡಿಸುವ ವಿಧಾನವೊಂದಿದೆ: ಕಾರ್ಯಕ್ರಮವನ್ನು ೬.೧೫ಕ್ಕೆ ಇಟ್ಟುಕೊಳ್ಳುವುದು. ಆಗ, ಪದ್ಯದಲ್ಲಿರುವ ’ಇನ್ನೂ ಆರೂಕಾಲಿರದೊಡಂ’ ಎಂಬುದು ದಿವ್ಯವಾಗಿ ಹೊಂದುತ್ತದೆ. 😉

 54. ಚಾಲಿಸುತುಂ ಮಧುರತೆಯಂ
  ಓಲೈಪ ರುಚಿರಸುವಾಸನೆಗಳಂ ಜಗದೊಳ್
  ತೇಲುತೆ ಪಸರಿಪ ಗುಣದಿಂ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

  [ತಮ್ಮ ಮಧುರ ಗುಣಗಳಿಂದ ಎಲ್ಲೆಡೆಗೂ ಓಡುತ್ತಿವೆ ಎಂಬರ್ಥ]

  • New opening Ram. V. Good. I have emulated this in my verse in sl. 59.
   ತಂ+ಓ ವಿಸಂಧಿಯಾಯಿತು.

   • ಮೇಲೆ ಸುಧೀರ ಮಹಾಋಷಿಗಳು ಆರ್ಷೇಯವೆಂದು ಅಪ್ಪಣೆ ಕೊಡಿಸಿರುವಂತೆಯೇ ಇಲ್ಲಿ ಮಾಡಲಾಗಿದೆ. ಇದನ್ನು ಒಪ್ಪದವರು, ಅವರೆಂದಂತೆ ಮಧುರತೆಯದ-ನೋಲಯಿಪ ಎಂದು ಓದಿಕೊಳ್ಳಬಹುದು.

    Make hay while the sun is shining 🙂

 55. ಲಾಲಸೆಯಿಂ ಮಧುಲೋಲಂ
  ಲೋಲಂಬಂ,ಪಾನಮತ್ತಮಾಗಿ ಕುಳಿತಿರಲ್
  ಲೋಲಕಮತಿಯಿಂ ಬಗೆಗುಂ
  “ಕಾಲಿರದೊಡಮೋಡುತಿರ್ಕುಮೀ ತರುವೃಂದಂ”

  ಲೋಲಂಬ= ದೊಡ್ಡ ದುಂಬಿ
  ಲೋಲಕ = pendulum

  • ಆಹಾ! ಎಂಥ ಒಳ್ಳೆಯ ಕಲ್ಪನೆ ಮತ್ತು ಶೈಲಿ!! ಧನ್ಯವಾದ

  • ’ಲೋಲಕಮತಿ’ ಚೆನ್ನಾಗಿದೆ ಸಮಾಸ. ಆದರೆ,
   ಅಡ್ಡಡ್ಡವಬ್ಬಬ್ಬಮೆಂದರಿಹುದೊಂದ್inch ಅ-
   ದಡ್ಡಿಯೋ ಸ್ಫೂರ್ತಿಯೋ ಗಾತ್ರಮಾಯ್ತೇಂ?
   ’ದೊಡ್ಡದುಂಬಿ’ಯದೇನದೈದುಮುಕ್ಕಾಲಡಿಯೆ
   ವಡ್ಡ’ರಾಮ’ಗೆ ಕಲಂಕಮನಿತ್ತಿರೇಂ??

 56. ಲೋಲದ ಲೋಲಕವಿಳೆಯೊಳ್
  ಕಾಲಗತಿಯಲೋಡುತಿರ್ಕುಮೀ ರವಿಚಂದ್ರಂ |
  ಭೂಲೋಕಮೆ ಸುತ್ತಲ್ ಕಾಣ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

  • Ideas seem to be inexhaustible. Good one ma’m. Some savaraNe:
   ಲೋಲದ ಲೋಲಕದಿಳೆಯೊಳ್
   ಕಾಲಗತಿಯಿನೋಡುತಿರ್ಪರಾ ರವಿಚಂದ್ರರ್
   ಭೂಲೋಕವಕ್ಷದೆ ತಿರುಗೆ
   …….

   • ಧನ್ಯವಾದಗಳು ಪ್ರಸಾದ್ ಸರ್,
    ಭೂಮಿಯಲ್ಲಿ ಕಾಲಿಲ್ಲದೆ ಓಡುತ್ತಿರುವ ಮರಗಳನ್ನ
    ರವಿ-ಚಂದ್ರರು ಕಂಡದ್ದು !

 57. ಸಾಲಂಕೃತಗೊಂಡುದು ಮು
  ಕ್ಕಾಲದು(3/4) ಮರ ಕಾಣ ಕಾಲು(1/4)ಭಾಗವದೊಳಗೈ |
  ಆಲೋಕಿಸೆ ಮೂರ್ಕಾಲದೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

 58. Applied ‘format painter’ to Ram’s verse in sl.55
  ಓಲಾಡುತ್ತಲಿ ಪಸರಿಸೆ
  ತೇಲಿಸಿಹ ಪವನವ ದೂರದೂರಕೆ ಮರಗಳ್|
  ಮೂಲಕ ತಮ್ಮಯ ಶ್ವಾಸದೆ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ||

 59. ಲೀಲಾಚಿತ್ರದೆ ವರ್ಮರ್ (BKS)
  ಸಾಲುಮರಂಗಳಿಗೆ ಪಾದವಿತ್ತಿರಲವುಗಳ್|
  ಮಾಲಿಯ ಕಂಡು ಭಯದಿಂ
  (ನಿಜ)ಕಾಲಿರದೊಡಮೋಡುತಿರ್ಕುಮೀ ತರುವೃಂದಂ||

  • ನಿಮ್ಮ ಕಲ್ಪನೆ ತುಂಬ ಸೊಗಸಾಗಿದೆ. ಹೊಸ ಆಯಾಮವನ್ನೇ ಹೊಂದಿದೆ. ಆದರೆ ನೀವೆಂದಂತೆ ಸ್ವಲ್ಪ ಅನನ್ವಿತವಾಯಿತು. ಅಡ್ಡಿಯಿಲ್ಲ, ಅದನ್ನೆಲ್ಲ ನೀವು ಸುಲಭವಾಗಿ ಸವರಿಸಬಲ್ಲಿರಿ. ಆದರೆ ನೀವೂ ಸೋದರಿ ಉಷಾ ಉಮೇಶ್ ಅವರೂ ಹೆಚ್ಚು ಹೆಚ್ಚು ಪದ್ಯಗಳನ್ನು ಬರೆಯುವ ಉತ್ಸಾಹದಲ್ಲಿ ಹಳಗನ್ನಡದ ಹದವನ್ನೂ ಕಲ್ಪನೆಗಳ ಸಾಂಗತ್ಯವನ್ನೂ ಅದೆಷ್ಟೋ ಬಾರಿ ಉಲ್ಲಂಘಿಸುತ್ತಿದ್ದೀರಿ:-) ದಯಮಾಡಿ ಮತ್ತಷ್ಟು ತೀಡಿ ತಿದ್ದಿ ರಚಿಸಿರಿ. ಇಲ್ಲವಾದರೆ ಪದ್ಯಶಿಲ್ಪದ ಪ್ರಗತಿಯು ಕುಂಟೀತು.

   • ಸಲಹೆಗಳಿಗಾಗಿ ಕೃತಜ್ಞತೆಗಳು. ನನ್ನ ಭಾಷಾಶೈಥಿಲ್ಯಕ್ಕೆ ಅಧ್ಯಯನಕಾರ್ಪಣ್ಯವೇ ಕಾರಣ.

 60. ಕಾಲನ ಕರೆಗೋಗುಟ್ಟುತೆ
  ಕಾಲನನುಚರಿಪ ಮನುಜರರಿಯದಲೆ ಮರಗಳ
  ಕಾಲಿಗೆ ಕೊಡಲಿಯನಿಕ್ಕಲು
  ಕಾಲಿರದೊಡಮೋಡುತಿರ್ಕುಮೀ ತರುವೃ೦ದ೦

  • ತಮಗೆ ಪದ್ಯಪಾನದ ಪರವಾಗಿ ನಲ್ಬರವು:-)

   ತಮ್ಮ ಪ್ರಯತ್ನವು ಸುತ್ಯರ್ಹ. ಆದರೆ ಕಂದದ ಲಕ್ಷಣವು ಅಲ್ಲಲ್ಲಿ ಶಿಥಿಲಗೊಂಡಿದೆ. ದಯಮಾಡಿ ವಿಡಿಯೋ ಪಾಠಗಳ ಮೂಲಕ ಮತ್ತೊಮ್ಮೆ ನಿಮ್ಮ ಪದ್ಯನಿರ್ಮಿತಿಯ ಅರಿವನ್ನು ತಾಳೆನೋಡಿರಿ.

 61. About a goodwill marathon run:
  ಮೈಲಿಸಹಸ್ರದ ಮೋಜದು
  ಖೇಲನಮಾತ್ರಂ. ಪರಾಜಯ-ಜಯಂಗಳಿನೇಂ|
  ಕಾಲಪುರಸ್ಕಾರದ ಕಂ-
  ಗಾಲಿರದೊಡಮೋಡುತಿರ್ಕುಮೀ ತರುವೃಂದಂ||
  (ಕಾಲಪುರಸ್ಕಾರದ ಕಂಗಾಲಿರದೊಡಂ-In a goodwill run there are no prizes, and hence there should be no anxiety to clock record timing. Still contestants strain themselves and run fast. ತರು=fast; ತರುವೃಂದಂ-fast group)

 62. ಲೀಲೆಯೊಲೆಂಬಂತೆ ಜನರ್
  ನೀಲಾಂಬರದೊಳ್ ವಿಹಾರಿಪರ್ ಸ್ವಪ್ನಗಳೊಳ್
  ಮೂಲಕ ತರುಕಲ್ಪನೆಯಾ
  ಕಾಲಿರದೊಡಮೋಡುತಿರ್ಕುಮೀ ತರು ವೃಂದಂ

  [ರೆಕ್ಕೆಯಿಲ್ಲದ ಮಾನವರು ಕನಸಿನಲ್ಲಿ ಆಕಾಶಗಮನ ಮಾಡುವಂತೆ, ಮರಗಳ ಕಲ್ಪನೆಯ ಮೂಲಕ ತರುವೃಂದವು ಕಾಲಿರದಿದ್ದರೂ ಓಡಲಹುದು]

 63. ಬೇಲಿಯೆ ತಿಂಬುದು ಪೊಲಮಂ
  ಮೂಲಾಧಾರಂಗಳಿಲ್ಲದೊಡಮೈಸಿರಿಯಂ
  ಪಾಲಿಕೆಯಂ ಗಾಳಿಸೆ ದಲ್
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

  [ಗಾಳಿಸು = ಶೋಧಿಸು]
  [ಪಾಲಿಕೆ ಬೆಳೆಸಿದ ವನ ಹುಡುಕಿದರೆ ಸಿಗಲಿಕ್ಕಿಲ್ಲ]

 64. ತಾಲಂ ದಾಟುತೆ ಕಡಲ –
  ನ್ನಾಲಮಮೆಳಸುತ್ತೆ ಬಂದಿತೇಮಮೆರಿಕದಿಂ
  ಲೀಲೆಯಿದಹುದಹುದಹುದೈ
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ

  [ತಾಲ (ತಾಳೆಯ ಮರ) ಅಮೆರಿಕದಿಂದ ಆಲದ ಮರವನ್ನು ಹುಡುಕಿಕೊಂಡು ಭಾರತಕ್ಕೆ ಬಂತು ಎಂಬ ಕಲ್ಪನೆಯಿಂದ. ಇದು (migration of palms) ವಿಜ್ಞಾನಕ್ಕೆ ವಿರೋಧವಾಗಿದ್ದನ್ನು ಯಾರಾದರು ತಿಳಿಯಪಡಿಸಿದರೆ, ಸೂಕ್ತವಾಗಿ ಸರಿಪಡಿಸುವೆ]

 65. ಶೀಲೆಯ ವರಿಸಲ್ಕಾ ವರ-
  ನಾಲಯದೆಡೆ ಪೋಪ ವಾಹನಂ ಪೊಂದಿರಲಾ |
  ಮಾಲೆಯೊಳಿರ್ಪ ತಳಿರ್ಗಳಂ,
  ಕಾಲಿರದೊಡಮೋಡುತಿರ್ಕುಮೀ ತರುವೃಂದಂ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)