Apr 102016
 

ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್

  135 Responses to “ಪದ್ಯಸಪ್ತಾಹ ೧೯೭: ಸಮಸ್ಯಾಪೂರಣ”

 1. ಅಕ್ಷಯಮೆಂಬೊಲ್ ಜೇನ್ಗಳ್
  ವೃಕ್ಷಮನಾಶ್ರಯಿಸೆ ಶಿತಿಕರಂಡನಿಕರಮಂ
  ವೀಕ್ಷಿಪಕವಿ ಪೇಳ್ದನಲಾ
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್

  ಶಿತಿ – ಕಪ್ಪು

 2. ವೀಕ್ಷಿಸುತಿರ್ಪೊಡಮೆಂದುಂ
  ಭಕ್ಷಣೆಗಂ ದೊರಕದಿರ್ದೊಡನಮಾ!ಬಡವಂ
  ಗಕ್ಷರಶ: ಬಹಳ ಪುಳಿಯ
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್!

  • ತತ್ಕ್ಷಣ ಅಲ್ಲವೇ ಸೋದರಿಯವರೇ

   • ಧನ್ಯವಾದಗಳು ,ಸೋಮಣ್ಣ.

   • ಸಂಬಂಧಸೂಚಕಶಬ್ದಗಳ ಬಹುವಚನಪ್ರಯೋಗವು ಒಮ್ಮೆ ವಿಪರ್ಯಾಸಕ್ಕೆಡೆಯಾಯಿತು. ಹಿರಿಯ ಮುತ್ತೈದೆಯೊಬ್ಬಳು ತರುಣಿಯೋರ್ವಳನ್ನು “ನಿನ್ ಗಂಡ್ ಚೆನ್ನಾಗಿದ್ದಾನೇನೇ?” ಎಂದು ಕೇಳಿದಳು. City-bred ಆದ ಆ ಯುವತಿ, “ಏನ್ ನಮ್ಮೆಜಮಾನ್ರನ್ನ ಗಂಡ ಗಿಂಡ ಅಂತ ಏಕವಚನ ಹೇಳ್ತೀರ!” ಎಂದದ್ದಕ್ಕೆ ಆ ಹಿರಿಯಳು, “ತಪ್ಪಾಯ್ತಮ್ಮ. ನಿನ್ನ ಗಂಡಂದಿರು ಚೆನ್ನಾಗಿದ್ದಾರೇನಮ್ಮ?” ಎಂದು ಕೇಳಿದಳು.

 3. ನಿಕ್ಷೇಪಿಸಿ ಮರಮಂತಾ
  ನೀಕ್ಷಿಸುತೆ ಸಡಗರದಿಂದೆ, ಬೆಳೆಯಂ ಪಡೆದಂ!
  ಭಕ್ಷಿಸಿ ಬೇಸರದೆಂದಂ
  “ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್!”

 4. ಸಾಕ್ಷರನವ್ಯರ್ ಪಾಠದೆ
  ಸಕ್ಷಮರಯ್ ಪಠ್ಯಪುಸ್ತಕೇತರಮೊಂದಂ
  ಸೂಕ್ಷ್ಮದೆ ಕೇಳಲ್ ಪೇಳ್ವರ್
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್

  ಈಗಿನ ಕಾಲದ ಕೆಲವು ಪುಸ್ತಕಹುಳುಗಳಾದ ಮಕ್ಕಳು ಎಷ್ಟೇ ಬುದ್ಧಿವಂತರೆಂದು ತೋರಿದರೂ, ಪಠ್ಯೇತರ ವಿಷಯದಲ್ಲಿ ಅಜ್ಞಾನಿಗಳಾಗಿರುತ್ತಾರೆ

 5. ಭಿಕ್ಷುಕನೊಳೆ ಸಿರಿಯೆಂಬಂ
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್
  ವೀಕ್ಷಿಪುದೆಂಬೀ ಪೂರ್ವದ
  ಪಕ್ಷದ ದೀಕ್ಷಿತನ ತಿಳಿವಿಗೆಱಗೌ ವಾಣೀ

 6. ಅಕ್ಷಯ ಪುಂಜದವೊಲ್ ನಿಜ
  ದ್ರಾಕ್ಷಾಫಲಮೆಸೆದುದಲ್ತೆ!,ಮಾವಿನ ಮರದೊಳ್
  ವಿಕ್ಷೇಪಗೊಂಡಿರೆ ಫಲಮಮಾ
  ಕುಕ್ಷಿಗೆ ಸಾಲಮೆನುತೆಂದುಸುರಿತಾ ಮಂಗಂ!
  (ದ್ರಾಕ್ಷಿಯನ್ನು ಮತ್ತು ಮಾವಿನ ಹಣ್ಣುಗಳನ್ನು ಹೋಲಿಸುತ್ತ,ಮಾವಿನಹಣ್ಣು ತಿನ್ನುತ್ತಿರುವ ಅತೃಪ್ತಮಂಗವೊಂದು ಹೇಳಿದ್ದು)

 7. ದಕ್ಷತೆಯಿಂ ತೊದಲ್ ನುಡಿವಂ
  “ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್”
  ಮೋಕ್ಷದ್ವಾರಕವಾಟಮ-
  ನೀಕ್ಷಿಪನೆಂದೇ ಮರುಳ್ಗಳವನಂ ಪೊರೆವರ್

  ಚೋರ ಗುರುವನ್ನಾಶ್ರಯಿಸಿದ ಮರುಳು ಜನ

 8. ಭಿಕ್ಷೆಯನನಿಶಂ ಕುಡುವಳ
  ರಾಕ್ಷಸಪುತ್ರಿಯ ಕಠೋರತನವಂ ಕಂಡಾ
  ಭಿಕ್ಷುಕನುಲಿದಂ ಸು(ವಿ)ಶಟ-
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್

  ಸು(ವಿ)ಶಟ – ತುಂಬಾ ಹುಳಿ

  ಉಪಸರ್ಗ ಸವರಣೆಯಾಗಬೇಕೆನಿಸುತ್ತದೆ, ತಿಳಿಸಿರಿ…

 9. ಪಕ್ಷಿಗಳಿ೦ಚರದ ರವಕೆ
  ವೃಕ್ಷೋದ್ಯಾನದೊಳು ಮಾಮರದೆ ಪುಡುಕುತಿರಲ್ I
  ವೃಕ್ಷ೦ಗಳ್ ಬೆಸೆದಿರೆ,ರು –
  -ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್II

  ಮಾವಿನ ಮರ ಮತ್ತು ರುದ್ರಾಕ್ಷಿ ಮರಗಳು ಹತ್ತಿರ ಹತ್ತಿರವಿದ್ದು, ಬೆಸೆದು ಕೊಂಡು ರುದ್ರಾಕ್ಷಿಹಣ್ಣುಗಳು ಮಾವಿನ ಮರದಿಂದ (ಬಂದಂತೆ) ಶೋಭಿಸುತ್ತಿತ್ತು

  • ಚೆನ್ನಾಗಿದೆ ರುದ್ರಾಕ್ಷಿಯ ಕೀಲಕ

  • ಮೊನ್ನಿನ ಆಶುಕವಿತಾಗೋಷ್ಠಿಯಲ್ಲಿ ಈ ಕೀಲಕವು ಪ್ರಸ್ತಾವಿತವಾಯಿತು. ಅದು ರುದ್ರಾಕ್ಷಫಲವೆಂದಾಗಬೇಕು. ’ರುದ್ರಾಕ್ಷಾಫಲ’ ಅಸಾಧು.

  • ಸೋಮ ಮತ್ತು ಪ್ರಸಾದು ಸರ್ ಅವರಿಗೆ ಧನ್ಯವಾದಗಳು .

   @ ಪ್ರಸಾದು ಸರ್ ,
   ಇಲ್ಲಿ ಅಂಟಿಸಿದ ಮೇಲೆ ಸಂದೇಹ ಬಂದು ,ನಿಮ್ಮ ಅಚ್ಚು ಮೆಚ್ಚಿನ ಪದಕೋಶ ನೋಡಿದೆ . ಆಗಲೇ ತಪ್ಪಾಗಿರಬಹುದೆಂದು ಊಹಿಸಿದ್ದೆ

 10. ಅಕ್ಷಯಮಕ್ಷರಮನಿಶಮ-
  ದಕ್ಷರಮೂಲಂ, ವಿಶಿಷ್ಟಮಾಯೆಯಪೊರೆಯಿಂ-
  ದಕ್ಷಿಗೆ ತೋರ್ವರ್ ಪೇಳ್ವರ್
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್

  ಸ್ವಲ್ಪ far fetched padya, trying to fit to ಊರ್ಧ್ವಮೂಲಮಧಃಶಾಖಾ

 11. ದ್ರಾಕ್ಷಾರಸ ವಿಕ್ರಯದಿಂ
  ಲಕ್ಷಗಳಂ ಗಳಿಸಿ,ಸಿರಿಯನುಂಡಿರೆ,ಮತ್ತೇ
  ನಕ್ಷಿಯೊಳೆ ಸಲಲದುಂ,ಹಾ!
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್!

  (ದ್ರಾಕ್ಷಾರಸದ ವಿಕ್ರಯದಿಂದ ಸಿರಿವಂತನಾಗಿರಲಾಗಿ,ಅವನ ಕಣ್ಣಿನಲ್ಲದೊಂದೇ ನೆಲೆಸಿತ್ತು(ಅದರ(ದ್ರಾಕ್ಷೆಯ) ಭಕ್ತನೇ ಆದನು), ಹಾಗಾಗೇ ಮಾವಿನ ಮರದಲ್ಲೂ ದ್ರಾಕ್ಷಾಫಲವನ್ನೇ ಕಂಡನು)

 12. ಚಕ್ಷುಗಳಂ ಸೆಳೆಯುತ್ತುಂ,
  ಭಕ್ಷಣಕೆ ಸವಿಯಿರೆ, ಬಳ್ಳಿ ಬೆಳೆದಾಶ್ರಯದೊಳ್, |
  ಪಕ್ಷಂಗಳೊಳೇ ಪರ್ಬುತೆ,
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್? ||

  (ಮಾವಿನ ಮರದ ಆಶ್ರಯದಲ್ಲಿ,ಪಕ್ಷಗಳಲ್ಲಿಯೇ ಬಳ್ಳಿ ಬೆಳೆದು ಹಬ್ಬುತ, ಕಣ್ಣುಗಳನ್ನು ಸೆಳೆಯುತ್ತಾ, ತಿನ್ನಲು ಸವಿಯಿರುವ,ದ್ರಾಕ್ಷಾಫಲವು ಶೋಭಿಸಿತಲ್ಲವೆ ? )

 13. ದ್ರಾಕ್ಷಿ ದ್ರಾಕ್ಷಿಯೆನುತ್ತುಂ
  ರಾಕ್ಷಸನಂತೊದರಲೇನಕಾಲದೊಳಿಂತುಂ
  ವೀಕ್ಷಿಸಲಾಮ್ರವನಮಿದು
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್?!

  ಒಬ್ಬ ಹುಡುಗ ದ್ರಾಕ್ಷಿಹಣ್ಣಿಗೆ ಹಟಹಿಡಿದಾಗ ಅವರಪ್ಪ ಬೆಯ್ಯುವುದು.

  • ಚೆನ್ನಾಗಿದೆ ನೀಲಕಂಠ .. ಆದರೆ ಮಗ, ಅಪ್ಪ, ಬಯ್ಯುವಿಕೆ ಪದ್ಯದಲ್ಲಿ ಬರಬೇಕು

   • ಧನ್ಯವಾದಗಳು. ಕಂದಕ್ಕೆ ಐದನೇ ಪಾದ ಜೋಡಿಸುವ ಅನುಮತಿ ಕೊಟ್ಟರೆ ಸಾಧ್ಯವಾದೀತು 🙂

    • ಹಸ್ತ ,ಪಾದಗಳನ್ನು ಸೇರಿಸಲಾಗದು,ಏನಿದ್ದರೂ ಇನ್ನೊಂದು ಕಂದ ಸೇರಬಹುದು(ಬೈಯಿಸಿಕೊಳ್ಳಲು) 🙂

    • ನಾಲ್ಕನೆಯ ಪಾದದಲ್ಲಿ ’ಮಾವು’ ಇದೆ. ಮೂರನೆಯ ಪಾದದಲ್ಲಿ ಅದು ಮತ್ತೆ ಬೇಕಿಲ್ಲ. ಮೂರನೆಯ ಪಾದವನ್ನು ಬದಲಿಸಿ ’ಮಗನೇ’ ಎಂಬ ಸಂಬೋಧನೆಯನ್ನು ತಂದರೆ ಅಪ್ಪನೂ ಬಂದಂತೆಯೇ. ಬೈಗುಳದ toneಅಂತೂ ಪದ್ಯದುದ್ದಕ್ಕೂ ಇದ್ದೇಇದೆ.

     • ವೀಕ್ಷಿಸೆಲೆ ಮಗನೆ ಬಲ್ಪಿಂ
      ದ್ರಾಕ್ಷಾಫಲ…

    • 🙂

 14. ದಕ್ಷನೆನಿಸಿರ್ದವನಿಪಂ
  ಗೆ ಕ್ಷುದ್ರರೆ ಜನಿಸೆ,ಬೇಸರಂಬಡುತೆಂದರ್
  ಪ್ರಕ್ಷುಬ್ಧಮನದ ಜನಗಳ್
  “ದ್ರಾಕ್ಷಾಫಲಮೆಸೆದುದು ಮಾವಿನಮರದೊಳ್!”
  (ದಕ್ಷರಾಜನೊರ್ವಂಗೆ ಹುಟ್ಟಿದ ಮಕ್ಕಳನ್ನು ಕಂಡು ಜನರೆಂದದ್ದು)

 15. ಸಾಕ್ಷಿಯನಳಿಸುತೆ ದುರ್ಜನ-
  ಕಕ್ಷೀದಾರರ ಜಯಕ್ಕೆನುತಲೆ ವಕೀಲಂ
  ಪಕ್ಷಾಂತರದುಲಿ ಪೇಳ್ದಂ
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್

 16. ರಕ್ಷಿಪ ದೇವಂಗರ್ಪಿಸೆ,
  ದ್ರಾಕ್ಷಾಫಲಮೆಸೆದುದಲ್ತೆ,ಮಾವಿನ ಮರದೊಳ್ |
  ತಕ್ಷಕನುಳಿಯಿಂ ಕೆತ್ತಿದ
  ಲಕ್ಷಣಮಾಗಿರ್ಪ ಪೀಠದೊಳ್,ಹರಿದಿನದೊಳ್ ? ||

  ( ಮಾವಿನ ಮರದಲ್ಲಿ ಬಡಗಿಯು ಉಳಿಯಿಂದ ಕೆತ್ತಿದ ಲಕ್ಷಣವಾದ ಪೀಠದಲ್ಲಿ , ಹರಿದಿನದಲ್ಲಿ , ರಕ್ಷಿಸುವ ದೇವನಿಗೆ ಅರ್ಪಿಸಲು, ದ್ರಾಕ್ಷಾಫಲವು ಶೋಭಿಸಿತಲ್ಲವೆ ?)

  • ಮರಗೆಲಸದವನ ಸಹಾಯ ತೆಗೆದುಕೊಂಡ ಪೂರಣ ಚೆನ್ನಾಗಿದೆ 🙂

   • ಧನ್ಯವಾದ ಸೋಮಣ್ಣನವರೆ. 🙂

   • ಇವನಾರೋ ಕೈತುಂಬ ಕೆಲಸವಿರುವ ಬಡಗಿಯೇ ಇರಬೇಕು 🙂

 17. ದ್ರಾಕ್ಷಿಯವೊಲ್ ಪೊತ್ತೆಗಳೊಳ್
  ಲಕ್ಷಣದಿಂದಪ್ಪೆ ಮಾವು ತೂಂಗಿರೆ, ಮುಗ್ಢಂ
  ವೀಕ್ಷಿಸುತೆಂದಂ ಬೆರಗಿಂ
  “ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್”

 18. ಅಕ್ಷಿವಿನೋದವ ಬಾಲನ-
  ಪೇಕ್ಷಿಸಿ ವಿಕೃತೋಪನೇತ್ರಗೋಲಕದಿಂದಂ |
  ವೀಕ್ಷಿಸಲಾಕ್ಷಣ ರೂಕ್ಷ-
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್ ||

  • Fine verse.
   ಮಾತ್ರಂ ಫಲಮೇಂ? ಮೇಣೀ
   (ವಿ)ಚಿತ್ರಮದೋ ಕಾಣ್: ಪ್ರಸೂನ-ದಲ-ಕಾಂಡವು ಪೂ|
   ಧಾತ್ರಿಸಮಸ್ತಂ ನಿನ್ನುಪ-
   ನೇತ್ರದೆ ಕಾಂಬುದಲೆ ನೀಲದಿಂ ಕೇಯೂರಾ|| 🙂
   I have based this pratikriyApadya on the presumption that you have addressed the colour aspect of the mangoes, not their size.

   • ನನ್ನ ಹೆಸರನ್ನು ತುಂಡರಿಸಿದ್ದೇಕೆ?

   • ಹಾದಿರಂಪರೇ! ಎರಡನೆಯ ಪಾದದಲ್ಲಿ ಛಂದಸ್ಸಿನ ಗತಿ ಏನಾಯಿತು? 🙂

    • ಅಧೋಗತಿಯಾಗಿತ್ತು. ಸರಿಪಡಿಸಿದ್ದೇನೆ. ಧನ್ಯವಾದಗಳು.

  • ಬಹಳ ಚೆನ್ನಾದ ಭಾಷೆ ಕೇಯೂರರೆ, ಆದರೆ ವಿಕೃತೋಪನೇತ್ರಗೋಲಕದಿಂದಂ ವೀಕ್ಷಿಸಲು ಮಾವು ದ್ರಾಕ್ಷಿಯ ಹಾಗೆ ಕಾಣುತ್ತದೆಯೇ?

   • ಧನ್ಯವಾದ
    ಉಪನೇತ್ರಗೋಲಕವು ವಿಕೃತವೆಂದ ಮೇಲೆ
    ಮಾವು ದ್ರಾಕ್ಷಿಯಂತೆ ಕಾಣುವ ವಿಕಾರ ಅದರಲ್ಲಿದೆ ಎಂದು ಭಾವಿಸಿಕೊಳ್ಳಬೇಕಷ್ಟೆ.. Optics ಓದಿದ್ದರೆ ನಿಖರವಾಗಿ ಎಂತಹ ವಿಕಾರವೆಂದು ಹೇಳುತ್ತಿದ್ದೆ..‍..‍:-D 😀

    • ಇದಕ್ಕೆ ಫಲವಿಪರ್ಯಾಯವಿಕೃತಿ ಅಂತ ಹೆಸರು.

    • ಈ ಎಲ್ಲ ಸಮಸ್ಯೆಗಳಿರುವುದರಿಂದಲೇ ನನ್ನ (ಮೇಲಿನ) ಪ್ರತಿಕ್ರಿಯಾಪ್ರದ್ಯವನ್ನು ಅನುಮಾನವೊಂದರ ಮೇಲೆ ಆಧಾರವಾಗಿಸಿರುವುದು 🙂

 19. ಕ್ಷೀಣಗೊಳುತಿರಲ್ಕೀಗಳ್
  ದ್ರಾಕ್ಷಾಫಲಂ,ಎಸೆದುದಲ್ತೆ ಮಾವಿನಮರದೊಳ್
  ಕುಕ್ಷಿಗಳಂ ಭರಿಸುತುಮಿದೊ
  ಪಕ್ಷಿಪ್ರಾಣಿನರರಾ,ರುಚಿಯ ಚೂತಫಲಂ!

  ದ್ರಾಕ್ಷಾಫಲವು ಕಡಿಮೆಯಾಗುತ್ತಿದ್ದಂತೇ ಮಾವಿನಮರದಲ್ಲಿ ಹಣ್ಣುಗಳು ಕಾಣಿಸುತ್ತಿವೆಯಲ್ಲ)(ಒಂದನ್ನು ಹಿಂಬಾಲಿಸಿ,ಇನ್ನೊಂದು ಬೆಳ ಬಂದಿದೆ)

  • ಸಹೋದರಿ ಛಂದಸ್ಸು ತಪ್ಪಿದೆಯಲ್ಲವೇ

   • ’ಸಹೋದರಿ’ಯೇ ತಪ್ಪು. ಇನ್ನು…

    • ಸಹೋದರಿ ತಪ್ಪೇ?

     • ಹೌದು. ಸಹೋದರ ಅಷ್ಟೆ. Common gender.

     • ಅಯ್ಯೋ ರಾಮ ಹೌದೇ…

     • ಪಾಪ, ಸೋಮರು ‘ರಾಮಣ್ಣ’ ಎಂದು ಹೇಳಲೂ ಅಂಜಿ (ಇನ್ನು ಪ್ರಸಾದರು ಅಣ್ಣ ಪದಕ್ಕೂ ಗೂಬೆ ಕೂರಿಸುತ್ತಾರೆ ಎಂದು) ಬರೀ ‘ರಾಮ’ ಅಂತಿದಾರೆ 😉

     • 🙂

    • ಸರಿಪಡಿಸಿದೆ, ಧನ್ಯವಾದ 🙂

     • ಸೋದರಾ, ಸಹೋದರಾ ಮತ್ತು ಸೋದರಃ, ಸಹೋದರಃ ಎಂಬ ಎರಡು ರೂಪಗಳು (ಎರಡು ಲಿಂಗಗಳಲ್ಲಿ) ಇವೆ. ಸೋದರೀ ಮತ್ತು ಸಹೋದರೀ ಎಂಬ ರೂಪಗಳು ಅಸಾಧು ಎಂದು ಪಾಣಿನೀಯಮತ. ಆದರೆ ಕೆಲವು ಪ್ರಾಚೀನಪ್ರಯೋಗಗಳಲ್ಲಿ ಸೋದರೀ, ಸಹೋದರೀ ಎಂದೂ ಇವೆ. ಹೀಗಾಗಿ ಕನ್ನಡದ ಮಟ್ಟಿಗೆ ಸೋದರಿ ಹಾಗೂ ಸಹೋದರಿ ಎಂಬುವು ತಪ್ಪಾಗವು.

     • ಪಾಪ! ರಂಪರಿಂದಾಗಿ “ತಪ್ಪ್ಪು” ಕೂಡ ಅತಂತ್ರವಾಗಿತ್ತು! ಇದೀಗ ಸರಿಯಾದ ಬಾಧ್ಯಸ್ಥರು ದೊರೆತಂತಾಯ್ತು 🙂

     • ಹ್ಹಹ್ಹ

 20. ನಕ್ಷೆಯ ಗೈದಿರೆ ಕೆಂಪಿನ
  ಲಾಕ್ಷವು(resin) ಶಾಖೋಪಶಾಖೆಯೊಳು ಮಾಮರದೊಳ್|
  ವೀಕ್ಷಿಸುತೆಂದೆನು “ಶುಷ್ಕ-
  ದ್ರಾಕ್ಷಾಫಲ(raisin)ಮೆಸೆದುದಲ್ತೆ ಮಾವಿನಮರದೊಳ್”||
  People call me dictionary-hero. But if I had not resorted to one, I wouldn’t have composed a verse this week, and that would have been a ‘brake’ in my record!

 21. ಆಹಾ!! ಪದ್ಯಪಾನದ ಸೌಭಾಗ್ಯವೇ!!! ಮೊನ್ನೆಯ ಆಶುಕವಿತಾಗೋಷ್ಠಿಯಲ್ಲಿ ಮಿತ್ರ ಆರ್. ಶಂಕರ್ ಅವರಿತ್ತ ಈ ಸಮಸ್ಯೆಗೆ ಇಷ್ಟೊಂದು ಬಗೆಬಗೆಯಾದ ಪೂರಣಗಳು ಈ ಸ್ವಲ್ಪಕಾಲದಲ್ಲಿ ಬಂದಿವೆ!!! ಇದು ನಿಜಕ್ಕೂ ಮುದಾವಹ. ಸೋಮ ಮತ್ತು ಕಾಂಚನಾ ಅವರು ಸ್ಪರ್ಧೆಯಿಂದೆಂಬಂತೆ ಪುಂಖಾನುಪುಂಖವಾಗಿ ಪೂರಣಗಳನ್ನು ನೀಡಿದ್ದಾರೆ. ಇನ್ನು ಭಾಲ, ಶಕುಂತಲಾ, ಕೇಯೂರ, ನೀಲಕಂಠ ಮುಂತಾದ ಮಿತ್ರರ ಪೂರಣಗಳೂ ಸೊಗಸಾಗಿವೆ. ಎಲ್ಲಿಯೋ ಕೆಲವೊಂದು ಭಾಷಾಲೋಪಗಳಿರಬಹುದಾದರೂ ಉಳಿದಂತೆ ಎಲ್ಲರ ಭಾವ-ಬಂಧಗಳು ಚೆನ್ನಾಗಿವೆ. ಮತ್ತೊಮ್ಮೆ ಎಲ್ಲರಿಗೆ ಧನ್ಯವಾದ.

  • ಸರ್, ಪದ್ಯವನ್ನು ಭಾಷಾಲೋಪದ ಹೊರತಾಗಿ ಮೆಚ್ಚಿರುವುದಕ್ಕೆ ಧನ್ಯವಾದಗಳು .

   ಸರ್ ,ಒಂದು ಸಂದೇಹ — ಸಂಸ್ಕೃತದ ಅ -ಕಾರಂತ ಪುಲ್ಲಿಂಗಗಳು ಕನ್ನಡದಲ್ಲಿ ಅ -ಕಾರಾಂತವಾಗಿಯೇ ಪ್ರಯೋಗದಲ್ಲಿರುವಾಗ ( ಉದಾ; – ರಾಮ- ರಾಮ; ಕೃಷ್ಣ- ಕೃಷ್ಣ) ”ರುದ್ರಾಕ್ಷ ” ಕನ್ನಡದಲ್ಲಿ ಯಾಕೆ ಇ-ಕಾರಂತವಾಗಿಯೇ(ರುದ್ರಾಕ್ಷಿ ಎಂದು) ಬಳಸಲ್ಪಡುತ್ತದೆ ?

 22. ಮೊನ್ನೆಯ ಆಶುಕವಿತಾಗೋಷ್ಠಿಯಲ್ಲಿ ನಾನು ಪೂರಯ್ಸಿದ ಬಗೆ ಹೀಗಿದೆ:
  ವೀಕ್ಷಾಸಂನಿಭಸುಂದರ-
  ದೀಕ್ಷಾಮಂತ್ರೋಪಮಾನಗುಂಜಾಮಯಮೀ|
  ಪ್ರೇಕ್ಷಾಸ್ಪದಾಳಿಕುಲಮೇ
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರನೊಳ್||
  (ಇದು ಆಲಂಕಾರಿಕಪದ್ಯ. ಮಾವಿನ ಹೂವಿಗೆ ಮುತ್ತಿದ ಕರಿದುಂಬಿಗಳೇ ದ್ರಾಕ್ಷಾಫಲದಂತೆ ತೋರಿದುವೆಂಬುದಾಗಿ ಕಲ್ಪನೆ)

  • ಅಂದೇ ನನ್ನ ಸದಾಸ್ವಾದವನ್ನು ವ್ಯಕ್ತಪಡಿಸಿದ್ದೆ ಮಾನ್ಯರೆ 🙂

  • ಆಹಾ, ಎಂಥ ರಮ್ಯವಾದ ಕಲ್ಪನೆ 🙂 ಅದರಲ್ಲೂ ಶಬ್ದಾವಳಿಯ ಸಾರವಾದ ಪ್ರಣವದಂತೆ ಹೊಮ್ಮಿದ ದೀಕ್ಷಾಮಂತ್ರೋಪಮಾನಗುಂಜಾವಳಿಯ ಕಲ್ಪನೆ!!!

  • ಆಹಾ… ಅತ್ಯದ್ಭುತ ಕಲ್ಪನೆಯ ಪೂರಣ ಗಣೇಶ್ ಸರ್ !! (ಹಿಂದಿನ ಚಿತ್ರಕ್ಕೆಪದ್ಯದ ಗುಂಗಿನಲ್ಲಿದ್ದರೂ ಈ ಕಲ್ಪನೆ ಹೊಳೆದಿರಲಿಲ್ಲ !!)

  • ಸಾಕ್ಷಾತ್ ವಾಣಿಯ ಸೊಬಗಂ
   ವೀಕ್ಷಿಸಿದವೊಲಾಯ್ತು, ಕಾವ್ಯಮನರಿತು ಸುಖಿಸಲ್|
   ಸಾಕ್ಷರರೆಲ್ಲರ್ಗೀ ಸ-
   ಲ್ಲಕ್ಷಣದಿಂದೊರೆಯಲಪ್ಪುದೇಂ ಕಲ್ಪಿಸುತುಂ ? ||

   • ಪದ್ಯವನ್ನು ಮೆಚ್ಚಿದ ಎಲ್ಲ ಸಹಪದ್ಯಪಾನಿಗಳಿಗೂ ವಂದನೆಗಳು.

   • ಸರಿಪೇಳಿಹೆಯೌ ಕುಂತಲೆ,
    ಸರಸತಿಯೆಂತೊ ಸೊಬಗಂ ವಡೆದುದಿಂತೆಯೆ ಕೇಳ್|
    ಪುರುಷಸರಸ್ವತಿಯೀ ಪರಿ-
    ಪರಿಯಿಂದೆಡವಿಡದೆ ತೀಡೆ ರೂಪಮನವಳಾ||

    • ಹೌದು ರಂಪಣ್ಣನವರೆ.

  • ಬಹಳ ಚೆನ್ನಾದ ಪೂರಣ ಸರ್

 23. ಈ ಸಮಸ್ಯೆಯ ಸಂಸ್ಕೃತರೂಪವೂ ಮೊನ್ನೆಯ ಗೋಷ್ಠಿಯಲ್ಲಿ ಒಡ್ಡಲ್ಪಟ್ಟಾಗ ನಾನು ಮಾಡಿದ ಪೂರಣದ್ವಯವಿಂತಿದೆ:

  ಲಂಕಾಪುರೀದಹನಸಂಜ್ಞಿತಯಕ್ಷಗಾನೇ
  ವಾತಾತ್ಮಜೋ ಧರಣಿಜಾಗ್ರಶಿಖಾಧಿರೂಢಃ|
  ವೈನೋದಿಕಾಯ ಕಲಿತೇ ಕಿಲ ರಂಗಸಜ್ಜೇ
  ದ್ರಾಕ್ಷಾಫಲಂ ನವರಸಾಲತರೌ ಚಕಾಸ್ತಿ||

  ವಾಸಂತವಾಸರಮನೋಹರವೃಷ್ಟಿಮೂಲ-
  ನೀಲಾಂಬುದಾವಲಿರಿಯಂ ವಿಲಲಾಸ ಮಧ್ಯೇ|
  ಧಾರಾಂತರೇ ತದಿಹ ಮುಗ್ಧಜನೈರ್ವ್ಯಲೋಕಿ
  ದ್ರಾಕ್ಷಾಫಲಂ ನವರಸಾಲತರೌ ಚಕಾಸ್ತಿ||

  • ಸರ್, ಧರಣಿಜಾಗ್ರಶಿಖಾಧಿರೂಢಃ ಅಂದ್ರೆ ಏನರ್ಥ, ಪೂರ್ಣವಾಗಿ ಮೊದಲನೇಯ ಪದ್ಯ ಅರ್ಥವಾಗಲಿಲ್ಲ.
   ಎರಡನೇಯ ಪದ್ಯ ಬಹಳ ಸೊಗಸಾಗಿದೆ

   • ಧರಣಿಜ=ಭೂರುಹ=ಮರ.
    ಯಕ್ಷಗಾನದ ವೇದಿಯ ಮೇಲೆ ಮಾಮರವೊಂದರ ಕೊಂಬೆಗಳಿಗೆ ಸಿಕ್ಕಿಸಿರುವ ದ್ರಾಕ್ಷಿ ಇತ್ಯಾದಿ…
    ಆಶುಕವಿತಾಗೋಷ್ಠಿಗೆ ಚಕ್ಕರ್ ಹೊಡೆಯದಿದ್ದರೆ ಈ ಸಮಸ್ಯೆಗಳಿರುವುದಿಲ್ಲ ಸೋಮ. ನನ್ನನ್ನು ನೋಡಿ ಕಲಿಯಿರಿ 😉

    • ಧನ್ಯವಾದ ಪ್ರಸಾದು ಪದ್ಯ ಚೆನ್ನಾಗಿದೆ, ಆಶುಗೋಷ್ಠಿಗೆ ಚಕ್ಕರ್ ಹೊಡೆದದ್ರಿಂದ ಇದೇ ಸಮಸ್ಯೆಗೆ ಇನ್ನು ಎಷ್ಟೋ ಪೂರಣಗಳಿಂದ ವಂಚಿತನಾಗಿದಗದೇನೆ… ಈ ವಾರ ಇಬ್ಬರು ಸಿಗೋಣ

     • hhahha

     • ಹಿಂದೆ ಯಕ್ಷಗಾನಪ್ರದರ್ಶನಗಳಲ್ಲಿ ಹನುಮಂತನು ಹತ್ತಿ ಕುಳಿತ ಮರಕ್ಕೆ (ಅದು ಯಾವುದೇ ಜಾತಿಯದ್ದಾದರೂ ಆಗಲಿ) ಬಗೆಬಗೆಯ ಹಣ್ಣು-ಕಾಯಿಗಳನ್ನು ಕಟ್ಟಿ ಅಲಂಕರಿಸುತ್ತಿದ್ದ ವಿಚಿತ್ರವಿನೋದದ ವಾಡಿಕೆ ಇದ್ದಿತು. ಆ ಹಣ್ಣು-ಕಾಯಿ-ಎಳನೀರುಗಳನ್ನೆಲ್ಲ ಹನುಮಂತನು (ವೇಷಧಾರಿ) ರಂಗದ ಮೇಲೆಯೇ ಕಬಳಿಸುತ್ತಿದ್ದುದೂ ಉಂಟು. ಆ ಸಂಗತಿಯನ್ನು ಆಧರಿಸಿದ ಪೂರಣವಿಲ್ಲಿದೆ.

     • ಗಣೇಶ್ ಸರ್, ಈಗ ಇನ್ನೂ ಚೆನ್ನಾಗಿ ಪೂರಣ ಮನದಟ್ಟಾಯಿತು… 🙂

 24. ದಕ್ಷತೆಯಿಂದೆಳೆಮಕ್ಕಳ್
  ಪಕ್ಷಿಯವೊಲ್ ಚಿಮ್ಮುತಾಡೆ ಮರಕೋತಿಯ ಕಾಣ್|
  ಅಕ್ಷಿಗಳಣುಗರ ಪಾಂಗೇಂ!
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್||

  • ತುಂಬ ಒಳ್ಳೆಯ ಕಲ್ಪನೆ ಸೊಗಸಾದ ಭಾಷೆಯಲ್ಲಿ ಮೂಡಿದೆ. ಪಕ್ಷಿಯವೊಲ್ ಎಂದರೆ ಮತ್ತೂ ಹಳಗನ್ನಡದ ಹದ ಹೊಳೆಯುತ್ತದೆ.

  • ಪ್ರಸಾದು ಚೆನ್ನಾಗಿದೆ

  • ತುಂಬಾ ಸುಂದರ ಕಲ್ಪನೆಯ ಪೂರಣ ಪ್ರಸಾದ್ ಸರ್, ಅದರಲ್ಲೂ ಮಕ್ಕಳಿಗೆ ಮರಕೋತಿಯಾಡಲು, ಹೆಚ್ಚು ಎತ್ತರವಿರದ ರೆಂಬೆಕೊಂಬೆಗಳಿಂದ ಕೂಡಿರುವ ಮಾವಿನಮರ ಪ್ರಶಸ್ತ ಅಲ್ಲವೇ ?

   • ಪದ್ಯವನ್ನು ಬರೆಯುವಾಗ ಮಾಮರದ ಈ ವೈಶಿಷ್ಟ್ಯವು ನನ್ನ ಮನಸ್ಸಿನಲ್ಲಿರಲಿಲ್ಲ. ವ್ಯಾಖ್ಯಾನಕಾರ್ತಿಯು ಈಗ ಮಾಡಿರುವ value addition ಇದು. ಮಲ್ಲಿನಾಥೋಪಮರಿಗೆ ನಮೋನಮಃ.

 25. ದಕ್ಷನವನೋರ್ವ ರೈತಾ-
  ಪಿ, ಕ್ಷೇತ್ರದ ಫಲಮನೀಕ್ಷಿಸಿರೆ ಸತಿಯೊಡನಂ-
  ದಾ ಕ್ಷಣ ಮುದಗೊಂಡುಲಿದನ್
  ದ್ರಾಕ್ಷಾ.., ಫಲಮೆಸೆದುದಲ್ತೆ ಮಾವಿನಮರದೊಳ್ ||

  ಹೊಲದಲ್ಲಿ ಸುತ್ತುತ್ತಿರುವ ವೇಳೆ, ರೈತನೊಬ್ಬ ತನ್ನ ಪತ್ನಿ ದ್ರಾ(ದಾ)ಕ್ಷಾಯಿಣಿಗೆ, ಫಲಭರಿತ ಮಾವಿನ ಮರವನ್ನು ತೋರಿ ಪ್ರೀತಿಯಿಂದ ಈ ರೀತಿ ಹೇಳಿರಬಹುದೇ ?!!

  • ಕಲ್ಪನೆಯೇನೋ ಚೆನ್ನ. ಆದರೆ ಅದಷ್ಟೂ ಪೂರಣದಲ್ಲಿಯೇ ಸ್ವಯಂಪೂರ್ಣವಾಗಿ ವ್ಯಕ್ತವಾಗುತ್ತಿಲ್ಲ. ಜೊತೆಗೆ ರೈತಾಪಿ ಎಂಬ ಶಬ್ದವು ಸಾಧುವಲ್ಲ. ಅದು ಬರಿಯ ಲೋಕರೂಢಿಯ ಮಾತು ಮಾತ್ರ.

   • @ ಶ್ರೀ ರಾಗ: ರೈತಾಪಿ= ರೈತನಿಗೆ ತಾಪವನ್ನುಂಟುಮಾಡುವವಳು= ಅವನ ಹೆಂಡತಿ 😉
    @ ಶ್ರೀಮತಿ ಉಷಾ: ’ದ್ರಾಕ್ಷಾಯಿಣಿ’ಯಿಂದ ’ದಾ’ವನ್ನು ಬೇರ್ಪಡಿಸಲಾಗದು; ’ರಾ’ವನ್ನು ಬೇರ್ಪಡಿಸಬಹುದು (ರಾಕ್ಷಾಯಿಣಿ) 😀

    • ರೈ (ಐಶ್ವರ್ಯ ಇತ್ಯಾದಿ) ಇವರಿಗೆ ತಾಪವನ್ನುಂಟು ಮಾಡುವವ ಅಂದರೆ ಹೆಚ್ಚು ಸೂಕ್ತ ಅಲ್ಲವೇ?

  • ಪ್ರಾಸಕ್ಕೋಸ್ಕರ ‘ಅಂದು ಆಕ್ಷಣ’ ಅನ್ನೋಣವೆಂದರೆ, ಮುಂದಿನಸಾಲಲ್ಲಿ ದ್ರಾಕ್ಷಾಯಣಿಯೆಂದೇ ಮಾಡಿಬಿಟ್ಟಿದ್ದೀರಲ್ಲ ಉಷಾ ಅವರೇ 🙂

  • ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು.
   “ದಾಕ್ಷಾಯಿಣಿ” ರೈತಾಪಿ ಕುಟುಂಬದಲ್ಲಿ “ದ್ರಾಕ್ಷಾಯಿಣಿ”ಯಾಗಿಹಳು !! ಅವಳನ್ನು ರೈತಾಪಿಯ ಬಾಯಲ್ಲಿ ಪ್ರೀತಿಯಿಂದ “ದ್ರಾಕ್ಷಾ..” ಎಂದು ಕರೆಸಿದ ಪೂರಣ. ಅದು ಪುಲ್ಲಿಂಗ ವಾದೀತು “ದ್ರಾಕ್ಷೀ..”ಆಗಬೇಕಿತ್ತು ಎಂಬ ಆಕ್ಷೇಪ ಬರಬಹುದೆಂದು ನೀರೀಕ್ಷಿಸಿದ್ದು !! ಪದ್ಯವನ್ನು ಸವರಿಸಲು ಪ್ರಯತಿಸಿದ್ದೇನೆ.

   ದಕ್ಷನವನೋರ್ವ ರೈತ,
   ಸ್ವಕ್ಷೇತ್ರದೆ ಫಲಮನೀಕ್ಷಿಸುತವಂ ಪತ್ನಿ
   ದ್ರಾಕ್ಷಾಯಿಣಿಗಿಂತೊರೆದನ್
   ದ್ರಾಕ್ಷಾ.., ಫಲಮೆಸೆದುದಲ್ತೆ ಮಾವಿನಮರದೊಳ್ ||

 26. Just another:
  ಈಕ್ಷಿಸಲಷ್ಠಿಯ(grape) ಲತೆಯೊಳ್
  ದ್ರಾಕ್ಷಾಫಲಮೆಸೆದುದಲ್ತೆ. ಮಾವಿನ ಮರದೊಳ್|
  ನಿಕ್ಷಿಪ್ತವಿರೆ ರಸಾಲಂ
  ಪಕ್ಷಿಯದೈ ಪ್ರಥಮ ಪಕ್ವಫಲ (ಆ)ಮೇಲೆನಗಂ||

 27. ಪಕ್ಷದೊಳೊಂದಿನ ಚಿತ್ರದ
  ಕಕ್ಷೆಗೆ ಪೋಗುತೆ ಅನಿಚ್ಚೆಯಿ೦ ಬಾಲ೦ಗಾ I
  ಶಿಕ್ಷಕನೊರೆದಂ ”ಚೆಲುವೇ೦!
  ದ್ರಾಕ್ಷಾಫಲಮೆಸುದಲ್ತೆ ಮಾವಿನ ಮರದೊಳ್ II

  ಇಚ್ಛೆಯಿಲ್ಲದೆ ಚಿತ್ರದ ಕ್ಲಾಸಿಗೆ ಹೋಗುತ್ತಿದ್ದ ಬಾಲಕನ ಚಿತ್ರವನ್ನು ನೋಡಿ ಅಧ್ಯಾಪಕನು ”ಆಹಾ ! ಏನು ಚೆನ್ನಾಗಿದೆ ಕಣಯ್ಯಾ ನಿನ್ನ ಚಿತ್ರ ! ಮಾವಿನ ಕಾಯಿಗಳು ದ್ರಾಕ್ಷೆಯ ಹಣ್ಣಿನಂತೆ ಕಾಣುತ್ತಿವೆಯಲ್ಲಾ” ಎಂದರು .

  • ತುಂಬ ಚೆನ್ನಾದ ಕಲ್ಪನೆ. ಪಕ್ಷದೊಳ್ ಒಂದು ದಿನ – ಪಕ್ಷದೊಳೊರ್ದಿನ ಸರಿಯಾದೀತು. ಎರಡನೇ ಸಾಲಲ್ಲಿ ವಿಸಂಧಿ ಆಗಿದೆ. ಕಕ್ಷೆಗನಿಚ್ಛೆಯಿನೆ ಪೋಗುವತಿತರಲಂಗಾ ಎಂದೇನಾದರೂ ಮಾಡಬಹುದು.

  • 🙂 chennagide

  • ನಿಮ್ಮ ತಿದ್ದುಪಡಿ ಚೆನ್ನಾಗಿದೆ . ಧನ್ಯವಾದಗಳು

   ಪಕ್ಷದೊಳೊರ್ದಿನ ಚಿತ್ರದ
   ಕಕ್ಷೆಗನಿಚ್ಛೆಯಿನೆ ಪೋಗುವತಿತರಲಂಗಾ I
   ಶಿಕ್ಷಕನೊರೆದಂ ”ಚೆಲುವೇ೦!
   ದ್ರಾಕ್ಷಾಫಲಮೆಸುದಲ್ತೆ ಮಾವಿನ ಮರದೊಳ್” II

   • ಭಾಲರೆ, “ಪೋಗುವ” ಎಂಬುದನ್ನು “ಪೋಪ” ಎಂದಾಗ ಹೆಚ್ಚು ಸರಿಯಾಗಬಹುದು. ಹಾಗೆಯೇ, “ಒರ್ದಿನ” ಎಂಬುದು ಅರಿಸಮಾಸವಾಗುವುದೆಂಬ ಸಂದೇಹವಿದೆ.ಅಲ್ಲದೆ, “ಒರ್ದಿನ ಚಿತ್ರ” – ಎಂಬುದೂ ಸರಿಯಾಗಲಾರದು. “ದಿನ”ವು ಪ್ರತ್ಯಯರಹಿತವಾಗಿರುವುದು ಸರಿಯೆನಿಸುವುದಿಲ್ಲ. ಹೀಗಾಗಿ,

    ಪಕ್ಷದೊಳಂದಿನ ಚಿತ್ರದ
    ಕಕ್ಷೆಗನಿಚ್ಛೆಯಿನೆ ಪೋಪ ತರಲಂಗಾಗಳ್ |

    ಎಂಬುದಾಗಿ ಮೊದಲೆರಡು ಪಾದಗಳನ್ನು ಸವರಬಹುದು.

 28. ಲಕ್ಷಣವರಿಯದವಂ ಗಡ
  ವೃಕ್ಷಂಗಳ ಮೇಣ್ ಫಲಂಗಳದ, ತಾಂ ತಿಳಿದನ್
  ವೀಕ್ಷಿಸೆ ನೇರಳೆ ಮರವಂ
  “ದ್ರಾಕ್ಷಾಫಲಮೆಸುದಲ್ತೆ ಮಾವಿನ ಮರದೊಳ್” II

  ಗಿಡಮರಹಣ್ಣುಗಳ ಬಗೆಗೆ ತಿಳಿಯದವ – (ಕಪ್ಪು) ನೇರಳೆ ಹಣ್ಣನ್ನು ದ್ರಾಕ್ಷಿ ಹಣ್ನೆಂದು / (ನೀಳ ಎಲೆಗಳ) ನೇರಳೆ ಮರವನ್ನು ಮಾವಿನ ಮರವೆಂದು ತಪ್ಪಾಗಿ ಗುರುತಿಸಿದ್ದನೇ ?!!

  • ಆಹಾ, ತುಂಬ ಸುಂದರವಾಗಿದೆ. ದ್ರಾಕ್ಷಿ, ಮಾವುಗಳ ಮಧ್ಯೆ ನೇರಳೆಯನ್ನೂ ತಂದು ಮತ್ತೂ ರೋಚಕವಾಗಿಸಿದ್ದೀರಿ 🙂 ಮರಮಂ ಆಗಬೇಕು.

   • ಮರನಂ ಎಂದರೆ ಮತ್ತೂ ಅಚ್ಚಹಳಗನ್ನಡವಾದೀತು.

  • ಕಲ್ಪನೆ ಚೆನ್ನಾಗಿದೆ. ರಚನೆಯು ಸ್ಪಷ್ಟವಾಗಿದೆ.

  • ಲಕ್ಷಣವರಿಯದವನ ಲಕ್ಷಣವನ್ನು ಚೆನ್ನಾಗಿ ಬಿಂಬಿಸಿದ್ದೀರಿ 🙂

  • ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್, ನೀಲಕಂಠ, ಸೋಮ

 29. ಈಕ್ಷಿಸಲೊಡವಾಳ್ತೆಯನೀ
  ದ್ರಾಕ್ಷಾಫಲಂ,ಎಸೆದುದಲ್ತೆ ಮಾವಿನಮರದೊಳ್
  ದಕ್ಷತೆಯಿಂದಾಮ್ರಂ, ಜನ
  ರಕ್ಷಣೆಯಂ ಕೊಂಡ ನಾಯಕನವೊಲ್ ಸೊಬಗಿಂ!!

  • ಸೊಗಸಾದ ಪೂರಣ. ಆದರೆ ವ್ಯಾಕರಣದ ಕಟ್ಟುನಿಟ್ಟಿನಿಂದ ಕಂಡಾಗ ಸಹಬಾಳ್ತೆ ಅಥವಾ ಸಹಬಾಳ್ವೆ ಎಂಬುದು ಅರಿಸಮಾಸ. ಇದನ್ನು ಸಹಜೀವನ ಎಂದೋ ಒಡವಾಳ್ತೆ ಎಂದೋ ಸವರಿಸಬಹುದು.

   • ಮತ್ತೆ ಈ ಅರಿಯ ಬಗ್ಗೆ ವಿಶೇಷ ನಿಗಾವಹಿಸುವೆ,ಧನ್ಯವಾದಗಳು.

    • ಹಿರಣ್ಯಕಶಪುವಿನ ’ಅರಿ’ಯ ಕೃಪೆ ಸದಾ ನಿಮ್ಮಮೇಲಿರಲಿ 🙂

  • ಚೆನ್ನಾಗಿದೆ

 30. ನಕ್ಷತ್ರಂಗಳವೋಲೇ
  ಪಕ್ಷದೊಳಿರ್ಪಂಥ, ಪಸಿರ, ಗೊಂಚಲ ಮಿಡಿಯಂ|
  ವೀಕ್ಷಿಸೆ ದೂರದ ತಾವಿಂ,
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರನೊಳ್ ? ||

  [ನಕ್ಷತ್ರಗಳಂತೆಯೇ ಗುಂಪಿನಲ್ಲಿರುವಂಥ , ಗೊಂಚಲಿನ ಹಸಿರು ಬಣ್ಣದ ( ಮಾವಿನ)ಮಿಡಿಯನ್ನು ದೂರದ ಸ್ಥಳದಿಂದ ನೋಡಲು, (ಹಸಿರಿನ)ದ್ರಾಕ್ಷಾಫಲವು ಮಾವಿನಮರದಲ್ಲಿ ಶೋಭಿಸಿತಲ್ಲವೆ ?]

  • ನವಕಲ್ಪನೆಯಂ ವಾಗ-
   ರ್ಥವಿಲಾಸಂ ಕೂಡಿ ತೀಡಿ ಮೋಡಿಗೊಳಿಪವೊಲ್|
   ಸ್ತವನೀಯಮಾಗಿ ಮಾಗಿಸಿ-
   ದ ವಿಶೇಷಕ್ಕೆಮ್ಮ ನಮನಮಕ್ಕೆ ಸಹಜೆಯೇ!! (ಸಹೋದರಿಯೇ!)

   • ಕವಿತೆಯನಾಂ ರಚಿಸಲದಂ
    ಕವಿವರಸೋದರರೆ, ಮೆಚ್ಚಿರಲ್ ನೀಂ, ನಮಿಪೆಂ |
    ನವಚೇತನಮಂ ನೀಡಲ್
    ಸವಿಯ ಪದದಿನೊರೆಯೆ,ವಂದನೆಗಳಂ ಸಲಿಪೆಂ ||

  • ಬಹಳ ಚೆನ್ನಾಗಿದೆ

   • ಧನ್ಯವಾದಗಳು ಸೋಮರೆ.

 31. ಶ್ರೀರಾಮನ ಸಖ್ಯಮಾಡಿಕೊಂಡ ಮೇಲೆ , ಸುಗ್ರೀವ ಮೊದಲಸಲ ವಾಲಿಯೊಂದಿಗೆ ಸೋತಾಗ —

  ದಕ್ಷನೃಪ ಸಂಗವಿರಲೇ೦?
  ರಕ್ಷಿಸದಿರುವೆಯಲ ದಾಶರಥಿಯಿಂದೆನಗಂ I
  ಅಕ್ಷರಶ:ನಿಜಮಿದು ಪುಳಿ
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನಮರದೊಳ್II

  ಇಲ್ಲಿ ದ್ರಾಕ್ಷೆ ಮತ್ತು ಮಾವು ಕಾಲ್ಪನಿಕ . ಶ್ರೇಷ್ಟ ರಾಜವ೦ಶದವನೆ೦ದು (ಮಾವಿನ ಮರದಂತೆ )ಶ್ರೀರಾಮನ ಸ್ನೇಹ ಮಾಡಿದರೆ ಅದು ಹುಳಿ ದ್ರಾಕ್ಷೆಯನ್ನು ತಿಂದ೦ತಾಯಿತು ಎಂಬ ಅರ್ಥದಲ್ಲಿ ,ಶ್ರೀ ರಾಮನಿಗೆ ಸುಗ್ರೀವನ ಮೂದಲಿಕೆಯ ಮಾತು

 32. ದ್ರಾಕ್ಷಿಯ ಕೀಲಿಯ ಗೊಂಚಂ
  ತಕ್ಷಣ ಬಾಯೊಳಿಡೆ, ಜನಕನೆಸೆಯಲ್ ಮರಕಂ
  ಪಕ್ಷಿಯು ಕಂಡುದ್ಗರಿಸಿತು
  ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್ !
  (ದ್ರಾಕ್ಷಿಯ ಮಾದರಿಯ ಕೀಲಿಯ ಗೊಂಚಲು ಮರಕ್ಕೆ ತೂಗುತ್ತಿರುವ ಸಂದರ್ಭ)

  • ಕಲ್ಪನೆ ತುಂಬ ಚೆನ್ನಾಗಿದೆ. ಆದರೆ ಅದು ಪದ್ಯದಲ್ಲಿ ಪೂರ್ಣವಾಗಿ ಸ್ಫುಟವಾಗಿಲ್ಲ. ಭಾಷೆಯಲ್ಲಿಯೂ ಸ್ವಲ್ಪ ಎಚ್ಚರ ಬೇಕು.

 33. ಈಕ್ಷಿಸಿ ಸುಲಭಾದಿಪ್ರಾ-
  -ಸಾಕ್ಷರಮಿರುವಾ ಸಮಸ್ಯೆ ಕೇಳುವೊಡನೆ ನಿ-
  -ರ್ದಾಕ್ಷಿಣ್ಯದಿ ನೀಡಿದರೈ
  ‘ದ್ರಾಕ್ಷಾಫಲಮೆಸೆದುದಲ್ತೆ ಮಾವಿನ ಮರದೊಳ್ ‘
  (ಸುಲಭದ ಪ್ರಾಸಾಕ್ಷರ ಇರುವ ಸಮಸ್ಯೆ ನೀಡಿರೆಂದು ಕೇಳುವಷ್ಟರಲ್ಲಿ ಈ ಸಮಸ್ಯಾ ಪಾದ ಕೊಟ್ಟುಬಿಟ್ಟಿರಲ್ಲ….)

 34. ಲಕ್ಷಣದೆ ಪೋಲ್ವೊಡೆ ಪಸರಿ
  ತಕ್ಷಣಕಂ ಮಾವಮಿಡಿಯದಂಡಾಕಾರಂ ।
  ಸಾಕ್ಷಾತ್ ಹರಿದ್ವರ್ಣದ
  ದ್ರಾಕ್ಷಾಫಲಮೆಸುದಲ್ತೆ ಮಾವಿನ ಮರದೊಳ್ II

  ತಕ್ಷಣಕ್ಕೆ, ಅಂಡಾಕಾರ ಹೊತ್ತ ಮಿಡಿಮಾವ ಗೊಂಚಲು, (ಶಕುಂತಲಾಗೆ ಕಂಡಂತೆ) ಹಸಿರುದ್ರಾಕ್ಷಿಹಣ್ಣಿನಂತೆ ಕಂಡ ಕಲ್ಪನೆಯಲ್ಲಿ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)