Jul 012012
 

ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ” ಎಂಬುದು ಕಂದ ಪದ್ಯದ ಕೊನೆಯ (ಅಥವಾ ಎರಡನೆ) ಸಾಲು.

ಪದ್ಯದ ಉಳಿದ ಸಾಲುಗಳನ್ನು ಪೂರಣಿಸಿ, ಈ ಸಾಲಿನ ಅನರ್ಥ ತೊಡೆಯಿರಿ.

Mar 182012
 

ಈ ಕಂದ ಪದ್ಯದ ಪಾದಕ್ಕೆ, ಉಳಿದ ಮೂರು ಪಾದಗಳನ್ನು  (ಸಾಲುಗಳನ್ನು) ಪೂರಣಿಸಿ ಸಮಸ್ಯೆಯನ್ನು ಬಗೆಹರಿಸಿರಿ ::

ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್

Oct 252011
 

ದೀಪಾವಳಿಯ ಕಾರಣ ಕೆಲವಾದರೂ ಹಬ್ಬದ ಬಗೆಗಿನ ಪದ್ಯಗಳಿರಲೆಂದು ಅಪೇಕ್ಷೆ. ಈ ನೆವದಲ್ಲಿ  ಹೊಸ ಛಂದಸ್ಸುಗಳ ಅಥವಾ ವಿವಿಧಚ್ಛಂದಸ್ಸುಗಳ ಬಳಕೆಯಾಗಲೆಂಬ ಬಯಕೆಯೂ ಇದೆ. ಮೊದಲ ಹೆಜ್ಜೆಯಾಗಿ ನನ್ನ ಒಂದೆರೆಡು ಪದ್ಯಗಳು:

ದ್ರುತವಿಲಂಬಿತವೃತ್ತ||

ನರಕದಾನವಕಾಲದವಾನಲ-
ಕ್ಕುರುವಿನೀಲಪಯೋಧರವಾಗುತುಂ |
ಮೆರೆದ ಕೃಷ್ಣನ ಕಂಗಳ ಮಂಗಳ-
ಸ್ಫುರಣದೀಪಿಕೆಗಳ್  ಶುಭಕೊಪ್ಪುಗುಂ ||

ರಥೋದ್ಧತಾವೃತ್ತ||

ದೇವಗಂಗೆ ಧವಳಧ್ವಜೋಪಮಂ
ತೀವಿರಲ್ ನಭದೆ ವಾಮನಾಂಘ್ರಿಯೊಳ್
ಜೀವಿಗಳ್ಗೆ ಸುಖಶಾಂತಿಯೀವವೊಲ್
ಭಾವಿಕಂ ಗಡಿದು ಪರ್ಬಮೊಪ್ಪುಗುಂ||

ಕಂದ||

ಕತ್ತಲೆಸುತ್ತುಂ ಜಗಮಿದು
ಕತ್ತಲೆ ಸುತ್ತುಂ ಕಡಂಗಿದುದೆನುತ್ತುಂ ಬೇ-
ಸತ್ತಿರೆ ಸಂಪದನಳಿಸುತೆ,
ಸತ್ತಿರೆ ಸಂಪದಮದಂ ಬರ್ದುಂಕಿಪುದೊಳಿತಯ್||

(ಕತ್ತನ್ನು ಅಲೆಸುತ್ತ ಈ ಜಗತ್ತಿನ ಸುತ್ತಲೂ ಕತ್ತಲೆಯೇ ನೆಲಸಿದೆಯೆಂದು ಬೇಸತ್ತಿರುವ  ( ಮನಸ್ಸಿನ) ಸಂಪನ್ನು (strike/bundh) ಅಳಿಸಿ ಸತ್ತಿರುವ ಸಂಪದವನ್ನು ಬದುಕಿಸುವ ಬಗೆಯೇ ಸರಿ.)
ಇದು ಒಂದು ರೀತಿಯ ಚಿತ್ರಕವಿತೆ. ಇದಕ್ಕೆ ಯಮಕಾಲಂಕಾರವೆಂದು ಹೆಸರು.   ಪದಗಳು ಪುನರುಕ್ತವಾದಂತೆ ತೋರಿದರೂ ಅರ್ಥ ಬೇರೆಯೇ ಆಗಿರುವುದು ಇದರ ಚಮತ್ಕಾರ. ಇವೆಲ್ಲ ರಸಪ್ರಧಾನವಲ್ಲ. ಬರಿಯ ಕಸರತ್ತಿನ ಸಂಗತಿಗಳು. ಇಲ್ಲಿ ಸುಮ್ಮನೆ ಕಂದವನ್ನು ಸ್ವಲ್ಪ ಕಗ್ಗಂಟಾಗಿಸೋಣವೆಂದು ಸ್ವಲ್ಪ ಯತ್ನಿಸಿದ್ದೇನಷ್ಟೆ. ದೀಪಾವಳಿಯ ಪಟಾಕಿ ಗಲಾಟೆಯಂತೆಯೇ ಇದೂ ಹೆಚ್ಚು ಸಹನೀಯವಲ್ಲ:-

ಚೌಪದಿ||

ಸಾಲು ದೀಪಗಳಾಗಿ ಭರವಸೆಯ ತಾಳಗಳು
ಕಾಲ ಕುಣಿಸುತ್ತಿರಲು ಭಾವರಾಗ
ಮಾಲೆಯೊಡವರಿದು ಜಯಶೀಲೆ ಸಿರಿ ಬರುವಂತೆ
ಜಾಲಿಸಲಿ ನಿಮ್ಮ ಮನಗಳನು ಬೇಗ||

ಭಾಮಿನೀಷಟ್ಪದಿ||

ಶಾರದಾಂಬರದಲ್ಲಿಯೇ ಹಿಂ-
ಗಾರುಮಳೆ, ಕಾರಿರುಳಿನಲ್ಲಿಯೆ
ತೋರುವೀ ಸಿರಿಯೊಸಗೆ, ಸದ್ದಿನ ದಿನದೊಳೇ ಮೌನ|
ಸಾರಲೀ ಸಂದೇಶವನು ಮೆಯ್-
ದೋರಲೀ  ಸಂಭಾವನೆಯನಭಿ-
ಸಾರಲೀಲಾಲಾಸ್ಯವಾಡಲಿ ಕಾವ್ಯವಧು ನಿಮ್ಮೊಳ್||

Oct 202011
 

ಕಂದ ಛಂದಸ್ಸಿನ ಸಮಸ್ಯಾಪದ್ಯದ ನಾಲ್ಕನೆಯ ಸಾಲು ಹೀಗಿದೆ ::

ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

ಮೊದಲ ಮೂರು ಸಾಲುಗಳನ್ನು ಪೂರೈಸಿರಿ.

ವಿ.ಸೂ ::‌ ಈ ಸಮಸ್ಯೆಯು ಗಣೇಶರಿಂದ ಸಿಕ್ಕದ್ದು

Oct 112011
 

ಕಂದ ಛಂದಸ್ಸಿನ ಪದ್ಯದ ಕೊನೆಯ ಸಾಲು ಹೀಗಿದೆ ::

ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?
(ರಸಾಲ= ಮಾವು)

ಮೊದಲ ೩ ಸಾಲುಗಳನ್ನು ಪೂರೈಸಿರಿ

ಕಂದ ಪದ್ಯದ ಛಂದಸ್ಸಿನ ಸ್ವರೂಪ ಇಲ್ಲಿದೆ

ವಿ.ಸೂ :: ಇದು ಗಣೇಶರು ಕೊಟ್ಟ ಸಮಸ್ಯೆ

Oct 012011
 

ಹುಲ್ಲುಕಲ್ಲುಗಳೇನು? ಅದುಕೂಡ ಹೂರಣದಿ!
ಗುಲ್ಲನೆಬ್ಬಿಸದೆಯೇ ಬಿಡುವರೇನು?
ಬಲ್ಲಿದರೆ, ಸೊಲ್ಲನಡಗಿಸುವಿರೇ? – “ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು”

ಸ್ನೇಹಿತರೆ, ೩ನೆಯ ಸಾಲನ್ನೂ ಸ್ವಲ್ಪ ತಿಂದಿದ್ದೇನೆ. ೩ನೇ ಸಾಲು “ಹೂರಣದಿ” ಮುಗಿವಂತೆ, ೪ನೇ ಸಾಲು “ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಎಂಬುದಾಗಿ ಬರುವಂತೆ ಪರಿಹರಿಸಿ.

Sep 292011
 

ಅನುರೂಪದಾ ಪಂಚಮಾತ್ರೆಗಳ ಚೌಪದಿಯ –
ಲನುಭಾವದಿಂದೀ ಸಮಸ್ಯೆ ಬಿಡಿಸಿ |
ತನುವಿಶೇಷದೊಳಿರುವುದಶ್ಲೀಲತೆಯೆ ಭಾಸ

“ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ||

ಇದು ಸದ್ಯದಲ್ಲಿ ನಡೆದ ಅಷ್ಟಾವಧಾನದಲ್ಲಿ ಕೊಟ್ಟ ಸಮ್ಮಸ್ಯೆ.. ಅಶ್ಲೀಲದಂತೆ ತೋರುವ ಮೇಲಿನ ಸಾಲಿನ (ಕೊನೆಯ ಸಾಲು) ಹಿಂದಿನ ೩ ಸಾಲುಗಳನ್ನು ಪೂರೈಸಿರಿ.

ಪದ್ಯ ಓದುವ ಧಾಟಿ

Sep 142011
 

ಇದು ಗಣೇಶ ರವರು ಕೊಟ್ಟ ಸಮಸ್ಯೆ

ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್”!!

ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ

Sep 012011
 

ನಾವುಮಿತ್ರರು ಪಯಣ ಬೆಳೆಸಿರೆ

ಭಾವ ಕಲಕುವ ಸಾಲು ಕಂಡೆವು

“ರಾವಣಾಗಮನವನುಕಾದಳುಸೀತೆಕಾತುರದಿ”

ತಾವು ಕಾವ್ಯದಿ ಚತುರ ಮತಿಗಳು

ಸಾವಕಾಶದಲಿದನು ಚಿಂತಿಸಿ

ಬೇವಸಾಲಿಗೆಬೆಲ್ಲಬೆರೆಸುತಹಿತವನುಣಿಸುವಿರಾ?

ಭಾಮಿನಿ ಕೊನೆ ಸಾಲು – “ರಾವಣಾಗಮನವನುಕಾದಳುಸೀತೆಕಾತುರದಿ”