Apr 222011
 

ಸಕ್ಕರೆಸವಿಯನು ಪೂರ್ವಾಶ್ರಮದಲಿ
ಯಕ್ಕರೆಸೂಸುತ ತವರಿಗೆ ನೀಡಲು
ಉಕ್ಕಿದ ಅಮ್ಮನ ಪ್ರೀತಿಗೆ ನೀನೇ ಪೂರಣೆಯಾಗಿರುವೆ |
ಬಿಕ್ಕುತಯೊಳಗಡಿಯಿರಿಸುತ ನಲ್ಮೆಯ-
ಸಿಕ್ಕಲಿ ಸಿಲುಕಿಸಲೆಮ್ಮಯ ಮನಗಳ
ಹೊಕ್ಕುತಲಣ್ಣನ ಹೃದಯವ ನೀನೇ ವಿಜಯವ ಪಡೆದಿರುವೆ ||
(*ಅತ್ತಿಗೆ – ಅನ್ನಪೂರ್ಣೆ, ಅಣ್ಣ – ವಿಜಯ)
-ರಜನೀಶ

Apr 142011
 

ಹಲಸು ಮಾವುಗಳೆಂಬ ಹಣ್ಣುಗ –
ಳಿಳೆಯ ಸೊಗಸುಗಳಲ್ಲಿ ಶ್ರೇಷ್ಠವ –
ದುಳಿದ ರುಚಿಗಳನೆಲ್ಲ ಬಡಿಯುತ ನರ್ತಿಪುದು ಮುದದಿ ||
ಚಳಿಯು ಮುಗಿಯುವ ಕಾಲ ಬಂದೊಡೆ
ಸೆಳೆಯುತೆಲ್ಲರ ತಮ್ಮೆಡೆಗೆ ಮನು –
ಕುಲದ ಜಿಹ್ವೋದರಗಳನ್ನಾಳುತಲಿ ನಿರ್ಭಯದಿ || ೧ ||

ಬದಿಗೆ ಪಾಕಗಳೆಲ್ಲ ಸರಿಯಲಿ
ಕದದ ಹಿಂದೋಡಡಗಿಕೊಳ್ಳಲಿ
ಸದೆದಹಂಗಳ ತಳೆದ ಮೌನವು ನಾಕು ತಿಂಗಳನಕ ||
ಕದಡಿ ಸಿಹಿಯುಳಿಯಾ ಸಮಾಗಮ –
ವದಕದಮೃತವ ಭೂರಿ ಭರಿಸಿದ
ಪದಗಳೀ ಹಣ್ಣುಗಳ ತಳದಲಿ ಬಾಳ್ವೆ ಸಾಕವಕೆ || ೨ ||

ಬೊಕ್ಕೆ ಹಲಸನು ಜಗೆವ ಕಾತರ
ಚೆಕ್ಕೆ ರಸಗಳ ಸವಿಯು ಮುಂದಿರೆ
ಹೆಕ್ಕಿ ತೆಗೆಯುವ ಚಾಕರಿಯದೆಷ್ಟಿದ್ದರೇನಹಹ ||
ಉಕ್ಕಿ ಹರಿವ ಪಚನ ರಸಂಗಳ
ದಕ್ಕಿಸಲುವೇಂ ಹಸಿವ ಹಲಸುಂ
ಲೆಕ್ಕ ಮೀರಿದ ಮೌಲ್ಯವದು ತನಿರಸಗಳೌತಣವು || ೩ ||

ಕಚ್ಚಿ ಮಾವನು ತಿನ್ನುವಾ ಪರಿ
ಸ್ವಚ್ಚ ನೆಕ್ಕಿ ಮೊಳಕೈಗಳನಕ
ಹೆಚ್ಚಿ ತಿನ್ನುವ ತಾಳ್ಮೆಯಾದರೊ ನಮಗೆ ಬಲು ಕಷ್ಟ ||
ಕೊಚ್ಚಿ ಮಾಡಿದ ಶೀಕರಣಿಗಳು
ಗಚ್ಚಲರಡಿದ ಮಾವಿನಪ್ಪಳ
ಬೆಚ್ಚನೆಯ ಋತುವಿನಲಿ ಮಾವುಗಳಿರದ ದಿನವೇಕೆ? || ೪ ||

ಮಾವ ಜಾತಿಯೆ – ತೋತ, ರಸ, ಮಲ –
ಗೋವ, ಹಾಪುಸ, ಮಾಣಿ, ಮಲಿಕವೊ
ಯಾವುದಿರಲೀಶಾಡೊ ಗಾಂಟಿಯೊ, ಇವೆಲ್ಲವೆಮಗಮೃತ ||
ಮಾವಿನಣ್ಣಿನ ಸುಖವೆ ಮಿಗಿಲು
ಮಾವನೆಣ್ಣಿನ ಭೋಗ ರಾಸಕೆ
ಯಾವ ತಡೆಯಿಲ್ಲದೆಯೆ ದಕ್ಕುವುದಾತ್ಮ ತೃಪ್ತತೆಯು || ೫ ||

ಮಾವಿನಾನಂದವನು ಬಣ್ಣಿಸ –
ಲಾವ ಭಾಷೆಯ ಸೃಷ್ಟಿ ಮಾಡಲ –
ದಾವ ಪದಗಳ ಹುಡುಕಿ ತರಲೀ ಮಿತದ ಧರಣಿಯಲಿ ||
ಭಾವಕೆಡೆಗೊಡದೆಯೆಲೆ ಸವಿಯುವೆ ಮಿತದ ಸಮಯದಲಿ [… ಸೀಮಿತದ ಸಮಯದಲಿ] || ೬ ||

* ಕೊನೆಯ ಪದ್ಯ ಖಂಡ ಭಾಮಿನಿಯಲ್ಲಿದೆ

– ರಾಮಚಂದ್ರ

Apr 092011
 

ಅದತೋರಿಸಿದತೋರಿಸೆನುವೆನಿತು ಮಾನಿನಿಯ-
ರೆದಿರು ತಾನೆಡೆಬಿಡದೆ ಹರಡಿ ಮಡೆಸುತಲಿರಲು
ಕದದೊಳಗಿನಾಸೀರೆಗೀಬಣ್ಣಕಾಸೆರಗಲಿದರಂಚ ವಿನ್ಯಾಸಗಳ್ |
ಚೆದುರಿ ಪರಕಿಸೆ ವನಿತೆಯೊಂದೊಂದನರಿವೆಗಳ
ಪದರ ದರ್ಪಣವಿದಿರು ಹಿಡಿದೆಸೆಯುತಿರೆ ಪಣಿಕ-
“ನಿದನುಡುವ ಯೋಗ್ಯತೆಯನೀನಾರಿ ಪಡೆದಿಲ್ಲ”ವೆಂದೆನುತ ಮನದಿ ನಕ್ಕ ||

Apr 092011
 
ಲಂಚ ಕೋರರು ಮೆರೆವ ಸಡಗರ
ವಂಚನೆಯು ತಾರಕವನೇರಿರೆ
ಕೊಂಚವೇ ನಿರ್ಭಿಡೆಯು ಜನರಿಗದಿಲ್ಲವೇನಕಟ ||
ಸಂಚು ಮಾಡಿಹ ಕಳ್ಳ ಕೊರಮರ
ಹೊಂಚಿ ದೋಚುವ ಹೀನ ಮನುಜರ
ನಂಚಿನಿಂ ಬಂಧಿಸಲದಾಶಿಪ ಸಾಸಿರೆಗೆ* ನಮನ || ೧ ||

ಸಾಕು ಸಾಕೆಂದಾದ ಸಮಯದಿ
ಲೋಕದುನ್ನತಿ ಶೋಕಿಸುತಲಿರೆ
ಮೂಕದನಿಗಳಲುದಯಿಸಿದನೀ ರಂಧ್ರದೊಂಗಿರಣ ||
ಲೋಕಪಾಲದ ನಿಯಮ ಜನತೆಯ
ಬೇಕು ಬೇಡಗಳನಳವಡಿಸಿರೆ
ಹಾಕಲಿರುವುದು ಹುಚ್ಚು ಕುದುರೆಗೆ ಭಯದ ಕಡಿವಾಣ || ೨ ||
*ಸಾಸಿರೆ = ಹಜಾರೆ 🙂
[ಇಷ್ಟವಿದ್ದವರು ಇದನ್ನು ಇನ್ನೂ ಮುಂದುವರಿಸಿ – ಸಾಕಷ್ಟು ಬೆಳೆಸಬಹುದು]
– ರಾಮಚಂದ್ರ
Apr 042011
 

ಯುಗವು ಕಳೆದಿರೆ ಯುಗವು ಬರುತಿರೆ
ಜಗದಿ ನೋವನು ನಲಿವನೊಂದೇ
ನಗೆಯ ಮೊಗದಲೆದರಿಸುವುದರಲಿ ಹಬ್ಬದಾದರ್ಶ (ಪರ್ವಸಾರ್ಥಕ್ಯ)
ಹಗುರಬಗೆಯಲಿ ಭಾವ ಲತೆಗಳು
ಚಿಗುರಿ ಕವನದ ಫಲಗಳರಳುತ
ಸಿಗಲಿ ರಸಿಕಗೆ ಭಾವನಾವೀನ್ಯದಲಿ ರಸದೂಟ

Apr 022011
 

ವರುಷದಂತೆಯೆ ಮರಳಿ ವಾಸಂತಪಲ್ಲವವು
ಬರೆಯಲರಳುತಲಿಹುದು ಹೊಸಯುಗದ ಕಾವ್ಯವನು
ಖರಲೇಖನಿಯ ನಿಬ್ಬಿಗೆರೆಸಿ ಮಿದುಹಸಿರನ್ನು
ಬಾ ರಮಣಿ ಮಧುವೀಂಟು ಮೀಂಟು ವೀಣೆಯ ತನುವ.

ನೋವು ನಲಿವಿನ ಧರ್ಮ ಕಾಲನಿಬ್ಬಗೆಯಂತೆ
ಬೇವು ಬೆಲ್ಲದ ಹದವು ಬಾಳ ಋತವನಿವಾರ್ಯ
ಕಾವುದಾತನ ಕರ್ಮ ಕಾಯುವುದು ಭವಕಾರ್ಯ
ನಾವು ಬಯಸುವ ನೆಮ್ಮದಿಯ ಜೀವ ಸಂಕುಲಕೆ.

ತುಂಬು ಸಿಹಿ ಫಸಲುಕ್ಕಿ ಸುಗ್ಗಿ ತುಂಬಲಿ ಕಣಜ
ನಂಬುಗೆಯ ಪದ ಬಂಧಿಸಲಿಯೆಮ್ಮ ಜನಪದವ
ಅಂಬ! ಹಸಿವೆನ್ನುತಲಿ ಮಕ್ಕಳಳದಿರಲೆಂದು
ದುಂಬಿ ಗುನುಗುನುನಾದವರಳಲುದ್ಯಾನಗಳಲ್ಲಿ.

ಉತ್ತರೋತ್ತರಕೊಳಿತ ಬಯಸುತ್ತ ಸುಖಿಸೋಣ
ಮತ್ತೆ ಚೈತ್ರದ ಕಾಲಕಾನೊ ನೀನೋ ಕಾಣೆ..

Mar 302011
 
ವಿದ್ಯೆಯಾರ್ಜನೆ ಬ್ರಹ್ಮಚಾರಣೆ
ಹೃದ್ಯವಾಗಿಸುವಾನುಮೋದನೆ
ಸದ್ಯ ತಂದಿಹ ಕಂದನೋಪನಯನದ ಶುಭ ಕಾರ್ಯ ||
ಖಾದ್ಯ ಚೋದ್ಯದ ಮಿತದ ಹಿತದಿಂ
ದಧ್ಯಯನ ದಿನನಿತ್ಯ ಸಂಧ್ಯಾs
[ಅಧ್ಯವಸನವು ಮಿಡಿಯುತಲಿ ನಿನ ದೇಹ ಮನಗಳಲಿ]
ರಾಧ್ಯ ಸವಿತಾ ಪಿತೃಋಷಿಂಗಳ ವಂದನೆಯ ಪರಿಯು || ೧ ||

ನುಡಿಯು ಸತ್ಯದ ಮೇಲೆ ನಿಲ್ಲಲಿ
ಕೊಡದೆಯವಕಾಶವನಧರ್ಮಕೆ
ಕಡು ವಿವೇಕವು ಹೊಳೆಯುತಲಿ ಧೀ ಶಕ್ತಿ ಬೆಳೆಮೆಯಲಿ ||
ಬಿಡದೆ ಮನೆತನ ಸಂಪ್ರದಾಯವ
ಕಡಿಯುತಲಿ ಕಡಿದಾದ ಕಷ್ಟವ
ಮಡಗು ನೀ ಹಿರಿದಾದ ಹೆಸರನು ಮನೆಗೆ ಗುರುಕುಲಗೆ || ೨ ||

ಕಾಯು ನೀ ನಿನ ಧರ್ಮ ಕರ್ಮವ
ಬಾಯಿ ಮನಸಿನ ವಿಮಲ ಸೌಷ್ಠವ
ಪಾಯಸದ ತರ ದಕ್ಕುವುದು ಮಿಗೆ ಸುಖದ ಸಂಪದವು ||
ತಾಯಿ ತಂದೆಯು ಮತ್ತಥಿತಿಗಳ
ಕಾಯೊ ಗುರುವೂ ದೇವರೆಂ ತಿಳಿ
ಮಾಯೆಯಾ ಜಗ ತಾನೆ ಸಲ್ವದು ನಿನಗೆ ಹಿಡಿತದಲಿ || ೩ ||

ಬೆರೆಸಿ ಪಾಠದ ಜೊತೆಗೆಯಾಟಗ
ಳರಸಿ ಕಲೆಗಳ ಸೂಕ್ಷ್ಮ ಪದರವ
ಗುರುಗಳುತ್ತಮ ಪ್ರಜೆಯು ನೀನಾಗೆನ್ನ ಕಣ್ಮಣಿಯೇ ||
ಕರುಣದಿಂ ನೀ ಕಾಣು ದೀನರ
ವರುಷ ಕಳೆದಿಹ ಹಳೆಯ ಮನುಜರ
ಯೆರೆಯುತಲಿ ತಂಪೆಲರ ಜನತೆಗೆ ಸುಗುಣ ಸನ್ಮತಿಯೇ || ೪ ||

ಪುರುಷ ಶ್ರೇಷ್ಠರ ವಂಶದಲ್ಲಿನ
ಹಿರಿಯ ಪುಣ್ಯದ ಶಕ್ತಿ ಬೆನ್ನಿನ
ಲಿರಲು ಹರಿನೀ ಸ್ನಾತಕತೆಯೆಡೆ ಹಗುರ ಮನಸಿನಲಿ ||
ಹರಕೆ ಶಕ್ತಿಯಪಾರ ಬಲದಿಂ
ದುರಿಸು ನಿನ್ನಯ ಜ್ಞಾನ ದೀವಿಗೆ
ಸರಸ ಸಾರಸ್ವತದ ಸಮದಿಂದುತ್ತಮೋತ್ತಮನು || ೫ ||

– ರಾಮಚಂದ್ರ

Mar 292011
 
ಅಲೆದಲೆದು ಸುಸ್ತಾಗಿ ಮನುಜ ಕಟ್ಟಿದ ಗೂಡು
ಗಳು ಸೇರಿ ಒಟ್ಟಂದದಲಿ ಪೇಟೆಯಾಯ್ತಲ್ಲ!
ಕಲೆತು ಮಲೆತರು ನರರು ನೆಲೆಯೂರಬೇಕಲ್ಲ,
ಬೆಲೆ ಕಟ್ಟಿದರು ಮಲಗಲಡಿಯ ಲೆಕ್ಕದಲಿ.

ಪ್ಲಾಟಿನಂ ಚಿನ್ನ ನಗ ಕಾರು ಬಂಗಲೆ ಬೇಕು
ಸ್ಲೇಟದಿನ್ನೆಲ್ಲಿಯದು ಲ್ಯಾಪ್ ಟಾಪು ಹಣೆಬರವು
ಪ್ಲೇಟು ಬಂದಿತು ಬಾಳೆಮರಗಳೋ ಬಾಗಿದವು
ಕಾಟು ಮೇಲ್ ಕುರ್ಲಾನೆ ಪ್ರಸ್ಥವಾಗಲು ಬೇಕು.


ನಾಗರೀಕರೊ ನಾಗರಿಕರೊ, ಪಾಣಿನಿಯೆಲ್ಲಿ?
ನಾಗಮಂಡಲಪಾತ್ರಿ ಕುಣಿಯುವುದ ಮರೆತಂತೆ
ಭೋಗರೋಗದ ಯೋಗ ಕಡೆಗಂತೆ ಮಡಿಕಂತೆ
ಕಾಗುಣಿತ ಕ್ಯಾ ಕುಣಿತ, ಕ್ಯಾಲ್ಕುಲೇತರದೆಲ್ಲಿ?

ಬರಿಕಾಲು ಬಿಳಿಶಾಲು ಹೊದ್ದು ಹೊರಡುವ ಬಾರ
ಪೇಟೆತೀಟೆಯು ಸಾಕು, ಅರಿವ ಮಣ್ಣಿನ ಸಾರ.

Mar 282011
 

ಬಂದವನಾ ರೇ ಮನದಲಿ
ಚಂದದಿ ನುಡಿಸುತ ಸುಮಧುರ ವೇಣು ನಿನಾದವ
ನಂದ ಕುಮಾರನೆ ಮನದಾ
ನಂದವ ನೀಡುತ ಮರೆಯದೆ ಪೊರೆಯಲು ಬಂದವ

-venkataraghavan
an attempt to write an kanda padya : a gopikas expression

Mar 272011
 
ಮೊದಲು ಬರೆದ ೪ ಮತ್ರಾಗಣದ ಪದ್ಯಗಳು (ಬಾಳೆಯ ತೋಟದ ಪಕ್ಕದ ಕಾಡಲಿ …. ತರಹದ್ದು) ::

ಭಾಮಿನಿ ಮೋಹದ ಸುಧಾಲಹರಿಯಲಿ ಮೀಯುತ ಬೇರೆಲ್ಲವ ಮರೆತೆ ||
ಕಾಮಿನಿ ಸುಖದಲಿ ಮುಳುಗೇಳುತನಾ ಜೀವನದಾಕರ್ಷಣೆ ಅರಿತೆ || ೧ ||

ಕೋಮಲ ರಾಗದಿ ಭೋಗ ಕುಸುಮಗಳು  ಅಕ್ಕರೆಯಲಿ ಕರೆಯುತಲಿಹವು ||
ಸೋಮದ ಸೊಗಸನು ಮಂದಾನಿಲ ತರೆ ಕಂದವನೇ ಲಲಿತದಿ ತಹವು || ೨ ||

ಭಾಮಿನಿ ಸೆರೆಯಿಂ ಬಿಡುಗಡೆ ಪಡೆಯದೆ ಗದಗಿನ ಕವಿ ಕೊನೆಯುಸಿರೆಳೆದ ||
ಆಮಹನೀಯನಿತರ ಚಂಚಲೆಯರ ಸೈರಿಸದೆಯೆ ಜನುಮವ ಕಳೆದ || ೩ ||

ರಾಮನ ಒಂದೇ ಪತ್ನೀ ವ್ರತವೋ ಕಾಮನ ಬಹುಮಯ ಚಪಲತೆಯೋ ||
ಸಾಮಸಮಾಸಮ ಭಾವಗಳೆಲ್ಲವ ಹೊರಹೊಮ್ಮುವ ಮೇಣ್ ಚದುರತೆಯೋ || ೪ ||

ಇದೇ ಭಾವವನ್ನು ಭಾಮಿನಿಯಲ್ಲಿ ನಂತರ ಬರೆದದ್ದು ::

ಮರೆತೆ ಮೀಯುತ ಭಾಮಿನಿಯ ಸುಧೆ
ಸರಸಿಗಳಲುಳಿದೆಲ್ಲ ಛಂದಗ
ಳರಿತೆ ರಸಗಳ ಭಾವ ಸೆಳೆತವ ಮುಳುಗುತೇಳುತಲಿ ||
ತೆರೆದ ಕುಸುಮದ ಭೋಗರಾಗಗ
ಳೆರೆದ ಸೋಮದ ಸೊಗಸು ಲಲಿತದ
[ಕರೆದ ಕಂದಾ ಮಂದಾನಿಲದಲ್ಲೆಲ್ಲ ನಿರ್ಲಕ್ಷ್ಯ]
ಝರಿಯ ಮಂದಾನಿಲಕೆ ಕಂದಕೆ ದಿವ್ಯನಿರ್ಲಕ್ಷ್ಯ || ೧ ||

ಬಾಮಿನಿಯ ಸೆರೆಯಲ್ಲಿ ಸಿಲುಕಿರೆ
ಕಾಮದಿಂಬಿಡುಗಡೆಯ ಪಡೆಯೆನೆ
[ಜನ್ಮ ಸಾಲದೆ ಹೋಯಿತಾ ಗದಗಿನ ಮಹಾಶಯಗೆ]
ನೇಮಜನ್ಮಾದ್ಯಂತ ಗದಗಿನ ಕವಿಮಹಾಶಯಗೆ ||
ಸಾಮಭಾವವ ಚಿಮ್ಮೊ ಚದುರತೆ
ಕಾಮ ಚಪಲತೆಯಂತೆ ವಿವಿಧತೆ
ರಾಮನವ್ರತದೇಕತೆಯೊ ಮೇಣ್ ರಾಗ ಪರಿಕರವೋ || ೨ ||

– ರಾಮಚಂದ್ರ

Mar 262011
 

ನಭದ ಉದ್ದಗಲಕ್ಕು ಕಿತ್ತಳೆಯ ತಿಳಿಗೆಂಪು
ಸೆರಗ ಬೀಸುತ ಬೆಕ್ಕ ನಡೆಯಲ್ಲಿ ಉಷೆಯು,
ಬಳುಕುತ್ತಲಾಗಸವ ದಿವೆಯ ಮಡಿಲಿಗೆ ಹಾಕ-
-ಲೆಳಸುತ್ತ ಬರುತಿಹಳು, ಮೂಡಣದ ಹೋಳಿ!

Mar 242011
 

Twinkle Twinkle Little Star….
ಕನ್ನಡದಲ್ಲಿ ನಡಸಿದ ಒಂದು ಪ್ರಯತ್ನ
ಚಿನಿಮಿನಿ ಚಿನಿಮಿನಿ ನಕ್ಷತ್ರ
ಏರಿದೆ ಏಕೆ ಅಷ್ಟೆತ್ರ!

ಚಂದಿರನ ಎಲ್ಲಿ ಕಳಿಸಿರುವೆ
ನಿನ್ನನೇ ನೋಡುತ ಮೈಮರೆವೆ!

ಅರಳಿತು ಕಂಗಳು ನಿನ್ನ ನೋಡಿ
ಎಣಿಸುತ ದಣಿದೆ ಓಡಾಡಿ!

ಮಣಿಯೇ ನೀನು ಅಮ್ಮನ ಸರಕೆ
ಬಾರೆಲೆ ತಾರೆಯೆ ಹತ್ತಿರಕೆ!

ಉಣಿಸುವಳಮ್ಮ ನಿನ್ನ ತೋರಿ
ಕುಣಿಯುತ ಮೊಮ್ಮುವೆ ನಾ ಹಾರಿ!
– ರಜನೀಶ