Nov 022013
 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು :)

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙂

‘ದಿವ್ಯದೀಪಾವಲಿಶ್ರೀ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಪಂಚಮಾತ್ರಾಚೌಪದಿ, ಭುಜಂಗಪ್ರಯಾತ, ಶಾಲಿನಿ, ಮಾಲಿನಿ, ಮಂದಾಕ್ರಾಂತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ. ‘ದಿವ್ಯದೀಪಾವಲಿಶ್ರೀ:’ ಎಂದು ಸಂಸ್ಕೃತದಲ್ಲೂ ಪೂರಣಗಳನ್ನು ನೀಡಬಹುದು.

 

 

  100 Responses to “ಪದ್ಯ ಸಪ್ತಾಹ ೮೫: ಪದ್ಯಪೂರಣ”

  1. ಸ್ರಗ್ವಿಣೀವೃತ್ತದಲ್ಲಿ ಸಣ್ಣದೊಂದು ಪ್ರಯತ್ನ:

    ಕಾವ್ಯಕೋಟಿಚ್ಛಟಾಭಾಸುರಂ ಬಾನಿರಲ್
    ಭವ್ಯಪೀಯೂಷಮಂಥಾನದರ್ಣೋಪಮಂ |
    ದೀವ್ಯದುತ್ಸಾಹದಿಂದಿಲ್ಲಿಗಯ್ತರ್ಪಳೀ
    ದಿವ್ಯದೀಪಾವಳಿಶ್ರೀ ಜಗದ್ಭೂತಿಗಂ ||

    (ಕಾವ್ಯ =ಶುಕ್ರಗ್ರಹ; ಇದನ್ನು ಬೆಳ್ಳಿ ಎಂದೂ ಹೇಳುವರು. ಇದು ದೀಪಾವಳಿ ಹೂಬಾಣ-ಮತಾಪುಗಳ ಹಾಗೆ ಉಜ್ಜ್ವಲ. ದೀವ್ಯತ್ = ತುಂಬಿದ, ನಲಿದ, ಹರಸಿದ, ಲೀಲೆಯಿಂದೊಪ್ಪುವ)

  2. ನಿಮ್ಮೆಲ್ಲರಿಗೆ ::
    ತಾರಲೆಂದುಂ ದಿವ್ಯದೀಪಾವಳಿಶ್ರೀ –
    ಕಾರಮಂ ಮಾಳ್ದೆಲ್ಲ ಕಾರ್ಯಂಗಳೊಳ್ ಸಾ –
    ಕಾರಮಂ ಮೇಣ್ ತೋಷಮಂ, ತೃಪ್ತಿಯಂ, ಸ –
    ತ್ಕಾರಮಂ ತಾನೆಂದು ನಾಂ ಭಾವಿಪೆಂ ದಲ್ ||

    • ಕಾಂಚನರವರೆ. ಶುಭಕಾಮನೆಗಳಿಗೆ ಧನ್ಯವಾದ. ನಿಮಗೂಹಾಗೇ ಆಗಲಿ. ಪದ್ದ ಬಂಧಭಾಷೆಗಳು ಚೆನ್ನಾಗಿವೆ. “ಯೆಂದುಂ” ಅನ್ನೋ ಕಾಗುಣಿತ ವಿಸಂಧಿಯನ್ನೇನೋತಪ್ಪಿಸುತ್ತೆ, ಆದರೆ ಅಸಾಧುರೂಪವಲ್ಲವೆ.

      • ಧನ್ಯವಾದಗಳು ತಮಗೆ.ನಾನು ಆ ಸಾಲನ್ನು ಸರಿಪಡಿಸಿದ್ದೇನೆ.
        ” ತ್ಕಾರವನ್ನೆಂದಾಶಿಪೆಂ ಪ್ರೀತಿಯಿಂದಲ್.”

        • ಈಗ ಪರವಾಗಿಲ್ಲವಾದರೂ ಪೂರ್ತಿ ಸರಿಯಲ್ಲ. ಹಳಗನ್ನಡದಲ್ಲಿ ಸತ್ಕಾರಮನೆಂದುಂ ಎನ್ದಾಗುವುದೆ ಸಹಜ. ಕಾರಮನ್ನೆಂದುಂ ಎಂದು ನಕಾರ ದ್ವಿತ್ವವಾಗೊಲ್ಲ ಅಂತ ಗಣೇಶರು ಹಿಂದೆ ಹೇಳಿದ್ದರು.

    • ಶಾಲಿನಿ ಬಂಧವನ್ನೇ ತಪ್ಪಾಗಿ ಗ್ರಹಿಸಿದ್ದೇನೆ 🙁
      ನಾನಾನಾನಾ ನಾನನಾನಾ ನನಾನಾ ಎಂದಾಗುವ ಬದಲು
      ನಾನನಾನಾ ನಾನನಾನಾ ನನಾನಾ ಎಂದಾಗಿದೆ.

      ಸದ್ಯಕ್ಕೆ ಓದುಗರು ಸ್ವಲ್ಪ adjust ಮಾಡಿಕೊಳ್ಳಿರಿ. ಸರಿಪಡಿಸಲು ಪ್ರಯತ್ನಿಸುತ್ತೇನೆ

      • ಅಡ್ಡಿಯಿಲ್ಲ. ನಿಮ್ಮ ಪದ್ಯವು ಪಂಚಮಾತ್ರಾಚೌಪದಿಯ ರೂಪದಲ್ಲಿಯೇ ಸರಿಯೆನಿಸಿದೆ. ಶ್ರೀಕಾಂತರು ಹೇಳಿದಂತೆ ಸವರಣೆಯಾಗಬೇಕು. ಇದನ್ನು
        “……ಕಾರಮಂ ತಾನೆಂದು ನಾಂ ಭಾವಿಪೆಂ ದಲ್” ಎಂದು ಸುಲಭವಾಗಿ ಸವರಿಸಬಹುದು.

        ಸೂಕ್ತಸೂಚನೆಗಳಿಗಾಗಿ ಶ್ರೀಕಾಂತರಿಗೆ ಧನ್ಯವಾದ

        • ಮೂಲ ಪದ್ಯದಲ್ಲಿಯೆ ತಿದ್ದಿದ್ದೇನೆ.
          ಪದ್ಯವನ್ನು ದಡ ಮುಟ್ಟಿಸಿದ್ದಕ್ಕಾಗಿ ಧನ್ಯವಾದಗಳು. 🙂

    • ಪೊಂದಿಸಲ್ ಬೇರೊಂದು ಛಂದ:ಪ್ರಕಾರಂ
      ಸುಂದರಂ ದೀಪಾವಳಿಶ್ರೀಯ ಪದ್ಯಂ

  3. ಖಳರಿಂ ಸ್ವಾತಂತ್ರಮಯ್ ಹಾ ಖಳರಧಿಪತಿಗಂ ಸಂದುದಾ ರಾಜ್ಯಪಟ್ಟಂ
    ತೊಳಲಲ್ ಮಾತೃಕ್ಷಿತಿ ಕ್ಷಾತ್ರಮೆ ಸೊರಗಿರೆ ಕಾಳ್ವಟ್ಟೆಗಂ ದಲ್ ಕೃತಾಂತಂ
    ತಳೆಸಲ್ಕೇಕೀಕೃತೋತ್ಪಾತದ ರಣರವಮಂ ದ್ರೋಹಿಗಳ್ ಸ್ತಬ್ಧರಲ್ತೀ
    ಇಳೆಯೊಳ್ ಖಂಭೇದಿ ನರನನೆ ತಣಿಪಳ್ ದಿವ್ಯದೀಪಾವಳಿಶ್ರೀ

    ಸರ್ದಾರ್ ಪಟೇಲರ 138ನೇ ಜನ್ಮವರ್ಷಾಚರಣೆಗೆ 192 ಮೀ ಎತ್ತರದ ಪ್ರತಿಮೆಯನ್ನು ನಿರ್ಮಾಣಮಾಡುವ ಸಂಧರ್ಭದಲ್ಲಿ ಅವರಿಗೆ ಗೌರವಾರ್ಥ ಪದ್ಯ.

    ಕಾಳ್ವಟ್ಟೆ – ಕೆಟ್ಟದಾರಿ
    ಕೃತಾಂತ – ಯಮ
    ಉತ್ಪಾತ – meteor

    • ಮಹಾಸ್ರಗ್ಧರೆಯ ಭಾಷಾಬಂಧಗಳು ಚೆನ್ನಾಗುವೆ ಸೋಮ. ಭಾವ ನನಗೆ ಸ್ವಲ್ಪ ಅರ್ಥವಾಗ್ತಿಲ್ಲ. ಬಿಡಿಸಿ ಹೇಳ್ತೀರ.

      ಸ್ವಾತಂತ್ರ್ಯ ಅಂತ ಬರಬೇಕು, ಟೈಪೊ ಅನ್ಸುತ್ತೆ. ಕಿಲ್ಬಿಷರ್ ಸರಿಯಲ್ಲ ಅನ್ಸುತ್ತೆ. ಕಿಲ್ಬಿಷ ಮಾಡುವವರು ಕಿಲ್ಬಿಷಿಗಳಾಗ್ತಾರೆ. ದ್ಯೌಭೇದಿ ಅಂದರೇನು?

    • ಪ್ರಿಯ ಸೋಮ, ಸದ್ಯದ ಪದ್ಯವು ತನ್ನ ಉದ್ದೇಶಕ್ಕಿಂತಲೂ ಹೆಚ್ಚು ಪೆಡಸಾಯಿತೆಂಬಂತೆ ತೋರಿದೆ:-)

    • ಗಣೇಶ್ ಸರ್, ಹೌದು ಅಂದು ಸರದಾರ್ ಪಟೇಲರ ಬಗ್ಗೆ ಓದುತ್ತಿದ್ದೆ, ಮನದಸ್ಸಿನಲ್ಲಿ ಅದೇ ಗುಂಗಿತ್ತು, ಪದ್ಯ ಸ್ವಲ್ಪ ಹೇಗೆಹೇಗೋ ಬಂದಿದೆ 🙂

      ಶ್ರೀಕಾಂತರೆ ಧನ್ಯವಾದಗಳು, ನೀವು ತಿಳಿಸಿದ ಅಂಶಗಳಲ್ಲಿ ಸ್ವಲ್ಪ ಸವರಣೆಯ ಯತ್ನ ಮೂಲದಲ್ಲೆ ಮಾಡಿದ್ದೇನೆ. ನೀವು ಮತ್ತು ಗಣೇಶ್ ಸರ್ ತಿಳಿಸಿದಂತೆ ಸ್ವಲ್ಪ ಅರ್ಥಕ್ಲೇಶವಾಗಿದೆ 🙂

  4. ಲಯಗ್ರಾಹಿ

    ದೀಪಂಗಳಂತಿರ್ಪ ಪದ್ಯಂಗಳಂ ಬಾ
    ಬಾ ಪತ್ತಿಪೆಂ ಮಿತ್ರನೇ ಪದ್ಯಪಾನೀ
    ಈ ಪಾಂಗಿನೊಳ್ ಸ್ವಾಗತಂ ಗೈವಮೀಗಳ್
    ದೀಪಾವಳಿಶ್ರೀಯನೆಮ್ಮೀ ಬದುಂಕೊಳ್

    • ಪದ್ಯಪಾನಕ್ಕೆ ಮೊತ್ತಮೊದಲು ಬರುತ್ತಿರುವ ಲಯಗ್ರಾಹಿವೃತ್ತಕ್ಕೆ ಸ್ವಾಗತ:-)
      ಅಂದಹಾಗೆ ತೆಲುಗಿನಲ್ಲಿ ಇದೇ ಹೆಸರಿನ ಬೇರೆಯೇ ವೃತ್ತವಿದೆ. ಆಸಕ್ತರು ಅದನ್ನು ಅಶ್ವಧಾಟೀವೃತ್ತದೊಡನೆ ಹೋಲಿಸಿ ಕಾಣಬಹುದು. ಲಯವಿಭಾತಿ ಎನ್ನುವ ಮತ್ತೊಂದು ವೃತ್ತದ್ದೂ ಇದೇ ಹಣೆಬರೆಹ:-)

    • ದೀಪಂಗಳೇ ಪದ್ಯಮೆಂಬೀ ಪ್ರಯತ್ನಂ
      ಭಾಪೆಂಬುವೋಲ್ ರಮ್ಯಮಲ್ತೇ ವಯಸ್ಯಾ

      ಬಹಳ ಚೆನ್ನಾಗಿದೆ ಶ್ರೀಕಾಂತರೆ 🙂

    • Thank you all

  5. ನಭದೊಳುರಿವನೇನಾ ಸೂರ್ಯತಾನೊಂಟಿದೀಪಂ
    ಪ್ರಭೆಯಡಿಯೊಳು ಕಾಣಾ ಕತ್ತಲಾ ಕಾಳರಾತ್ರೀ |
    ಸಭೆಯೊಳುಸಮ ಸಂದೀದೈದು ದೀಪಂ ಪ್ರಕಾರಂ
    ಶುಭನಿಡಿದುದು ಕಾಣಾದಿವ್ಯದೀಪಾವಳಿಶ್ರೀ ||

    (ಒಂಟಿ ದೀಪದ ಕೆಳಗ ಕತ್ತಲು ಮತ್ತು ದೀಪ ಸಮೂಹದಲ್ಲಿ – ಒಂದರ ಬೆಳಕಲ್ಲಿ ಮತ್ತೊಂದರ ಕತ್ತಲು ಕಳೆದು “ಸಮ ಪ್ರಭೆ” ಹರಡುವ ಪರಿಕಲ್ಪನೆಯಲ್ಲಿ)

  6. ಹೊಂಚಿದಲ್ಲವು ಕಾಣ ಮಿಂಚಗೊಂಚಲ ಸಂಚು
    ಕೊಂಚಕಂಡಿಹ ಮತಾಪಿನಾಕಾಪು |
    ಪಂಚಾರತಿಯ ಬಾನ ಪಂಚಭೂತಾತ್ಮರಿಗೆ
    ಹಂಚಿತೇಂ ದಿವ್ಯದೀಪಾವಲಿಶ್ರೀ |

    (ಬಾನ = ದೇವಿಗೆ ತಂಬಿಟ್ಟು ದೀಪದಲ್ಲಿ ಮಾಡುವ ಆರತಿ – ಚಿಕ್ಕಂದಿನಲ್ಲಿ ಕೇಳಿದ ನೆನಪು)
    ಎಲ್ಲರಿಗೂ “ದೀಪಾವಳಿ”ಯ ಶುಭಾಶಯಗಳು.

    • ಪದ್ಯದ ಕಲ್ಪನೆ ಮತ್ತು ಭಾಷೆಗಳು ಚೆನ್ನಾಗಿವೆ. ಆದರೆ ಎರಡನೆಯ ಸಾಲಿನಲ್ಲಿ ಸ್ವಲ್ಪ ಛಂದಸ್ಸು ಎಡವಿದೆ. ದಯಮಾಡಿ ಸವರಿಸಿರಿ.

      • ಧನ್ಯವಾದಗಳು ಗಣೇಶ್ ಸರ್,
        ಪದ್ಯವನ್ನು ಸರಿಪಡಿಸಿದ್ದೇನೆ.
        ಹೊಂಚಿದಲ್ಲವು ಕಾಣ ಮಿಂಚಗೊಂಚಲ ಸಂಚು
        ಕೊಂಚಕಂಡುದು ಮತಾಪಿನಕಾಪದುಂ |
        ಪಂಚಾರತಿಯ ಬಾನ ಪಂಚಭೂತಾತ್ಮರಿಗೆ
        ಹಂಚಿತೇಂ ದಿವ್ಯದೀಪಾವಲಿಶ್ರೀ ||
        (ನನ್ನ ಮೊದಲನೇ ಪದ್ಯವನ್ನು, ಚೌಪದಿಯಲ್ಲಿ ಆರಂಭಿಸಿ – ಮೊದಲನೆಯಗಣ ಸರ್ವಲಘು ಬಂದಿದ್ದರಿಂದ “ಮಾಲಿನಿ”ಯಲ್ಲಿ ಹೊಂದಿಸಲು ಪ್ರಯತ್ನಿಸಿದ್ದು. ಧಾಟಿ ಬಂದಿಲ್ಲವೋ / ಅರ್ಥಪೂರ್ಣವಾಗಿಲ್ಲವೋ ತಿಳಿಯದು. ದಯವಿಟ್ಟು ಸರಿಪಡಿಸಿಕೊಳ್ಳಲು ಸಹಾಯಮಾಡಿ.)

  7. ಮೇಘವಿಸ್ಫೂರ್ಜಿತವೃತ್ತದಲ್ಲಿ ಸಂಸ್ಕೃತಪದ್ಯ:

    ಬಲಿಶ್ಲೋಕೇsಸ್ತೋಕೇ ವಿಮಲಸಲಿಲೇ ವಾಮನಾಂಘ್ರಿಪ್ರಭೂತೇ
    ದಶಾಸ್ಯಧ್ವಂಸಾರ್ಥೇ ದಶರಥಸುತೇ ಶಾರದಾರಾಧನಾರ್ಘೇ |
    ಸ್ಮಿತಜ್ಯೋತ್ಸ್ನಾಪೂರೇ ನರಕಶಮಿತುಃ ಸತ್ಯಭಾಮಾಸಮಿಚ್ಛು-
    ರ್ವಿಭಕ್ತಾ ವಿಧ್ಯುಕ್ತಾ ಜಯತಿ ಜಗತೌ ದಿವ್ಯದೀಪಾವಲಿಶ್ರೀಃ ||

    (ದೀಪಾವಲಿಯ ಎಲ್ಲ ಪೌರಾಣಿಕಸಂಗತಿಗಳನ್ನು ನೆನೆಯುವ ಈ ಪದ್ಯದ ಅರ್ಥದಲ್ಲೇನೂ ಹಿರಿದಿಲ್ಲ. ಕೇವಲ ಸ್ವಲ್ಪ ಅಪರಿಚಿತವೃತ್ತದ ಪರಿಚಯೀಕರಣವಷ್ಟೇ ಇದರ ಉದ್ದೇಶ:-)

    • ಸಮಾಶ್ಲಿಷ್ಟಂ ಪಾರಂಪರಗತಕಥಾಪುಂಜಮಲ್ತೇ ವಿಶಿಷ್ಟಂ 🙂

    • Sir, ಇದು ಸೌಂದರ್ಯ ಲಹರಿಯ ತರಹ ಬರುತ್ತದೆಯೇ? “ಶಿವಃ ಶಕ್ತ್ಯಾಯುಕ್ತೋ”

      • ಸೌಂದರ್ಯ ಲಹರಿಯ ಆ ಪದ್ಯ ಶಿಖರಿಣಿ ವೃತ್ತದಲ್ಲಿ ಇರುವುದು. ಶಿಖರಿಣಿಯು ಹದಿನೇಳಕ್ಶರಗಳ ವ್ರುತ್ತ. ಮೇಘವಿಸ್ಫುರ್ಜಿತಕ್ಕು ಅದಕ್ಕೂ ಸಾಮ್ಯಗಳುಂಟು.

      • ಶಿಖರಿಣೀವೃತ್ತದ ಎರಡನೆಯ ಯತಿಸ್ಥಾನದ ಬಳಿಕ (ಅಂದರೆ ಹನ್ನೆರಡು ಅಕ್ಷರಗಳ ಬಳಿಕ) ಮಂದಾಕ್ರಾಂತಾವೃತ್ತದ ಎರಡನೆಯ ಯತಿಸ್ಥಾನದ ಬಳಿಕ ಬರುವ ಗುರು-ಲಘುಗಳ ಖಂಡವನ್ನು (ಅಂದರೆ ಏಳು ಅಕ್ಷರಗಳ ಭಾಗವನ್ನು) ತಂದಿರಿಸಿದರೆ ಮೇಘವಿಸ್ಫೂರ್ಜಿತವೃತ್ತವು ಸಿದ್ಧ.

  8. ಇಂದ್ರವಜ್ರ

    ಆ ಪಂಚಯುಗ್ಮಾಸ್ಯನ ಜೀವಮಂ ಕಿ-
    ತ್ತೋಪಂ ಸತಿಭ್ರಾತರೊಡೂರನೆಯ್ದಲ್
    ಪೋಪಲ್ಲಿ ಪೌರರ್ ಸಲೆ ಪತ್ತಿಸಿರ್ಪಾ
    ದೀಪಾವಳಿ ಶ್ರೀಯನುಗುತ್ತಲಿರ್ಕುಂ

  9. ಗೆಳೆಯರೆಲ್ಲರಿಗೂ ಹಬ್ಬದ ಶುಭಾಶಯಗಳು.

    “ಮೇಘವಿಸ್ಫೂರ್ಜಿತ”ದಲ್ಲಿ ಒಂದು ಪ್ರಯತ್ನ

    ಘನದ್ರವ್ಯಜ್ವಾಲಾಘಟಿತ ಗುಣಗಳ್ ಕಾಂತಿಯನ್ನೆಂತುತೀಡ್ಗುಂ
    ವಿನಿರ್ಮುಕ್ತಂ ವೈಶ್ವಾನರನದಮಲಂ ವಾಯುವಿಂದಂತೆಪೊಂಗುಂ
    ಅನಿರ್ವಾಚ್ಯಂ ತೇಜಂ ಕನಲಿ ನರರೊಳ್ಳುರ್ಚಿ ತಳ್ಪೊಯ್ದು ಸತ್ತ್ವಂ
    ದಿನಂಬುಣ್ಮುತ್ತೊಳ್ಪಂಬಡೆಯೆ ಕುರುಪೇಂ ದಿವ್ಯದೀಪಾವಲಿಶ್ರೀ

    ಹಣತೆಯತಮಸ್ಸು, ತೈಲದ ರಜಸ್ಸು, ಬತ್ತಿಯುರಿಯ ಸತ್ತ್ವದ ತ್ರೈಗುಣ್ಯದಿಂದ ಕಾಂತಿಯೊಗೆಯುವಂತೆ
    ಆಕಾಶದಿಂದ ಬಂದ ವಾಯುವಿನಲ್ಲಿ ಅಗ್ನಿ ಹುಟ್ಟುವಂತೆ
    ಒಳಗಿನ ತೇಜಸ್ಸು ನಮ್ಮಿಂದ ಹೊಮ್ಮಿ. ಒಟ್ಟಾಗಿ ಸೇರಿ,
    ದಿನವೂ ಚಿಮ್ಮುತ್ತಾ, ಒಳಿತನ್ನು ಪಡೆಯಲು ಈ ದೀಪಾವಳಿ ಒಂದು ಸಂಕೇತವೇ?

    • ಹೊಸ ಛಂದವೆಂಬ ಹುಮ್ಮಸ್ಸಿನಲ್ಲಿ ಬರದಮೇಲೆ ಈಗಾಗಲೇ ರಾಗಪ್ರಯೋಗವಾಗಿದೆ ಎಂದೀಗ ನೋಡಿದೆ!

    • ಮೌಳಿಯವರೆ ಹಣತೆ, ತೈಲ, ಮತ್ತು ಬೆಳಕನ್ನು ತ್ರಿಗುಣಗಳಿಗೆ ಹೋಲಿಸಿದ ಪದ್ಯದ ಕಲ್ಪನೆ ಅದ್ಭುತವಾಗಿದೆ

  10. ಯಾವುದೋ ಭರದಲ್ಲಿ ’ದಿವ್ಯದೀಪಾವಲಿಶ್ರೀ’ಯನ್ನೇ ಮರೆತು ಕವನಿಸಿದೆ:
    ವಿದ್ಯುಜ್ಜ್ಯೋತ್ಸ್ನೆಯೆ ವರ್ಷಕೊಮ್ಮೆ ಬಹೆ ನೀಂ| ಧಾರಾಳದಿಂ ರಂಜಿಸೌ
    ಆದ್ಯಂತಂ ಬೆಳಗುತ್ತಲಾ ಗಗನಮಂ| ದೇವರ್ಕಳಂ ಸೇವಿಸೌ
    ಪಾದ್ಯಂ ನಾ ಬುವಿಗರ್ಪಿಪೆಂ ನಿರುತಮುಂ| ನೀನೊಮ್ಮೆ ಬರ್ಪನ್ನೆಗಂ
    ಸಾದ್ಯಂತಂ ಕಿರುಜೋತಿಯಿಂ ಬೆಳಗುವಾನ್| ಪೈಪೋಟಿಯೇಂ ಭಾವದೊಳ್

    ಮತ್ತೆ ಪ್ರಯತ್ನಿಸುವೆ ಸೋಮ. ನಿಮಗೂ ಹಬ್ಬದ ಶುಭಾಶಯಗಳು.

    • ನಾನು ದಿವ್ಯತೆಯನ್ನು ಮಾತ್ರೆ ಕಳೆದೆ. ನೀವು ದೀಪಾವಳಿಯನ್ನೇ ನುಂಗಿಹಾಕಿದಿರಲ್ಲ!

      ಮೊದಲ ಪಾದದಲ್ಲಿ ಎರಡು “ನೀಂ” ಗಳಲ್ಲಿ ಒಂದನ್ನು ತೆಗೆದರೆ ವಾಸಿ.
      ನಭಾವಳಿ?
      ಕಿರುಜ್ಯೋತಿ- ಅರಿಸಮಾಸ. ಕಿರುಜೋತಿ ಅಂತ ಹಾಕಿದರೆ, ಅರಿಸಮಾಸದ ಜೊತೆ, ಆ ಅಬ್ಬೆಪಾರಿ ಶಿಥಿಲದ್ವಿತ್ವವೂ ತಪ್ಪುತ್ತೆ.

      ಪದ್ಯದ ಒಟ್ಟಾರೆ ಭಾವ ನನಗೆ ಸ್ಫುರಿಸುತ್ತಿಲ್ಲ.

    • ಪ್ರಸಾದು,

      ಸೊಲ್ಲೇ ಬಾರದು ಛಂದದೊಳ್ ಕವಿಯಿದೇಂ ಶಾರ್ದೂಲವಿಕ್ರೀಡಿತಂ 🙂

      ದಿವ್ಯದೀಪಾವಲಿಶ್ರೀ ಅನ್ನುವುದನ್ನ ಈ ಛಂದಸ್ಸಿನಲ್ಲಿ ಹಾಕಲಾಗದಿದ್ದರೇನಂತೆ ಯಾರಿಗೂ ಹಾಕಲಿಕ್ಕಾಗುವುದಿಲ್ಲ ಹಾಗಾಗಿ ಅಡ್ಡಿಯಿಲ್ಲ, ಆದರೂ ಮನಸ್ಸಿನಲ್ಲಿ ಅಳವಡಿಸಿ ಬರೆದ್ದಿದ್ದೀರಲ್ಲ… ಅದೇ ಒಳ್ಳೆಯದು. ಅದಕ್ಕೇನಂತೆ ಇನ್ನೊಂದು ಪದ್ಯ ಕೊಟ್ಟುಬಿಡಿ ಅಷ್ಟೇ 🙂

    • ದೋಷಗಳನ್ನು ತೋರಿಸಿಕೊಟ್ಟುದಕ್ಕಾಗಿ ಕೃತಜ್ಞತೆಗಳು. ತದನುಸಾರವಾಗಿ ಮೂಲದಲ್ಲೇ ಸವರಣೆಗಳನ್ನು ಮಾಡಿದ್ದೇನೆ.
      ಆ ಶಾಂತದೀಪವು ಪಟಾಕಿಯ ಕೋರೈಸುವ ಕಾಂತಿಗೆ ’ನಾನು ಭೂಮಿಯನ್ನು ಬೆಳಗುತ್ತೇನೆ, ನೀನು ಆಕಾಶವನ್ನು ಬೆಳಗು’ ಇತ್ಯಾದಿ ಹೇಳಿದಂತೆ.

    • ಲೇಸಾಯಿತೀಗ. ಆಗಸಮನುಂ ಅಲ್ಲಿ “ಉಂ” ಅನವಶ್ಯಕ ಅನ್ಸುತ್ತೆ. “ಆ ಗಗನಮಂ” ಅನ್ನ ಬಹುದೆ?
      ನೀನ್ನೊಮ್ಮೆ- ಟೈಪೊ
      ಬೆಳಗುವಾನ್- “ವಾನ್” ಅಂದರೇನು?

    • ಬೆಳಗುವಾನ್ = ಬೆಳಗುವ ಆನ್ (ಆನು> ನಾನು). ಇತರೆ ಸವರಿದ್ದೇನೆ. ಮತ್ತೊಮ್ಮೆ ಕೃತಜ್ಞತೆಗಳು.

  11. ಕಾರ್ತಿಕಮಾಸದಲ್ಲಿ ನಡೆವ ಲಕ್ಷದೀಪೋತ್ಸವವನ್ನು ಕುರಿತು. ನಾನು ಹಿಂದಾಗಲೇ ಬಳಸಿರುವ ವಿಜಯಾನಂದ ವೃತ್ತದಲ್ಲಿ ಮತ್ತೆ ರಚಿಸಿದ್ದೇನೆ.

    ಕಲಾಪೂರ್ಣಂ ತಾನೇ ಕಳೆಯಿಳಿದವೋಲ್ ಕಾಣಿಪಂ ನಿ-
    ರ್ಮಲಂ ಧರ್ಮಕ್ಷೇತ್ರಂ ತನಿವೆಳಗಿನಿಂ ಶೋಭಿಕುಂ ಜಾ-
    ಜ್ವಲಲ್ಲಕ್ಷಂ ಕಾಣೈ ಜಗಮಗಿಸುವಾ ದಿವ್ಯದೀಪಾ-
    ವಲಿಶ್ರೀಯಂ ಚಿತ್ತಂ ಮಸುಕಿದ ತಮಂ ಮಾಣ್ದು ಪೋಕುಂ

    ಧರ್ಮಕ್ಷೇತ್ರ- ಧರ್ಮಸ್ಥಳವೇ ಅಲ್ಲದೆ ಲಕ್ಷದೀಪೋತ್ಸವ ನಡೆವ ಕುಕ್ಕೆ, ಉಡುಪಿ ಮುಂತಾದ ಯಾವೆದೇ ಶ್ರೀಕ್ಷೇತ್ರಕ್ಕೆ ಅನ್ವಯಿಸುತ್ತೆ.

    • ರಸೋತ್ಕೃಷ್ಟಂ ಚಂದಂ ಸುಲಲಿತಮದೇಂ ‘ಮೂರ್ತಿ’ವಾಣಿs

      ತನಿವೆಳಗಿನಿಂ ಎಂಬ ಪದ ಬಹಳಚೆನ್ನಾಗಿದೆ

      ಜಾಜ್ವಲಲ್ಲಕ್ಷಂ ಎನ್ನುವುದನ್ನು ಹೇಗೆ ಬಿಡಿಸಿಕೊಳ್ಳುವುದು?
      ಶಿಖರಿಣಿಯಲ್ಲಿ 2ಲಘುವನ್ನು ಒಂದು ಗುರುವಾಗಿಸಿದರೆ ವಿಜಯಾನಂದ ಅಲ್ಲವೇ?

      • ಧನ್ಯವಾದಗಳು ಸೋಮ.

        ಜಾಜ್ವಲತ್+ಲಕ್ಷಂ- ಜಾಜ್ವಲಿಸುವ ಲಕ್ಷ

        ಶಾಲಿನಿ ವಿಜಯಾನಂದದ ಬಗ್ಗೆ ನಿಮ್ಮ ಮಾತು ಸೈ. ನಾನು ಪ್ರತಿಪಕ್ಷರಿಂದ ನೋಡಿದೆ ಅಷ್ಟೆ. ಅಂದರೆ ವಿಜಯಾನಂದದ ಅಂತಿಮಪೂರ್ವ(?) ಗುರುವಿನಬದಲು ಎರಡು ಲಘುಗಳನ್ನು ಹಾಕಿದರೆ ಶಿಖರಿಣಿ ಅಂತ 🙂

  12. ಸೇವ್ಯಮೇಂ ಬರಿದೆ ತಂಡುಲ ಜಿಹ್ವೆ ಬೇಡದೇಂ
    ತಾ ವ್ಯಂಜನಂಗಳಂ ಬಡವನಿರ್ದೇಂ|
    ಅವ್ಯಕ್ತ ತೋಷದಿಂ ರಸ್ತೆಯಿಂದೆತ್ತೆಂದೆ (ಎತ್ತಿ+ಎಂದೆ)
    ’ದಿವ್ಯದೀ ಪಾವಲಿ ಶ್ರೀಖಂಡಕಂ’||

    ಓಹ್! ಚಿತ್ರವನ್ನುಳಿದು ಬರಿಯ ಸೊಲ್ಲನ್ನು ಪರಿಗಣಿಸಿದೆ. ಹಾಗಾಗಿ ಆ ಪಾವಲಿಯು ’ಚಿತ್ರಾಯ ಇದಂ ನ ಮಮ ನ ಮಮ’. ಶ್ರೀಖಂಡಂ ಪೋಚಿ 🙁

  13. ಹೊತ್ತುರಿದಿಹಾ ದೀಪ ಹತ್ತುದೇಂ ಕಿಡಿಯಿಂದೆ
    ಮುತ್ತಿಬಂತೇಂ ಕಿಡಿಯದುರಿಯೊಳುಂ ತಾಂ |
    ಸುತ್ತಿರುವ ಕತ್ತಲಂ ತೂರಿತೋರುವ ಬೆಳಕ
    ನಿತ್ತುದೈ ದಿವ್ಯದೀಪಾವಲಿಶ್ರೀ ||

    • ಕಿಡಿಯಿಂದ ದೀಪ ಬೆಳಗಿತೇ ಅಥವಾ ದೀಪದಿಂದ ಕಿಡಿಹೊತ್ತಿತೇ ಎಂಬ ಕಲ್ಪನೆ ಚೆನ್ನಾಗಿದೆ.
      ೧) ’ಹೊತ್ತಿಯುರಿದಿಹ ದೀಪ ಹೊತ್ತಿಹುದೆ ಕಿಡಿಯಿಂದೆ’ ಎಂದರೆ ಸ್ಪಷ್ಟವಾಗಿರುತ್ತದೆ. ’ಹೊತ್ತುರಿದಿಹಾ’ ಹಾಗೂ ’ಹತ್ತುದೇಂ’ – ಇವುಗಳ ವ್ಯಾಕರಣ ಸರಿಯಿದೆಯೆ ಎಂದು ನನಗೂ ತಿಳಿದುಕೊಳ್ಳಬೇಕಿದೆ.
      ೨) ಕಿಡಿಯದುರಿಯೊಳುಂ ಬದಲು ಕಿಡಿಯದುರಿಯಿನಿಂ ಎಂದರೆ ಸೊಗಯಿಸುತ್ತದೆ.
      ೩) ಸುತ್ತಿರುವ ಬದಲು ಸುತ್ತಲಿಹ ವಾಸಿ. ಕುವೆಂಪುರವರ ಕವಿತೆಯೊಂದು ಇಲ್ಲಿ ಸ್ಮರಣೀಯ:
      ನೇಸರಿಳಿಯಲು ಮುಳುಗಿ ಪಡುಗಡಲಿನೆದೆಯಲ್ಲಿ
      ಮರೆಯಾಗುವುದು ತಿರೆಯು ಕತ್ತಲಲ್ಲಿ
      ಬೇರೊಂದು ಬಿತ್ತರದ ಲೋಕ ಮೈದೋರುವುದು
      ಗ್ರಹಚಂದ್ರತಾರೆಗಳ ಜ್ಯೋತಿಯಿಂದ|1|

      ಸುತ್ತ ಇಹ ಧಾರಿಣಿಯ ಹಗಲು ತೋರಿದರೇನು
      ಕತ್ತಲೆಯು ಬೆಳಗುವುದು ದೂರ ದೂರ
      ಹಗಲು ಮುಚ್ಚುವ ಸಿರಿಯ ಬಿಚ್ಚಿ ತೋರುವುದಿರುಳು
      ಬುವಿಗಿಂಬ ಮಿಗಿಲು ಬಾಂದಳದ ಮೈಮೆ|2|

      ಹಗಲಿನಂತಿರೆ ಬದುಕು ಸಾವಿರುಳಿನಂತೆ
      ಬಾಳು ಬೆಳಗುವುದಿಹವ, ಬೆಳಗುವುದು ಸಾವು
      ಬಾಳು ಮುಚ್ಚಿಹ ಪರದ ನೂರ್ಮಡಿಯ ಸಿರಿಯ.
      ಬಾಳೆ ಕುರುಡಿರಬಹುದೆ? ಸಾವೆ ಸಿರಿಗಣ್ಣೆ!3|

      • ಧನ್ಯವಾದಗಳು ಪ್ರಸಾದ್ ಸರ್,
        ಪದ್ಯವನ್ನು ತಿದ್ದಿಬರೆದಿದ್ದೇನೇ:
        ಹೊತ್ತಿಯುರಿದಿಹ ದೀಪ ಹೊತ್ತಿಹುದೆ ಕಿಡಿಯಿಂದೆ
        ಮುತ್ತಿಬಂತೇಂ ಕಿಡಿಯದುರಿಯಿನಿಂ ತಾಂ |
        ಸುತ್ತಲಿಹ ಕತ್ತಲಂ ತೂರಿತೋರುವ ಬೆಳಕ
        ನಿತ್ತುದೈ ದಿವ್ಯದೀಪಾವಲಿಶ್ರೀ ||
        (“ಉರಿಯಿನಿಂ” ಚನ್ನಾಗಿದೆ, ಬಿಡಿಸಿ ಬರೆಯುವ ಬಗೆ ತಿಳಿಸಿ)

        • ಪ್ರಸಾದು, ನಿಮ್ಮ ಸವರಣೆಗಳು ಮತ್ತು ಕುವೆಂಪು ಅವರ ಆಯ್ದಪದ್ಯಗಳು ಬಹಳಚೆನ್ನಾಗಿದೆ. ಒಂದಂಶ ‘ಉರಿಯಿನಿಂ’ ಅಸಾಧು ‘ಉರಿಯಿಂ’ ಸರಿಯಾದ ಪ್ರಯೋಗ ಅಲ್ಲವೇ?

      • ಉಷಾ ಅವರೆ, ಚೆನ್ನಾಗಿದೆ, ನಿಮ್ಮ ಭಾವನೆಗಳನ್ನ ಅನುಸರಿಸಿ ಪ್ರಯತ್ನ

        ಕತ್ತಲಂ ಭೇದಿಸುತೆ ಕಿಡಿಯುರಿಯನಪ್ಪೆ ಕಿಡಿ-
        ಮುತ್ತನೀವುದುಮಲ್ತೆಯುರಿಯಧರದಿಂ
        ಬಿತ್ತೆ ಕಿಡಿಕಾಳ್ಗಳಂ ಫಲಮುರಿಯದಲ್ತೆ ತಾಂ
        ಮತ್ತೆಯುರಿ ಕಿಡಿಗಳಿಂಗಾಕರಮಿರಲ್

        • ಧನ್ಯವಾದಗಳು ಸೋಮ,
          ನಿಮ್ಮ ಪದ್ಯ ಬಹಳ ಚನ್ನಾಗಿದೆ. ಭಾಷೆ-ಬಂಧಗಳನ್ನು ಗಮನಿಸಿಕೊಳ್ಳುತಿದ್ದೇನೆ. ಉರಿಯಿಂದ ಕಿಡಿಹಾರುವ – ಕಿಡಿಯೆ ಉರಿಯಾಗಿವ ಪ್ರಕ್ರಿಯೆಯಲ್ಲಿ – “ಪರಮಾತ್ಮನೆಂಬ “ದಿವ್ಯಜ್ಯೊತಿ”ಯಿಂದ ಕಿಡಿಯಾಗಿಬಂದ ಆತ್ಮರು ಅವನ ಸ್ವರೂಪದ ದೀಪಗಳಾಗಿ ಬೆಳಗುತ್ತಿರುವ ಕಲ್ಪನೆ ಬಂದದ್ದು”
          ಈ ಚಿತ್ರದ ಪ್ರೆರಣೆಯಿಂದ.

  14. ನರಕಹರ-ನಖೋತ್ಥಾ ನಾಕಪಾಲೇಡ್ಯಮಾನಾ
    ದನುಜಪತಿ-ನಿಷೇವ್ಯಾ ದ್ಯೋತಯನ್ತೀ ತ್ರಿಲೋಕಮ್ |
    ಸ್ಥಿರತರ-ವಸುದಾತ್ರೀ-ಮನ್ದಹಾಸ-ಪ್ರಗಲ್ಭಾ
    ಚಿರಮಿಯಮವತಾನ್ನೋ ದಿವ್ಯದೀಪಾವಲಿಶ್ರೀಃ ||

    ನರಕನನ್ನು ಸಂಹರಿಸಿದವನ (ಕಾಲಿನ) ಉಗುರುಗಳಿಂದ ಹೊಮ್ಮಿದ, ದೇವತೆಗಳಿಂದ ಆಶ್ರಯಿಸಲ್ಪಟ್ಟ, ರಾಕ್ಷಸರಾಜನಿಂದ ಸೇವಿಸಲ್ಪಟ್ಟು ಮೂರು ಲೋಕಗಳನ್ನೂ ಬೆಳಗಿದ, ಸ್ಥಿರವಾದ ಸಂಪತ್ತನ್ನು ಕೊಡುವವಳ ಮಂದಹಾಸದಿಂದ ವರ್ಧಿಸಿದ ಈ ದಿವ್ಯದೀಪಾವಲಿಶ್ರೀಯು ನಮ್ಮನ್ನು ಎಂದಿಗೂ ಕಾಪಾಡಲಿ.

    ಸವರಣೆಗಳಿದ್ದಲ್ಲಿ ದಯವಿಟ್ಟು ತಿಳಿಸುವುದು.

    ಹಾಗೆಯೇ, belated ಆಗಿ ದೀಪಾವಳಿಯ ಶುಭಾಶಯಗಳು.

  15. ದಿವ್ಯದೀಪಾವಲಿಶ್ರೀ ಕಳೆಯುತಲ್ತಮಂ
    ಭವ್ಯ ನಾಡಂ ಬೆಳಗೆ ಬಂದಿರ್ಪಳೇಂ ?
    ಸವ್ಯಗತಿಯಂ ತಿಳಿದು, ಮೋದಿಯೊಳ್ಮೋಡಿಯೀ
    ನವ್ಯ ರೂಪವ ಜಾಣ್ಮೆಯಿಂ ತಾಳ್ದು ತಾಂ !

    • ಕಾಂಚನ ಅವರೇ, ಬಹಳ ಚೆನ್ನಾಗಿದೆ, ತಮಮಂ ಎಂದಾಗಬೇಕಲ್ಲವೇ

      • ನಿಜ ಸೋಮಣ್ಣ. ಅದು “ತಮವ” ಎಂದು ದ್ವಿತೀಯಾ ದಲ್ಲಿರಬೇಕು. ಸಾಲನ್ನು ಹೀಗೆ ತಿದ್ದಿದ್ದೇನೆ.

        ” ದಿವ್ಯದೀಪಾವಲಿಶ್ರೀ ಕಳೆಯುತಲ್ತಮವ “

      • ವಿಭಕ್ತಿ ಪಲ್ಲಟದ ತಂತ್ರದಿಂದ ತಮಂ ಎಂಬುದನ್ನೂ ಸಾಧುವಾಗಿಸಬಹುದೇ? – ಹಾಲಿಗೆ ಎಷ್ಟು ನೀರು (ನೀರನ್ನು ಎಂಬ ದ್ವಿತೀಯಾ ವಿಭಕ್ತಿಯನ್ನು ನೀರು ಎಂದು ಪ್ರಥಮಾ ವಿಭಕ್ತಿಗೆ ಪಲ್ಲಟಗೊಳಿಸಿ) ಹಾಕಬೇಕು ಎಂಬ ಪ್ರಯೋಗದಂತೆ.

        ಸರಿ ಮಾಡಬೇಕೆಂದಿದ್ದರೆ, “ದಿವ್ಯದೀಪಾವಲಿಶ್ರೀ ಕಳೆಯೆಕಳ್ತಲಂ” ಎಂದೂ ಮಾಡಬಹುದು.

        [ಸಾಧು ಸಂದೇಹಮಂ ತೋರಿರ್ಕೆಂ ನಿಜಂ. ಪೆಂಡಿರ ವಹಿಸಿ ಬಂದಿರ್ಕನೀತನ್ ಎಂದಿಲ್ಲಿ ಸೋಮ, ಪ್ರಸಾದರ್ಗಳು ಕುಚೋದ್ಯದಿಂ ಜರೆದರಾದೊಡಂ, ಪುಸಿಮಾತನಾಳ್ಪರೆಂದೀಗಳ್ ಸಾರ್ವೆಂ :-)]

        • ರಾಮ್

          ಪುಸಿಯಲ್ತು ನಿಜಮೆ ವೇಡಾ
          ಕಸಿವಿಸಿ ಸತಿಪಕ್ಷಪಾತಮೊಳಿತೈ ಸತತಂ
          ನಸುನಗುತೆ ಜಯಮನೊರೆವೊಂ
          ಜಸಮಂ ಬಗೆವೊಂ ವಿಭಕ್ತಿಪಲ್ಲಟಮಿರಲೇಂ 😉

          on serious note I fully agree with you, that if rasa, dhwani, bandha are all holding well then we can easily digest one vibhakti pallaTa dOsha, vice versa is objectionable 🙂

  16. ಕಿಡಿಯವೊಲೊರೆದಿರ್ಪಾ ಸೂಕ್ಷ್ಮಮುಂ ಸ್ನೇಹಘಾತಂ
    ಧಡಮೆನಹಿತರಂ ದಲ್ ಮಾಳ್ಪುದೆಂಬರ್ಥತತ್ವ-
    ಕ್ಕೆಡೆಗೊಡುವೆನೆ ಢಂಢಂ ಸ್ಫೋಟದಿಂದಲ್ತೆ ತೋರ್ಪಳ್
    ನಡತೆಯಸವಿಯಂ ತಾಂ ದಿವ್ಯದೀಪಾವಳಿಶ್ರೀ

    • ಪ್ರತಿಕವನಮನನ್ಯಸ್ಫೂರ್ತಿಯಿಂ ಮೂರ್ತಮಾಗಳ್
      ಪ್ರತಿವಚನಮಮೋಘಪ್ರೀತಿಯಿಂ ಪ್ರೋತಮಾಗಳ್ |
      ವ್ರತಮೆನಲಣಿಗೊಂಡೀ ಸೋಮನಿಂ ಪದ್ಯಪಾನಾ-
      ದ್ಭುತಗತಿಯದೊ ಸಲ್ಗುಂ ದಿವ್ಯದೀಪಾವಲಿಶ್ರೀ || 🙂

      • ಗಣೇಶ್ ಸರ್, ಧನ್ಯವಾದಗಳು

        ಪ್ರತಿಕವನಕನನ್ಯಸ್ಫೂರ್ತಿಯಂ ನೀಳ್ದಪರ್ಗಂ
        ಪ್ರತಿವಚನಕಮೋಘಪ್ರೀತಿಯಿಂ ಕೇಳ್ದಪರ್ಗಂ |
        ವ್ರತಮೆನಲಣಿಗೊಂಡಾ ಪಾಂಗಿಗಂ… ಪದ್ಯಪಾನ-
        ಸ್ಮಿತವದನದೆ ತೋರ್ಗುಂ ದಿವ್ಯದೀಪಾವಲಿಶ್ರೀ || 🙂

      • ಗಣೇಶ್ ಸರ್, ಸೋಮ
        ನಿಮ್ಮಿಬ್ಬರ ಪದ್ಯಗಳನ್ನು ಜೊತೆಜೊತೆಯಾಗಿ ಕಂಡ ಆನಂದದಲ್ಲಿ ಬಂದ ಪದ್ಯ : (ನೆಲವಿನಲ್ಲಿ ಕಂಡ “ಸೂರ್ಯ”ನ ಅಂದ – ನೆಲದಮೇಲೆ ಕಂಡ “ಚಂದ್ರ”ನ ಬಿಂಬ ದಂತೆ ಕಂಡ ಕಲ್ಪನೆಯಲ್ಲಿ)

        ನೆಲದೊಳಿರುಳಲಿ ಕಂಡ ಚಂದ್ರಬಿಂಬವು ಕಾಣ
        ಕಲೆಯಿದುಂ ದಿವ್ಯದೀಪಾವಲಿಶ್ರೀ |
        ನೆಲವೊಳಿರುವೋಲ್ ಕಂಡ ಸೂರ್ಯನಂದದೆ ಕಾಣ
        ಕಲೆತುದೇಂ ದಿವ್ಯದೀಪಾವಲಿಶ್ರೀ ||

        • ದಿಟವಾಗಿ ಇದು ಪ್ರತಿಪದ್ಯರಸೋದಯಂ |

          • ಶ್ರೀಲಲಿತಾ ರವರೆ,
            ಉರಿಯುತ್ತಿರುವ ದೀಪ – ಮಣ್ಣ ಹಣತೆಯ ಎಣ್ಣೆಯಲ್ಲಿ ಕಂಡ “ಚಂದ್ರಬಿಂಬ”ದಂತೆ ಕಂಡಿದೆ ಮತ್ತು ಅದನ್ನು ತಂದವ “ಸೂರ್ಯ” – ಎಂಬ ಕಲ್ಪನೆಯಲ್ಲಿ” ಬಂದ “ಚಿತ್ರಕ್ಕೆ ಪದ್ಯ” , ಈ ಸಂದರ್ಭಕ್ಕೆ ಹೊಂದಿದೆಯಲ್ಲವೇ?

  17. ದಂಡೋದ್ಗೀರ್ಣ-ಸ್ಫುಲಿಂಗೈಃ ಸ-’ಸುರಸುರ’-ರವೈಶ್ಚಾರುರೂಪಾ ಚಕಾಸ್ತೇ
    ನಿಃಶಬ್ದಂ ದೀಪಪಾತ್ರೈಃ ಪುರಜನರಚಿತೈ-ರ್ದಿವ್ಯದೀಪಾವಲಿಶ್ರೀಃ |
    ತೈರಾಕೃಷ್ಟೋ ಹೃಷೀಕೈ-ರ್ಹೃತಹೃದಯ ಸಖೇ ಮಾ ಗಮೋ ಮುಗ್ಧತಾಂ ತ್ವಂ
    ಸ್ನೆಹೇ ಮಗ್ನಂ ಸಿತಾಙ್ಗಂ ತಮನುಸರ ಗುಣಂ ಭಾಸಮಾನಂ ವಿದಗ್ಧಮ್ ||

    ಸುರಸುರವೆಂಬ ಶಬ್ದದೊಂದಿಗೆ ದಂಡದಿಂದ ಬರುತ್ತಿರುವ ಕಿಡಿಗಳಿಂದ, ಹಾಗೂ ಪುರಜನರಚಿತ ಹಣತೆಗಳಿಂದ ದೀಪಾವಳಿಯು ಶೋಭಿಸುತ್ತಿದೆ. ಆದರೆ, ಅವುಗಳಿಂದ ಆಕೃಷ್ಟನಾಗಿ, ಓ ಹೃತಹೃದಯ, ಮಿತ್ರನೇ, ಮರಳಾಗಬೇಡ. ಸ್ನೇಹದಲ್ಲಿ (ಎಣ್ಣೆಯಲ್ಲಿ) ಮಗ್ನನಾದ, ಬಿಳಿಯಾದ (ಶುಭ್ರನಾದ), ತಾನು ಬೆಂದು, ಬೆಳಕು ನೀಡುತ್ತಿರುವ, ಆ ಬತ್ತಿಯನ್ನು ಅನುಸರಿಸು. (ಗುಣ ಎಂದರೆ ದಾರ ಎಂಬ ಅರ್ಥವೂ ಇದೆ)

    • ಶ್ಲಿಷ್ಟೈರಿಷ್ಟೈಸ್ಸುದೃಷ್ಟೈರಭಿನವಕವನೈರ್ದಿವ್ಯದೀಪಾವಲಿಶ್ರೀ-
      ರುತ್ಕೃಷ್ಟಾ ಸಾಧಿತಾ ತೇ ಪ್ರಿಯಸಖ! ಸುಖದೈಃ ಪದ್ಯಪಾನೇ ನಿಪಾನೇ 🙂

  18. ಪ್ರಾಣಪಕ್ಷಿಯು ಪಾರಿಪುಗುವ ತುಸುವೇ ಮುನ್ನ
    ಕ್ಷೀಣಿಸದೆ ಜೀವ ಭೋಗದಿ ಬೆಳಗುಗುಂ|
    ಶ್ರೇಣಿಜೋತಿಯು ದಿವ್ಯದೀಪಾವಲಿಶ್ರೀಯ
    ಕಾಣು ಗುಣ-ತೈಲದಿಂ ಬೇರ್ಪಟ್ಟವೋಲ್||

  19. कृत्वा स्वात्मार्पणं त्वं कुजनपरिवृतं काशयित्वेहलोकं
    प्राप्नोषि त्यागबुध्या परिभवमनिलाद्धर्मवर्त्म- स्थितिज्ञः -स्थितिज्ञा |
    कान्तारं दौष्ट्यमेषं दहसि यदि सखे सुरुग्दर्शयित्वा स्वशक्तिं
    सख्यं प्राप्नोषि वायोर्भवति ननु तदा दिव्यदीपावलिश्रीः ||

    त्वं धर्मवर्त्मस्थितिज्ञा (गतिज्ञा नासि) त्यागबुध्या स्वात्मार्पणं कृत्वा कुजनपरिवृतं इहलोकं काशयित्वा अनिलात् (अपि) परिभवं प्राप्नोषि | हे सुरुक् (=दीप) स्वशक्तिं दर्शयित्वा एषं दौष्ट्यं कान्तारं
    यदि दहसि वायोः सख्यं (अपि) प्राप्नोषि तदा दिव्यदीपावलिश्रीः भवति ननु |

    ನೀನು ಧರ್ಮಮಾರ್ಗದ ಸ್ಥಿತಿಯೊಂದನ್ನೇ ತಿಳಿದು ತ್ಯಾಗಬುದ್ಧಿಯಿಂದ ಆತ್ಮಾರ್ಪಣೆ ಮಾಡಿ ಕೆಟ್ಟ ಜನರೇ ತುಂಬಿರುವ ಲೋಕವನ್ನು ಬೆಳಗಿಸುತ್ತೀಯ ಸಣ್ಣ ಗಾಳಿಯೂ ನಿನ್ನ ಅಂತ್ಯಕ್ಕೆ ಕಾರಣವಾಗುತ್ತದೆ. ಅದರಿಂದ ಹೇ ದೀಪಕ! ನಿನ್ನ ಸ್ವಶಕ್ತಿ ತೋರಿಸಿ ಈ ದುಷ್ಟತೆಯ ಕಾಡನ್ನು ದಹಿಸಿದರೆ ಆಗ ವಾಯುವಿನ ಸಖ್ಯವೂ ಸಿಗುತ್ತದೆ (ಆರಿಸುವ ಬದಲು ನಿನ್ನ ಶಕ್ತಿಯನ್ನು ಹೆಚ್ಚಿಸುತ್ತಾನೆ) ಖಂಡಿತ “ದಿವ್ಯದೀಪಾವಲಿಶ್ರೀ” ಆಗುತ್ತದೆ. ಒಟ್ಟಿನಲ್ಲಿ ದಂಡಸಂಹಿತೆ ತುಂಬಾ ಮುಖ್ಯವೆಂಬ ಅನಿಸಿಕೆ/ಆಶಯ

    usual disclaimers about grammar anvayaklesha etc apply 😛

    • Very good idea and commendably articulated in majestic sragdharaa metre. It is a nice example of anyOkti, naturally framed in aprastutaprashaMsaalaMkaara. But one of the key words of this verse, the name of the object, after which the whole verse is composed, deepa it self is missing here and hope this lapse would be taken care of:-)

      • thank you sir for your appreciation 🙂
        I’ll replaced ‘सखे’ with सुरुक् (= चकारन्त स्त्रीलिङ्ग शब्द सुरुच् संबोधना एकवचन) to address “light” and also changed the adjective धर्मवर्त्मस्थितिज्ञः to धर्मवर्त्मस्थितिज्ञा so as to maintain consistency with the change in gender of the noun.

      • ಜ್ಯೋತೀ ಕುಂದಲ್ಕದೇಕೌ ಕುಜನರಿಗೆನೆ ದಾವಾಗ್ನಿಯಿಂದಂ ಖಳರ್ ಸಂ-
        ಧೂತರ್ಕಳ್ ತ್ರಸ್ತರೆಂಬೊಲ್ ದಹಿಸುತೆ ಮೆರೆಯೆಮ್ಬೀ ಪ್ರಯತ್ನಂ ವಿಶಿಷ್ಟಂ 🙂

        ಜಿ.ಎಸ್. ಬಹಳಚೆನ್ನಾಗಿದೆ ಕಣೋಪ್ಪ

  20. (ಶಾರ್ದೂಲ ವಿಕ್ರೀಡಿತ)
    ಬಾಯೆಂಬರ್ ಬಲಿಚಕ್ರವರ್ತಿಗೆ ಮೊದಲ್ ತಾವೀವರಾತಿಥ್ಯಮಂ
    ಕಾಯೆನ್ನುತ್ತೆ ಬಳಿಕ್ಕ ಪೂಜಿಪರಲಾ ಗೋಮಾತೆಯಂ ವ್ಯಾಘ್ರಮಂ
    ವ್ಯಾಯಾಮಕ್ಕೆ ವೃಷಂಗಳಾಟಮೆಸೆಯಲ್ಕಾ ದಿವ್ಯದೀಪಾವಳಿ
    ಶ್ರೀಯಂ ತೋರುಗೆ ದೀಪ್ತಮಾಗಿ ತಮಮಂ ಪಿಂದಟ್ಟುತುಂ ಲೋಕದೊಳ್||

    (ನಮ್ಮಕಡೆ ನಡೆಯುವ ದೀಪಾವಳಿ ಉತ್ಸವವನ್ನು ನೋಟದಲ್ಲಿಟ್ಟುಕೊಂಡು)
    ಮೊದಲು ಬಲಿಚಕ್ರವರ್ತಿಯನ್ನು ಆಹ್ವಾನಿಸಿ ಆತಿಥ್ಯವನ್ನು ನೀಡುತ್ತಾರೆ. ಆಮೇಲೆ ನಮ್ಮನ್ನು ಕಾಪಾಡು ಎಂದು ಗೋಮಾತೆಯನ್ನೂ, ಹುಲಿಯನ್ನೂ ಪೂಜಿಸುತ್ತಾರೆ(ಸಮೂಹಾರ್ಥವಾಗಿ ಪದ್ಯದಲ್ಲಿ ಬರಲಿಲ್ಲ;-( ) ವ್ಯಾಯಾಮಕ್ಕೆ ಗೂಳಿಗಳನ್ನು ಬಿಟ್ಟು ಆಡುತ್ತಾರೆ. ಇಂತಹ ದಿವ್ಯ ದೀಪಾವಳಿ ದೀಪ್ತವಾಗಿ ಕತ್ತಲೆಯೆನ್ನು ಹಿಂದಟ್ಟುತ್ತಾ ಲೋಕದಲ್ಲಿ ಶ್ರೀಯನ್ನು ತೋರಿಸಲಿ.

    ಈ ಹಬ್ಬದಲ್ಲಿ ಒಂದಷ್ಟು ಜಾನಪದ ಆಚರಣೆಗಳಿವೆ. ಬೆಳಿಗ್ಗೆ ಗೋಪೂಜೆ ಮಾಡುತ್ತಾರೆ. ಆಮೇಲೆ ಹುಲಿಯನ್ನೂ ಪೂಜಿಸುತ್ತಾರೆ. ಹುಲಿಯ ಪೂಜೆಯನ್ನು ಮಾಡುವುದು, ಅದು ನಮ್ಮ ಗೋಸಂಪತ್ತಿಗೆ ತೊಂದರೆ ಕೊಡದಿರಲಿ ಎಂಬ ಕಾರಣಕ್ಕೆ ಬೆಳೆದು ಬಂದದ್ದಿರಬೇಕು. ಆಮೇಲೆ ಗೂಳಿಗಳ ಕತ್ತಿಗೆ ಅಡಿಕೆ, ಹಣ ಮೊದಲಾದವುಗಳ ಮಾಲೆ ಕಟ್ಟಿ ಅವನ್ನು ಓಡಲು ಬಿಟ್ಟು, ಮಾಲೆ ಹರಿಯುವ ಆಟ ನಡೆಯುತ್ತದೆ. ಅಲ್ಲದೇ ಕೆಲವೊಂದು ಜೂಜಿನ ಆಟಗಳೂ ನಡೆಯುತ್ತವೆ. ಸಂಜೆಯ ಹೊತ್ತಲ್ಲಿ ತುಳಸಿ ಗಿಡದೆದುರು ದೀಪ ಹಚ್ಚಿಡುವುದು. ಇವೆಲ್ಲವನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ

    • ಕೊಪ್ಪಲತೋಟ, ಬಹಳ ಚೆನ್ನಾಗಿದೆ, ಪ್ರಸಾದು ಅವರಿಗೆ ಆಡಿದ ಮಾತನ್ನ
      (http://padyapaana.com/?p=2007#comment-13997) ವಾಪಸ್ ತಗೊಂಡೆ 🙂
      ಚಂದಂ ಪೊಂದಿಸೆ ಖಂಡಪಾದಮಿದು ದಲ್ ಸಂಭಾವ್ಯತಾಕ್ರೀಡನಂ

    • ಪದ್ಯ ಚೆನ್ನಾಗಿದೆ.
      ’ಬಾಯ್’ ಎಲ್ಲೈ ಬಲಿಗಂ? ವಿಶಾಲಪದಮಲ್ತೊಂದೊಂದು ಭೂ-ವ್ಯೋಮಕಂ?
      ’ಕಾಯ್’ಗಳ್ ವ್ಯಾಘ್ರವು-ಗೋವದೆಂತೆನಿಪುವೈ? ಜೀವಿಂಪ ಜೀವಿಂಗಳೈ|
      ವ್ಯಾಯಾಮಂ ಹರನಿತ್ತ ಶಾಪ ವೃಷಭಕ್ಕಾಮೇನ ಮಾಳ್ಗುಂ ಗಡಂ?
      ಕೈಯಾರಂ ವಿಕೃತಂ, ಗಣೇಶ ಸಲದೈ, ಶಬ್ದಂಗಳಂ ಗೈವುದುಂ||

      (ವಿ.ಸೂ.: ಕೊನೆಯ ಪಾದದಲ್ಲಿ ’ಗಣೇಶ’ ಬದಲು ’ಪ್ರಸಾದು’ ಎಂದೂ ಓದಿಕೊಳ್ಳಬಹುದು ;))

      • ಭಾಯ್! ಇಲ್ಲೇಂ ರಸಭಾವವಕ್ರಚತುರೋಕ್ತ್ಯಾದಿಷ್ಟಮಂ ರಾವಮಂ
        ನ್ಯಾಯಕ್ಕೊಪ್ಪುವ ರೀತಿಯೊಳ್ ತರದೆ ನಾಂ ಶಾರ್ದೂಲವಿಕ್ರೀಡಿತ
        ಕ್ಕೂ ಯೋಗ್ಯಂ ಪದಪುಂಜಮೆಂದುಲಿಯಲಿಂತೀ ವೃತ್ತಮಂ ಪೇಳ್ದಪೆಂ
        ಹಾಯ್ ಎಂಬಂತೆ ಗಡೆಂತು ತೋ(ಬಾ)ರಿಸಿದಿರೈ ಹಾಯ್!! ಕಷ್ಟಕಷ್ಟಂ ವಲಂ||

        (ರಾವ=ಧ್ವನಿ, ‘ಕ್ಕೂ ಯೋಗ್ಯಂ’-ಶಿಥಿಲತೆಯಿದೆ)

  21. ಭುವಿಯ ಸೂರಲಿಹ ಬೆಳಕಿಂಡಿಯೊಳ್ ತೂರಿತಾಂ
    ಕವಿದ ಸೂರಿಯ ಕಿರಣ ಮತ್ತಾವ ವೈ-
    ಭವ ಮಸೂರದೆ ನುಸುಳಿ ಕಾದಕಾವಲಿ ಸಂ-
    ಭವಿಸಿತೀ ದಿವ್ಯದೀಪಾವಲಿಶ್ರೀ ||

    (ಚಿಕ್ಕಂದಿನಲ್ಲಿ, ಹೆಂಚಿನಮನೆಯ ಬೆಳಕಿಂಡಿಯಿಂದ ಬೀಳುತ್ತಿದ್ದ ಬಿಸಿಲಕೋಲಿಗೆ ಭೂತಕನ್ನಡಿ ಹಿಡಿದು ಬೆಂಕಿ ಹಚ್ಚಿಸುತ್ತಿದ್ದ ಅದ್ಭುತ ನೆನಪಿನಲ್ಲಿ)

    • ಉಷರವರೆ- ಭಾವ ಚೆನ್ನಾಗಿದೆ. ಈ ಪದ್ಯದ ಓಟ ಸುಗಮವಾಗಿಲ್ಲ- ಮೂಲೆಮೂಲೆಯಾಗಿ ಗಣವಿಭಜನೆಯಾಗಿದೆ ಅಂತ ನನ್ನ ಅನಿಸಿಕೆ. ಎರಡನೆಯ ಪಾದಾಂತ್ಯದಲ್ಲಿ ಯತಿ ಬರುವುದರಿಂದ ಖಂಡಪ್ರಾಸ ಬರದೆ ಪದವು ಅಲ್ಲಿಯೇ ಮುಗಿದರೆ ಒಳಿತು. ಮೂರನೆಯ ಪಾದದ ಕೊನೆಯ ಗಣದಲ್ಲಿ ಒಂದು ಮಾತ್ರೆ ಕಡಮೆಯಾಗಿದೆ.

      ಒಂದು ಸಲಹೆ. ಪಂಚಮಾತ್ರೆ ಚೌಪದಿಯ ರಚನೆಯಲ್ಲಿ ನಿಮಗೆ ತಕ್ಕಮಟ್ಟಿಗೆ ಪರಿಶ್ರಮ ಈಗಾಗಲೇ ಆಗಿದೆ. ಬೇರೆಯ ಪ್ರಕಾರಗಳಲ್ಲಿಯೂ ಪ್ರಯತ್ನವನ್ನು ಮುಂದುವರಿಸಿ. ಅದೂ ಅಭ್ಯಾಸವಾಗುತ್ತೆ.

      • ಧನ್ಯವಾದಗಳು ಶ್ರೀಕಾಂತ್ ಸರ್,
        ಪದ್ಯವನ್ನು ತಿದ್ದಿದ್ದೇನೆ.
        ಭುವಿಯ ಸೂರಲಿಹ ಬೆಳಕಿಂಡಿಯೊಳ್ ತೂರಿತಾಂ
        ಕವಿದ ಸೂರಿಯ ಕಿರಣ ಮತ್ತದಾವ
        ಭವ ಮಸೂರದೆ ನುಸುಳಿ ಕಾದಕಾವಿನಲಿ ಸಂ-
        ಭವಿಸಿತೀ ದಿವ್ಯದೀಪಾವಲಿಶ್ರೀ ||

        ನನಗೂ ಬೇರೆ ಬೇರೆ ಛಂದಸ್ಸಿನಲ್ಲಿ ಬರೆಯುವ ಮನಸ್ಸು. ಸಾದ್ಯವಾಗುತ್ತಿಲ್ಲ (ನನ್ನ ಮೊದಲನೇ ಪದ್ಯ “ಮಾಲಿನಿ”ಯಲ್ಲಿ ಅದೇ ಉತ್ಸಾಹದಲ್ಲಿ ಬರೆದದ್ದು, ಸರಿಬಂದಿಲ್ಲ ಅಲ್ಲವೆ?) ನನ್ನ ಕಲ್ಪನೆಗೆ ಹೊಂದುವ ಪದಗಳನ್ನ ಪಟ್ಟಿಮಾಡಿಕೊಂಡು, ಆದಿಪ್ರಾಸ ನಿರ್ಧರಿಸಿ, ಹೆಚ್ಚು ಒದಗುವ ಗಣವಿಂಗಡಣೆ ಮೇಲೆ ಪ್ರಯತ್ನ ಮುಂದುವರಿಸುತ್ತೇನೆ. ಹೆಚ್ಚಾಗಿ ೩-೪, ೪ ,೫ ಗಣಗಳಲ್ಲೇ (ಭಾಮಿನಿ/ಚೌಪದಿ) ಸಾಗುತ್ತಿದೆ. “ವೃತ್ತ”ಗಳಿಗೆ ಅಳವಡಿಸಿಕೊಳ್ಳಲು ತಿಳಿಯುತ್ತಿಲ್ಲ. “ಕಂದ ಪದ್ಯ” ಬಹಳ ಇಷ್ಟ, ಭಾಷಾ ಮಿತಿಯಿಂದ ಸಾದ್ಯವಾಗುತ್ತಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹದೊಂದಿಗೆ ಖಂಡಿತವಾಗಿ ಪ್ರಯತ್ನ ಮುಂದುವರಿಸುವೆ.

        • ಒಳ್ಳೆಯ ಸಲಹೆಗಾಗಿ ಶ್ರೀಕಾಂತರಿಗೆ ಧನ್ಯವಾದ. ಉಷಾ ಅವರು ಆರಂಭದಲ್ಲಿ ಕಷ್ಟವೆನಿಸಿದರೂ ಶ್ರದ್ಧೆಯಿಂದ ಯತ್ನಿಸಬಹುದು ಏಕೆಂದರೆ ಅವಿರತವೂ ತಮಗೆ ಪದ್ಯರಚನೋತ್ಸಾಹವಿದೆ. ಇದೇ ನಿಮ್ಮನ್ನು ದಾಟಿಸುತ್ತದೆ.

          • ನಿಮ್ಮ ಸಲಹೆಯನ್ನು ತಡವಾಗಿ(ಇಂದು) ಗಮನಿಸಿದೆ ಗಣೇಶ್ ಸರ್, ಹಾಗೆಯೇ ಆಗಲಿ ಪ್ರಯತ್ನ ಮುಂದುವರೆಸುವೆ.

  22. [ಮಂದಾಕ್ರಾಂತ]
    ಗರ್ನಾಲೇಂ ಮೇಣ್ ಧ್ವನಿ ಬಲಿಶಿರಾಘಾತಸಂಜಾತಮೋ ಕೇಳ್
    ಸುರ್ಬಾಣಂ ಮೇಣಿದು ದಶಶಿರಂ ಸೀಳ್ದನುತ್ಸಾಹಮೇನ್ ಸಾಲ್-
    ನೂರ್ದೀಪಂ ಕಿಟ್ಟಗೆ ನರಕಮುಕ್ತರ್ಕಳಾ ಕಾಯ್ಕೆಯೇಂ ಈ
    ಮೂರ್ತಂ ಬರ್ಪಳ್ ಸರಿಸಿ ಸಮಯಂ ಮಾತೆ ದೀಪಾವಲೀಶ್ರೀ
    [ಗರ್ನಾಲಿನ ಸದ್ದೋ ಅಥವಾ ವಾಮನ ಪಾದಾಘಾತವೋ, ಸುರ್ಬಾಣವೋ (ರಕೆಟ್ಟೋ) ರಾಮನ ವಿಜಯಿ ಬಾಣದ ಉತ್ಸಾಹವೋ,
    ಸಾಲ್ದೀಪಗಳೋ ಅಥವಾ ನರಕಾಸುರಮುಕ್ತೆಯರು ಕೃಷ್ಣನ ಸ್ವಾಗತಕ್ಕೆ ಕಾಯ್ವ ಪರಿಯೋ, ಹೀಗೆ ಕಾಲವನ್ನು ಸರಿಸುತ್ತಾ
    ದೀಪಾವಲೀಶ್ರೀ ಬರುತ್ತಾಳೆ ಎಂದು ಹೇಳಲು ಮಾಡಿದ ತಿಣುಕಾಟ 🙂 ]

    • ಮೊದಲ ಸಾಲನ್ನು ಬದಲಿಸಿದ್ದೇನೆ
      ಗರ್ನಾಲೇಂ ಮೇಣ್ ಧ್ವನಿ ಬಲಿಶಿರಾಘಾತಸಂಜಾತಮೋ ನೋಡ್

    • ಭಾಪೀ ವಾಣೀ ಮೆರೆತಮಿರೆ ಸಂದೇಹದಾಲಂಕೃತಳ್ ತಾಂ
      ಹೊಳ್ಳಂ, ಮೂರ್ತಳ್ ಸರಿಯಲ್ಲವೇ, ಆದಿಪ್ರಾಸದಲ್ಲಿ ಸಮೀಪಪ್ರಾಸ ಬಳಕೆಯಾಗಿದೆ, ಹಳೆಗನ್ನಡದಲ್ಲಿ ಕಿಟ್ಟ ಎಂದು ಬಳಸಬಹುದೇ?

    • ಆದಿಪ್ರಾಸವೇಕೆ ಮರೆಯಾಯಿತು? (ಗರ್ನಾಲು ಎಂಬುದಕ್ಕೆ ರ್ನಾ ರ್ನೀ ರ್ನೇ ರ್ನೂ ರ್ನಿ ಇತ್ಯಾದಿಯಾದ ಪ್ರಾಸವೇ ಬರಬೇಕಷ್ಟೇ:-) ಹಲಕೆಲವು ವ್ಯಾಕರಣದೋಷಗಳೂ ಇವೆ. ದೂರವಾಣಿಯಲ್ಲಿ ವಿವರವಾಗಿ ಚರ್ಚಿಸಿಯೇನು.

      • ಗಣೇಶರಿಗೆ ಧನ್ಯವಾದಗಳು. ಆದಿಪ್ರಾಸದ ಕೊರತೆಯಲ್ಲದೆ ಅವರು ತಿಳಿಸಿದ ವ್ಯಾಕರಣದೋಷಗಳು ಹೀಗಿದೆ.

        ೧) ಮೇಣ್ (ಅಥವಾ) – ಇದರ ಅಗತ್ಯವಿಲ್ಲ. ಗರ್ನಾಲೇಂ ನಲ್ಲೇ ಇದು ಅಡಕವಾಗಿದೆ. ನೋಡ್ ಸರಿಯಾದ ರೂಪವಲ್ಲ. ಕಾಣ್ ಎಂದಾಗಬಹುದು.
        ೨) ಸುರ್ಬಾಣಂ – ಸರಿಯಲ್ಲ. ಸ್ವರ್ಬಾಣಂ (ಸ್ವರ್ – ಸ್ವರ್ಗ) ಎಂದು ಬದಲಿಸಬಹುದು.
        ೩) ಕಾಯ್ಕೆ ಸರಿಯಲ್ಲ. ಕಾಯುವಿಕೆ ಎಂದೇ ಆಗಬೇಕು. ಕಾಯ್ಯೆ ಎಂದು ಮಾಡಬಹುದು.
        ೪) ಕೊನೆಯಲ್ಲಿ, ಮಂದಾಕ್ರಾಂತಕ್ಕೆ ಇನ್ನೂ ಸಂಸ್ಕೃತ, ಪಳಗನ್ನಡದ ಹದವಿಲ್ಲವಾದರೆ ಪದ್ಯಶಿಲ್ಪ ಸೊರಗುತ್ತದೆ.
        [ಇಲ್ಲಿ ಮೂರ್ತಂ ಅಂದರೆ ಮುಹೂರ್ತಂ ಎಂದು]

Leave a Reply to Raghavendra G S Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)