Aug 032014
 

‘ವಿಸ್ಫೂರ್ಜಿತಶ್ರಾವಣಂ’ ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣ ಮಾಡಿರಿ

  58 Responses to “ಪದ್ಯಸಪ್ತಾಹ ೧೨೦: ಪದ್ಯಪೂರಣ”

  1. ಅಮೆರಿಕದಿಂದವಸರದೊಳ್
    ಸಮೆಡುಗೆ ಗಡೀ ವಿಚಿತ್ರವೇಗದ ಪದ್ಯಂ|
    ಕ್ರಮಮಿಲ್ಲದ ಕಬ್ಬಮೆನು-
    ತ್ತಮಮಾ! ನೀಂ ಪಳಿಯದಿರ್ದುಮೊಲಿವುದು ಸಖರೇ!!

    ಮುಗಿಲೇ ಜಾರ್ದವೊಲುರ್ವಿಗಂ ನಲಿಯೆ ಗೋಪಾಲಂ, ತಡಿತ್ಪುಂಜಮೇ
    ನಗುವಂತೊಪ್ಪಿರೆ ರುಕ್ಮವರ್ಣವಸನಂ, ತಾಪಿಂಛಗುಚ್ಛೋಪಮಂ |
    ಸೊಗಸಾಗಳ್ ಮಳೆವಿಲ್, ಜಗತ್ತ್ರಯವಧೂಸಂಮೋಹನಂ ಸಂದನೀ
    ಯುಗದೊಳ್ ಕಾಣಿರೆನುತ್ತುಮುತ್ತರಿಸುಗುಂ ವಿಸ್ಫೂರ್ಜಿತಶ್ರಾವಣಂ ||

    • ಸುರಿವೆಂ ಶಬ್ದಗಳೆಷ್ಟೊ ವರ್ಷಗಳ ಮೇಣೀ ಪದ್ಯದೊರ್ಪಾದಮಂ
      ಸರಿಗಟ್ಟಲ್ಕೆನಗಾದದೆನ್ನುತೊರೆವೆಂ ವಿಸ್ಫೂರ್ಜಿತ ಶ್ಲಾಘನಂ
      🙂

    • ಅಮೆರಿಕಕಂ ಮಿಂಚೆಗಮೇಂ
      ಮಮ ರಾಜಾಜಿನಗರಕ್ಕಮೆಂಬೆಂ ಭೇದಂ?
      ಕ್ರಮಿಸುತ್ತೊಂದೇ ವೇಗದೆ
      ರಮಿಸಿರ್ಪುವು ಕಬ್ಬಗಳ್ ಬಲುಮೆಯಿಂ ನಿಮ್ಮಾ||

    • ಆಹಾ ಬಹಳ ಚೆನ್ನಾಗಿದೆ ಸರ್ ವರ್ಣನೆಗಳು 🙂

  2. ಶ್ರಾವಣದಲ್ಲಿ ಹಬ್ಬಸಾಲು; ಅದರಲ್ಲೂ ಶ್ರೀಕೃಷ್ಣಜನ್ಮಾಷ್ಟಮಿ ಇನ್ನೇನು ಬಂತು.
    ಶಾರ್ದೂಲವಿಕ್ರೀಡಿತಂ||
    ವರ್ಷಾಕಾಲಮಿದಂತೆ, ವೃಷ್ಟಿಯಿದರೊಳ್| ಪ್ರಾಯಂ ಜಲಂ ಮಾತ್ರಮೇಂ
    ಹರ್ಷಂ ಭೂರಿಯಿನಾವು ಪೊಂದಲಿದೆಗೋ| ಸಾತತ್ಯಪರ್ವಂಗಳೇಂ
    ಆರ್ಷೇಯಂ ವರಜನ್ಮವಾಸರವಿರಲ್| ವಿಸ್ಫೂರ್ಜಿತಶ್ರಾವಣಂ
    ತರ್ಷಂ ದಾಂಟೆ ಭವಾಬ್ಧಿಯಂ ಸುಲಭದೊಳ್| ತಾನಲ್ತೆ ಶ್ರೀಕೃಷ್ಣನಯ್
    (ಪ್ರಾಯಂ=bounty. ತರ್ಷ=raft)

    • ಶಾರ್ದೂಲಕ್ಕಿದು ಸಾಧುವಲ್ವೆ ಗುರುವೇ! ಮತ್ತೇಭಮೆಂದೆಂದಿರೀ?

      • ನೋಡೋಣೆನ್ನುತೆ ಚೀದಿಯೇನೆನುವನೋ| ಎನ್ನುತ್ತಲಂತೊರೆದೆನೈ
        ಇಲ್ಲಯ್ಯ…
        ತೀಡಿದ್ದೇನಿದೊ, ಮನ್ನಿಸೆನ್ನ ಯೆಡವ|ಟ್ಟನ್ನಿನ್ನು ನೀ ಮಾಪ್ರಭೋ 😉

    • ಪ್ರಸಾದು, ‘ವಿಸ್ಫೂರ್ಜಿತಶ್ರಾವಣಂ ತರ್ಷಂ ದಾಂಟೆ ಭವಾಬ್ಧಿಯಂ ಸುಲಭದೊಳ್| ತಾನಲ್ತೆ ಶ್ರೀಕೃಷ್ಣನಯ್’ ಎನ್ನುವಲ್ಲಿ ಅನ್ವಯಕ್ಲೇಷವಿದೆಯೆನಿಸುತ್ತದೆಯಲ್ಲವೇ?

      • ಈ ಮಾಸದಲ್ಲಿ ಬರುವ ಎಲ್ಲ ಹಬ್ಬಗಳಿಂದಾಗಿ, ಮುಖ್ಯವಾಗಿ ಕೃಷ್ಣಾಷ್ಟಮಿಯಿಂದಾಗಿ, ಶ್ರಾವಣವು ವಿಸ್ಫೂರ್ಜಿತವು. ಆ ಕೃಷ್ಣನಾದರೋ, ಭವಾಬ್ಧಿಯಂ ಸುಲಭದೊಳ್ ದಾಂಟೆ ತರ್ಷಂ ತಾನಲ್ತೆ!

  3. ತಿರೆ ತಾ ಸ್ನಾನದೊಳಾಡುತಿರ್ಪಳಹಹಾ ಸ್ವಚ್ಛಂದದಾಹ್ಲಾದದಿಂ
    ಮೆರೆದಳ್ ಪಚ್ಚೆಯ ಪಟ್ಟೆಯುಟ್ಟ ಸೊಬಗಿಂದೋಲಾಡುತುಂ ಹಿಗ್ಗಿನಿಂ |
    ವರುಣಂ ನೋಡುತೆ ಮತ್ತೆಮತ್ತೆ ಸುರಿದಂ ಸೌಂದರ್ಯದುಲ್ಲಾಸಕಂ
    ಸ್ವರವರ್ಣಂ ಮಿಗೆ ಪಾಕಗಂಧಮೆರೆಯಲ್ ವಿಸ್ಫೂರ್ಜಿತಶ್ರಾವಣಂ ||

    • ಚೆನ್ನಾಗಿದೆ ರಾಮ್ 🙂

    • ಕೊನೆಯ ಪಾದವು typically Bendre!

      • ಕೊನೆಯ ಸಾಲನ್ನು ಹೀಗೆ ಬರೆಯಬೇಕೆಂದು ಯೋಚಿಸಿದ್ದೆ ::

        “ಸ್ವರವರ್ಣಂ ಮಿಗೆ ಪಾಕಗಂಧದೆರಕಂ ವಿಸ್ಫೂರ್ಜಿತಶ್ರಾವಣಂ”

        ಆಗ ಇನ್ನೂ typical ಆಗುತ್ತಿತ್ತು

    • ರಾಮ್ ಚೆನ್ನಾಗಿದೆ ಪದ್ಯ ಅದರಲ್ಲೂ ಗಂಧದ ಆಯಾಮವನ್ನು ತಂದಿರುವುದು ಬಹಳ ಚೆನ್ನಾಗಿದೆ

  4. ಬರಿಗಾಲಕ್ಕರಿಯಾದ ವರ್ಷಋತುವಿಂದೀಬಾನಿನೊಳ್ಕಾಣದಾ
    ಕರಿಮೋಡಂಗಳುದಟ್ಟಮಾಗುತಿಹುದೈ ತಂಗಾಳಿಯಂ ಸೂಸುತುಂ
    ಸುರಿಯಲ್ಕಾಗಸದಿಂದೆತುಂತುರುಗಳೀ ಭೂಲೋಕಮಂ ಚುಂಬಿಸಲ್
    ಮೆರೆವಂ ಜೀವಿಗಳೆಲ್ಲ ಸೈಯೆನುತಲೀ ವಿಸ್ಫೂರ್ಜಿತಶ್ರಾವಣಂ

    • ಬರಿಗಾಲಕ್ಕರಿ >> ಬರಗಾಲಕ್ಕರಿ ———- typo (ಬರಗಾಲಕ್ಕೆ ಅರಿ ಎಂಬ ಅರ್ಥ)

    • ಬರಗಾಲಂ ಚರಮಂ ಗಡಲ್ತೆ, ಅರಿ-ಮ|ತ್ತೊಂದೇಕೆ ಬೇಕಯ್ಯ ಪೇಳ್
      ಅರೆಗಾಲ್ ಕನ್ನಡ (ಬರಗಾಲ) ಸಂಸ್ಕೃತಂ ಕಣರೆಗಾಲ್ (ಅರಿ)| ವೈರಂ-ಸಮಾಸಂ (ಅರಿಸಮಾಸ) ಗಡಾ

      • ಬರಗಾಲಂ ಕಳೆಯಲ್ಕೆವರ್ಷಋತುವಿಂದೀಬಾನಿನೊಳ್ಕಾಣದಾ ಈಗ ಸರಿಯಾಯ್ತೆ?

      • ಇನ್ನೂ ಸಮಾಧಾನವಾಗದ ಕಾರಣ ಕೇಳುತ್ತಿದ್ದೇನೆ – ಬರಗಾಲಕ್ಕೆ + ಅರಿ = ಬರಗಾಲಕ್ಕರಿ ಎಂಬಲ್ಲಿ ಸಂಧಿಯಾಗಿರುವುದರಿಂದ, ಅರಿಸಮಾಸವಾಗುವುದಿಲ್ಲ ಅಲ್ಲವೇ?

        • ನಾನು ಕಾಮೆಂಟ್ ಹಾಕುವಾಗಲೂ ಈ ಶಂಕೆ ಇತ್ತು; ಅರ್ಧ ಮನಸ್ಸಿನಿಂದಲೇ ಹಾಕಿದೆ. ತಿಳಿದವರು ದಯವಿಟ್ಟು ಪರಿಹರಿಸಿ.

        • ಬರಗಾಲಕ್ಕರಿ ಎಂಬುದು ಸಮಾಸವಲ್ಲದ್ದರಿಂದ, ಅರಿಸಮಾಸವಾಗುವುದಿಲ್ಲ

    • ಮೊದಲು ನೀವು ’ಬರಗಾಲಕ್ಕೆ ವಿರುದ್ಧವಾದ ಮಳೆಗಾಲ’ ಎಂದಿದ್ದಿರಿ. ತಾರ್ಕಿಕವಾಗಿ ಸರಿಯಾಗಿದ್ದಿತು. ಈಗ ’ಬರಗಾಲ ಕಳೆದು ಮಳೆಗಾಲ’ ಎಂದು ಬದಲಾಯಿಸಿರುವಿರಿ. ಬೇಸಗೆಯನ್ನು ಬರಗಾಲ ಎನ್ನಲಾಗದು. ಬೇಸಗೆಯೂ ಸರ್ವಥಾ ಅಪೇಕ್ಷ್ಯ. ಮಳೆಗಾಲಗಳಲ್ಲಿ ಮಳೆಯಾಗದಿದ್ದರೆ ಮುಂದೆ ಬರಗಾಲವುಂಟಾಗುತ್ತದೆ. ಹಾಗಾಗಿ ’ಬರಗಾಲದ ನಂತರ ಮಳೆಗಾಲ’ ಎಂಬುದು ಸರಿಯಾಗದು.

      ಹೀಗೊಂದು ಸವರಣೆ: ಬಿರುಗಾಲಂ ಕಳೆದೀಗ ಪ್ರಾವೃಷಮಿದೋ| ಇಟ್ಟಿರ್ದಿರಲ್ ಹಜ್ಜೆಯಂ

    • ಚೀದಿ, – ‘ಮೆರೆವಂ’ ಎಂಬುದು ಏಕವಚನ, ‘ಜೀವಿಗಳೆಲ್ಲ’ ಎಂಬಲ್ಲಿ ಬಹುವಚನವಿದೆ. ಸ್ವಲ್ಪ ಸವರಣೆಯ ಅಗತ್ಯವಿರಬಹುದು

    • ಮಾನವೇತರ ಜೀವಿಗಳೂ ಇದ್ದಲ್ಲಿ, ಮೆರೆವರ್ ಎಂದರೆ ಸ್ವಲ್ಪ ತೊಡಕಾಗಿ ಕೇಳುತ್ತದೆ. ‘ಮೆರೆವಾ’, ‘ಮೆರೆಯಲ್’ ಎಂದಾಗಬಹುದೇನೋ!

    • ಚೀದಿ, ರಾಮಚಂದ್ರ, ಮೌಳಿಯವರು ಸೂಚಿಸಿದಂತೆ ಸ್ವಲ್ಪ ಸವರಿಸಬೇಕು, ಮೆರೆಗುಂ ಚೆನ್ನಾಗಿ ಹೊಂದುತ್ತದೆ

  5. ಕಳೆದುಂ ಬೇಸರವಂ ಚಿದಾರ್ದ್ರಗೊಳಿಸಲ್ ಸಂಗೀತಕಾವ್ಯಂಗಳುಂ
    ಅಲೆಯಂತಲ್ ಮಿಗೆ ತೇಲಿತೇಲಿ ಬಿರಿವಾ ಸೌಗಂಧಿಕಾಹಾಸದೊಲ್,
    ಇಳೆಯಂ ಕಾಡಿದ ಶುಷ್ಕಕಾಲವಳಿಸಲ್ಧೋಯೆಂಬ ವರ್ಷಂ ಸದಾ
    ನಳಿದುಂ ಮೈತಳೆಗುಂ ಮನೋಹರ ಹರಿದ್ವಿಸ್ಪೂರ್ಜಿತ ಶ್ರಾವಣಂ||

    • ಪದಗಳ್ ಚಿತ್ತದಿಕೆತ್ತೆ ವಾಕ್ಯಶಿಲೆಯಂ ಶಿಲ್ಪಾರ್ಥಮುಚ್ಛ್ರಾವಣಂ
      ಬದುಗಳ್ಬಿಟ್ಟಿರಲಂತರಂ ಬಿಡತೆಯಿಂ ನಷ್ಟಂ ಪದದ್ರಾವಣಂ
      ಪದ”ಪೂಹಾಸ” ಸಮಾಸ ದಾಶರಥಿಗೇನಂಕಸ್ಥನೇಂ ರಾವಣಂ?
      ಮುದದಿಂ ಕಾಂಚನ ಮತ್ತೆ ತಿದ್ದಿ ಬರೆಯಲ್ ವಿಸ್ಪೂರ್ಜಿತಶ್ರಾವಣಂ! 🙂

      • ಧನ್ಯವಾದಗಳು ಮೌಳಿಯವರೇ, ತಿದ್ದಿಬರೆವೆನು ಮತ್ತೆ 🙂

      • ಮೌಳಿ,
        ನೀವೀಯುತ್ತಿರೆ ಪದ್ಯರೂಪದುಲಿಗಳ್ ಪ್ರಾಸಂಗಳಾದ್ಯಂತದೊಳ್
        ಗೀರ್ವಾಣಕ್ಕುರೆ ಸಾಮ್ಯಕಂಡು ಬೆರಗಾದೆಂ ಪದ್ಯದೀ ಪಾನದಿಂ ||

    • ಕಾಂಚನ ಅವರೇ ‘ಹರಿದ್ವಿಸ್ಪೂರ್ಜಿತ’, ‘ಸೌಗಂಧಿಕಾಹಾಸದೊಲ್’ ಪ್ರಯೋಗ ಹಿಡಿಸಿತು :), ಮೌಳಿಯವರೆಂದಂತೆ ಸ್ವಲ್ಪ ಸವರಿಸಬೇಕೆನಿಸುತ್ತದೆ:
      ಕಳೆದುಂ -> ಕಳೆಗುಂ ಸರಿಯಾಗುವುದೇ?
      ಚಿದಾರ್ದ್ರಗೊಳಿಸಲ್ -> ಚಿದಾರ್ದ್ರಂಗೊಳಿಸಲ್ ಹಾಗಾದರೆ ಛಂದಸ್ಸು ತಪ್ಪುತ್ತದೆ
      ಶುಷ್ಕಕಾಲವಳಿಸಲ್ಧೋಯೆಂಬ -> ಶುಷ್ಕಕಾಲಮನಳಿಸಲ್ಧೋಯೆಂಬ ಹಾಗಾದರೆ ಛಂದಸ್ಸು ತಪ್ಪುತ್ತದೆ

  6. In a cellphone, the signals are mostly weak. Voice is interrupted. One has to sit, stand, lie down and move about to catch the signal.
    ಭುಜಂಗಪ್ರಯಾತ||
    ಬೆಡಂಗಿಂದೆ ಕೊಂಡೆನ್ ಭ್ರಮಾವಾಣಿಯಂ ನಾಂ (mobile phone)
    ಅಡಂಗಿರ್ದು ಸಂಕೇತಮಾಗಾಗ ಕೋಪಂ (ಪ್ರಕೋಪಂ=irritation)|
    ಗಡೆಂದೆಂದು ವಿಸ್ಫೂರ್ಜಿತ(broken)ಶ್ರಾವಣಂ(hearing) ದಲ್
    (ಸಂಕೇತಮಂ) ತಡಂಕಯ್ಯ ಕೂಡುತ್ತೆ ನಿಲ್ಲುತ್ತೊರಂಗಿಂ||

    • corrected:
      ಬೆಡಂಗಿಂದೆ ಕೊಂಡೇಂ ಭ್ರಮಾವಾಣಿಯಂ ನೀಂ
      ಅಡಂಗಿರ್ದು ಸಂಕೇತಮಾಗಾಗ ಕೋಪಂ|
      ಗಡೆಂದೆಂದು ವಿಸ್ಫೂರ್ಜಿತಶ್ರಾವಣಂ ದಲ್
      ತಡಂಕಯ್ಯ ಕೂಡುತ್ತೊರಂಗುತ್ತೆ ನಿಂದುಂ||

    • ಪ್ರಸಾದು ‘ವಿಸ್ಫೂರ್ಜಿತಶ್ರಾವಣಂ’ ಅನ್ನು ಹೊಸರೀತಿಯಲ್ಲಿ ಕಲ್ಪಿಸಿರುವ ಪೂರಣ ಚೆನ್ನಾಗಿದೆ 🙂

  7. ಮಳೆಗಾಲಂ ಪ್ರಿಯಸಂಗಕೊಪ್ಪ ಸಮಯಂ ಕೂಟಕ್ಕು ಮೇಣ್ ಬಂಧುರಂ
    ಕಳೆವರ್ ಗೂಡೊಳೆ ನಲ್ಲನಲ್ಲೆ ಜೊತೆಯೊಳ್ ಸೂಸುತ್ತೆ ಸಂಪ್ರೀತಿಯಂ |
    ಚೆಲುವಿಂ ತೋಯ್ದಿರೆ ಚಿತ್ತ ಭಾವ ಮನಗಳ್ ರಾಸಿಕ್ಯದಾಧಿಕ್ಯದಿಂ
    ಪೊಳೆದಿರ್ಪಾಸೆ ವಿಕಾಸದೀರ್ವರೆದೆಯೊಳ್ ವಿಸ್ಫೂರ್ಜಿತಶ್ರಾವಣಂ ||

    • ಮಳೆಗಾಲದಲ್ಲಿ ನಲ್ಲನಲ್ಲೆಯರ ಮನದಲ್ಲಿ ಆರ್ದ ಭಾವದ ವಿಸ್ಫೂರ್ಜಿತಶ್ರಾವಣನ ಕಲ್ಪನೆ ಬಹಳ ಚೆನ್ನಾಗಿದೆ ರಾಮ್

  8. अमेरिकेषु गणेशचेष्टावलोकेन प्रेरितम् –

    गणेशार्यपाठप्रभावेण नो वै
    कवित्वे च काव्ये च चिन्ता विशिष्टा।
    तथा वृष्टिपातः मनस्सु कृतीनां
    स विस्फूर्जितश्रावणो वै कवीशः॥​

    विस्फूर्जितः (निर्घोषितः) श्रावणः येन सः = विस्फूर्जितश्रावणः।

    [२-वारं सम्पादितम्।]

    • शोधनम्-

      १। पूर्वं श्रावणो वसन्त इति चिन्तयता कृतं सदोषपद्यम् अधुना शोधितम् उपरि।
      २। विषमपादान्ते लघोः निवारणम्।

    • त्रिसम्पादितसत्काव्यं त्रिवारं यः पठेन्नरः।
      पद्यलोकमवाप्नोति दन्तिना (श्री रा. गणेश) सह मोदते॥

  9. || ಮತ್ತೇಭವಿಕ್ರೀಡಿತ ವೃತ್ತ ,ಉಪಮಾಲಂಕಾರ ||

    ಉರಗಂಗಿಕ್ಕುತೆ ಮಾಲೆಯಂ,ನುತಿಸಿ ಪಾಲಂ ನೀಡುತಾರಾಧಿಸಲ್,
    ವರಲಕ್ಷ್ಮೀವ್ರತಮೆಂದು ಸಂಭ್ರಮಿಸೆ ತಾಂ ನಾರೀಜನರ್ ಚಿಣ್ಣರೊಲ್,|
    ಮೆರೆಯಲ್ ರಕ್ಷೆಯ ವರ್ಣಗುಚ್ಛದ ಕರಂ,ಮೋದಂಗೊಳಲ್ ಸೋದರರ್ ,
    ತಿರೆಯಂ ರಕ್ಷಿಪ ಕೃಷ್ಣನುತ್ಸವಮಿರಲ್, ವಿಸ್ಫೂರ್ಜಿತಶ್ರಾವಣಂ ||

    • ಶಕುಂತಲಾ ಅವರೇ ಬಹಳ ಚೆನ್ನಾಗಿದೆ, ಹಳಗನ್ನಡ ಭಾಷೆ ಮೆರೆದಿದೆ

      • ಸೋಮರೆ,ನೀಮೆನ್ನ ಪದ್ಯಮಂ ಮೆಚ್ಚಿರಲ್ ಹರುಷಮಾಯ್ತು,ಧನ್ಯವಾದಂಗಳ್. 🙂

  10. ಪಡೆಯಲ್ ಕೋಮಲಭಾವವಂ ಬಿರುಸಿನಾ ಮೈವೊತ್ತ ಕಲ್,ಗೋಡೆಗಳ್
    ಕಿಡಿಯಂ ಕಾರದೆ ಸಿಟ್ಟಿನಿಂ ರವಿಯುತಾಂ ಪೊನ್ಚೆಂಡಿನಂತಾಗಲುಂ
    ತಡವುತ್ತೆಲ್ಲರನಪ್ಪಿ ಪ್ರೀತಿ ಹನಿಸಲ್ ತಂಗಾಳಿ ಸಂಗಾತಿಯೊಲ್
    ಧೃಡ!ಮಾಧುರ್ಯವ ಬಿಚ್ಚಿ ಧಾತ್ರಿ ಮೆರೆಯಲ್ ವಿಸ್ಪೂರ್ಜಿತ ಶ್ರಾವಣಂ

  11. ತಿರೆಯಾಕ್ಲಿನ್ನಮನಾಂಪೆನೆಂದೆಸರಿನಿಂ ತ್ರಸ್ತಪ್ತುಛೇದಂಗಳಿಂ-
    ದುರೆ ಪರ್ಯಾಯಮನೀಕ್ಷಿಪಳ್ ಚರಣಕೆಂದಾಲಂಬನಾನ್ವೇಷಣ-
    ಕ್ಷರಪುಂಜಂ ಸೆಟೆದೆರ್ದು ದಿಟ್ಟಿಸೆ ಕೊರಳ್ವೆನ್ನೆಂಬವೊಲ್ ಬಾನುವಂ
    ‘ಭರ-ಢಂ-ಧೋ-ಗಢಮಾಢ’ಮೆಂದಿಳಿದಪಂ ವಿಸ್ಫೂರ್ಜಿತಶ್ರಾವಣಂ

    ಆಕ್ಲಿನ್ನ – ಆರ್ದ್ರಳಾಗಲು
    ಎಸರಿನಿಂ – ಕುದಿತದಿಂ
    ಅಪ್ತು – ದೇಹ, ಅಪ್ತುಛೇದ – (ಬರಗಾಲದಿಂದ) ಸೀಳಲ್ಪಟ್ಟ ದೇಹ
    ಪರ್ಯಾಯ – ಸರ್ಜನ(ಮೊಳಕೆ)
    ಚರಣ – ಮೇಯುವುದು
    ಕ್ಷರಪುಂಜ – ಪ್ರಾಣಿಗಳ ಸಮೂಹ
    ಕೊರಳ್ವೆನ್ನೆಂಬವೊಲ್ – ಕೊರಳೇ ಬೆನ್ನು ಎನ್ನುವ ಹಾಗೆ ಸೆಟೆದು (ಮಳೇಗಾಗಿ) ಆಕಾಶವನ್ನು ವೀಕ್ಷಿಸುತ್ತಿರುವ

  12. ಪದ್ಯಪಾನದ ಈ ಸಂಚಿಕೆಯ ಕಲ್ಪನೆಗಳು ಚೆನ್ನಾಗಿವೆ. ಕೆಲವೊಂದು ಸವರಣೆಗಳನ್ನು ಮುಖತಃ ತಿಳಿಸಬೇಕಾದೀತು. ಉಳಿದಂತೆ ಸೋಮನ ನಿರಂತರ ಪ್ರೀತಿ-ಪ್ರೋತ್ಸಾಹಪ್ರತಿಕ್ರಿಯೆಗಳು, ರಾಮ್, ಮೌಳಿ, ಪ್ರಸಾದ್ ಮತ್ತಿತರರ ಸಕ್ರಿಯಭಾಗಗ್ರಹಣಗಳು ಹಾಗೂ ಕಾಂಚನ, ಶಕುಂತಲಾ ಮುಂತಾದವರ ರಚನೆಗಳ ಹದ ಮುದತಂದಿದೆ. ಹೀಗಾಗಿ ಇವರೆಲ್ಲರನ್ನೂ ಉದ್ದೇಶಿಸಿ ಒಂದು ಪದ್ಯ:

    ವಿಸ್ಫೂರ್ಜಿತಶ್ರಾವಣಂ ಪದ್ಯಪಾನದೊಳ್
    ವಿಸ್ಪಾರಿಕುಂ ವೃತ್ತವಾಪೀಶತಂ|
    ಆಸ್ಫಾಲಿಸಲ್ ಪ್ರಾತಿಭಾಂಭೋಧರಜ್ಯೋತಿ-
    ಯಾಸ್ಫೋಟಿಸದೆ ರಸಶತಾರನಿಚಯಂ?

    • dhanyavAdagaLu sir.

    • ಆಸ್ಫೋಟನವ ಸಹಿಸೆ ಮೊದಲೊಳೇ ನೀಮಿಂತು
      ವಿಸ್ಫಾರಿಸಿರ್ಪ ಕೂಪಗಳೆ ವರವೈ|
      ವಿಸ್ಫೂರ್ಜಿತಶ್ರಾವಣದ ಗುಡುಗಸರಣಿಯಿಂ
      (shield) ಸುಸ್ಫರಕದಡಗುದಾಣಮದುಮಲ್ತೆಲ್|| 🙂

  13. ತಮ್ಮ ಪ್ರವಾಸ,ಪ್ರಯಾಸ,ಕಾರ್ಯಬಾಹುಳ್ಯದ ನಡುವೆಯೂ ನಮ್ಮೆಲ್ಲರಿಗಿತ್ತ ಪ್ರೋತ್ಸಾಹವಾಣಿಗಾಗಿ ಧನ್ಯವಾದಗಳು 🙂

  14. ಕೊಳೆಯೊಂದಂ ಸಲೆ ಕಾಣದಿರ್ಪರೆದೆಯೊಳ್ ಭ್ರಾತೃತ್ವವಾತ್ಸಲ್ಯದಾ
    ಹೊಳೆಯೇ ಶುಭ್ರತೆಯಿಂದಲುಕ್ಕಿ ಪರಿದುಂ ರಾರಾಜಿಸುತ್ತಿರ್ಪವೊ
    ಲ್ಕೊಳ ಹಳ್ಳಂಗಳಪೊತ್ತ ಶಾಡ್ವಲನೆಲಂ ಮೈದಾಳ್ದು ಸಂಪ್ರೀತಿಯ-
    ನ್ನೊಳಗೊಳ್ಳಲ್ ಸುಮಭಾವಸಿಕ್ತ ನಡೆಯಂ ವಿಸ್ಪೂರ್ಜಿತ ಶ್ರಾವಣಂ

  15. ಶಾಡ್ವಲನೆಲಂ=ಶಾಡ್ವಲವನಂ(ಅರಿಸಮಾಸ ವಾದುದರಿಂದ)
    (ಶ್ರಾವಣದಲ್ಲಿ ಹಸಿರುನೆಲವು, ಅಲ್ಲಲ್ಲಿ ಕಾಣುವ ಹಳ್ಳಕೊಳ್ಳಗಳಜೊತೆಗೆ ನಿರ್ಮಲವಾಗಿ ಶೋಭಿಸುತ್ತಿದೆ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)