This idol is made from sugarcane of two colours – black and white (yellowish). Cane is cane, sweet it is, and serves for festival. But to the poet discerning a metaphor, the disparate colours serve to compare two persons – one virtuous and another not so virtuous!
ಕಬ್ಬು ಕಬ್ಬೇ ಸಿಹಿಯೆ ಸಿಹಿಯೈ
ಮಬ್ಬುವುದೆ ರುಚಿ ತಳಿಯ ವಿಧದೊಳ್
ಹಬ್ಬಕಂ ಸಲ್ಲುವುದು ಕಪ್ಪಿನ-ಬಿಳಿಯವೆಲ್ಲವುಗಳ್|
ಗಬ್ಬುನಾರುವನನ್ನು ಸಜ್ಜನ-
ನ್ನೊಬ್ಬನೊಡನೊಪ್ಪವಿಡುವಂತಹ
ಕಬ್ಬಿಗರ ಕಾಣ್ಕೆಗಮೊದಗದೇಂ ವರ್ಣಭೇದವು ಪೇಳ್||
ರಸದಿಂದ ತುಂಬಿದ ಭಾವನೇ (ಆಕಾರ) ನೀನು. ನೀನೇ ರಸದ ಬೀಜ ಮತ್ತು ಪಯಿರು. ಆ ರಸತ್ವದ ಅಧಿಕಾರವೊಂದು ಸಾಲದೇ ನಿನ್ನ ಬ್ರಹ್ಮತ್ವನಿರೂಪಣೆಗೆ? ಅಂತಿರಲು ನಿನಗೇಕೆ ಈ ಜನಿವಾರ? ಅದೆಲ್ಲ ರಸದಲ್ಲಿಯೇ ಅಲ್ಲವೇ ಸಾಧಿತವಾಗುವುದು!
Once upon a time, poet Valluva’s kuraL was given undue importance by the TN Govt., and was recited at every occasion – AIR, invocation etc. etc. To go with it, photos of Valluva were ordered to be displayed in all schools, Govt. organizations etc. Down the line, someone spotted a janivAra on him. Immediately all the photos were withdrawn – BGL Swamy in his ತಮಿಳುತಲೆಗಳ ನಡುವೆ.
ಒಂದು ರೀತಿ ವಿಚಿತ್ರವಾಗಿ ಚೆನ್ನಾಗಿದೆ. ಆದರೆ ತಾತ್ಪರ್ಯ ಅರ್ಥವಾಗಲಿಲ್ಲ. ನಾಲ್ಕನೇ ಸಾಲಿನ ಮೊದಲ ಗಣ ತಪ್ಪಿದೆ. ಕತ್ತಲನ್ನು ಗೆದ್ದವರು ಯಾರು? ಜನರೇ? ಹೇಗೆ? ನಕ್ಷತ್ರಗಳೇ? ಇಲ್ಲಿ ರಾತ್ರಿ, ತಾರೆಗಳೆಲ್ಲ ಏಕೆ ಬಂದುವು? ಪ್ರಾಸಕ್ಕಾಗಿಯೇ?
ಇಕ್ಷುಧನು ಆಗಬೇಕಲ್ಲವೇ ಮನ್ಮಥನಿಗೆ? ಧನುಜ ಎಂದೇಕೆ ಬಳಸಿದ್ದೀರಿ?
ಕತ್ತಲನ್ನು ನುಂಗಿ(ಗೆದ್ದು) ,ತಿರುಗಿ ಕತ್ತಲಿಂದೇ ಸಿಂಗರಗೊಂಡ ನಕ್ಷತ್ರಗಳನ್ನು ನೋಡಿದ ಜನತೆ ತಮ್ಮ ಗಣಪನನ್ನು ಈ ಬಗೆಯಾಗಿ ಅಲಂಕರಿಸಿದರೇ!!–>ಇಕ್ಷುಚಾಪ(ಮನ್ಮಥ)ನನ್ನು ಗೆದ್ದವ(ಕಾಮನೆಯಿಲ್ಲದವ)ನನ್ನು ಇಕ್ಷುವಿಂದಲೇ ?!!
(ಹೋಲಿಕೆಗಾಗಿ –>(ಗಣಪತಿ,ಕಬ್ಬು ) vs (ನಕ್ಷತ್ರ,ಕತ್ತಲು))(ಉಪಮಾನದಲ್ಲಿ ಸ್ವಲ್ಪ ಸಾಮ್ಯವಿಲ್ಲವೇನೋ)
ನೀಲಕಂಠ, ಚಿತ್ರದಲ್ಲಿ “ಕಂಡಪದ್ಯ” !!
ಅಡಿಯಿಂದ ಮುಡಿವರೆಗೂ ಪೂರ್ತಿ ಕಬ್ಬನ್ನು ಧರಿಸಿರುವ ಬಲಮುರಿ (-ಗಣಪ) ತಾನು ಕಾಮನು, ಅವನ ಕೈಯಲ್ಲಿರುವ (ಪ್ರಿಯವಾದ) ಕರಿಗಡುಬೂ ಸಹ ಕಬ್ಬಿನಜಲ್ಲೆಯ ತುಂಡಾಗಿರಲು “ಕರ ಜಗಿ” ಎಂಬ ಹೆಸರು ಅವನಿಗೆ ಸೂಕ್ತ – ಎಂಬ ಅರ್ಥದ ಪದ್ಯ. “ಕರಜಗಿ” ಪದದ ಅರ್ಥವನ್ನು ಗುರುರಾಜ್ ಕರಜಗಿ ಸರ್ ರವರಿಂದಲೇ ತಿಳಿಯಬೇಕಿದೆ!!
This idol is made from sugarcane of two colours – black and white (yellowish). Cane is cane, sweet it is, and serves for festival. But to the poet discerning a metaphor, the disparate colours serve to compare two persons – one virtuous and another not so virtuous!
ಕಬ್ಬು ಕಬ್ಬೇ ಸಿಹಿಯೆ ಸಿಹಿಯೈ
ಮಬ್ಬುವುದೆ ರುಚಿ ತಳಿಯ ವಿಧದೊಳ್
ಹಬ್ಬಕಂ ಸಲ್ಲುವುದು ಕಪ್ಪಿನ-ಬಿಳಿಯವೆಲ್ಲವುಗಳ್|
ಗಬ್ಬುನಾರುವನನ್ನು ಸಜ್ಜನ-
ನ್ನೊಬ್ಬನೊಡನೊಪ್ಪವಿಡುವಂತಹ
ಕಬ್ಬಿಗರ ಕಾಣ್ಕೆಗಮೊದಗದೇಂ ವರ್ಣಭೇದವು ಪೇಳ್||
ಏನರ್ಥ? ಮೊದಲ ಮೂರು ಸಾಲು ಮಾತ್ರ ತಿಳಿಯಿತು.
I have incorporated the explanation in the original post.
ಜಯವಂ ಬರೆದಂ ಪರ್ವಮ
ಯಯುಗಕೃತಿಯನಾಗಿ ಪಾರ್ವತಿತನಯನಾಸ /
ಕ್ತಿಯಿಮೀಗಳ್ ಪರ್ವಮಯಿ
ಕ್ಷುಯಷ್ಟಿಯಂ ಧರಿಸಿಹಂ ಜಯದಗುಂಗಿನೊಳಂ //
ಆಗ ಪರ್ವಮಯ ಕೃತಿಯಾದ ಮಹಾಭಾರತವನ್ನು ತಲ್ಲೀನನಾಗಿ ಬರೆದು ಅದರ ಗುಂಗಿನಿಂದ ಹೊರಬರಲಾರದೇ ಪರ್ವ(node )ಗಳಿಂದ ಕೂಡಿದ ಕಬ್ಬನ್ನು ಗಣೇಶನು ಧರಿಸಿಕೊಂಡಿದ್ದಾನೆ.
ಆಹಾ, ತುಂಬ ಚೆನ್ನಾಗಿದೆ. ಆಸಕ್ತಿಯಿನೀಗಳ್ ಆಗಬೇಕು ಸಂಧಿನಿಯಮದ ಪ್ರಕಾರ. ಹಾಗೆಯೇ ಪರ್ವಮಯೇಕ್ಷುಯಷ್ಟಿ ಆಗಬೇಕು – ಗುಣಸಂಧಿ.
ತಿದ್ದಿದ್ದೇನೆ ನೀಲಕಂಠರೇ. ಧನ್ಯವಾದಗಳು.
super..
_/\_
ಗೌರಿಪುತ್ರ ಬಾಲಗಣಪ
ಮೊರದ ಕಿವಿಯ ವಕ್ರತುಂಡ
ನರರ ಕಂಡು ಬೆದರಿಕಣ್ಣನುಬ್ಬಿಸಿರುವೆಯೆ !? I
ಸುರಸದಂಡಿನಭಯ ಹಸ್ತ
ಶಿರದೆ ಪೇಟ ತೊಟ್ಟನೀನು
ಸರಸ ಕವಿತೆಯೊರೆದು ತೋರೊ ಕವಿಗಳೊಡೆಯನೆ II
ಸುರಸ ದoಡು =ಕಬ್ಬಿನ ದ೦ಡು
ಚೆನ್ನಾಗಿದೆ. ಮೊದಲ ಸಾಲಿನ ಪ್ರಾಸ ತಪ್ಪಿದೆ. ಗಿರಿಜೆಯೊಡಲ ಬಾಲಗಣಪ ಎಂದೇನಾದರೂ ಮಾಡಬಹುದು. ಅದಲ್ಲದೇ ಗೌರಿಪುತ್ರ ತಪ್ಪು, ಅದು ಗೌರೀಪುತ್ರ ಆಗಬೇಕು.
ಧನ್ಯವಾದಗಳು ನೀಲಕಂಠರೆ . ಹಾಗೆಯೇ ಮಾಡಿದರಾಯಿತು .
ಗಿರಿಜೆಯೊಡಲ ಬಾಲಗಣಪ
ಮೊರದ ಕಿವಿಯ ವಕ್ರತುಂಡ
ನರರ ಕಂಡು ಬೆದರಿಕಣ್ಣನುಬ್ಬಿಸಿರುವೆಯೆ !? I
ಸುರಸದಂಡಿನಭಯ ಹಸ್ತ
ಶಿರದೆ ಪೇಟ ತೊಟ್ಟನೀನು
ಸರಸ ಕವಿತೆಯೊರೆದು ತೋರೊ ಕವಿಗಳೊಡೆಯನೆ II
ಸುರಸ ದoಡು =ಕಬ್ಬಿನ ದ೦ಡು
ರಸಪ್ರಕರಭಾವನೇ ರಸದ ಬಿತ್ತು ಮೇಣ್ ಪೈರು ನೀಂ
ರಸತ್ವದಧಿಕಾರಮೊಂದೆಸೆದುದಲ್ತೆ ಬ್ರಹ್ಮತ್ವಕಂ!
ಲಸತ್ಕುಟಿಲತುಂಡನೇ ನಿನಗದೇಕೆ ಯಜ್ಞೋಪವೀ-
ತಸಂಗತಿ ಮಗುಳ್ ರಸಂಗತಮದಲ್ತೆ ತತ್ತ್ವಾರ್ಥದಿಂ
ರಸದಿಂದ ತುಂಬಿದ ಭಾವನೇ (ಆಕಾರ) ನೀನು. ನೀನೇ ರಸದ ಬೀಜ ಮತ್ತು ಪಯಿರು. ಆ ರಸತ್ವದ ಅಧಿಕಾರವೊಂದು ಸಾಲದೇ ನಿನ್ನ ಬ್ರಹ್ಮತ್ವನಿರೂಪಣೆಗೆ? ಅಂತಿರಲು ನಿನಗೇಕೆ ಈ ಜನಿವಾರ? ಅದೆಲ್ಲ ರಸದಲ್ಲಿಯೇ ಅಲ್ಲವೇ ಸಾಧಿತವಾಗುವುದು!
ತುಂಬಾ ಸೊಗಸಾಗಿದೆ ನೀಲಕಂಠರೆ……ಅಭಿನಂದನೆಗಳು….
ಧನ್ಯವಾದಗಳು
ರಸದ ಬಿತ್ತು ಮೇಣ್ ಪೈರು ನೀಂ – ಸೊಗಸಾಗಿದೆ. ಚಿತ್ರದ ಜೀವವನ್ನು ಸೆರೆಹಿಡಿದೆದೆ.
Thanks
ಸಿಹಿಯ ಕಬ್ಬನು ಧರಿಸಿ ಬಾಳಿನ
ಕಹಿಯ ನೀಗುವ ಗಣಪನೇ ನೀ-
-ನಹುದು ನಮ್ಮಯ ದುರಿತವೆಲ್ಲವ ಕಳೆವ ಮೂರುತಿಯು
ಬಹಳವಾಗಿಸುತೆಮ್ಮ ತಿಳಿವನು
ಸಹನೆಯೆನ್ನುವ ಬಲವನೀಯುತ
ವಿಹರಿಸೆಮ್ಮಯ ಚಿತ್ತಪಥದಲಿ ಬೆಳಕಬೀರುತಲಿ
ಸರಳವಾಗಿ ಚೆನ್ನಾಗಿದೆ
agree
Thank you
ಧನ್ಯವಾದಗಳು
ಕಬ್ಬಿನ ಬೆಳೆಯಂ ಧ್ವಂಸಿಸೆ
ತಬ್ಬಿಬ್ಬಾಗಿಸಿರೆ ಕರಿಯ ಮದವನ್ನಿಳಿಸಲ್
ಕಬ್ಬಿಂದಲೆ ಗಜಮುಖನಂ
ಹಬ್ಬದೆ ಗೈದವನ ಪೂಜಿಸಿದವೊಲುಮಿರ್ಕುಂ
ಧನ್ಯವಾದಗಳು ಹೊಳ್ಳಾ..
Once upon a time, poet Valluva’s kuraL was given undue importance by the TN Govt., and was recited at every occasion – AIR, invocation etc. etc. To go with it, photos of Valluva were ordered to be displayed in all schools, Govt. organizations etc. Down the line, someone spotted a janivAra on him. Immediately all the photos were withdrawn – BGL Swamy in his ತಮಿಳುತಲೆಗಳ ನಡುವೆ.
ತಮಿಳುನಾಡೊಳು ನಿರ್ಮಿಸಿದ ಗಣಪಮೂರ್ತಿಯಿದು
ರಮಿಸಿರ್ಪುದೇಕೊ ಜನಿವಾರದಿಂದಂ!
ಗಮನಿಸಿರಿ ಪಿಂತೆ ವಳ್ಳುವಚಿತ್ರಮೆಲ್ಲಮಂ
ಚಿಮಟದಿಂ ತೆಗೆದುದಕ್ಕದೆ ಕಾರಣಂ||
Oh! I thought that giving undue importance to some poets by the government is a tradition of Karnataka.It is the BACKFLOW OF SAMPRADAAYAKAVERI
ಮೂಷಕನಿಕ್ಷುವ ತಿಂಬುದ ಕಂಡಂ
ಮೇಷದವೋಲ್ ಬಲಿಗೊಳ್ಳುವೆನೆಂದಂ /
ತೋಷದೆ ಕಬ್ಬಿನ ರೂಪದೆ ನಿಂತಂ
ಪೋಷಿಸೆ ಲೋಗರ ಪಾರ್ವತಿ ಪುತ್ರಂ //
ತನ್ನ ವಾಹನವಾದ ಮೂಷಕನು ಕಬ್ಬನ್ನು(ಕಬ್ಬಿನ ಬೆಳೆ ) ತಿನ್ನುವುದನ್ನು ಕಂಡು ಜನರನ್ನು ರಕ್ಷಿಸಲು ತಾನೇ ಕಬ್ಬಿನ ರೂಪದಲ್ಲಿ ಬಲಿಯಾಗಲು ಗಣೇಶನು ನಿಂತಿದ್ದಾನೆ.
ಮೂಷಿಕಕಾರ್ಯವ ಸುಲಭವ ಮಾತ್ರಮೆ
ಆಷಾಢದೆ ಗೈದಂ ಗಣಪಂ|
ಚಾಷವ(sugarcane) ಹೊಲದೊಳೆ ತಿನ್ನುತಲಿದ್ದಿತು
ಯಾಷವ(stick) ಮುರಿದಿತ್ತಂ ಬಾಯ್ಗಂ||
ಚೆನ್ನಾಗಿದೆ ರಗಳೆ. ಪಾರ್ವತೀಪುತ್ರಂ ಎಂದಾಗಬೇಕು. ಅಷ್ಟಕ್ಕೂ ಲೋಗರ ಪಾರ್ವತಿ ಎಂದು ಅನ್ವಯಕ್ಲೇಶವಾಗದಂತೆ, ಪೋಷಿಸೆ ಜನರಂ ಗಿರಿಜಾತನಯಂ ಎಂದೇನಾದರೂ ಮಾಡಬಹುದು.
ನಾನು ದೋಧಕ ಎಂದುಕೊಂಡು ಬರೆದದ್ದು . ಗಿರಿಜಾ ತನಯನು ಹಾದಿ ತಪ್ಪಿಸುತ್ತಾನಲ್ಲ. “ಪೋಷಿಸೆ ಲೋಗರನೀಶ್ವರ ಪುತ್ರಂ” ಮಾಡಬಹುದೇ?
ಓಹ್, ದೋಧಕವೇ! ಸರಿ, … ಈಶ್ವರಪುತ್ರಂ ಎಂದೇ ಮಾಡಿ. ನಾನು ಮಂದಾನಿಲ ರಗಳೆ ಅಂದುಕೊಂಡೆ.
ಕಬ್ಬವ ಬರೆದಂಗೆ ಕಬ್ಬಿನ ಕಸರತ್ತೆ
ನಿಬ್ಬೆರಗಾಗಿ ನೋಡುತ್ತಾ ಬಗೆಯಲ್ಲಿ
ಹಬ್ಬದ ಸಡಗರ ತುಂಬಿತ್ತಾ||
ರಸದೊಳ್ ನಟನಂದನ ಸುಮ
ನಸರೊಳ್ ನಾಯಕ ವಿನಾಯಕಗಿದೋ ಜನಮಾ-
ನಸರೊಳ್ ಬಂದುದು ಕಬ್ಬಿನ
ವಸನಂ! ಶರಣರೊಳು ಸಲುಗೆಯೇಂತರ ಸೊಬಗಯ್||
ತುಂಬ ಚೆನ್ನಾಗಿದೆ
ನಡುನಡುವೆ ಗಂಟುಗಳವೆಷ್ಟಿದ್ದರೂ ಕಬ್ಬು
ಬಿಡದೆತಾ ಜನಕೆ ಸಿಹಿಯುಣಿಸುವಂದದಲಿ
ತಡೆಗಳೆಷ್ಟಿದ್ದರೂ ನಮ್ಮಬಾಳೊಳು ಗಣಪ
ಬಿಡದೆ ನಡೆಸೆಮ್ಮನೀ ನಮ್ಮ ಗುರಿಗೆ
ಒಳ್ಳೆ ಕಲ್ಪನೆ!
ಧನ್ಯವಾದಗಳು ನೀಲಕಂಠರೆ
good imagination
Thank you Sir
ಇಕ್ಷುಧನುವನೇ ಗೆಲ್ಡಂ
ಗಿಕ್ಷುವಿನೊಳಲಂಕರಿಪ್ಪುದೇಂ!ಲೋಕಂ!ಹಾ!
ಭಕ್ಷಿಸಿ ನಿಶೆಯಂ ಪೊಳೆದಾ
ನಕ್ಷತ್ರಕೆಸೊಗಮನೀವ ಶರ್ವರಿಗೋತುಂ!!
(ಕತ್ತಲನ್ನು ಗೆದ್ದು(ಭಕ್ಷಿಸಿ)ಮತ್ತೆ ಅದರಿಂದಲೇ ಶೋಭಿಸುವ ನಕ್ಷತ್ರದಿಂದ ಪ್ರಭಾವಿತರಾಗಿ ಜನರು, ಇಕ್ಷುಚಾಪನನ್ನು ಗೆದ್ದವಗೆ ಇಕ್ಷುವಿಂದೇ ಅಲಂಕರಿಸಿದರೇ?)
ಒಂದು ರೀತಿ ವಿಚಿತ್ರವಾಗಿ ಚೆನ್ನಾಗಿದೆ.
ಆದರೆ ತಾತ್ಪರ್ಯ ಅರ್ಥವಾಗಲಿಲ್ಲ. ನಾಲ್ಕನೇ ಸಾಲಿನ ಮೊದಲ ಗಣ ತಪ್ಪಿದೆ. ಕತ್ತಲನ್ನು ಗೆದ್ದವರು ಯಾರು? ಜನರೇ? ಹೇಗೆ? ನಕ್ಷತ್ರಗಳೇ? ಇಲ್ಲಿ ರಾತ್ರಿ, ತಾರೆಗಳೆಲ್ಲ ಏಕೆ ಬಂದುವು? ಪ್ರಾಸಕ್ಕಾಗಿಯೇ? 
ಇಕ್ಷುಧನು ಆಗಬೇಕಲ್ಲವೇ ಮನ್ಮಥನಿಗೆ? ಧನುಜ ಎಂದೇಕೆ ಬಳಸಿದ್ದೀರಿ?
ಕತ್ತಲನ್ನು ನುಂಗಿ(ಗೆದ್ದು) ,ತಿರುಗಿ ಕತ್ತಲಿಂದೇ ಸಿಂಗರಗೊಂಡ ನಕ್ಷತ್ರಗಳನ್ನು ನೋಡಿದ ಜನತೆ ತಮ್ಮ ಗಣಪನನ್ನು ಈ ಬಗೆಯಾಗಿ ಅಲಂಕರಿಸಿದರೇ!!–>ಇಕ್ಷುಚಾಪ(ಮನ್ಮಥ)ನನ್ನು ಗೆದ್ದವ(ಕಾಮನೆಯಿಲ್ಲದವ)ನನ್ನು ಇಕ್ಷುವಿಂದಲೇ ?!!
(ಹೋಲಿಕೆಗಾಗಿ –>(ಗಣಪತಿ,ಕಬ್ಬು ) vs (ನಕ್ಷತ್ರ,ಕತ್ತಲು))(ಉಪಮಾನದಲ್ಲಿ ಸ್ವಲ್ಪ ಸಾಮ್ಯವಿಲ್ಲವೇನೋ)
ಇಕ್ಷುಚಾಪ ಇದಕ್ಕೆ ಬದಲಾಗಿ ಇಕ್ಷುಧನುವನ್ನೇ ಬಳಸುವೆ
ಓಹ್, ಗೊತ್ತಾಯಿತು. ಅದನ್ನೇ ತಿಂದು ಅದರಿಂದಲೇ ಅಲಂಕೃತವಾದದ್ದು. ಚೆನ್ನಾಗಿದೆ
ಮಾರುಪೋಗದೇ ಸಿರಿಗೆ ಬಡರೈತನೋರ್ವನಿಂದು ಜಗದೇ
ದಾರಿ ತನ್ನದನು ನಂಬಿ ನಡದಿರಲು ಕರ್ಮಯೋಗಿಯಂತೇ
ನೂರು ಕಷ್ಟಗಳನೆದುರಿಸುತ್ತ ಬೆಳೆದಿರಲು ಪಸುರ ಫಸಲು
ದೂರ ಸಾರದೇ ಕಂಡನಲ್ತೆ ಗಣನಾಥನನ್ನೆ ಬಳಿಗೇ
(ದುಡಿಮೆಯಲ್ಲೇ ದೇವನನ್ನು ಕಂಡ)
ಆಹಾ! ತುಂಬ ಸುಂದರವಾದ ಕಲ್ಪನೆ, ಪದ್ಯ
_/\_ ಧನ್ಯವಾದಗಳು
ಅಡಿಯಿಂ ಮುಡಿವರೆಗಂ ತಾಂ
ಗಡ! ಧರಿಸಿರ್ಪನಿಡಿಕಬ್ಬ “ಬಲಮುರಿ” ಕಾಮಂ !
ಕಡಿಕಬ್ಬುವಿಲ್ಲೆಯೇ ಕರಿ-
ಗಡುಬಾಗಲ್ಕವಗೆ ತಕ್ಕು “ಕರಜಗಿ” ನಾಮಂ !!
enidu? enartha?
ನೀಲಕಂಠ, ಚಿತ್ರದಲ್ಲಿ “ಕಂಡಪದ್ಯ” !!
ಅಡಿಯಿಂದ ಮುಡಿವರೆಗೂ ಪೂರ್ತಿ ಕಬ್ಬನ್ನು ಧರಿಸಿರುವ ಬಲಮುರಿ (-ಗಣಪ) ತಾನು ಕಾಮನು, ಅವನ ಕೈಯಲ್ಲಿರುವ (ಪ್ರಿಯವಾದ) ಕರಿಗಡುಬೂ ಸಹ ಕಬ್ಬಿನಜಲ್ಲೆಯ ತುಂಡಾಗಿರಲು “ಕರ ಜಗಿ” ಎಂಬ ಹೆಸರು ಅವನಿಗೆ ಸೂಕ್ತ – ಎಂಬ ಅರ್ಥದ ಪದ್ಯ. “ಕರಜಗಿ” ಪದದ ಅರ್ಥವನ್ನು ಗುರುರಾಜ್ ಕರಜಗಿ ಸರ್ ರವರಿಂದಲೇ ತಿಳಿಯಬೇಕಿದೆ!!
ತರಿದೊಟ್ಟಿ ರಸಾಲಂಗಳ
ಹರಸುತನಂ ಸಮೆದು ಪಳ್ಳಿಗರ್ ಪೊಡೆಮಟ್ಟರ್ |
ಕರಿವದನಂ ಕರಿ ಕರ್ವಿನೊ-
ಳರಳಿರೆ ಜನಕಲ್ತು ಪರ್ವಮಿರುವೆಯ ಕುಲಕಂ ||
ಕಬ್ಬಿನ ಗಣೇಶನಿಂದ ಜನರಿಗೆ ಹಬ್ಬವಾಯಿತು ಎನ್ನುವುದಕ್ಕಿಂತ ಇರುವೆಗಳಿಗೆ ಹಬ್ಬವಾಯಿತು ಎನ್ನುವುದು ಸಮಂಜಸ..
ಆಹಾ, ಚೆನ್ನಾಗಿದೆ
Very good diction.
ಧನ್ಯವಾದಗಳು..
ತಕ್ಕಾದ ವಸ್ತ್ರಂಗಳನುಡುತಿರ್ಪ ಗಣಪಂ
ಸಕ್ಕರೆಯವೋಲೆ ಸಿಹಿಯಾಗೆ ಮೆರೆಯಲ್;
ಸೊಕ್ಕಿನಿಂ ಬೀಗುತಿರ್ಪೊಡೆಯುಮೀ ನಾಯಕರ್
ಸಿಕ್ಕಿಸಿಕೊಳುವರೆ!ಬಹು ವೇಶಗಳನುಂ!!
(ಜನರಭಾವನೆಗಳಿಗೆ ತಕ್ಕಾಗಿ ಉಡುಪನ್ನು ಧರಿಸುವ ಗಣಪ,ಈ ಜನನಾಯಕರುಗಳಿಗೆ ಮಾದರಿಯಾದನೇ?)
ರಂಗಂ ಬಳಿಯದಿರೆನ್ನುವ
ಡಂಗುರವಂ ಸಾರ್ದೊಡಂ, ಪೊಸತು ವಿಧಿಯಿಂದಂ
ಸಿಂಗರಿಸಿರ್ಪರೆ ಭಕ್ತರ್
ಮಂಗಳಮಯ ಮೂರ್ತಿಯನ್ನೊಲವಿನ ಗರಿಮೆಯಿಂ!
ಚನ್ನಾಗಿದೆ!
ditto