Sep 042017
 

ಓಣಮ್ ಹಬ್ಬದ ಹೂವಿನ ರಂಗೋಲಿಯನ್ನು ವರ್ಣಿಸಿ ಪದ್ಯರಚಿಸಿರಿ. ಈ ಕೆಳಕಂಡ ಅಕ್ಷರಗಳನ್ನು ನಿರ್ದೇಶಿತ ಸ್ಥಾನದಲ್ಲಿ ಬಳೆಸಿರಿ.

1ನೇ  ಸಾಲು: 3ನೇ ಅಕ್ಷರ ‘ಕ’

2ನೇ ಸಾಲು: 4ನೇ ಅಕ್ಷರ ‘ಚ’

3ನೇ ಸಾಲು: 5ನೇ ಅಕ್ಷರ ‘ತ’

4ನೇ ಸಾಲು: 6ನೇ ಅಕ್ಷರ ‘ಪ’

ಛಂದಸ್ಸು ನಿಮ್ಮ ಆಯ್ಕೆ (ಈ ಬಾರಿಯ ಪ್ರತಿಕ್ರಿಯೆಗಳನ್ನು ಗಮನಿಸಿ ಛಂದಸ್ಸನ್ನೂ ಮುಂದಿನ ನ್ಯಸ್ತಾಕ್ಷರಿಯ ಕಂತುಗಳಲ್ಲಿ ನಿರ್ದೇಶಿಸಲಾಗುವುದು)

 

  29 Responses to “ಪದ್ಯಸಪ್ತಾಹ ೨೭೧: ನ್ಯಸ್ತಾಕ್ಷರೀ”

  1. ವರ್ಣಕಮಲ್ಲಿರಲ್ ವಿನುತಕಲ್ಪನೆಯಂತೆಯೆ ಚಿತ್ರಮುಂ ಸಲ
    ಲ್ವರ್ಣನಚರ್ಯೆಯುಮ್ ಲಲಿತಲೇಖನಮೊಪ್ಪಿರೆ ಶೋಭಿಸಲ್ಕೆ ಮೇ
    ಣರ್ಣವಮುಂ ತದೀಯಸುತನಂತೆಯೆ ಭಾಸುರರಕ್ಕೆ ಚುಕ್ಕಿಗಳ್
    ಪರ್ಣಪರಾಜಿಪಲ್ಲವಿಪ ರೇಖೆಯ ಕಬ್ಬಮೆ ರಂಗವಲ್ಲಿ ತಾಂ //
    ವರ್ಣಕ(ಬಣ್ಣ,ಛಂದಸ್ಸು) ಇರಲು, ಕಲ್ಪನೆ,ಚಿತ್ರವೂ ಕೂಡಿರಲು(ಚಿತ್ರ,ಚಿತ್ರಕಾವ್ಯ) ವರ್ಣನಚರ್ಯೆಯೂ (ಬಣ್ಣತುಂಬುವ,ವರ್ಣಿಸುವ ಕೆಲಸ),ಲಲಿತವಾದ ಬರವಣಿಗೆಯೂ ಒಪ್ಪಿರಲು, (ವರ್ಣನೆಗಳಲ್ಲಿ ಅವಶ್ಯವಾಗಿ ಬರಲೇಬೇಕಾದ) ಸಾಗರ,ಸೂರ್ಯ,ಚಂದ್ರಾದಿಗಳು ಚುಕ್ಕಿಗಳಾಗಿರಲು, ಉದ್ಯಾನವನದಂತಿರುವ ಚಿಗುರುವ ರೇಖೆಗಳಿರಲು ರಂಗೋಲಿಯು ಕಾವ್ಯವೇ ಆಗಿದೆ. ದುಷ್ಕರಪ್ರಾಸದಿಂದ(ನನಗೆ) ಪದ್ಯರಚನೆಯು ತ್ರಾಸವೇ ಆಗಿದೆ 🙁

  2. ಉತ್ತರೋತ್ತರಘಟ್ಟದಲ್ಲಿ ಛಂದಸ್ಸನ್ನು ನೀವೇ ನಿರ್ದೇಶಿಸುವುದೆಂದರೆ, ನಮಗೆ ಇನ್ನೂ ಸುಲಭವಾಗಿಸಿದಂತೆ!
    ಸಾಗುತ್ತೆ ಮುಂದಮುಂದಕ್ಕೆ ಅಭ್ಯಾಸಿಗಳ್
    ಮೇಗಳ ಸ್ಥಾನಕ್ಕಮೇರಬೇಕೈ|
    ಹೀಗೀಗ ಕ್ಲಿಷ್ಟಮಾಗಿಸಿ ಮುಂದೆ ಸೌಲಭ್ಯ-
    ವಾಗಿಸುವುದೇಕೆಂಬ ಹಾದಿರಂಪಂ||
    ಅಲ್ಲದೆ, ಉತ್ತರಾಕ್ಷರವು ಸಂಯುಕ್ತಾಕ್ಷರವಾದಾಗ ಲಘುನ್ಯಸ್ತಾಕ್ಷರವು ಗುರುವಾಗುವುದಾದರೂ, ವಿವಿಕ್ತವಾಗಿ ಅದರ ದೃಶ್ಯರೂಪವು ಲಘುವಾಗಿಯೇ ಉಳಿಯುವುದರಿಂದ, ಸರ್ವಲಘುನ್ಯಸ್ತಾಕ್ಷರಿಯು ಯಾವ ಛಂದಸ್ಸಿಗೂ ಒಗ್ಗುತ್ತದೆಯಲ್ಲವೆ?

    • che che.. koTTa sthaanadalli koTTa varNagaLu ellive endu huDukuttidde nimma padyadalli 🙁

      • You can’t have the pie and eat it too ಎಂಬ ಉಕ್ತಿಯ ಪ್ರಕಾರ, ನಿರ್ದಿಷ್ಟಸ್ಥಾನಗಳಲ್ಲಿ (’ಕೊಟ್ಟಸ್ಥಾನಗಳಲ್ಲಿ’ ಅರಿಯಲ್ಲವೆ?) ಇತರ ವರ್ಣಗಳನ್ನು ಹಾಗೂ, ನಿರ್ದಿಷ್ಟವರ್ಣಗಳನ್ನು ಇತರ ಸ್ಥಾನಗಳಲ್ಲಿ ಇರಿಸುವುದು ಸಾಧು.

        • ಕೊಟ್ಟ ಸ್ಥಾನ is not ari 🙂 “bengaloorige koTTa vadhu” ariyaguttaaLeye? koTTa vachana ariyaadeete? tinda anna ariye? banda mitra ariyaadaneye?!

  3. ಕರಕಮಲದೊಳು ಕೊಯ್ದ ಹೂಗಳ
    ಹರಿಯ ಚರಣಕೆ ಬಾಗಿದರಸನ
    ಧರೆಯ ಗತವೈಭವವ ವನಿತೆಯರೆಲ್ಲ ನುತಿಸುತ್ತ I
    ಕರಿತುಳಸಿ ಪತ್ರೆಗಳ ವೃತ್ತವ
    ಬರೆದರಸಿನದ ಗೊಂಡೆ ಹೂಗಳ –
    ನೆರಚಿ ದಾಸನ ,ತುಂಬೆ ರಥಪುಷ್ಪಗಳ ಜೋಡಿಸಲು II

  4. ದೈವವು ನಿರ್ಮಿಸಿದ ಪುಷ್ಪದಲ್ಲಿ corolla(ದಳ), calyx(ಪುಷ್ಪಪಾತ್ರದಳ – ಸಾಮಾನ್ಯವಾಗಿ ಹಸುರುಬಣ್ಣದ್ದು), andraecium(ಪುರುಷಾಂಗ), gynaecium(ಸ್ತ್ರ್ಯಂಗ), peduncle(ಕಾವು) ಇತ್ಯಾದಿಗಳಿರುತ್ತವಷ್ಟೆ. ಇತರೆಲ್ಲವನ್ನುಳಿದು ಬರಿಯ ದಳಗಳನ್ನು ಮಾತ್ರ ಬಳಸಿಕೊಂಡು, ಸುಂದರವೇ ಆದರೂ ಪ್ರಕೃತಿಯಲ್ಲೆಲ್ಲಿಯೂ ಇಲ್ಲದ ಪುಷ್ಪದಲವಿನ್ಯಾಸವನ್ನು ಸೃಷ್ಟಿಸುವುದು ಪಾರ್ಶ್ವಗುಣಗ್ರಹಣ; ಮುಖಕ್ಕೆ ಅಸಾವಯವಶೃಂಗಾರವನ್ನು ಮಾಡಿದಂತೆ; ನೋಡಲು ಚಂದವಿರುವ ಮನುಷ್ಯರನ್ನು ಮಾತ್ರ ಪ್ರೀತಿಸಿದಂತೆ.
    ಮಲ್ಲಿಕಾಮಾಲೆ|| ದೇವಕಲ್ಪಿತ ಪೂವದೋ ದಲ-ಪಾತ್ರ-ರೇಣುಸುಸಂಗಮಂ
    ಕೇವಲಂ ಚಲುವಿಂಗೆ ಸಂಚಯಗೈದು ರೂಪಿಸೆ ವರ್ತುಲಂ|
    ರಾವ ಬೀರುತ, (ಪ್ರ)ಸಾಧನಂ ಬೆಳಗಿರ್ಪವೋಲದಸಾವಯಂ
    ಸೋವಿಯೆಂದೆನಿಪರ್ ವಿಧಾತನುಮಿತ್ತ ರೂಪವ ಪೊಂದಿದರ್!!

  5. ಕನಕಾಂಬರಮಂ ಪೋಲ್ದಿ-
    ರ್ಪ ನೆಲಂ ಚಮಕಿರ್ಪುದೊಂಟಿ ದೀಪಂ ಮಧ್ಯಂ
    ದಿನಪಂ ಜತೆಯಿತ್ತೋಣಂ(ಜಂ)
    ಮನವಂ ರಂಜಿಪುದು ಪೂತು ಪೂವಲಿ ಪೂವಿಂ ।।

    ಪೂವಲಿ = ರಂಗವಲಿ
    ಹೂವಲಿ ಅರಳಿದ ಹೂವ ರಂಗೋಲಿ !!
    ಸಾಮಾನ್ಯವಾಗಿ ಹಳದಿ / ಕೇಸರಿ ಹೂ ಗಳಲ್ಲಿ ಕಂಗೊಳಿಸುವ (ಮಧ್ಯದಲ್ಲಿ ಎತ್ತರದ ಹಿತ್ತಾಳೆ ದೀಪದ ಕಂಬ!) – “ಪೂಕಲಂ”ನ ಬಣ್ಣನೆ !!

    • ನ್ಯಸ್ತಾಕ್ಷರಿಯಲ್ಲಿ ಹೇಳಲ್ಪಟ್ಟ ಅಕ್ಷರವನ್ನೇ ಬಳಸಬೇಕೇ? ಅಥವಾ ಆ ವರ್ಣಮಾಲೆಯ ಯಾವ ಅಕ್ಷರವನ್ನೂ ಬಳಸಬಹುದೇ?

      • ಹೌದು ಮಂಜುನಾಥ್, ಗಮನಿಸಲಿಲ್ಲ ತಪ್ಪಾಗಿದೆ, ಅದೇ ಅಕ್ಷರಗಳನ್ನು ತರಬೇಕು, “ಸಂಧಿ”ಗೆ ಅವಕಾಶವಿರುವುದೇ ಎಂದು ತಿಳಿಯದು. (ಇರುವುದಾದರೆ ಸ್ವಲ್ಪ ಬದಲಾವಣೆಯೊಂದಿಗೆ)
        ಕನಕಾಂಬರಮಂ ಪೋಲ್ದಿ-
        ರ್ಪ ನೆಲಂ ಚಮಕಿರ್ಪುದೊಂಟಿ ದೀಪಂ ಮಧ್ಯಂ
        ದಿನಪಂ, ವ್ರತಮಿಂತೋಣಂ(ಜಂ)
        ಮನವಂ ರಂಜಿಪುದು ಪೂತು ಪೂವಲಿ ಪೂವಿಂ ।।

  6. ಕನಕ,ಕುಂಕುಮ,ನೀಲ,ಹರಿತದ
    ಮನಕೆ ಚಣದೊಳು ಮುದಮನೀಯುತ-
    -ಲನವರತ ಪರಿಮಳವ ಬೀರುವ ಕುಸುಮವರ್ಣಿಕೆಯೀ
    ವನಿತೆಯರ ಪರಿಪರಿಯ ನೃತ್ತದೊ-
    -ಳಿನಿತು ಮೆರುಗನು ಪಡೆದು ಮೆರೆದಿಹ,
    ನಿನದದಿಂದುಲ್ಲಸಿತವಾಗಿಹ ಸೊಬಗನೇನೆಂಬೆ

    ಹೂವಿನ ರಂಗೋಲಿ ಸುತ್ತಲೂ ನಲಿಯುತ್ತಿರುವ ವನಿತೆಯರಿಂದ,ಅವರು ನಕ್ಕು ನಲಿಯುತ್ತಿರುವುದರಿಂದ ಉಂಟಾಗುವ ಶಬ್ದದಿಂದ ಹೊಸ ಮೆರುಗನ್ನೂ, ಉಲ್ಲಾಸವನ್ನೂ ಪಡೆದಿದೆ ಎನ್ನುವ ಪ್ರಯತ್ನ.

    • ಮಾಡೆನ್ನೆ ಒಂದನುಂ ಬೇರೇನನೋ ಮಾಳ್ಪ
      ಖೋಡಿಯಾದೆಯ ನೀನನಂತಕೃಷ್ಣ|
      ನೋಡಯ್ಯ ಬಗೆಯ ಪೂವಿನಲಂಕೃತಿಯನೆನ್ನೆ
      ನಾಡು(ಟ್ಟು)ಪೆಣ್ಗಳೊಳೆಂತೊ ದಿಟ್ಟಿನೆಟ್ಟೆ!!
      Other options for the last line:
      ಚೂಡಿದಾರೇ ಚಕ್ಷುವಿಂಗಮಾಯ್ತೇಂ??/
      ಲೇಡಿಗಳ ಲೇವಡಿಗಮೀಡಾಗುವೈ!!/
      ವಾಡಿಕೆಯೆ ಮಿಗಿಲಾಯ್ತೆ, (bus stop)ಬಸ್ಸ್ಟಾಪಿದೇಂ??/
      ಚೌಡಿಯಾದಾಳವಳು ಓಡಿಪೋಗೈ!!/
      ತೋಡಿಕೊಂಡಿಹೆ ಮನದ ಹಪಹಪಿಯ ನೀಂ!!/
      ಮೂಡಿತೇಂ ಮಾಧುರ್ಯಮೆದೆಗೂಡೊಳು??/
      ಹೇಡಿಯಂದಿದ್ದೆ ನೀಂ ರೌಡಿಯೀಗಳ್!!/
      ವೀಡದಾರಿಯ ನೀನು ಬೇಗ ಹಿಡಿಯೈ||/
      ಬೇಡಿಕೊಳ್ಳುವೆ ಚಾಳಿಯಂ ಕೈಬಿಡೈ||

      • ಮೂಡಿಹುದು ಮನದೊಳಗೆ ಸಾಜದಲಿ ಭಾವವಿದು
        ತೋಡಿಕೊಂಡಿಹೆನದಕೆ ಕೇಳಿ ಗುರುವೇ
        ಹಾಡಿರುವೆನೀ ಕವನ ಖೋಡಿತನವೇನಿಲ್ಲ
        ನೋಡುತಿಹ ದಿಟ್ಟಿಯೊಳು ಕೆಡುಕದಿಲ್ಲ _/_

        • ನೋಡುತಿಹ ’ದಿಟ್ಟಿ’ಯೊಳು ಕೆಡುಕದಿಲ್ಲ…….
          ತನ್ಮಾತ್ರಗಳೊಳು ’ದೃಷ್ಟಿ’ಯನೊಂದ ಪರಿಗಣಿಸಿ
          ಮನ್ಮಥನೆ ನೀ ಜಾಣತನವ ಮೆರೆದೈ|
          ಸನ್ಮಿತ್ರ ರುಚಿ, ರವ, ಘ್ರಾಣ ಮೇಣ್ ಸ್ಪರ್ಶದೊಳ್
          ತನ್ಮಯಂ ನೀನಾಗದಿರ್ದಪೆಯ ಪೇಳ್||

          • ಎಲ್ಲವಂ ಮೀರಿರುವ ಮಲ್ಲನಾನೇನಲ್ಲ
            ಕಳ್ಳತನವಿಲ್ಲವೆನ್ನಯ ಭಾವದೊಳ್
            ಹುಲ್ಲುಕಡ್ಡಿಯ ಮೇಲೆ ಬೊಮ್ಮನೀ ಬಾಣವನು(ಬ್ರಹ್ಮಾಸ್ತ್ರ)
            ನಿಲ್ಲಿಸದೆ ಬಿಡುತಿರುವಿರೇಕೆ ಗುರುವೇ?

            ಸಹಜಮಂ ಮೀರುತಲಿ ಸಾಧನೆಯಗೈಯಲ್ಕೆ
            ವಹಿಸುತಲಿ ಶ್ರದ್ಧೆಯಂ ಕಾರ್ಯಗೈವೆಂ
            ದಹಿಸುತಲಿ ಕಾಮನಂ ಕರ್ತವ್ಯವರಿಯುತಲಿ
            ಸಹನೆಯಿಂ ಸರಸತಿಯ ಸೇವೆಗೈವೆಂ

            ಚೌಪದಿಯಾದ್ದರಿಂದ ಹಳೆ-ಹೊಸ-ನಡುಗನ್ನಡಗಳನ್ನು ಬೆರೆಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.
            ಪದ್ಯ ನಿಮಗೆ ಅನುಚಿತವೆನಿಸಿದ್ದರಿಂದ ಸ್ವಲ್ಪ ಸಮಯ ತೆಗೆದುಕೊಂಡು ಇನ್ನೊಂದು ನ್ಯಸ್ತಾಕ್ಷರೀ ಪ್ರಯತ್ನ ಮಾಡುತ್ತೇನೆ.

    • ಅಯ್ಯೋ, ಅನುಚಿತವೇನೂ ಇಲ್ಲ. ನಿಮ್ಮ ಪದ್ಯವು ಚೆನ್ನಾಗಿಯೇ ಇದೆ. ಇದೆಲ್ಲ lateral ಪದ್ಯಸಂಭಾಷಣೆಯಷ್ಟೆ.

      • ಚೆನ್ನಾಗಿಲ್ಲ, ಇನ್ನೊಂದು ಪದ್ಯ ಬರಿ ಅಂತೀರಿ ಅಂತ ಖುಷೀಲಿ ನಾನಿದ್ರೆ ಹೀಗಂದ್ಬಿಟ್ರಲ್ಲಾ ಸರ್ 🙁

  7. ಚಮಕವಚಸ್ಸ್ತುತಂ ನಟನಪಾಟವದೂಡಿದ ರಂಗಲೇಖೆಯೋ
    ಭ್ರಮಣಚರಿಪ್ರಕಾಶನಮೆ ಸಂದುದೊ ಮಾರಶಿಖಿಪ್ರಯುಕ್ತಿಯಾ
    ಕಮಲಿನಿ ತಂಗದಿರ್ಮಸುಳುತುಂ ಸಖಿಯರ್ ವೆರಸಿಂತು ನಲ್ದುದೋ
    ಸಮನಿಸೆ ಸಂಪದಂ ಜನಮನಂ ಮಲರ್ದೀ ಸೊಬಗಾಯ್ತೊ ಪರ್ವದೊಳ್

    ಚಮಕಸ್ತುತನಾದ ಶಿವನ ನಟನಪಾಟವದಿಂದ ಮೂಡಿದ ರಂಗಲೇಖೆಯೋ, ಮನ್ಮಥನು ಲೀಲಾಜಾಲವಾಗಿ ತನ್ನ ಬಾಣಗಳನ್ನು ತಿರುಗಿಸುತ್ತ ಪ್ರಯೋಗಿಸಿದಾಗ ಈ ಆಕೃತಿ ಉಂಟಾದದ್ದೋ, ಚಂದ್ರ ಮರೆಯಾದಾಗ ಕಮಲಿನಿಯು ತನ್ನ ಸಖಿಯರೊಡನೆ ಈ ರೀತಿ ನಲಿದಾಡಿದ್ದೋ, ಸಂಪತ್ತು ಬಂದಾಗ ಜನರ ಮನಸ್ಸು ಹಬ್ಬದ ಕಾಲದಲ್ಲಿ ಈ ರೀತಿ ಅರಳಿ ಚೆಲುವುಗೊಂಡಿತೋ!!

    • ಘಮಘಮಿಪಂತೆವೋಲ್ ಶಿವನ ಜೂಟಕೆ ಚಂದ್ರಮನೊರ್ವನೇ ಸದಾ
      ಕಮನಮನೆಂತುಟೀವನೆನುತಿಂತು ಸುಬಂಧುರ ಪದ್ಯಪುಷ್ಪದಿಂ
      ಸುಮಧುರ ಶೈಲಿಯಿಂ ತಿರಿಯುತಿತ್ತಿರೆ ಭಂಪತಿಭೂಷನಾದನೈ
      ಸುಮನವಿಭೂಷಣಂ ಸಕಲಕಾಲಕೆ ಸಲ್ವುದು ನೀಲಕಂಠರೇ!!

      • Second line to be read as …………ಪದ್ಯಪುಷ್ಪಮಂ

        • Corrected as suggested by Neelakantha sir .
          ಘಮಘಮಿಪಂತೆವೋಲ್ ಶಿವನ ಜೂಟಕೆ ತಂಗದಿರೊರ್ವನೇ ಸದಾ
          ಕಮನಮನೆಂತುಟೀವನೆನುತಿಂತು ಮನೋಹರ ಪದ್ಯಪದ್ಮಮo ಸುಮಧುರ ಶೈಲಿಯಿಂ ತಿರಿಯುತಿತ್ತಿರೆ ಚಂದ್ರಕಲಾಪನದನೈ
          ಕಮಲವಿಭೂಷಣಂ ಸಕಲಕಾಲಕೆ ಸಲ್ವುದು ನೀಲಕಂಠರೇ

    • _/\_

    • ಸುಗ್ಗಿಯ ಹಬ್ಬಕ್ಕೆ ಸೊಗಸಾದ “ಚಂಪಕಮಾಲೆ” ನೀಲಕಂಠ !!
      3ನೇ ಸಾಲಿನ 5ನೇ ಅಕ್ಷರ “ತಂ” ತಂದುದು ಸಾಧುವೇ? ನ್ಯಸ್ತಾಕ್ಷರಿಯ ನಿಯಮಗಳನ್ನು ದಯವಿಟ್ಟು ತಿಳಿಸಿಕೊಡು.

      • _/\_ ಅಂ ಅಃ ಇವು ಸ್ವರಗಳ ಪೈಕಿ ಬಾರವು ಎಂದಿದೆ. ಅಂ ಅಃ ಥರ ಆಂ ಆಃ ಇಂ ಇಃ ಇತ್ಯಾದಿ ಇವೆಯಲ್ಲ! ಆದ್ದರಿಂದ ಅಕಾರ ಮಾತ್ರ ಅಲ್ಲಿರುವುದು. ತಙ್ಗದಿರ ಎಂದಂತಾಗುವುದು 🙂

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)