Dec 262018
 

೧. ಜಲಕ್ರೀಡೆ
೨. ಪಾರಿಜಾತ
೩. ಸ್ವರ್ಣಕಲಶ

  23 Responses to “ಪದ್ಯಸಪ್ತಾಹ ೩೩೯: ವರ್ಣನೆ”

 1. ನಸುಕಿನೊಳಂಗಳಂ ನಲಿಯೆ, ತುಂಬಿದ ತುಂತುರಲರ್ಗಳೊಲ್ಮೆಯೇ
  ಪಸುರಿನ ಪಾಸಿನೊಳ್ ಜಗುಳಿ ಮಾಸಿರೆ, ಮೂಡಿರೆ ದೇಶಗೌರವಂ|
  ಮಸಕದ ಸಾರ್ಥಕತ್ವಮನೆ ತಂದುದು ತಂಪಿನ ಕಾರ್ಯ-ಕಾರಣಂ;
  ಪೆಸರದೊ “ಪಾರಿಜಾತ”ಮೆನೆ ಕೇಸರ-ಗೌರಮನೋಜ್ಞವರ್ಣದಿಂ ||

  ಹಸಿರು ಹುಲ್ಲುಹಾಸಿನ ಮೇಲೆ ಉದುರಿದ ಪಾರಿಜಾತ ಪುಷ್ಪಗಳು – ಕೇಸರಿ,ಬಿಳಿ,ಹಸಿರು ಬಣ್ಣದ “ತ್ರಿವರ್ಣ ಧ್ವಜ”ವನ್ನು ಮೂಡಿಸಿರುವ ಕಲ್ಪನೆ !!

  (ಹಿಂದೆ ಮಹೇಶ ಭಟ್ಟ ಹಾರ್ಯಾಡಿಯವರ ಅವಧಾನದಲ್ಲಿ “ನ್ಯಸ್ತಾಕ್ಷರಿ” ಗೆಂದು ರಚಿಸಿದ್ದ ಪದ್ಯ )

 2. ಪಾರಿಜಾತಸುಮಕೆಂತು ಬಲ್ಮೆಯೋ
  ಪಾರಿರಲ್ಕರುಣವರ್ಣಸಂಯುತಂ
  ತೋರಿತೇನಿನನ ದಾರಿಯಂ ಪ್ರಭಾ-
  ಸ್ಫಾರತಾನ್ವಿತವಿಶಾಲವೀಥಿಯೊಳ್
  (ಪಾರಿಜಾತ ಹೂವಿಗೆ ಎಷ್ಟೊಂದು ಬಲ್ಮೆಯೋ! ನೋಡಿದರೆ ಅರುಣವರ್ಣವನ್ನು ತಳೆದು, ಕಾಂತಿಯಿಂದ ಕೂಡಿದ ವಿಶಾಲಮಾರ್ಗದಲ್ಲಿ ಸೂರ್ಯನ ದಾರಿಯನ್ನು ತೋರಿಸುತ್ತಿದೆಯೇ?)

 3. [ಗಂಡನು ಹೆಂಡತಿಗೆ ಬಸ್ಸು ಹಿಡಿದು ಬರಲು ಹೇಳಲು,ಅವಳ ಉತ್ತರ ಹೀಗಿತ್ತು]

  ಯಾರೆಂದುಕೊಂಡೀರಿ ನಿಮ್ಮ ಹೆಂಡತಿಯನ್ನು
  ಕಾರಿರಲು ಬಸ್ಸೊಂದ ಹತ್ತುವವಳೇನು?
  ವಾರಿಜಾಕ್ಷನು ತಾನೆ ಬಳಿಸಾರಿ ನಿಂದಿರಲು,
  ಪಾರಿಜಾತಕ್ಕತ್ತ ಸತ್ಯಳೇನು?
  ✍ಮಲ್ಲಿಭಾಗವತ…!

  • ದಯವಿಟ್ಟು ಇದನ್ನು ಕಡೆಗಣಿಸಿ…….4ನೆಯದನ್ನು ಪರಿಗಣಿಸಿ.

 4.  [ಗಂಡನು ಹೆಂಡತಿಗೆ ಬಸ್ಸು ಹಿಡಿದು ಬರಲು ಹೇಳಲು,ಅವಳ ಉತ್ತರ ಹೀಗಿತ್ತು]

  ಯಾರೆಂದುಕೊಂಡಿರೀ ಭಾಮೆ ನಿಮ್ಮವಳನ್ನು,
  ಕಾರಿರಲು ಬಸ್ಸೊಂದ ಹತ್ತುವವಳೇನು?
  ವಾರಿಜಾಕ್ಷನು ತಾನೆ ಬಳಿಸಾರಿ ನಿಂದಿರಲು,
  ಪಾರಿಜಾತಕ್ಕತ್ತ ಸತ್ಯಳೇನು?
  ✍ಮಲ್ಲಿಭಾಗವತ…!

 5. ಪಾರಿಜಾತಕ್ಕತ್ತ=ಪಾರಿಜಾತಕ್ಕೆ+ಅತ್ತ(ಪಾರಿಜಾತಕ್ಕಾಗಿ ಅತ್ತ)
  ಸೃಷ್ಟಿಯ ಎಲ್ಲವೂ ತಾನೇ ಆಗಿರುವ,ಯಾರು ಸಿಕ್ಕರೆ ಬಯಸಲಿನ್ನೇನೂ ಉಳಿಯುವುದಿಲ್ಲವೋ,ಯಾರ ಪದಾಬ್ಜವೇ ಬ್ರಹ್ಮಾಂಡದ ಅತ್ಯಂತ ಶ್ರೇಷ್ಠ ಪುಷ್ಪವೋ,ಅಂತಹ ಶ್ರೀ ಕೃಷ್ಣನನ್ನು ಪತಿಯಾಗಿ ಪಡೆದ ಸತ್ಯಭಾಮೆಯು ಪಾರಿಜಾತಕ್ಕಾಗಿ ಹಾತೊರೆಯುವ ವುದು ಕವಿಗೆ ಸೋಜಿಗವೆನಿಸುತ್ತಿದೆ.

 6. ಸ್ವರ್ಣಕಲಶ
  ಕಲಶವದು ಬೆಳ್ಳಿಯದ್ದಾದೊಡೇಂ ಮೇಣಿಂದೆ
  ಕಿಲುಬದಿಹ ಚಿನ್ನದ್ದು ತಾನಾದೊಡೇಂ|
  ಜಲವು ತುಂಬಿರುವನಕ ಮಾತ್ರಮದು ’ಕಲಶ’ವೈ
  (ಮಾವಿನ)ಎಲೆಯ ಮೇಣ್ ನೀರ ಚೆಲ್ಲಲು ’ಚೊಂಬ್’ಅದು!!

 7. ಜಲಕ್ರೀಡೆ
  ಐಟೆಮ್ ಸಾಂಗಿಗೆ ಕುಣಿಯುವೆನೆನ್ನುತೆ
  ಮಾಟದ ಹುಡುಗಿಯು ಪೊರಟಿಹಳು|
  (ಚಿತ್ರನಿರ್ಮಾಪಕ) ಸೇಟುವ ಕಂಡಾಡಿಶನನು(Audition) ಬೇಡಲು
  ಸಾಟಿಯೆ ತನಗಾರಿಲ್ಲೆನುತುಂ||

  ಸಂದರ್ಶನವನು ಮಾಡುತೆ ಸೇಟುವು
  ’ಮಿಂದೀಜಲು ಬಲ್ಲೆಯ?’ ಎನಲು|
  ಸುಂದರಿಯೆಂದಳು ’ಈಜಲುಬಲ್ಲೆನು
  ತಂದೆಯೆ ನೀರಿಲ್ಲದೊಡಂ ಕಾಣ್!!’

 8. ಪಾರಿಜಾತ ವಿಷಯವಾಗಿ ಶಾಂತಳಾದ ರುಕ್ಮಿಣಿಯೊಳು
  ನೀರೆ ಕೃದ್ಧೆ ಸತ್ಯಭಾಮೆ ಜಗಳಗೈದಳೈ|
  ಚಾರುಪುಷ್ಪದೊಳಗಮಿವರ ಭಾವವಿಹುದು ಬಣ್ಣಗಳೊಳು
  (ರುಕ್ಮಿಣಿ)ಸ್ಮೇರವದನೆಯಮಲದಲವು, ಕೆಂಪ ಕಾವಿವಳ್(ಸತ್ಯಭಾಮೆ)||

  • ಪಾರಿಜಾತದ ಬಿಳಿಯ ಕೆಂಪು ಬಣ್ಣಗಳಲ್ಲಿ ರುಕ್ಮಿಣಿ, ಸತ್ಯಭಾಮೆಯರನ್ನು ಕಂಡ ಕವಿಯ ಕಲ್ಪನೆ ಅದ್ಭುತವಾಗಿದೆ.
   ಅಭಿನಂದನೆಗಳು, ಸರ್.

   • _/|_ ಆದರೆ ನಾನು ಕವಿ ಅಲ್ಲ. ನಾನು ಯಾವ ಕಾವ್ಯವನ್ನೂ ಬರೆದಿಲ್ಲ. ನಾನು ಪದ್ಯಕಾರ ಅಷ್ಟೆ.

 9. ಏಕಗೊಳೆ ತಾಂ ಮಹಾಕಾಲ ಸಾಗರದೊಳ್ ತ-
  ದೇಕ ಪರಿವುದು ಕಾಲ ನದಿಯವೋಲ್ ಮೇಣ್
  ಪಾಕವಿಧಮದು ಸೂರ್ಯ ತರುದಿಳೆಗೆ ಮಳೆಬೆಳೆಯ
  ಲೋಕಕಾರ್ಯ ಮಿಗೆ “ಜಲಕ್ರೀಡೆ”ಯಲ್ತೇ !!

  ಎಲ್ಲರಿಗೂ ಹೊಸವರ್ಷದ ಶುಭಾಶಯಗಳು !!

  • ಸಖತ್ ಕಲ್ಪನೆ. ಮಹಾಕಾಲ ಸಾಗರದೊಳ್ ಪರಿವುದು ನರಜೀವಿತಕಾಲಗಳ್ ನದಿಯವೋಲ್ (Chandass correction required) – ’ಮಹಾಕಾಲ’ ಎಂದರೆ ಲಯಕಾರ ಶಿವ. ಇದಕ್ಕೆ ಪ್ರತಿಮಾನವಾಗಿ ’ನರಜೀವಿತಕಾಲ’ ಎಂದರೆ ಸ್ಪಷ್ಟತೆಯಿರುತ್ತದೆ.

   • ಧನ್ಯವಾದಗಳು ಪ್ರಸಾದ್ ಸರ್,

    ತದೇಕ = ನಿರಂತರವಾಗಿ ಕಾಲನದಿ (ದಿನ/ಮಾಸ/ಸಂವತ್ಸರ ರೂಪತಾಳಿ ) ಹರಿದು ಮಹಾನ್ ಕಾಲ ಸಮುದ್ರ ಸೇರುವುದೆಂಬ ಕಲ್ಪನೆ,
    ಪ್ರತೀಕ ಕಾಲ = ಮಹಾಕಾಲದ “ಅಂಶ” ಎಂದಾದರೆ ಸರಿಯಾಗುದಲ್ಲವೇ ?

    ತಿದ್ದಿದ ಪದ್ಯ:
    ಏಕಗೊಳೆ ತಾಂ ಮಹಾಕಾಲ ಸಾಗರದೊಳ್ ಪ್ರ-
    ತೀಕ ಕಾಲಂ ಪರಿದು ನದಿಯವೋಲ್ ಮೇಣ್
    ಪಾಕವಿಧಮದು ಸೂರ್ಯ ತರುದಿಳೆಗೆ ಮಳೆಬೆಳೆಯ
    ಲೋಕಕಾರ್ಯ ಮಿಗೆ “ಜಲಕ್ರೀಡೆ”ಯಲ್ತೇ !!

 10. #ಜಲಕ್ರೀಡೆ#
  ನಂಜಾಗದಾವುದೂ ಮುಂಚೂಣಿಲಿರಲೊಲವು,
  ರಂಜಿಪರೆ ಪ್ರೇಮಿಗಳು ಎಂಜಲಾಟೂಟ?
  ಕಂಜಾಸನೆಯು ಕೂಡ ಒಪ್ಪಿಕೊಂಡಿಹಳು ತಾನ್
  ಕುಂಜರಗಳೆಂಜಲಿನ ಜಲಕ್ರೀಡೆಯಂ!!

  (ನಂಜಾಗು=ವಿರೋಧವಾಗು; ಒಲವಿರುವಲ್ಲಿ ಎಲ್ಲವೂ ಸಲ್ಲುತ್ತವೆ ಎಂಬ ಭಾವ; Everything is fair in Love & War…ಎಂಬಂತೆ)
  ✍ಮಲ್ಲಿಭಾಗವತ…!

  • ಮುಂಚೂಣಿಲಿರಲೊಲವು = ಮುಂಚೂಣಿಲಿ+ಇರಲಿ – ಮುಂಚೂಣಿಲಿ ಎಂಬುದು ಮುಂಚೂಣಿಯಲಿ ಎಂಬುದರ ಆಡುಮಾತಿನ ರೂಪ. ಪದ್ಯದಲ್ಲಿ ಸಲ್ಲದು. (ಆನುಷಂಗಿಕವಾಗಿ ಹೇಳಬಹುದಾದರೆ, ಹಳಗನ್ನಡದಲ್ಲಿ ಇಲಿ ಎಂಬ ಪ್ರತ್ಯಯವು ಇಲ್ಲ ಎಂಬರ್ಥವುಳ್ಳದ್ದು. ಉದಾ. ನಾಣಿಲಿ/ನಾಚಿಕೆಯಿಲ್ಲದವನು, ಮೂಗಿಲಿ/ಮೂಗಿಲ್ಲದವನು/ಹೇಡಿ).

   • ಧನ್ಯವಾದಗಳು, ಸರ್.ಅದನ್ನು ಈ ರೀತಿ ಬದಲಾಯಿಸಿದ್ದೇನೆ.ತಪ್ಪಿದ್ದರೆ ತಿಳಿಸಿ.

    ನಂಜಾಗದಾವುದೂ,ಒಲವು ಬಲವಾಗಿರಲ್
    ರಂಜಿಪರೆ ಪ್ರೇಮಿಗಳು ಎಂಜಲಾಟೂಟ?
    ಕಂಜಾಸನೆಯು ಕೂಡ ಒಪ್ಪಿಕೊಂಡಿಹಳು ತಾನ್
    ಕುಂಜರಗಳೆಂಜಲಿನ ಜಲಕ್ರೀಡೆಯಂ!!

    • ಜಲಕ್ರೀಡೆ – ೬ ಮಾತ್ರೆಗಳಿವೆ, ಲಗಾದಿಯೂ ಆಗಿದೆ. ಶಿಥಿಲದ್ವಿತ್ವವು ಕನ್ನಡವ್ಯಾಕರಣದ್ದು. ಸಂಸ್ಕೃತಪದಗಳಲ್ಲಿ ಸಾಧುವಲ್ಲ. ಆಟ+ಊಟ=ಆಟವೂಟ; ಆಟೂಟ ಆಗದು.

 11. ||ಜಲಕ್ರೀಡೆ||
  ನದಿಯೊಳ್ ಕುಂಜರ ಮಿಂದು ದೇಹ ಶುಚಿಯನ್ನಪ್ಪುತ್ತಿರಲ್ ಬಂದಿತಂ
  ಮುದಿಯಾಗಿರ್ದ ಮಹಾಮುಖಂ ಕರಿಯ ಕಂಡೀಜುತ್ತಲಾಹಾರಕಮ್ |
  ಮದದಿಂ ನೀರಿನೊಳಾಡುತಿರ್ಪ ಗಜದಾ ಪಾದಕ್ಕೆ ಬಾಯಿಕ್ಕಿರಲ್
  ಬದಿಯಲ್ ಪೊಂದಿದ ಹುಲ್ಲನಂ ಕರಿ ಬಿಡಲ್ ಸತ್ ಸ್ನಾನವನ್ನಪ್ಪಿತಮ್ ||

  ಗಜೇಂದ್ರ ಮೋಕ್ಷದ ಪ್ರಸಂಗ

  • ಒಳ್ಳೆಯ ಪ್ರಯತ್ನ. ಕೆಲವೊಂದು ಸವರಣೆಗಳಾಗಬೇಕು.
   ಕುಂಜರ ಎಂದಿರುವುದು ಕುಂಜರಂ ಆಗಬೇಕು. ಕುಂಜರ ಎಂಬಲ್ಲಿ ವಿಭಕ್ತಿಲೋಪವಾಗಿದೆ.
   ಶುಚಿಯನ್ನಪ್ಪುತ್ತಿರಲ್ – ಹೊಸಗನ್ನಡದ ರೂಪ. ಶುಚಿಯಂ+ಅಪ್ಪುತ್ತಿರಲ್- ಶುಚಿಯನಪ್ಪುತ್ತಿರಲ್ ಆಗುತ್ತದೆ.
   ಬಂದಿತಂ ಪ್ರಯೋಗ ತಪ್ಪು. ಬಂದಿತೈ ಮಾಡಬಹುದು.
   ಕೊನೆಯ ಸಾಲಿನ ತಾತ್ಪರ್ಯ ಗೊತ್ತಾಗಲಿಲ್ಲ. ಹುಲ್ಲನಂ ಅಂದರೇನು?
   ಹಾಗೆಯೇ ಸ್ನಾನವನ್ನಪ್ಪಿತಂ ಎಂಬಲ್ಲಿ ಕೂಡ ಸ್ನಾನವನಪ್ಪು ಎಂದೇ ಬರಬೇಕು. ಅಪ್ಪಿತಂ ತಪ್ಪು. ಅಪ್ಪಿತೈ ಎಂದೇನಾದರೂ ಮಾಡಬಹುದು.

   • ತಪ್ಪುಗಳನ್ನು ತಿದ್ದಿದ್ದಕ್ಕೆ ಧನ್ಯವಾದಗಳು

    ಕೊನೆಯ ಸಾಲಿನ ಅರ್ಥ: ನದಿ ದಡದಲ್ಲಿ(ಬದಿಯಲ್ಲಿ, Side ನಲ್ಲಿ) ಇದ್ದ ಹುಲ್ಲಿನ ಆಧಾರವನ್ನು ಬಿಡುತಿರಲು….. ಎಂದು

    ಸರಿಪಡಿಸಿದ ಪದ್ಯ ಹೀಗಿದೆ:

    ನದಿಯೊಳ್ ಮಿಂದು ಗಜಂ ಶುಚಿಂ ಗೊಳುತಿರಲ್ ನಿಶ್ಚಿಂತೆಯಿಂ, ಬಂದಿತೈ
    ಮುದಿಯಾಗಿರ್ದ ಮಹಾಮುಖಂ ಕರಿಯ ಕಂಡೀಜುತ್ತಲಾಹಾರಕಮ್|
    ಮದದಿಂ ನೀರಿನೊಳಾಡುತಿರ್ಪ ಗಜದಾ ಪಾದಕ್ಕೆ ಬಾಯಿಕ್ಕಿರಲ್
    ಮದವಂ ಶ್ರೀಪತಿಗರ್ಪಿಸುತ್ತೆ ಕರಿ ತಾಂ ಸತ್ ಸ್ನಾನವಂ ಪೊಂದಿತಮ್||

    • ಇದೀಗ ಪದ್ಯಭಾವ ಸ್ಪಷ್ಟವಾಯಿತು. ಆದರೆ ಕೆಲವೊಂದು ತಪ್ಪುಗಳು ನುಸುಳಿವೆ. ಶುಚಿಂ ಎಂಬುದು ಸಾಧುರೂಪವಲ್ಲ. ಶುಚಿ ಎಂದಾಗಬೇಕು.ಮದಮಂ ಎಂದಾಗಿಸಿದರೆ ಭಾಷೆ ಇನ್ನೂ ಹಳತಾಗುತ್ತದೆ.ಪೊಂದಿತಂ ಶುದ್ಧರೂಪವಲ್ಲ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)