Jan 012012
 

೨೦೧೨ರ ಮೊದಲ ವಾರದ ಸಮಸ್ಯೆ ::

ಕಂದ ಪದ್ಯದ ಸಾಲು :: ರಾಮಂ ರುಕ್ಮಿಣಿಯನೊಲ್ದು ಭರತನಿಗಿತ್ತಂ
ಪದ್ಯದ ಉಳಿದ ಸಾಲುಗಳನ್ನು ಪೂರೈಸಿರಿ

[ ಪದ್ಯ ಪಕ್ಷವು ಬಹಳ ಪೆಡಸಾಗಿ ಬೆಳೆದು, ಓದುಗರಿಗೆ ಕಷ್ಟವಾಗುವುದರಿಂದ, ಪ್ರತಿಯೊಂದು ವಿಭಾಗವನ್ನೂ ಬೇರೆ ಕವಲುಗಳಲ್ಲಿ ನಿಭಾಯಿಸಬೇಕೆಂದು ತೀರ್ಮಾನವಾಗಿದೆ. ಇದನ್ನು ಕೆಲ ದಿನಗಳು ಪ್ರಯತ್ನಿಸಿ ನೋಡೋಣ. ]

Dec 152011
 

ಪದ್ಯ ಪಕ್ಷದ ಮುಂದಿನೀ ಕಂತಿನಲಿ ನೀವು
ಹೃದ್ಯ ಕವಿತಾಪಾಕವನ್ನೆರೆವಿರ |
ವಿದ್ಯಾವರೇಣ್ಯರೇ ಶಾರದೆಯ ಕಂದಗಳೆ
ಮದ್ಯಪಾನಿಸಿರೋದುಗರ ಚಿತ್ತಕೆ ||

ಪದ್ಯಪಕ್ಷದ ರಸಿಕರಿಗೆ ಒಂದು ನಿವೇದನೆ:
ಇಲ್ಲಿ ನೀಡುವ ಸಮಸ್ಯೆ, ದತ್ತಪದಿ, ಲಹರಿ, ಚಿತ್ರಕ್ಕೆ ಕವಿತೆ ಇತ್ಯಾದಿ ಅಂಶಗಲನ್ನೆಲ್ಲವನ್ನೂ ಎಲ್ಲರೂ ಪೂರೈಸಲೇಬೇಕೆಂಬ ನಿರ್ಬಂಧವಾಗಲಿ, ವ್ರತವಾಗಲಿ, ಗೆಲ್ಮೆಯ ಬಲ್ಮೆಯ ಗುರಿಯಾಗಲಿ ಇಲ್ಲ. ಆಯ್ಕೆಗೆ ಅನೇಕ ಅವಕಾಶಗಳಿರಲೆಂದು  ಈ ಹೊಸ ಯತ್ನ. ದಯಮಾಡಿ ಸ್ನೇಹದಿಂದ ಸಹಕರಿಸಿರಿ, ಸಲಹೆಗಳನ್ನೂ ಸರಿಕಂಡಂತೆ ನೀಡಿರಿ. ನಿಮ್ಮ ರುಚಿಗೊಗ್ಗಿದ ಅಡುಗೆಯನ್ನು  ನಾವಿತ್ತ ಸಾಮಗ್ರಿಗಳ ಪರಿಮಿತಿಯಲ್ಲಿ ಅಟ್ಟು ಸವಿಯಿರಿ,  ನಮಗೂ ಉಣಬಡಿಸಿರಿ:-)

೧. ಸಮಸ್ಯೆ: ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
(ಇದು ಕಂದದ ಕಡೆಯ ಸಾಲು)

೨.ದತ್ತಪದಿ:  ಕರಿ, ಹರಿ, ಗಿರಿ, ಸಿರಿ ಎನ್ನುವ ಪದಗಳನ್ನು ಬಳಸಿ ವಿಘ್ನೇಶ್ವರನನ್ನು ಚತುರ್ಮಾತ್ರಾಗಣದ ಚೌಪದಿಯಲ್ಲಿ ಸ್ತುತಿಸಬೇಕು ಗಣಪತಿಯ ವಂದನೆ ಮಾಡದೆ ಪದ್ಯಪಾನ/ಪಕ್ಷಗಳು ಮೊದಲಾದುಷ್ಟೆ! ಹೀಗಾಗಿ ಎದರುಗಳು ಬರಬಾರೆಂದು ಎಡರ್ಗೇಡಿಯನ್ನು ಮೊತ್ತಮೊದಲು ನಮಿಸೋಣ:-)
(ಈ ಚೌಪದಿಯಲ್ಲಿ ಮೊದಲ ಹಾಗೂ ಮೂರನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳೂ ಎರಡನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳೂ ಕಡೆಯಲ್ಲೊಂದು ಗುರುವೂ — ಇದು ಲಘ್ವಕ್ಷರವು ಪಾದಾಂತ್ಯದಲ್ಲಿ ಗುರುವಾಗುವ ಬಗೆಯಲ್ಲಿಯೂ ಇರಬಹುದು — ಇರಬೇಕು. ಆದಿಪ್ರಾಸ ಕಡ್ಡಾಯ. ಈ ಪದಗಳನ್ನು ಪಾದಗಳ ಯಾವುದೇ ಎಡೆಯಲ್ಲಾದರೂ ಬಳಸಿಕೊಳ್ಳಬಹುದು;  ನೇರವಾಗಿ ಆದಿಪ್ರಾಸಕ್ಕೂ ಬಳಸಿಕೊಳ್ಳಬಹುದು)

೩.  ವರ್ಣನೆ: ಕುಸುಮಷಟ್ಪದಿಯಲ್ಲಿ ಹೇಮಂತದ ಸೊಗಸನ್ನು ಕಟ್ಟಿಕೊಡಬೇಕು.

೪.  ಲಹರಿ:  ನಿಮ್ಮ ಖಯಾಲಿಯ ವಸ್ತು-ಛಂದಸ್ಸುಗಳನ್ನು ಬಳಸಿ ಕಲ್ಪನಾನುಶೀಲಿತವಾದ ಕವಿತೆಯ ನಿರ್ಮಾಣ.

೫. ಚಿತ್ರಕ್ಕೆ ಪದ್ಯ: ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಚಂದಸ್ಸಿನಲ್ಲಿ ಬರೆಯಿರಿ

 

ಯೇಸು ಕ್ರಿಸ್ತನ ಜನ್ಮ

ಕ್ರಿಸ್ಮಸ್ - ಯೇಸು ಕ್ರಿಸ್ತನ ಜನ್ಮ

Nov 302011
 

೧೫ ದಿನಗಳಿಗೊಮ್ಮೆ ಒಂದು ಸರತಿಗೆ ೫ ಸಮಸ್ಯೆಗಳನ್ನು ಗೊಂಚಲಾಗಿ ಕೊಡುವುದೆಂದು ಮಾತನಾಡಿದ್ದೆವು. ಆ ಪ್ರಕಾರ, ಡಿಸೆಂಬರಿನ ಮೊದಲ ಪಕ್ಷಕ್ಕೆ ಸಮಸ್ಯೆಗಳು ಹೀಗಿವೆ

ಸಮಸ್ಯಾಪೂರ್ಣ ::

ಕಂದ ಪದ್ಯದ ಕೊನೆಯ ಸಾಲು ಹೀಗಿದೆ – “ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ“. ಉಳಿದ ಸಾಲುಗಳನ್ನು ಪೂರೈಸಿರಿ

ದತ್ತಪದಿ ::

walk, rock, lock, lake (ವಾಕ್, ರಾಕ್, ಲಾಕ್, ಲೇಕ್) – ಈ‌ ಪದಗಳು ಸಾಲಿಗೊಂದರಂತೆ ಬರುವಂತೆ ಪಂಚಮಾತ್ರಾ ಚೌಪದಿಯಲ್ಲಿ ಸರಸ್ವತಿಯನ್ನು ಸ್ತುತಿಸಿರಿ

ವರ್ಣನೆ ::

ಕವಿತೆಯ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ರಚಿಸಿರಿ

ಲಹರಿ ::

ಯಾವುದಾದರು ಪದ್ಯವನ್ನು ಬರೆಯಿರಿ

ಚಿತ್ರಕ್ಕೆ ಕವಿತೆ ::

ಈ ಚಿತ್ರಕ್ಕೆ ಸೂಕ್ತ ಪದ್ಯ ಬರೆಯಿರಿ – ಛಂದಸ್ಸು ನಿಮ್ಮ ಆಯ್ಕೆ

 

Oct 262011
 

ಚತುರ್ವಿಧ ಕಂದವೆಂದರೆ, ಒಂದೇ ಕಂದಪದ್ಯವನ್ನು ವಿವಿಧ ರೀತಿಗಳಲ್ಲಿ ವಿಭಜಿಸಿ ಅರ್ಥಭಂಗವಾಗದಂತೆ ಮತ್ತಷ್ಟು ಕಂದಪದ್ಯಗಳನ್ನು ರಚಿಸುವ ಪ್ರಕ್ರಿಯೆ.

ಇಲ್ಲಿ ಮೊದಲಪದ್ಯವೇ ಕೀಲಕ. ಮೊದಲಪದ್ಯದಲ್ಲಿ (೧), ಘನಶಾಸ್ತ್ರ ವೆಂಬ ಎರಡನೆಯ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ಎರಡನೆಯ ಕಂದಪದ್ಯವನ್ನೂ, ಸ್ಫುರಧೀ ವೆಂಬ ಮೂರನೇ ಸಾಲಿನ ಮೊದಲ ಪದದಿಂದ ಪ್ರಾರಭಿಸಿ ಮೂರನೇ ಕಂದಪದ್ಯವನ್ನೂ,  ದಿನಕರ ಎಂಬ ನಾಲ್ಕನೇ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ನಾಲ್ಕನೇ ಕಂದಪದ್ಯವನ್ನೂ ಬಿಡಿಸಿ ರಚಿಸೆದೆ. ಮೊದಲ ಪದ್ಯದಲ್ಲಿನ ಪದಗಳೇ ನಾಲ್ಕೂಪದ್ಯಗಳಲ್ಲಿ ಪುನರಾವೃತ್ತಿಯಾಗದೆ,  ಬೇರೆ ಪದಗಳನ್ನು ಸೇರಿಸದೆ ರಚನೆಯಾಗಿರುವುದು ವಿಶೇಷ.

ಒದ್ವೇಟಿ ವೆಂಕಟಕೃಷ್ಣಯ್ಯ ಎಂಬ ಕವಿ, ಆಗಿನ ಗದ್ವಾಲ್ ಪ್ರಭು, ಸೀತಾರಾಮ ಭೂಪಲನನ್ನು ಕುರಿತ ರಚನೆಯ ಸ್ಪೂರ್ತಿಯಿಂದ, ಮೂಡಿದೆ ಈ  ಚತರ್ವಿಧ ಕಂದ.  ಕಂದ ಪದ್ಯದ ವಸ್ತು ನಮ್ಮ ಗಣೇಶರೇ. ಅವರೇ ಹೇಳಿದಂತೆ ಇಂಥ ಚಿತ್ರಕವಿತ್ವ, ದೀಪಾವಳಿಯ ನಾಲ್ಕುಸುತ್ತಿನ ಪಟಾಕಿಯಾದರೂ, ಸರ್ಕಸ್ಸಿನ ಕ್ಷಣಿಕಲಾಭ ಇದ್ದದ್ದೇ.

ವರವಾಣಿ ವಿಭವ ಲಕ್ಷಣ
ಭರಿತಾ ಘನಶಾಸ್ತ್ರ ವೇದ್ಯ ವರಜನ ವಿನುತಾ
ಸ್ಫುರಧೀ
ಶತಾವಧಾನೇ
ಶ್ವರಗಂ ದಿನಕರ ಸುತೇಜ ನಮನಂ ನಿನಗೈ  (೧)

ಘನಶಾಸ್ತ್ರ ವೇದ್ಯ ವರಜನ
ವಿನುತಾ ಸ್ಫುರಧೀ ಶತಾವಧಾನೇಶ್ವರಗಂ
ದಿನಕರ ಸುತೇಜ ನಮನಂ
ನಿನಗೈ ವರವಾಣಿ ವಿಭವ ಲಕ್ಷಣ ಭರಿತಾ  (೨)

ಸ್ಫುರಧೀ ಶತಾವಧಾನೇ
ಶ್ವರಗಂ ದಿನಕರ ಸುತೇಜ ನಮನಂ ನಿನಗೈ
ವರವಾಣಿ ವಿಭವ ಲಕ್ಷಣ
ಭರಿತಾ ಘನಶಾಸ್ತ್ರ ವೇದ್ಯ ವರಜನ ವಿನುತಾ (೩)

ದಿನಕರ ಸುತೇಜ ನಮನಂ
ನಿನಗೈ ವರವಾಣಿ ವಿಭವ ಲಕ್ಷಣ ಭರಿತಾ
ಘನಶಾಸ್ತ್ರ ವೇದ್ಯ ವರಜನ
ವಿನುತಾ ಸ್ಫುರಧೀ ಶತಾವ ಧಾನೇ ಶ್ವರಗಂ (೪)

Oct 252011
 

ದೀಪಾವಳಿಯ ಕಾರಣ ಕೆಲವಾದರೂ ಹಬ್ಬದ ಬಗೆಗಿನ ಪದ್ಯಗಳಿರಲೆಂದು ಅಪೇಕ್ಷೆ. ಈ ನೆವದಲ್ಲಿ  ಹೊಸ ಛಂದಸ್ಸುಗಳ ಅಥವಾ ವಿವಿಧಚ್ಛಂದಸ್ಸುಗಳ ಬಳಕೆಯಾಗಲೆಂಬ ಬಯಕೆಯೂ ಇದೆ. ಮೊದಲ ಹೆಜ್ಜೆಯಾಗಿ ನನ್ನ ಒಂದೆರೆಡು ಪದ್ಯಗಳು:

ದ್ರುತವಿಲಂಬಿತವೃತ್ತ||

ನರಕದಾನವಕಾಲದವಾನಲ-
ಕ್ಕುರುವಿನೀಲಪಯೋಧರವಾಗುತುಂ |
ಮೆರೆದ ಕೃಷ್ಣನ ಕಂಗಳ ಮಂಗಳ-
ಸ್ಫುರಣದೀಪಿಕೆಗಳ್  ಶುಭಕೊಪ್ಪುಗುಂ ||

ರಥೋದ್ಧತಾವೃತ್ತ||

ದೇವಗಂಗೆ ಧವಳಧ್ವಜೋಪಮಂ
ತೀವಿರಲ್ ನಭದೆ ವಾಮನಾಂಘ್ರಿಯೊಳ್
ಜೀವಿಗಳ್ಗೆ ಸುಖಶಾಂತಿಯೀವವೊಲ್
ಭಾವಿಕಂ ಗಡಿದು ಪರ್ಬಮೊಪ್ಪುಗುಂ||

ಕಂದ||

ಕತ್ತಲೆಸುತ್ತುಂ ಜಗಮಿದು
ಕತ್ತಲೆ ಸುತ್ತುಂ ಕಡಂಗಿದುದೆನುತ್ತುಂ ಬೇ-
ಸತ್ತಿರೆ ಸಂಪದನಳಿಸುತೆ,
ಸತ್ತಿರೆ ಸಂಪದಮದಂ ಬರ್ದುಂಕಿಪುದೊಳಿತಯ್||

(ಕತ್ತನ್ನು ಅಲೆಸುತ್ತ ಈ ಜಗತ್ತಿನ ಸುತ್ತಲೂ ಕತ್ತಲೆಯೇ ನೆಲಸಿದೆಯೆಂದು ಬೇಸತ್ತಿರುವ  ( ಮನಸ್ಸಿನ) ಸಂಪನ್ನು (strike/bundh) ಅಳಿಸಿ ಸತ್ತಿರುವ ಸಂಪದವನ್ನು ಬದುಕಿಸುವ ಬಗೆಯೇ ಸರಿ.)
ಇದು ಒಂದು ರೀತಿಯ ಚಿತ್ರಕವಿತೆ. ಇದಕ್ಕೆ ಯಮಕಾಲಂಕಾರವೆಂದು ಹೆಸರು.   ಪದಗಳು ಪುನರುಕ್ತವಾದಂತೆ ತೋರಿದರೂ ಅರ್ಥ ಬೇರೆಯೇ ಆಗಿರುವುದು ಇದರ ಚಮತ್ಕಾರ. ಇವೆಲ್ಲ ರಸಪ್ರಧಾನವಲ್ಲ. ಬರಿಯ ಕಸರತ್ತಿನ ಸಂಗತಿಗಳು. ಇಲ್ಲಿ ಸುಮ್ಮನೆ ಕಂದವನ್ನು ಸ್ವಲ್ಪ ಕಗ್ಗಂಟಾಗಿಸೋಣವೆಂದು ಸ್ವಲ್ಪ ಯತ್ನಿಸಿದ್ದೇನಷ್ಟೆ. ದೀಪಾವಳಿಯ ಪಟಾಕಿ ಗಲಾಟೆಯಂತೆಯೇ ಇದೂ ಹೆಚ್ಚು ಸಹನೀಯವಲ್ಲ:-

ಚೌಪದಿ||

ಸಾಲು ದೀಪಗಳಾಗಿ ಭರವಸೆಯ ತಾಳಗಳು
ಕಾಲ ಕುಣಿಸುತ್ತಿರಲು ಭಾವರಾಗ
ಮಾಲೆಯೊಡವರಿದು ಜಯಶೀಲೆ ಸಿರಿ ಬರುವಂತೆ
ಜಾಲಿಸಲಿ ನಿಮ್ಮ ಮನಗಳನು ಬೇಗ||

ಭಾಮಿನೀಷಟ್ಪದಿ||

ಶಾರದಾಂಬರದಲ್ಲಿಯೇ ಹಿಂ-
ಗಾರುಮಳೆ, ಕಾರಿರುಳಿನಲ್ಲಿಯೆ
ತೋರುವೀ ಸಿರಿಯೊಸಗೆ, ಸದ್ದಿನ ದಿನದೊಳೇ ಮೌನ|
ಸಾರಲೀ ಸಂದೇಶವನು ಮೆಯ್-
ದೋರಲೀ  ಸಂಭಾವನೆಯನಭಿ-
ಸಾರಲೀಲಾಲಾಸ್ಯವಾಡಲಿ ಕಾವ್ಯವಧು ನಿಮ್ಮೊಳ್||

Oct 242011
 

ಕಂದವ ರಚಿಸಲ್ ಯತ್ನಿಸಿ

ಚಂದದಿ ಭಾಮಿನಿಯ  ತನ್ನ ಮನದೊಳ್ ಮೊದಲೊಳ್

ಕುಂದಿರದೆಯೆ ನಿಲಿಸಿರಬೇ

ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್

 

the above one is with corrections from ganesh sir.

it was earlier as

ಕಂದವ ರಚಿಸಲ್ ಯತ್ನಿಸಿ
ಚಂದದಿ ಭಾಮಿನಿಯ ಪೂರ್ವದಲಿ ತನ್ನ ಮನದ
ಬಂದನದೊಳು ನಿಲಿಸಿರಬೇ
ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್
Oct 202011
 

ಕಂದ ಛಂದಸ್ಸಿನ ಸಮಸ್ಯಾಪದ್ಯದ ನಾಲ್ಕನೆಯ ಸಾಲು ಹೀಗಿದೆ ::

ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

ಮೊದಲ ಮೂರು ಸಾಲುಗಳನ್ನು ಪೂರೈಸಿರಿ.

ವಿ.ಸೂ ::‌ ಈ ಸಮಸ್ಯೆಯು ಗಣೇಶರಿಂದ ಸಿಕ್ಕದ್ದು

Oct 162011
 

ಕೆಳಗಿನ ಸಾಲು ಕಂದ ಪದ್ಯದ ಕೊನೆಯ ಸಾಲು. ಮೇಲಿನ ಮೂರು ಸಾಲುಗಳನ್ನು ಪೂರೈಸಿರಿ ::

ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ!

(ಕಮಲ ಮತ್ತು ಚಂದ್ರರಿಗೆ ಹೊಂದಿಕೆಯಿಲ್ಲವೆಂಬ ಕವಿಸಮಯವನ್ನು ಆಧರಿಸಿದ ಸಮಸ್ಯೆಯಿದು)

ವಿ.ಸೂ ::‌ ಇದು ಗಣೇಶರು ನೀಡಿದ ಸಮಸ್ಯೆ

ಕಂದ ಪದ್ಯದ ಛಂದಸ್ಸಿನ ವಿವರಣೆ ಇಲ್ಲಿದೆ

Oct 112011
 

ಕಂದ ಛಂದಸ್ಸಿನ ಪದ್ಯದ ಕೊನೆಯ ಸಾಲು ಹೀಗಿದೆ ::

ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?
(ರಸಾಲ= ಮಾವು)

ಮೊದಲ ೩ ಸಾಲುಗಳನ್ನು ಪೂರೈಸಿರಿ

ಕಂದ ಪದ್ಯದ ಛಂದಸ್ಸಿನ ಸ್ವರೂಪ ಇಲ್ಲಿದೆ

ವಿ.ಸೂ :: ಇದು ಗಣೇಶರು ಕೊಟ್ಟ ಸಮಸ್ಯೆ

Oct 112011
 

ಇದು ಕನ್ನಡದಲ್ಲಿ, ಚತುರ್ಮಾತ್ರಾಗಣದ ವಿಶೇಷವಾಗಿ ಉಪಯೋಗಿಸಲ್ಪಟ್ಟ ಛಂದಸ್ಸು. ಇದರ ಹೆಸರಿನ ಉಗಮ ಸ್ಕಂದಕ → ಕಂದಅ → ಕಂದಹೀಗೆ ಆಗಿರಬಹುದು.

೪ ಪಾದಗಳಲ್ಲಿ ಮಾತ್ರಾಗಣ ವಿಭಾಗಗಳು ಇಂತಿವೆ ::

. + +

. + + + +

. + +

. + + + +

ಈ ಗಣಗಳಲ್ಲಿ, ಗುರುಲಘು ಜೋಡಣೆಗಳು ಈ ರೀತಿ ::

ಗಣ ಲಘು(U) – ಗುರು( _ ) ಜೋಡಣೆ
(ಸಾಮಾನ್ಯ) _ _
U U U U
_ U U
U U _
U _ U (ಜಗಣ)
U U U U (
ಸರ್ವ ಲಘು)
_ _
U U _
ಯಾವ ಜೋಡಣೆಯೂ ಆಗಬಹುದು
(ಸಾಮಾನ್ಯ ಅಥವ ಜಗಣ)

ಕಂದ ಪದ್ಯ ಬರೆಯಲು ಮೊದಲು ಚತುಷ್ಪಾದ ಪದ್ಯ ಬರೆದು, ಒಂದು (ಕೊನೆಯ) ಗಣವನ್ನು ಮೊದಲನೆಯ (ಹಾಗು ಮೂರನೆಯ) ಪಾದದಿಂದ ತೆಗೆದು ಎರಡನೆ (ಹಾಗೂ ನಾಲ್ಕನೆಯ) ಪಾದಕ್ಕೆ ಹೊಂದಿಸಿ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಲ್ಲಿ ಗಣಗಳ ಸಂಖ್ಯೆ ಸರಿಯಾದರೂ, ಮೇಲೆ ತೋರಿಸಿದ ವಿಶೇಷ ಗಣಗಳಲ್ಲಿನ ಗುರು-ಲಘು ಹೊಂದಿಕೆಯನ್ನೂ ಗಮನಿಸಬೇಕು.

ಕಂದ ಪದ್ಯದ ಉದಾಹರಣೆಗಳು

೧.
ಕಂದವನೊರೆವುದು ಕಷ್ಟಂ
ಕುಂದಾಗುವುದೆಂಬ ಭೀತಿ ನಮಗಂ ನಿಚ್ಚಂ
|
ಚಂದಕೆ ಸಲ್ವೊಡೆ ಕವಿತೆಗ

ದೆಂದುಂ ಬಂಧವಿದು ಬೇಕು ಕನ್ನಡದೊಳಗಂ
||

೨.
ಆರವಮಂ ನಿರ್ಜಿತಕಂ 

ಠೀರವರವಮಂ ನಿರಸ್ತ ಘನರವಮಂ ಕೋ
|
ಪಾರುಣ ನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ದನುರಗ ಪತಾಕಂ
||

೩.
ಲಂಬೋದರ ಗಣಪತಿ ಹೇ

ರಂಬಾ ವಿಘ್ನೇಶ ಮೋದಕಪ್ರಿಯ ಕೇಳೈ
|
ನಂಬಿದೆನೈ ಕರಿವದನಾ
ತುಂಬಿಸಿ ಬಾಳಿಸುವುದೆನ್ನ ಮತಿಯಂ ದೇವಾ
||