Nov 022013
 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು :)

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙂

‘ದಿವ್ಯದೀಪಾವಲಿಶ್ರೀ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಪಂಚಮಾತ್ರಾಚೌಪದಿ, ಭುಜಂಗಪ್ರಯಾತ, ಶಾಲಿನಿ, ಮಾಲಿನಿ, ಮಂದಾಕ್ರಾಂತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ. ‘ದಿವ್ಯದೀಪಾವಲಿಶ್ರೀ:’ ಎಂದು ಸಂಸ್ಕೃತದಲ್ಲೂ ಪೂರಣಗಳನ್ನು ನೀಡಬಹುದು.

 

 

May 282013
 

ಭಾಮಿನಿ ಷಟ್ಪದಿಯ, ಕೊನೆಯ ಸಾಲಿನ ಎರಡನೆ ಭಾಗ ಇಂತಿದೆ ::‌ ‘ಮಳೆಯು ಮುದವಾಯ್ತು‘.

ಇಡಿಯ ಪದ್ಯವನ್ನು ನಿಮ್ಮ ಕಲ್ಪನೆಯಂತೆ ಪೂರಣಿಸಿರಿ.

May 192013
 

ಈ ಕೆಳಗಿನ ಚಿತ್ರದಿಂದ ನಿಮ್ಮಲ್ಲಿ ಉದ್ದೀಪನಗೊಳ್ಳುವ ಭಾವನೆಗಳಿಗೆ ಪದ್ಯಗಳ ರೂಪ ನೀಡಿ ಇಲ್ಲಿ ಪ್ರಕಟಿಸಿರಿ. ಛಂದಸ್ಸು ನಿಮ್ಮ ಆಯ್ಕೆ

ಹೂವು ಕಟ್ಟುತ್ತಿರುವ ಹುಡುಗಿ

ಹೂವು ಕಟ್ಟುತ್ತಿರುವ ಹುಡುಗಿ

ಚಿತ್ರದ ಕೃಪೆ – ಅಂತರ್ಜಾಲ

Apr 292013
 

ಈ ಬಾರಿಯ ಸಾಮೂಹಿಕ ಕಥಾರಚನೆಯ ವಿಷಯ :: “ರಾಮ, ಲಕ್ಷ್ಮಣ ಹಾಗೂ ಸೀತೆಯರು ವನವಾಸಕ್ಕೆಂದು ಅಯೋಧ್ಯೆಯಿಂದ ತೆರಳಿದ್ದು“. ವನವಾಸಕ್ಕೆ ತೆರಳುವುದೇ ಹೌದೆಂದು ರಾಮ ನಿರ್ಧಾರ ಮಾಡಿದ್ದಾನೆ ಎಂಬಲ್ಲಿಂದ ತೆಗೆದುಕೊಂಡು, ಅಯೋಧ್ಯೆಯನ್ನು ದಾಟುವ ವರೆವಿಗು ಕಥೆಯನ್ನು ತೆಗೆದುಕೊಂಡೊಯ್ಯೋಣ.

ಈ ಕಥೆಯಲ್ಲಿ, ಲಕ್ಷ್ಮಣ ಹಾಗೂ ಸೀತೆಯರು ತಾವೂ ಬರಬೇಕೆಂದು ಹಠ ಮಾಡಿದ್ದು, ಅವರನ್ನು ನಿರಾಕರಿಸುವುದಕ್ಕೆ ರಾಮ ಮಾಡಿದ ಪ್ರಯತ್ನ, ಹೋಗಬೇಡ ಎಂದು ಕೆಲವರು ದುಂಬಾಲು ಬಿದ್ದದ್ದು, ಅಯೋಧ್ಯೆಯ ಪ್ರಜೆಗಳು ಹಿಂಬಾಲಿಸಿದ್ದು, ಎಲ್ಲವನ್ನು ವಿಷಯಕ್ಕೆಂದು ತೆಗೆದುಕೊಳ್ಳಬಹುದು.

ಎಂದಿನಂತೆ, ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ. ಯಾವ. ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು.

[ಈ ವಿಷಯಕ್ಕೆ  ಸಾಮೂಹಿಕವಾಗಿ ನ್ಯಾಯ ಒದಗಿಸಬೇಕೆಂದರೆ, ೨ ವಾರಗಳಷ್ಟಾದರೂ ಬೇಕಾದೀತು – ಆದುದರಿಂದ ಈ ಕಂತಿಗೆ ಪದ್ಯ ಸಪ್ತಾಹದ ಬದಲು ಪದ್ಯ ಪಕ್ಷ ಎಂದಾದರೂ ಹೇಳಬಹುದು. ಕಥೆ ಹೇಗೆ ಬೆಳೆಯುತ್ತದೆ ಎಂದು ನೋಡೋಣ.]

Apr 072013
 

ಸದ್ಯದ ಶತಾವಧಾನದಲ್ಲಿ ಶ್ರೀ ಬಿ. ಆರ್. ಪ್ರಭಾಕರ್ ರವರು ನೀಡಿದ ಸ್ರಗ್ವಿಣೀ ಛಂದಸ್ಸಿನ ಈ ಸಮಸ್ಯೆಗೆ ನಿಮ್ಮ ಪೂರಣಗಳನ್ನು ನೀಡಿರಿ ::

ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ

[ಸಾಗರವು ಆಳದಲ್ಲಿ ಮೊಳಕಾಲಿನಷ್ಟೇ ಎಂಬ ಭಾವ]

Mar 172013
 

ಎಲ್ಲರೂ ಕೂಡಿ ಸೀತಾ ಕಲ್ಯಾಣದ ಕಥೆಯನ್ನು ಬೆಳೆಸೋಣವೇ?

ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಯೆಡೆಗೆ ಬರುತ್ತಿದ್ದಾರೆ. ಅಹಲ್ಯಾ ಪ್ರಕರಣ ಮುಗಿದಿದೆ. ಇಲ್ಲಿಂದ ಶುರುಮಾಡಿ ಸೀತಾ-ರಾಮರ ಕಲ್ಯಾಣದವರೆವಿಗೂ ಕಥೆಯನ್ನು ಬೆಳೆಸೋಣ. ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ – ಅಂದರೆ ನಾಗಲೋಟದಲ್ಲಿ ಕಥೆಯನ್ನು ಓಡಿಸುವುದು ಬೇಡ.

ಯಾವ ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು. ವರ್ಣನೆಗಳಿಗೆ ಅನೇಕ ಅವಕಾಶಗಳಿವೆ. ಉದಾರವಾಗಿ ಬಳಸಿಕೊಳ್ಳಿ. 🙂

Mar 102013
 

ಶಿವನನ್ನು ಕುರಿತು ವಿವಿಧ ಛಂದಸ್ಸುಗಳಲ್ಲಿ ಪದ್ಯಗಳನ್ನು ರಚಿಸಿರಿ. ಒಂದು ಛಂದಸ್ಸು ಈ ಸರಣಿಯಲ್ಲಿ ಆಗಲೇ ಉಪಯೋಗಿಸಲ್ಪಟ್ಟಿದ್ದರೆ, ಬೇರೊಂದು ಛಂದಸ್ಸಿನಲ್ಲಿ ರಚಿಸಿರಿ

ಶಿವ ಪಾರ್ವತಿ

ಶಿವ ಪಾರ್ವತಿ

Jan 202013
 

ಮತ್ತೇಭ ವಿಕ್ರೀಡಿತ ಛಂದಸ್ಸಿನ ಈ ಸಮಸ್ಯಾಪಾದವನ್ನು ಪದ್ಯದ ಉಳಿದ ಪಾದಗಳನ್ನು ಪೂರೈಸಿ ಪರಿಹರಿಸಿರಿ ::

ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?

Jan 132013
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯಗಳನ್ನು ರಚಿಸಿರಿ. ಛಂದಸ್ಸು – ನಿಮ್ಮ ಆಯ್ಕೆ . [ಚಿತ್ರದ ಕೃಪೆ – ಅಂತರ್ಜಾಲ]

ಚಂದ್ರನೆಡೆಗೆ

 

Dec 052012
 

 

ಮಂಗಳಮಂಟಪದ ವೇದಿಕೆಯಲ್ಲಿ ಶತಾವಧಾನಿಗಳು ಮತ್ತು ಪೃಚ್ಛಕವಿದ್ವಾಂಸರು.

ಮೊತ್ತ ಮೊದಲ ತುಂಬುಗನ್ನಡದ ಶತಾವಧಾನದ ಅಭೂತಪೂರ್ವ ಯಶಸ್ಸಿನ ಮತ್ತಿನಲ್ಲಿರುವ ಪದ್ಯಪಾನಿಗಳೇ, ನಿಮ್ಮ ನಶೆಗೆ ಕಾರಣವೇನೆ೦ಬುದನ್ನೇ ಈ ವಾರ ಪದ್ಯವಾಗಿಸಿ. ಹೊಸ ಸದಸ್ಯರು ಆದಷ್ಟುಮಟ್ಟಿಗೆ ’ಪದ್ಯವಿದ್ಯೆ’ಯನ್ನು ನೋಡಿ, ವೀಡಿಯೋ ತರಗತಿಗಳನ್ನು ಕೇಳಿ ನ೦ತರ ರಚನೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು.

ಇದೇ ಸಂದರ್ಭದಲ್ಲಿ, ಈ ಒ೦ದು ಐತಿಹಾಸಿಕ ಕ್ಷಣಗಳನ್ನು ಅನುಭವಿಸಲು ಮತ್ತು ಅದಕ್ಕೆ ಸಾಕ್ಷಿಯಾಗಲು  ನೆರವಾದ ಎಲ್ಲ ವೀಕ್ಷಕರಿಗೂ ಪದ್ಯಪಾನದ ಪರವಾಗಿ ಅನ೦ತಾನ೦ತ ವಂದನೆಗಳು.

ಇ೦ತಹಾ ಒಂದು ಮಹಾಯಶಸ್ಸಿಗೆ ಕಾರಣವಾದರೂ ಈ ಕಾರ್ಯಕ್ರಮವನ್ನು ನೋಡಲಾಗದೇ ಪರದೆಯ ಹಿಂದೆಯೇ ಉಳಿದ ಪದ್ಯಪಾನದ ನನ್ನ ಅಣ್ಣ, ತಮ್ಮ, ಅಕ್ಕ ಮತ್ತು ತಂಗಿಯರಿಗೆ ಏನೆಂದು ಹೇಳುವುದು. ಮಾತಿಲ್ಲ, ಹೃದಯತುಂಬಿಬರುತ್ತಿದೆಯಷ್ಟೆ.

ಇದೇ ವರ್ಷದ ಆದಿಯಲ್ಲಿ ಶುರುವಾದ ಈ ಕಾರ್ಯಕ್ರಮದ ಕಲ್ಪನೆ-ಯೋಜನೆಗಳು ಈ ಮಟ್ಟಕ್ಕೆ ಬ೦ದು ಮುಟ್ಟಿ, ಪ್ರಪ೦ಚದಾದ್ಯ೦ತ ಸಹೃದಯರು ಕೂತು ನೋಡುವಂತಾಗಿದೆಯೆಂದರೆ, ಇದರ ಹಿಂದಿನ, ಕೈ, ತಲೆ ಮತ್ತು ಮನಸ್ಸುಗಳು ಎಂತಹಾ ನಿಸ್ವಾರ್ಥತೆಯಿಂದ ದುಡಿದಿರಬೇಕೆಂಬುದನ್ನು ನೀವೆಲ್ಲರೂ ಊಹಿಸಬಲ್ಲಿರಿ. ಜೊತೆಗೆ ಆ ರೀತಿಯ ನಿಸ್ವಾರ್ಥತೆ ಮತ್ತು ಅಗಾಧವಾದ ಪ್ರೀತಿಯ ಕೇಂದ್ರ ಯಾರೆಂದುಕೂಡ ಮತ್ತೆಹೇಳಬೇಕಿಲ್ಲ.

ಹೀಗೆ ಅನೇಕರೀತಿಯಲ್ಲಿ ನಮಗೆ ನೆರವಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಈ ಎಲ್ಲರಿಗೂ ನಮ್ಮ ಅನಂತಾನಂತ ವಂದನೆಗಳು:

೧. ಇನ್ಫೋಸಿಸ್ ಪ್ರತಿಷ್ಠಾನ – ಉದಾರ ಧನ ಮತ್ತು ಪ್ರೀತಿಯ ಪ್ರೋತ್ಸಾಹ ನೀಡಿ ಹರಸಿದ್ದಕ್ಕೆ ನಮನಗಳು. ಸುಧಾಮೂರ್ತಿಯವರಿಗೆ ಮತ್ತು ಅವರನ್ನು ಪದ್ಯಪಾನಕ್ಕೆ ಪರಿಚಯಿಸಿದ ಲಕ್ಷ್ಮೀ ಉಪಾಧ್ಯಾಯ ಅವರಿಗೆ.

೨. ಅಭಿನವ ಡಾನ್ಸ್ ಕಂಪನಿ ಮತ್ತು ಪ್ರಭಾತ್ ಕಲಾವಿದರು – ರ೦ಗವಿನ್ಯಾಸ, ಬೆಳಕು, ಧ್ವನಿ ಮತ್ತು ನಮ್ಮ ಬೆನ್ನು ತಟ್ಟಿ ಜೊತೆಜೊತೆಗೇ ನಡೆದು ಹಾರೈಸಿದ ರಾಜೇಂದ್ರ ಮತ್ತು ನಿರುಪಮಾರವರು.

೩. ಆರ್. ವಿ. ಸಂಸ್ಕೃತ ಅಧ್ಯಯನಕೇಂದ್ರ – ಉಚಿತವಾಗಿ ಮಂಗಳಮಂಟಪವನ್ನು ನೀಡಿದ್ದಲ್ಲದೆ, ಕಾರ್ಯಕ್ರಮಕ್ಕೆ ಯಾವುದೇ ರೀತಿಯ ವಿಘ್ನವಾಗದಂತೆ ನೋಡಿಕೊಂಡ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಸಿಬ್ಬಂದಿಗೆ, ಪ್ರಾಂಶುಪಾಲರಾದ ಎ.ಎಸ್.ಜಲಜಾರವರಿಗೆ ಮತ್ತು ವಿಶೇಷವಾಗಿ ನಮ್ಮ ಹಿತೈಷಿಗಳಾದ ಡಾ|| ಎಸ್. ರಂಗನಾಥ್ ಅವರಿಗೆ.

೪. ಧಾತು, ಬೆಂಗಳೂರು – ಕಾರ್ಯಕ್ರಮದ ಆಯೋಜನೆಯ ಪ್ರತಿಹಂತದಲ್ಲಿಯೂ ಅವರ ಅನುಭವಗಳನ್ನು ಧಾರೆಯೆರೆದು, ಕಲ್ಪನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸಿದ ಮತ್ತು ಮೆರವಣಿಗೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಹಾಗೂ ಅಚ್ಚುಕಟ್ಟಾಗಿ ನಿರೂಪಣೆಯನ್ನು ನಡೆಸಿಕೊಟ್ಟ ಅನುಪಮ ಮತ್ತು ವಿದ್ಯಾಶಂಕರ್ ಹೊಸಕೆರೆ.

೫. ವಿನೋದ್ ಕುಮಾರ್ – ಶತಾವಧಾನದ ಕೆಲಸಗಳಿಗೆ ಚಾಲನೆ ದೊರೆತದ್ದೇ ಅವಧಾನಿಗಳ ಫೋಟೋಶೂಟ್ ನಿಂದ. ಅವಧಾನಿಗಳ ಫೋಟೋಗಳು ಇಂದು ಅನೇಕ ಪತ್ರಿಕೆಗಳಲ್ಲಿ ಮತ್ತು ಪುಸ್ತಕ, ಪೋಸ್ಟರ್ ಗಳಲ್ಲಿ ರಾರಾಜಿಸಲಿಕ್ಕೆ ಕಾರಣರಾದ ವಿನೋದ್ ಕುಮಾರ್.

೬. ವಿನಯ್ ಹೆಗ್ಗಡೆ – ಅವಧಾನ ಕಲೆ ಮತ್ತು ಶತಾವಧಾನಸಂಶನ ಪುಸ್ತಕದ ಮುಖಪುಟವಿನ್ಯಾಸ ಮತ್ತು ಅದ್ಭುತವಾದ ಪೋಸ್ಟರ್ ಗಳ ವಿನ್ಯಾಸಮಾಡಿಕೊಟ್ಟ ವಿನಯ್ ಹೆಗ್ಗಡೆ.

೭. ಶ್ರೀಶ ಕೂದುವಳ್ಳಿ – ಕಾರ್ಯಕ್ರಮದ ವೀಡಿಯೋ ಸೆರೆಹಿಡಿದು ಪ್ರಪಂಚದಾದ್ಯಂತ ರಸಿಕರು ನೋಡಲು ಸಾಧ್ಯವಾಗುವಲ್ಲಿ ಸಹಕರಿಸಿದ, ಶ್ರೀಶ ಮತ್ತು ಶ್ರೀವತ್ಸ ತಂಡ.

೮.ಸಾಹಿತ್ಯಸಿಂಧುಪ್ರಕಾಶನ – ನಮ್ಮ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮುದ್ರಿಸಿಕೊಟ್ಟ ರಾಷ್ಟ್ರೋತ್ಥಾನದ ಸಾಹಿತ್ಯಸಿಂಧುಪ್ರಕಾಶನ.

೯. ರಾಘವೇಂದ್ರ ಹೆಗ್ಗಡೆ – ಶತಾವಧಾನದ ಆಯೋಜನೆಯ ಮೂಲಕಲ್ಪನೆಯನ್ನೇ ಎತ್ತರಿಸಿದ ಹಾಗೂ ರಂಗಸಜ್ಜಿಕೆ ಮತ್ತಿತರ ಕಾರ್ಯಗಳಲ್ಲಿ ಸಹಕರಿಸಿದ ಸಕಲಾ ಸ್ಟೂಡಿಯೋದ ರಾಘವೇಂದ್ರ ಹೆಗ್ಗಡೆ.

೧೦. ಗಾಯತ್ರಿ ಪ್ರಿಂಟ್ಸ್ – ಅಚ್ಚುಕಟ್ಟಾಗಿ ಆಹ್ವಾನ ಪತ್ರಿಕೆ, ಬ್ಯಾಡ್ಜ್, ಸ್ಟಿಕರ್ ಮತ್ತಿತರೆ ಮುದ್ರಣಕಾರ್ಯಗಳಲ್ಲಿ ಸಹಕರಿಸಿದ ನಮ್ಮವರೇ ಆದ ರಜನೀಶ.

೧೧. ಶ್ರೀನಿಧಿ ಕೇಟರರ್ಸ್ – ಕಾರ್ಯಕ್ರಮದಲ್ಲಿ ಊಟೋಪಚಾರದ ಹೊಣೆಹೊತ್ತ ಶ್ರೀನಿಧಿ ಕೇಟರರ್ಸ್.

೧೨. ನಮ್ಮ ಸ್ಮರಣಸಂಚಿಕೆಗೆ ಲೇಖನ ಬರೆದುಕೊಟ್ಟ ಮತ್ತು ಆಶೀರ್ವಚನಗಳನ್ನು ನೀಡಿದ ಎಲ್ಲ ಹಿರಿಯರು.

೧೩.  ಕಾರ್ಯಕ್ರಮದ ಆಧಾರಸ್ತಂಭಗಳಾದ ಪೃಚ್ಛಕವಿದ್ವಾಂಸರು.

೧೪. ಪ್ರತಿಹಂತದಲ್ಲಿಯೂ ನಮಗೆ ಸಲಹೆ ಸಹಕಾರಗಳನ್ನಿತ್ತ ನಮ್ಮ ಸಲಹಾಸಮಿತಿಯ ಸದಸ್ಯರಾದ – ಪ್ರೊ|| ಪಿ.ವಿ. ಕೃಷ್ಣಭಟ್, ತಿಮ್ಮಪ್ಪ ಭಟ್ ಮತ್ತು ಶ್ರೀನಿವಾಸ ರಾಜು ಅವರು..

೧೫. ಈ ಕಾರ್ಯಕ್ರಮಕ್ಕೆ ಪ್ರೇರಣೆ, ಪ್ರೀತಿ, ಉತ್ಸಾಹವನ್ನು ತುಂಬಿದ ನಮ್ಮ ಸಲಹಾಸಮಿತಿಯ ಸದಸ್ಯರೂ ಆದ ನಮ್ಮೆಲ್ಲರಿಗೆ ಆತ್ಮೀಯರಾದ ಡಾ|| ಎಸ್. ಆರ್. ರಾಮಸ್ವಾಮಿಯವರು.

 

ಈ ರಸದೌತಣವನ್ನು ನಮಗೆ ಉಣ ಬಡಿಸಿದ, ನಮ್ಮೆಲ್ಲರನ್ನು ಮೂರುದಿನಗಳಕಾಲ ಮಂತ್ರಮುಗ್ಧರನ್ನಾಗಿಸಿದ ಮತ್ತು ನಮ್ಮ ಇಂದಿನ ಮೇರೆಮೀರಿದ ಆನಂದಕ್ಕೆ ಕಾರಣರಾದ, “ಶತಾವಧಾನಶಾರದಾಶಾರದಶರ್ವರೀಶಶಾಂಕ” ರಿಂದ ಈಗ ನಮ್ಮ ಮೇಲೆ ಇರುವ ಆನಂದದ ಋಣವನ್ನು ಕಡಿಮೆಗೊಳಿಸಲು ನಾವೆಲ್ಲ ಕೂಡಿ ಮು೦ದೆ ಇದೇ ರೀತಿಯಲ್ಲಿ ಶ್ರಮಿಸೋಣ, ಸಾಹಿತ್ಯ, ಸಂಸ್ಕೃತಿ, ಕಲಾಲೋಕದಲ್ಲಿ ಏನಾದರೂ ಸಾಧಿಸೋಣ ಎಂದು ಆಶಿಸುತ್ತಾ.

~ಪದ್ಯಪಾನಿ(ಎಲ್ಲರ ಪರವಾಗಿ)

ವಿ.ಸೂ. ಪದ್ಯಪಾನದ ಮುಂದಿನಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮನಸ್ಸಿದ್ದಲ್ಲಿ ಇಲ್ಲಿ ನೋಡಿ.