FAQ – ಪ್ರಶ್ನೋತ್ತರ
ಒಂದು ಮಾತ್ರಾಕಾಲವೆಂದರೇನು? ಲಘ್ವಕ್ಷರಗಳು ಯಾವುವು? ಗುರ್ವಕ್ಷರಗಳು ಯಾವುವು? "ಪ್ರಕೃತಿ" ಇಲ್ಲಿ 'ಪ್ರ' ಗುರ್ವಕ್ಷರವೇ? 'ಗಣ' ವೆಂದರೇನು? 'ಮಾತ್ರಾಗಣ' ವೆಂದರೇನು? 'ವರ್ಣಗಣ' ವೆಂದರೇನು? ಪಾದವೆಂದರೇನು? ಪ್ರಾಸವೆಂದರೇನು? ಅರಿಸಮಾಸವೆಂದರೇನು? ಏನಿದು "ಲಗಂ"? "ಜಗಣ" ವೆಂದರೇನು? ಮಾತ್ರಾ ಛಂದಸ್ಸಿನಲ್ಲಿ ಲಗಂ: ಪದ್ಯರಚನೆಯ ಸಾಮಾನ್ಯ ನಿಯಮಗಳು: ಶಿಥಿಲದ್ವಿತ್ವವೆಂದರೇನು? ಕನ್ನಡದಲ್ಲಿ ವಿಭಕ್ತಿಪಲ್ಲಟ: ಕನ್ನಡದಲ್ಲಿ ಯತಿಸ್ಥಾನ? ಸುಕುಮಾರ ಹಾಗು ನಿಬಿಡ ಪದಬಂಧಗಳ ಪರಿಯೇನು? ಸಮಸ್ಯಾಪೂರಣ: ಹಾಗೆಂದರೇನು? ಸಮಸ್ಯಾಪೂರಣ: ಕೀಲಕಪದವೆಂದರೇನು? ಅವಧಾನದಲ್ಲಿ ಸಮಸ್ಯಾಪೂರಣ ಕಂದ ಕಂದರಚನೆಗೆ ಕೆಲವು ಸಲಹೆ ಸೂಚನೆಗಳು; ಏನಿದು ಚತುರ್ವಿಧ ಕಂದ ಪದ್ಯ? ಪ್ರಮಿತಾಕ್ಷರವೆಂದರೇನು? ಇದಕ್ಕೂ ಕಂದಪದ್ಯಕ್ಕೂ ಇರುವ ಸಂಬಂಧವೇನು? ಪಂಚಮಾತ್ರಾ ಚೌಪದಿ: ಮತ್ತೇಕೆ ತಡ?
ಒಂದು ಮಾತ್ರಾಕಾಲವೆಂದರೇನು?
ಒಂದು ಹ್ರಸ್ವಾಕ್ಷರವನ್ನು ಉಚ್ಛರಿಸಲು ಬೇಕಾಗುವ ಸಮಯ. ಗುರ್ವಾಕ್ಷರಕ್ಕೆ ೨ ಮಾತ್ರೆಗಳು.
ಲಘ್ವಕ್ಷರಗಳು ಯಾವುವು?
ಹ್ರಸ್ವಾಕ್ಷರಗಳು.
ಗುರ್ವಕ್ಷರಗಳು ಯಾವುವು?
ದೀರ್ಘಾಕ್ಷರ, ಬಿಂದು ಸೇರಿದ ಅಕ್ಷರ, ವ್ಯಂಜನ ಸೇರಿದ ಅಕ್ಷರ, ಒತ್ತಿನ ಅಕ್ಷರದ ಹಿಂದಿನ ಅಕ್ಷರ ಮತ್ತು ಪಾದದ ಅಂತ್ಯಾಕ್ಷರ.
“ಪ್ರಕೃತಿ” ಇಲ್ಲಿ ‘ಪ್ರ’ ಗುರ್ವಕ್ಷರವೇ?
ಇಲ್ಲ. ’ಕೃ’ ಒತ್ತಕ್ಷರದಂತೆ ಕಾಣಿಸಿದರೂ, ಇದು ’ಕ್’ ವು ’ಋ’ ಸ್ವರದೊಂದಿಗೆ ಸೇರಿ ಆದ ಅಕ್ಷರ. ಆದ್ದರಿಂದ, ಇಲ್ಲಿ, ’ಪ್ರ’ ಮತ್ತು ’ಕೃ’ ಎರಡೂ ಲಘ್ವಕ್ಷರಗಳು.
‘ಗಣ’ ವೆಂದರೇನು?
ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪು.
‘ಮಾತ್ರಾಗಣ’ ವೆಂದರೇನು?
ಇಲ್ಲಿ ಮಾತ್ರೆಗಳ ಎಣಿಕೆಗನುಗುಣವಾಗಿ ಗಣವಿಂಗಡನೆ. ಲಘುವಿಗೆ ಒಂದು ಮಾತ್ರೆ, ಗುರುವಿಗೆ ಎರಡು ಮಾತ್ರೆ. ಸಾಧಾರಣವಾಗಿ ೩,೪,೫ ರ ಮಾತ್ರಾಗಣಗಳು ಪ್ರಸಿದ್ಧವಾದವು.
(ಉದಾ, ನಿನಗೆ(೩), ಜನಕ್ಕೆ(೪), ಜಗದೊಡೆಯ(೫)).
‘ವರ್ಣಗಣ’ ವೆಂದರೇನು?
ಲಘುಗುರುವರ್ಣಗಳನ್ನು ಮೂರುಮೂರಾಗಿ ವಿಂಗಡಿಸಿದರೆ ಎಂಟುವರ್ಣಗಳಾಗುವುದು. “ಯಮಾತಾರಾಜಭಾನಸಲಗಂ” ಎಂಬ ಸೂತ್ರದಲ್ಲಿ ಕ್ರಮವಾಗಿ ಮೂರುಮೂರಕ್ಷರಗಳನ್ನು ತೆಗೆದುಕೊಂಡರೆ ಮೊದಲನೆಯ ಅಕ್ಷರವು ಗಣದ ಹೆಸರನ್ನು ಸೂಚಿಸುವುದು.
ಪಾದವೆಂದರೇನು?
ಪದ್ಯದ ಪ್ರತಿಯೊಂದು ಪಂಕ್ತಿಯೂ ಪಾದವೆನಿಸುವುದು.
ಪ್ರಾಸವೆಂದರೇನು?
ಪದ್ಯದ ಸಾಲಿನಲ್ಲಿ ಒಂದೇ ಬಗೆಯ ವ್ಯಂಜನ-ಸ್ವರಗಳು ಪುನರಾವರ್ತನೆಯಾಗುವುದು. ಇವುಗಳಲ್ಲಿ, ಆದಿ, ಅನು, ಅಂತ್ಯಪ್ರಾಸಗಳೆಂದು ೩ ವಿಧ.
ಆದಿಪ್ರಾಸ: ಪದ್ಯದ ಪ್ರತಿಪಾದದಲ್ಲಿಯೂ ಆದಿಯಲ್ಲಿ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದು.
ಅನುಪ್ರಾಸ:ಪ್ರಾಸಸ್ಥಾನವು ನಿಗದಿಯಾಗದೆ ಸಾಲಿನಲ್ಲಿ ನಿರ್ದಿಷ್ಟ\ಅನಿರ್ದಿಷ್ಟ ಅಂತರದಲ್ಲಿ ಸ್ವರ-ವ್ಯಂಜನವು ಪುನರಾವರ್ತಿಸುವುದು.
ಅಂತ್ಯಪ್ರಾಸ:ಕಡೆಯ ವ್ಯಂಜನದ ಮೇಲಿನ ಸ್ವರ ಒಂದೇ ಆಗಿ, ಹಿಂದೆ ದೀರ್ಘಹ್ರಸ್ವಗಳಲ್ಲಿ ಸಾಮ್ಯವಿರುವುದು.
ಅರಿಸಮಾಸವೆಂದರೇನು?
ಕನ್ನಡ, ಸಂಸ್ಕೃತ ಪದಗಳನ್ನು ಕೂಡಿ ಸಮಾಸ ಮಾಡಿದರೆ, ಆವಾಗ ಅದು ಅರಿಸಮಾಸವೆನಿಸುತ್ತದೆ. “ಹಾಲಬ್ಧಿ”, “ಸೆಳೆಹಿತ” ಎತ್ಯಾದಿ. ಅರಿಸಮಾಸಗಳಿರದಂತೆ ನೋಡಿಕೊಳ್ಳ ಬೇಕು.
“ಹಾಲು(ಕನ್ನಡ) ಅಭ್ಧಿ (ಸಂಸ್ಕೃತ) – ಹೆಪ್ಪುಹಾಕಬಾರದು 🙂 [ಪೋಸ್ಟ್]”
ಏನಿದು “ಲಗಂ”?
ಇಲ್ಲಿ “ಲ” ವು ಲಘುವನ್ನೂ ಗಂ ಗುರುವನ್ನೂ ನಿರ್ದೇಶಿಸುತ್ತವೆ.
“ಜಗಣ” ವೆಂದರೇನು?
ಕಂದವನ್ನು ಹೊರತು ಪಡಿಸಿ, ಇನ್ನಾವುದೇ ಮಾತ್ರಾ ಛಂದಸ್ಸಿನಲ್ಲಿ ಗಣವು “ಲಗಂಲ” ಎಂಬುದಾಗಿ ಆರಂಭವಾಗಬಾರದು.
ಭಾಮಿನಿಯಲ್ಲಿ ಜಗಣ: ಸಾವಕಾಶದಿ ಬಂದಿಳಿದೇಕ [ಪೋಸ್ಟ್]
ಮಾತ್ರಾ ಛಂದಸ್ಸಿನಲ್ಲಿ ಲಗಂ:
“ಯಾವುದೇ ಮಾತ್ರಾ ಛ೦ದಸ್ಸಿನಲ್ಲಿ(ಕ೦ದವೊ೦ದನ್ನುಳಿದು) ಲಘ್ವಾದಿಗಣಗಳು(ಲಗ೦, ಲಗ೦ಗ೦,ಲಗ೦ಲ) ಬರುವ೦ತಿಲ್ಲ. ಪ್ರಸ್ತುತ ಪ೦ಚಮಾತ್ರಾಗಣಬದ್ಧವಾದ ಚೌಪದಿಯಲ್ಲಿ “ಋಣಕ್ರಿಸ್ತ” ಎ೦ಬ ಪದದ ಮೊದಲ ೫ ಮಾತ್ರೆಗಳ ಘಟಕವು ಲಗ೦ಗ೦ ಎ೦ಬ “ಯ”ಗಣ ವಿನ್ಯಾಸವನ್ನು ಹೊ೦ದಿರುವ ಕಾರಣ ಗಣಸಮತ್ವದಲ್ಲಿ ಭ೦ಗಬ೦ದಿದೆ. ಹೀಗಾಗಿಯೇ ಲಘ್ವಾದಿಗಣದ ಮುಖ್ಯಲಕ್ಷಣವಾದ ಪ್ಲುತಿ ಅಥವಾ ನೆಗೆತವು ಎದ್ದುತೋರುತ್ತದೆ ಮತ್ತು ವಿಸ೦ವಾದಿಯಾದ ಗತಿಯನ್ನು ಉ೦ಟುಮಾಡುತ್ತದೆ. ಇದು ಅನುಭವವೇದ್ಯ[ಪೋಸ್ಟ್]”
“೧. ಮಾತ್ರಾಗಣಗಳು ಛಂದಸ್ಸಿನ ಪ್ರಕಾರ ಇರುವುದು
೨. ಜಗಣಗಳನ್ನು ತರದಿರುವುದು
೩. ಆದಷ್ಟೂ ಸಂಧಿಗಳನ್ನು ಮಾಡುವುದು`
೪. ಆದರೆ ಆದಿಪ್ರಾಸ ಹೊಂದಿಸುವುದು[ಪೋಸ್ಟ್]”
“ಉಸಿರು ಹಿಡಿಯುವ ಹಾಗೆ ಓದುವ ಪದ್ಯವೇ ಕನ್ನಡದ ಸಾಂಪ್ರದಾಯಿಕಕವಿತೆಯ ಲಕ್ಷಣ:-)ಆದರೆ ಪದ್ಯದ ಗತಿಯನ್ನು ಹಿಡಿದು ಓದಿದರೆ ಉಸಿರು ಹಿಡಿಯದು.
ಕಾವ್ಯರಸವೊಸರುತ್ತಲಿರೆ ಕವಿ-
ಸೇವ್ಯವದು ಸಂಭಾವ್ಯವದು ಮಂ-
ತವ್ಯವದು ಪರಿಪರಿಯಲಂಕೃತಿಲೇಹ್ಯಮೋಹಕವು
ದಿವ್ಯನಿಬಿಡತೆಯಿರ್ಪ ಪದ್ಯವ-
ನವ್ಯವಹಿತವಿಧಾನದಿಂ ನೀಂ
ಸವ್ಯವಾಗಿಯೆ ಪಠಿಸೆ ಗಂಟಲು ಹಿಡಿಯದೆಂದೆಂದೂ
(ಪದ್ಯವನು+ಅವ್ಯವಹಿತ(=ತಡೆಯಿಲ್ಲದೆ)ಎಂದು ಪದಚ್ಛೇದ ಮಾಡಿಕೊಳ್ಳಬೇಕು)[ಪೋಸ್ಟ್]”
ಶಿಥಿಲದ್ವಿತ್ವವೆಂದರೇನು?
ಶಿಥಿಲದ್ವಿತ್ವವು ಕೆಲವು ವಿಶೇಷ ಸಂದರ್ಭಗಳಲ್ಲಿ ಸಾಮಾನ್ಯ ನಿಯಮಗಳಿಗೆ ಅಪವಾದವಾಗಿ ಕಾಣಿಸಿಕೊಳ್ಳುತ್ತದೆ. ಅಚ್ಚಗನ್ನಡ ಹಾಗೂ ಸ೦ಸ್ಕೃತ-ಕನ್ನಡ ಪದಗಳೆರಡರ ನಡುವೆ ಕೆಲವೊ೦ದು ವಿಶಿಷ್ಟ ಸ೦ದರ್ಭಗಳಲ್ಲಿ ಲಯಕ್ಕೆ ತಕ್ಕಂತೆ ಗುರುವೊಂದು ಲಘುವಾಗಬೇಕಾಗುತ್ತದೆ.
“ಶಿಥಿಲದ್ವಿತ್ವವೇನಿದ್ದರೂ ಅನುಕೂಲಸಿ೦ಧುವಾಗಿ(ಅನಿವಾರ್ಯವಾಗಿ ಗುರುವೊ೦ದು ಲಘುವಾಗಲೇ ಬೇಕಿದ್ದಾಗ, ಸದ್ಯದ ಸ೦ದರ್ಭದ೦ತೆ ಸ೦ಸ್ಕೃತ ಪದಗಳೆರಡರ ನಡುವೆ ಎಳೆದುತರುವುದಾಗುತ್ತದೆ) ತೋರಿಕೊಳ್ಳಬಹುದು. ವಸ್ತುತ: ಶಿಥಿಲದ್ವಿತ್ತ್ವವು ಅಚ್ಚಗನ್ನಡ ಹಾಗೂ ಸ೦ಸ್ಕೃತ-ಕನ್ನಡ ಪದಗಳೆರಡರ ನಡುವೆ ಕೆಲವೊ೦ದು ವಿಶಿಷ್ಟ ಸ೦ದರ್ಭಗಳಲ್ಲಿ ತೋರಿಕೊಳ್ಳುತ್ತದೆ[ಪೋಸ್ಟ್]”
ಕನ್ನಡದಲ್ಲಿ ವಿಭಕ್ತಿಪಲ್ಲಟ:
ಪ್ರಥಮ ವಿಭಕ್ತಿಯ ರೂಪವನ್ನು, ಸಂದರ್ಭಕ್ಕೆ ತಕ್ಕಂತೆ ಪ್ರಥಮ ಮತ್ತು ದ್ವಿತೀಯ ವಿಭಕ್ತಿ ರೂಪದಲ್ಲಿ ವ್ಯಾಖ್ಯಾನಿಸಬಹುದು.
“ಕನ್ನಡದಲ್ಲಿ ವಿಭಕ್ತಿಪಲ್ಲಟದ ಸೌಕರ್ಯವಿದೆ. ಆದರೆ ಅದು ಅನ್ವಯಕ್ಲೇಶದೊಡನೆ ತಳುಕುಹಾಕಿಕೊಂಡಾಗ ಕಷ್ಟವಾಗುತ್ತದೆ[ಪೋಸ್ಟ್]”
“ಕನ್ನಡಕ್ಕೆ ವಿಭಕಿಪಲ್ಲಟವೆಂಬ ಅನುಕೂಲತೆಯಿದೆ. ಕೆಲಮಟ್ಟಿಗಿದು ಸಂಸ್ಕೃತಕ್ಕೂ ಇದೆ. ಆದರೆ ಎಲ್ಲ ಹದದೊಳಗಿರಬೇಕು, ರಿಯಾಯಿತಿಯು ಅತಿಯಾಗಬಾರದು. ಹಾಲಿಗೆ ಎಷ್ಟು ನೀರು ಹಾಕಬಹುದು? (ಗಮನಿಸಿರಿ; ಇಲ್ಲಿಯೇ ವಿಭಕ್ತಿಪಲ್ಲಟವಿದೆ!)[ಪೋಸ್ಟ್]”
ಕನ್ನಡದಲ್ಲಿ ಯತಿಸ್ಥಾನ?
ಯತಿಯೆಂದರೆ ಪದ್ಯಗಳನ್ನು ಓದುವಾಗ ಅರ್ಥಸ್ಫೂರ್ತಿ ಕೆಡದಂತೆ ಪದ್ಯಪಾದದ ನಿಯತವಾದ ಒಂದೆಡೆಯಲ್ಲಿ ನಿಲ್ಲಿಸುವುದು. ಹಾಗೆ ನಿಲ್ಲಿಸುವುದು ಪದಮಧ್ಯದಲ್ಲಾದರೆ, ಅಂದಗೆಡುವುದರಿಂದ, ಪದದ ಕೊನೆಯಲ್ಲಿಯೇ ನಿಲ್ಲಿಸಬೇಕು.
“ದಿಟವೇ; ಕನ್ನಡಕ್ಕೆ ಯತಿಯಿಲ್ಲ, ಕೋಣನಿಗೆ ಮತಿಯಿಲ್ಲ ಎನ್ನುವ ಗಾದೆಯೇ ಇದೆ! ಕೇಶಿರಾಜನು ಶಬ್ದಮಣಿದರ್ಪಣದ ಕಡೆಯಲ್ಲಿ ಕನ್ನಡದ ವೈಶಿಷ್ಟ್ಯಗಳನ್ನು ಹೇಳುವಾಗ ಯತಿವಿಲಂಘನದಿಂದರಿದಲ್ತೆ ಕನ್ನಡಂ ಎಂದೂ ಹೇಳಿದ್ದಾನೆ. ಆದರೆ ಇದು ವೃತ್ತಗಳಿಗೆ ಮಾತ್ರ ಅನ್ವಿತವಾಗಿದೆಯೆಂಬುದಾನ್ನು ಮನಗಾಣಬೇಕು. ಏಕೆಂದರೆ ಯಾವುದೇ ಚಂಪೂಕವಿಯೂ ಕಂದದಲ್ಲಿ ಯತಿವಿಲಂಘನವನ್ನು ಮಾಡಿಲ್ಲ. ನನ್ನ ವೈಯಕ್ತಿಕ ಅಭಿಮತವೇನೆಂದರೆ ಕಂದ-ವೃತ್ತಷಟ್ಪದಿ-ಸಾಂಗತ್ಯ-ರಗಳೆ-ಚೌಪದಿ ಇತ್ಯಾದಿಗಳಲ್ಲಿ ಆದಿಪ್ರಾಸವನ್ನು ತೊರೆದು ಅಥವಾ ಅನುಕೂಲ ಕಂಡಂತೆ ಅಲ್ಲಲ್ಲಿ ಉಳಿಸಿಕೊಂಡರೂ ಅನುಪ್ರಾಸಗಳ ಮೂಲಕ ಶ್ರುತಿಮಾಧುರ್ಯವನ್ನು ತಂದುಕೊಂಡರೂ ತಪ್ಪಿಲ್ಲ. ಆದರೆ ಯತಿಯನ್ನು ಮಾತ್ರ ತೊರೆಯಬಾರದು. ಮುಖ್ಯವಾಗಿ ಯತಿಪ್ರಬಲಚ್ಛಂದಸ್ಸುಗಳಾದ ಶಾರ್ದೂಲವಿಕ್ರೀಡಿತ-ಮತ್ತೇಭವಿಕ್ರೀಡಿತ-ಸ್ರಗ್ಧರೆ-ಮಹಾಸ್ರಗ್ಧರೆ-ಶಾಲಿನಿ-ಮಾಲಿನಿ-ಪ್ರಹರ್ಷಿಣಿ-ಶಿಖರಿಣಿ-ಹರಿಣಿ-ಪೃಥ್ವಿ-ಮಂದಾಕ್ರಾಂತೆ ಮುಂತಾದ ವೃತ್ತಗಳಲ್ಲಿದು ಸರ್ವಥಾ
ಅನಿವಾರ್ಯ. ಈ ಎಲ್ಲ ವೃತ್ತಗಳ ಸೊಗಸಿನ ಬಹುಭಾಗವಿರುವುದೇ ಅವುಗಳ ಯತಿಸ್ಥಾನವೈಚಿತ್ರ್ಯದಲ್ಲಿ. ಕಂದದಲ್ಲಾದರೂ ಅಷ್ಟೇ; ಈ ಪದ್ಯಬಂಧದಲ್ಲಿ ಒಮ್ಮೆಲೇ ಏಕತಾಳ ಮತ್ತು ರೂಪಕತಾಳಗಳ ಗತಿಸೌಂದರ್ಯಗಳು ಗೋಚರಸಬೇಕೆಂದರೆ, ಪದ್ಯದ ಧಾಟಿಯು ಏಕತಾನತೆಯ ನೀರಸತೆಯನ್ನು ನೀಗಿಕೊಳ್ಳಬೇಕೆಂದರೆ ಸಮಪಾದಗಳಲ್ ಮೂಉರನೆಯ ಗಣದಲ್ಲಿ ಯತಿಯಾಗಲಿ ಜಗಣವಾಗಲಿ ಅತ್ಯಂತ ಅಪೇಕ್ಷಿತ. ಈ ಬಗೆಗೆ ತಾವು ಶ್ರೀ ಸೇಡಿಯಾಪು ಅವರ ಛಂದೋಗತಿ ಗ್ರಂಥವನ್ನು ತಪ್ಪದೆ ನೋಡಿರಿ. ಅಲ್ಲಿ ಅದ್ಭುತವಾದ ವಿವೇಚನೆಯಿದೆ[ಪೋಸ್ಟ್]”
“ಸಾಮಾನ್ಯವಾಗಿ ಪದವೊಂದು ಎರಡು ಗಣಗಳ ನಡುವೆ ಹಂಚಿಕೊಳ್ಳಲ್ಪಡುವಾಗ ಅದರ ಕಡೆಯ ಒಂದೇ ಲಘುವು ಮಾತ್ರ ಮುಂದಿನ ಗಣಕ್ಕೆ ಹೋಗುವ ಹಾಗಿದ್ದಲ್ಲಿ ಅದರ ಮುಂದಿನ ಪದದಲ್ಲಿ ಅವ್ಯವಹಿತವಾಗಿ (ಅಂದರೆ, ಬಿಡುವಿಲ್ಲದೆ) ಒಂದಕ್ಕಿಂತ ಹೆಚ್ಚಾದ ಲಘುಗಳು ಬರಬಾರದು. ಸದ್ಯದ ಉದಾಹರಣೆಯನ್ನೇ ನೋಡುವುದಾದರೆ
ನಲ್ಲನಪ್+ಪುಗೆಯ ರಂ+ಗುಬೆಳಕಾ… ಎಂಬಲ್ಲಿ ರಂಗು ಎನ್ನುವ ಪದ ಎರಡು ಗಣಗಳ ನಡುವೆ ಹಂಚಲ್ಪಟ್ಟಿದೆಯಾದರೂ ಆ ಪದದ ಕೊನೆಯ ಲಘ್ವಕ್ಷರವು ಮುಂದಿನ ಗಣಕ್ಕೆ ಸೇರಿದ ಬಳಿಕ ಮೂರು ಲಘುಗಳೇ ಬಂದಿರುವುದು ಗಮನಾರ್ಹ. ಹೀಗಾಗಿ ಗತಿಗೆ ಶ್ರುತಿಕಟುತ್ವವು ಉಂಟಾಗಿದೆ. ಇದೇ ಯತಿಭಂಗ. ಲೆಕ್ಕಕ್ಕೆ ಗಣವಿಭಾಗವು ಸರಿಯಾಗಿದ್ದರೂ ಛಂಸ್ಸಿನಲ್ಲಿ ತಪ್ಪಗುವುದೆಂದರೆ ಇದೇ. ಗಣಭಂಗದ ದೋಷ ಬೇರೆ, ಯತಿಭಂಗದ ದೋಷ ಬೇರೆ. ಆದರೆ ಎರಡೂ ಛಂದೋದೋಷಗಳೇ!:-) ಆದುದರಿಂದಲೇ ಕೇವಲ ಗುರು-ಲಘುಗಳ ಸಮತ್ವ ಹಾಗೂ ಗಣಪ್ರಮಾಣಗಳನ್ನು ಗಣಿಸುವ ಸ್ಥೂಲವಾದ ಛಂದೋನಿಯಮಗಳನ್ನು ತಿಳಿದು ಪದ್ಯಗಳನ್ನು ರಚಿಸುವುದಕ್ಕಿಂತ ಮಹಾಕವಿಗಳ ರಸಮಯವಾದ ಕೃತಿಗಳನ್ನು ಎಚ್ಚರದಿಂದ ಗಮನಿಸಿ ಅಲ್ಲಿಯ ಛಂದೋಗತಿಯು ಉನ್ಮೀಲಿತವಾಗುವಂತೆ ಓದಿಕೊಡಾಗ ನಮಗುಂಟಾಗುವ ಪದ್ಯರಚನಾಪಾಟವ ಅಸಾಧಾರಣ. ಬರಿಯ ರಾಗಗಳ ಆರೋಹಾರೋಹಗಳಿಂದ ಯಾರಿಗೂ ದಿಟವಾದ ರಾಗದ ಅರಿವು ಉಂಟಾಗುವುದಿಲ್ಲ. ಏನಿದ್ದರೂ ಒಳ್ಳೆಯ ಗಾಯಕರ ರಾಗಾಲಾಪನೆಗಳನ್ನು ಕೇಳಿಯೋ ಅಥವಾ ನಾವೇ ಅಂಥ ರಾಗಾಲಾಪನೆಗೆ (by trial and error) ಯತ್ನಿಸಿಯೋ ರಾಗವವೇಕವನ್ನು ಅರಿಯಬೇಕಷ್ಟೆ[ಪೋಸ್ಟ್]”
“ಕಂದದಲ್ಲಿ ಸಮಪಾದಗಳ ಮೂರನೆಯ ಗಣದಲ್ಲಿ ಜಗಣ ಅಥವ ಸರ್ವಲಘುವಿರಬೇಕೆಂದೂ, ಸರ್ವಲಘುವಿದ್ದರೆ ಆ ಗಣದ ಮೊದಲಕ್ಷರದ ಬಳಿಕ ಯತಿಯಿರಬೇಕೆಂದೂ ನಿಯಮ[ಪೋಸ್ಟ್]”
ಸುಕುಮಾರ ಹಾಗು ನಿಬಿಡ ಪದಬಂಧಗಳ ಪರಿಯೇನು?
ಗಣ-ಗಣಗಳಿಗೆ ಸಮಸಮನಾಗಿ ಪದಗಳನ್ನು ಅಳೆದ ಹಾಗೆ ಹೊಂದಿಸುವುದು ಸುಕುಮಾರಬಂಧದ ಹಾದಿ. ಇದು ಮೃದುಮಧುರಸಂದರ್ಭಗಳಿಗೆ ಸಮುಚಿತ ಕೂಡ. ಕೆಲವೊಂದು ಸಂನಿವೇಶಕ್ಕಿದು ಯುಕ್ತವೂ ಹೌದು. ಆಧುನಿಕ (ಅಂದರೆ ನವೋದಯಕವಿಗಳಿಂದ ಈಚೆಗೆ) ಲೇಖಕರಲ್ಲಿದು ಸರ್ವಸಾಮಾನ್ಯವಿಧಾನವೇ ಆಗಿದೆ. ವಿಶೇಷತಃ ಹಾಡುಗಳ ರಚನೆಗೆ ಇಂಥ ರೀತಿಯು ತುಂಬ ಜನಪ್ರಿಯ ಮತ್ತು ಸ್ವಾಗತಾರ್ಹ ಕೂಡ. ಆದರೆ ನಮ್ಮ ಪ್ರಾಚೀನಕವಿಗಳೆಲ್ಲರೂ ಪ್ರಾಯಿಕವಾಗಿ ಸುಕುಮಾರಬಂಧಕ್ಕಿಂತ ನಿಬಿಡಬಂಧಕ್ಕೇ ಹೆಚ್ಚಿನ ಆದ್ಯತೆ ತೋರಿದ್ದಾರೆ. ಈ ಕ್ರಮವು ಸ್ವಲ್ಪ ಪ್ರೌಢವಷ್ಟೇ ಅಲ್ಲದೆ ಪ್ರಯತ್ನಸಾಧ್ಯವೂ ಹೌದು. ಇಲ್ಲಿ ಕೇವಲವಾದ ಭಾಷಾಪದಪದ್ಧತಿ ಮತ್ತು ಛಂದಃಪದಪದ್ಧತಿಗಳೆರಡರ ಅತ್ಯಂತಹೃದ್ಯವೂ ಹದವೂ ಆದ ಸಂತುಲನವಿರುತ್ತದೆ. ಇದೇ ಉತ್ತಮಪದ್ಯಪದ್ಧತಿಯ ರಹಸ್ಯ ಕೂಡ ಹೌದು. ಈ ಕ್ರಮವು ಕರುಣ-ವಿಪ್ರಲಂಭಶೃಂಗಾರರಸಗಳನ್ನುಳಿದು ಮಿಕ್ಕೆಲ್ಲ ರಸಗಳ ಪ್ರತಿಪಾದನೆಗೆ ಮಿಗಿಲಾಗಿ ಒಗ್ಗಿ ಬರುವ ಮಾರ್ಗವೆಂಬುದರಲ್ಲಿ ಸಂದೇಹವಿಲ್ಲ. ಅಲ್ಲದೆ ನಿಬಿಡಬಂಧದಲ್ಲಿ ವೈವಿದ್ಯವೂ ಹೆಚ್ಚು. ಸುಕುಮಾರಬಂಧವಾದರೋ ಬಲುಬೇಗ ಏಕತಾನತೆಗೆ ದಾರಿಯಾಗುವುದಲ್ಲದೆ ಗಣ-ಗಣಕ್ಕೆ ಪದಗಳನ್ನು ಹೆಕ್ಕುವ ಬಲುಗೆಲಸವನ್ನು ಕವಿಗೆ ಕಲ್ಪಿಸಿ ತನ್ಮೂಲಕ ಇಡಿಯ ಛಂದೊಬದ್ಧಪದ್ಯರಚನೆಯೇ ಅತಿಶ್ರಮಾವಹವೆಂಬ ನಿರ್ಣಯಕ್ಕೆ ಅವನು ಬರುವಂತೆ ಮಾಡುತ್ತದೆ. ಇಂಥ ಅನಪೇಕ್ಷಿತಶ್ರಮವನ್ನೂ ಅನುಚಿತವಾದ ಭ್ರಮೆಯನ್ನೂ ತರುಣಕವಿಗಳಲ್ಲಿ ಉಂಟುಮಾಡಿದ ನವೋದಯಕವಿಗಳೂ ಗೀತಕಾರರೂ ಕೆಲಮಟ್ಟಿಗೆ ಛಂದಸ್ಸಿಗೂ ಕಾವ್ಯಶೈಲಿಯ ವೈವಿಧ್ಯಕ್ಕೂ(ವಿಶೇಷತಃ ಪದ್ಯಬಂಧರೀತಿಗೆ) ಅನ್ಯಾಯವನ್ನು ಮಾಡಿದ್ದಾರೆಂದರೆ ಕಟೂಕ್ತಿಯಾಗದು. ಪದ್ಯಪಾನಿಗಳು ಈ ಬಗೆಗೆ ಅವಧಿತರಾಗಿ ಉಭಯಪ್ರಕಾರದ ಪದ್ಯಬಂಧಗಳನ್ನೂ ಕರಗತವಾಗಿಸಿಕೊಳ್ಳುವುದು ಅಪೇಕ್ಷಣೀಯ. ಮುಖ್ಯವಾಗಿ ಆದಿಪ್ರಾಸವನ್ನು ನಿರ್ವಹಿಸುವಾಗ, ಷಟ್ಪದಿ-ಕಂದ-ವೃತ್ತ ಗಳನ್ನು ರಚಿಸುವಾಗ ಈ ಎಚ್ಚರವಿದ್ದಲ್ಲಿ ಪದ್ಯನಿರ್ಮಿತಿಯೂ ಸುಲಭ, ರಸಸ್ಫೂರ್ತಿಯೂ ಅಧಿಕ. [ಪೋಸ್ಟ್]
ಸಮಸ್ಯಾಪೂರಣ: ಹಾಗೆಂದರೇನು?
ಕೊನೆಯ ಸಾಲು ಕೊಟ್ಟಾಗಿದೆ. ಉಳಿದ ಸಾಲುಗಳನ್ನು ತುಂಬಿಸಿ, ಅರ್ಥವತ್ತಾಗಿ ಬರುವಂತೆ ಮಾಡಬೇಕು.
“ಇದು ಭಾಮಿನಿ ಷಟ್ಪದಿಯ ಕೊನೆಯ ಸಾಲು….ಮೊದಲ ೫ ಸಾಲುಗಳನ್ನು ರಚಿಸಿ ನಿಮ್ಮ ಪರಿಹಾರ ತಿಳಿಸಿ[ಪೋಸ್ಟ್]”
” ಭದ್ರಕಾಳಿಯು ಬೆದರಿ ಎಂಬೆರಡು ಪದಗಳು ಸೂಚಿಸುವ ಭಾವವೇನು ? ಎಲ್ಲರನ್ನೂ ಭಯಪಡಿಸುವ ಘೋರರೂಪ ತಾನೇ ಬೆದರಿತು ಎಂದು. ಇಂಥ ಅಸಂಭಾವ್ಯತೆ ಇದ್ದಾಗಲೇ ಅದು ಸಮಸ್ಯೆ ಎನಿಸಿಕೊಳ್ಳುತ್ತದೆ. ’ಭದ್ರಕಾಳಿಯು ಬರಲು ಬೆದರೋಡಿದರ್ ’ ಎಂಬುದು ಸಮಸ್ಯೆಯಾಗಲಾರದು[ಪೋಸ್ಟ್]”
ಸಮಸ್ಯಾಪೂರಣ: ಕೀಲಕಪದವೆಂದರೇನು?
” ಶಬ್ದಚ್ಛಲವರ್ಗದ ಸಮಸ್ಯಾಪೂರಣಗಳಲ್ಲಿ ಬರುವ (ಪ್ರಾಯಿಕವಾಗಿ)ಕಡೆಯ ಸಾಲಿನ ಮೊದಲ ಪದ[ಪೋಸ್ಟ್]”
“ಯಾವುದೇ ನಿಯಮವು ರಸಪರವಾಗಿರಬೇಕೆಂಬುದೇ ಮುಖ್ಯನಿಯಮ. ಸ್ವಾರಸ್ಯವಿರುವುದು ಕೀಲಕಪದವನ್ನು ಕೂಡಿದಮಟ್ಟಿಗೂ ಸ್ಫುಟೀಕೃತವಾಗುವಂತೆ ಉಳಿಸಿಕೊಳ್ಳುವುದರಲ್ಲಿದೆ. ಸಮಸ್ಯೆಯೊಂದಕ್ಕೆ ಹತ್ತಾರು ಪರಿಹಾರಗಳು ಸಾಧ್ಯ. ಆದರೆ ಎಲ್ಲ ಪರಿಹಾರಗಳೂ ಸಮಾನವಾಗಿ ರಸಭರಿತವಾಗಿರುವುದಿಲ್ಲ. ಒಳ್ಳೆಯ ಪರಿಹಾರದಲ್ಲಿ ಹೃದ್ಯವೂ ನವೀನವೂ ಆದ ಕಲ್ಪನೆ, ಸೊಗಸಾದ ಪದವಿನ್ಯಾಸ, ಸಾಧ್ಯವಾದರೆ, ಬೋನಸ್ ಎಂಬಂತೆ ಅರ್ಥಾಲಂಕಾರ-ಶಬ್ದಾಲಂಕಾರಗಳು ಹಾಗೂ ಇಡಿಯ ಪದ್ಯದಲ್ಲಿ ಸಮಸ್ಯೆಯ ಸಾಲು ಹೊರಚ್ಚಾಗಿ ನಿಲ್ಲದೆ ಎಲ್ಲವೂ ಸೇರಿ ಒಂದೇ ಸಮಗ್ರಶಿಲ್ಪವೆನ್ನುವಂಥ ಹದವಿರುತ್ತದೆ. ಇದು ಆದರ್ಶ:-) ಅಲ್ಲದೆ ಎಲ್ಲ ಸಮಸ್ಯೆಗೂ ಅನೇಕಪರಿಹಾರಗಳನ್ನು ಕೊಡುವ ಆಗ್ರಹ ಬೇಕಿಲ್ಲ. ಒಂದೇ ಕೀಲಕಶಬ್ದವನ್ನುಳಿಸಿಕೊಂಡೂ ಬಗೆಬಗೆಯ ಶೈಲಿ-ಶಬ್ದವಿನ್ಯಾಸಗಳಲ್ಲಿ ಪದ್ಯವನ್ನು ರಚಿಸಲೂ ಬಹುದು[ಪೋಸ್ಟ್]”
ಅವಧಾನದಲ್ಲಿ ಸಮಸ್ಯಾಪೂರಣ
“ಇದು ಮೂಲತಃ ನನ್ನ ಅವಧಾನವೊಂದರಲ್ಲಿ ನನ್ನ ಪ್ರಿಯಮಿತ್ರರಾಗಿದ್ದ ಕೀ.ಶೇ. ರಾಜೀವ ಲೋಚನಂ ಅವರು ಕೊಟ್ಟಿದ್ದ ಸಮಸ್ಯೆ. ಅವರನ್ನೇ ಇಲ್ಲಿ ಸುಮತಿ ಎಂದು ಸಂಬೋಧಿಸಿ, ನಿಮ್ಮಂಥ ಜಾಣರಿಗೆ ತಿಳಿಯದ್ದಾವುದು? ರಾಜಕೀಯದಲ್ಲಿ ಎಲ್ಲರೂ strange bed mates ಎನ್ನುವ ಭಾವದ ಪರಿಹಾರವನ್ನು ಇಲ್ಲಿ ರೂಪಿಸಿದ್ದೇನೆ[ಪೋಸ್ಟ್]”
ಕಂದ
ಕಂದದ ಲಕ್ಷಣಗಳು
“ಕನ್ನಡದಲ್ಲಿ ಹರಿಹರ, ಚಿಕುಪಾಧ್ಯಾಯ, ಷಡಕ್ಷರಿ, ನೇಮಿಚಂದ್ರ ಮೊದಲಾದವರೂ ಕಂದವನ್ನು ಕೊಂಡಾಡಿದ್ದಾರೆ.
ತೆಲುಗಿನಲ್ಲಂತೂ “ಕಂದಮು ವ್ರಾಸಿನ ವಾಡೇ ಕವಿಯನಿ ಅಂದುರು” (ಕಂದವನ್ನು ಬರೆದವನೇ ಕವಿ) ಎನ್ನುವ ಮಾತಿದೆ.
ಸಂಸೃತದ ಆರ್ಯಾ, ಆರ್ಯಾಗೀತಿ, ಉಪಗೀತಿ, ಗೀತಿ ಮುಂತಾದುವೆಲ್ಲ ಕಂದದ ಪೂರ್ವಸೂರಿಗಳೇ. ಇಲ್ಲಿಯ ಸ್ಕಂಧಕವೇ ಪ್ರಾಕೃತದ”ಖಂದಅ’” ಎಂದಾಗಿ ಇದುವೇ ಕನ್ನಡ-ತೆಲುಗುಗಳ ಕಂದವಾಯಿತೆಂಬ ಸಂಗತಿ ತಮಗೆ ತಿಳಿಯದ ವಿಚಾರವೇನಲ್ಲ[ಪೋಸ್ಟ್]”
ಕಂದರಚನೆಗೆ ಕೆಲವು ಸಲಹೆ ಸೂಚನೆಗಳು;
“ಕಂದಗಳನ್ನು ಚೆನ್ನಾಗಿ ಬರೆಯಬೇಕೆಂದು ಬಯಸುವವರಿಗೆ ಡಿ.ವಿ.ಜಿ.ಯವರ ಶೃಂಗಾರಮಂಗಳಂ ಮತ್ತು ಶ್ರೀಕೃಷ್ಣಪರೀಕ್ಷಣಮ್ ಗ್ರಂಥಗಳೂ ಬಸವಪ್ಪಶಾಸ್ತ್ರಿಗಳ ದಮಯಂತೀಸ್ವಯಂವರಕಾವ್ಯವೂ ಜನ್ನನ ಯಶೋಧರಚರಿತೆಯೂ ತುಂಬ ಒಳ್ಳೆಯ ಮಾರ್ಗದರ್ಶಿಗಳು[ಪೋಸ್ಟ್]”
“ಕಂದಪದ್ಯಕ್ಕೆ ಸ್ವಲ್ಪ ಹೆಚ್ಚಾಗಿ ಹಳಗನ್ನಡದ ಬಿಗಿ-ಬಲ ಬೇಕು[ಪೋಸ್ಟ್]”
“ಎರಡನೆಯ ಹಾಗು ನಾಲ್ಕನೆಯ ಸಾಲುಗಳಲ್ಲಿ ಕೊನೆಯ ಗಣವನ್ನು ಹಳೆಗನ್ನಡದ ಶೈಲಿಯಲ್ಲಿ (ಂ, ಐ, ಳ್ ಗಳನಳವಡಿಸಿ) ಬರೆದರೆ ಮತ್ತು ಜಗಣ / ಸರ್ವಲಘು ಬರುವ ಗಣವೊಂದನ್ನು ಗಮನಿಸಿಕೊಂಡರೆ, ಅಷ್ಟು ಕಷ್ಟವೆನಿಸದೆ ಬರೆಯಬಹುದೆನಿಸುತ್ತದೆ[ಪೋಸ್ಟ್]”
“ವಿಶೇಷವೇನಿಲ್ಲ, ಯಾವುದೇ ಕಂದದ ಸಮಪಾದಗಳು ಗುರುವಿನಿಂದಲೇ ಮುಗಿಯಬೇಕು.
ಕೇವಲ ವಿಷಮಪಾದಗಳಿಗಷ್ಟೇ ಲಘು ಅಥವಾ ಗುರುವಿನಿಂದ ಮುಗಿಯುವ ಸೌಲಭ್ಯವಿದೆ:-)
ಆದುದರಿಂದ ತಮ್ಮ ಪದ್ಯದ ಆ ಪಾದವನ್ನು “……ಚಣದೊಳಗೆ ಚುಂಬನಕೆ ಭಂಗಂ, ಪೋ!!”
ಎಂದು ಸವರಿಸಬಹುದು. ಇಲ್ಲಿ ’ಪೋ’ ಎನ್ನುವ ಉದ್ಗಾರದ ಮೂಲಕ ಹತಾಶೆ, ಬೇಸರ, ವಿಷಾದಗಳೆಲ್ಲ ಧ್ವನಿತವಾಗುತ್ತವೆ. ಆದರೆ ಕ್ಷಣಭಂಗುರ ಎನ್ನುವ ಪದದ ಸಮಗ್ರಾರ್ಥವನ್ನು ಭಂಗುರ ಎನ್ನುವ ಒಂದೇ ಪದದಿಂದ ಸಾಧಿಸಿಕೊಳ್ಳಬೇಕಿದೆ. ಏನು ಮಾಡೋಣ? ಇಂಥ ಒದ್ದಾಟಗಳು ಛಂದೋಲೋಕದಲ್ಲಿ ಸಾಕಷ್ಟು. ಆದರೆ ಈ ಇಡಿಯ ಲಾಭ-ನಷ್ಟಗಳ balance sheet ಕಂಡಾಗ ಕಡೆಗುಳಿವ ಲೇಸು ಹಿರಿದಾದದ್ದು. ಹೀಗಾಗಿಯೇ ಛಂದೋಬದ್ಧತೆಗೆ ನಾವಿಷ್ಟು ಒದ್ದಾಡುವುದು! ಇದೊಂದು ಬಗೆಯ ದಾಂಪತ್ಯ. ಇಲ್ಲಿ ಸಾಂಗತ್ಯವಂತೂ ತಪ್ಪುವಂತಿಲ್ಲ[ಪೋಸ್ಟ್]”
ಏನಿದು ಚತುರ್ವಿಧ ಕಂದ ಪದ್ಯ?
ಚತುರ್ವಿಧ ಕಂದವೆಂದರೆ, ಒಂದೇ ಕಂದಪದ್ಯವನ್ನು ವಿವಿಧ ರೀತಿಗಳಲ್ಲಿ ವಿಭಜಿಸಿ ಅರ್ಥಭಂಗವಾಗದಂತೆ ಮತ್ತಷ್ಟು ಕಂದಪದ್ಯಗಳನ್ನು ರಚಿಸುವ ಪ್ರಕ್ರಿಯೆ. ಒಂದೇ ಮೋಡ ವಿವಿಧ ದಿಕ್ಕಿನಿಂದ ನೋಡಿದರೆ, ವಿವಿಧ ಕಲ್ಪನೆಯನ್ನು ಹುಟ್ಟಿಸುವಂತೆ, Lenticular print ಆದ ಚಿತ್ರಗಳು, ವಿವಿಧ ದಿಕ್ಕಿನಲ್ಲಿ, ವಿವಿಧ ತೆರನಾಗಿ ತೋರುವಂತೆ, ಇದು ಚಿತ್ರಕವಿತೆಯ ಒಂದು ರೀತಿ.
ಇಲ್ಲಿ ಸಾಕಷ್ಟು ಉದಾಹರಣೆಗಳನ್ನು ನೋಡಬಹುದು.
ಪ್ರಮಿತಾಕ್ಷರವೆಂದರೇನು? ಇದಕ್ಕೂ ಕಂದಪದ್ಯಕ್ಕೂ ಇರುವ ಸಂಬಂಧವೇನು?
“ಪ್ರಮಿತಾಕ್ಷರ” ವೆಂಬುದು ಒಂದು ವರ್ಣ ಛಂದಸ್ಸು. ಪ್ರಮಿತಾಕ್ಷರದ ಲಕ್ಷಣ: U U – U – U U U – U U –
“ಇದು ಅಚ್ಚುಕಟ್ಟಾಗಿ ಕಂದಪದ್ಯದ ಕುಕ್ಷಿಯೊಳಗೆ ಸಂಪೂರ್ಣವಾಗಿ ಅಡಗುವುದಲ್ಲದೆ ಕಂದವೂ ಇದರ ಉದರದಲ್ಲಿ ಸಮಗ್ರವಾಗಿ ಅಡಗುತ್ತದೆ!”
“ಪ್ರಮಿತಾಕ್ಷರ ಮತ್ತು ಕಂದ ಒಂದು ಪೀತಾಂಬರದಂತೆ. ಹರಿ-ಸಿರಿಗಳಿಗದು ಪಂಚೆ-ಸೀರೆ ಎರಡೂ ಆದಂತೆ.”
ಇಲ್ಲಿ ಇದನ್ನು ಸಾಕಷ್ಟು ವಿಸ್ತಾರವಾಗಿ ಚರ್ಚಿಸಲಾಗಿದೆ.
ಪಂಚಮಾತ್ರಾ ಚೌಪದಿ:
ಪಂಚಮಾತ್ರೆಯ ಚೌಪದಿಯ ಗರಿಷ್ಠ ಮಿತಿ ಸಾಲಿಗೆ ಐದೈದರ ನಾಲ್ಕು ಗಣದಂತೆ ಇಪ್ಪತ್ತು ಮಾತ್ರೆಗಳು; ಎರಡು ಮತ್ತು ನಾಲ್ಕನೆಯ ಸಾಲಿನಲ್ಲಿ ಕೊನೆಯ ಗಣವನ್ನು ಮೂರು ಮಾತ್ರೆ ತುಂಬಿ ಉಳಿದ ಎರಡನ್ನು ಖಾಲಿಬಿಡುವುದು ವಾಡಿಕೆ.
“ಈ ಛಂದಸ್ಸು ಹೆಸರೇ ಸೂಚಿಸುವಂತೆ ಪಂಚಮಾತ್ರೆಯ ಚೌಪದಿ. ಇದರ ಅರ್ಥ ಸಾಲೊಂದರಲ್ಲಿ ಇಪ್ಪತ್ತು ಮಾತ್ರೆಯಿರಬೇಕೆಂದಷ್ಟೇ ಅಲ್ಲ, ಅದು ಐದೈದು ಮಾತ್ರೆಯ ಗಣಗಳಾಗಿರಬೇಕೆಂದು[ಪೋಸ್ಟ್]”
“ಸಾಮಾನ್ಯವಾಗಿ ಪದ ಒಡೆಯುವುದಾದರೆ, ಮಾತ್ರೆಗಳು ೪ -೧/೧-೪ ರಂತೆ ಒಡೆಯದಂತೆ ಎಚ್ಚರವಾಗಿದ್ದರೆ ಸರಿ. ಇದರಿಂದಾಗಿ, ಪಂಚಮಾತ್ರೆಯ ಓದುವಿಕೆಯ ಸೌಕರ್ಯಕ್ಕೆ ಸ್ವಲ್ಪ ಭಂಗವಾಗಿದೆ.”
ಮತ್ತೇಕೆ ತಡ?
“ಉಳಿದೆಲ್ಲ ವಾಚಕರೆ! ಕವಿತಾಪ್ರರೋಚಕರೆ!
ಹಳಿಗೆ ಬನ್ನಿರಿ ನೀವು ಕೂಡ ಬೇಗ!
ಗಳಿಗೆ ಬಾರದು ಮತ್ತೆ, ಕಾವ್ಯಕನ್ಯಕೆ ನಿಮಗೆ
ತಳಿಗೆ ಹಿಡಿದಾಗಮಿಸುತಿರುವಳೀಗ!!
ಸಂಕೋಚವನ್ನುಳಿದು ಸುಮ್ಮಾನದಿಂ ಬನ್ನಿ
ಶಂಕೆ ಬೆಂಕಿಯ ಹಾಗೆ ಕಾಡದಿರಲಿ
ಸಂಕಲ್ಪಿಸಿರಿ ಸೊಗಸುಗವಿತೆಯನ್ನೊರೆಯಲ್ಕೆ
ಸಂಕ ಮುರಿದಲ್ಲಿಯೇ ಸ್ನಾನವಲ್ತೆ!!” [ಪೋಸ್ಟ್]
ಪ್ರಿಯ ಸ್ನೇಹಿತರೆ,
ನನ್ನದೊಂದು ಸಣ್ಣ ಸಮಸ್ಯೆ ಇದೆ.. ಕುಸುಮ ಷಟ್ಪದಿಯನ್ನು ಅರ್ಥಮಾಡಿಸಲು ನೀವು ಕೊಟ್ಟ ಪಧ್ಯವನ್ನು ಸ್ವರ ಪ್ರಸ್ತಾರ ಹಾಕುವಾಗ ಎಡವುತ್ತಿದ್ದೇನೆ…ನನ್ನಲ್ಲಿ ದಯವಿಟ್ಟು, ನಿಮ್ಮ ಒಂದು ನಿಮಿಷವನ್ನು ಕೆಳಗಿನದ್ದನ್ನು ಅರ್ಥ ಮಾಡಿಸಲು ವಿನಿಯೋಗಿಸುವಿರೆಂದು ನಂಬಿದ್ದೇನೆ..
ನಾಡುಮನ ಸಿಜನೊಲವಿ
ನಾಡು ವೆಡೆ ಸಂತತಂ
ಬೀಡು ರತಿ ಪತಿಗೆ ಸತತ ನಿಧಾನವು
ನೋಡಿದ ನಿಮಿಷ ಪತಿಗೆ
ಮಾಡುವುದು ವಿನಯವನು
ನಾಡಾದಿಯವರ್ಗೆ ಬಣ್ಣಿಸಲು ಮೊಗ್ಗೇ.
ಎಂಬಲ್ಲಿ ಕೊನೆಯ ಪಾದಕ್ಕೆ, ಸ್ವರ ಪ್ರಸ್ತಾರ ಹಾಕಿದರೆ ಕೆಳಗಿನಂತೆ ಬರುವುದಲ್ಲವೇ.. ದಯವಿಟ್ಟು ನನ್ನ ತಪ್ಪನ್ನು ಸರಿ ಪಡಿಸಿ…
ನಾಡಾದಿಯವರ್ಗೆ ಬಣ್ಣಿಸಲು ಮೊಗ್ಗೇ.
_ _ UU_ U _ UUU _ _
ಹೀಗೆ ಬಂದಾಗ ಕೊನೆಯ ಪಾದದಲ್ಲಿ ೩ ಪಂಚಮಾತ್ರ ಗಣಗಳನ್ನು + ೧ ಗುರುವನ್ನ ಕಾಣಲಾಗುತ್ತಿಲ್ಲ..
‘ಯವರ್ಗೆ ಬಣ್ಣಿ’ ಎಂಬುದಕ್ಕೆ ಪ್ರಸ್ತಾರ ಹಾಕಿದರೆ ‘U_U _U ‘ ಆಗುತ್ತದೆ ಯಲ್ಲವೇ?. .ದಯವಿಟ್ಟು ಸ್ವಲ್ಪ ಬಿಡಿಸಿ ಹೇಳಿ…
ಪ್ರಶ್ನೆ ಸಣ್ಣದೆಂದು ದಯವಿಡದೆ ನಿರಾಕರಿಸ ಬೇಡಿ. .ಆರಂಭದಲ್ಲಿ ಎಡವುವರಿಗೆ ನಿಮ್ಮ ಸಹಾಯ ಅನನ್ಯ ಎಂದು ಭಾವಿಸಿರುತ್ತೇನೆ…..
ಅನಲ ಅವರೇ ನಿಮ್ಮ ಸೂಕ್ಷ್ಮ ಪರಿಶ್ರಮಕ್ಕೆ ಅಭಿನಂದನೆಗಳು. ಕಟ್ಟುನಿಟ್ಟಾದ ಮಾತ್ರೆಯ ಲೆಕ್ಕಾ ಚಾರದಲ್ಲಿ ಇದು ಸರಿ ಬರದೇ ಹೋದರೂ, ಅಪರೂಪಕ್ಕೆ ಹಳಗನ್ನಡದಲ್ಲಿ ರೇಫದ ಅರ್ಧಾಕ್ಷರಗಳು ಬಂದಾಗ, ಶಿಥಿಲ ದ್ವಿತ್ವವೆಂದು(ಇಲ್ಲಿ ನೋಡಿ – http://padyapaana.com/?page_id=689#shithiladvitva) ಪರಿಗಣಿಸಲಾಗುತ್ತದೆ. ಆಗ ಪ್ರಸ್ತಾರ ಕೆಳಗಿನಂತೆ ಆಗುತ್ತದೆ.
ನಾಡಾಡಿ ಯವರ್ಗೆಬ ಣ್ಣಿಸಲುಮೊ ಗ್ಗೇ.
– – U U U U – U U U – –
ಇಲ್ಲಿ – ಯವ(ರ್ಗೆ) – ಇದನ್ನು ಶಿಥಿಲ ದ್ವಿತ್ವವೆಂದು ಭಾವಿಸಿದರೆ ಲೆಕ್ಕ ಸರಿಯಾಗುತ್ತದೆ. ಈ ಶಿಥಿಲ ದ್ವಿತ್ವ ಸ್ವಲ್ಪ ಗೊಂದಲಮಯವೇ, ಶೀಘ್ರದಲ್ಲೇ ಈ ಉದಾಹರಣೆಯ ಬದಲಿಗೆ ಗೊಂದಲವಿಲ್ಲದ ಒಂದು ಉದಾಹರಣೆಯನ್ನು ಸೇರಿಸಲು ಪ್ರಯತ್ನಿಸುತ್ತೇವೆ.
ನಿಮ್ಮ ಸಲಹೆ ಮತ್ತು ಪರಿಶ್ರಮವನ್ನು ನೋಡಿ ಸಂತಸವಾಗಿದೆ.
ಧನ್ಯವಾದಗಳು.
ದಯವಿಟ್ಟು ತ್ರಿಪದಿಗಳ ಬಗ್ಗೆ ಸ್ವಲ್ಪ ಪಾಠ ಕೊಟ್ಟಿದ್ದರೆ ಚೆನ್ನಾಗಿತ್ತು… ಜೊತೆಗೆ ಅಂಶಗಣಗಳ ಮಹತ್ವ ಹಾಗೂ ವಿಶೇಷತೆ.
Nanna Haadugalannu serisuvudu hege.
How can I upload my songs.
0s97ko